ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ರೇಡಿಯೋದಲ್ಲಿ ತೇಲಿ ಬರುತ್ತಿದ್ದ ಹಾಡು ನೆನಪಿದೆಯಾ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಆಕಾಶ ಗಂಗಾ, ಸೂರ್ಯ ಚಂದ್ರ ತಾರಾ
ಸಂಧ್ಯಾ ಉಷಾರಾ ಕೋಯಿ ನಾನಥೀ
ಕೋನಿ ಭೂಮಿ ಕೋನಿ ನದೀ ಕೋನಿ ಸಾಗರ ಧಾರಾ
ಭೀಡ ಕೇವಲ ಶಬ್ದ ಅಮಾರಾ ತಮಾರಾSSS

ಎಂಬ ಹಾಡು ರೇಡಿಯೋದಲ್ಲಿ ಕೇಳಿ ಬಂದಾಗಲೆಲ್ಲ ನಾನು ರೇಡಿಯೋಕ್ಕೆ ಕಿವಿ ಹಚ್ಚಿ ಕೂಡುತ್ತಿದ್ದೆ. ಹಾಡಿನ ಅರ್ಥ ಸಂಪೂರ್ಣವಾಗಿ ತಿಳಿಯುತ್ತಿರಲಿಲ್ಲ. ಆದರೂ ಈ ಗೀತೆಯ ಸುಮಧುರ ಸಂಗೀತ ಮತ್ತು ಸುಂದರ ಶಬ್ದಗಳು ನನ್ನನ್ನು ಕಲ್ಪನಾ ಲೋಕಕ್ಕೆ ಯಶಸ್ವಿಯಾಗಿ ಕರೆದೊಯ್ಯುತ್ತಿದ್ದವು. ಅಲ್ಲಿ ರೇಡಿಯೋ ಈ ಹಾಡನ್ನು ಅಲೆ ಅಲೆಯಾಗಿ ಪ್ರಸಾರ ಮಾಡುತ್ತಿದ್ದಂತೆ ಗರಿಗೆದರುವ ನನ್ನ ಬಾಲ್ಯದ ಮನಸ್ಸು ಬಂಗಾರದ ಪುಷ್ಪಕ ವಿಮಾನವಾಗಿ ನನ್ನನ್ನು ವ್ಯೋಮಲೋಕಕ್ಕೆ ಕರೆದೊಯ್ಯುತ್ತಿತ್ತು. ಗುಜರಾತಿ ಭಾಷೆಯ ಈ ಗೀತೆ ಕೇಳಿ ಕೇಳಿ ಮತ್ತು ಸ್ವಗತದಲ್ಲೇ ಹಾಡಿ ಹಾಡಿ ನನಗೆ ಕಂಠ ಪಾಠವಾಗಿ ಬಿಟ್ಟಿತ್ತು.

Do you remember olden golden community songs

ಮತ್ತೊಂದು ಮಂಜುಳ ಗೀತೆ, ಬಂಗಾಲಿ ಭಾಷೆಯದು ಎಂದು ಆಗ ನನಗೆ ಗೊತ್ತಿರಲಿಲ್ಲ, ಆದರೆ ನನ್ನ ಮನಸ್ಸನ್ನು ಸೆರೆ ಹಿಡಿದಿತ್ತು.

ಧನಾ ಧಾನ್ಯಾ ಪುಷ್ಪ ಭರಾ, ಆಮಾದೆರ್ ಯೀ ಬಶುಂಧರಾ
ತಾಹರ್ ಮಾಝೇ ಅಚ್ಚೇ ದೇಶ್ ಎಕ್, ಶೋಕೊಲ್ ದೇಶೇರ್ ಶೇರಾ
ಓ ಶೇಯ್ ಜೇ ಶೊಪ್ನೋ ದಿಯೇ ತೊಯಿರಿಮ್ ಶೇಯ್ ಜೇ ಸ್ಮೃತಿ ದಿಯೆ ಘೇರಾ
ಇಮೋನ್ ದೇಷ್ಟಿ ಕೋಥಾಓ ಖೂಂಜೆ ಪಾಬೇ ನಾಕೋ ತುಮಿ
ಶೋಕೋಲ್ ದೇಶೇರ್ ರಾನಿ ಶೇಯ್ ಜೆ ಆಮಾರ್ ಜನ್ಮ ಭೂಮೀ
ಜೈ ಜೈ ಅಮಾರ್ ಜನ್ಮ ಭೂಮಿ, ಜೈ ಜೈ ಅಮಾರ್ ಜನ್ಮ ಭೂಮಿ

ದ್ವಿಜೇಂದ್ರಲಾಲ್ ರೇ ಅವರು ಬರೆದ ಈ ಗೀತೆಯಲ್ಲಿ ಅಂದು "ಜೈ ಜೈ ಅಮಾರ್ ಜನ್ಮ ಭೂಮಿ" ಎಂಬ ವಾಕ್ಯ ಮಾತ್ರ ಅರ್ಥವಾಗುತ್ತಿತ್ತಾದರೂ, ಈ ಗೀತೆಯ ದಿವ್ಯ ಗಂಭೀರತೆಯಲ್ಲಿ ಅಡಕವಾಗಿರುವ ರಾಷ್ಟ್ರಪ್ರೇಮ ನಮ್ಮಲ್ಲಿ ಸುಪ್ತವಾಹಿನಿಯಾದ ದೇಶ ಭಕ್ತಿಯನ್ನು ಬಡಿದೆಬ್ಬಿಸುತ್ತಿತ್ತು. ಈ ಗೀತೆ ಬಂಗಾಲಿ ಜನರಿಗೆ ಪೂಜನೀಯ ಗೀತೆಯಂತೆ. ನಾವು ಕನ್ನಡಿಗರಿಗೆ "ಜಯ ಭಾರತ ಜನನಿಯ ತನುಜಾತೆ" ಹೇಗೋ ಹಾಗೆ.

ಮತ್ತು ಅಂದು ಬಹಳ ಜನಪ್ರಿಯವಾದ ಹಾಡುಗಳಾದ,
ಓಡಿ ವಿಲೈಯಾಡು ಪಾಪಾ, ನೀ ಒಯಿಂದಿರುಕ್ಕಲಾಗಾದು ಪಾಪಾ
ಕೂಡಿ ವಿಲೈಯಾಡು ಪಾಪಾ, ಒರು ಕುಜಂದೈಯೈ ವೈಯಾಡೆ ಪಾಪಾ

ಎಂಬ ಹಾಡು ಮತ್ತು

ಪಿಲ್ಲಲ್ಲಾರಾSSS ಪಾಪಲ್ಲಾರಾSSS
ರೇಪಟಿ ಭಾರತ ಪೌರುಲ್ಲಾರಾSSS
ಪೆದ್ದಲಿಕೆ ಒಕ್ಕ ಧಾರಿಣಿ ಛೂಪೇ ಪಿಲ್ಲಲ್ಲಾರಾSSS ಪಿಲ್ಲಲ್ಲಾರಾSSS

ಅಲ್ಲದೇ

ಜನ್ಮಕಾರಿಣಿ ಭಾರತಂSSS ಕರ್ಮಮೇಧಿನಿ ಭಾರತಂSSS
ನಮ್ಮಲಂ ಜನ ಕೋಡಿಕಲ್ ತನ ಅಮ್ಮಯಾಕಿಯ ಭಾರತಂ

ಎಂಬ ಹಾಡುಗಳಲ್ಲಿ ಯಾವುದು ಯಾವ ಭಾಷೆಯ ಹಾಡು ಎಂದು ತಿಳಿಯದೇ ಇದು ತೆಲುಗು, ಅದು ತಮಿಳು ಮತ್ತು ಇದು ಮಲೆಯಾಳಿ ಎಂದು ಊಹೆ ಮಾಡುವ ಸ್ಪರ್ಧೆ ನಮ್ಮ ನಮ್ಮಲ್ಲೇ ಏರ್ಪಡುತ್ತಿತ್ತು. "ಓಡಿ ವಿಲೈಯಾಡು ಪಾಪಾ" ಎಂಬ ಹಾಡು ತಮಿಳು ಭಾಷೆಯ ಮಹಾನ್ ಕವಿ ಶ್ರೀ ಸುಬ್ರಹ್ಮಣ್ಯ ಭಾರತೀ ಅವರ ಮೇರು ಕೃತಿ ಎಂದು ತಿಳಿದು ಬಂದಿದ್ದು ತೀರ ಇತ್ತೀಚೆಗೆ.

ಅದೇ ಸಮಯದಲ್ಲಿ ನಾನು ಕಲಿತ ಸಂಸ್ಕೃತ ದೇಶ ಭಕ್ತಿ ಗೀತೆಯಾದ...

ಜೈ ಜಯಹೇ ಭಗವತಿ ಸುರ ಭಾರತೀ
ತವ ಚರಣಂ ಪ್ರಣಮಾಮಃ
ನಾದ ಬ್ರಹ್ಮಮಯೀ ಜಯ ವಾಗೇಶ್ವರಿ
ಶರಣಂ ತೇ ಗಚ್ಛಾಮಃ

ಎಂಬ ಹಾಡನ್ನು ಸ್ಕೂಲು, ಕಾಲೇಜಿನ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಗೀತೆ ಎಂದು ಎಷ್ಟೊ ಬಾರಿ ನನ್ನಿಂದ ಹಾಡಿಸಿದ್ದು ನನಗೆ ಹೆಮ್ಮೆಯ ವಿಷಯವಾಗಿತ್ತು.

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ರೇಡಿಯೋದಲ್ಲಿ ಸಮುದಾಯ ಗೀತೆ ಎಂಬ ಸಮೂಹ ಗಾಯನ ಕಾರ್ಯಕ್ರಮದಲ್ಲಿ ಮೂಡಿ ಬರುತ್ತಿದ್ದ, ಅತೀತವನ್ನು ಮತ್ತೆ ಮತ್ತೆ ನೆನಪು ತರುವ ಗೀತೆಗಳು ನನ್ನಂತೇ ಅನೇಕ ಬಾಲ ಮತ್ತು ಯುವ ಜನರನ್ನು ಆಕರ್ಷಿಸಿ ದೇಶ ಭಕ್ತಿಯತ್ತ ಮತ್ತು ನಮ್ಮ ದೇಶದ ವೈವಿಧ್ಯ ಭಾಷೆ, ಸಂಸ್ಕೃತಿಗಳತ್ತ ಗಮನ ಸೆಳೆದಿರಬಹುದು.

ಬೇರೆ ಭಾಷೆಯ ಈ ಗೀತೆಗಳು ನಮಗೆ ಬೇರೆಯವು ಎಂದು ಎಂದೂ ಅನಿಸಲೇ ಇಲ್ಲ. ಇವೆಲ್ಲ ನಮ್ಮವೇ, ನಮ್ಮ ದೇಶಕ್ಕೆ ಸೇರಿದ ಭಾವದ ಅದ್ಭುತ ಕಿಡಿಗಳೇ ಎಂಬ ಆತ್ಮೀಯತೆ ಮೂಡಿ ಬರುತ್ತಿತ್ತು. ಈ ಗೀತೆಗಳಿಂದ ದೂರದ ಬಂಗಾಲಿ, ಗುಜರಾತಿ, ತಮಿಳು, ತೆಲುಗು, ಮಲೆಯಾಳಿ ಮುಂತಾದ ಭಾಷೆಗಳು ನಮಗೆ ತಿಳಿಯದೆಯೇ ಹತ್ತಿರವಾದವು.

ಅಂದು ಕೇಳಿ ಬರುತ್ತಿದ್ದ ಕನ್ನಡದ ಗೀತೆ...

ಚೆಲುವಿನ ಮುದ್ದಿನ ಮಕ್ಕಳೇ ಓ ಚೆಲುವಿನ ಮುದ್ದಿನ ಮಕ್ಕಳೇ
ಮನೆ ಮನೆಯ ಅಂಗಳದೀ ಅರಳಿರುವಾ ಹೂವುಗಳೇ
ನಾಳೆ ದಿನ, ನಾಡಿದಿನು ನಡೆಸುವರು ನೀವುಗಳೇ

ಇನ್ನೂ ಅನೇಕರಿಗೆ ನೆನಪಿರಬಹುದಲ್ಲವೇ? ನಮಗೆ ಬಂಗಾಲಿ, ಗುಜರಾತಿ ಮುಂತಾದ ಗೀತೆಗಳು ಆಪ್ತವಾದಂತೆ ಭಾರತದ ವಿವಿಧ ರಾಜ್ಯಗಳ ಜನರಿಗೆ ನಮ್ಮ ಈ ಕನ್ನಡ ಹಾಡು ಆಪ್ತವಾಗಿರಬಹುದಲ್ಲವೇ?

ಇಂದಿನ ಪಾಪ್ಯುಲರ್ ಎನಿಸಿಕೊಂಡ ಎಷ್ಟೋ ಹಾಡುಗಳು ತಮ್ಮ ಮೋಹಕ ಲಹರಿಯಿಂದ ತಾತ್ಕಾಲಿಕವಾಗಿ ಮನಸೆಳೆದರೂ ಮರೆತು ಹೋಗುತ್ತವೆ. ಆರ್ಭಟ ಮತ್ತು ಅಬ್ಬರಗಳ ಭರಾಟೆಯಿಂದ ಸಂಗೀತ ಕೂಡ ಅರೆಕಾಲಿಕ ಖಯಾಲಿಯಾಗಿಬಿಟ್ಟಿದೆ. ಗೀತೆಗಳ ಶಬ್ದಗಳಲ್ಲಿ ಭಾವದ ಹದವಾದ ಮಿಶ್ರಣ ಇಲ್ಲದಿರುವುದರಿಂದ ಅವು ಕೂಡ ಹೃದ್ಯವಾಗದೇ ಎಲ್ಲೋ ಮೇಲ್ಪದರಲ್ಲೇ ಸ್ವಲ್ಪಕಾಲ ವಿಜೃಂಭಿಸಿ ತಮ್ಮನ್ನು ಹೊತ್ತು ತಂದ ಕೋಲಾಹಲದ ಸಂಗೀತದೊಡನೆ ಮಿಂಚಿ ಮಾಯವಾಗಿ ಬಿಡುತ್ತವೆ.

ಈ ಸರಳ ಸಮುದಾಯ ಗೀತೆಗಳಂತೆ ಕಾಲದ ಹೊಡೆತವನ್ನು ತಡೆದು ಜನರ ಹೃದಯದಲ್ಲೆಲ್ಲೋ ಉಳಿದುಕೊಳ್ಳುವಂತಹ ಗೀತೆಗಳೇಕೆ ಇಂದು ಕೇಳಿಬರುತ್ತಿಲ್ಲ ಎಂಬ ನೋವುಂಟಾಗುತ್ತದೆ. ಜನರ ಭಾವ ತರಂಗಗಳನ್ನು ಮೀಟುವ ಸಮುದಾಯ ಗೀತೆಗಳನ್ನು ನೀಡಿದ ಆಲ್ ಇಂಡಿಯಾ ರೇಡಿಯೋ ಅಂದು ಮಾಡಿದ ಈ ಕ್ರಾಂತಿ, ಚಿಕ್ಕ ಪುಟ್ಟದಕ್ಕೆಲ್ಲಾ ರಾಜಕೀಯ ಮಾಡಿಕೊಂಡು ಹೊಡೆದಾಡುತ್ತಿರುವ ನಮ್ಮ ಭಾರತದ ಜನರಿಗೆ, ಜನಸಮುದಾಯಕ್ಕೆ, ರಾಜ್ಯಗಳಿಗೆ, ಒಟ್ಟಾರೆ ದೇಶಕ್ಕೆ ಇಂದಿಗೂ ಪ್ರಸ್ತುತ ಎನಿಸುವುದಿಲ್ಲವೇ?

ಇಂತಹ ಸಂಗೀತ ಮತ್ತು ಗೀತೆಗಳ ಕೊಡುಕೊಳ್ಳುವಿಕೆಯಿಂದ ದೇಶದ ಜನರಲ್ಲಿ ನಮ್ಮಲ್ಲಿರುವ ವೈವಿಧ್ಯತೆಯ ಶ್ರೀಮಂತಿಕೆಯ ಅರಿವಾಗಿ ನಮ್ಮನ್ನು ದೂರಮಾಡುವುದರ ಬದಲು ಇನ್ನೂ ಹೆಚ್ಚು ಹತ್ತಿರ ತರಬಹುದೇ? ಇಂತಹ ಸಾಂಸ್ಕೃತಿಕ ಪ್ರಯೋಗಗಳೇಕೆ ಅಲ್ಲಿಯೇ ನಿಂತು ಹೋದವು? ಈ ದಿಶೆಯಲ್ಲಿ ನಾವು ಮತ್ತೊಮ್ಮೆ ಯಶಸ್ವಿಯಾಗಬಲ್ಲೆವೇ? ಈ ರೀತಿಯ ವಿಚಾರ ಬಂದಾಗಲೆಲ್ಲ ನಾನು ಈ ಕೆಳಗಿನ ಸಮುದಾಯ ಗೀತೆಯನ್ನು ನೆನೆಯುತ್ತೇನೆ:

"ಹೋಂಗೆ ಕಾಮಯಾಬ್, ಹಮ್ ಹೋಂಗೆ ಕಾಮಯಾಬ್
ಹೋಂಗೆ ಕಾಮಯಾಬ್ ಏಕ ದಿನ್
ಓ ಹೋ ಮನ್ ಮೇ ಹೈ ವಿಶ್ವಾಸ್
ಪೂರಾ ಹೈ ವಿಶ್ವಾಸ್
ಹಮ್ ಹೋಂಗೆ ಕಾಮಯಾಬ್ ಏಕ ದಿನ್"

English summary
Do you remember olden golden community songs? Every green community songs of yesteryears used to bring all the languages, people together. The listeners loved every song telecast in the radio. Unfortunately the radio and melody is dying. Vasant Kulkarni recalls the golden era songs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X