ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜವೆಂಬ ಹೂವಿನ ಪಕಳೆಗಳು ಮಕ್ಕಳು

|
Google Oneindia Kannada News

Are we taking good care of our children?
ಮಕ್ಕಳ ದಿನಾಚರಣೆಯಂದು ನೆಹರೂ ಅವರನ್ನು ಕುರಿತು ಪುಂಖಾನುಪುಂಖವಾಗಿ ಭಾಷಣ, ಮಕ್ಕಳ ಶ್ರೇಯೋಭಿಲಾಷೆಗಳ ಬಗ್ಗೆ ಆಳ್ವಿಕರಿಂದ ಅನೇಕ ಆಶ್ವಾಸನೆಗಳು, ಹೊಸ ಯೋಜನೆಗಳು ಹೊರಹೊಮ್ಮುತ್ತವೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ಲು ಇತ್ಯಾದಿಗಳನ್ನು ವಿತರಿಸುವವರಿಗೇನೂ ಕಡಿಮೆಯಿಲ್ಲ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ವೇದವಾಕ್ಯ ಎಲ್ಲೆಲ್ಲೂ ಮೊಳಗುತ್ತವೆ. ತಮ್ಮ ಆಡಳಿತಾವಧಿಯಲ್ಲಿ ದೇಶದ ಮಕ್ಕಳ ಏಳಿಗೆಗಾಗಿ ನೆಹರೂ ಅವರು ಯಾವ ರೀತಿಯ ಕ್ರಮ ಕೈಗೊಂಡರೋ ಹೇಳಲಾಗದು. ಆದರೆ ಆರು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತದಲ್ಲಿ ಜನಸಾಮಾನ್ಯರ ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿಯೇ ಇರುವುದಂತೂ ಸತ್ಯ.

ಗರ್ಭಾವಸ್ಥೆಯಲ್ಲಿರುವ ಶಿಶುಗಳಿಂದ 14 ವರ್ಷದವರೆಗಿನವರನ್ನು ಮಕ್ಕಳು ಎಂದು ಪರಿಗಣಿಸುವುದಾದರೆ, ನಮ್ಮ ದೇಶದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ದಿನಕ್ಕೆ ಸಾವಿರಾರು ಮಕ್ಕಳು ಗರ್ಭದಲ್ಲೇ ಕೊನೆಗಾಣುತ್ತವೆ. ಭ್ರೂಣದಲ್ಲೇ ಲಿಂಗವನ್ನು ನಿರ್ಧರಿಸಿ ಸಾವಿರಾರು ಶಿಶುಗಳು ಭ್ರೂಣಾವಸ್ಥೆಯಲ್ಲೇ ಕೊನೆಗಾಣುತ್ತವೆ. ನೈಸರ್ಗಿಕ ಕ್ರಿಯೆಯಿಂದ ಹೆಣ್ಣಾಗಿ ಹುಟ್ಟುವ ಮಕ್ಕಳು ಕಣ್ತೆರೆಯುವ ಮುನ್ನವೇ ಉಸಿರೆಳೆಯುತ್ತವೆ. ಈ ದೇಶದ ಶೇ 40ಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶೇ 20ರಷ್ಟು ಮಕ್ಕಳು ತಮ್ಮ ಹೊಟ್ಟೆ ಪಾಡಿಗಾಗಿ ದುಡಿಯುವುದು ಅನಿವಾರ್ಯವಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ.

ಆಧುನಿಕ ಭಾರತ ಚಂದ್ರನಲ್ಲಿ ನೆಲೆಸುವ ಕನಸು ಕಾಣುತ್ತಿರುವ ಈ ಸನ್ನಿವೇಶದಲ್ಲಿ, ಹಸಿವಿನಿಂದ ಸಾಯುವ ಮಕ್ಕಳ ಸಂಖ್ಯೆ, ಜೀತ ಪದ್ಧತಿಯಿಂದ ನಲುಗುತ್ತಿರುವ ಮಕ್ಕಳ ಸಂಖ್ಯೆ, ಬಾಲಕಾರ್ಮಿಕರಾಗಿ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವ ಮಕ್ಕಳ ಸಂಖ್ಯೆ ಏರುತ್ತಲೇ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಕಾರಣಗಳನ್ನು ಹುಡುಕುವುದರಲ್ಲಿಯೇ ಆರು ದಶಕಗಳ ಸಂದಿವೆ. ಪರಿಹಾರ ಕಾಣಲು ಇನ್ನೆಷ್ಟು ದಶಕಗಳು ಬೇಕೋ?

ಮಕ್ಕಳೆಂದರೆ ಕೇವಲ ಪೋಷಕರಿಗೆ ಮಾತ್ರ ಮಕ್ಕಳಲ್ಲ. ಇಡೀ ನಾಗರಿಕ ಸಮಾಜಕ್ಕೇ ಸೇರಿದವರು. ಮಕ್ಕಳ ಬಗ್ಗೆ ಹೆತ್ತವರಿಗಿರುವಷ್ಟೇ ಜವಾಬ್ದಾರಿ ನಾಗರಿಕ ಸಮಾಜಕ್ಕೂ, ಶಿಕ್ಷಕ ವೃಂದಕ್ಕೂ, ಹಿರಿಯ ನಾಗರಿಕರಿಗೂ ಇರುತ್ತದೆ. ಈ ಮಾನವ ಸಮಾಜ ಒಂದು ಹೂವು ಎಂದು ಭಾವಿಸಿದರೆ ಮಕ್ಕಳು ಆ ಹೂವಿನ ದಳಗಳಿದ್ದಂತೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ದಾರ್ಶನಿಕರು ಹೇಳಿರುವುದು ಈ ಅರ್ಥದಲ್ಲೇ. ಕಪಟವನ್ನರಿಯದ, ಸುಳ್ಳು ಮೋಸ, ತಟವಟಗಳನ್ನು ಅರಿಯದ ಹಸುಳೆಗಳು ಯಾವುದೇ ಸಮಾಜದ ಪ್ರತಿಬಿಂಬವಾಗಿರುತ್ತದೆ. ಯಥಾ ರಾಜ ತಥಾ ಪ್ರಜಾ ಎಂಬಂತೆ ಮಕ್ಕಳು ಹೇಗಿರುತ್ತಾರೋ ಸಮಾಜವೂ ಹಾಗೇ ಇರುತ್ತದೆ. ಹಾಗಾಗಿ ಏನೂ ಅರಿಯದ ಮುಗ್ಧ ಹಸುಳೆಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ, ನೈತಿಕ ಮೌಲ್ಯಗಳನ್ನು ಅವರಿಗೆ ತಿಳಿಸಿ, ಸಮಾಜದ ಏಳಿಗೆಗಾಗಿ ಅವರನ್ನು ಬೆಳೆಸುವುದು ಸಮಾಜದ ಆದ್ಯ ಕರ್ತವ್ಯವಾಗಿದೆ. ಇದರಲ್ಲಿ ಶಿಕ್ಷಕ ವರ್ಗದ ಹೊಣೆಗಾರಿಕೆ ಹೆಚ್ಚಾಗಿರುತ್ತದೆ.

ಭವಿಷ್ಯದಲ್ಲಿ ಸಮಾಜದ ನೈತಿಕ ಮೌಲ್ಯಗಳನ್ನು, ಮಾನವ ಸಂಸ್ಕೃತಿಯ ತಳಹದಿಯನ್ನು, ಸಾಮಾಜಿಕ ಸೌಹಾರ್ದತೆಯನ್ನು ಮತ್ತು ಮಾನವ ಘನತೆಯನ್ನು ಕಾಪಾಡುವ ಹೊಣೆಗಾರಿಕೆ ಇಂದಿನ ಮಕ್ಕಳ ಮೇಲಿರುತ್ತದೆ ಎನ್ನುವುದಾದರೆ, ಮಕ್ಕಳ ಪಾಲನೆ ಪೋಷಣೆ ಹೊತ್ತಿರುವವರು ಮಾತ್ರವಲ್ಲದೆ, ಅವರ ಭವಿಷ್ಯದ ಮಾರ್ಗವನ್ನು ನಿರ್ಧರಿಸುವ ಶಿಕ್ಷಕ ವೃಂದವೂ ಮಕ್ಕಳನ್ನು ಉನ್ನತ ಮಾರ್ಗದಲ್ಲಿ ಕೊಂಡೊಯ್ಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಗಾಗ್ಗೆ ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ, ಇಸ್ಲಾಂ-ಕ್ರೈಸ್ತ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕೃತಿ ಮುಂತಾದವುಗಳನ್ನು ಕುರಿತ ವ್ಯಾಖ್ಯಾನಗಳು ನಡೆಯುತ್ತಿರುತ್ತವೆ. ಆದರೆ ಇಂದಿನ ಮಕ್ಕಳಿಗೆ ಮತ್ತು ಸಮಾಜಕ್ಕೆ ಬೇಕಿರುವುದು ಮಾನವೀಯ ಸಂಸ್ಕೃತಿ ಎನ್ನುವ ಸಂಗತಿಯನ್ನು ಮರೆಯುತ್ತೇವೆ. ಮನುಷ್ಯ ಜಾತಿ ತಾನೊಂದೇ ವಲಂ ಎಂದ ಪಂಪ, ಏನಾದರು ಆಗು ಮೊದಲು ಮಾನವನಾಗು ಎಂದ ಕುವೆಂಪು, ಅವನಾರವ ಅವನಾರವ ಎಂದೆಣಿಸದಿರಯ್ಯ ಎಂದ ಬಸವಣ್ಣ ಕುಲಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು ಇಂತಹ ಮಹನೀಯರು ನಮ್ಮ ರಾಜ್ಯದಲ್ಲಿ ಜನ್ಮ ತಾಳಿದ್ದಾರೆ. ಅವರ ಆದರ್ಶಗಳೇ ನಾಗರಿಕ ಸಮಾಜಕ್ಕೆ ಮಾನವ ಸಂಸ್ಕೃತಿಯ ಬಗ್ಗೆ ಸುಪ್ರಜ್ಞೆ ಮೂಡಿಸಬೇಕಿದೆ.

ಆದರೆ ಪ್ರಸ್ತುತ ಆಧುನಿಕ ಸಮಾಜ ಪೈಪೋಟಿಯನ್ನು ಬಯಸುತ್ತದೆ. ಎಲ್ಲ ಮಕ್ಕಳೂ ಪ್ರತಿಭೆಯಲ್ಲಿ ಸರಿಸಮಾನರಾಗಿರಬೇಕು ಎಂದು ಬಯಸುತ್ತದೆ. ಪ್ರತಿಭೆ ಇಲ್ಲದವರನ್ನು ನಿರ್ಲಕ್ಷಿಸುತ್ತದೆ. ಇಂದು ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಅವರ ಶೈಕ್ಷಣಿಕ ಪ್ರತಿಭೆಯನ್ನಾಧರಿಸಿ ವಿಭಜಿಸಲಾಗುತ್ತಿದೆ. ಶೇ 90ರಷ್ಟು ಅಂಕ ಗಳಿಸಿದ ಮಕ್ಕಳನ್ನು ಪ್ರತ್ಯೇಕ ಕ್ಲಾಸಿನಲ್ಲಿ ಕೂಡಿಸಲಾಗುತ್ತದೆ. ಎಳೆ ಹಸುಳೆಗಳಲ್ಲಿ ಪ್ರತ್ಯೇಕತಾ ಭಾವನೆ ಮೂಡಿಸಲು ಈ ಪ್ರವೃತ್ತಿಯೇ ನಾಂದಿಯಾಗುತ್ತದೆ. ಶೈಕ್ಷಣಿಕ ಕಲಿಕಾ ಸಾಮರ್ಥ್ಯವನ್ನೇ ನೈಜ ಪ್ರತಿಭೆ ಎಂದು ಗುರುತಿಸುವ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಯಲ್ಲಿ ಹಿಂದುಳಿಯುವ ಮಕ್ಕಳನ್ನು ನಿರ್ಲಕ್ಷಿಸುವುದಷ್ಟೇ ಅಲ್ಲದೆ, ಏನೂ ಅರಿಯದ ಹಸುಳೆಗಳ ಮನಸ್ಸಿನಲ್ಲೂ ನಿಕೃಷ್ಟ ಭಾವನೆ ಮೂಡುವ ಪರಿಸರ ದಟ್ಟವಾಗಿ ನಿರ್ಮಾಣವಾಗುತ್ತಿದೆ. ಟಿವಿಗಳ ರಿಯಾಲಿಟಿ ಷೋಗಳಲ್ಲಿ ಎಲಿಮಿನೇಷನ್ ಸುತ್ತಿನಲ್ಲಿ ಈ ಪ್ರವೃತ್ತಿಯನ್ನು ಸ್ಪಷ್ಟವಾಗಿ ಪ್ರೋತ್ಸಾಹಿಸಲಾಗುತ್ತಿದೆ.

ಭಾರತದ ಬಾಹ್ಯಾಕಾಶ ಇಲಾಖೆಗೆ ಮುಂದಿನ 15 ವರ್ಷಗಳಲ್ಲಿ 4 ಲಕ್ಷ ವಿಜ್ಞಾನಿಗಳು ಬೇಕಾಗುತ್ತಾರಂತೆ. ಇಂದಿನ ಮಕ್ಕಳಲ್ಲೇ ಆ ವಿಜ್ಞಾನಿಗಳು ಅಡಗಿರಬಹುದು. ಆದರೆ ಶಿಕ್ಷಣ ಎನ್ನುವುದು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗೆಲ್ಲುವ ಪರಿಕರವಾಗಿ, ಕಚ್ಚಾ ವಸ್ತುವಾಗಿ ಪರಿಣಮಿಸಿರುವುದು, ಶೈಕ್ಷಣಿಕ ಮೌಲ್ಯಗಳನ್ನೇ ನಿರ್ನಾಮ ಮಾಡುತ್ತಿದೆ. ಮಕ್ಕಳಲ್ಲಿ ಅಡಗಿರಬಹುದಾದ ಹಲವು ವಿಧಗಳ ಪ್ರತಿಭೆಗಳನ್ನು ಗುರುತಿಸದೆ, ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳನ್ನು ಓದಿ ಬರೆಯುವ ಯಂತ್ರಗಳನ್ನಾಗಿ ಪರಿಗಣಿಸಲಾಗುತ್ತಿದೆ. ಈ ಪ್ರವೃತ್ತಿ ಹೆಚ್ಚಾದಂತೆಲ್ಲಾ ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ನಾಶವಾಗುತ್ತಿದೆ. ಸಾಮಾಜಿಕ ಮೌಲ್ಯಗಳು ನಶಿಸುತ್ತಿವೆ. ನೈತಿಕತೆ ಮರೆಯಾಗುತ್ತಿದೆ. ಸಾಮಾಜಿಕ ಕಾಳಜಿ, ಕಳಕಳಿ ಇನ್ನಿಲ್ಲವಾಗುತ್ತಿದೆ.

ಭಾಷೆ, ಜಾತಿ, ಕುಲ, ದೇಶ ಇವೆಲ್ಲವೂ ನಾವು ಮಾಡಿಕೊಂಡಿರುವ ಅನಾಹುತಗಳು. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಯಾವುದೇ ಬೇಧ ಭಾವ ಇರಬಾರದು. ನಾವು ಅವರು ಎಂಬ ಬೇಧವಿಲ್ಲದೆ ಕೇವಲ ನಾವು ಎಂಬ ಭಾವನೆಯನ್ನು ಇಂದಿನ ಮಕ್ಕಳು ಬೆಳೆಸಿಕೊಳ್ಳಬೇಕಾಗಿದೆ. ಆಧುನಿಕ ಸಮಾಜದಲ್ಲಿ ಮಕ್ಕಳಿಗೆ, ಯುವ ಪೀಳಿಗೆಗೆ ಆದರ್ಶಮಯ ವ್ಯಕ್ತಿತ್ವಗಳು ಇಲ್ಲವೆಂದೇ ಹೇಳಬಹುದು. 1950ರ ದಶಕದಲ್ಲಿ ಆದರ್ಶವಾಗಿ ಕಾಣುತ್ತಿದ್ದ ಮಹನೀಯರೇ ಇಂದಿಗೂ ಆದರ್ಶಪ್ರಾಯರಾಗಿದ್ದಾರೆಂದರೆ, ಕಳೆದ 100 ವರ್ಷಗಳಲ್ಲಿ ನಮ್ಮ ಸಮಾಜ ಒಬ್ಬ ಆದರ್ಶಮಯ ವ್ಯಕ್ತಿಯನ್ನು ಸೃಷ್ಟಿಸಿಲ್ಲವೆಂದೇ ಹೇಳಬಹುದು. ಇದು ಸಾಮಾಜಿಕ ಮೌಲ್ಯಗಳ ಅಧಃಪತನವನ್ನು ಸೂಚಿಸುತ್ತದೆ.

ವಿದ್ಯೆ ಎನ್ನುವುದು ಅಕ್ಷರ ಕಲಿಯುವುದರಲ್ಲಿಲ್ಲ. ಅನಕ್ಷರಸ್ತನು ವಿದ್ಯಾವಂತನೇ. ಮಕ್ಕಳಲ್ಲಿನ ಗುಣ ಲಕ್ಷಣಗಳೇ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುತ್ತದೆಯೇ ಹೊರತು ಅವರು ಗಳಿಸುವ ಪದವಿಗಳಲ್ಲ, ವಿದ್ಯಾರ್ಹತೆಯಲ್ಲ. ಆಧುನಿಕ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ಬಲಿಷ್ಠ ಎಂದರೆ ಮಿಲಿಟರಿ ಬಲವಲ್ಲ, ನೈತಿಕ ಬಲ ಎಂದು ಇಂದಿನ ಮಕ್ಕಳು ನಿರೂಪಿಸಬೇಕಾಗಿದೆ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿರುವ ನಾಗರಿಕ ಸಮಾಜದ ಒಂದು ವರ್ಗವು ದೇಶದ ಭವಿಷ್ಯವನ್ನೇ ಕರಾಳತೆಯತ್ತ ಕೊಂಡೊಯ್ಯುತ್ತಿದೆ. ಶಾಲಾ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಬದಲು, ಮತೀಯ ಭಾವನೆಗಳನ್ನು ಬೆಳೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಎಲ್ಲ ಕಂಟಕಗಳನ್ನೂ ಮೀರಿ ಒಂದು ಸೌಹಾರ್ದಯುತ, ಸಹೃದಯ, ಸಮಾನತೆಯನ್ನು ಸಾಧಿಸುವ ಸಮಾಜದ ನಿರ್ಮಾಣದತ್ತ ಇಂದಿನ ಮಕ್ಕಳನ್ನು ಮತ್ತು ಯುವಪೀಳಿಗೆಯನ್ನು ಕೊಂಡೊಯ್ಯದಿದ್ದರೆ ಮಕ್ಕಳ ದಿನಾಚರಣೆ ನಿರರ್ಥಕವೆಂದೇ ಹೇಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X