ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌದ್ರವಿರಲಿ, ಹಾಸ್ಯವಿರಲಿ 'ಕಕ್ಕಾಜಿ'ಗೆ ಸರಿಸಾಟಿ ಯಾರೂ ಇಲ್ಲ!

ನಾಸೀರುದ್ದೀನ್ ಶಾಹ್, ಸ್ಮಿತಾ ಪಾಟೀಲ್ ಮತ್ತು ಶಬಾನಾ ಅಜ್ಮಿ ಮುಂತಾದವರ ಜೊತೆಗೆ ಭಾರತೀಯ ಸಿನೆ ಜಗತ್ತಿನಲ್ಲಿ ಹೊಸ ಅಲೆಯ ಸಿನೆಮಾಗಳಿಗೆ ಒಂದು ಸ್ಥಾನಮಾನವನ್ನು ಕಲ್ಪಿಸಿದವರು ಓಂ ಪುರಿ. ಅಗಲಿದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

1988ರಲ್ಲಿ ದೂರದರ್ಶನದಲ್ಲಿ 'ತಮಸ್' ಧಾರಾವಾಹಿ ಬರತೊಡಗಿತು. ನಾನಾಗಲೇ ತಮಸ್‍ನ ಕನ್ನಡ ಅನುವಾದವನ್ನು ಕಸ್ತೂರಿಯ "ಪುಸ್ತಕ ವಿಭಾಗ"ದಲ್ಲಿ ಓದಿ ಮುಗಿಸಿದ್ದೆ. ಹೀಗಾಗಿ ನನಗೆ ಈ ಧಾರಾವಾಹಿಯನ್ನು ನೋಡಬೇಕೆಂದು ತೀವ್ರ ಆಸಕ್ತಿ. ಅಲ್ಲದೇ ಆಗ ತಾನೇ ಕಾಲೇಜಿನ ಮೆಟ್ಟಿಲೇರಿದ್ದ ನನಗೆ, ನಮ್ಮ ದೇಶದ ಅಂದಿನ ಸ್ಫೋಟಕ ರಾಜಕೀಯ ಪರಿಸ್ಥಿತಿಯಲ್ಲಿ ಇಂತಹ ವಸ್ತುನಿಷ್ಠ ಧಾರಾವಾಹಿಯನ್ನು ನೋಡಲೇಬೇಕೆಂಬ ತೀವ್ರ ತುಡಿತ. ಅಲ್ಲದೇ ಈ ಧಾರಾವಾಹಿಯ ಮುಖ್ಯ ಭೂಮಿಕೆಯೊಂದರಲ್ಲಿ ತಮ್ಮ 'ಅರ್ಧ ಸತ್ಯ' ಸಿನೆಮಾದಿಂದ ಮನೆ ಮಾತಾಗಿದ್ದ ಓಂ ಪುರಿ ಅಭಿನಯಿಸಿರುವದು ಈ ತುಡಿತಕ್ಕೆ ಕುಮ್ಮಕ್ಕು ಕೊಟ್ಟಿತ್ತು.

ಅಲ್ಲಿಯವರೆಗೆ ನಾನು ಓಂ ಪುರಿಯವರ ಹೆಸರು ಕೇಳಿದ್ದೆ ಮತ್ತು ಅವರ ಸಹಜ ಅಭಿನಯದ ಬಗ್ಗೆ ಓದಿದ್ದೆ. ಆದರೆ ಸ್ವತಃ ಅವರ ಅಭಿನಯದ ಸಿನೆಮಾವನ್ನು ನೋಡುವ ಅವಕಾಶ ದೊರಕಿರಲಿಲ್ಲ. ಅಂತಹ ಅವಕಾಶವನ್ನು 'ತಮಸ್' ಧಾರಾವಾಹಿ ಒದಗಿಸಿತ್ತು. ಖ್ಯಾತ ಸಿನೆಮಾ ನಿರ್ದೇಶಕ ಗೋವಿಂದ ನಿಹಲಾನಿಯವರ ಈ ಕಲಾತ್ಮಕ ಆದರೆ ವಸ್ತುನಿಷ್ಠ ಧಾರಾವಾಹಿ ನನ್ನ ಯುವ ಮನಸ್ಸಿಗೆ ವೈಚಾರಿಕ ನೆಲೆಗಟ್ಟನ್ನು ಒದಗಿಸುವ ಕೆಲಸ ಮಾಡಿದರೆ, ಈ ಧಾರಾವಾಹಿಯಲ್ಲಿ ತಮ್ಮ ತೀವ್ರ ಸಂವೇದನೆಯ ಅಭಿನಯದ ಮೂಲಕ ಅಚ್ಚಳಿಯದ ಬಿಂಬವನ್ನು ಮೂಡಿಸಿದವರು ಓಂ ಪುರಿ. ಅವರ ಪಾತ್ರವಾದ ನಥು ಚಮಾರ್‍ ನೋಡುಗರಲ್ಲಿ ಭಾರತ ವಿಭಜನೆಯಲ್ಲಿ ಸಿಲುಕಿಕೊಂಡು ನಲುಗಿದ ಅಸಂಖ್ಯ ಸಾಮಾನ್ಯ ಜನರ ಪ್ರತಿನಿಧಿಯಾಗಿ ನಿಂತು ಅನುಕಂಪ ಹುಟ್ಟಿಸಿದ್ದು ಮಾತ್ರವಲ್ಲದೇ, ಧಾರ್ಮಿಕ ತೀವ್ರವಾದದ ವಿಸ್ಫೋಟಕ ಪರಿಣಾಮದ ಪಳಿಯುಳಿಕೆಯಾಗಿ ನಿಂತಿತು.

ಸಮಾನಾಂತರ ಸಿನೆಮಾ ಮಾತ್ರವಲ್ಲದೇ, ಮುಖ್ಯ ಕಮರ್ಶಿಯಲ್ ಸಿನೆಮಾಗಳಲ್ಲಿ ಕೂಡ ಕೇವಲ ತಮ್ಮ ಅಭಿನಯದ ಮೂಲಕ ಜನರ ಮನಸ್ಸನ್ನು ಗೆದ್ದ ಕೆಲವೇ ನಟರಲ್ಲಿ ಓಂ ಪುರಿ ಪ್ರಮುಖರು. ನಾಸೀರುದ್ದೀನ್ ಶಾಹ್, ಸ್ಮಿತಾ ಪಾಟೀಲ್ ಮತ್ತು ಶಬಾನಾ ಅಜ್ಮಿ ಮುಂತಾದವರ ಜೊತೆಗೆ ಭಾರತೀಯ ಸಿನೆ ಜಗತ್ತಿನಲ್ಲಿ ಹೊಸ ಅಲೆಯ ಸಿನೆಮಾಗಳಿಗೆ ಒಂದು ಸ್ಥಾನಮಾನವನ್ನು ಕಲ್ಪಿಸಿದವರು ಓಂ ಪುರಿ.

ಭಾರತ್ ಏಕ್ ಖೋಜ್ ಧಾರಾವಾಹಿಯಲ್ಲಿ

ಭಾರತ್ ಏಕ್ ಖೋಜ್ ಧಾರಾವಾಹಿಯಲ್ಲಿ

ತಮಸ್ ನಂತರ ಅವರ ಅನೇಕ ಚಿತ್ರಗಳನ್ನು ಮತ್ತು ಧಾರಾವಾಹಿಗಳನ್ನು ನೋಡುವ ಅವಕಾಶ ನನಗೆ ದೊರೆಯಿತು. ಭಾರತ್ ಏಕ್ ಖೋಜ್ ಧಾರಾವಾಹಿಯಲ್ಲಿ ಅವರ ಗಹನವಾದ ಧ್ವನಿಯನ್ನು ನಿರೂಪಣೆಗಾಗಿ ಉಪಯೋಗಿಸಿದ್ದಲ್ಲದೇ, ಅವರ ಅಭಿನಯವನ್ನು ದುರ್ಯೋಧನ, ರಾವಣ, ಅಶೋಕ, ಅಲ್ಲಾವುದ್ದೀನ್ ಖಿಲ್ಜಿ, ಕೃಷ್ಣದೇವರಾಯ, ಔರಂಗಜೇಬ್ ಮುಂತಾದ ಐತಿಹಾಸಿಕ ಪಾತ್ರಗಳಿಗೆ ಪರಿಣಾಮಕಾರಿಯಾಗಿ ಉಪಯೋಗಿಸಿದವರು ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್. ನನ್ನ ನೆನಪಿನ ಪಟಲದಲ್ಲಿ ಶಿವಾಜಿ ಮಹಾರಾಜ (ನಾಸೀರುದ್ದೀನ್ ಶಾಹ್) ಮತ್ತು ಔರಂಗಜೇಬ್ (ಓಂ ಪುರಿ) ನಡುವಿನ ಸಂಭಾಷಣೆಯ ದೃಶ್ಯ ಅವಿಸ್ಮರಣೀಯವಾಗಿ ಉಳಿದಿದೆ.

ಪಾತ್ರ ಎಂಥದ್ದೇ ಇರಲಿ ಜೀವ ತುಂಬುತ್ತಿದ್ದರು

ಪಾತ್ರ ಎಂಥದ್ದೇ ಇರಲಿ ಜೀವ ತುಂಬುತ್ತಿದ್ದರು

ಗೋವಿಂದ್ ನಿಹಲಾನಿ ಅವರ "ದ್ರೋಹ ಕಾಲ" ಎಂಬ ಚಿತ್ರದಲ್ಲಿ, ತನ್ನ ಕುಟುಂಬದ ಸುರಕ್ಷೆ ಹಾಗೂ ತನ್ನ ದೇಶ ಮತ್ತು ಕರ್ತವ್ಯದ ಬಗ್ಗೆ ನಿಷ್ಠೆ, ಇವುಗಳ ಮಧ್ಯೆ ಸಿಲುಕಿ ನಲುಗುವ ಪ್ರಾಮಾಣಿಕ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಮರೆಯಲಾಗದ ಅಭಿನಯ ನೀಡಿದ ಓಂ ಪುರಿ, 'ಮಿರ್ಚ್ ಮಸಾಲಾ'ದ ಕರ್ತವ್ಯನಿಷ್ಠ ಕಾವಲುಗಾರ ಅಬು ಮಿಯಾ, ಘಾಯಲ್ ಚಿತ್ರದ ಎಸಿಪಿ, ಧೂಪ್ ಚಿತ್ರದಲ್ಲಿ ಸಾವಿಗೀಡಾದ ಕಾರ್ಗಿಲ್ ಯೋಧನ ತಂದೆ ಮುಂತಾದ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.

ಕನ್ನಡದಲ್ಲೂ ಮಿಂಚಿದ್ದ ಅಭಿನಯದೈತ್ಯ ನಟ

ಕನ್ನಡದಲ್ಲೂ ಮಿಂಚಿದ್ದ ಅಭಿನಯದೈತ್ಯ ನಟ

ಇತ್ತೀಚಿನ ಚಿತ್ರಗಳಾದ ಭಜರಂಗಿ ಭಾಯಿಜಾನ್‍, ಸಿಂಗ್ ಇಸ್ ಕಿಂಗ್, ಬಿಲ್ಲು, ಢೋಲ್, ಡಾನ್, ದಬ್ಬಂಗ್ ಮುಂತಾದವುಗಳಲ್ಲಿ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ದಂತಕಥೆಯಾದ ಅವರ 'ಅರ್ಧ ಸತ್ಯ' ಸಿನೆಮಾದ ಅನಂತ ವೇಲನಕರ್ ಮತ್ತು ಆಕ್ರೋಶ್‍ನ ಅಸ್ಪೃಶ್ಯ ರೈತ ಭೂಮಿಕೆಗಳನ್ನು ನೋಡಲು ನನಗೆ ಇದುವರೆಗೆ ಸಾಧ್ಯವಾಗಿಲ್ಲ. ಅವು ನನ್ನ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಇನ್ನೂ ಉಳಿದುಕೊಂಡಿವೆ. ಓಂ ಪುರಿ ಕನ್ನಡದ "ತಬ್ಬಲಿಯು ನೀನಾದೆ ಮಗನೆ" (ಎಸ್ ಎಲ್ ಭೈರಪ್ಪ ಅವರ ಕಾದಂಬರಿ ಆಧಾರಿತ) ಚಿತ್ರದಲ್ಲಿ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದಲ್ಲದೇ ಎಕೆ 47 ಚಿತ್ರದಲ್ಲಿ ಕೂಡ ನಟಿಸಿದ್ದರು.

ಕಕ್ಕಾಜಿ ಪಾತ್ರದಲ್ಲಿ ನಕ್ಕುನಗಿಸಿದ್ದ ಓಂಪುರಿ

ಕಕ್ಕಾಜಿ ಪಾತ್ರದಲ್ಲಿ ನಕ್ಕುನಗಿಸಿದ್ದ ಓಂಪುರಿ

ಅವರು ಕೇವಲ ಗಂಭೀರವಾದ ಪಾತ್ರಗಳಲ್ಲಿ ಮಾತ್ರವಲ್ಲದೇ, ತಮ್ಮ ಹಾಸ್ಯ ನಟನೆಯ ಪಾತ್ರಗಳಲ್ಲಿ ಕೂಡ ಮಿಂಚಿದವರು. 'ಕಕ್ಕಾಜಿ ಕಹಿನ್' ಧಾರಾವಾಹಿಯಲ್ಲಿ ಕಕ್ಕಾಜಿ ಎಂಬ ಪುಢಾರಿಯ ಪಾತ್ರದಲ್ಲಿ ಜನರನ್ನು ನಗೆಯ ಹೊಳೆಯಲ್ಲಿ ಮೀಯಿಸಿದರು. ಅಂದಿನ ಕಾಲದ ಹಿಟ್ ಸಿರೀಯಲ್ ಆದ "ಮಿ. ಯೋಗಿ"ಯಲ್ಲಿ ಅವರ ನಿರೂಪಕ ಪಾತ್ರ ಎಂದೆಂದಿಗೂ ಮರಯಲಾಗದ ಪಾತ್ರ. 'ಚಾಚಿ 420'ನಲ್ಲಿ ಬನವಾರಿಯ ಪಾತ್ರ, 'ಜಾನೆ ಭೀ ದೊ ಯಾರೋ' ಚಿತ್ರದಲ್ಲಿನ ಕಪ್ಪು ಕನ್ನಡಕಧಾರಿ ಕುಡುಕ ಅಹುಜಾನ ಪಾತ್ರ ಜನರ ಮುಖದ ಮೇಲೆ ನಗುವಿನ ಮಿಂಚನ್ನು ಮೂಡಿಸುತ್ತವೆ.

ಹಾಲಿವುಡ್ ಚಿತ್ರಗಳಲ್ಲೂ ಮಿಂಚಿದ ಪ್ರತಿಭೆ

ಹಾಲಿವುಡ್ ಚಿತ್ರಗಳಲ್ಲೂ ಮಿಂಚಿದ ಪ್ರತಿಭೆ

ತಮ್ಮ ಸಹಜ ನಟನೆ ಮತ್ತು ತೀವ್ರ ಭಾವಾಭಿನಯದ ಮೂಲಕ ಭಾರತೀಯ ಚಿತ್ರರಂಗ ಮಾತ್ರವಲ್ಲ ಹಾಲಿವುಡ್ ಮತ್ತು ಬ್ರಿಟಿಷ್ ಸಿನೆಮಾಗಳಲ್ಲಿ ಕೂಡಾ ಹೆಸರು ಪಡೆದರು. ಪ್ರಸಿದ್ಧ ಚಲನಚಿತ್ರ ಗಾಂಧಿ ಚಿತ್ರದಲ್ಲಿ ಪುಟ್ಟದಾದ ನಹರ್ ಎಂಬ ಪಾತ್ರದ ಮೂಲಕ ಇಂಗ್ಲಿಷ್ ಸಿನೆಮಾದಲ್ಲಿ ಕಾಲಿಟ್ಟ ಓಂ ಪುರಿ, ಮುಂದೆ ಸಿಟಿ ಆಫ್ ಜಾಯ್, ವೂಲ್ಫ್, ಚಾರ್ಲಿ ವಿಲ್ಸನ್ಸ್ ವಾರ್, ಈಸ್ಟ್ ಇಸ್ ಈಸ್ಟ್, ಮೈ ಸನ್ ಫ್ಯಾನಾಟಿಕ್, ಹಂಡ್ರೆಡ್ ಫುಟ್ ಜರ್ನಿ ಇತ್ಯಾದಿ ಪ್ರಮುಖ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದರು.

ಗಾಡ್ ಫಾದರ್ ಇಲ್ಲದೆ ಬೆಳೆದ ಓಂಪುರಿ

ಗಾಡ್ ಫಾದರ್ ಇಲ್ಲದೆ ಬೆಳೆದ ಓಂಪುರಿ

ಓಂ ಪುರಿ ಯಾವುದೇ ದೊಡ್ಡ ಗಾಡ್ ಫಾದರ್ ಮೂಲಕವಲ್ಲ, ಕೇವಲ ಪ್ರತಿಭೆ ಮತ್ತು ಕಠಿಣ ಪರಿಶ್ರಮಗಳ ಮೂಲಕ ಉತ್ತುಂಗವನ್ನೇರಿದ ವ್ಯಕ್ತಿ. ತೀವ್ರ ಬಡತನದಿಂದ ಭಾರತದ ವಿಖ್ಯಾತ ಕಲಾವಿದನಾಗಿ ಬೆಳೆದ ಅವರ ಬದುಕು ಅನೇಕ ಸಾಮಾನ್ಯ ಜನರಿಗೆ ಒಂದು ಪ್ರೇರಣೆ. ಅದೆಷ್ಟೇ ಚಿಕ್ಕ ಪಾತ್ರವಾಗಲಿ, ತಮ್ಮ ಅಭಿನಯದ ಮೂಲಕ ತಮ್ಮ ಛಾಪು ಮೂಡಿಸುವ ಈ ಕಲಾವಿದ ಇತ್ತೀಚೆಗೆ ನಮ್ಮನ್ನಗಲಿದರೂ ಕಲಾಪ್ರೇಮಿಗಳ ಮನದಲ್ಲಿ ಎಂದೆಂದಿಗೂ ಉಳಿಯುವ ಅದ್ಭುತ ನಟ.

ಕಲಾತ್ಮಕ ಚಿತ್ರಗಳಿಗೆ ಮೊದಲ ಆದ್ಯತೆ

ಕಲಾತ್ಮಕ ಚಿತ್ರಗಳಿಗೆ ಮೊದಲ ಆದ್ಯತೆ

ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳೆರಡರಲ್ಲೂ ಯಶಸ್ಸು ಪಡೆದ ಈ ಉನ್ನತ ಕಲಾವಿದ "ನನ್ನ ಮೊದಲ ಆದ್ಯತೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಲಾತ್ಮಕ ಚಿತ್ರಗಳಿಗೆ. ಏಕೆಂದರೆ ಈ ಚಿತ್ರಗಳು ನನಗೆ ಒಬ್ಬ ಕಲಾವಿದನಿಗಿರಬೇಕಾದ ಮಾನ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ತಂದು ಕೊಟ್ಟವು. ಆದರೆ ವಾಣಿಜ್ಯ ಚಿತ್ರಗಳು ನನಗೆ ಸುಖವಾಗಿ ಬಾಳಲು ಅನುವು ಮಾಡಿಕೊಟ್ಟವು" ಎಂದು ಹೇಳಿ ಸಾಮಾಜಿಕ ಪ್ರಜ್ಞೆ ಮೂಡಿಸುವತ್ತ ಕಲಾವಿದರಿಗಿರಬೇಕಾದ ಕಳಕಳಿಯನ್ನು ಹೊರ ಹೊಮ್ಮಿಸಿೇದ್ದರು. ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಇನ್ನೂ ಎಂತಹ ಅದ್ಭುತ ಪಾತ್ರಗಳನ್ನು ನೀಡುತ್ತಿದ್ದರೋ? ಆದರೇನು ಮಾಡುವುದು? ಕಾಲನಿಗೆ ಕೂಡ ಶ್ರೇಷ್ಠ ಜನರೇ ಬೇಕಾಗುತ್ತಾರಲ್ಲವೇ?

English summary
Vasant Kulkarni pays rich tribute to Om Puri, undoubtedly one of the finest actors India has seen, who breathed his last in Mumbai due to heart attack. Vasant remembers the serials, movies and the impact they made on the viewers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X