ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದುಡಿದ ಮನ ಅರಳಿಸುವ ಬೆಳಗಾವಿಯ ಕಮಲ ಬಸದಿ

ಅದ್ಭುತ ಶಿಲ್ಪಕಲಾ ಸೌಂದರ್ಯವನ್ನು ಹೊಂದಿರುವ ಬೆಳಗಾವಿಯ ಕಿಲ್ಲಾದಲ್ಲಿರುವ ಜೈನ ಕಮಲ ಬಸದಿ ಅತ್ಯಂತ ಕಡೆಗಣನೆಗೊಳಗಾಗಿರುವ ರಾಜ್ಯದ ಸಂಪತ್ತು. ಗೊತ್ತಿದ್ದೂ ಗೊತ್ತಿಲ್ಲದಂತಿರುವ ಈ ಜೈನ ಬಸದಿಯ ಸೌಂದರವನ್ನು ವಸಂತ ಕುಲಕರ್ಣಿಯವರು ವರ್ಣಿಸಿದ್ದಾರೆ.

By ವಸಂತ ಕುಲಕರ್ಣಿ
|
Google Oneindia Kannada News

ನಾನು ಬೆಳಗಾವಿಯ ಕಮಲ ಬಸದಿಯ ಹೆಸರು ಕೇಳಿದ್ದು ಬೆಳಗಾವಿಯನ್ನು ಬಿಟ್ಟ ಮೇಲೆಯೇ. ಬೆಳಗಾವಿಯ ಈ ಪ್ರಸಿದ್ಧ ಐತಿಹಾಸಕ ಸ್ಮಾರಕ ಕರ್ನಾಟಕದ ಇತರ ಸ್ಮಾರಕಗಳಷ್ಟು ಪ್ರಸಿದ್ಧವಲ್ಲ. ಆದರೂ ನನ್ನೂರಿನಲ್ಲಿಯೇ ಇರುವ ಈ ಸ್ಮಾರಕವನ್ನು ನೊಡಿಯೇ ತೀರಬೇಕೆ೦ಬ ಪ್ರಬಲ ಇಚ್ಛೆಯೊಡನೆ ಬ೦ದ ನಾನು ಮೊಟ್ಟ ಮೊದಲು ಮಾಡಿದ ಕೆಲಸವೇ ಅದು.

ಬೆಳಗಾವಿಯ ಐತಿಹಾಸಿಕ ಕೋಟೆ(ಕಿಲ್ಲಾ)ಯಲ್ಲಿರುವ ಈ ಸ್ಮಾರಕ ಹಿ೦ದಿನ ಕಾಲದ ಇತರ ಪ್ರಸಿದ್ಧ ಸ್ಮಾರಕಗಳಿಗೆ ಹೋಲಿಸಿದರೆ ಚಿಕ್ಕದು. ಆದರೆ ಹೋಗಿ ನೋಡಿದಾಗ ಸುಮಾರು ಎ೦ಟು ನೂರು ವರ್ಷಗಳಿಗೂ ಹಿ೦ದಿನ ಈ ಜೈನ ದೇವಾಲಯ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಗಾದೆಗೆ ಉತ್ತಮ ಉದಾಹರಣೆ ಎನಿಸಿತು.

ಇಪ್ಪತ್ತೆರಡನೇಯ ಜೈನ ತೀರ್ಥ೦ಕರನಾದ ಶ್ರೀ ನೇಮಿನಾಥನ ದೇವಾಲಯವಾದ ಈ ಬಸದಿಗೆ 'ಕಮಲ ಬಸದಿ' ಎ೦ಬ ಹೆಸರು ಬ೦ದಿದ್ದು ದೇವಸ್ಥಾನದ ರ೦ಗಮ೦ಟಪದ ಮೇಲ್ಛಾವಣಿಯಲ್ಲಿ ಕೆತ್ತಲ್ಪಟ್ಟ ಸು೦ದರ ಕಮಲದ ಹೂವಿನಿಂದ. ಒಂದು ಅಖಂಡ ಕಲ್ಲಿನಲ್ಲಿ ಸಮರೂಪವಾಗಿ ಮೂಡಿ ಬಂದ ಈ ಶಿಲ್ಪ ಬೆರಗುಗೊಳಿಸುವಂಥಾದ್ದು. ಅದು ಹೇಗೆ ಅಷ್ಟೊಂದು ಕರಾರುವಾಕ್ಕಾಗಿ ಈ ಶಿಲ್ಪವನ್ನು ಕಟೆದಿದ್ದಾರೆ ಮತ್ತು ಎಲ್ಲಿಯೂ ಊನವಾಗದಂತೆ ಮೇಲ್ಛಾವಣಿಗೆ ಏರಿಸಿದ್ದಾರೆ ಎಂಬ ವಿಸ್ಮಯ ಉಂಟಾಗುತ್ತದೆ.

ಚಾಲುಕ್ಯ ಶೈಲಿಯ ಈ ಬಸದಿಯನ್ನು ರಟ್ಟ ರಾಜವಂಶದ ನಾಲ್ಕನೆಯ ಕಾರ್ತವೀರ್ಯನ ಕಾಲದಲ್ಲಿ ಆತನ ಮಂತ್ರಿಯಾದ ಬಿಚಿರಾಜನು ಕಟ್ಟಿಸಿದನು. ರಟ್ಟರು ರಾಷ್ಟ್ರಕೂಟರ ಅಚ್ಚ ಕನ್ನಡ ಸಾಮಂತ ರಾಜರು. ಮೊದಲು ಸುಗಂಧವರ್ತಿ (ಈಗಿನ ಸವದತ್ತಿ) ಮತ್ತು ನಂತರ ವೇಣುಗ್ರಾಮ(ಬೆಳಗಾವಿ)ದಿಂದ ರಾಜ್ಯವಾಳಿದರು. ಅವರ ಕಾಲದಲ್ಲಿ ಪಾರಸಗಡ ಮತ್ತು ಬೆಳಗಾವಿಯ ಕೋಟೆಗಳು ಕಟ್ಟಲ್ಪಟ್ಟವು. ಕಮಲ ಬಸದಿಯ ಕಂಬಗಳು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಅದೆಷ್ಟು ನುಣುಪಾಗಿವೆಯೆಂದರೆ, ಅವುಗಳಲ್ಲಿ ನಮ್ಮ ಪ್ರತಿಬಿಂಬ ಕಾಣಬಹುದು.

ಸುಂದರವಾಗಿ ಕಲ್ಲಿನಲ್ಲಿ ಮೂಡಿಸಿದ ಚಿತ್ತಾರ

ಸುಂದರವಾಗಿ ಕಲ್ಲಿನಲ್ಲಿ ಮೂಡಿಸಿದ ಚಿತ್ತಾರ

ಬಸದಿಯ ಪ್ರಾಕಾರದಿಂದ ಗರ್ಭಗುಡಿಯವರೆಗೆ ಒಟ್ಟು ನಾಲ್ಕು ಬಾಗಿಲುಗಳಿದ್ದು, ಪ್ರತಿ ಬಾಗಿಲಿನಲ್ಲಿ ಸೂಕ್ಷ್ಮವಾದ ಕೆತ್ತನೆಯ ಕೆಲಸವಿದ್ದು, ಒಳಗಿನ ಕಂಬಗಳಲ್ಲಿ ಕೂಡಾ ಸುಂದರವಾಗಿ ಕಲ್ಲಿನಲ್ಲಿ ಮೂಡಿಸಿದ ಚಿತ್ತಾರಗಳಿವೆ. ಸುಂದರ ವಿನ್ಯಾಸಗಳಲ್ಲದೇ ಅನೇಕ ಪೌರಾಣಿಕ ಪ್ರಸಂಗಗಳ ಕೆತ್ತನೆಯನ್ನು ಕಾಣಬಹುದು. ಗರ್ಭ ಗುಡಿಯಲ್ಲಿರುವ ಭಗವಾನ್ ನೇಮಿನಾಥನ ದಿವ್ಯವಾದ ಕಪ್ಪು ಶಿಲೆಯ ಮೂರ್ತಿ ಗುಡಿಗಿಂತಲೂ ಹಳೆಯದು. ಈ ಮೂರ್ತಿ ಸುಮಾರು ಎರಡು ನೂರು ವರ್ಷಗಳ ಹಿಂದೆ ಕಾಡಿನಲ್ಲಿ ದೊರೆಯಿತು.

ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು

ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು

ಭಗವಾನ್ ನೇಮಿನಾಥನ ವಿಗ್ರಹದ ಹಿಂದೆ ಇರುವ ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು. ಕಲ್ಪ ವೃಕ್ಷ, ಕಾಮಧೇನು ಮತ್ತು ಅನೇಕ ಜೀವ ಜಂತುಗಳ ಸೂಕ್ಷ್ಮ ಕೆತ್ತನೆ ಈ ಪ್ರಭಾವಳಿಯನ್ನು ಅಲಂಕೃತಗೊಳಿಸಿ ಗರ್ಭ ಗುಡಿಯ ದಿವ್ಯತೆಗೆ ಮೆರುಗು ತಂದಿವೆ. ನೇಮಿನಾಥನ ವಿಗ್ರಹದ ಜೊತೆಗೆ ಕಪ್ಪುಶಿಲೆಯ ನವಗೃಹವಿದೆ. ಭಗವಾನ್ ಸುಮತಿನಾಥ, ಭಗವಾನ್ ಪಾರ್ಶನಾಥ ಮತ್ತು ಭಗವಾನ್ ಆದಿನಾಥರ ಸುಂದರ ವಿಗ್ರಹಗಳನ್ನು ಕೂಡ ಕಾಣಬಹುದು.

ಬಸದಿಯ ಅರ್ಚಕ ಮಹಾವೀರ ಉಪಾಧ್ಯ

ಬಸದಿಯ ಅರ್ಚಕ ಮಹಾವೀರ ಉಪಾಧ್ಯ

ಬಸದಿಯ ಅರ್ಚಕ ಮಹಾವೀರ ಉಪಾಧ್ಯರ ಪ್ರಕಾರ, ಇಡೀ ದೇಶದಲ್ಲಿ ಕಮಲದ ಛಾವಣಿಯಿರುವ ಮುಖಮಂಟಪ, ಕಪ್ಪು ಶಿಲೆಯ ನವಗ್ರಹ ಮತ್ತು ಸೂಕ್ಷ್ಮ ಕೆತ್ತನೆಯ ಪ್ರಭಾವಳಿ, ಈ ಮೂರೂ ಇರುವ ಬಸದಿ ಇದೊಂದೇ. ಬೆಳಗಾವಿಯ ಕಿಲ್ಲಾದಲ್ಲಿ ಒಂದು ಕಾಲಕ್ಕೆ ಇಪ್ಪತ್ತಕ್ಕೂ ಹೆಚ್ಚು ಬಸದಿ, ಗುಡಿಗಳಿದ್ದವು. ಆದರೆ ಬಿಜಾಪುರದ ಸುಲ್ತಾನರ ದಾಳಿಯಲ್ಲಿ ಅನೇಕ ಬಸದಿ, ಗುಡಿಗಳು ನಷ್ಟಗೊಂಡವು.

ಒಳ್ಳೆಯ ಪ್ರವಾಸಿ ತಾಣವಾಗಲಿ

ಒಳ್ಳೆಯ ಪ್ರವಾಸಿ ತಾಣವಾಗಲಿ

ನಂತರದಲ್ಲಿ ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದರಿಂದ ಇನ್ನಷ್ಟು ಶಿಥಿಲಗೊಂಡು ಅವನತಿಗೀಡಾದವು. ಈಗಲೂ ಇಲ್ಲಿ ಸರಿಯಾಗಿ ಉತ್ಖನನ ನಡೆಸಿದರೆ ಇನ್ನಷ್ಟು ಗುಡಿ ಬಸದಿಗಳನ್ನು ಬೆಳಕಿಗೆ ತರಬಹುದು ಎಂಬ ಭರವಸೆ ಅವರದು. ಹಾಗೆಯೇ ಈ ಐತಿಹಾಸಿಕ ಸ್ಥಳ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಿ ಒಳ್ಳೆಯ ಪ್ರವಾಸಿ ತಾಣವಾಗಲಿ ಎಂಬುದು ಅವರ ಆಶಯ. ನನ್ನದೂ ಕೂಡ.

ಮಾರ್ಕೆಟಿಂಗ್ ಮತ್ತು ಪ್ರವಾಸಿಗಳಿಗೆ ಒದಗಿಸುವ ಸೌಲಭ್ಯ

ಮಾರ್ಕೆಟಿಂಗ್ ಮತ್ತು ಪ್ರವಾಸಿಗಳಿಗೆ ಒದಗಿಸುವ ಸೌಲಭ್ಯ

ಸಿಂಗಪುರದಲ್ಲಿದ್ದು ಅನೇಕ ದೇಶಗಳನ್ನು ಪ್ರವಾಸಿಯಾಗಿ ನೋಡಿದ ನನಗೆ ಆಯಾ ದೇಶಗಳಲ್ಲಿ ತಮ್ಮ ಐತಿಹಾಸಿಕ ತಾಣಗಳು ಮತ್ತು ಸಂಸ್ಕೃತಿಗಳ ಬಗ್ಗೆ ಅಲ್ಲಿನ ಜನರಿಗೆ ಇರುವ ಆದರಾಭಿಮಾನಗಳು ಮತ್ತು ಅದಕ್ಕೆ ತಕ್ಕಂತೆ ಸರಕಾರಗಳು ತೋರುವ ಕಾಳಜಿ ಮತ್ತು ಸಂರಕ್ಷಣೆಗಳು ನಮ್ಮಲ್ಲಿ ಕಂಡುಬರದಿದ್ದನ್ನು ನೋಡಿ ಖೇದ ಉಂಟಾಗುತ್ತದೆ. ಅಲ್ಲಿನ ಸರಕಾರಗಳು ಮಾಡುವ ಮಾರ್ಕೆಟಿಂಗ್ ಮತ್ತು ಪ್ರವಾಸಿಗಳಿಗೆ ಒದಗಿಸುವ ಸೌಲಭ್ಯಗಳ ಕಿಂಚಿತ್ತು ಅಂಶವನ್ನಾದರೂ ನಮ್ಮ ದೇಶದ ಸರಕಾರಗಳು ಮಾಡಿದರೆ ಕಮಲ ಬಸದಿ ಮತ್ತು ಬೆಳಗಾವಿ ಕೋಟೆಗಳಂತಹ ಸ್ಮಾರಕಗಳು ಹೆಚ್ಚಿನ ಪ್ರಸಿದ್ಧಿ ಪಡೆಯಬಹುದು.

ಒಂದು ರೀತಿಯ ಅವ್ಯಕ್ತ ಶಾಂತಿ ಮತ್ತು ನೆಮ್ಮದಿ

ಒಂದು ರೀತಿಯ ಅವ್ಯಕ್ತ ಶಾಂತಿ ಮತ್ತು ನೆಮ್ಮದಿ

ಅದೆಷ್ಟೇ ಅವ್ಯವಸ್ಥೆ ಮತ್ತು ಅಶಿಸ್ತು ಇದ್ದರೂ ನನಗೆ ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ, ನಮ್ಮೂರಿಗೆ ಬಂದಾಗ ಒಂದು ರೀತಿಯ ಅವ್ಯಕ್ತ ಶಾಂತಿ ಮತ್ತು ನೆಮ್ಮದಿ ಅನುಭವಿಸುತ್ತೇನೆ. ಅದರ ಜೊತೆಯೇ ನಮ್ಮ ದೇಶದಲ್ಲಿ ಕೂಡಾ ಬೇರೆ ದೇಶಗಳಲ್ಲಿ ಕಾಣುವ ದೇಶ ಪ್ರೇಮ, ಕಾರ್ಯನಿಷ್ಠೆ ಮತ್ತು ವೃತ್ತಿಪರತೆ ಕಂಡು ಬಂದರೆ ಎಂಬ ಪ್ರಶ್ನೆ ಮೂಡುತ್ತದೆ. ಹಾಗೆಂದಾದರೂ ಆಗುವುದೋ ಎಂಬ ವಿಚಾರದೊಡನೆ ಒಂದು ಬಗೆಯ ಖಿನ್ನತೆ ಕೂಡ ಆವರಿಸುತ್ತದೆ.

English summary
The Kamal Basadi or Basti is one of the two Jain temples inside the Belgaum Fort. There is another Jain temple here called the Chikka Basadi, but that temple is currently in ruins. Vasant Kulkarni from Singapore writes about the historical monument in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X