ಹದಿನೆಂಟೂ ಸಮಸ್ತರ ಅರಕಲಗೂಡು ದಸರಾ

Subscribe to Oneindia Kannada
Arkalgud Dasara
ಮೈಸೂರು ದಸರಾ ಜಗದ್ವಿಖ್ಯಾತ. ಅದೇ ರೀತಿ ಮಡಿಕೇರಿಯ ಮಿನಿದಸರಾ ಕೂಡ. ಅದು ಕೊಡಗಿನ ಹೆಮ್ಮೆ. ಹಾಗೆಯೇ ಹಾಸನ ಜಿಲ್ಲೆಯಲ್ಲೂ ದಸರಾ ಸಂಸ್ಕೃತಿ ಸಮೃದ್ಧ. ಕಳೆದ ಒಂದು ದಶಕದಿಂದ ಸದ್ದಿಲ್ಲದೇ ನಡೆದುಕೊಂಡು ಬರುತ್ತಿರುವ ಈ ನವರಾತ್ರಿ ಉತ್ಸವ ಅರಕಲಗೂಡಿನ ಹೆಮ್ಮೆ. 18 ಕೋಮಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಅರಕಲಗೂಡು ದಸರಾ ರಾಜ್ಯದಲ್ಲೇ ವಿನೂತನ,ವಿಶಿಷ್ಠ ಮತ್ತು ಅನುಕರಣೀಯ.

*ಸಿ.ಜಯಕುಮಾರ್, ಅರಕಲಗೂಡು

ಕಳೆದ 10ವರ್ಷಗಳ ಹಿಂದೆ ತಾಲ್ಲೂಕಿನ ಪಂಚ ಮಠಾಧೀಶರುಗಳು, ಕ್ರೈಸ್ತ,ಮುಸಲ್ಮಾನ ಧರ್ಮಗುರುಗಳು ಒಟ್ಟಾಗಿ ಸೇರಿ ಚಿಂತಿಸಿ ಪ್ರಥಮ ಬಾರಿಗೆ ಸಾರ್ವಜನಿಕ ದಸರಾ ಉತ್ಸಕ್ಕೆ ಇಂಬುಕೊಟ್ಟರು. ತಾಲೂಕಿನಾದ್ಯಂತ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸಿದರು. ಎಲ್ಲ ಜಾತಿ, ಧರ್ಮ ವರ್ಗದ ಜನತೆಯನ್ನು ವಿಜಯದಶಮಿಯಂದು ಅರಕಲಗೂಡು ಕೇಂದ್ರ ಸ್ಥಾನದಲ್ಲಿ ಸೇರುವಂತೆ ಮಾಡಿದರು. ಆ ಮೂಲಕ ದಸರಾ ಉತ್ಸವಕ್ಕೊಂದು ಸಾಮಾಜಿಕ ರೂಪ ಕೊಟ್ಟರು. ನಂತರದ ದಿನಗಳಲ್ಲಿ ಜನಮನ್ನಣೆ ಪಡೆದ ಅರಕಲಗೂಡು ದಸರಾ ಸಂಸ್ಕೃತಿಗೆ ಹೊಸ ಅರ್ಥವನ್ನೇ ಕೊಟ್ಟಿತು.

ಅರಕಲಗೂಡು ಸುಕ್ಷೇತ್ರ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮಿಜಿ, ಅರೆಮಾದನಹಳ್ಳಿ ಮಠದ ವಿಶ್ವಕರ್ಮ ಗುರು ಶ್ರೀ ಶಿವಸುಜ್ಞಾನ ಸ್ವಾಮಿಜಿ, ಶಿರದನಹಳ್ಳಿ ಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗು ಕ್ರೈಸ್ತ,ಮುಸಲ್ಮಾನ ಧರ್ಮಗುರುಗಳ ಸಾನಿಧ್ಯದಲ್ಲಿ ಜರುಗುವ ದಸರಾ ಉತ್ಸವಕ್ಕೆ ಸಾರ್ವಜನಿಕ ಮುಖಂಡರುಗಳ ನೇತೃತ್ವದಲ್ಲಿ ಪ್ರತಿವರ್ಷ ಸಂಚಾಲಕ ಸಮಿತಿಯೊಂದನ್ನು ರಚಿಸಲಾಗುತ್ತದೆ. ಸಂಚಾಲಕ ಸಮಿತಿಯ ಸದಸ್ಯರುಗಳು ದಸರಾ ಉತ್ಸವಕ್ಕೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಾರೆ. ವಿಜಯ ದಶಮಿಗೆ ಮುನ್ನ 9 ದಿನಗಳ ನವರಾತ್ರಿ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ನಂತರ ನವದೇವತೆಯರಿಗೆ ಪೂಜೆ ಪುನಸ್ಕಾರ ಆರಂಭವಾಗುತ್ತದೆ.

ಅರಕಲಗೂಡಿನ ದಸರಾ ಪಟ್ಟಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಾರದೆಂಬ ಉದ್ದೇಶದಿಂದ ಸ್ವಾಮೀಜಿಗಳು ಹಾಗೂ ಧಾರ್ಮಿಕ ಗುರುಗಳು ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರಗಳಿಗೆ ತೆರಳಿ ಧಾರ್ಮಿಕ ಪ್ರವಚನ ನೀಡುತ್ತಾರೆ. ಇನ್ನು ವಿಜಯದಶಮಿ ಉತ್ಸವದ ದಿನ ಮಧ್ಯಾಹ್ನ 3 ಗಂಟೆಗೆ ಗ್ರಾಮದೇವತೆ ದೊಡ್ಡಮ್ಮ ದೇವತೆಗೆ ಪೂಜೆ ಸಲ್ಲಿಸಲಾಗುತ್ತದೆ, ಈ ವೇಳೆಗಾಗಲೇ 18 ಕೋಮಿನ ಜನರ ದೇವಾನುದೇವತೆಗಳನ್ನು ಸಿಂಗರಿಸಿ ಪ್ರತ್ಯೇಕ ವಾಹನಗಳಲ್ಲಿ ತಂದು ಸಾಲಾಗಿ ನಿಲ್ಲಿಸುತ್ತಾರೆ. ಕೋಟೆ ನರಸಿಂಹಸ್ವಾಮಿ ದೇಗುಲದಿಂದ ಆರಂಭವಾಗುವ ಮೆರವಣಿಗೆಗೆ ಸಂಘ-ಸಂಸ್ಥೆಗಳು ಮತ್ತು ವಿವಿಧ ಧರ್ಮೀಯರ ಸ್ಥಬ್ಧ ಚಿತ್ರಗಳು ಜತೆಯಾಗುತ್ತವೆ. ಜಾನಪದಮೇಳ, ಸೋಮನಕುಣಿತ, ಜಟ್ಟಿಮೇಳ, ಕೀಲು ಕುದುರೆ, ಗೊಂಬೆ ಮೇಳ, ಸಂಚಾರಿ ರಸಮಂಜರಿ ತಂಡ ಹೀಗೆ ದಸರಾ ಮೆರವಣಿಗೆ 2ಕಿಮಿ ಉದ್ದದಷ್ಟಾಗುತ್ತದೆ.

ರಂಗುರಂಗಾದ ಮೆರವಣಿಗೆಯ ಮುಂಭಾಗದಲ್ಲಿ ವಾದ್ಯಗೋಷ್ಠಿ. ಇವೆಲ್ಲ ಬಂದು ಸೇರುವ ಹೊತ್ತಿಗೆ ಸಾವಿರಾರು ಸಂಖ್ಯೆಯ ಜನರು ಸೇರುತ್ತಾರೆ. ಹೂವು ಹಾಗು ವಿದ್ಯುದ್ದೀಪಗಳ ಸಾಲು, ತಳಿರು ತೋರಣದಿಂದ ಊರಿನ ಪ್ರಮುಖ ಬೀದಿಗಳು ಕಂಗೊಳಿಸುತ್ತವೆ. ಈ ಸಂದರ್ಭದಲ್ಲಿ ಮಡಿಕೇರಿ ದಸರಾಕ್ಕೆ ತೆರಳುವ ಪ್ರಯಾಣಿಕರು ಸಹಾ ಮಾರ್ಗಮಧ್ಯೆ ನಿಂತು ದಸರ ಉತ್ಸವವನ್ನು ಸವಿಯುತ್ತಾರೆ. ರಾತ್ರಿ 9 ಗಂಟೆಯ ಸುಮಾರಿಗೆ ಉತ್ಸವ ಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ವಿಜಯದಶಮಿ ಮಂಟಪದ ಬಳಿ ಬಂದು ಸೇರುತ್ತದೆ.

ಅಲ್ಲಿ ಬನ್ನಿ ವೃಕ್ಷಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಪೂಜಿಸಲ್ಪಟ್ಟ ಬಾಳೇ ಗಿಡವನ್ನು ತಾಲ್ಲೂಕಿನ ತಹಸೀಲ್ದಾರ್ ಡಾ. ಮಧುಕೇಶ್ವರ್ ಸಾಂಕೇತಿಕವಾಗಿ ಕತ್ತರಿಸುತ್ತಾರೆ. ಕದಳಿ ವೃಕ್ಷ ಛೇದನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯೊಂದಿಗೆ ದಸರಾ ಉತ್ಸವಕ್ಕೆ ತೆರೆ ಬೀಳುತ್ತದೆ. ಸರಕಾರದ ಕೃಪಾಶೀರ್ವಾದವಿಲ್ಲದೆ ನಡೆಯುವ ಅರಕಲಗೂಡು ನವರಾತ್ರಿ ಸ್ವಾವಲಂಬನೆ ಮತ್ತು ಸಹಬಾಳ್ವೆಗೆ ಮಾದರಿಯಾಗಿದೆ.

(ಕೃಪೆ :'ಜನತಾಮಾಧ್ಯಮ', ಹಾಸನ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...