ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥಕ್ಕೆ ಮತ್ತು ವರ್ಣನೆಗೆ ಸಿಗದ ಶೂನ್ಯ ಮತ್ತು ಅನಂತ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಒಂದು ಸಲ ಅಲೆಕ್ಸಾಂಡರ್ ನಿಗೆ ಅನಾಕ್ಸಾರ್ಕಸ್ ಎಂಬ ಗ್ರೀಕ್ ತತ್ವಜ್ಞಾನಿ ನಮ್ಮ ಭೂಲೋಕದ ಹಾಗೆ ಇನ್ನೂ ಅನಂತವಾದ ಲೋಕಗಳಿವೆ ಎಂದು ತಿಳಿಸಿದನಂತೆ. ಅದನ್ನು ಕೇಳಿದ ಅಲೆಕ್ಸಾಂಡರ್ ನಿಗೆ ತುಂಬಾ ದುಃಖವಾಗಿ ಅವನು ಬಿಕ್ಕಿ ಬಿಕ್ಕಿ ಅಳತೊಡಗಿದನಂತೆ.

ಅದನ್ನು ನೋಡಿದ ಅಲೆಕ್ಸಾಂಡರ್ ನ ಹಿತೈಷಿಯೊಬ್ಬ ಅವನ ದುಃಖಕ್ಕೆ ಕಾರಣ ಕೇಳಿದಾಗ ಅವನು "ಈ ಜಗತ್ತಿನಲ್ಲಿ ಇನ್ನೂ ಅನೇಕಾನೇಕ ಲೋಕಗಳಿವೆ ಎಂದು ತಿಳಿದ ಮೇಲೆ, ಇನ್ನೂ ಕೇವಲ ಈ ಒಂದು ಲೋಕವನ್ನು ಕೂಡ ಗೆಲ್ಲಲಾಗದ ನನಗೆ ದುಃಖವಾಗದೇ ಇರುವುದು ಸಾಧ್ಯವೇ?" ಎಂದು ಹೇಳಿ ಮತ್ತಷ್ಟೂ ಅತ್ತನಂತೆ.

ಗೊತ್ತಿರುವುದು ಮರಳಿನ ಕೇವಲ ಒಂದು ಕಣದಷ್ಟು!ಗೊತ್ತಿರುವುದು ಮರಳಿನ ಕೇವಲ ಒಂದು ಕಣದಷ್ಟು!

ನಾವೀಗ ಅಲೆಕ್ಸಾಂಡರ್ ನ ದುಃಖವನ್ನು ಸ್ವಲ್ಪ ಬಿಟ್ಟು ಬಿಡೋಣ. ಇಲ್ಲಿ ಮುಖ್ಯವಾದ ವಿಷಯವೆಂದರೆ ಈ ನಮ್ಮ ಜಗತ್ತು ಅನಂತವಾದದ್ದು ಎಂಬ ಪರಿಜ್ಞಾನ ಬಹಳ ಹಳೆಯದು ಎಂಬುದು ಅನಾಕ್ಸಾರ್ಕಸ್ ಎಂಬ ಗ್ರೀಕ್ ತತ್ವ ಜ್ಞಾನಿಯ ಮಾತಿನಿಂದ ವ್ಯಕ್ತವಾಗುತ್ತದೆ.

Zero to Infinity : Interesting things to know about

ಅಲೆಕ್ಸಾಂಡರ್ ಭೂಲೋಕವನ್ನು ಜಯಿಸಲು ಹೊರಟಿದ್ದು ಸುಮಾರು ಎರಡು ಸಾವಿರದೈನೂರು ವರ್ಷಗಳ ಹಿಂದೆ ಅಲ್ಲವೇ? ಅಂದರೆ ಎಣಿಸಲಸಾಧ್ಯವಾದದ್ದನ್ನು ಅನಂತ ಎಂದು ಹೇಳುತ್ತಾರೆ ಎಂಬುದು ಆ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತು ಎಂದು ತಿಳಿದು ಬರುತ್ತದೆ.

ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!

ಅನಂತತೆ ಎಂದರೇನು? ಎಂಜಿನೀಯರುಗಳು, ವಿಜ್ಞಾನಿಗಳು ಮತ್ತು ಗಣಿತಜ್ಞರು ಎಣಿಸಲಾಗದಷ್ಟು ದೊಡ್ಡ ಸಂಖ್ಯೆ ಎಂದು ಅರ್ಥೈಸಿ ಅದನ್ನು ಗುರುತಿಸಲು "∞" ಎಂಬ ಚಿಹ್ನೆಯನ್ನು ಹುಡುಕಿ ಅದರಲ್ಲಿ ಅನಂತತೆಯನ್ನು ಬಂಧಿಸಿಟ್ಟಿದ್ದೇವೆ. ಆದರೆ ಈ ಚಿಹ್ನೆ ಅನಂತತೆಯ ಒಂದು ಹೆಸರೇ ಹೊರತು ಅದನ್ನು ವಿವರಿಸುವುದಿಲ್ಲ. ಅನಂತವಾದದ್ದು ಎಂದರೆ ನಮಗೆ ವಿವರಿಸಲಾಗದಷ್ಟು ದೊಡ್ಡದು ಮತ್ತು ಅರ್ಥೈಸಲಾಗದಷ್ಟು ಗೂಢವಾದದ್ದು.

ಒಮ್ಮೆ ಗೋಪಾಲಕೃಷ್ಣ ಗೋಖಲೆ ಚಿಕ್ಕವರಾಗಿದ್ದಾಗ ಅವರ ಸ್ಕೂಲಿಗೆ ಬಂದ ಸ್ವಾಮಿ ವಿವೇಕಾನಂದರು ಕೃಷ್ಣನ ಚಿತ್ರವನ್ನು ತೋರಿಸಿ ಕೃಷ್ಣನ ಬಣ್ಣವೇಕೆ ನೀಲಿ ಎಂದು ಗೋಪಾಲ ಕೃಷ್ಣ ಗೋಖಲೆ ಅವರನ್ನು ಕೇಳಿದರಂತೆ.

ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದುಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು

ಆಗ ಗೋಖಲೆ ಅವರು "ಸ್ವಾಮೀಜಿ, ಆಕಾಶ ಅನಂತವಾದದ್ದು ಅಪರಿಮಿತವಾದದ್ದು ಮತ್ತು ಅದರ ಬಣ್ಣ ನೀಲಿ, ಸಮುದ್ರ ಕೂಡ ಅನಂತವಾದದ್ದು, ಅಪರಿಮಿತವಾದದ್ದು ಹಾಗೂ ಅದರ ಬಣ್ಣ ಕೂಡ ನೀಲಿ, ಅದರಂತೆಯೇ, ದೇವರು ಕೂಡಾ ಅನಂತ. ದೇವರ ಸಂಪೂರ್ಣ ಅರಿವು ಮಾನವ ಮಾತ್ರರಾದ ನಮಗೆ ಆಗಲು ಸಾಧ್ಯವಿಲ್ಲ. ಆದುದರಿಂದ ಅವನ ಬಣ್ಣ ಕೂಡ ನೀಲಿ" ಎಂದರಂತೆ. ಈ ಕಥೆಯಲ್ಲಿ ದೇವರನ್ನು ಅನಂತತೆಗೆ ಹೋಲಿಸಿದ್ದಾರೆ. ಅದೇ ರೀತಿ ಸಮಯವನ್ನು ಮತ್ತು ಈ ವಿಶ್ವವನ್ನು ಅನಂತ ಎಂದು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಅನೇಕ ಕಡೆಗಳಲ್ಲಿ ಬಣ್ಣಿಸಲಾಗಿದೆ.

ನಿಜವಾಗಿಯೂ ಅನಂತತೆ ನಮ್ಮ ಅರಿವಿನ ಪರಿಧಿಗೆ ಸಿಗಲಾರದ ಒಂದು ಅವರ್ಣನೀಯ ಅನುಭೂತಿ ಅಷ್ಟೆ. ನಾವೆಷ್ಟೇ ದೊಡ್ಡ ಸಂಖ್ಯೆಯನ್ನು ಕಲ್ಪಿಸಿದರೂ ಗಣಿತದಲ್ಲಿನ ಅನಂತ ಅದಕ್ಕಿಂತ ತುಂಬಾ ದೊಡ್ಡದು. ಅದರಂತೆಯೇ ಕಾಲ ಕೂಡ. ಕಾಲಕ್ಕೆ ಆದಿಯಿಲ್ಲ ಮತ್ತು ಅಂತ್ಯವಿಲ್ಲ (ಆಧುನಿಕ ಭೌತಶಾಸ್ತ್ರ ಕಾಲದ ಅನಂತತೆಯನ್ನು ಒಪ್ಪುವುದಿಲ್ಲ). ನಮ್ಮ ಇಂದಿನ ಅರಿವಿನ ಪ್ರಕಾರ, ಈ ಜಗತ್ತು ನಮ್ಮ ತಿಳಿವಿನ ಸೀಮೆಯನ್ನು ಮೀರಿ ದೊಡ್ಡದಾಗಿದೆ. ಆದುದರಿಂದ ಈ ಜಗತ್ತು ಕೂಡ ಯಾವುದೇ ಸೀಮೆಗಳಿರದೇ ಅನಂತವಾಗಿದೆ ಎಂಬುದು ಒಂದು ವಾದ.

ಅದೇ ರೀತಿ ಶೂನ್ಯ ಕೂಡ. ನಮಗೆ ಶೂನ್ಯ ಕೇವಲ ಸಂಖ್ಯೆಗಳ ಶೂನ್ಯ ಅಲ್ಲ. ಶೂನ್ಯ ಎಂದರೆ ಬರಿದು, ಖಾಲಿ ಎಂಬರ್ಥ. ಎಲ್ಲಿ ಏನೂ ಇಲ್ಲವೋ ಅದು ಶೂನ್ಯ. ಗಣಿತದಲ್ಲಂತೂ ಶೂನ್ಯ ಒಂದು ಅದ್ಭುತ ಸಂಖ್ಯೆ. ಶೂನ್ಯದಿಂದ ಅನಂತವನ್ನು ತಲುಪುವುದು ಬಹಳ ಸುಲಭ. ಒಂದನ್ನು ಶೂನ್ಯದಿಂದ ಭಾಗಿಸಿದರೆ ಸಾಕು, ಅದು ಅನಂತವಾಗಿಬಿಡುತ್ತದೆ. ಆದರೆ ಅದೆಷ್ಟೇ ದೊಡ್ಡ ಸಂಖ್ಯೆ ಇರಲಿ ಅದನ್ನು ಶೂನ್ಯದಿಂದ ಗುಣಿಸಿದರೆ ಅದು ಶೂನ್ಯವೇ ಆಗಿಬಿಡುತ್ತದೆ. ನಿಜಕ್ಕೂ ವಿಚಿತ್ರ ಅಲ್ಲವೇ? ಅಂದ ಹಾಗೆ, ಈ ಅದ್ಭುತ ಸಂಖ್ಯೆಯನ್ನು ಜಗತ್ತಿಗೆ ಕೊಟ್ಟದ್ದು ನಾವು ಭಾರತೀಯರೇ ಅಲ್ಲವೇ?

ಶೂನ್ಯ ನಮ್ಮಂತಹ ಸಾಧಾರಣ ಜನರಿಗೆ ಸುಲಭವಾಗಿ ಬರಿದು ಅಥವಾ ಏನೂ ಇಲ್ಲದ್ದರ ಪ್ರತೀಕವಾಗಿರಬಹುದು. ಆದರೆ ಕ್ವಾಂಟಮ್ ಭೌತ ವಿಜ್ಞಾನಿಗಳ ಪ್ರಕಾರ ಈ ಜಗತ್ತಿನಲ್ಲಿ ಖಾಲಿ ಎನ್ನುವುದು ಏನೂ ಇಲ್ಲ. ಯಾವುದು ನಮಗೆ ಖಾಲಿ ಎಂದು ಕಾಣಿಸುತ್ತದೋ ಅದರಲ್ಲಿ ಬ್ರಹ್ಮಾಂಡದ ಶಕ್ತಿ ಅಡಕವಾಗಿದೆ ಎಂದು ಹೇಳುತ್ತಾರೆ. ಪ್ರಸಿದ್ಧ ತತ್ವಜ್ಞಾನಿ ಜೆ. ಕೃಷ್ಣ ಮೂರ್ತಿ ಮತ್ತು ಕ್ವಾಂಟಮ್ ವಿಜ್ಞಾನಿ ಡೇವಿಡ್ ಬೊಹ್ಮ್ ಅವರು ಒಮ್ಮೆ ಶೂನ್ಯದ ಮೇಲೆ ಚರ್ಚಿಸಿ ಶೂನ್ಯದಲ್ಲಿಯೇ ಎಲ್ಲವೂ ಅಡಗಿದೆ ಎಂಬ ತೀರ್ಮಾನಕ್ಕೆ ಬಂದರಂತೆ! ಈಗ ಪ್ರಚಲಿತವಿರುವ ಬಿಗ್ ಬ್ಯಾಂಗ್ ಸಿದ್ಧಾಂತ ಈ ಜಗತ್ತು ಶೂನ್ಯದಿಂದ ಒಮ್ಮೆಲೇ ಸ್ಫೋಟಗೊಂಡು ಹಿಗ್ಗಿ ಅದರಿಂದ ನಿರ್ಮಾಣವಾಯಿತು ಎಂದು ಹೇಳಿದರೆ, ಭಾರತೀಯ ತತ್ವಜ್ಞಾನದ ಒಂದು ಶಾಖೆ ಕೂಡ ಜಗತ್ತು ಶೂನ್ಯದಿಂದ ಉದ್ಭವವಾಯಿತು ಎಂದು ಹೇಳುತ್ತದೆ.

ಶೂನ್ಯವೆಂಬುದು ಬರಿದು ಎಂಬುದರ ಲೌಕಿಕ ವರ್ಣನೆಯಾದರೆ ಶೂನ್ಯ ಎಂಬುದು ವಿವರಿಸಲಾಗದ, ಅರ್ಥಕ್ಕೆ ಸಿಗದ ನಿರ್ಗುಣ ತತ್ವದ ಪ್ರತೀಕ, ಅದುವೇ ಬ್ರಹ್ಮ (ದೇವರು) ಎಂದು ವೇದಾಂತದ ಒಂದು ಗುಂಪು ಹೇಳುತ್ತದೆ. ಆದರೆ ಇನ್ನೊಂದು ಗುಂಪಿಗೆ ಅದೇ ಬ್ರಹ್ಮ (ದೇವರು) ಎಷ್ಟೊಂದು ದೊಡ್ಡದಾಗಿ ಕಂಡಿದೆ ಎಂದರೆ ಆ ಗುಂಪು ದೇವರನ್ನು ಸಂಪೂರ್ಣ, ಸಗುಣ ಪರಿಪೂರ್ಣ ಆದುದರಿಂದ ದೇವರು ಅನಂತ ಎಂದು ವರ್ಣಿಸುತ್ತದೆ.

ಒಟ್ಟಿನಲ್ಲಿ ಶೂನ್ಯ ಮತ್ತು ಅನಂತಗಳೆರಡೂ ಕೇವಲ ಗಣಿತವನ್ನು ಕಲಿಯುವ ವಿದ್ಯಾರ್ಥಿಗಳಲ್ಲದೇ, ಕ್ವಾಂಟಮ್ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳನ್ನು ಕೂಡ ಕಾಡುತ್ತಿವೆ ಎಂದಾಯಿತು. ಮುಖ್ಯವಾಗಿ ನಾವು ತಿಳಿಯಬೇಕಾದ ಸಂಗತಿ ಎಂದರೆ ನಾವು ಬದುಕಿರುವ ಜಗತ್ತು ಈ ಶೂನ್ಯ ಮತ್ತು ಅನಂತಗಳ ನಡುವೆ ಹೊಯ್ದಾಡುತ್ತಿದ್ದರೂ ಬದುಕಲು ಮತ್ತು ಕಲಿಯಲು ನಮಗೆ ಅನಂತವಾದ ಅವಕಾಶಗಳನ್ನು ಸೃಷ್ಟಿಸಿದೆ. ನಮ್ಮ ಸೀಮಿತ ಪರಿಧಿಯಲ್ಲಿ ಜಗತ್ತಿನ ಅರ್ಥವನ್ನು ಯಾವುದೋ ಒಂದಾಗಿ ಭ್ರಮಿಸಿ ಅದುವೇ ಸರಿ ಎಂಬ ಮೊಂಡುವಾದಕ್ಕೆ ಜೋತು ಬೀಳುವುದನ್ನು ಬಿಟ್ಟು ಎಲ್ಲರಿಗೂ ಅವರ ಅನುಭವಕ್ಕೆ ತಕ್ಕಂತೆ ಬಾಳಿ ಬದುಕಲು ಸ್ವತಂತ್ರ್ಯವಿದೆ ಎಂದು ತಿಳಿದುಕೊಂಡರೆ ಅದುವೇ ನಾವು ಈ ಜಗತ್ತಿಗೆ ಕೊಡಬೇಕಾದ ದೊಡ್ಡ ಕಾಣ್ಕೆ.

English summary
God is often defined in terms of infinities: God has infinite power, knows infinite thing, is infinitely good. But do real, actual infinities make sense when refering to God and God's capacities? Interesting things to know about Zero to Infinity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X