ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ : ಮಡಿಕೇರಿಯಲ್ಲಿ ದಶ ಮಂಟಪಗಳ ಶೋಭಾಯಾತ್ರೆ

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಅಕ್ಟೋಬರ್, 21 : ಪ್ರಸಕ್ತ ವರ್ಷದ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾತ್ರಿ ಪೂರ್ತಿ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ದಶಮಂಟಪಗಳು ಸಿದ್ಧತಾ ಕಾರ್ಯದಲ್ಲಿ ನಿರತವಾಗಿವೆ.

ದಸರಾ ಪ್ರಯುಕ್ತ ಪೇಟೆ ಶ್ರೀ ರಾಮ ಮಂದಿರ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯ, ದೇಚೂರು ಶ್ರೀ ರಾಮಮಂದಿರ ದೇವಾಲಯ, ಶ್ರೀ ಕೋಟೆ ಮಹಾಗಣಪತಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಕೋಟೆ ಮಾರಿಯಮ್ಮ, ಕೋದಂಡ ರಾಮ ದೇವಾಲಯ, ಕರವಲೆ ಭಗವತಿ, ಶ್ರೀ ಕಂಚಿಕಾಮಾಕ್ಷಿ ದೇವಾಲಯಗಳನ್ನು ಸಿದ್ಧತೆಗೊಳಿಸಲಾಗಿದೆ.[ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?]

Dasara : Madikeri people built 10 god mantapas for dasara festival

ಪೇಟೆ ಶ್ರೀ ರಾಮ ಮಂದಿರ :

ಕಾಲೇಜು ರಸ್ತೆಯಲ್ಲಿರುವ ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿಯ ಉತ್ಸವದಲ್ಲಿ ಶ್ರೀ ಮಹಾವಿಷ್ಣುವಿನ ದಶಾವತಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಮಂಟಪ ನಿರ್ಮಾಣಕ್ಕೆ ಒಂದು ಟ್ರ್ಯಾಕ್ಟರ್ ನ್ನು ಅಳವಡಿಸಲಾಗುತ್ತಿದೆ.

ಬೆಂಗಳೂರಿನ ಕಲಾವಿದ ವೆಂಕಟೇಶ್ ಮತ್ತು ತಂಡ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ತಯಾರಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಒ.ಎನ್.ಬಾಬು ತಿಳಿಸಿದ್ದಾರೆ. ಒಟ್ಟು 5 ಲಕ್ಷ ವೆಚ್ಚದಲ್ಲಿ ಹೊರಡಿಸಲಾಗುತ್ತಿರುವ ಮಂಟಪವನ್ನು ಪಾರಾಣೆಯ ಬಾವಲಿ ಗ್ರಾಮದ ಬ್ಯಾಂಡ್‍ಸೆಟ್ ಮುನ್ನಡೆಸಲಿದೆ.

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ:

ತನ್ನ 42ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸಜ್ಜಾಗುತ್ತಿರುವ ರಾಜಸೀಟ್ ಬಳಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಈ ಬಾರಿ ಮಣಿಕಂಠನಿಂದ ಮಹಿಷಿಯ ಸಂಹಾರ ಕಥಾ ಸಾರಾಂಶವನ್ನು ಹೊಂದಿದೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದೆ.

ಒಟ್ಟು 22 ಕಲಾಕೃತಿಗಳನ್ನು ಎರಡು ಟ್ರ್ಯಾಕ್ಟರ್ ಗಳು ಹೊತ್ತ್ಯೋಯಲಿವೆ. ಮೈಸೂರಿನ ಕಲಾವಿದರು ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. 14 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು ಕೇರಳದ ಚಂಡೆ ವಾದ್ಯ ಮಂಟಪವನ್ನು ಮುನ್ನಡೆಸಲಿದೆ.[ದಸರಾ ಗಜಪಡೆಗಳ ತೊಡುಗೆ ತಯಾರಿ ಹೇಗಿರುತ್ತದೆ?]

ದಂಡಿನ ಮಾರಿಯಮ್ಮ ದೇವಾಲಯ:

ನಗರಸಭೆ ಹಿಂಭಾಗದ ಕೆಇಬಿ ಬಳಿಯಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಈ ಬಾರಿ 85ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು ಶ್ರೀ ಮಹಾವಿಷ್ಣುವಿನಿಂದ ಮಧುಖೈಟಭರ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು ಇದಕ್ಕಾಗಿ ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಎಂ.ರತಿಕೇಶನ್ ತಿಳಿಸಿದರು.

ಮಂಟಪದಲ್ಲಿ 20 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು ಮೈಸೂರಿನ ಕಲಾವಿದ ಮಾದಪ್ಪ ಅಂಡ್‍ಸನ್ಸ್ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ.

ದೇಚೂರು ಶ್ರೀ ರಾಮಮಂದಿರ ದೇವಾಲಯ:

ಕಳೆದ 96 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ದೇಚೂರು ಶ್ರೀ ರಾಮ ಮಂದಿರ ದೇವಾಲಯ ಈ ಬಾರಿ ರಾಮಾಂಜನೆಯ ಯುದ್ಧ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಇ. ಮೋಹನ್ ಕುಮಾರ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್ ನ ಎ.ವಿ.ಲೈಟಿಂಗ್ಸ್ ನವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ ನ್ನು ಮಡಿಕೇರಿ ಸ್ವಾಗತ ಡೆಕೋರೇಟರ್ಸ್ ನವರು ಮಾಡಲಿದ್ದಾರೆ. ಮಂಗಳೂರಿನ ಬಾಲು ಆಟ್ರ್ಸ್ ನವರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಒಟ್ಟು 8.50 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಮಾಡಲಾಗುತ್ತಿದೆ.

ಶ್ರೀ ಕೋಟೆ ಮಹಾಗಣಪತಿ ದೇವಾಲಯ:

ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಗಣೇಶ ಪುರಾಣದ 4ನೇ ಸಂಪುಟದಿಂದ ಆಯ್ದ ಗಜಾನನ ಹಾಗೂ ಸಿದ್ಧಿಬುದ್ಧಿ ದೇವಿಯರಿಂದ ನರಾಂತಕ-ದೇವಾಂತಕರ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಮಂಟಪಕ್ಕೆ ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದೆ. ಒಟ್ಟು 18 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಒಟ್ಟು ರೂ.18 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ. ಪುತ್ತೂರಿನ ಮುತ್ತು ವಾದ್ಯ ತಂಡ ಮಂಟಪವನ್ನು ಮುನ್ನಡೆಲಿದ್ದಾರೆ.[ಮೈಸೂರು ದಸರಾ ಆನೆಗಳಿಗೆ 35 ಲಕ್ಷದ ವಿಮೆ]

Dasara : Madikeri people built 10 god mantapas for dasara festival

ಶ್ರೀ ಚೌಡೇಶ್ವರಿ ದೇವಾಲಯ:

53ನೇ ವರ್ಷದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀ ಚೌಡೇಶ್ವರಿ ದೇವಾಲಯ ಈ ಬಾರಿ ಶಿವಪುರಾಣದಿಂದ ಆಯ್ದ ಶಿವನಿಂದ ಅಂಧಕಾಸುರನ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುವುದು.

ಮಡಿಕೇರಿಯ ಪೂಜಾ ಎಲೆಕ್ಟ್ರಾನಿಕ್ಸ್ ನಜೀರ್ ತಂಡ ಅರ್‍ಜಿಬಿ ತಂತ್ರಜ್ಞಾನದ ಮಲ್ಟಿಕಲರ್ ಲೈಟಿಂಗ್ ಬೋರ್ಡ್ ಅನ್ನು ಅಳವಡಿಸಲಿದೆ. 18 ಕಲಾಕೃತಿಗಳನ್ನು ಹೊತ್ತ್ಯೊಯಲು ಎರಡು ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ.ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್‍ನವರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಒಟ್ಟು 15 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಅನಿಲ್ ಪಿ.ಕೆಂಚೆಟ್ಟಿ ತಿಳಿಸಿದ್ದಾರೆ.

ಕೋಟೆ ಮಾರಿಯಮ್ಮ ದೇವಾಲಯ:

ಪೆನ್ಸನ್ ಲೇನ್ ನ ಕೋಟೆ ಮಾರಿಯಮ್ಮ ದೇವಾಲಯ ಸಮಿತಿ 40ನೇ ವರ್ಷದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಬಾರಿ ಶಿವ ಮಹಾ ಪುರಾಣದಿಂದ ಆಯ್ದ ತುಳಸಿ ಮಹಾತ್ಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಒಟ್ಟು 16 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ. 19 ಕಲಾಕೃತಿಗಳನ್ನು ಬಳಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷರುಗಳಾದ ಎಂ.ಎಸ್.ದಿನೇಶ್, ಪ್ರಸಾದ್ ಆಚಾರ್ಯ ತಿಳಿಸಿದ್ದಾರೆ.[ನಾನಾ ಸೌಂದರ್ಯ, ಸೊಬಗಿನ ತಾಣವೇ ಮೈಸೂರು ಅರಮನೆ]

ಕೋದಂಡ ರಾಮ ದೇವಾಲಯ:

ಮಲ್ಲಿಕಾರ್ಜುನ ನಗರದಲ್ಲಿರುವ ಕೊಂದಂಡ ರಾಮ ದೇವಾಲಯ ಕಳೆದ ಬಾರಿ ತೃತೀಯ ಬಹುಮಾನ ಪಡೆದ ಕೋದಂಡ ರಾಮ ದೇವಾಲಯ ಈ ಬಾರಿ 41ನೇ ವರ್ಷದ ಉತ್ಸವ ಆಚರಣೆ ನಡೆಸುತ್ತಿದ್ದು ಈ ಬಾರಿ ಶಿವ ಪುರಾಣದಿಂದ ಆಯ್ದ ದಕ್ಷಯಜ್ಞ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್, ಎನ್. ಪದ್ಮನಾಭ ತಿಳಿಸಿದ್ದಾರೆ.

ಕರವಲೆ ಭಗವತಿ:

ನಗರದ ಹೊರವಲಯದಲ್ಲಿರುವ ಭಗವತಿನಗರದ ಶ್ರೀ ಕರವಲೆ ಭಗವತಿ ದೇವಾಲಯ ದಸರಾ ಸಮಿತಿಯು 20ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗಿದ್ದು ಈ ಬಾರಿ ಯಡಿಯೂರು ಶ್ರೀಗಳ ಆಶೀರ್ವಾದದೊಂದಿಗೆ ಲಂಕಾ ಸಂಗ್ರಾಮದಿಂದ ಆಯ್ದ ಹನುಮಾನ್ ಮಹಾತ್ಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ತೆಕ್ಕಡೆ ಕಾಶಿ ಕಾವೇರಪ್ಪ ತಿಳಿಸಿದ್ದಾರೆ.

ಶ್ರೀ ಕಂಚಿಕಾಮಾಕ್ಷಿ ದೇವಾಲಯ:

ನಗರದ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ ದಸರಾ ಉತ್ಸವದಲ್ಲಿ ವಿಭಿನ್ನತೆಗೆ ಹೆಸರಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ 52ನೇ ವರ್ಷದ ಉತ್ಸವ ಆಚರಣೆಗೆ ಸಿದ್ದವಾಗುತ್ತಿದ್ದು ಈ ಬಾರಿ ಶ್ರೀ ಕೊಲ್ಲೂರು ಮೂಕಾಂಬಿಕಾ ಮಹಿಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್. ರಾಜೀವ್ ಕುಮಾರ್ ತಿಳಿಸಿದ್ದಾರೆ.

English summary
Dasara : Madikeri people built 10 god mantapas for dasara festival. 10 God mantapas name like, Kanchikamakshi Temple, Karavale Bhagavathi temple, Kodandarama Temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X