ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಪ್ರವಾಸದಿಂದಾಯ್ದ ಚೂರುಪಾರು ಸುದ್ದಿಸೂರು...

By Staff
|
Google Oneindia Kannada News


ಹೇಗಿದೆ ನಮ್‌ದೇಶ ಹೇಗಿದೆ ನಮ್‌ಭಾಷೆ... ಹೇಗಿದೆ ಕನ್ನಡ, ಹೇಗಿದೆ ಕರ್ನಾಟಕ... ಈಗ ಹೇಗಿದ್ದಾರೆ, ನಮ್ ಕನ್ನಡಜನ?ಪ್ರಶ್ನೆಗೆ ಉತ್ತರ; ಈ ವಾರದ ವಿಚಿತ್ರಾನ್ನ.


  • ಶ್ರೀವತ್ಸ ಜೋಶಿ
Every traveller has a story to tellತಾಯ್ನಾಡಿಗೆ ಭೇಟಿಯಿತ್ತು ವಾಪಸಾದವರನ್ನು ಮಾತಾಡಿಸುವಾಗ ಇಲ್ಲಿ ನೆಲೆಸಿರುವ ಭಾರತೀಯ ಸ್ನೇಹಿತರು ಕೇಳೋದಿದೆ - "ಹೇಗಿತ್ತು ಇಂಡಿಯಾ ಟ್ರಿಪ್? ಎಂಜಾಯ್ ಮಾಡಿದ್ರಾ? ಏನೇನೆಲ್ಲ ಬದಲಾವಣೆಗಳನ್ನು ಗಮನಿಸಿದ್ರಿ?" ... ಒಂದರಮೇಲೊಂದು ಪ್ರಶ್ನೆಗಳು. ಹಾಗೆ ಕೇಳುವವರಲ್ಲಿ ಬೇರೆಬೇರೆ ಥರದವರಿರುತ್ತಾರೆ. ತುಂಬಾ ವರ್ಷಗಳಿಂದ ಭಾರತವನ್ನು ನೋಡದಿರುವವರು, ಒಂದೆರಡು ವರ್ಷಗಳಿಗೊಮ್ಮೆ ಭಾರತಕ್ಕೆ ಹೋಗಿಬರುವವರು, ಕೆಲ ತಿಂಗಳ ಹಿಂದಷ್ಟೇ ಹೋಗಿ ಬಂದವರು ಇತ್ಯಾದಿ. ಏನಿದ್ದರೂ ತವರುದೇಶದ ತಾಜಾ ಸಮಾಚಾರಗಳನ್ನು ಕೇಳುವಾಗಿನ ರೋಮಾಂಚನ, ಕುಳಿತಲ್ಲಿಯೇ ಮನದಲ್ಲಿ ಮೂಡುವ ಅಲ್ಲಿನ ದೃಶ್ಯಗಳ ಚಿತ್ರಣ, ಒಂದೊಮ್ಮೆಗೆ ಭಾವನೆಗಳು ಉಮ್ಮಳಿಸಿಬಂದು ಗಂಟಲುಕಟ್ಟುವ ಭಾವುಕ ಕ್ಷಣ - ಬಹುಶಃ ಅದೊಂದು ಪದಗಳಿಗೆ ನಿಲುಕದ ಪ್ರಕ್ರಿಯೆ.

ಸ್ವಾರಸ್ಯವೆಂದರೆ ಇದೇರೀತಿಯ ಪ್ರಶ್ನೆಗಳನ್ನು ಅಲ್ಲಿ ಭಾರತದಲ್ಲೂ ಸ್ನೇಹಿತರು, ಸಂಬಂಧಿಕರು ಕೇಳ್ತಾರೆ. ಅಲ್ಲಿನವರು ಕೇಳುವುದರ ಉದ್ದೇಶ ಮಾತ್ರ ಬೇರೆ ಇರುತ್ತದೆ. ತಮ್ಮೂರಿನಲ್ಲಿ/ತಮ್ಮನಾಡಿನಲ್ಲಿ ಸುತ್ತಮುತ್ತ ಆಗಿರುವ ಬದಲಾವಣೆಗಳು, ತಮ್ಮ ಅವಜ್ಞೆಯಿಂದಾಗಿ ತಮಗೆ ಗೊತ್ತಾಗದಿರುವಂಥ ಬೆಳವಣಿಗೆಗಳು ಈ ಹೊರಗಿನವನಿಗೆ ಯಾವ ರೀತಿಯಲ್ಲಿ ಅನುಭವಕ್ಕೆ ಬಂದಿವೆ ಎಂದು ತಿಳಿದುಕೊಳ್ಳುವ ಕುತೂಹಲ.

ಅಂತೂ ಹೇಗಿದೆ ನಮ್‌ದೇಶ ಹೇಗಿದೆ ನಮ್‌ಭಾಷೆ... ಹೇಗಿದೆ ಕನ್ನಡ ಹೇಗಿದೆ ಕರ್ನಾಟಕ..." ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾಗದು. ಅದಕ್ಕೋಸ್ಕರ ಈ ಎರಡು ವಾರಗಳಲ್ಲಿ ನನ್ನ ಭಾರತಪ್ರವಾಸದಿಂದಾಯ್ದ ಚೂರುಪಾರು ಸಂಗತಿಗಳನ್ನೇ ಪೋಣಿಸಿ ಬರೆದು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವವನಿದ್ದೇನೆ. ಯಥಾಪ್ರಕಾರ ಸಣ್ಣ ಸಂಗತಿಗಳಲ್ಲಿನ ಸ್ವಾರಸ್ಯ-ಸಂತೋಷದ ಟಿಪಿಕಲ್ ವಿಚಿತ್ರಾನ್ನ ಶೈಲಿಯ ಲಹರಿ. ಕಾಳು-ಜೊಳ್ಳು ನೀವೇ ಪ್ರತ್ಯೇಕಿಸಿ ಓದಿ ಆನಂದಿಸಿರಿ.

* ಭಾರತದಲ್ಲೀಗ ಎಲ್ಲರ ಕೈಯಲ್ಲೂ (ಅಥವಾ ಕಿಸೆಯಲ್ಲೂ) ಮೊಬೈಲು ಬಂದಿದೆ ಎಂದರೆ ಅದೇನೂ ಹೊಸ ಸುದ್ದಿಯಲ್ಲ. ಈ ಕ್ರಾಂತಿ ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಆಗಿದೆ. ಆಶ್ಚರ್ಯವಾಗುವುದು ಜನಜೀವನದಲ್ಲಿ ಮೊಬೈಲ್ ಹಾಸುಹೊಕ್ಕಾಗಿರುವ ಪರಿಯನ್ನು ಗಮನಿಸಿದಾಗ. ಎಸ್ಸೆಮ್ಮೆಸ್ ಮೂಲಕ ಸಂಪರ್ಕ ಎಷ್ಟು ಸರ್ವವ್ಯಾಪಿಯಾಗಿದೆಯೆಂದರೆ ಸಮಾಚಾರ ಶುಭಾಶಯ ಅಥವಾ ಜೋಕ್‍ಗಳ ವಿನಿಮಯವಷ್ಟೇ ಅಲ್ಲದೆ ಸಮಾರಂಭದ ಆಮಂತ್ರಣಗಳೂ ಎಸ್ಸೆಮ್ಮೆಸ್‌ನಲ್ಲೇ ಹೋಗುತ್ತವೆ! ನಮಗೆ ಅಮೆರಿಕದಲ್ಲಿ ಸೆಲ್‍ಫೋನ್ ಎಂದರೆ ಏನಿದ್ದರೂ ದೂರವಾಣಿ ಕರೆಗಳನ್ನು ಮಾಡಲಿಕ್ಕೆ/ಸ್ವೀಕರಿಸಲಿಕ್ಕೆ ಮಾತ್ರ ಉಪಯೋಗಿಸಿ ಗೊತ್ತಿರುವುದರಿಂದ ಭಾರತದಲ್ಲಿ ಮೊಬೈಲ್ ಬಳಕೆಯ ವಿವಿಧ ಆಯಾಮಗಳು ಅಚ್ಚರಿ ಹುಟ್ಟಿಸುತ್ತವೆ.

* ಹೈಟೆಕ್ ಸೌಕರ್ಯಗಳುಳ್ಳ ಮೊಬೈಲ್ ಫೋನ್‌ಗಳನ್ನು ಮಹಾಜನತೆ ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸುತ್ತಿದ್ದಾರೆ ಎನ್ನುವುದಕ್ಕೆ ಒಂದು ನಿದರ್ಶನವನ್ನು ಕೊಡುತ್ತೇನೆ. ಮುಂಬಯಿಯಲ್ಲಿರುವ ಮಗಳಿಗೆಂದು ಕಾರ್ಕಳದ ಜವಳಿ ಅಂಗಡಿಯಲ್ಲಿ ಸೀರೆ ಖರೀದಿಸುವ ಅವಳಮ್ಮ ಒಂದು ಸೀರೆ ಸೆಲೆಕ್ಟ್ ಮಾಡಿ ಅದರ ಫೊಟೊ ಕ್ಲಿಕ್ಕಿಸಿ ಮೊಬೈಲ್ ಮೂಲಕ ಕಳಿಸುತ್ತಾಳೆ. ಮಗಳಿಗೆ ಆ ಸೀರೆಯ ಬಣ್ಣ, ಡಿಸೈನ್, ಅಂಚು-ಸೆರಗು ಎಲ್ಲ ಒಪ್ಪಿಗೆಯಾದರೆ ಓಕೆ ಎಂಬ ಎಸ್ಸೆಮ್ಮೆಸ್ ಬರುತ್ತದೆ. ಕೂಡಲೆ ಸೀರೆ ಪ್ಯಾಕ್ ಆಗಿ ಬಿಲ್ ಪಾವತಿಯಾಗಿ ಮಗಳಿಗೊಪ್ಪುವ ಸೀರೆ ಖರೀದಿಸಿದ ತೃಪ್ತಿ ಅಮ್ಮನದಾಗುತ್ತದೆ! (ಅಮ್ಮ ಕೊಳ್ಳುವ ಹೊಸ ಸೀರೆ ಹೇಗಿರಬಹುದು ಎಂದು ಊಹಿಸಿಯೇ ಪುಳಕಗೊಳ್ಳುವ ಕ್ಷಣಗಳಿಂದ ಮಗಳು ವಂಚಿತಳಾಗುತ್ತಾಳೆಂಬುದು ಬೇರೆ ಮಾತು).

* ಮೊಬೈಲ್ ಮಾಡಿರುವ ಇನ್ನೊಂದು ಕ್ರಾಂತಿಯೆಂದರೆ ಮಿಸ್ಡ್ ಕಾಲ್ ಎಂಬ ಪದಪುಂಜದ ಬಳಕೆ. ಅದು ಕರುಳಿನ ಕರೆ ಅಲ್ಲಾ, ಕಳೆದ್ಹೋದ ಕರೆ. ಆ ಕಾಲ್ ಕೊಡುವುದೇ ಮಿಸ್ ಆಗಲಿ ಎಂದು, ಏಕೆಂದರೆ ಕಾಲ್ ರಿಸೀವ್ ಮಾಡಿ ಮಾತಾಡಿದರೆ ಎರಡೂ ಪಾರ್ಟಿಗಳ ಮಿನಿಟ್ಸ್ ಗಣನೆಯಾಗುತ್ತವೆ. "ಕ್ಷೇಮವಾಗಿ ತಲುಪಿದ ಬಗ್ಗೆ ಒಂದು ಕಾರ್ಡ್ ಬರೆದು ಪೋಸ್ಟ್ ಮಾಡು..." ಎಂದು ಹೇಳಿ ಬೀಳ್ಕೊಡುತ್ತಿದ್ದ ಕಾಲವೊಂದಿತ್ತು. ಈಗ ಅದು ತಲುಪಿದ ಮೇಲೆ ಒಂದು ಮಿಸ್ಡ್ ಕಾಲ್ ಕೊಡು..." ಎಂದು ಮಾರ್ಪಾಡಾಗಿದೆ! ಒಂದುವೇಳೆ ಆಸಾಮಿ ಮಿಸ್ಡ್ ಕಾಲ್ ಕೊಡುವುದನ್ನೂ ಮಿಸ್ ಮಾಡಿದರೆ? ಬಹುಶಃ ಆಗ ಕಾಲ್ ಕೊಡುವುದಕ್ಕೂ ಕೈಕೊಟ್ಟ ಎನ್ನಬೇಕಾದೀತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X