ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಮನೆ ನಗರಿ ಮೈಸೂರಿಗೆ ಗರಡಿಮನೆಗಳು ಕಿರೀಟ..

By ಬಿ.ಎಂ.ಲವಕುಮಾರ್
|
Google Oneindia Kannada News

ಅರಮನೆಗಳ ನಗರಿ ಮೈಸೂರಿಗೆ ಗರಡಿಮನೆಗಳು ಕಿರೀಟವಿದ್ದಂತೆ. ಏಕೆಂದರೆ ಬೇರೆಲ್ಲೂ ಇಲ್ಲದಷ್ಟು ಗರಡಿಮನೆಗಳು ಮತ್ತು ಅವುಗಳಿಗೆ ನೀಡುತ್ತಿರುವ ಪ್ರಾಮುಖ್ಯವನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ. ವರ್ಷದ ಎಲ್ಲ ದಿನಗಳಲ್ಲು ಗರಡಿಮನೆಗಳು ಚಟುವಟಿಕೆಯಿಂದ ಕೂಡಿರುತ್ತವೆ. ಅಲ್ಲದೆ ಅಲ್ಲಲ್ಲಿ ಕುಸ್ತಿ ಪಂದ್ಯಾವಳಿಗಳು ಸಹ ನಡೆಯುತ್ತವೆ. ಆದರೆ ದಸರಾ ದಿನಗಳಲ್ಲಿ ಗರಡಿಮನೆಗಳಲ್ಲಿ ಸಂಭ್ರಮ ಮೇರೆ ಮೀರುತ್ತದೆ.

ಹಾಗೆ ನೋಡಿದರೆ ದಸರಾ ಸಂದರ್ಭದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ನಡುವೆ ಕುಸ್ತಿಗೂ ಮಹತ್ವದ ಸ್ಥಾನವಿದೆ. ಈ ಕುಸ್ತಿ ಪಂದ್ಯಾವಳಿಗಳಿಗೆ ರಾಜಮಹಾರಾಜರ ಕಾಲದ ಇತಿಹಾಸವಿದೆ. ರಾಜರ ಕಾಲದಲ್ಲಿ ಪೈಲ್ವಾನರನ್ನು ಕರೆಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಲ್ಲದೆ, ದಸರಾ ಸಂದರ್ಭದಲ್ಲಿ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಟಿ ಕಾಳಗ ಖ್ಯಾತಿ ಪಡೆದಿತ್ತು.[ದಸರಾ ವಿಶೇಷ: ಅರಮನೆ ಕಂಚಿನ ಹುಲಿಗಳ ಹಿಂದೆ ಉಂಟು ರೋಚಕ ಕಥೆ...]

Dasra wrestling

ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ, ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು. ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸಿ, ದಸರಾ ವೇಳೆ ಕುಸ್ತಿ ಪಂದ್ಯದಲ್ಲಿ ಬಲ ಪ್ರದರ್ಶಿಸಿ ಮಹಾರಾಜರಿಂದ ಪ್ರಶಂಸೆ ಪಡೆಯುತ್ತಿದ್ದರು. ಜಯಶಾಲಿಯಾದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು.

ಇದು ಇಂದಿಗೂ ಮುಂದುವರೆದುಕೊಂಡು ಬರುತ್ತಿದೆ. ರಾಜರ ಕಾಲದ ನಂತರ ದಿನಗಳನ್ನು ನೋಡಿದರೆ ಗರಡಿಮನೆಗಳು ಅಸ್ತಿತ್ವ ಕಳೆದು ಕೊಳ್ಳುತ್ತಿರುವುದನ್ನು ನಾವು ಕಾಣಬಹುದು. ಇತ್ತೀಚೆಗಿನ ಜಿಮ್ ಗಳು ಗರಡಿಮನೆಗಳ ಮೇಲೆ ಪರಿಣಾಮ ಬೀರುತ್ತಿವೆಯೇನೋ ಎಂಬ ಸಂಶಯ ಕಾಡುತ್ತಿದೆ. ಆದರೂ ನಗರದಲ್ಲಿ ಒಂದು ಸುತ್ತು ಹೊಡೆದರೆ ನೂರಕ್ಕೂ ಹೆಚ್ಚು ಗರಡಿಮನೆಗಳು ಕಾಣಸಿಗುತ್ತವೆ.[ಮೈಸೂರು ದಸರಾದಲ್ಲಿ ಅಲಮೇಲಮ್ಮನಿಗೇಕೆ ಪೂಜೆ?]

Dasara wrestling

ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರೆಯುತ್ತಾ ಹೋಗುತ್ತದೆ.

ಇಂತಹ ಗರಡಿಮನೆಗಳಿಂದ ಬೆಟ್ಟದ ಚಿಕ್ಕಣ್ಣ, ಪೈ.ಪಾಪಣ್ಣ, ಪೈ.ಶಂಕರ್ ಚಕ್ರವರ್ತಿ, ಚಿನ್ನ, ಅನಂತ್ ಅವರಂತಹ ನೂರಾರು ಪೈಲ್ವಾನ್ ಗಳು ಪ್ರತಿಭೆ ಪ್ರದರ್ಶಿಸಿ, ಮೈಸೂರಿನ ಖ್ಯಾತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಪೈಲ್ವಾನರ ಬಗ್ಗೆ ತಿಳಿಯುತ್ತಾ ಹೋದರೆ ಕುತೂಹಲ ಮೂಡುತ್ತದೆ.[ಮೈಸೂರು ದಸರಾ ಖಾಸಗಿ ದರ್ಬಾರ್ ಅಂದರೆ...]

Dasara wrestlers

ಪೈಲ್ವಾನರ ನಿತ್ಯದ ದಿನಚರಿ, ಅವರ ಊಟ, ತಾಲೀಮು ಎಲ್ಲವೂ ವಿಭಿನ್ನವಾಗಿರುತ್ತದೆ. ದೇಹವನ್ನು ವ್ಯಾಯಾಮ, ಕಸರತ್ತಿನ ಮೂಲಕ ದಂಡಿಸುತ್ತಾರೆ. ಮುಂಜಾನೆ ಎದ್ದು ಗರಡಿಮನೆಗೆ ಹೋಗುವ ಪೈಲ್ವಾನರು ಕಲ್ಲುಗುಂಡು, ಬಳೆ, ಗದೆ, ಕೊಂತ, ಕಂಬಕಟ್ಟೋದು, ಮಣ್ಣಿನಲ್ಲಿ ಪರಸ್ಪರ ಕುಸ್ತಿ ಅಭ್ಯಾಸ ನಡೆಸುವುದಲ್ಲದೆ, ಹುಲಿಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಸುತ್ತಂಡೆ, ಚಪ್ಪಡಿದಂಡೆ, ಬಸ್ಕಿ ಮುಂತಾದ ಕಸರತ್ತುಗಳನ್ನು ಸಹ ನಡೆಸುತ್ತಾರೆ.

ಗರಡಿಮನೆಯಿಂದ ತಾಲೀಮು ನಡೆಸಿ ಬರುವ ಪೈಲ್ವಾನರು ಮನೆಗೆ ಬರುತ್ತಿದ್ದಂತೆಯೇ ಲೀಟರ್ ಗಟ್ಟಲೆ ಬಾದಾಮಿ ಬೀಜಗಳ ಮಿಶ್ರಣ ಮಾಡಿದ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ ಮುಂತಾದ ಪೌಷ್ಟಿಕ ಆಹಾರಗಳನ್ನು ಸೇವನೆ ಮಾಡುತ್ತಾರೆ. ಮಧ್ಯಾಹ್ನ ಚಪಾತಿ, ರಾಗಿ ಮುದ್ದೆ, ಅನ್ನ ಸಾರು, ಹಾಲು, ಬೆಣ್ಣೆ, ಹಣ್ಣು.. ಹೀಗೆ ಪಟ್ಟಿ ಸಾಗುತ್ತದೆ.[ಮೈಸೂರು ದಸರಾ ವಿಶೇಷ: ಒಂದು ಅರಮನೆ.. ನೋಟ ಹಲವು..]

Dasra wrestling

ಮೊದಲೆಲ್ಲ ಪೈಲ್ವಾನ್ ಇದ್ದಾರೆಂದರೆ ಅದು ಊರಿಗೆ ಹೆಮ್ಮೆಯ ಸಂಗತಿಯಾಗಿರುತ್ತಿತ್ತು, ಅಲ್ಲದೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿ ಕಳುಹಿಸಲಾಗುತ್ತಿತ್ತು. ಈಗ ಗರಡಿಮನೆಗಳಿಗೆ ತೆರಳುವವರ ಸಂಖ್ಯೆಯೇ ಕಡಿಮೆಯಾಗಿದೆ. ಆದರೆ ಅದರ ಘನತೆ- ಗೌರವ ಕಡಿಮೆಯಾಗಿಲ್ಲ. ಹಾಗಾಗಿ ಇಂದಿಗೂ ದಸರಾದಲ್ಲಿ ಕುಸ್ತಿ ಪಂದ್ಯಾವಳಿಗೆ ತನ್ನದೇ ಆದ ಸ್ಥಾನ-ಮಾನವಿದೆ.

English summary
Palastras like crown for palace city Mysore. Wrestling is one of the attraction of Mysuru dasara. Vajramushti Kalaga is famous event in dasara. Gym becoming popular in recent days. But still People have great respect towards wrestlers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X