ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತಿ ಉಳಿಸಿ ಬೆಳೆಸಲು ಜಲ್ಲಿಕಟ್ಟಿನಂಥ ಕ್ರೀಡೆ ಬೇಕೇಬೇಕು

ಈ ಮೊದಲು ಜಲ್ಲಿಕಟ್ಟಿನ ಬಗ್ಗೆ ನನಗೆ ಅಷ್ಟೇನೂ ತಿಳಿದಿರಲಿಲ್ಲ. ಅದು ತಮಿಳುನಾಡಿನ ಕೆಲ ಭಾಗಗಳಲ್ಲಿ ನಡೆಯುವ ಸುಗ್ಗಿ ಹಬ್ಬ ಎಂದು ಮಾತ್ರ ಗೊತ್ತಿತ್ತು. ಅದರ ಬಗ್ಗೆ ವಿಶೇಷವಾಗಿ ತಿಳಿದು ಬಂದುದು ಈ ವಿವಾದ ತಾರಕಕ್ಕೇರಿದಾಗಲೇ.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಕಳೆದ ವಾರ ಪೂರ್ತಿ ನ್ಯೂಸ್ ಚಾನೆಲ್‍ಗಳಲ್ಲಿ ಜಲ್ಲಿಕಟ್ಟು ಕ್ರೀಡೆಯದೇ ಮಾತು. ನಮ್ಮ ಆಫೀಸಿನ ಭಾರತೀಯರ ಅದರಲ್ಲೂ ತಮಿಳು ಭಾಷಿಕರ ಬಾಯಿಯಲ್ಲಿ ಕೂಡ ಇದೇ ಚರ್ಚೆ. ಕೊನೆಗೂ ತಮಿಳು ಜನರ ಅಭೂತ ಪೂರ್ವ ಚಳವಳಿಗೆ ಮಣಿದು ಜಲ್ಲಿಕಟ್ಟು ಕ್ರೀಡೆಯ ಪರವಾಗಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿತು.

ಈ ಮೊದಲು ಜಲ್ಲಿಕಟ್ಟಿನ ಬಗ್ಗೆ ನನಗೆ ಅಷ್ಟೇನೂ ತಿಳಿದಿರಲಿಲ್ಲ. ಅದು ತಮಿಳುನಾಡಿನ ಕೆಲ ಭಾಗಗಳಲ್ಲಿ ನಡೆಯುವ ಸುಗ್ಗಿ ಹಬ್ಬ ಎಂದು ಮಾತ್ರ ಗೊತ್ತಿತ್ತು. ಅದರ ಬಗ್ಗೆ ವಿಶೇಷವಾಗಿ ತಿಳಿದು ಬಂದುದು ಈ ವಿವಾದ ತಾರಕಕ್ಕೇರಿದಾಗಲೇ. ಆದೂ ನನ್ನ ಸಹೋದ್ಯೋಗಿಯಾದ ತಮಿಳನೊಬ್ಬ ಭಾವಾವೇಶದಿಂದ ಅದು ಹೇಗೆ ತಮಿಳರ ಪರಂಪರೆಯ ಪ್ರತೀಕವಾದ ಈ ಹಬ್ಬವನ್ನು ಕೆಲವು ವಿದೇಶಿ ಸಂಸ್ಥೆಗಳು ತಿರುಚಿ ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂದೂ ಮತ್ತು ಅದು ಹೇಗೆ ಈ ಹಬ್ಬ ಭಾರತದ ದೇಶಿ ತಳಿಯ ಗೂಳಿಗಳ ಮತ್ತು ಗೋವುಗಳ ಉಳಿಕೆಗೆ ಸಹಾಯವಾಗುತ್ತದೆ ಎಂದೂ ವಿವರಿಸಿದಾಗ. [Oneindia Explainer : ಜಲ್ಲಿಕಟ್ಟು ಏನು, ಎತ್ತ? ಸ್ವಾರಸ್ಯಕರ ಸಂಗತಿ!]

ಆ ಸಹೋದ್ಯೋಗಿ ತಮಿಳುನಾಡಿನ ಗ್ರಾಮಾಂತರ ಪ್ರದೇಶದಿಂದ ಬಂದವನು. ಅವನ ಪ್ರಕಾರ, ದೇಶಿ ತಳಿಗಳಿಗೆ ಈಗ ಘನಘೋರ ಸಂಕಟ ಒದಗಿದ್ದು, ಹೀಗೆ ಜಲ್ಲಿಕಟ್ಟುದಂತಹ ಕ್ರೀಡೆಗಳನ್ನು ನಿಲ್ಲಿಸಿದರೆ ದೇಶಿ ತಳಿಗಳನ್ನು ಸಾಕಲು ಗ್ರಾಮಾಂತರ ಪ್ರದೇಶದ ಜನರಿಗೆ ಯಾವ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳು ಇಲ್ಲದಾಗಿ ಅವುಗಳು ನಶಿಸಿಹೋಗುತ್ತವೆ. ಇದರಿಂದ ವಿದೇಶಿ ತಳಿಗಳ ಬೇಡಿಕೆ ಏರಿ, ಅದರ ಮೂಲಕ ವಿದೇಶಿ ಕಂಪನಿಗಳಿಗೆ ಅಪಾರ ಲಾಭ ಎಂದು ಅವನ ಸಂಕಟ. [ಇನ್ಶಾ ಅಲ್ಲಾಹ್! ಜಲ್ಲಿಕಟ್ಟು ಹಿಂಸಾಚಾರದ ಹಿಂದಿನ ಅಸಲಿಯತ್ತು]

ಪ್ರಾದೇಶಿಕ ಸಂಸ್ಕೃತಿಯ ಅವನತಿ

ಪ್ರಾದೇಶಿಕ ಸಂಸ್ಕೃತಿಯ ಅವನತಿ

ದೇಶಿ ತಳಿಯ ಗೋವುಗಳು ಸರಾಸರಿ ಕಡಿಮೆ ಹಾಲು ನೀಡುತ್ತಿದ್ದರೂ ಈ ಹಾಲು ವಿದೇಶಿ ತಳಿಗಳ ಹಾಲಿಗಿಂತ ಆರೋಗ್ಯಕ್ಕೆ ಎಷ್ಟೋ ಉತ್ತಮ ಎಂಬುದು ಅವನ ಅಭಿಪ್ರಾಯ. ಅಲ್ಲದೇ, ಇಂತಹ ಗ್ರಾಮಾಂತರ ಕ್ರೀಡೆಗಳು ಪ್ರಾದೇಶಿಕ ಸಂಸ್ಕೃತಿಯ ಪ್ರತೀಕವಾಗಿದ್ದು, ಅವುಗಳ ಮೇಲಿನ ಪ್ರಹಾರದಿಂದ ಪ್ರಾದೇಶಿಕ ಸಂಸ್ಕೃತಿ ಕೂಡ ಅವನತಿಗೊಳ್ಳುತ್ತದೆ ಎಂಬುದು ಅವನ ಅಳಲು. ಈ ಸಹೋದ್ಯೋಗಿಯ ತನ್ನ ಪ್ರದೇಶ, ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಕಳಕಳಿ ನನಗೆ ಮೆಚ್ಚುಗೆಯಾಯಿತು.

ಕರಾವಳಿಯ ಪ್ರಸಿದ್ಧ ಕ್ರೀಡೆ ಕಂಬಳ

ಕರಾವಳಿಯ ಪ್ರಸಿದ್ಧ ಕ್ರೀಡೆ ಕಂಬಳ

ನಮ್ಮ ರಾಜ್ಯದಲ್ಲೂ ಕೂಡ ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆಯಂದು ನಡೆಯುವ ಹೋರಿಗಳ ಓಟದ ಸ್ಪರ್ಧೆ, ಕರಾವಳಿ ಪ್ರದೇಶದಲ್ಲಿ ನಡೆಯುವ 'ಕಂಬಳ' ಎಂದು ಪ್ರಸಿದ್ಧವಾದ ಕೋಣಗಳ ಓಟ ಇತ್ಯಾದಿಗಳಿಲ್ಲವೇ? ಈ ಕ್ರೀಡೆಗಳು ಕೂಡ ತಲೆತಲಾಂತರದಿಂದ ನಡೆದು ಬಂದಿಲ್ಲವೇ? ಅದು ಹೇಗೆ ಈ ಸ್ಪರ್ಧೆಗಳಿಂದ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂಬ ಪ್ರಶ್ನೆ ತಲೆದೋರಿತು. ಆದರೆ ಈಗಿನ ದಿನಗಳಲ್ಲಿ ಕೆಲವರು ಇಂತಹ ಆಟಗಳಲ್ಲಿ ಹೆಚ್ಚು ಮನರಂಜನೆ ಉಂಟು ಮಾಡಲು ಕೆಲವರು ಪ್ರಾಣಿಗಳಿಗೆ ಮದ್ಯ ಕೂಡ ಕುಡಿಸುತ್ತಾರೆ ಅಥವಾ ಮಾದಕ ದ್ರವ್ಯ ತಿನಿಸುತ್ತಾರೆ ಮತ್ತು ಅದರಿಂದ ಪ್ರಾಣಿಗಳಿಗೆ ಮಾತ್ರವಲ್ಲ ಜನರಿಗೆ ಕೂಡ ಹಾನಿ ಕಟ್ಟಿಟ್ಟದ್ದು ಎಂಬ ವಾದವೊಂದಿದೆ. [ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

ಬುಲ್ ಫೈಟ್ ನೋಡಲು ಲಕ್ಷಾಂತರ ಜನ ಹೋಗುವುದಿಲ್ಲವೇ?

ಬುಲ್ ಫೈಟ್ ನೋಡಲು ಲಕ್ಷಾಂತರ ಜನ ಹೋಗುವುದಿಲ್ಲವೇ?

ಆದರೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಇಂತಹ ಆಟಗಳನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಿದರೆ ಈ ರೀತಿಯ ಕೆಡುಕುಗಳನ್ನು ನಿಯಂತ್ರಿಸಿ ಶಿಸ್ತಿನಿಂದ ನಡೆಸಬಹುದಲ್ಲವೇ? ಅಲ್ಲದೇ ಇಂತಹ ಆಟಗಳಿಗೆ ಸರಿಯಾದ ಪ್ರಚಾರ ಕೊಟ್ಟರೆ ಅವು ನಮ್ಮ ದೇಶಕ್ಕೆ ಸಾಕಷ್ಟು ಜನ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸಬಹುದಲ್ಲವೇ? ಸ್ಪೇನ್ ಮತ್ತು ಸ್ಪ್ಯಾನಿಷ್ ಸಂಸ್ಕೃತಿ ಇರುವ ದೇಶಗಳಲ್ಲಿ ನಡೆಯುವ ಬುಲ್ ಫೈಟ್ ನೋಡಲು ಲಕ್ಷಾಂತರ ಜನ ಹೋಗುವುದಿಲ್ಲವೇ?

ಬುಲ್ ಫೈಟ್ ಗೆ ಹೋಲಿಸಿದರೆ ಜಲ್ಲಿಕಟ್ಟು ಶಾಂತಿಯುತ

ಬುಲ್ ಫೈಟ್ ಗೆ ಹೋಲಿಸಿದರೆ ಜಲ್ಲಿಕಟ್ಟು ಶಾಂತಿಯುತ

ಸ್ಪೇನಿನ ಬುಲ್ ಫೈಟ್‍ನೊಂದಿಗೆ ಹೋಲಿಸಿದರೆ ಈ ಆಟ ಅತ್ಯಂತ ಶಾಂತಿಪ್ರಿಯ. ಅಲ್ಲಿಯಂತೆ ಈ ಆಟದಲ್ಲಿ ಹೋರಿಗಳಿಗೆ ಗಾಯ ಮಾಡುವುದಿಲ್ಲ. ಅಲ್ಲದೇ ಸಾಂಪ್ರದಾಯಿಕವಾಗಿ ಈ ಹೋರಿಗಳನ್ನು ಭಾರತದ ಗ್ರಾಮೀಣ ಜನರು ಹಿಂದೆ ಅತ್ಯಂತ ಪ್ರೀತಿಯಿಂದ ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ನಾನು ನನ್ನ ಬಾಲ್ಯದಲ್ಲಿ ಗ್ರಾಮೀಣ ಜನತೆ ತಮ್ಮ ಎತ್ತು, ಹೋರಿಗಳ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಐಹಿಕ ಸುಖವನ್ನು ಅರಸುವ ಈ ಆಧುನಿಕತೆಯ ಓಟದಲ್ಲಿ ಈಗ ನಮ್ಮ ಮೃದು ಭಾವನೆಗಳು ಹಿಂದೆ ಬಿದ್ದು, ಆರ್ಥಿಕ ಉದ್ದೇಶ ಮಾತ್ರ ಹೆಚ್ಚಿನ ಬಲ ಪಡೆದುಕೊಂಡಿರಬಹುದು. ಆದರೂ ಈಗಲೂ ಅನೇಕರು ತಮ್ಮ ಮೂಲ ಭಾವನೆಗಳಿಗೆ ಬದ್ಧರಾಗಿದ್ದಾರೆ ಎಂಬುದು ಈ ಹೋರಾಟದಲ್ಲಿ ತಿಳಿದು ಬಂದ ಅಂಶ.

ಲಾಭಾಂಶಕ್ಕೆ ಮಾತ್ರ ಮಹತ್ವ ಏತಕ್ಕೆ ಕೊಡಬೇಕು?

ಲಾಭಾಂಶಕ್ಕೆ ಮಾತ್ರ ಮಹತ್ವ ಏತಕ್ಕೆ ಕೊಡಬೇಕು?

ದೇಶಿ ತಳಿಗಳ ಗೋವುಗಳಲ್ಲಿ ನಿಜವಾಗಿಯೂ ಹೆಚ್ಚಿನ ಪೋಷಕಾಂಶಗಳಿದ್ದರೆ ಅದರಿಂದ ನಮಗೆ ತಾನೇ ಲಾಭ? ಈ ವಿಷಯದಲ್ಲಿ ಸರಕಾರ ಸಂಶೋಧನೆ ನಡೆಸಲು ಏಕೆ ಬೆಂಬಲ ನೀಡಬಾರದು? ಯಾವಾಗಲೂ ಮಾಸ್ ಪ್ರೊಡಕ್ಷನ್ ಎಂಬ ವಾಣಿಜ್ಯ ಅಂಶಕ್ಕೆ ನಾವೇಕೆ ಮಣಿಯಬೇಕು? ಉತ್ತಮ ಗುಣಮಟ್ಟದ ಹಾಗೂ ಆರೋಗ್ಯಕರ ಹಾಲು ಮತ್ತು ಹಾಲಿನ ಪದಾರ್ಥಗಳಿಗೆ ನಾವೇಕೆ ಹೆಚ್ಚಿನ ಬೆಲೆ ಕೊಡಬಾರದು? ಅಲ್ಲದೇ ಯಾವಾಗಲೂ ಲಾಭಾಂಶಕ್ಕೆ ಮಾತ್ರ ಮಹತ್ವ ಏತಕ್ಕೆ ಕೊಡಬೇಕು?

ಜೈವಿಕ ವೈವಿಧ್ಯ ಕಾಪಾಡಿಕೊಳ್ಳಲು ಹೋರಾಟ

ಜೈವಿಕ ವೈವಿಧ್ಯ ಕಾಪಾಡಿಕೊಳ್ಳಲು ಹೋರಾಟ

ಯುರೋಪಿನ ದೇಶಗಳು ಅತಿ ಹೆಚ್ಚು ಬೆಂಬಲ ಕೊಟ್ಟು ನಷ್ಟದಲ್ಲಿರುವ ತಮ್ಮ ದೇಶದ ವ್ಯವಸಾಯ ಮತ್ತು ಹೈನುಗಾರಿಕೆಯನ್ನು ಕಾಪಾಡುತ್ತಿಲ್ಲವೇ? ಈ ವಿಷಯದಲ್ಲಿ ನಾವೇಕೆ ಹಿಂದೆ ಬೀಳಬೇಕು? ಎಲ್ಲಕ್ಕಿಂತ ಮುಖ್ಯವಾಗಿ ನಾನು ನಮ್ಮ ದೇಶಿ ತಳಿಗಳನ್ನು, ಜೈವಿಕ ವೈವಿಧ್ಯವನ್ನು ಕಾಪಾಡಿಕೊಳ್ಳಲು ಹೋರಾಡಬೇಕು, ಅವನ್ನು ರಕ್ಷಿಸಬೇಕು ಎಂಬ ಅಭಿಪ್ರಾಯಕ್ಕೆ ಜೋತು ಬಿದ್ದವನು.

ಜಲ್ಲಿಕಟ್ಟು ಹೋರಾಟ ವಿಚಾರಧಾರೆಯ ತಾಕಲಾಟ

ಜಲ್ಲಿಕಟ್ಟು ಹೋರಾಟ ವಿಚಾರಧಾರೆಯ ತಾಕಲಾಟ

ಒಟ್ಟಿನಲ್ಲಿ ಈ ಹೋರಾಟ ಇಂದಿನ ಅಧುನಿಕ ವಿಚಾರಧಾರೆಯ ಮತ್ತು ನಮ್ಮ ಸಂಸ್ಕೃತಿ, ಪರಂಪರೆಗಳ ನಡುವೆ ನಡೆದಿರುವ ತಾಕಲಾಟದ ಒಂದು ಮುಖ ಎಂದೆನಿಸಿತು. ನಮ್ಮ ದೇಶದ ಎಲ್ಲ ಪರಂಪರೆಗಳ ಮೇಲೆ ಕೊಡಲಿಯೇಟು ಕೊಡುವುದರಿಂದ ಯಾರಿಗೋ ಎಲ್ಲೋ ಲಾಭವಾಗುತ್ತಿದೆ ಎಂದೆನಿಸಿತು. ಅದಕ್ಕಾಗಿ ಈ ರೀತಿಯ ವಿವಾದಗಳ ಸೃಷ್ಟಿಯಾಗುತ್ತಿದೆ ಎಂದು ನನ್ನ ಭಾವನೆ. ಲಾಭಕೋರತನವೇ ಮುಖ್ಯವಾಗಿರುವ ಇಂದಿನ ದಿನಗಳಲ್ಲಿ ಇದು ಒಂದು ಸಾಧ್ಯತೆ ಎನಿಸುತ್ತದೆ.

ಜಲ್ಲಿಕಟ್ಟು ಚಳವಳಿ ಪ್ರಶಂಸನೀಯ ಹೆಜ್ಜೆ

ಜಲ್ಲಿಕಟ್ಟು ಚಳವಳಿ ಪ್ರಶಂಸನೀಯ ಹೆಜ್ಜೆ

ಮನುಷ್ಯ ಇತಿಹಾಸ, ಸಮಾಜ ಮತ್ತು ಸಂಸ್ಕೃತಿಗಳ ಮಗು ಎಂದು ಹೇಳಲಾಗುತ್ತದೆ. ಈ ಮೂರು ಅಂಶಗಳು ಪರಂಪರೆಯ ವ್ಯಾಖ್ಯಾನ ಮಾಡುತ್ತವೆ. ನಾವೆಷ್ಟೇ ಆಧುನಿಕತೆಯ ಅಲೆಗಳನ್ನು ಅನುಸರಿಸಿದರೂ, ಈ ಮೂರು ಅಂಶಗಳನ್ನು ಬಿಡಲಾಗುತ್ತದೆಯೇ? ನಮ್ಮ ಇತಿಹಾಸದಿಂದ, ಸಮಾಜದ ಮೂಲಭೂತ ಅಂಗಗಳಿಂದ ಮತ್ತು ಸಂಸ್ಕೃತಿಯ ವಾಹಿನಿಯಿಂದ ದೂರ ಸರಿದರೆ ನಮ್ಮನ್ನು ಭಾರತೀಯರು ಎಂದು ಯಾವ ಆಧಾರದಿಂದ ಗುರುತಿಸಬಹುದು? ಆದುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕೇವಲ ಸರ್ಕಾರದತ್ತ ಮುಖ ಮಾಡುವುದನ್ನು ನಿಲ್ಲಿಸಿ ಜನ ಸಾಮಾನ್ಯರಾದ ನಾವು ಹೋರಾಟ ಮಾಡಲು ಮುಂದುವರೆಯಬೇಕು. ಜಲ್ಲಿಕಟ್ಟು ಚಳವಳಿ ಈ ದಿಶೆಯಲ್ಲಿ ನಡೆದ ಪ್ರಶಂಸನೀಯ ಹೆಜ್ಜೆ.

English summary
Jallikattu is not just a game, it is mirror of our rich tradition, culture and our society. Vasant Kulkarni from Singapore says, we should support these sports like Jallikattu, Kambala etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X