ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿಕರೋ ನಾಸ್ತಿಕರೋ, ಎರಡೂ ಅಲ್ಲದ ಜಿಜ್ಞಾಸುಗಳೋ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಆಕಸ್ಮಾತ್ ಒಂದು ದಿನ ನಮ್ಮಲ್ಲಿ ಟೈಮ್ ಟ್ರಾವೆಲ್ ಮಾಡುವ ಶಕ್ತಿ ಬರುತ್ತದೆ ಎಂದಿಟ್ಟುಕೊಳ್ಳಿ. ಆಗ ನಾವು ಹದಿನೆಂಟನೇ ಶತಮಾನಕ್ಕೆ ಹೋಗಿ ಒಬ್ಬ ಸಾಧಾರಣ ಆದರೆ ವಿದ್ಯಾವಂತ ಮನುಷ್ಯನನ್ನು ನಮ್ಮೊಂದಿಗೆ ಕರೆದುಕೊಂಡು ಬಂದು ಸಿಂಗಪುರದಂತಹ ಆಧುನಿಕ ನಗರದಲ್ಲಿ ಇಟ್ಟುಕೊಂಡರೆ? ಇಂದು ನಮ್ಮಲ್ಲಿ ಬಳಕೆಯಲ್ಲಿರುವ ಆಧುನಿಕ ಸಾಮಗ್ರಿಗಳನ್ನು ನೋಡಿದರೆ ಆತನಿಗೆ ಏನೆನ್ನಿಸಬಹುದು?

ಮನೆಯಲ್ಲಿರುವ ದೊಡ್ಡ ಟೆಲಿವಿಜನ್‍ನಲ್ಲಿ ಬರುವ ಕಾರ್ಯಕ್ರಮಗಳು, ನಾವು ಮೋಬೈಲಿನಲ್ಲಿ ಮಾಡುವ ವೀಡಿಯೋ ಕರೆಗಳು, ಕಂಪ್ಯೂಟರ್ನಲ್ಲಿ ಮಾಡುವ ಕೆಲಸಗಳು, ಬಹು ಮಹಡಿ ಕಟ್ಟಡಗಳು, ಅವುಗಳಲ್ಲಿರುವ ಲಿಫ್ಟುಗಳು, ಇಲ್ಲಿಯ ಅನೇಕ ಗ್ರೀನ್ ಕಟ್ಟಡಗಳ ಮೇಲಿರುವ ಉದ್ಯಾನಗಳು ಮತ್ತು ಈಜು ಕೊಳಗಳು, ಆಫೀಸಿಗೆ ಹೋಗಿ ಬರಲು ಉಪಯೋಗಿಸುವ ಎಲೆಕ್ಟ್ರಿಕ್ ರೈಲುಗಳು, ಬಸ್ಸುಗಳು, ಬಣ್ಣ ಬಣ್ಣದ ಎಲೆಕ್ಟ್ರಾನಿಕ್ ಜಾಹೀರಾತಿನ ಬೋರ್ಡುಗಳು, ವಿದ್ಯುತ್ ಬಲ್ಬುಗಳು, ಓಡಾಡುತ್ತಿರುವ ಚಿತ್ರ ವಿಚಿತ್ರವಾದ ವಾಹನಗಳು ಇತ್ಯಾದಿಗಳನ್ನು ನೋಡಿ ಆತನಿಗೆ ಯಾವುದೋ ಕಿನ್ನರ ಲೋಕದ ಮಾಯಾನಗರಿಗೆ ಬಂದಿರುವಂತೆಯೂ ಹಾಗೂ ಆತನನ್ನು ಕರೆತಂದಿರುವ ನಾವು ಅತಿ ಮಾನವರಾದ ಯಕ್ಷರೋ ಅಥವಾ ಗಂಧರ್ವರೋ ಎನಿಸಬಹುದಲ್ಲವೇ?

Facts do not cease to exist because they are ignored

ಮಾನವ ಸಾಧಿಸಿರುವ ವೈಜ್ಞಾನಿಕ ಪ್ರಗತಿಯ ಫಲಗಳಾದ ಇಂದಿನ ಅನೇಕ ಸಾಧನಗಳನ್ನು ಇಂದಿನ ಜನಾಂಗವಾದ ನಾವು ಯಾವುದೇ ಪ್ರಶ್ನೆಗಳಿಲ್ಲದೇ ಒಪ್ಪಿಕೊಂಡು ಅನುಭವಿಸುತ್ತಿದ್ದೇವೆ. ಇದು ನಮಗೆ ಸ್ವಾಭಾವಿಕ ಎನ್ನಿಸುವದು ಸಹಜ. ಆದರೆ ಹದಿನೆಂಟನೇ ಶತಮಾನದ ಮನುಷ್ಯನು ಒಪ್ಪಿಕೊಂಡ ವಾಸ್ತವಿಕತೆಗೂ ಇಂದಿನ ವಾಸ್ತವಿಕತೆಗೂ ಅಜಗಜಾಂತರ ಅಲ್ಲವೇ? ವೈಜ್ಞಾನಿಕ ಅಭ್ಯುದಯ ವಿಶ್ವ ಹಿಂದೆಂದೂ ಕಂಡರಿಯದ ಹೊಸ ಆಯಾಮಗಳನ್ನು ಸೃಷ್ಟಿಸಿದೆ ಅಲ್ಲವೇ? ಈ ಹೊಸ ಯಥಾರ್ಥವನ್ನು ಅಥವಾ ಆಯಾಮಗಳನ್ನು ಕುರಿತು ವಿಚಾರ ಮಾಡುವುದಿರಲಿ, ಊಹಿಸುವುದೂ ಕೂಡ ಸಾಧ್ಯವಾಗದ ಆ ಮನುಷ್ಯನಿಗೆ ನಮ್ಮ ಜಗತ್ತು ನಂಬಲಾಗದ ಮಾಯೆಯೋ ಅಥವಾ ಎಲ್ಲವನ್ನೂ ಮೀರಿದ ದೇವರ ಲೋಕವೋ ಮಾತ್ರ ಆಗಿರಲು ಸಾಧ್ಯ ಅಲ್ಲವೇ?

ಇಂದು ವೈಜ್ಞಾನಿಕ ಪ್ರಗತಿ ನಮ್ಮನ್ನು ಹಿಂದೆಂದಿಗಿಂತಲೂ ಹೆಚ್ಚಿಗೆ ನಾಸ್ತಿಕತೆಯನ್ನು ಒಪ್ಪಿಕೊಳ್ಳಲು ಒತ್ತಡ ಹೇರುತ್ತದೆ. ಇಂದು ಹಿಂದಿಗಿಂತಲೂ ಹೆಚ್ಚು ನಾಸ್ತಿಕರು ಕಾಣುತ್ತಾರೆ ಮತ್ತು ಸಮಾಜದಲ್ಲಿ ಹಿಂದಿಗಿಂತಲೂ ಹೆಚ್ಚಿನ ಮನ್ನಣೆ ಪಡೆದಿದ್ದಾರೆ. ಅನೇಕ ವಿಜ್ಞಾನಿಗಳು, ಕವಿ ಮತ್ತು ಸಾಹಿತಿಗಳು, ಚಿಂತಕರು ಮತ್ತು ಇನ್ನೂ ಅನೇಕ ಮಹನೀಯರು ತಮ್ಮನ್ನು ತಾವು ನಾಸ್ತಿಕರು ಎಂದು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಇನ್ನೂ ಅನೇಕರು ತಾವು ನಾಸ್ತಿಕರೂ ಅಲ್ಲದ ಮತ್ತು ಆಸ್ತಿಕರೂ ಅಲ್ಲದ ಕೇವಲ ಜಿಜ್ಞಾಸುಗಳು (Agnostic) ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ನಮ್ಮ ಈ ನಾಸ್ತಿಕತೆಯ ವಿಚಾರ ಧಾರೆಯಲ್ಲಿ ಕೂಡ ಅವೈಜ್ಞಾನಿಕ ತೀವ್ರಗಾಮಿತ್ವ ಎದ್ದು ಕಾಣುತ್ತಲಿದೆ ಅಲ್ಲವೇ?

Facts do not cease to exist because they are ignored

ಈ ವೈಜ್ಞಾನಿಕ ಉನ್ನತಿ ನಮ್ಮಲ್ಲನೇಕರನ್ನು ಕಟ್ಟಾ ಯಥಾರ್ಥವಾದಿಗಳನ್ನಾಗಿ ಪರಿವರ್ತಿಸಿದೆ. ಇಂದು ನಮ್ಮಲ್ಲನೇಕರು ತಾವು ಕಾಣಬಲ್ಲ ಅಥವಾ ಅನುಭವಿಸಬಲ್ಲ ಪುರಾವೆಗಳಿಲ್ಲದೇ ಯಾವುದೇ ವಿಚಾರವನ್ನು ಅಥವಾ ಸಿದ್ಧಾಂತಗಳನ್ನು ತಾತ್ವಿಕವಾಗಿ ನೋಡಲು ಕೂಡ ಒಪ್ಪುವುದೇ ಇಲ್ಲ. ಒಪ್ಪುವುದು ದೂರ ಇರಲಿ, ಅರ್ಹವಾದ ಸಂಗತಿಗಳನ್ನು ಕುರಿತು ಚರ್ಚೆಗೆ ಕೂಡ ಇಂತಹ ತೀವ್ರಗಾಮಿ ವೈಜ್ಞಾನಿಕ ಮನೋಭಾವನೆ ಅಡೆತಡೆಯುಂಟು ಮಾಡುತ್ತಿದ್ದಾರೆ. ಅವರ ಈ ನಾವೇ ಸರಿ ಎಂಬುವ ಮನೋಭಾವ ಒಟ್ಟಾರೆ ಸಮಾಜದ ಅಧ್ಯಾತ್ಮಿಕ ಪ್ರಗತಿಗೆ ಬಾಧಕವಾಗಿ ನಿಲ್ಲುತ್ತಿದೆ ಎಂದೆನಿಸುತ್ತದೆ.

ಒಂದೆಡೆ ವೈಜ್ಞಾನಿಕ ಪ್ರಗತಿ ನಮ್ಮ ವೈಚಾರಿಕ ಜಗತ್ತನ್ನು ನಾವೇ ಹಾಕಿಕೊಂಡ ಧಾರ್ಮಿಕ ಸಂಕೋಲೆಗಳಿಂದ ಮುಕ್ತಗೊಳಿಸಿ ನಮ್ಮನ್ನು ಹೊಸ ವೈಚಾರಿಕ ಪ್ರಗತಿಯತ್ತ ಸಾಗುವಂತೆ ಮಾಡಿದರೆ, ಇನ್ನೊಂದೆಡೆ ಅದೇ ವೈಜ್ಞಾನಿಕ ಪ್ರಗತಿ ತೀವ್ರಗಾಮಿ ಸ್ವರೂಪವನ್ನು ಪಡೆದು, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಪ್ರಗತಿಗೆ ತಡೆ ಹಾಕುವ ಆಪತ್ತಾಗಿ ಪರಿಣಮಿಸುತ್ತಿದೆ. ಇಲ್ಲಿ ನಾನು ವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್‍ರನ್ನು ಉಲ್ಲೇಖಿಸುತ್ತೇನೆ "ಅಧ್ಯಾತ್ಮವಿಲ್ಲದ ವಿಜ್ಞಾನ ಹೆಳವನಾದರೆ, ವಿಜ್ಞಾನವಿಲ್ಲದ ಅಧ್ಯಾತ್ಮ ಕುರುಡು". ಅಲ್ಬರ್ಟ್ ಐನ್‍ಸ್ಟೈನ್‍ರಂತಹ ಕ್ರಾಂತಿಕಾರಿ ವಿಜ್ಞಾನಿ ಹೀಗೆ ಹೇಳಬೇಕೆಂದರೆ ಅದೆಲ್ಲೋ ಅವರಿಗೆ ವಾಸ್ತವಿಕ ವಿಜ್ಞಾನವನ್ನು ಮೀರಿ ನಿಂತ ಅಲೌಕಿಕ ಅನುಭವವಾಗಿರಬೇಕಲ್ಲವೇ? ಅವರು ಬರೆದ "What I believe" ಎಂಬ ಬರಹದಲ್ಲಿ ಹೀಗೆ ಹೇಳುತ್ತಾರೆ.

Facts do not cease to exist because they are ignored

"The most beautiful emotion we can experience is mysterious. It is the fundamental emotion that stands at the cradle of all true art and science. He to whom this emotion is stranger, who can no longer wonder and stand rapt in awe, is as good as dead, a snuffed-out candle. To sense that behind anything that can be experienced there is something that our minds can not grasp, whose beauty and sublimity reaches us only indirectly; this is religiousness. In this sense and in this sense only, I am devoutly religious man."

ಐನ್‍ಸ್ಟೈನ್‍ರಂತಹ ಮಹಾನ್ ಮೇಧಾವಿ ವಿಜ್ಞಾನಿ ಕೂಡ ಅಲೌಕಿಕ ಅನುಭವಗಳನ್ನು ಮತ್ತು ಮಾನವನ ಭೌತಿಕ ಅನುಭವಗಳ ಇತಿಮಿತಿಗಳನ್ನು ಒಪ್ಪಿಕೊಂಡಿದ್ದರೆಂದ ಮೇಲೆ, ನಮ್ಮ ಅನೇಕ ತೀವ್ರಗಾಮಿ ನಾಸ್ತಿಕ ಬುದ್ಧಿವಾದಿಗಳ ಅತಿರೇಕದ ಅಲ್ಲಗಳೆತಗಳಿಂದ ನಮ್ಮ ಅಧ್ಯಾತ್ಮಿಕ ಹುಡುಕಾಟವನ್ನು ನಿಲ್ಲಿಸಬಹುದೇ ಅಥವಾ ಇತರರ ಅಧ್ಯಾತ್ಮಿಕ ಅನುಭವಗಳನ್ನು ಹೀಗಳೆಯಬಹುದೇ? ಇದರ ಅರ್ಥ ಧಾರ್ಮಿಕ ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಕುರುಡಾಗಿ ನಂಬುವುದು ಎಂತಲ್ಲ. ಆದರೆ ಸತ್ಯವನ್ನು ಕುರಿತಾದ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಚಾರಗಳಿಗೆ ಆಸ್ಪದ ಕೊಡುವಂತೆ ಅಧ್ಯಾತ್ಮಿಕ ವಿಚಾರಗಳಿಗೆ ಕೂಡ ಆಸ್ಪದ ಕೊಡುವುದು.

Facts do not cease to exist because they are ignored

ಮನೋ ವಿಜ್ಞಾನಿ ಸ್ಟಾನಿಸ್ಲಾವ್ ಗ್ರೋಫ್ ಹೇಳುವಂತೆ, ಇಂದಿನ ಅನೇಕ ಭೌತ ಶಾಸ್ತ್ರಜ್ಞರು ತಮ್ಮ ದೊಡ್ಡದಾದ ಟೆಲಿಸ್ಕೋಪುಗಳಲ್ಲಿ ದೂರದ ಲೋಕದಲ್ಲೆಲ್ಲೋ ದೇವರನ್ನೋ ಅಥವಾ ದೇವದೂತರನ್ನೋ ಕಂಡಿರದೇ ಇರುವದು ಅವರ ಇರುವಿಕೆಯನ್ನು ಅಲ್ಲಗಳೆಯಲು ಬೇಕಾಗುವ ತಕ್ಕ ಸಾಕ್ಷಿ ಅಲ್ಲ. ಎಲ್ಲದಕ್ಕೂ ನಮ್ಮ ಸೀಮಿತ ಭೌತಿಕ ಅನುಭವ ತಕ್ಕ ಸಾಕ್ಷಿಯನ್ನು ಒದಗಿಸುವುದು ಸಾಧ್ಯವಿಲ್ಲ. ನಮ್ಮ ಭೌತಿಕ ಸಾಮರ್ಥ್ಯಕ್ಕೆ ಮೀರಿದ ಅಲೌಕಿಕ ಸಂಗತಿಗಳಿರಬಹುದು ಎಂಬುದನ್ನು ಒಪ್ಪಿಕೊಂಡರೆ ಮಾತ್ರ ಸತ್ಯ ಶೋಧನೆಯ ಮಾರ್ಗದಲ್ಲಿ ಯಾವ ಬಗೆಯ ಅಡತಡೆಗಳು ಇಲ್ಲದಾಗುತ್ತವೆ.

ಇಲ್ಲದಿದ್ದರೆ ಕೇವಲ ನಮ್ಮ ದೇವರು/ಮತ ಮಾತ್ರ ಸತ್ಯ ಎಂದು ಹೇಳಿಕೊಳ್ಳುವ ತೀವ್ರಗಾಮಿ ಆಸ್ತಿಕನಿಗೂ ಮತ್ತು ಅದೇ ರೀತಿ ಎಲ್ಲವೂ ನಮ್ಮ ಭೌತಿಕ ಅನುಭವಕ್ಕೆ ಬಂದರೆ ಮಾತ್ರ ಸತ್ಯ ಎಂದು ಎದೆ ತಟ್ಟಿಕೊಳ್ಳುವ ನಾಸ್ತಿಕನಿಗೂ ಯಾವುದೇ ವ್ಯತ್ಯಾಸ ಇಲ್ಲ. ಇಬ್ಬರೂ ಎರಡು ವಿಪರೀತ ವಾದಗಳ ತೀವ್ರ ಬೆಂಬಲಿಗರು ಮತ್ತು ವಿಚಾರವಾದದ ಸ್ವತಂತ್ರ್ಯಕ್ಕೆ ಅಡೆತಡೆಯುಂಟು ಮಾಡುವವರು ಅಷ್ಟೇ. ಮನುಷ್ಯನ ವೈಚಾರಿಕತೆಗೆ ಸಮತೋಲನ ತರಬೇಕಾದರೆ ಈ ಎರಡೂ ವೈಪರೀತ್ಯಗಳನ್ನು ದೂರ ಇಟ್ಟು ಮುಕ್ತ ಮನಸ್ಸಿನಿಂದ ಸತ್ಯಾನ್ವೇಷಣೆಗೆ ತೊಡಗಬೇಕಲ್ಲವೇ?

English summary
The most beautiful emotion we can experience is mysterious. It is the fundamental emotion that stands at the cradle of all true art and science. He to whom this emotion is stranger, who can no longer wonder and stand rapt in awe, is as good as dead, a snuffed-out candle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X