ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಪ್ರವಾಸದಿಂದಾಯ್ದ ಚೂರುಪಾರು ಸುದ್ದಿಸೂರು...

By Staff
|
Google Oneindia Kannada News


* ಬೆಂಗಳೂರಲ್ಲಿ ಬಿಗ್‍ಬಜಾರ್, ಮೆಟ್ರೊದಂತಹ ರಖಂ ಮಳಿಗೆಗಳು, ಫೋರಮ್, ಗರುಡ ಇತ್ಯಾದಿ ಹೆಸರಿನ ಮಾಲ್‌ಗಳು, ಅವು ಇರುವ ರಸ್ತೆಗಳಲ್ಲಿ ಬಹಳವಾಗಿ ಕಂಡುಬರುವ ಹೊಂಡಾ, ಟೊಯೊಟಾ, ಫೋರ್ಡ್, ಮಿತ್ಸುಬಿಶಿ ಮುಂತಾದ ಬಹುರಾಷ್ಟ್ರೀಯ ಕಂಪೆನಿ ಕಾರುಗಳು - ಇವನ್ನೆಲ್ಲ ನೋಡುತ್ತಿದ್ದರೆ ಜಾಗತೀಕರಣದ ಕಬಂಧಬಾಹುಗಳು ಬೆಂಗಳೂರಿನ ಜಾಗವನ್ನು ದಿನೇದಿನೇ ಆಕ್ರಮಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ಇಲ್ಲಿ ಮೇಲ್ಸೇತುವೆಗಳ ರಚನೆಯಾಗಿದೆಯಾದರೂ ಇಷ್ಟೊಂದು ಜನ-ವಾಹನ ದಟ್ಟಣೆಯನ್ನು ಹಳೆಯ ರಸ್ತೆಗಳೇ ಇನ್ನೂ ಸಹಿಸಿಕೊಂಡಿರುವುದು ನೋಡಿದರೆ ಸಖೇದಾಶ್ಚರ್ಯವಾಗುತ್ತದೆ.

* ಇಷ್ಟೊಂದು ಕಂಜೆಶನ್ ಇದ್ದರೂ ಬೆಂಗಳೂರು ನಗರ ಸಾರಿಗೆ ಒದಗಿಸುತ್ತಿರುವ ಸೇವೆ ಸೌಲಭ್ಯಗಳು ಹೆಮ್ಮೆ ಪಡುವಷ್ಟು ಚೆನ್ನಾಗಿವೆಯೆನ್ನಬೇಕು. ಆಟೋರಿಕ್ಷಾದವರ ಮರ್ಜಿ (ನಾವು ಕೇಳಿದಲ್ಲಿಗೆ ಬರೋಕ್ಕಾಗಲ್ಲ ಅನ್ನೋದ್ರಿಂದ ಹಿಡಿದು ವಿವಿಧ ರೀತಿಯ ದಬ್ಬಾಳಿಕೆ)ಗಳಿಗಿಂತ ಸಿಟಿಬಸ್ಸುಗಳಲ್ಲಿ ಪ್ರಯಾಣಿಸೋದೇ ಎಷ್ಟೋ ವಾಸಿಯೆನಿಸುತ್ತದೆ. ರಾಜ್ಯದೆಲ್ಲೆಡೆಗಳಿಗೆ ಕೆ‌ಎಸ್ಸಾರ್ಟಿಸಿ ಬಸ್ ಸೌಕರ್ಯವೂ ಅಗಾಧ ಪ್ರಮಾಣದಲ್ಲಿ ಸುಧಾರಣೆಗೊಂಡಿರುವುದು ಕಂಡುಬರುತ್ತದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ವೊಲ್ವೊ ಬಸ್ ಪ್ರಯಾಣವಂತೂ ಒಂದು ಅನನ್ಯ ಅನುಭವ.

* ಇನ್ನು, ಮಳೆ-ಬೆಳೆ ವಿಚಾರ ಹೇಳುವುದಾದರೆ ಮುಂಗಾರು ಮಳೆ ಧೋ ಎಂದು ಸತತವಾಗಿ ಹುಯ್ಯುತ್ತಲೇ ಇದೆ - ರೀಲ್ ನಲ್ಲಿಯೂ, ರಿಯಲ್ ಆಗಿಯೂ. ಹಾಗಾಗಿ ಚಿತ್ರಮಂದಿರಗಳೂ ತುಂಬಿವೆ, ಜಲಾಶಯ-ಜಲಪಾತಗಳೂ ತುಂಬಿವೆ! ಮುಂಗಾರುಮಳೆ ಚಿತ್ರದ ಹಾಡುಗಳಂತೂ ಎಷ್ಟು ಮೋಡಿ ಮಾಡಿವೆಯೆಂದರೆ, ರಾಷ್ಟ್ರಗೀತೆ ಯಾವುದೆಂದು ಗೊತ್ತಿಲ್ಲದ ಮಕ್ಕಳಿರಬಹುದು ಆದರೆ ಮುಂಗಾರುಮಳೆ ಸಿನೆಮಾಹಾಡು ಗೊತ್ತಿರದ ಮಗು ಕನ್ನಡನಾಡಲ್ಲಿ ಸಿಗಲಾರದು!

* ಮಳೆ ಹೆಚ್ಚಾದರೆ ಬೆಳೆ ಹೆಚ್ಚು ಎನ್ನುವುದೇನೋ ನಿಜವಾದರೂ ಕರಾವಳಿ ಮತ್ತು ಮಲೆನಾಡಿನಲ್ಲಿನ ಅಡಿಕೆಕೃಷಿಕರಿಗೆ ಮಳೆ ಹೆಚ್ಚಾದರೆ ಬೆಳೆಗೆ ಕೊಳೆ(ರೋಗ) ಬರುವ ಅಪಾಯವೂ ಹೆಚ್ಚು ಎಂಬ ಚಿಂತೆ. ಈವರ್ಷ ಆಗಿರುವುದೂ ಅದೇ. ಮಲೆನಾಡಿಗರನ್ನು ಕೊಳೆರೋಗವು ಕಂಗಾಲಾಗಿಸಿದೆ.

* ಹೀಗೆ ಪಟ್ಟಿಮಾಡುತ್ತ ಹೋದರೆ ಸೂಕ್ಷ್ಮಗ್ರಾಹಿ ಮನಸ್ಸಿಗೆ ಗೋಚರಿಸುವ ವಿಷಯಗಳು ಎಷ್ಟೋ ಇವೆ. ಮೂರು ವಾರಗಳ ರಜೆ ಮೂರು ದಿನಗಳಂತೆ ಕಳೆದುಹೋಯ್ತಲ್ಲಾ ಎಂದು ಗಡಿಬಿಡಿಯಿಂದ ಸೂಟ್‍ಕೇಸ್‍ಗಳನ್ನೆಲ್ಲ ತುಂಬಿಸಿಕೊಂಡು ಹೆತ್ತವರನ್ನು, ಹಿತೈಷಿಗಳನ್ನು ಭಾರವಾದ ಹೃದಯದಿಂದ ಬೀಳ್ಕೊಟ್ಟು ವಿಮಾನ ಹತ್ತಿ ಕುಳಿತು ಕಣ್ಮುಚ್ಚಿಕೊಂಡರೆ ದಾಖಲಾದ ಸಂಗತಿಗಳನ್ನೆಲ್ಲ ಮನಸ್ಸು ರಿಪ್ಲೇ ಮಾಡುತ್ತದೆ, ಮೆಲುಕು ಹಾಕುತ್ತದೆ; ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಸ್ವದೇಶ-ಪರದೇಶ, ಜನ್ಮಭೂಮಿ-ಕರ್ಮಭೂಮಿ, ಇಲ್ಲಿರರಾಲೆ-ಅಲ್ಲಿಗೆಹೋಗಲಾರೆ ತಾಕಲಾಟದ ಅಲೆಗಳ ಲಯ ಶುರುಗೊಂಡಿರುತ್ತದೆ.

ಮುಂದಿನವಾರ : ಸ್ನಿಗ್ಧ ಸೌಂದರ್ಯದ ಜೋಗ ಮತ್ತು ಶುದ್ಧ ಸ್ನೇಹದ ಯೋಗ"

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X