ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಹುರುಪು ತುಂಬಿದ ಯೋಗದ ಉಪಾಸನೆ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನನ್ನ ಸಿಂಗನ್ನಡಿಗ ಮಿತ್ರ ರಾಮಪ್ರಸಾದ್ ಅವರು ಎಲ್ಲ ಸಿಂಗನ್ನಡಿಗರಿಗೆ ಚಿರಪರಿಚಿತರು. ಕಳೆದ ಹದಿನೈದು ವರ್ಷಗಳಿಂದ ಇಲ್ಲಿ ಅನೇಕರಿಗೆ ನಿಕಮ್ ಗುರೂಜಿ ಯೋಗ ಕುಟೀರ ಸಂಸ್ಥೆಯ ಮೂಲಕ ಯೋಗವನ್ನು ಉಚಿತವಾಗಿ ಕಲಿಸುತ್ತಲಿರುವ ರಾಮಪ್ರಸಾದ್, ಕನ್ನಡ ಸಂಘ, ಸಿಂಗಪುರದ ಚಟುವಟಿಕೆಗಳನ್ನೊಳಗೊಂಡಂತೆ, ಇನ್ನೂ ಹತ್ತು ಹಲವು ಚಟುವಟಿಕೆಗಳಲ್ಲಿ ಬಿಡುವಿರದೇ ಪಾಲ್ಗೊಳ್ಳುತ್ತಾರೆ.

ನಮಗೆಲ್ಲರಿಗೂ ಅವರ ಈ ಹುರುಪು ಮತ್ತು ಮಿತಿಯಿಲ್ಲದ ಚೈತನ್ಯವನ್ನು ಕಂಡು ಅಪಾರ ಅಚ್ಚರಿ. ಅನೇಕ ಬಾರಿ ನಾನಿದನ್ನು ಬಾಯಿ ಬಿಟ್ಟು ಅವರೊಂದಿಗೆ ಹೇಳಿಕೊಂಡಿದ್ದೇನೆ ಕೂಡ. ತಮ್ಮೆಲ್ಲ ಹುರುಪಿಗೆ ಯೋಗವೇ ಕಾರಣ ಎಂದು ತಟ್ಟನೇ ಹೇಳಿಬಿಡುವ ರಾಮಪ್ರಸಾದ್ ನನ್ನನ್ನು ಅನೇಕ ಬಾರಿ ಯೋಗ ವರ್ಗಗಳಿಗೆ ಆಹ್ವಾನಿಸಿದ್ದರು ಕೂಡ. ಮೂಲತಃ ಸೋಮಾರಿಯಾದ ನಾನು ಹೂಂಗುಡುತ್ತಲೇ ಅವರ ಆಹ್ವಾನವನ್ನು ಪ್ರತಿ ಬಾರಿ ನಿರ್ಲಕ್ಷಿಸಿದ್ದೆ.

ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ

Yoga in Singapore, the Indian connection

ಆದರೆ ಇತ್ತೀಚಿಗೆ ನನ್ನಲ್ಲೇ ನನ್ನ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಯಾವುದಾದರೂ ಒಂದು ವ್ಯಾಯಾಮ ಚಟುವಟಿಕೆಯನ್ನು ಆರಂಭಿಸಬೇಕೆಂಬ ತೀವ್ರ ಒತ್ತಡ ಉಂಟಾಗಿತ್ತು. ಅಲ್ಲದೇ ನನ್ನ ಶ್ರೀಮತಿಯು ಕೂಡ ಅವಕಾಶ ಸಿಕ್ಕಾಗಲೆಲ್ಲ ನನ್ನನ್ನು ನಿಯಮಿತ ವ್ಯಾಯಾಮ ಮಾಡಲು ಒತ್ತಾಯಿಸುತ್ತಿದ್ದಳು. ಅಂತಹುದರಲ್ಲಿಯೇ ಮಿತ್ರ ರಾಮಪ್ರಸಾದ್ ನನ್ನನ್ನು ಹೊಸದಾಗಿ ಆರಂಭಿಸಲಿರುವ ಯೋಗ ವರ್ಗಕ್ಕೆ ಸೇರಿಕೊಳ್ಳಲು ಮತ್ತೊಮ್ಮೆ ಹೇಳಿದರು. ಹೀಗಾಗಿ ನಾನು ನನ್ನ ಮನೆಯ ಹತ್ತಿರದಲ್ಲೇ ಅವರ ಸಹ ಶಿಕ್ಷಕ ಡಾ. ಗಿರಿಧರನ್ ಅವರು ನಡೆಸುತ್ತಿದ್ದ ವರ್ಗವನ್ನು ಈ ಮೂರು ತಿಂಗಳ ಹಿಂದೆ ಸೇರಿದೆ. ಮೂರು ತಿಂಗಳಲ್ಲೇ ನನ್ನ ಮೇಲೆ ಯೋಗ ಮತ್ತು ಯೋಗದ ಪಾಠ ಹೇಳಿಕೊಡುವ ಈ ಸಂಸ್ಥೆ ಸಾಕಷ್ಟು ಪ್ರಭಾವ ಬೀರಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಸಿಂಗಪುರದಲ್ಲಿ ಯೋಗದ ಈ ಉಪಾಸನೆಯನ್ನು ಆರಂಭಿಸಿದ್ದು ಇಪ್ಪತ್ತು ವರ್ಷಗಳ ಹಿಂದೆ, ಇಲ್ಲಿಗೆ ಮುಂಬಯಿಯಿಂದ ಆಗಮಿಸಿದ ಅತುಲ್ ದೇಶಪಾಂಡೆ ಅವರು. ಅವರು ಹಠಯೋಗಿ ನಿಕಮ್ ಗುರೂಜಿ ಅವರ ಶಿಷ್ಯರು. ನಿಕಮ್ ಗುರೂಜಿ ಅವರ ಹತ್ತಿರ ಯೋಗ ಕಲಿತು, ಅವರ ಶ್ರೀ ಅಂಬಿಕ ಯೋಗ ಕುಟೀರದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

Yoga in Singapore, the Indian connection

1997ರಲ್ಲಿ ಕೆಲಸದ ಮೇಲೆ ಸಿಂಗಪುರಕ್ಕೆ ಆಗಮಿಸಿದ ಅವರು ತಮ್ಮ ಬಿಡುವಿನ ಸಮಯದಲ್ಲಿ, ಸಿಂಗಪುರದಲ್ಲಿ ಉಚಿತ ಯೋಗ ಶಿಕ್ಷಣವನ್ನು ಆರಂಭಿಸುವ ದೃಷ್ಟಿಯಿಂದ ಸಿಂಗಪುರದ ಶ್ರೀ ರಾಮಕೃಷ್ಣ ಮಿಶನ್ ಸಂಸ್ಥೆಗೆ ಉಚಿತ ಸ್ಥಳಾವಕಾಶ ಒದಗಿಸಲು ಕೇಳಿಕೊಂಡರು. ಶ್ರೀ ರಾಮಕೃಷ್ಣ ಮಿಶನ್ ಸಂಸ್ಥೆ ಅತುಲ್ ಅವರನ್ನು ಮೊದಲು ಆಶ್ರಮ ನಿವಾಸಿಗಳಿಗೆ ಕಲಿಸಲು ಕೇಳಿಕೊಂಡಿತು.

ಹೀಗೆ ಆರಂಭವಾದ ಈ ಸಂಸ್ಥೆ ಇಂದು ಸಿಂಗಪುರದಾದ್ಯಂತ ಸುಮಾರು ಇಪ್ಪತ್ತು ವರ್ಗಗಳನ್ನು ನಡೆಸುತ್ತಿದೆ. ಸುಮಾರು ನೂರಕ್ಕೂ ಹೆಚ್ಚು ಸ್ವಯಂ ಸೇವಕರು ಈ ಸಂಸ್ಥೆಗೆ ಸ್ವಯಂ ಪ್ರೇರಣೆಯಿಂದ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಇಲ್ಲಿಗೆ ವಲಸೆ ಬಂದ ಭಾರತೀಯರು ಮಾತ್ರವಲ್ಲ, ಇಲ್ಲಿನ ಅನೇಕ ನಾಗರಿಕರು ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ

ರಾಮಪ್ರಸಾದ್ ಅವರಂತೆ, ಜಗದೀಶ್, ರಾಮದಾಸ್, ಕವಿತಾ ಶಿವಪ್ರಸಾದ್ ಮತ್ತು ಉಪೇಂದ್ರ ಬಾಳೆಹಿತ್ಲು ಅವರಂತಹ ಸಿಂಗನ್ನಡಿಗರು ಈ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ನನ್ನಂತಹ ಅನೇಕರಿಗೆ ಯೋಗವನ್ನು ಕಲಿಯಲು ಪ್ರೋತ್ಸಾಹಿಸಿದ್ದಾರೆ.

Yoga in Singapore, the Indian connection

ಸುಮಾರು ಹನ್ನೆರಡು ವಾರಗಳಲ್ಲಿ, ವಾರಕ್ಕೊಮ್ಮೆ ಎರಡು ಗಂಟೆಗಳಷ್ಟು ನಡೆಯುವ ಈ ಯೋಗ ವರ್ಗ, ಆಸನಗಳು, ಧ್ಯಾನ, ಪ್ರಾಣಾಯಾಮ ಮತ್ತು ಶುದ್ಧೀಕರಣದ ತಂತ್ರಗಳನ್ನು ಕಲಿಸುತ್ತಾರೆ. ಮುಖ್ಯ ಶಿಕ್ಷಕ ಕೆಲವು ಪ್ರದರ್ಶಕರಿಂದ ಈ ತಂತ್ರಗಳನ್ನು ಮಾಡಿ ತೋರಿಸಿ, ಪ್ರತೀ ಹಂತವನ್ನು ವಿವರಿಸುತ್ತಾರೆ. ಪ್ರತಿ ವರ್ಗದ ಮುಖ್ಯ ಸ್ವರೂಪ ಈ ಕೆಳಗಿನಂತೆ ಇದೆ:

1) ಹಿಂದಿನ ವರ್ಗದ ಪುನಃ ಪರಿಷ್ಕರಣೆ (ಅರ್ಧ ಗಂಟೆ)
2) ಹೊಸ ಆಸನ ಮತ್ತು ಇತರ ತಂತ್ರಗಳ ಪ್ರದರ್ಶನ (ಅರ್ಧ ಗಂಟೆ)
3) ಸಾಮೂಹಿಕ ಅಭ್ಯಾಸ (ಅರ್ಧ ಗಂಟೆ)
4) ವಿಶೇಷ ಗುಂಪಿನ ಅಭ್ಯಾಸ

ಮುಖ್ಯವಾಗಿ ವಿಶೇಷ ಗುಂಪಿನ ವಿಶೇಷವೇನೆಂದರೆ, ಸಂಪೂರ್ಣ ವರ್ಗವನ್ನು ಅವರು ಅಭ್ಯಾಸಕರ ವಯಸ್ಸು ಮತ್ತು ದೈಹಿಕ ಸಾಮರ್ಥ್ಯಗಳ ಮೇಲೆ ವಿಂಗಡಿಸಿರುತ್ತಾರೆ. ರಕ್ತದೊತ್ತಡ ಮತ್ತು ಬೆನ್ನು ನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದವರನ್ನು ಕೂಡ ವಿಶೇಷ ಗುಂಪುಗಳಲ್ಲಿ ವಿಂಗಡಿಸಿ ಆಯಾ ಗುಂಪುಗಳಿಗೆ ತಕ್ಕಂತೆ ಆಸನ ಮತ್ತು ಇತರ ತಂತ್ರಗಳನ್ನು ಹೇಳಿಕೊಡುತ್ತಾರೆ. ಪ್ರತಿಯೊಂದು ವಿಶೇಷ ಗುಂಪಿಗೆ ಒಬ್ಬ ಸ್ವಯಂ ಸೇವಕ ಮಾರ್ಗದರ್ಶಿಯಾಗಿರುತ್ತಾನೆ. ಹೀಗಾಗಿ ನಿಕಮ್ ಗುರೂಜಿ ಯೋಗ ಕುಟೀರ ತನ್ನ ವ್ಯಾಪ್ತಿಯನ್ನು ಸಾಕಷ್ಟು ಬೆಳೆಸಿದೆ.

Yoga in Singapore, the Indian connection

ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈ ದಿನದ ಆಚರಣೆಗೆಂದು ನಿಕಮ್ ಗುರೂಜಿ ಯೋಗ ಕುಟೀರ ಅನೇಕ ಕಡೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮುಖ್ಯ ಕಾರ್ಯಕ್ರಮ ಶನಿವಾರ ಜೂನ್ 17ರಂದು ಸಿಂಗಪುರದ ಕಲ್ಲಾಂಗ್ ಕ್ರೀಡಾಂಗಣದಲ್ಲಿ ನಡೆಯಿತು. ಸಂಜೆ 5:30ರಿಂದ 7:30ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಅಲ್ಲಿ ಎಲ್ಲರಿಗೂ ಮಾಡಲು ಸಾಧ್ಯವಾಗುವ ಸರಳ ಯೋಗಾಸನಗಳನ್ನು ಹೇಳಿಕೊಟ್ಟರು.

ಇಡೀ ಸಭಾಂಗಣದಲ್ಲಿ ಯೋಗದ ಜಾದೂ ಹರಡಿ ಜನರನ್ನೆಲ್ಲಾ ಮಂತ್ರಮುಗ್ಧರನಾಗಿಸಿತ್ತು. ಅದರಂತೆಯೇ ಮತ್ತೊಂದು ಕಾರ್ಯಕ್ರಮ ಗ್ಲೋಬಲ್ ಇಂಡಿಯನ್ ಇಂಟರನ್ಯಾಶನಲ್ ಸ್ಕೂಲಿನಲ್ಲಿ ಏರ್ಪಾಡಾಗಿತ್ತು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿಂದ ವಿಶ್ವಕ್ಕೆ ಭಾರತದ ಅತ್ಯಂತ ದೊಡ್ಡ ಕೊಡುಗೆಯಾದ ಯೋಗಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತು ಯೋಗ ಇನ್ನೂ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಭಾರತೀಯರಾದ ನಮಗೆ ಇದು ಹೆಮ್ಮೆಯ ವಿಷಯ.

ವೈಯುಕ್ತಿಕವಾಗಿ ನನ್ನನ್ನು ಮುಖ್ಯವಾಗಿ ಆಕರ್ಷಿಸಿದ್ದು ನಿಕಮ್ ಗುರೂಜಿ ಸ್ವಯಂ ಸೇವಕರಲ್ಲಿ ಕಂಡು ಬರುವ ವೃತ್ತಿಪರತೆ ಮತ್ತು ಸಾಮಾಜಿಕ ಕಳಕಳಿ. ಒಂದು ಉತ್ತಮ ಧ್ಯೇಯವನ್ನು ಮುಂದಿಟ್ಟುಕೊಂಡು ಸಮಾಜಕ್ಕೆ ತಮ್ಮ ವೈಯುಕ್ತಿಕ ಸಮಯವನ್ನು ಮುಡಿಪಾಗಿಡುವ ಈ ಶಿಕ್ಷಕ ವೃಂದ ನಮ್ಮಂತಹ ಅನೇಕರಿಗೆ ಮಾದರಿ ಎಂದರೆ ತಪ್ಪೇನಿಲ್ಲ. ಇವರೆಲ್ಲರೂ ಯೋಗದಂತಹ ಉನ್ನತ ಜೀವನ ಪದ್ಧತಿಯನ್ನು ಜನ ಸಾಮಾನ್ಯರೆಡೆಗೆ ತಲುಪಿಸಿ ಒಂದು ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಒಂದು ಸಾಮಾನ್ಯ ಗುರಿಯನ್ನು ಹೊಂದಿದ್ದು ಮತ್ತು ಅದಕ್ಕಾಗಿ ನಿಸ್ವಾರ್ಥದಿಂದ ದುಡಿಯುವುದು ಎದ್ದು ಕಾಣುತ್ತದೆ.

ಎಲ್ಲೆಲ್ಲೂ ಇಂತಹ ಉನ್ನತ ಧ್ಯೇಯದ ಸಂಸ್ಥೆಗಳು ಮತ್ತು ಸಮಾಜಮುಖೀ ಸ್ವಯಂಸೇವಕರು ಹರಡಿ ಯೋಗದಂತಹ ಸಂಪೂರ್ಣ ಜೀವನ ಪದ್ಧತಿಯನ್ನು ಇನ್ನಷ್ಟು ಜನಪ್ರಿಯಗೊಳಿಸಿದರೆ, ಜೀವನ ಆರೋಗ್ಯಪೂರ್ಣವಾಗಿ ಅನೇಕ ಪಿಡುಗುಗಳು ಸಂಹರಿಸಲ್ಪಟ್ಟು ಶಾಂತಿಯುತ ಸಮಾಜದ ಕನಸು ನನಸಾಗುವುದು ಎಂದು ನನ್ನ ಭಾವನೆ.

English summary
Many Indians are conducting Yoga coaching classes in Singapore. Ram Prasad, who has been tutoring thousands of students says, it is Yoga which has kept him ever enthusiastic. Vasant Kulkarni takes a tour of Yoga classes started by Indian yoga gurus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X