ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂದಕಾಳೂರಿನ ಕೈತೋಟದಲ್ಲಿ ‘ಒಂದೆಲಗ’!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Ondelaga or Brahmi - a medicinal plant ‘ಹಿತ್ತಲ ಗಿಡ ಮದ್ದಲ್ಲ...’ ಎಂದು ಗಾದೆ ಮಾತಿದೆ. ಆದರೇನಂತೆ, ತಮ್ಮ ಹಿತ್ತಲಲ್ಲಿ - ಅದೂ ಬೆಂಗಳೂರಿನ ತಮ್ಮ ಮನೆಯ ಹಿತ್ತಲಲ್ಲಿ - ಮದ್ದಿನ ಗಿಡವನ್ನೂ ನೆಟ್ಟಿರುವ ಸ್ನೇಹಿತರೊಬ್ಬರಿದ್ದಾರೆ. ಆ ಹಿತ್ತಲ ಗಿಡವು ಗಾದೆಯಲ್ಲಿರುವ ಹಿತ್ತಲ ಗಿಡದಂತೆ ಪ್ರಚಾರ-ಪ್ರಾಶಸ್ತ್ಯಗಳಿಲ್ಲದೆ ಹೋಗಬಾರದೆಂಬ ಕಳಕಳಿಯಿಂದ ಅವರು ಗಿಡದ ಫೋಟೊ ಕ್ಲಿಕ್ಕಿಸಿ ಮಿತ್ರವೃಂದಕ್ಕೆ ವಿ-ಅಂಚೆಯಲ್ಲಿ ತೇಲಿಬಿಟ್ಟಿದ್ದಾರೆ. ‘ಈ ಗಿಡದ ಎಲೆಗಳನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯದು, ಎಲೆ ತಿನ್ನಲು ಸಿಗದಿದ್ದರೂ ಕನಿಷ್ಠಪಕ್ಷ ಈ ಚಿತ್ರವನ್ನು ನಿಮ್ಮ ಕಂಪ್ಯೂಟರ್‌ ಪರದೆಯ ಭಿತ್ತಿಚಿತ್ರವಾಗಿಸಿ, ದಿನಾ ಕಣ್ಮನಗಳನ್ನು ತಣಿಸಿಕೊಳ್ಳಿ...’ ಎಂದು ಪುಟ್ಟದೊಂದು ಆದೇಶವನ್ನೂ ಕೊಟ್ಟಿದ್ದಾರೆ!

ಯಾರೀ ಪ್ರಕೃತಿಪ್ರಿಯ ಹಸಿರುವಾದಿ ಸ್ನೇಹಿತ? ಯಾವುದದು ಅವರ ಹಿತ್ತಲಲ್ಲಿರುವ ಮದ್ದಿನ ಗಿಡ? ಬನ್ನಿ, ಪರಿಚಯಿಸಿಕೊಳ್ಳೋಣ ಈ ವಾರದ ವಿಚಿತ್ರಾನ್ನದಲ್ಲಿ.

*

ಕಾಂಕ್ರೀಟ್‌ ಕಾಡಾಗುತ್ತಿರುವ ಇವತ್ತಿನ ಬೆಂಗಳೂರಿನಂಥ ಬೆಂಗಳೂರಿನಲ್ಲಿ ‘ತೋಟದ ಮನೆ’ಯ ಕಲ್ಪನೆಯೇ ಅದ್ಭುತ. ಹೀಗಿರುವಾಗ ನಗರವಾಸಿಯಾಗಿಯೂ, ನಗರದ ಯಾಂತ್ರೀಕೃತ ಬದುಕಿಗೆ ಸಿಲುಕಿದ ಜೀವವಾಗಿಯೂ, ಸಂಜೆಯ ಒಂದಿಷ್ಟು ಹೊತ್ತನ್ನು ತಾವೇ ಬೆಳೆದ ಹೂ-ಹಣ್ಣು-ತರಕಾರಿ ಗಿಡಗಳ ಸಾನಿಧ್ಯದಲ್ಲಿ ಕಳೆಯುವ ಭಾಗ್ಯಕ್ಕಾಗಿ ‘ತೋಟದ ಮನೆ’ಯನ್ನು ಕಟ್ಟಿಕೊಂಡಿರುವ ಈ ಮಿತ್ರಮಹಾನುಭಾವರ ಹೆಸರು ವಿನೋದ್‌ ಖಾಡಿಲ್ಕರ್‌ ಎಂದು. ಬೆಂಗಳೂರಲ್ಲೇ ಕಂಪ್ಯೂಟರ್‌ ಹಾರ್ಡ್‌ವೇರ್‌ ಕಂಪೆನಿಯಾಂದನ್ನು ‘ಬದುಕಿಗಾಗಿ’ ನಿರ್ವಹಿಸಿಕೊಂಡಿರುವ ಅವರು ಮನೆಯನ್ನು ನಗರದ ಹೊರವಲಯದಲ್ಲಿ ಕಟ್ಟಿಕೊಂಡಿದ್ದಾರೆ. ಅವರ ಆ ಪುಟ್ಟ ಫಾರ್ಮ್‌ಹೌಸ್‌ನ ಹೆಸರು ‘ಉಳಾಚ್ಚಿಲ್‌’ ಎಂದು. (ನಮ್ಮ ಚಿತ್ಪಾವನಿ ಮರಾಠಿಯಲ್ಲಿ, ತುಳುಭಾಷೆಯಲ್ಲಿ ಈ ಪದವನ್ನು ಕೈತೋಟ/ಹಿತ್ತಿಲು ಎಂಬ ಅರ್ಥದಲ್ಲಿ ಉಪಯೋಗಿಸುತ್ತಾರೆ).

ದಕ್ಷಿಣಕನ್ನಡದ ತನ್ನ ಬೇರುಗಳ (ಮೂಲತಃ ಬೆಳ್ತಂಗಡಿ ತಾಲೂಕಿನ ಮುಂಡಾಜೆ) ನೆನಪಿಗೋಸ್ಕರ ಅಲ್ಲಿನ ಸ್ಪೆಷಲ್‌ಗಳನ್ನೆಲ್ಲ ಮನೆಯಲ್ಲಿ, ಮನೆಯ ಕೈತೋಟದಲ್ಲಿ ಬೆಳೆಸಿದ್ದಾರೆ ವಿನೋದ್‌ ಖಾಡಿಲ್ಕರ್‌. ಅವರ ‘ಉಳಾಚ್ಚಿಲ್‌’ನಲ್ಲಿ ನಿಮಗೆ ದಿವಿಹಲಸಿನ (ಬೇರುಹಲಸು ಅಂತಾರೆ, ಅದೇ) ಮರ ನೋಡಲು ಸಿಗುತ್ತದೆ, ಅಲ್ಲಿ ಆಕರ್ಷಕ ಕೆಂಪುಬಣ್ಣದ ಜಂಬುನೇರಳೆ ಹಣ್ಣುಗಳಿವೆ, ಸಪೋಟ-ಸೀತಾಫಲಗಳಿವೆ, ಮಾವು-ಬೇವುಗಳೂ ಇವೆ. ತರಕಾರಿ ಬೇಕೆ? ತೊಂಡೆಕಾಯಿ ಇದೆ, ನುಗ್ಗೆ ಮರವಿದೆ. ಚಟ್ನಿ ಮಾಡುತ್ತೀರಾದರೆ ಹುಳಿಹುಳಿಯಾಗಿರುವ ‘ಬಿಂಬಲ’ಹುಳಿಯೂ ಇದೆ, ಪತ್ರೊಡೆ ಮಾಡುತ್ತೀರಾದರೆ ಕೆಸುವಿನ ಎಲೆಯೂ ಇದೆ! ಹೂಗಿಡಗಳೂ ಯಥೇಷ್ಟ ಇವೆ - ಡೇಲಿಯಾ, ಹೇಂಮಾಂತಸ್‌, ಗೋರಂಟಿಗೆ, ಗಡಿಯಾರ ಹೂವು, ರತ್ನಮಲ್ಲಿಗೆ, ಅವು-ಇವು-ಎಲ್ಲವೂ!

ನೋಡಿದರೆ ಖುಶಿ ಕೊಡುವ, ಕಣ್ಮನಗಳು ತಣಿದು ಹೆಮ್ಮೆಯೆನಿಸುವ, ಹಸಿರಿನ ಉಸಿರನ್ನು ಪಸರಿಸುವಂತಿರುವ ಈ ಉಳಾಚ್ಚಿಲ್‌ನಲ್ಲಿ ಬೆಳೆದ ಒಂದೆಲಗ ಸಸ್ಯಗಳದ್ದೇ ವಿನೋದ್‌ ಅವತ್ತು ನಮ್ಮ ಯಾಹೂಗ್ರೂಪ್‌ಗೆ ಈಮೈಲ್‌-ಫೋಟೋ ಕಳಿಸಿದ್ದು. ಆ ಒಂದು ಫೋಟೋ ನೋಡಿಯೇ ಗುಂಪಿನ ಸದಸ್ಯರೆಲ್ಲ - ಪ್ರಪಂಚದ ಮೂಲೆಮೂಲೆಗಳಲ್ಲಿರುವವರು - ಒಂದು ಕ್ಷಣಕ್ಕೆ ತವರೂರಿನ ತೋಟದಲ್ಲಿ ಕಾಲಿಟ್ಟ, ಗದ್ದೆಬದುಗಳ ಮೇಲೆ ನಡೆದಾಡಿದ ನಾಸ್ಟಾಲ್ಜಿಯಾ ಅನುಭವಿಸಿದರು. ಒಂದೆಲಗ ಮಾತ್ರವೇಕೆ, ನಿಮ್ಮ ತೋಟದ ಎಲ್ಲ ಬೆಳೆಗಳನ್ನೂ ನಮಗೆ ತೋರಿಸಿ ಎಂಬ ಕೋರಿಕೆಯನ್ನು ಮನ್ನಿಸಿದ ಖಾಡಿಲ್ಕರ್‌ ಅವರು ತಮ್ಮ ಉಳಾಚ್ಚಿಲ್‌ನ ಫೋಟೋ-ಟೂರ್‌ ಒಂದನ್ನು ಎರೇಂಜ್‌ ಮಾಡಿಟ್ಟಿದ್ದಾರೆ ; ಇಲ್ಲಿದೆ ಅದು, ನೀವೂ ಒಮ್ಮೆ ನೋಡಿಬನ್ನಿ - ಅಷ್ಟೊತ್ತಿಗೆ ನಾನು ಒಂದೆಲಗದ ಬಗ್ಗೆ ಇನ್ನೂ ಒಂದಿಷ್ಟು ಮಾಹಿತಿಯನ್ನು ಸಂಗ್ರಹಿಸಿ ನಿಮ್ಮ ಓದಿಗೆ ರೆಡಿಮಾಡಿಡುತ್ತೇನೆ.

*

ಕನ್ನಡದಲ್ಲಿ ‘ಒಂದೆಲಗ’, ತುಳುಭಾಷೆಯಲ್ಲಿ ‘ತಿಮಾರೆ’, ಕೊಂಕಣಿ-ಮರಾಠಿಗಳಲ್ಲಿ ‘ಕರಾನ್ನೊ’, ಸಂಸ್ಕೃತ/ಹಿಂದಿಯಲ್ಲಿ ‘ಬ್ರಾಹ್ಮಿ’, ಸಸ್ಯಶಾಸ್ತ್ರೀಯವಾಗಿ Centella asiatica ಎಂದು ಹೆಸರಿರುವ ಈ ಸಸ್ಯ ಪ್ರಾಚೀನ ಕಾಲದಿಂದಲೂ, ಔಷಧೀಯ ಗುಣವಿರುವುದೆಂದು ಗುರ್ತಿಸಿಕೊಂಡಿರುವ ಸಸ್ಯ. ಒಂದೆಲಗ ಎಂದರೆ ಗೊತ್ತಾಗದಿದ್ದವರಿಗೆ ಕನ್ನಡದಲ್ಲಿ ಅದಕ್ಕೆ ಇಲಿಕಿವಿ ಸೊಪ್ಪು, ಗದ್ದೆ ಬರಗ, ತಂಬುಳಿ ಗಿಡ, ಸರಸ್ವತಿ ಸೊಪ್ಪು (ಬ್ರಹ್ಮ - ಬ್ರಾಹ್ಮಿ - ಸರಸ್ವತಿ?) ಇತ್ಯಾದಿ ಹೆಸರುಗಳೂ ಇವೆಯೆಂದರೆ ಗುರುತಿಸುವುದು ಸುಲಭವಾದೀತು.

ನಮ್ಮ ಕರಾವಳಿಯಲ್ಲಿ ಒಂದೆಲಗ (ಹೆಚ್ಚು ಜನರಿಗೆ ‘ತಿಮಾರೆ’ ಅಥವಾ ‘ಕರಾನ್ನೊ’ ಎಂದೇ ಗೊತ್ತು) ವ್ಯಾಪಕವಾಗಿ ಬಳಕೆಯಾಗುತ್ತದೆ. ಕರಾವಳಿ ಪರಿಸರದಲ್ಲಿ ಬತ್ತದಗದ್ದೆಗಳ ಬದಿಯ ಜೌಗುಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗಿ ಬೆಳೆಯುವ ಒಂದೆಲಗವನ್ನು ಅಡುಗೆಪದಾರ್ಥವಾಗಿಯೂ ಉಪಯೋಗಿಸುತ್ತೇವೆ. ಒಂದೆಲಗದ ಚಟ್ನಿ ಅಥವಾ ತಂಬುಳಿ ಕರಾವಳಿ-ಮಲೆನಾಡಿನ ಅಡುಗೆಯಲ್ಲಿ ಒಂದು ಸ್ವಾದಿಷ್ಟ ಸ್ಪೆಷಾಲಿಟಿ. ಬೇಸಗೆಯ ದಿನಗಳಲ್ಲಂತೂ ದಿನಕ್ಕೊಂದು ನಮೂನೆಯ ‘ಹಶಿ’ ಅಥವಾ ತಂಬುಳಿ ಮಾಡುವ ಮನೆಗಳಲ್ಲಿ ಶುಂಠಿ, ಸಂಭಾರಸೊಪ್ಪು, ಮೆಂತ್ಯ, ಸೌತೆ, ದಾಸವಾಳ, ದಾಳಿಂಬೆಸಿಪ್ಪೆ, ಒಂದೆಲಗ - ಹೀಗೆ ಒಂದಲ್ಲ ಒಂದು ತಂಬುಳಿ ಇದ್ದೇ ಇರುತ್ತದೆ.

ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ. ಒಂದೆಲಗದಿಂದ ಸ್ಮರಣಶಕ್ತಿಯ ವೃದ್ಧಿಯಾಗುತ್ತದೆಯೆಂಬ ವಿಚಾರವನ್ನು ಸಿಂಹಳೀಯರು ಶತಶತಮಾನಗಳ ಹಿಂದೆಯೇ ಕಂಡುಕೊಂಡರು ಎನ್ನುತ್ತಾರೆ. ಶ್ರೀಲಂಕಾ ದೇಶದಲ್ಲಿ ಹಿಂದಿನ ಕಾಲದಿಂದಲೂ ಬ್ರಾಹ್ಮಿ ಹೇರಳವಾಗಿ ಬೆಳೆಯುತ್ತಿತ್ತಂತೆ. ಅಲ್ಲಿ ಆನೆಗಳು ಈ ಸೊಪ್ಪನ್ನು ತುಂಬಾ ಇಷ್ಟಪಟ್ಟು ತಿನ್ನುವುದನ್ನು ಗಮನಿಸಿದ ಜನ, ಆನೆಗಳ ತಥಾಕಥಿತ ಅದ್ಭುತ ಸ್ಮರಣಶಕ್ತಿಗೆ ಒಂದೆಲಗ ಸೊಪ್ಪಿನ ಸೇವನೆಯೇ ಕಾರಣವೆಂದು ಸುಲಭವಾಗಿ ಊಹಿಸಿದರು. ಸಿಂಹಳೀಯರು ಬ್ರಾಹ್ಮಿಸೊಪ್ಪನ್ನು ವಿಪುಲವಾಗಿ ಸೇವಿಸುತ್ತಾರೆ, ಅದನ್ನೊಂದು ವಾಣಿಜ್ಯಬೆಳೆಯನ್ನಾಗಿ ಬೆಳೆದು ಹೊರದೇಶಗಳಿಗೂ ರಫ್ತು ಮಾಡುತ್ತಾರೆ.

ಬ್ರಾಹ್ಮಿ ಸೊಪ್ಪಿನ ಮಹಿಮೆಯನ್ನು ಪ್ರಾಚೀನ ಭಾರತದ ಮಹರ್ಷಿಗಳು, ಆಚಾರ್ಯರುಗಳೂ ಅರಿತಿದ್ದಿರಬೇಕು. ಗುರುಕುಲ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ, ಕಲಿಕೆಯ ಸಾಮರ್ಥ್ಯ ಮತ್ತು ಮನಸ್ಸಿನ ಕೇಂದ್ರೀಕರಣಗಳಿಗೆ ಅನುಕೂಲವಾಗಲೆಂದು ಅವರ ಆಹಾರದಲ್ಲಿ ಬ್ರಾಹ್ಮಿ ಸೊಪ್ಪು, ಅಂದರೆ ಒಂದೆಲಗ ಸಹ ಇರುತ್ತಿತ್ತೆಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಸೌಂದರ್ಯವರ್ಧಕವಾಗಿ ತ್ವಚೆಯ ಹೊಳಪನ್ನು ಹೆಚ್ಚಿಸಲು ಮತ್ತು ಚರ್ಮದ ಮೇಲಿನ ಗಾಯಗಳನ್ನು ಗುಣಪಡಿಸಲು ಒಂದೆಲಗ ಸೊಪ್ಪನ್ನು ಅರೆದು ಹಚ್ಚಿಕೊಳ್ಳುವ ಚಿಕಿತ್ಸಾಕ್ರಮ ಆಯುರ್ವೇದದಲ್ಲಿದೆ.

ಒಂದೆಲಗದಲ್ಲಿರುವ ವಿಶಿಷ್ಠ ರಾಸಾಯನಿಕ ಅಂಶಗಳಾದ ಬೆಕೊಸೈಡ್‌ ಎ ಮತ್ತು ಬಿ ಅದಕ್ಕೆ ವಿಶೇಷ ಗುಣವನ್ನು ತರುವಂಥವು ಎಂದು ಸೆಂಟ್ರಲ್‌ ಡ್ರಗ್‌ ಇನ್ಸ್‌ಟಿಟ್ಯೂಟ್‌ನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಎರಡು ರಾಸಾಯನಿಕಗಳು ಮೆದುಳಿನಲ್ಲಿ, ಪ್ರಮುಖವಾಗಿ ಜ್ಞಾಪಕಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ, ಪ್ರೊಟಿನ್‌ ಸಂಶ್ಲೇಷಣೆಗೆ ನೆರವಾಗುತ್ತವಂತೆ. ತನ್ಮೂಲಕ ಮೆದುಳಿನಲ್ಲಿನ ‘ಮೆಮೊರಿ ಸೆಲ್‌’ಗಳು ದಷ್ಟಪುಷ್ಟವಾಗಿ ಅಧಿಕ ಪ್ರಮಾಣದಲ್ಲಿ ಮತ್ತು ದೀರ್ಘಾವಧಿಗೆ ಮಾಹಿತಿಯನ್ನು ಸಂಗ್ರಹಿಸಿಡುವ ಸಾಮರ್ಥ್ಯವನ್ನು ಹೊಂದುತ್ತವೆ.

ಮತ್ತೆ ಕರಾವಳಿ ಜಿಲ್ಲೆಗಳ ವಿಷಯಕ್ಕೆ ಬಂದರೆ, ಅಲ್ಲಿ ಅಧಿಕಪ್ರಮಾಣದಲ್ಲಿ ಒಂದೆಲಗ ಸೇವನೆಗೂ, ಕರಾವಳಿ ಜಿಲ್ಲೆಗಳಲ್ಲಿನ ಅತ್ಯಧಿಕ ಸಾಕ್ಷರತಾ ಪ್ರಮಾಣಕ್ಕೂ, ಇತ್ತೀಚೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಉಡುಪಿ/ದ.ಕ ಜಿಲ್ಲೆಗಳ ವಿದ್ಯಾರ್ಥಿಗಳೇ ಅಗ್ರಶ್ರೇಣಿಯಲ್ಲಿರುವುದಕ್ಕೂ ಏನಾದರೂ ಹೊಂದಾಣಿಕೆಯಿದೆಯೇ ಎಂಬ ಕುತೂಹಲ ಬಂದರೆ ಆಶ್ಚರ್ಯವಿಲ್ಲ. ಯಾರಾದರೂ ಪಿ.ಎಚ್‌.ಡಿ ಥೀಸಿಸ್‌ಗೆ ಇದನ್ನೊಂದು ವಿಷಯವಾಗಿ ತೆಗೆದುಕೊಳ್ಳಬಹುದು!

ಒಂದೆಲಗದಿಂದ ಸ್ಮರಣಶಕ್ತಿಯ ವೃದ್ಧಿಯ ಬಗ್ಗೆ ದಕ್ಷಿಣಕನ್ನಡದ ರಾಜಕಾರಣಿಗಳಿಬ್ಬರ ‘ಭಾಷಣ’ದ ಸಂದರ್ಭವನ್ನು ಉಲ್ಲೇಖಿಸುತ್ತ, ದೈಜಿವರ್ಲ್ಡ್‌.ಕಾಂ ಎಂಬ ಅಂತರ್ಜಾಲಪತ್ರಿಕೆಯಲ್ಲಿ ಮಂಗಳೂರು ಮಸಾಲಾ ಎಂಬ ಅಂಕಣವನ್ನು ಬರೆಯುವ ರಿಚಿ ಲಸ್ರಾದೊ ಅವರು ಬರೆದ ಒಂದು ಲೈಟ್‌ ಎಂಟರ್‌ಟೈನ್‌ಮೆಂಟ್‌ ಲೇಖನವನ್ನು ನೀವು ಓದಬೇಕು. ಒಂದೆಲಗದ ಬಗ್ಗೆ ಮಾಹಿತಿ ಮತ್ತು ಜತೆಯಲ್ಲೇ ರಾಜಕೀಯ ವಿಡಂಬನೆಯನ್ನವರು ಎಷ್ಟು ಚೆನ್ನಾಗಿ ಹೆಣೆದಿದ್ದಾರೆ ಅಂತ ನೋಡಿ. ಅದೇ ಪುಟದ ಕೊನೆಯಲ್ಲಿ ನಿಮಗೆ ಒಂದೆಲಗದ ಚಟ್ನಿಯ ರೆಸಿಪಿ ಸಹ ಸಿಗುತ್ತದೆ!

*

ಇವತ್ತಿನ ಸಂಚಿಕೆಯಲ್ಲಿ ಒಂದೆಲಗದ ಬಗ್ಗೆ ಒಂದೆರಡು ಮಾತುಗಳು, ಅದರ ನೆಪದಲ್ಲಿ ಖಾಡಿಲ್ಕರ್‌ ಅವರ ‘ಉಳಾಚ್ಚಿಲ್‌’ನ ಫೋಟೋ ಟೂರ್‌ ಇತ್ಯಾದಿ ಹೇಗನಿಸಿತು ಎಂಬ ನಿಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ತಿಳಿಸುತ್ತ ಪತ್ರಿಸಿ. ವಿಳಾಸ - [email protected].


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X