ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃತ್ತಿಯಲ್ಲಿ ಒಬ್ಬ ಪರ್ಫೆಕ್ಷನಿಸ್ಟ್ ಆಗಬೇಕಾದರೆ...

ಒಂದು ಕಾಲಕ್ಕೆ ಗುರುವಿಗೆ ಯಾವ ದೈವತ್ವವನ್ನು ನೀಡಿದ್ದರೋ ಆ ದೈವತ್ವ ಇನ್ನೆಂದೂ ಕಾಣದೇ ಹೋದರೂ, ಅಲ್ಲಲ್ಲಿ ಸದಾ ಒಳಿತನ್ನೆ ಬಯಸುವ ನಿಸ್ಪೃಹ ಮತ್ತು ಕರ್ತವ್ಯಶೀಲ ಶಿಕ್ಷಕರು ಇನ್ನೂ ಇದ್ದಾರೆ ಎಂದೇ ನನ್ನ ಭಾವನೆ.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

1988ರ ಮಧ್ಯದಲ್ಲಿ ನಾನು ಮೆಕ್ಯಾನಿಕಲ್ ಎಂಜಿನೀರಿಯಂಗ್ ಓದಲು ನನ್ನೂರಿನಲ್ಲಿಯೇ ಇದ್ದ ಕಾಲೇಜಿಗೆ ಸೇರಿದ್ದೆ. ಆ ಕಾಲೇಜಿನಲ್ಲಿ ಕಲಿಸುತ್ತಿದ್ದ ಪ್ರೊಫೆಸರ್ ಹರನ್ ತಮ್ಮ ಕಟ್ಟುನಿಟ್ಟಿನ ವರ್ತನೆಗೆ ಹೆಸರಾಗಿದ್ದರು. ಮೆಕ್ಯಾನಿಕಲ್ ಲ್ಯಾಬೋರೇಟರಿಯಲ್ಲಿ ಪ್ರಯೋಗಗಳನ್ನು ಹೇಳಿಕೊಡಲು ಬರುತ್ತಿದ್ದರು. ಅವರು ನಾವು ಬರೆಯುತ್ತಿದ್ದ ಪ್ರಾಯೋಗಿಕ ಸಲಕರಣೆಗಳ ಚಿತ್ರಗಳನ್ನು ವಿಮರ್ಶಿಸಿ ತಿದ್ದುತ್ತಿದ್ದರು. ಕೆಟ್ಟದಾಗಿ ಬರೆದ ಚಿತ್ರಗಳನ್ನು ಕಟುವಾಗಿ ಟೀಕಿಸುತ್ತಿದ್ದರು.

ಒಂದೊಂದು ಪ್ರಯೋಗಗಳನ್ನು ಮುಗಿಸಲು ಎರಡು ಮೂರು ಬಾರಿ ಕೆಲಸ ಮಾಡಬೇಕಾಗುತ್ತಿತ್ತು. ಒಂದೊಂದು ಚಿತ್ರಗಳ ಮೇಲೆ ಒಪ್ಪಿಗೆ ಪಡೆಯಲು ಬಹಳ ಕಠಿಣ ಪರಿಶ್ರಮ ಮಾಡಿ ಎರಡು ಮೂರು ಬಾರಿ ನಾಜೂಕಾಗಿ ಚಿತ್ರ ಬರೆಯಬೇಕಾಗುತ್ತಿತ್ತು. ತುಂಬಾ ಸಂಕೀರ್ಣ ಸಲಕರಣೆಗಳ ಚಿತ್ರದಲ್ಲಿ ಕೂಡ ಒಂದೇ ಒಂದು ಗೆರೆ ಅಗತ್ಯಕ್ಕಿಂತ ಹೆಚ್ಚಿಗೆ ದಪ್ಪವಾಗಿದ್ದರೆ ಅವರಿಂದ ಇಲ್ಲವೆನ್ನಿಸಿಕೊಳ್ಳಬೇಕಾಗುತ್ತಿತ್ತು, ಟೀಕೆ ಕೇಳಬೇಕಾಗುತ್ತಿತ್ತು.[ಮನುಕುಲದ ಸರ್ವನಾಶಕ್ಕೆ ಗಣನೆ ಆರಂಭವಾಗಿದೆಯಾ?]

ಹೀಗಾಗಿ ಅವರೆಂದರೆ ಅನೇಕರಿಗೆ ಅಂಜಿಕೆ ಮತ್ತು ಇನ್ನೂ ಅನೇಕರಿಗೆ ಅಸಹ್ಯ. ಇವರು ಯಾಕಪ್ಪಾ ಬರುತ್ತಾರೆ? ಬಂದು ನಮ್ಮೆಲ್ಲರ ಪ್ರಾಣ ತೆಗೆಯುತ್ತಾರೆ ಎನ್ನುವುದು ಪ್ರಥಮ ವರ್ಷದ ವಿದ್ಯಾರ್ಥಿಗಳೆಲ್ಲರ ಸಾಮಾನ್ಯ ದೂರು ಆಗಿತ್ತು. ಪ್ರಥಮ ವರ್ಷ ಮುಗಿಯುತ್ತ ಬಂದಂತೆ ಒಂದು ದಿನ ಅವರು ಕ್ಲಾಸಿನಲ್ಲಿ ನಾವು ಬರೆದಿದ್ದ ಪ್ರಥಮ ಚಿತ್ರ ಮತ್ತು ಅದರ ಜೊತೆಯೇ ಇತ್ತೀಚೆಗೆ ಬರೆದ ಚಿತ್ರವೊಂದನ್ನು ನಮ್ಮ ಮುಂದೆ ಇಟ್ಟು ಹೋಲಿಸಲು ಹೇಳಿದರು. ಎರಡೂ ಚಿತ್ರಗಳ ಗುಣಮಟ್ಟಗಳಲ್ಲಿದ್ದ ಅಜಗಜಾಂತರ ವ್ಯತ್ಯಾಸ ನಮ್ಮಲ್ಲನೇಕರ ಗಮನಕ್ಕೆ ತಕ್ಷಣ ಬಂದಿತ್ತು.

If you want to become a perfectionist in your profession

"ಇಲ್ಲಿಯವರೆಗೆ ನೀವೆಲ್ಲ ನನ್ನ ಕಟ್ಟುನಿಟ್ಟಿನ ವರ್ತನೆಯಿಂದ ಬೇಸರಗೊಂಡಿರಬಹುದು. ಆದರೆ ಈ ಚಿತ್ರಗಳಲ್ಲಿಯ ಗುಣಮಟ್ಟದ ವ್ಯತ್ಯಾಸವನ್ನು ನೀವೇ ಗಮನಿಸಿ. ನಾನು ಆಗ ಕಟ್ಟುನಿಟ್ಟಾಗಿರದಿದ್ದರೆ ಈ ಚಿತ್ರಗಳು ಇಷ್ಟೊಂದು ನಿಖರವಾಗಿ ಮೂಡಿ ಬರುತ್ತಿರಲಿಲ್ಲ. ನಿಮ್ಮ ಚಿತ್ರಗಳಲ್ಲಿನ ಗುಣಮಟ್ಟ ಇಷ್ಟೊಂದು ಸುಧಾರಿಸುತ್ತಿರಲಿಲ್ಲ. ಎಂಜಿನೀಯರಿಂಗ ಕಲಿಯುವುದೆಂದರೆ ನಾಲ್ಕು ವರ್ಷಗಳ ತಪಸ್ಸು. ನಿಮ್ಮ ಜ್ಞಾನಾರ್ಜನೆಯ ಗುಣಮಟ್ಟದಲ್ಲಿ ಸ್ವಲ್ಪವೂ ಕೂಡ ಮೇಲು ಕೆಳಗೆ ಆಗಕೂಡದು. ಮುಂದೊಂದು ದಿನ ನೀವೆಲ್ಲರೂ ಅನೇಕ ಯಂತ್ರಗಳನ್ನು ನಿರ್ಮಿಸುತ್ತೀರಿ, ಕಾರು ಇತ್ಯಾದಿ ವಾಹನಗಳ ತಯಾರಿಕೆಯಲ್ಲಿ ತೊಡಗುತ್ತೀರಿ. ನಿಮ್ಮಿಂದ ತಯಾರಾದ ಯಾವುದೇ ವಸ್ತುಗಳ ಗುಣಮಟ್ಟ ಕೀಳಾಗಿದ್ದರೆ ಅನೇಕರಿಗೆ ಬಹಳ ನಷ್ಟಗಳಾಗಬಹುದು, ಪ್ರಾಣಹಾನಿ ಕೂಡ ಆಗಬಹುದು. ಆದುದರಿಂದ ನಿಮ್ಮ ವಿದ್ಯೆಯ ಮತ್ತು ಕೆಲಸದ ಗುಣಮಟ್ಟವನ್ನು ಸುಧಾರಿಸಲು ನಮ್ಮಂತಹ ಪ್ರೊಫೆಸರ್ ಗಳು ಸ್ವಲ್ಪ ಅಪ್ರಿಯರಾದರೆ ಅದರಲ್ಲಿ ಏನೂ ತಪ್ಪಿಲ್ಲ" ಎಂದು ನಮ್ಮಲ್ಲಿ ಕೆಲವರಿಗೆ ಅವರು ಹೇಳಿದರು.[ಚಂದಮಾಮಾದ ಚೆಂದದ ಪೌರಾಣಿಕ ಕಥೆಗಳ ಯುಗಾಂತ್ಯ]

ಮುಂದಿನ ಮೂರು ವರ್ಷಗಳಲ್ಲಿ ಅವರು ನಮ್ಮಲ್ಲಿ "Sense of Responsibility"ಯನ್ನು ತುಂಬಿ ನಮ್ಮ ಕೆಲಸದಲ್ಲಿ ಗುಣಮಟ್ಟದ ಮಹತ್ವವನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಅವರಂತೆಯೇ ಇನ್ನೂ ಒಂದಿಬ್ಬರು ಶಿಕ್ಷಕರು ಈ ನಿಟ್ಟಿನಲ್ಲಿ ಮಾಡಿದ ಪರಿಶ್ರಮವನ್ನು ನಾನು ಇನ್ನೂ ನೆನೆಯುತ್ತೇನೆ. ಇಂದೂ ಕೂಡ ಈ ಶಿಕ್ಷಕರುಗಳು ಕಲಿಸಿದ ಎಂಜಿನೀಯರಿಂಗ್ ಅಭ್ಯಾಸದ ಮೂಲಭೂತ ತತ್ವಗಳು ನನಗೆ ಸುಭದ್ರವಾದ ಬುನಾದಿಯನ್ನು ಒದಗಿಸಿಕೊಟ್ಟು ನನ್ನನ್ನು ನನ್ನ ವ್ಯಾವಸಾಯಿಕ ಜೀವನದಲ್ಲಿ ಪ್ರಸ್ತುತವಾಗಿ ಉಳಿಸಿವೆ ಎಂದರೆ ಅತಿಶಯೋಕ್ತಿಯೇನಿಲ್ಲ.

ಈ ಶಿಕ್ಷಕರು ಇಂದಿಗೂ ನನಗೆ ಮತ್ತು ನನ್ನಂತಹ ಅನೇಕರಿಗೆ ಪ್ರಾತಃಸ್ಮರಣೀಯರು. ತಮ್ಮ ಸ್ವಂತದ ಜನಪ್ರಿಯತೆಯನ್ನು ಬದಿಗೊತ್ತಿ ಯಾವುದು ಸರಿಯೋ ಅದೆಷ್ಟೇ ಅಪ್ರಿಯವಾಗಿದ್ದರೂ ಅದನ್ನು ಎತ್ತಿ ಹಿಡಿಯುವ ಇಂತಹ ಜನರು ನಮಗೆ ಆ ಹೊತ್ತಿನಲ್ಲಿ ಬಗೆಹರಿಸಲಾಗದ ಕಗ್ಗಂಟಾಗಿ ಕಂಡಿರಬಹುದು. ಆದರೆ ಅಂದು ಕಟ್ಟುನಿಟ್ಟಿನಿಂದ ಪಾಠ ಹೇಳಿ ಸರಿಯಾದ ಮಾರ್ಗವನ್ನು ತೋರಿದುದರಿಂದಲೇ ಅವರನ್ನು ಸದಾಕಾಲ ನೆನೆಯುವಂತೆ ಆಗಿದೆ.[ವಿಧ್ವಂಸಕ ಆಯುಧಗಳನ್ನು ಸಂಪೂರ್ಣ ನಾಶಗೊಳಿಸಿ]

ತಮ್ಮ ಒಂದು ಪ್ರವಚನದಲ್ಲಿ ಪ್ರೊಫೆಸರ್ ಗುರುರಾಜ್ ಕರಜಗಿ ಗುರುವಿನ ಮಹತ್ವವನ್ನು ಹೇಳಲು ಒಂದು ಉದಾಹರಣೆಯನ್ನು ನೀಡುತ್ತಾರೆ. ಅವರು ತಾವು ಓದಿದ ಸ್ಕೂಲಿನ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಭೇಟಿ ನೀಡಿದ್ದರಂತೆ. ಅಲ್ಲಿನ ಕಾರ್ಯಕ್ರಮದ ನಂತರ ತಮ್ಮ ಗುರುಗಳ ಜೊತೆ ಮಾತನಾಡುತ್ತಿರುವಾಗ, ಗುರುಗಳೊಬ್ಬರು, "ನಮ್ಮ ಶಾಲೆಯಲ್ಲಿ ಕಲಿತು ನೀವು ಮುಂದುವರೆದು ಎಷ್ಟು ದೊಡ್ಡವರಾಗಿ ಬಿಟ್ಟಿರಿ. ಆದರೆ ನಮ್ಮನ್ನು ನೋಡಿ. ನಾವಿನ್ನೂ ಇಲ್ಲಿಯೇ ಇದೇ ಚಿಕ್ಕ ಶಾಲೆಯಲ್ಲಿ ಶಿಕ್ಷಕರಾಗಿ ಉಳಿದುಕೊಂಡು ಬಿಟ್ಟೆವು" ಎಂದು ಹೇಳಿದರಂತೆ.

ಆಗ ಪ್ರೊಫೆಸರ್ ಗುರುರಾಜ್ ಕರಜಗಿ ಅವರು ತಕ್ಷಣ "ಗುರುಗಳೇ, ನೀವಿಲ್ಲಿ ಉಳಿದುದರಿಂದಲೇ ನಾನು ಈ ಎತ್ತರಕ್ಕೆ ಏರುವುದು ಸಾಧ್ಯವಾಯಿತು ಅಲ್ಲವೇ? ನೀವಿಲ್ಲಿ ದಾರಿ ತೋರುವ ಮಾರ್ಗದರ್ಶಿಯಾದುದರಿಂದಲೇ ನಾನೂ ಮತ್ತು ನನ್ನಂಥ ಅನೇಕರು ನೀವು ತೋರಿದ ದಾರಿಯಲ್ಲಿ ನಡೆದು ದೊಡ್ಡವರೆನಿಸಿದೆವು. ನಾವೇನೇ ಇವತ್ತು ಆಗಿದ್ದರೆ ಅದರ ಮೂಲ ಕಾರಣ ನಿಮ್ಮಂತಹ ನಿಸ್ಪೃಹ ಗುರುಗಳು" ಎಂದು ಹೇಳಿದಾಗ ಆ ಶಿಕ್ಷಕರ ಮುಖದಲ್ಲಿ ಧನ್ಯತೆಯ ಭಾವ ಬೆಳಗಿತಂತೆ.[ಸ್ವಾರ್ಥ ಮೀರಿದ ದೇಶಪ್ರೇಮವಿದ್ದರೆ ಮಾತ್ರ ಇಂಥ ಅದ್ಭುತ ಸಾಧ್ಯ!]

ಇಂದಿನ ಜಗತ್ತು ಭಾವನೆಗಳ ಆರ್ದ್ರತೆಯನ್ನು ಒಣಗಿಸಿ ಸಂಬಂಧಗಳಲ್ಲಿಯ ಸತ್ವವನ್ನು ಕಳೆದುಕೊಳ್ಳುತ್ತಿದೆ. ಒಂದು ಕಾಲಕ್ಕೆ ಗುರುವಿಗೆ ಯಾವ ದೈವತ್ವವನ್ನು ನೀಡಿದ್ದರೋ ಆ ದೈವತ್ವ ಇನ್ನೆಂದೂ ಕಾಣದೇ ಹೋದರೂ, ಅಲ್ಲಲ್ಲಿ ಸದಾ ಒಳಿತನ್ನೆ ಬಯಸುವ ನಿಸ್ಪೃಹ ಮತ್ತು ಕರ್ತವ್ಯಶೀಲ ಶಿಕ್ಷಕರು ಇನ್ನೂ ಇದ್ದಾರೆ ಎಂದೇ ನನ್ನ ಭಾವನೆ. ಅಂತಹವರಿಂದಲೇ ಇಂದಿಗೂ ಒಳ್ಳೆಯ ಕರ್ತವ್ಯಶೀಲ ವಿದ್ಯಾರ್ಥಿಗಳೂ ತಯಾರಾಗುತ್ತಿದ್ದಾರೆ ಎಂಬ ಆಶಾವಾದ ನನ್ನದು. ಅಂಥವರನ್ನು ಗುರುತಿಸಿ ಅವರಿಂದ ಕಲಿಯಲು ನಮ್ಮ ಮುಂದಿನ ಪೀಳಿಗೆಯನ್ನು ನಾವು ಪ್ರೇರೆಪಿಸಬೇಕು. ಅದು ನಮ್ಮ ಕರ್ತವ್ಯ.

***
ಅದೊಮ್ಮೆ ನಮ್ಮ ಆಫೀಸಿನಲ್ಲಿ ನಮ್ಮ ಹೊಸ ಎಂಜಿನೀಯರ್ ಹುಡುಗನೊಬ್ಬ "ಅವರು ಎಷ್ಟೇ ಒಳ್ಳೆಯವರಾದರೂ ಒಬ್ಬ perfectionist ಮಾರಾಯ! ಅವರಿಗೆ ತೋರಿಸುವ ಮೊದಲು ಇನ್ನೊಂದು ಬಾರಿ ನಾವೇ ಚೆಕ್ ಮಾಡಿಬಿಡುವುದು ಉತ್ತಮ, ಇಲ್ಲದಿದ್ದರೆ ಕಮೆಂಟ್ ಜೊತೆಗೆ ಒಂದು ದೊಡ್ಡ ಲೆಕ್ಚರ್ ಕೊಡುತ್ತಾರೆ" ಎಂದು ಮತ್ತೊಬ್ಬ ಹುಡುಗನಿಗೆ ನನ್ನನ್ನು ಕುರಿತು ಹೇಳುತ್ತಿದ್ದುದು ಆಕಸ್ಮಾತ್ತಾಗಿ ಕಿವಿಗೆ ಬಿತ್ತು.

ಆ ಇನ್ನೊಬ್ಬ ಹುಡುಗ "ಪರವಾಗಿಲ್ಲ ಆ ಲೆಕ್ಚರ್ ಕೂಡ ಚೆನ್ನಾಗಿಯೇ ಇರುತ್ತದೆ, ಕೇಳೋಣ ಬಿಡು" ಎಂದು ಹೇಳಿದ್ದು ಕೇಳಿಸಿದಾಗ, ಏನೋ ನಮ್ಮ ಹರನ್ ಪ್ರೊಫೆಸರ್‌ರ ಒಂದು ಅಂಶ ನನ್ನಲ್ಲೂ ಕೂಡ ಬಂದಿದೆ ಎಂದು ಖುಶಿಯಾಯಿತಾದರೂ, ಅವರಷ್ಟು perfectionist ನಾನೆಂದೂ ಆಗಲಾರೆ ಎಂಬ ತಥ್ಯ ಕೂಡ ಜೊತೆಗೇ ಮನದಲ್ಲಿ ಮಿಂಚಿ ಮಾಯವಾಯಿತು.

English summary
If you want to become a perfectionist in your profession you have to be proper guidance from the teachers or peers or seniors. Vasant Kulkarni writes how he had put hard work to become a perfectionist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X