ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಜಮಿನ್ ಫ್ರ್ಯಾಂಕ್ಲಿನ್‌ಗೆ ಹುಟ್ಟುಹಬ್ಬದ ಶುಭಾಶಯಗಳು

ಇವತ್ತು ಅಂದರೆ ಜನವರಿ 17, ಬೆಂಜಮಿನ್ ಫ್ರ್ಯಾಂಕ್ಲಿನ್‍ನ ಹುಟ್ಟುಹಬ್ಬ. ಇವತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಥಾಪಕರಲ್ಲೊಬ್ಬ ಎಂದು ಹೆಸರುವಾಸಿಯಾಗಿ ಇಂದಿನ ಅದರ ವೈಭವಕ್ಕೆ ನಾಂದಿ ಹಾಡಿದ ಕಾರಣಪುರುಷರಲ್ಲೊಬ್ಬ ಈ ಬೆಂಜಮಿನ್ ಫ್ರ್ಯಾಂಕ್ಲಿನ್.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಅವನಿಗೆ ತನ್ನಣ್ಣನ ಮುದ್ರಣಾಲಯದಲ್ಲಿ ಗುಲಾಮಗಿರಿಗೆ ಕಡಿಮೆ ಇರದಂತಹ ಕೆಲಸದಿಂದ ಬೇಜಾರಾಗಿತ್ತು. ತನ್ನ ಹನ್ನೆರಡನೇ ವಯಸ್ಸಿನಲ್ಲಿ ಕೇವಲ ಎರಡು ವರ್ಷಗಳ ಸಾಮಾನ್ಯ ಶಿಕ್ಷಣ ಪಡೆದ ನಂತರ ಅಣ್ಣ ಜೇಮ್ಸ್ ಆರಂಭಿಸಿದ ಮುದ್ರಣಾಲಯದಲ್ಲಿ ಕೆಲಸ ಕಲಿಯಲು ಸೇರಿಕೊಂಡ ಅವನ ಮನಸ್ಸು ಅತ್ಯಂತ ಕಠಿಣ ದುಡಿತ ಮತ್ತು ಅಣ್ಣನ ಹೀನಾಯ ನಡತೆಯಿಂದ ಪ್ರಕ್ಷುಬ್ಧಗೊಂಡಿತ್ತು.

ಅಂತಹ ಕಠಿಣತಮ ಕೆಲಸದಲ್ಲೂ ತನಗೆ ದೊರಕಿದ ಸ್ವಲ್ಪವೇ ಹಣದಿಂದ ಆತ ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದ. ಮುದ್ರಣಾಲಯಕ್ಕೆ ಬಂದ ಲೇಖನಗಳನ್ನು ಓದುತ್ತಿದ್ದ. ಸತತ ನಾಲ್ಕು ವರ್ಷಗಳ ಈ ಓದಿನಿಂದ ಮನಸ್ಸು ಬೆಳಗಿದರೂ ಕೊರಗೊಂದು ಕಾಡುತ್ತಿತ್ತು. ಆದರೂ ಆತನಲ್ಲಿ ಅಡಗಿದ ಕ್ರಿಯಾಶೀಲ ಮನಸ್ಸಿಗೆ ಒಂದು ಅಭಿವ್ಯಕ್ತಿಯ ರಹದಾರಿ ಬೇಕಾಗಿತ್ತು.

ಆತನಿಗೆ ಒಂದು ವಿಚಾರ ಹೊಳೆಯಿತು. ಅವನು ತನ್ನಣ್ಣ ಶುರು ಮಾಡಿದ ನ್ಯೂ ಇಂಗ್ಲೆಂಡ್ ಕೌರಂಟ್ ಎಂಬ ಪತ್ರಿಕೆಗೆ ಲೇಖನಗಳನ್ನು ಬರೆಯಲು ಅರಂಭಿಸಿದ. ಆದರೆ ಆತ ತನ್ನ ಹೆಸರನ್ನು ಉಪಯೋಗಿಸಲಿಲ್ಲ. ಸೈಲೆನ್ಸ್ ಡುಗುಡ್ ಎಂಬ ಕಾಲ್ಪನಿಕ ಯುವ ವಿಧವೆಯ ಹೆಸರಿನಲ್ಲಿ ಫ್ಯಾಷನ್, ಮದುವೆ, ಧರ್ಮ, ಮಹಿಳೆಯರ ಹಕ್ಕುಗಳು ಇತ್ಯಾದಿ ವಿಷಯಗಳ ಬಗ್ಗೆ ಆತ ಬರೆದ ಲಲಿತ ಪ್ರಬಂಧಗಳು ಅದೆಷ್ಟು ಪ್ರಸಿದ್ಧಗೊಂಡವೆಂದರೆ, ಅನೇಕ ಮದುವೆ ವಯಸ್ಸಿನ ಯುವಕರು ಸೈಲೆನ್ಸ್ ಡುಗುಡ್‍ಳಿಗೆ ಪತ್ರಗಳನ್ನು ಬರೆದು ಅವಳನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಹದಿನಾಲ್ಕು ಲೇಖನಗಳನ್ನು ಸೈಲೆನ್ಸ್ ಡುಗುಡ್ ಹೆಸರಿನಲ್ಲಿ ಬರೆದ ನಂತರ ಅವನು ತನ್ನ ನಿಜವಾದ ಹೆಸರನ್ನು ಪ್ರಕಟಗೊಳಿಸಿದ. [ಕ್ಲಾಸ್ ಟೀಚರ್ಗೆ ಅಬ್ರಹಾಂ ಲಿಂಕನ್ ಬರೆದ ಪತ್ರ]

ತಮ್ಮನ ಪ್ರಖ್ಯಾತಿಯನ್ನು ನೋಡಿ ಅಣ್ಣ ಜೇಮ್ಸನಿಗೆ ಈರ್ಷ್ಯೆಯುಂಟಾಯಿತೋ, ತನ್ನ ನಡವಳಿಕೆಯಿಂದ ವ್ಯಥೆಯುಂಟಾಯಿತೋ ಅಥವಾ ಈ ಎರಡನ್ನೂ ಸಮ್ಮಿಳಿಸಿ ಅವುಗಳನ್ನು ಮೀರುವ ಸಿಟ್ಟು ಬಂತೋ, ಒಟ್ಟಿನಲ್ಲಿ ತಮ್ಮ ತನ್ನ ಊರಾದ ಬೋಸ್ಟನ್ ಬಿಟ್ಟು ಫಿಲಡೆಲ್ಫಿಯಾಕ್ಕೆ ಹೊರಟುಹೋದ. ಫಿಲಡೆಲ್ಫಿಯಾಕ್ಕೆ ಬಂದಾಗ ಕೈಯಲ್ಲಿ ಕಿಲುಬು ಕಾಸಿರದಿದ್ದರೂ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಮುದ್ರಣಾಲಯದ ಮಾಲೀಕನಾಗಿ, ಪ್ರಕಾಶಕನಾಗಿ ಮತ್ತು ಸ್ಥಿರಾಸ್ತಿ ಉದ್ಯಮಿಯಾಗಿ ಅಂದಿನ ಅಮೆರಿಕದ ಕುಬೇರರಲ್ಲೊಬ್ಬನಾದ ಈ ವ್ಯಕ್ತಿಯ ಹೆಸರು ಬೆಂಜಮಿನ್ ಫ್ರ್ಯಾಂಕ್ಲಿನ್. ರಚನಾತ್ಮಕ ಮನಸ್ಸಿನ ಜೊತೆ ಕ್ರಿಯಾಶೀಲತೆ ಒಂದುಗೂಡಿದರೆ ಎಂತಹ ಕಠಿಣ ಪರಿಸ್ಥಿತಿಯೇ ಆಗಲಿ ಅದರಿಂದ ಹೊರಬರಬಹುದು ಎಂಬುದಕ್ಕೆ ಈ ಕಥೆ ಉದಾಹರಣೆ ಅಲ್ಲವೇ?

ಇಂದು ಬೆಂಜಮಿನ್ ಫ್ರ್ಯಾಂಕ್ಲಿನ್ ಎಂದರೆ ತಟ್ಟನೆ ನೆನಪು ಬರುವದು ಆತನ ಗಾಳಿಪಟದ ಪ್ರಯೋಗ. ಮಳೆಯ ಮಿಂಚಿನಲ್ಲಿ ವಿದ್ಯುತ್‍ನ ಇರುವಿಕೆಯನ್ನು ದೃಢೀಕರಿಸಲು ಬೆಂಜಮಿನ್ ಫ್ರ್ಯಾಂಕ್ಲಿನ್ ರೇಷ್ಮೆ ದಾರದಿಂದ ಗಾಳಿಪಟವನ್ನು ಹಾರಿಸಿ ರೇಷ್ಮೆ ದಾರದ ಮಧ್ಯದಲ್ಲಿ ಒಂದು ಕಬ್ಬಿಣದ ಕೀಲಿಯೊಂದನ್ನು ಕಟ್ಟಿದನು. ಈ ಕೀಲಿಗೆ ತಂತಿಯೊಂದನ್ನು ಕಟ್ಟಿ ಭೂಮಿಯಲ್ಲಿಟ್ಟ ಕೆಪ್ಯಾಸಿಟರ್ ತರಹದ ಪಾತ್ರೆಯೊಂದಕ್ಕೆ ಜೋಡಿಸಿದನು. ಮಿಂಚಿನಿಂದ ಒದ್ದೆಯಾದ ರೇಷ್ಮೆ ದಾರದ ಮೂಲಕ ಹರಿದ ವಿದ್ಯುತ್ ಕೀಲಿ ಮತ್ತು ತಂತಿಯ ಮೂಲಕ ಕೆಪ್ಯಾಸಿಟರ್ ಗೆ ಹರಿಯಿತು ಮತ್ತು ಅದರಿಂದ ಮಿಂಚಿನಲ್ಲಿ ಇರುವುದು ಸ್ಥಾಯಿ ವಿದ್ಯುತ್ ಎಂದು ರುಜುವಾತಾಯಿತು. ['ನೆಲ್ಲಿಕಾಯಿ' ಮರದಿಂದ ಬದುಕು ಕಟ್ಟಿಕೊಂಡ ಮೈಸೂರು ದಿವಾಕರ್]

ಇಂತಹ ಅಪಾಯಕಾರಿ ಪ್ರಯೋಗದಿಂದ ಆತ ಸ್ವಲ್ಪದರಲ್ಲೇ ವಿದ್ಯುದಾಘಾತದಿಂದ ಉಳಿದುಕೊಂಡ ಎಂದು ಹೇಳಲಾಗಿದೆ. ಅಂದಿನ ಕಾಲದಲ್ಲಿ ಇದು ಒಂದು ಬಹು ದೊಡ್ಡ ಸಂಶೋಧನೆ. ಅದಲ್ಲದೇ ವಿದ್ಯುತ್‍ ಶಾಸ್ತ್ರದ ಮೇಲೆ ಅನೇಕ ಸಿದ್ಧಾಂತಗಳನ್ನು ಬರೆದು ವಿದ್ಯುತ್ ಶಾಸ್ತ್ರದ ಮೂಲ ಪ್ರವರ್ತಕರಲ್ಲೊಬ್ಬ ಎಂದು ಹೆಸರುವಾಸಿಯಾದ ಈ ಬೆಂಜಮಿನ್ ಫ್ರ್ಯಾಂಕ್ಲಿನ್. ವಿದ್ಯುತ್ ಅಲ್ಲದೇ ಬೈ ಫೋಕಲ್ ಮಸೂರಗಳು, ಗ್ಲಾಸ್ ಹಾರ್ಮೋನಿಕಾ ಎಂಬ ಸಂಗೀತದ ಉಪಕರಣ ಇತ್ಯಾದಿಗಳನ್ನು ಸಂಶೋಧಿಸಿದ ರಚನಾತ್ಮಕ ಮನುಷ್ಯ.

ಬೆಂಜಮಿನ್ ಫ್ರ್ಯಾಂಕ್ಲಿನ್ ಕೇವಲ ಸಂಶೋಧಕನಾಗಿ ಹೆಸರು ಮಾಡಲಿಲ್ಲ. ಹಲವಾರು ಪ್ರತಿಭೆಗಳ ಸಂಗಮ ಈತ. ಚೆಸ್ ಆಟ, ಈಜು ಮುಂತಾದ ಕ್ರೀಡೆಗಳಲ್ಲದೇ, ರಾಜಕೀಯ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ನಿಷ್ಣಾತನಾಗಿದ್ದ. ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಅಮೆರಿಕದ ಸ್ವಾತಂತ್ರ್ಯ ಘೋಷಣಾ ಪತ್ರವನ್ನು ಬರೆಯುವ ಐದು ಜನಗಳ ಕಮೀಟಿಯ ಸದಸ್ಯನಾಗಿದ್ದ. ಅಲ್ಲದೇ ಅವನು ಅಮೆರಿಕದ ಸ್ವಾತಂತ್ರ್ಯ ಘೋಷಣೆಗೆ ಫ್ರಾನ್ಸ್ ದೇಶದ ಬೆಂಬಲ ಪಡೆಯುವುದರಲ್ಲಿ ಸಮರ್ಥನಾದನಲ್ಲದೇ, ಬ್ರಿಟನ್‍ನೊಂದಿಗೆ ನಡೆದ ಸಂಧಾನದ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ ರಚನಾ ಮಂಡಳಿಯ ಸದಸ್ಯನೂ ಆಗಿದ್ದ. [ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್!]

ತಾನು ಸ್ವತಃ ಪದವಿ ಪಡೆಯದಿದ್ದರೂ ಕಲಿಯುವ ಇಚ್ಛೆಯುಳ್ಳ ಯುವಕರಿಗಾಗಿ ದಾನ ನೀಡುತ್ತಿದ್ದ. ಅವನ ದಾನದ ಫಲವಾಗಿ ಫಿಲಡೆಲ್ಫಿಯಾದ ಫ್ರ್ಯಾಂಕ್ಲಿನ್ ಇನ್‍ಸ್ಟಿಟ್ಯೂಟ್ ಮತ್ತು ಬೋಸ್ಟನ್‍ನ ಫ್ರಾಂಕಲಿನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಎಂಬ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿದವು. ಅಮೆರಿಕ ಅಂಚೆ ಇಲಾಖೆ ಕೂಡ ಈತನ ಪ್ರಯತ್ನಗಳ ಫಲವಾಗಿ ಬೆಳೆಯಿತು.

ತನ್ನ ಜೀವನದ ಕೊನೆಯಲ್ಲಿ ಗುಲಾಮಗಿರಿ ಪದ್ಧತಿಯ ರದ್ದತಿಗೆ ಕೂಡ ಪ್ರಯತ್ನಿಸಿದ. ಒಟ್ಟಿನಲ್ಲಿ ಬಹುಮುಖ ಪ್ರತಿಭೆಯ ಈ ಬೆಂಜಮಿನ್ ಫ್ರ್ಯಾಂಕ್ಲಿನ್‍ ಒಬ್ಬ ವ್ಯಕ್ತಿ ಮಾತ್ರ ಆಗಿರದೇ ತನ್ನ ಹತ್ತು ಹಲವು ಸಾಧನೆಗಳಿಂದ ಒಂದು ಸಂಸ್ಥೆಯಾಗಿ ಬೆಳೆದ. ವಿಶ್ವ ಕಂಡ ಅಪೂರ್ವ ವ್ಯಕ್ತಿಗಳಲ್ಲೊಬ್ಬನಾಗಿ ನಿಂತ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಹುಟ್ಟಿ ಬೆಳೆದರೂ, ತನ್ನ ಕ್ರಿಯಾಶೀಲತೆ ಮತ್ತು ರಚನಾತ್ಮಕ ಜೀವನದಿಂದ ಮೂರು ನೂರು ವರ್ಷಗಳ ನಂತರವೂ ಜನರ ಮನಸ್ಸಿನಲ್ಲಿ ನಿಂತು ಅಮರನಾಗಿದ್ದಾನೆ. [ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]

ಇವತ್ತು ಅಂದರೆ ಜನವರಿ 17, ಬೆಂಜಮಿನ್ ಫ್ರ್ಯಾಂಕ್ಲಿನ್‍ನ [ಜನವರಿ 17, 1706 - ಏಪ್ರಿಲ್ 17, 1790] ಹುಟ್ಟುಹಬ್ಬ. ಇವತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಥಾಪಕರಲ್ಲೊಬ್ಬ ಎಂದು ಹೆಸರುವಾಸಿಯಾಗಿ ಇಂದಿನ ಅದರ ವೈಭವಕ್ಕೆ ನಾಂದಿ ಹಾಡಿದ ಕಾರಣಪುರುಷರಲ್ಲೊಬ್ಬ ಈ ಬೆಂಜಮಿನ್ ಫ್ರ್ಯಾಂಕ್ಲಿನ್. ಅಮೆರಿಕ 2009ರಲ್ಲಿ ಈ ಅದ್ಭುತ ವ್ಯಕ್ತಿಯ ಚಿತ್ರವನ್ನು ತನ್ನ ನೂರು ಡಾಲರ್ ನೋಟಿನಲ್ಲಿ ಮುದ್ರಿಸಿ ತಕ್ಕ ಗೌರವವನ್ನು ನೀಡಿದೆ.

ಇಂದಿನ ಮಾಹಿತಿ ಯುಗದಲ್ಲಿ, ಸಮಾಚಾರದ ಹೆಸರಿನಲ್ಲಿ ಜನಗಳ ಮನಸ್ಸಿನಲ್ಲಿ ಕೆಲಸಕ್ಕೆ ಬಾರದ ಋಣಾತ್ಮಕ ಆಗುಹೋಗುಗಳನ್ನೇ ಬಿತ್ತುತ್ತಿರುವ ಇಂದಿನ ಸುದ್ದಿ ಸಂಸ್ಥೆಗಳು ಇಂತಹ ವ್ಯಕ್ತಿತ್ವಗಳ ಬಗ್ಗೆ ಅವರ ಕೊಡುಗೆಗಳ ಬಗ್ಗೆ ಹೆಚ್ಚು ಹೆಚ್ಚು ಬಿತ್ತರಿಸಿದರೆ ಸಮಾಜದ ಮೇಲೆ ಧನಾತ್ಮಕ ಪರಿಣಾಮ ಆಗಬಹುದಲ್ಲವೇ? ಅದೇಕೆ ಆಗುತ್ತಿಲ್ಲ ಎಂದು ಅನೇಕ ಬಾರಿ ನನ್ನಲ್ಲೇ ನಾನು ವಿಚಾರ ಮಾಡುತ್ತಿರುತ್ತೇನೆ. ಸುದ್ದಿ ಸಂಸ್ಥೆಗಳು ಈ ದಿಶೆಯಲ್ಲಿ ಸ್ವಲ್ಪವೂ ವಿಚಾರಿಸುತ್ತಿಲ್ಲವೆ? [ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

English summary
Benjamin Franklin [January 17, 1706 – April 17, 1790] was one of the Founding Fathers of the United States of America. Franklin was a renowned polymath and a leading author, printer, political theorist, politician, scientist, inventor, civic activist, statesman, and diplomat. January 17 is his birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X