ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದೇನಾ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಇವತ್ತು ನಮ್ಮ ದೇಶ ಸ್ವಾತಂತ್ರ್ಯವನ್ನು ಗಳಿಸಿ ಎಪ್ಪತ್ತು ವರ್ಷಗಳಾದವು. ಈ ಎಪ್ಪತ್ತು ವರ್ಷಗಳಲ್ಲಿ ಸ್ವಾತಂತ್ರ್ಯ ಸಿಕ್ಕಿದ ಪ್ರಥಮ ವರ್ಷಕ್ಕೆ ಹೋಲಿಸಿದರೆ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಸಾಧನೆ ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿದೆಯೇ?

ನಮ್ಮ ತುಲನೆ ನಮ್ಮಂತೆಯೇ ಅಧಃಪತನಕ್ಕೆ ತಳ್ಳಲ್ಪಟ್ಟರೂ ಅಲ್ಲಿಂದ ಮೇಲೆದ್ದು ಅಸಾಮಾನ್ಯ ಸಾಧನೆ ಮಾಡಿದ ಜರ್ಮನಿ, ಜಪಾನ್ ಮತ್ತು ದಕ್ಷಿಣ ಕೊರಿಯಗಳೊಂದಿಗೆ ಆಗುವುದು ಬೇಡ. ನಮ್ಮ ಸಾಧನೆ ನಮ್ಮ ಸುಪ್ತ ಸಾಮರ್ಥ್ಯಕ್ಕೆ ಅನುಗುಣವಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಬೇಕಾಗಿರುವುದು ನಮ್ಮ ಸಾಧನೆ ನಮ್ಮ ಸ್ವಾತಂತ್ರ್ಯ ಸೇನಾನಿಗಳ ನಿರೀಕ್ಷೆಗೆ ತಕ್ಕಂತೆ ಇದೆಯೇ ಎಂಬ ಆತ್ಮ ನಿರೀಕ್ಷಣೆ.

ನಮ್ಮ ದೇಶದ ಸಾಕ್ಷರತೆ 1947ರಲ್ಲಿದ್ದ ಶೇಕಡಾ 12ರಿಂದ ಈಗಿನ ಸುಮಾರು ಶೇಕಡಾ 74ಕ್ಕೆ ಏರಿದೆ. ನಿರುದ್ಯೋಗ ಅಂದಿನ 48%ನಿಂದ ಈಗ ಶೇಕಡಾ 10ಕ್ಕೂ ಕಡಿಮೆಯಾಗಿದೆ. ಜನರ ಸರಾಸರಿ ಆಯುಷ್ಯ ಕೂಡ 65ಕ್ಕೇರಿದೆ. ಆದರೆ ಈ ಸಂಖ್ಯೆಗಳು ನಮ್ಮ ನಿಜವಾದ ಸ್ಥಿತಿಗತಿಯನ್ನು ಮರೆಮಾಚಬಾರದು. ಸತ್ಯ ಹೇಳಬೇಕೆಂದರೆ ಈ ಅಂಕಿ ಅಂಶಗಳು ನಿಜವಾದ ಕಥೆಯನ್ನು ಕೂಡ ಹೇಳಲು ಅಸಮರ್ಥ. ನಿಜ ಸ್ಥಿತಿ ತಿಳಿಯಲು ನಾವು ಬೇರೆ ಅಂಕಿ ಅಂಶಗಳನ್ನು ಕೂಡ ನೋಡಬೇಕಾಗುತ್ತದೆ.

India Independence Day : Are the dreams of freedom fighters fulfilled?

ನಮ್ಮ ದೇಶದ ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ಮತ್ತು ನಿಗದಿತ ಅವಧಿಯಲ್ಲಿ ನಿಯಂತ್ರಿಸಲು ನಾವು ಯಶಸ್ವಿಯಾಗಲಿಲ್ಲ. 1951ರಲ್ಲಿ ಕೇವಲ 35 ಕೋಟಿ ಇದ್ದ ಜನಸಂಖ್ಯೆ ಇಂದು 130 ಕೋಟಿಯಾಗಿದೆ. ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಮೂಢನಂಬಿಕೆಗಳಿಂದ ಜನಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇದೆ. ಜನಸಂಖ್ಯೆ ಸ್ವಲ್ಪ ಕಾಲದಲ್ಲಿಯೇ ಅನೇಕ ಪಟ್ಟು ಹೆಚ್ಚಾದುದರಿಂದ ಮತ್ತು ದುರಾಡಳಿತದ ಕಾರಣದಿಂದ ಬಡತನದ ರೇಖೆಗಿಂತ ಕೆಳಗಿರುವ ಜನ ವಿಶ್ವದಲ್ಲೆಡೆಗಿಂತ ನಮ್ಮ ದೇಶದಲ್ಲಿಯೇ ಹೆಚ್ಚಾಗಿದ್ದಾರೆ.

ಒಂದೆಡೆ ನಮ್ಮ ದೇಶ ಹೆಮ್ಮೆಯಿಂದ ಮಂಗಳ ಯಾನವನ್ನು ಕಳುಹಿಸಿ ಸಾಧನೆಗೈದರೆ, ಮತ್ತೊಂದೆಡೆ ನಮ್ಮ ದೇಶ ವಿಶ್ವದ ಅತಿ ಹೆಚ್ಚು ಅನಕ್ಷರಸ್ಥರನ್ನು ಹೊಂದಿದ ದೇಶ ಎಂದು ಕುಪ್ರಸಿದ್ಧವಾಗಿದೆ. ಒಂದೆಡೆ ನಮ್ಮ ದೇಶದಲ್ಲಿ ನಾವು "ವಿವಿಧತೆಯಲ್ಲಿ ಏಕತೆ" ಎಂಬ ಹರಿದ ಮದ್ದಳೆಯನ್ನು ಮತ್ತೆ ಮತ್ತೆ ಬಾರಿಸುತ್ತಲೇ ಇದ್ದರೆ, ಇನ್ನೊಂದೆಡೆ ನಮ್ಮ ಮಹಾನ್ ನೇತಾರರು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಮತ್ತಿಷ್ಟು ಒಡೆದು ಹಾಳುಗೆಡಿಸಲು ಹೊಸ ಹೊಸ ರಚನಾತ್ಮಕ ಸಾಹಸಗಳನ್ನು ಮಾಡುತ್ತಲೇ ಇದ್ದಾರೆ.

ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾದರೂ, ಎಲ್ಲ ನಾಗರಿಕರಿಗೂ ಕೇವಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಮ್ಮ ಆಡಳಿತ ಅಸಮರ್ಥವಾಗಿದೆ. ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಆಗುವ ಗಲಭೆಗಳು ಕೂಡ ಅಸಂಖ್ಯ. ಇದೆಲ್ಲದರ ಮೇಲೆ ನಮ್ಮ ಮೂಲಭೂತ ಸಾಮಾಜಿಕ ವ್ಯವಸ್ಥೆ ವಿಕೃತಗೊಳ್ಳುತ್ತಾ ಅನೇಕ ಗುಂಪುಗಳು ಏರ್ಪಟ್ಟು ಅವುಗಳ ನಡುವಿನ ಪೈಪೋಟಿಯ ರಾಜಕೀಯ ಅರಾಜಕತೆಯನ್ನು ಸೃಷ್ಟಿಗೊಳಿಸುತ್ತಲಿದೆ. ನಮ್ಮ ದೇಶದ ಅನೇಕ ಪ್ರದೇಶಗಳಲ್ಲಿ ಅರಾಜಕತೆ ತಲೆಯೆತ್ತಿ ಮಾವೋವಾದದಂತಹ ಅವ್ಯವಹಾರಿಕ ಉಗ್ರಗಾಮಿತ್ವ ಬೇರೂರಿದೆ. ಅನೇಕ ಭಾಗಗಳಲ್ಲಿ ನಿರೀಕ್ಷೆ ಮತ್ತು ವಾಸ್ತವಗಳಲ್ಲಿ ಉಂಟಾಗಿರುವ ಕಂದಕದಿಂದ ಪ್ರಜೆಗಳ ಆಶೋತ್ತರಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದ್ದು ಸಾಮಾಜಿಕ ಅಸಹನೆ ಜಾಸ್ತಿಯಾಗಿದೆ.

India Independence Day : Are the dreams of freedom fighters fulfilled?

ಈಗಿನ ನಮ್ಮ ಸ್ಥಿತಿಗತಿಗಳನ್ನು ನೋಡಿದರೆ ನಾವು ನಮ್ಮ ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದಂತೂ ಅಲ್ಲ ಎಂಬುದು ಸರ್ವವಿದಿತ. ಅಂದಿನ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತ ಹೇಗಿತ್ತು? ಅವರು ತಮ್ಮ ದೇಶದ ಭಾವಿ ಪ್ರಜೆಗಳಿಂದ ಏನನ್ನು ನಿರೀಕ್ಷಿಸುತ್ತಿದ್ದರು? ಸ್ವಾತಂತ್ರ್ಯದ ನಂತರ ತಮ್ಮ ನೆಚ್ಚಿನ ಭಾರತ ಹೇಗಿರಬೇಕು ಎಂದು ಯಾರಾದರೂ ಹೇಳಿದ್ದಾರೆಯೇ ಎಂದೆಲ್ಲಾ ಯೋಚಿಸುತ್ತ ನಾನು ಅಂತರ್ಜಾಲ ತಾಣವನ್ನೊಮ್ಮೆ ತಡುಕಾಡುತ್ತಿರುವಾಗ ನನಗೆ ಸಿಕ್ಕ ರವೀಂದ್ರನಾಥ ಟ್ಯಾಗೋರರ "India Awakens" ಎಂಬ ಪದ್ಯ ಇಂತಿದೆ:

Where the mind is without fear
And the head is held high;
Where knowledge is free;
Where the world has not been
Broken up into fragments
By narrow domestic walls;
Where words come out from
The depth of truth;
Where tireless striving stretches
Its arms towards perfection;
Where the clear stream of reason
Has not lost its way into
The dreary desert sand of dead habit;
Where the mind is led forward by
Thee into ever-widening
Thought and action
Into that heaven of freedom, my father
Let my country awake.

ಟ್ಯಾಗೋರರ ಈ ಸುಂದರ ರಾಜ್ಯವನ್ನು ರಚಿಸುವತ್ತ ನಾವು ಸಾಗಿದ್ದೇವೆಯೇ? ನಮ್ಮ ದಿವ್ಯ ಪ್ರಜಾಪ್ರಭುತ್ವದಲ್ಲಿ ನಾವು ಯಾವುದೇ ಅಂಜಿಕೆಯಿಲ್ಲದೇ ತಲೆಯೆತ್ತಿ ಬಾಳಲು ಸಾಧ್ಯವಾಗಿದೆಯೇ? ದಿನ ನಿತ್ಯ ದೊಂಬಿ, ದರೋಡೆ, ಆತಂಕವಾದದ ಕರಾಳ ಛಾಯೆ ನಮ್ಮ ದೇಶದ ಅನೇಕ ಪ್ರದೇಶಗಳಲ್ಲಿ ನಿತ್ಯದ ಬಾಳನ್ನು ಕಠೋರಗೊಳಿಸಿದೆ. ಟ್ಯಾಗೋರರು ಆಶಿಸಿದ ಹಾಗೆ ಜ್ಞಾನ ಉಚಿತವಾಗಿ ದೊರೆಯುವುದು ಇಂದು ಕನಸಿನ ಮಾತಾಗಿದೆ. ಅಲ್ಲದೇ ನಮ್ಮ ಸುಂದರ ದೇಶದ ಸಮಾಜ ಇಂದು ಜಾತಿ ಮತ ಮತ್ತು ಪಂಥಗಳ ದೊಡ್ಡ ದೊಡ್ಡ ಗೋಡೆಗಳನ್ನು ಏರ್ಪಡಿಸಿಕೊಂಡು ಛಿದ್ರ ಛಿದ್ರಗೊಂಡಿದೆ.

ಸತ್ಯ ಶೋಧನೆ ಮತ್ತು ಪರಿಪೂರ್ಣತೆಯ ಗುರಿಯನ್ನು ಎಲ್ಲೋ ಬಿಟ್ಟೂ, ಹೇಗೋ ನಮ್ಮ ಸದ್ಯದ ಕೆಲಸವಾದರೆ ಸಾಕಪ್ಪಾ ಎಂದು ಉಸ್ಸೆನ್ನಬೇಕಾಗಿದೆ. ನಮ್ಮ ಸಮಾಜ ತರ್ಕ ಮತ್ತು ವಿದ್ವತ್ತನ್ನು ಪರಿಗಣಿಸುವುದನ್ನು ಬಿಟ್ಟು ಸ್ವಜನ ಪಕ್ಷಪಾತ ಮತ್ತು ಪೂರ್ವಾಗ್ರಹಗಳ ಬೀಡಾಗಿದೆ. ಇಲ್ಲಿ ಎಲ್ಲ ಗುಂಪುಗಳು ತಮ್ಮ ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ತಾವು ಇತರರಿಂದ ಹೇಗೆ ಭಿನ್ನ ಎಂಬುದನ್ನು ಎತ್ತಿ ಎತ್ತಿ ಹೇಳುವುದರಲ್ಲಿ ಸಂತೋಷ ಕಂಡುಕೊಳ್ಳುತ್ತಿವೆ.

ಅಂದು ಟ್ಯಾಗೋರರು ಕಲ್ಪಿಸಿದ ಸುಂದರ ದೇಶದ ತದ್ವಿರುದ್ಧ ದೇಶ ಮತ್ತು ಸಮಾಜವನ್ನು ಕಟ್ಟುತ್ತಿದ್ದೇವೆಯೇ ಎಂದು ಭಾಸವಾಗುತ್ತದೆ. ಅಲ್ಲದೇ ಎಂದಾದರೂ ಈ ಕನಸಿನ ಭಾರತದ ಒಂದು ಅಂಶವನ್ನಾದರೂ ನಾವು ಕಟ್ಟಬಲ್ಲೆವೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಕತ್ತಲಿನ ನಂತರ ಬೆಳಕೇ ಅಲ್ಲವೇ? ಶತಮಾನಗಳ ಕರಾಳ ಛಾಯೆಯಿಂದ ನಿಧಾನವಾಗಿ ಹೊರಬರುತ್ತಿರುವ ನಾವು ಇನ್ನು ಮುಂದೆ ಕಾಣುವುದು ಸೂರ್ಯ ರಶ್ಮಿಯ ಪ್ರಖರತೆಯನ್ನೇ ಎಂಬ ಆಶಾವಾದ ಮನದಲ್ಲೆಲ್ಲೋ ಬೆಳಗುತ್ತದೆ.

ನಮ್ಮದು "ತಮಸೋಮಾ ಜ್ಯೋತಿರ್ಗಮಯ" ಎಂದು ನಂಬಿದ ರಾಷ್ಟ್ರವಲ್ಲವೇ? ಸಹಸ್ರಾರು ವರ್ಷಗಳಿಂದ ನಮ್ಮ ಸಂಸ್ಕೃತಿ ಉಳಿದು ಬೆಳೆದಿದೆ ಅಲ್ಲವೇ? ಸದ್ಯದ ಕಾರ್ಮೋಡಗಳಿಂದ ಏಕೆ ನಿರಾಶೆಗೊಳ್ಳಬೇಕು? ಉಜ್ವಲ ಸೂರ್ಯರಶ್ಮಿ ಈ ಕಾರ್ಮೋಡಗಳನ್ನು ಕೂಡ ಒಂದು ದಿನ ಚೆದುರಿಸುತ್ತದೆ. ನಮ್ಮಲ್ಲನೇಕ ಯುವ ಮುಖಂಡರು ಮುಂದೆ ಬಂದು ನಮ್ಮಲ್ಲಿನ ಒಡಕುಗಳನ್ನು ತೊಡೆದು ಹಾಕಿ ಮುಂದಿನ ಕೆಲವೇ ದಶಕಗಳಲ್ಲಿ ಟ್ಯಾಗೋರರ ಕನಸಿನ ಭಾರತವನ್ನು ಕಟ್ಟುವಂತಾಗಲಿ ಎಂದು ಹಾರೈಸುತ್ತೇನೆ. ಇಂದಿನ ಈ 70ನೇಯ ಸ್ವಾತಂತ್ರ್ಯ ದಿನಾಚರಣೆ ನಮ್ಮ ಸೂರ್ಯೋದಯದ ಶುಭಾರಂಭವಾಗಲಿ ಎಂದು ಹೃದಯಾಂತರಾಳದಿಂದ ಆಶಿಸುತ್ತೇನೆ.

English summary
Are the dreams of freedom fighters fulfilled? Everyone in India has ask this question on the occasion of 71st Independence Day celebration. We have to fight against issues like population to achieve this dream. Can we do it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X