ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯ ಮೊದಲ ದಿನ : ತ್ಯಾಗರಾಜರ ಕೃತಿ

By ಹಂಸಾನಂದಿ
|
Google Oneindia Kannada News

ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭ ದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.

Dasara : Navaratri music fete - Tyagaraja kritis


ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂಡಿಗಳನ್ನೂ ಕೊಡುವ ಇರಾದೆ ನನ್ನದು. ನವರಾತ್ರಿ ಆದ್ದರಿಂದ, ದೇವಿಯ ವಿವಿಧ ರೂಪಗಳ (ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಇರುವ ಕೃತಿಗಳಿವು ಅನ್ನುವುದನ್ನು ಬಿಟ್ಟರೆ, ಯಾವುದೇ ಕ್ರಮವನ್ನು ನಾನು ಅನುಸರಿಸುತ್ತಿಲ್ಲ.

ಮೊದಲ ದಿವಸ ನಾನು ಆಯುತ್ತಿರುವ ಕೃತಿ ಕಲ್ಯಾಣಿ ರಾಗದ ತ್ಯಾಗರಾಜರ ಕೃತಿ - ಸುಂದರಿ ನೀ ದಿವ್ಯರೂಪಮುನು ಎಂಬುದು. ತ್ಯಾಗರಾಜರು ತಮಿಳುನಾಡಿನ ಮಧ್ಯಭಾಗದಲ್ಲಿ, ತಂಜಾವೂರಿನ ಬಳಿ ತಿರುವಾರೂರಿನಲ್ಲಿದ್ದವರು. ಒಮ್ಮೆ ತಮ್ಮ ಶಿಷ್ಯರಾದ ವೀಣಾ ಕುಪ್ಪಯ್ಯರ್ ಅವರ ಮನೆಗೆ ಅಹ್ವಾನಿತರಾಗಿ ಅವರಿದ್ದ ಚೆನ್ನಪಟ್ಟಣಂ(ಚೆನ್ನೈ, ಮದ್ರಾಸು)ಗೆ ಪ್ರವಾಸ ಕೈಗೊಂಡಿದ್ದರು. ಆಗ, ಅಲ್ಲೇ ಬಳಿಯಿರುವ ತಿರುವೊಟ್ಟ್ರಿಯೂರ್ ಎಂಬ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಈ ಊರು, ಈಗ ಮದ್ರಾಸಿಗೇ ಸೇರಿಕೊಂಡಂತೆ, ಊರಿನ ಉತ್ತರಭಾಗದಲ್ಲಿದೆ. ಅಲ್ಲಿರುವ ತ್ರಿಪುರಸುಂದರಿಯ ಮೇಲೆ ಐದು ಕೃತಿಗಳನ್ನು ರಚಿಸಿದರು. ಇವು ತಿರುವೊಟ್ಟ್ರಿಯೂರ್ ಪಂಚರತ್ನ ಕೃತಿಗಳು ಎಂದೇ ಹೆಸರುವಾಸಿಯಾಗಿವೆ.

ಕಲ್ಯಾಣಿ ರಾಗ 15-16ನೇ ಶತಮಾನಗಳಲ್ಲಿ ಪ್ರಚಲಿತದಲ್ಲಿದ್ದರೂ, ಅದಕ್ಕೆ ಅಷ್ಟಾಗಿ ಪಂಡಿತರ ಪ್ರಶಸ್ತಿ ದೊರಕಿರಲಿಲ್ಲವೆಂದು ತೋರುತ್ತದೆ. ಹಾಗೆಂದೇ, ವೆಂಕಟಮಖಿಯಂತಹ ಶಾಸ್ತ್ರಜ್ಞರು ಈ ರಾಗವನ್ನು ಮುಸಲ್ಮಾನರಿಗೆ ಪ್ರಿಯವಾದ ರಾಗ -ಎಂದು ಅದಕ್ಕೆ ಇರುವ ಉತ್ತರಾದಿ ಮತ್ತು ಪರ್ಶಿಯನ್ ಸಂಗೀತದ ಸಂಬಂಧಗಳನ್ನು ಹೇಳಿ ತೋರಿಸಿದ್ದಾರೆ. ಆದರೆ, ಕಾಲಾನುಕ್ರಮದಲ್ಲಿ ಅದು ಕರ್ನಾಟಕ ಸಂಗೀತದ ವಾಗ್ಗೇಯಕಾರರಿಗೆ ಬಹಳ ಪ್ರೀತಿಯ ರಾಗವೇ ಆಗಿಹೋಯಿತು.

ತ್ಯಾಗರಾಜರೊಬ್ಬರೇ ಸುಮಾರು ಮೂವತ್ತಕ್ಕೂ ಹೆಚ್ಚು ರಚನೆಗಳನ್ನು ಕಲ್ಯಾಣಿ ರಾಗದಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಒಂದು ಉತ್ತಮ ರಚನೆ ಸುಂದರಿ ನೀ ದಿವ್ಯ ರೂಪಮುನು. ಆದಿತಾಳದಲ್ಲಿ ನಿಬದ್ಧವಾಗಿರುವ ಈ ಕೃತಿಯ ಸಾಹಿತ್ಯ ತೆಲುಗಿನಲ್ಲಿದೆ. ಈ ರಚನೆಯಲ್ಲಿ ತ್ಯಾಗರಾಜರು ತಿರುವೊಟ್ಟ್ರಿಯೂರಿನ ತ್ರಿಪುರ ಸುಂದರಿಯನ್ನು ನೋಡಿದ ತಮ್ಮ ಭಾಗ್ಯವನ್ನು ಬಡವನಿಗೆ ಸಿರಿಬಂದಂತೆ ಎಂದು ವರ್ಣಿಸಿದ್ದಾರೆ. ಈ ರಚನೆಯನ್ನು ನೀವು ಇಲ್ಲಿ ಕೇಳಬಹುದು:


[ಕೃಪೆ : ಹಂಸ ನಾದ]

English summary
Dasara is celebrated in Tiruvanantapuram in a grand fashion as it is celebrated in Mysore. On all the 9 days of Navaratri musical programmes will be organized. Here we present kriti composed by Tyagaraja on the first day of Navaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X