ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲುಮಾನವನ ದೌರ್ಬಲ್ಯ ಎತ್ತಿ ತೋರಿಸಿದ ವಾನ್ನಕ್ರೈ!

ಇಂತಹುದೇ ಒಂದು ಉಗ್ರಗಾಮಿಗಳ ಗುಂಪು ನಮ್ಮ ಸಂಕೀರ್ಣ ವ್ಯವಸ್ಥೆಗಳ ಮೇಲೆ ದಾಳಿ ಮಾಡಿ, ನಮ್ಮ ಜೀವಾವಧಿಯ ಉಳಿತಾಯವನ್ನು ಒರೆಸಿಹಾಕಿಬಿಡಬಹುದು, ನಮ್ಮ ಆರೋಗ್ಯ, ಅನಾರೋಗ್ಯದ ದಾಖಲೆಗಳನ್ನು ಕದಿಯಬಹುದು.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಸುಮಾರು ಹತ್ತು ದಿನಗಳ ಹಿಂದೆ "WannaCry" ಎಂಬ ಕಂಪ್ಯೂಟರ್ ವೈರಸ್ ಜಗತ್ತಿನಾದ್ಯಂತ ಕೋಲಾಹಲವೆಬ್ಬಿಸಿತು. ಈ ವೈರಸ್ ಮೂಲಕ ವಿಶ್ವದ ಅನೇಕ ಮುಂದುವರೆದ ದೇಶಗಳ ಮಹತ್ವದ ಕಂಪ್ಯೂಟರ್‌ಗಳನ್ನು ಆಕ್ರಮಿಸಿ ಅವುಗಳೊಳಗಿನ ಮಹತ್ವದ ಮಾಹಿತಿಗಳನ್ನು ಬಂಧಿಸಿ, ಬಿಡುಗಡೆಗೊಳಿಸಲು ಕೋಟಿಗಟ್ಟಲೆ ಹಣವನ್ನು ಕೇಳಿದರು ಈ ವೈರಸ್‍ನ ಜನಕರು.

ಬ್ರಿಟನ್ನಿನ National Health System (NHS), ಸ್ಪೇನ್ ಮೂಲದ ಬಹುರಾಷ್ಟ್ರೀಯ ದೂರಸಂಪರ್ಕ ಸಂಸ್ಥೆಯಾದ "Telefonica" ಮತ್ತು ಬೃಹತ್ ಕುರಿಯರ್ ಸಂಸ್ಥೆಯಾದ "FedEx" ಮುಂತಾದ ಮಹತ್ವದ ಸಂಸ್ಥೆಗಳ ಕಂಪ್ಯೂಟರ್‌ಗಳು ಈ ವೈರಸ್ಸಿನ ಕಪಿಮುಷ್ಟಿಗೆ ಸಿಲುಕಿ, ಆ ಸಂಸ್ಥೆಗಳು ಕೋಟಿಗಟ್ಟಲೇ ಆರ್ಥಿಕ ಹಾನಿಯನ್ನು ಅನುಭವಿಸಿದವು. ಈ ಕುಪ್ರಸಿದ್ಧ ವೈರಸ್‍ನ ಜನಕರು ಉತ್ತರ ಕೊರಿಯಾ ಮೂಲದ ಲಾಜಾರಸ್ ಎಂಬ ಗುಂಪು ಎಂದು ಅನುಮಾನ ಪಡಲಾಗಿದೆ. ಆದರೆ ನಿಖರವಾಗಿ ಇಂಥವರೇ ಈ ವೈರಸ್ಸನ್ನು ಬಿಡುಗಡೆ ಮಾಡಿದವರು ಎಂದು ಹೇಳಲಾಗುತ್ತಿಲ್ಲ.

ಒಂದು ಅಜ್ಞಾತ ಅಪರಾಧಿಗಳ ಗುಂಪು ತಮ್ಮ ಪ್ರತಿಭೆಯನ್ನು ತಪ್ಪು ಹಾದಿಯಲ್ಲಿ ಉಪಯೋಗಿಸಿ ವಿಶ್ವಾದ್ಯಂತ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ್ದು ಇಂದಿನ ನಮ್ಮ ಜಗತ್ತಿನ ಇಕ್ಕಟ್ಟಿನ ಪರಿಸ್ಥಿತಿಯನ್ನು ತೋರಿಸುತ್ತದೆ. ಸಮಾಜಕ್ಕೆ ಇನ್ನೂ ಹೆಚ್ಚಿನ ಒಳಿತನ್ನು ಉಂಟು ಮಾಡುವ ಹೊಸ ಹೊಸ ಅವಿಷ್ಕಾರಗಳು ಹುಟ್ಟುತ್ತಿದ್ದಂತೆ ಅಂತಹ ಅವಿಷ್ಕಾರಗಳನ್ನು ಕೆಡಿಸಿ ಹಾನಿ ಉಂಟು ಮಾಡುವ ಅಪರಾಧಿ ಕೃತ್ಯಗಳೂ ಅದರ ಜೊತೆ ಜೊತೆಯೇ ಹುಟ್ಟುತ್ತವೆ. ಈ "Wannacry" ಎಂಬ ಕಂಪ್ಯೂಟರ್ ವೈರಸ್ಸು ಇದರ ಒಂದು ದೊಡ್ಡ ಉದಾಹರಣೆ.

Wannacry visus exposes the vulnerability of human dependency on computer

ನಮ್ಮ ಸಮಾಜ ಮಾಹಿತಿ ತಂತ್ರಜ್ಞಾನದ ಒಡಲಿನಿಂದ ಹುಟ್ಟಿದ ಇಂಟರ್ನೆಟ್ಟಿನಂತಹ ಅನೇಕ ಸಂಕೀರ್ಣ ಉತ್ಪನ್ನಗಳನ್ನು ಉಪಯೋಗಿಸಿ ಅವುಗಳ ಪ್ರಯೋಜನ ಪಡೆಯತೊಡಗಿದಂತೆ ಅವುಗಳ ಮೇಲಿನ ನಮ್ಮ ಅವಲಂಬನೆ ತೀವ್ರವಾಗಿ ಹೆಚ್ಚಾಗ ತೊಡಗಿದೆ. ಈ ಸಂಕೀರ್ಣ ವ್ಯವಸ್ಥೆ (Complex System) ಮತ್ತು ಉತ್ಪನ್ನಗಳು ಇಂದು ನಮ್ಮ ಜೀವನದ ಹಾಸು ಹೊಕ್ಕಾಗಿವೆ. ನಮ್ಮ ಮಾರುಕಟ್ಟೆಗಳು, ಸಾರಿಗೆ ಉದ್ಯಮ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ಬ್ಯಾಂಕುಗಳು ಮತ್ತು ಇತರ ಆರ್ಥಿಕ ಉದ್ದಿಮೆಗಳು ಈ ಸಂಕೀರ್ಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅವಲಂಬಿಸಿವೆ.

ಈಗಂತೂ ನಮ್ಮ ದಿನ ನಿತ್ಯದ ಎಲ್ಲ ವೈಯುಕ್ತಿಕ ಅಗತ್ಯಗಳಿಗೆ ಕೂಡ ಸ್ಮಾರ್ಟ್ ಫೋನು ಮತ್ತು ಕಂಪ್ಯೂಟರುಗಳು ಬೇಕೇ ಬೇಕು. ನಾವು ನಮ್ಮ ಕ್ರೆಡಿಟ್ ಕಾರ್ಡುಗಳ, ಎಲೆಕ್ಟ್ರಿಸಿಟಿ ಇತ್ಯಾದಿಗಳ ಬಿಲ್ಲು ಪಾವತಿಸಲು ಕೂಡ ನಮಗೆ ಈ ಸಲಕರಣೆಗಳ ಅಗತ್ಯವಿದೆ. ನಮ್ಮ ಮಕ್ಕಳ ಸ್ಕೂಲು, ಕಾಲೇಜುಗಳ ಫೀಸು ಕಟ್ಟಲು ಇಂಟರ್ನೆಟ್ ನಮಗೆ ಅವಶ್ಯಕವಾಗಿದೆ. ನಮಗೇ ಅರಿವಿಲ್ಲದೇ ಈ ಸಲಕರಣೆಗಳು ಮತ್ತು ಸಂಕೀರ್ಣ ವ್ಯವಸ್ಥೆಗಳು ನಮ್ಮ ಜೀವನವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಆಕ್ರಮಿಸಿವೆ. ಕೆಲವೇ ವರ್ಷಗಳ ಹಿಂದೆ ಇಂಟರ್ನೆಟ್, ಸ್ಮಾರ್ಟ್ ಫೋನ್, ಬ್ರಾಡ್ ಬ್ಯಾಂಡ್ ಇತ್ಯಾದಿಗಳ ಹೆಸರನ್ನೂ ಕೇಳದಿರುವ ನಾವು ಇಂದು ಇವುಗಳಿಲ್ಲದ ಜೀವನವನ್ನು ಊಹಿಸಲೂ ಸಾಧ್ಯವಿಲ್ಲದಂತಾಗಿದೆ.

ಆದರೆ "Wannacry" ಎಂಬ ಕಂಪ್ಯೂಟರ್ ವೈರಸ್ಸು ನಾವು ಇಂದು ಅವಲಂಬಿತಗೊಂಡಿರುವ ಸಂಕೀರ್ಣ ವ್ಯವಸ್ಥೆಗಳ ದೌರ್ಬಲ್ಯ ಮತ್ತು ನಾಜೂಕುತನಗಳನ್ನು ಎತ್ತಿ ತೋರಿಸಿದೆ. ಕೇವಲ ಒಂದು ಅಜ್ಞಾತ ಅಪರಾಧಿ ಗುಂಪು, ಜಗತ್ತಿನ ಅನೇಕ ಮುಂದುವರೆದ ದೇಶಗಳು ಮತ್ತು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳನ್ನು ಮಣಿಸುವಂತೆ ಮಾಡಿದರೆ, ನಾವು ನಂಬಿರುವ ವ್ಯವಸ್ಥೆಗಳ ದುರ್ಬಲ ಅವಸ್ಥೆ ನಮ್ಮನ್ನು ದಂಗುಗೊಳಿಸುತ್ತವೆ. ಆದರೆ, ಒಂದು ಅರ್ಥದಲ್ಲಿ ನಮ್ಮ ದೌರ್ಬಲ್ಯವನ್ನು ಮೆಟ್ಟಿನಿಂತು ಇನ್ನಷ್ಟು ಬಲಿಷ್ಠರಾಗಲು ಈ ವೈರಸ್ ಕಾರಣವಾಗಿದೆ.

ಗಮನದಲ್ಲಿಡಬೇಕಾದದ್ದು : ಇಂತಹುದೇ ಒಂದು ಉಗ್ರಗಾಮಿಗಳ ಗುಂಪು ನಮ್ಮ ಸಂಕೀರ್ಣ ವ್ಯವಸ್ಥೆಗಳ ಮೇಲೆ ದಾಳಿ ಮಾಡಿ, ನಮ್ಮ ಜೀವಾವಧಿಯ ಉಳಿತಾಯವನ್ನು ಒರೆಸಿಹಾಕಿಬಿಡಬಹುದು, ನಮ್ಮ ಆರೋಗ್ಯ, ಅನಾರೋಗ್ಯದ ದಾಖಲೆಗಳನ್ನು ಕದಿಯಬಹುದು, ಮಾರುಕಟ್ಟೆಗಳನ್ನು ಶಿಥಿಲಗೊಳಿಸಿ ಆರ್ಥಿಕ ಮುಗ್ಗಟ್ಟನ್ನು ಸೃಷ್ಟಿಸಬಹುದು. ಇಂತಹುದೇ ಅನೇಕ ಅನಾಹುತಗಳನ್ನು ಸೃಷ್ಟಿಸಿ ಅಲ್ಲೋಲ ಕಲ್ಲೋಲ ಉಂಟು ಮಾಡಬಹುದು. ಉಗ್ರಗಾಮಿಗಳು ಅನೇಕ ಸರಕಾರಿ ರಹಸ್ಯಗಳನ್ನು ಕದ್ದು ಜನ ಸಾಮಾನ್ಯರ ಜೀವನವನ್ನು ವಿನಾಶದ ಅಂಚಿಗೆ ತರಬಹುದು.

ಕೇವಲ ಅಪರಾಧಿ ಕೃತ್ಯಗಳು ಮಾತ್ರ ನಮ್ಮ ವ್ಯವಸ್ಥೆಯನ್ನು ಅಲುಗಾಡಿಸುತ್ತವೆ ಎಂದಲ್ಲ. ಅನೇಕ ನೈಸರ್ಗಿಕ ದುರಂತಗಳು ಕೂಡ ನಾವು ನಂಬಿದ ವ್ಯವಸ್ಥೆಯನ್ನು ಮಟ್ಟ ಹಾಕಬಲ್ಲವು. ಉದಾಹರಣೆಗೆ ಸೂರ್ಯನ ಮೇಲೆ ಉಂಟಾಗುವ ಬಿರುಗಾಳಿಗಳು ಭೂಮಿಯತ್ತ ಅನೇಕ ಸ್ಥಿರ ವಿದ್ಯುತ್ತನ್ನು ಹೊಂದಿದ ಕಣಗಳನ್ನು ತೂರಿ ಬಿಡುತ್ತವೆ. ಸಾಮಾನ್ಯವಾಗಿ ಇವುಗಳ ತೀವ್ರತೆ ಅಷ್ಟು ಹೆಚ್ಚಾಗಿರುವುದಿಲ್ಲ. ಆದರೆ 1859ರಲ್ಲಿ ಉಂಟಾದ ಸೂರ್ಯನ ಬಿರುಗಾಳಿಯಂತಹ ತೀವ್ರತೆ ಈಗ ಉಂಟಾದರೆ, ತೀವ್ರ ಸಾಮಾಜಿಕ ಮತ್ತು ಆರ್ಥಿಕ ಹಾನಿ ಆಗಬಹುದು. ಈ ಬಿರುಗಾಳಿಗಳು ವಿಮಾನ, ವಾಹನ ಮತ್ತು ಮೋಬೈಲು ಫೋನ್ ಉಪಯೋಗಿಸುವ global positioning systems (GPS) ಅನ್ನು ಸ್ಥಗಿತಗೊಳಿಸಬಹುದು. ಇದರಿಂದ ಆಗುವ ಅನಾಹುತಗಳನ್ನು ನೀವೇ ಊಹಿಸಿ!

ಇದರರ್ಥ, ನಾವು ನಂಬಿರುವ, ಅವಲಂಬಿತಗೊಂಡ ಸಂಕೀರ್ಣ ವ್ಯವಸ್ಥೆಗಳಿಗೆ ತಿಲಾಂಜಲಿಯಿಡಬೇಕು ಎಂದಲ್ಲ. ಈ ವ್ಯವಸ್ಥೆಗಳು ನಿರಾತಂಕವಾಗಿ ಕೆಲಸ ಮಾಡುತ್ತಿರುವಾಗ ಅದ್ಭುತ ಪರಿಣಾಮಗಳನ್ನು ನೀಡುತ್ತವೆ. ಆದರೆ ಅವು ಅಸಫಲಗೊಂಡಾಗ ಉಂಟು ಮಾಡುವ ಪರಿಣಾಮಗಳು ಮಾತ್ರ ಅನರ್ಥಕಾರಿ. ಈ ಅನರ್ಥಗಳನ್ನು ತಪ್ಪಿಸಿ ಅವುಗಳ ಪರಿಣಾಮದಿಂದ ಜನಸಾಮಾನ್ಯರನ್ನು ರಕ್ಷಿಸಲು ವಿಶ್ವದಾದ್ಯಂತ ಸರಕಾರಗಳು ಕೈ ಜೋಡಿಸಿ ಕೆಲಸ ಮಾಡಬೇಕಾಗಿದೆ.

ಎಂದಿಗಿಂತಲೂ ಹೆಚ್ಚು ಪರಸ್ಪರ ಅವಲಂಬಿತಗೊಂಡ ಇಂದಿನ ದೇಶಗಳು ತಮ್ಮ ಭಿನ್ನಾಭಿಪ್ರಾಯ ಮರೆತು ವಿಶ್ವದ ನಾಗರಿಕರ ಹಿತಕ್ಕಾಗಿ ಈ ನಿಟ್ಟಿನತ್ತ ಕೈ ಜೋಡಿಸಬಲ್ಲವೇ? ದೊಡ್ಡ ದೊಡ್ಡ ಆಪತ್ತುಗಳು ಎದುರಾದಾಗ ಅವುಗಳ ಪರಿಹಾರ ಹುಡುಕುವದಕ್ಕಿಂತ ವಿಶ್ವದ ಚಿಕ್ಕ ದೊಡ್ಡ ದೇಶಗಳು ಈ ಸಂಕೀರ್ಣ ವ್ಯವಸ್ಥೆಗಳು ಅಸಫಲಗೊಳ್ಳಬಹುದಾದ ಮಾರ್ಗಗಳ ಬಗ್ಗೆ ಮುಂದಾಲೋಚಿಸಿ ಅವುಗಳಿಗೆ ತಕ್ಕ ಪರಿಹಾರಗಳನ್ನು ಕಂಡು ಹಿಡಿದಿಡಬೇಕಾಗಿದೆ. ಹೀಗೆ ಮಾಡುವುದರಿಂದ ಮಾತ್ರ ನಾವು ಈ ಜಗತ್ತನ್ನು ನಾವು ಮುಂಬರುವ ವಿನಾಶದಿಂದ ರಕ್ಷಿಸಬಹುದು.

ಉಲ್ಲೇಖಗಳು :
1. The Fragility of Complex Systems by Randolph Nesse
2. The Hidden Fragility of Complex Systems- Consequences of Change, Changing consequences by James P. Crutchfield

English summary
Wannacry visus, which has wrecked havoc across the world by spoiling the system, has exposed the vulnerability of human dependency on computer. Vasant Kulkarni from Singapore asks what happens if the hackers steal our savings from the banks? So, how to tackle Wannacry ransomware attack?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X