ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾರ್ಥ ಮೀರಿದ ದೇಶಪ್ರೇಮವಿದ್ದರೆ ಮಾತ್ರ ಇಂಥ ಅದ್ಭುತ ಸಾಧ್ಯ!

By ವಸಂತ ಕುಲಕರ್ಣಿ
|
Google Oneindia Kannada News

ನಾನು ಜಪಾನಿಗೆ ಮೊದಲು ಹೋಗಿದ್ದು 2001ರ ಏಪ್ರಿಲ್‍ನ ಕೊನೆಯಲ್ಲಿ. ಅದು ನನ್ನ ಮೊಟ್ಟ ಮೊದಲ ವಿದೇಶಿ ಅನುಭವ ಕೂಡ. ಆಫೀಸಿನ ಕೆಲಸಕ್ಕೆಂದು ಸುಮಾರು ಮೂರು ತಿಂಗಳ ಮಟ್ಟಿಗೆ ಹೋಗಿದ್ದ ನಾನು ಕೇಳಿದ ಮೊಟ್ಟ ಮೊದಲ ಮಾತೆಂದರೆ "ಅಯ್ಯೋ ನೀವು ಇನ್ನೂ ಸ್ವಲ್ಪ ಮೊದಲೇ ಬಂದಿದ್ದರೆ ಚೆರಿ ಬ್ಲಾಸಮ್ ಅನ್ನು ನೋಡ ಬಹುದಾಗಿತ್ತು. ಸ್ವಲ್ಪದರಲ್ಲೇ ತಪ್ಪಿಸಿಕೊಂಡಿರಿ" ಎಂಬುದು.

ಹೀಗೆ ಮಾತಾಡಿದವರು ನನಗಿಂತಲೂ ಮೊದಲೇ ಹೋಗಿದ್ದ ನನ್ನ ಆಫೀಸಿನ ಸಹೋದ್ಯೋಗಿಗಳು. ನನಗೋ ಚೆರಿ ಬ್ಲಾಸಮ್ ಎಂದರೇನೆಂದು ಕೂಡ ತಿಳಿದಿರಲಿಲ್ಲ. ನನ್ನ ಮಿತ್ರರ ಚೆರಿ ಬ್ಲಾಸಮ್‍ನ ಮನಮೋಹಕ ಛಾಯಾ ಚಿತ್ರಗಳನ್ನು ನೋಡಿದ ಮೇಲೆ ನನಗೂ ಕೂಡ ಹಾಗೆನ್ನಿಸಿತು. ಮನಸ್ಸಿನಲ್ಲಿ ಎಲ್ಲೋ ಒಂದು ಹಂಬಲ ಮೂಡಿತು. ಒಂದು ಬಾರಿ ಜಪಾನಿಗೆ ಚೆರಿ ಬ್ಲಾಸಮ್ ನೋಡಲು ಹೋಗಬೇಕು ಎನಿಸಿತು. ಆದರೆ ಎಲ್ಲ ಹಂಬಲಗಳು ಯಾವಾಗಲೂ ಪೂರೈಸುವುದಿಲ್ಲ ಅಲ್ಲವೇ? ನಂತರ ಕೂಡ ಜಪಾನಿಗೆ ಹೋಗುವ ಅವಕಾಶ ಒಮ್ಮೆ ಒದಗಿ ಬಂತಾದರೂ, ಅದು ಬೇಸಿಗೆಯಲ್ಲಿ, ಚೆರಿ ಬ್ಲಾಸಮ್‍ನ ಕಾಲ ಮುಗಿದು ಎರಡು ತಿಂಗಳ ನಂತರ.[ಮುದುಡಿದ ಮನ ಅರಳಿಸುವ ಬೆಳಗಾವಿಯ ಕಮಲ ಬಸದಿ]

Cherry blossom at Gardens by the Bay in Singapore

ಕಳೆದ ವರ್ಷ ನನ್ನ ಆತ್ಮೀಯ ಮಿತ್ರರೊಬ್ಬರಿಗೆ ಜಪಾನ್‍ನಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು. ಹೋಗುವಾಗ ಅವರೂ "ಇದೇ ವರ್ಷದ ಮಾರ್ಚ್ ಅಥವಾ ಏಪ್ರಿಲ್‍ನ ಚೆರಿ ಬ್ಲಾಸಮ್ ಕಾಲದಲ್ಲಿ ಬನ್ನಿ ಎಲ್ಲರೂ ಸೇರಿ ನೋಡಲು ಹೋಗುವಾ" ಎಂದು ಹೇಳಿದ್ದರು. ಮಕ್ಕಳ ಪಾಠ, ಪರೀಕ್ಷೆ ಇತ್ಯಾದಿಗಳ ಗಡಿಬಿಡಿಯಲ್ಲಿ ನಮಗೆ ಹೋಗಲಾಗಲಿಲ್ಲ. ಮುಂದಿನ ವರ್ಷ ಹೋಗಬೇಕು ಎಂದುಕೊಂಡರೆ ನನ್ನ ಆ ಸ್ನೇಹಿತ ಭಾರತಕ್ಕೆ ಮರಳಿ ಬಿಡಬೇಕೇ?

ಆದರೆ ಅದೇ ಚೆರಿ ಬ್ಲಾಸಮ್‍ಅನ್ನು ಸಿಂಗಪುರದಲ್ಲಿಯೇ ನೋಡುವ ಅವಕಾಶ ದೊರಕಿದರೆ? "ಇದೇನು ಸ್ವಾಮಿ? ಎಲ್ಲಿಯ ಜಪಾನ್! ಎಲ್ಲಿಯ ಸಿಂಗಪುರ! ಸಿಂಗಪುರದ ಬಿಸಿಲು ಮತ್ತು ಸೆಕೆಯ ಸಮಭಾಜಕ ವೃತ್ತದ ಹವಾಮಾನದಲ್ಲಿ, ತಂಪು ಹವೆಯ ಜಪಾನ್‍ನ ಚೆರಿ ಬ್ಲಾಸಮ್ ಎಲ್ಲಿಯದು" ಎನ್ನುತ್ತೀರಾ? ಆದರೆ ಸಿಂಗಪುರದ ರಚನಾತ್ಮಕತೆಯ ಪ್ರತೀಕವಾದ "Gardens by the Bay"ನಲ್ಲಿರುವ "Flower Dome" ಇಂತಹ ಅದ್ಭುತ ಅವಕಾಶವನ್ನು ಒದಗಿಸಿತು.[ಅಂದು ರೇಡಿಯೋದಲ್ಲಿ ತೇಲಿ ಬರುತ್ತಿದ್ದ ಹಾಡು ನೆನಪಿದೆಯಾ?]

Cherry blossom at Gardens by the Bay in Singapore

ಜಪಾನ್‍ಗೆ ಹೋಗದಿದ್ದರೇನಾಯಿತು? ಜಪಾನ್ ಇಲ್ಲಿಯೇ ಬಂದಿಳಿದರೆ? ಬಹು ದಿನದ ನನ್ನ ಹಂಬಲ ಹೆಚ್ಚೇನು ಶ್ರಮವಿಲ್ಲದೇ ಈಡೇರಿದರೇ, ಇನ್ನೇನು ಬೇಕು? ನೋಡಲು ನಾನು ಮತ್ತು ನನ್ನ ಪತ್ನಿ ಹೋದೆವು. ಅಲ್ಲಿ ನೋಡಿದರೆ ಅಚ್ಚ ಬಿಳಿ, ಅಚ್ಚ ಗುಲಾಬಿ ಮತ್ತು ಅವುಗಳ ನಡುವಿನ ಎಲ್ಲ ಛಾಯೆಗಳ ಚೆರಿ ಹೂವುಗಳಿದ್ದವು. ಚೆರಿ ಹೂವುಗಳ ಪ್ರಾಕೃತಿಕ ರಂಗುಗಳ ಬಣ್ಣದ ಓಕುಳಿ ಅಲ್ಲಿ ಚೆಲ್ಲಿ ಹರಿದು ಅವುಗಳ ಕಂಪಿನ ಘಮಘಮದ ಅಮಲು ಅಲ್ಲೆಲ್ಲ ಹರಡಿ ನೋಡಲು ಬಂದ ಜನರನ್ನು ಮಂತ್ರ ಮುಗ್ಧರನ್ನಾಗಿಸಿತ್ತು.

ಎಲ್ಲಿ ನೋಡಿದರೂ ಸಂತಸದ ಮುಗುಳ್ನಗೆಗಳೇ. ಎತ್ತ ನೋಡಿದರೂ ಫೋಟೋ ಕ್ಲಿಕ್ಕಿಸುವವರೇ. ತಮ್ಮ ಮಡದಿಯನ್ನೋ, ಮಕ್ಕಳನ್ನೋ, ತಂದೆ ತಾಯಿಯರನ್ನೋ ಹೂವುಗಳ ನಡುವೆ ನಿಲ್ಲಿಸಿ ಫೋಟೋಗಳನ್ನು ತೆಗೆದುಕೊಂಡಿದ್ದೇ ತೆಗೆದುಕೊಂಡಿದ್ದು. ಬಿಳಿ, ಗುಲಾಬಿ ಬಣ್ಣದ ಹೂಗಳ ನೈಸರ್ಗಿಕ ಮುಗುಳ್ನಗೆಯಲ್ಲಿ ತಮ್ಮ ಲವಲವಿಕೆಯ ನಗುವನ್ನು ಹರಡಿ ನೆನಪಿನ ಪಾರಿಜಾತಗಳನ್ನು ಬಾಚಿಕೊಳ್ಳುತ್ತಿರುವ ಜೀವಿಗಳ ಧನ್ಯತೆಯ ಅಗಾಧತೆ ನನಗೆ ಅಲ್ಲಿ ಕಂಡುಬಂದಿದ್ದು.

Cherry blossom at Gardens by the Bay in Singapore

ನನಗೆ ನೆನಪಾಗಿದ್ದು ಕೆಎಸ್ ನರಸಿಂಹ ಸ್ವಾಮಿಗಳ ಈ ಸಾಲುಗಳು:
"ಬುಟ್ಟಿಯಲಿ ನೂರಾರು ಮಲ್ಲಿಗೆಯ ದಂಡೆಗಳು
ನಗುವ ಚೆಲ್ಲಿದುವೆನ್ನ ಮುಖವ ಕಂಡು
ಅಲ್ಲಲ್ಲಿ ಮಲ್ಲಿಗೆಯ ನಡುನಡುವೆ ಸಂಪಗೆಯ
ಪಚ್ಚೆ ತೆನೆ ಪಾದರಿಯ ಅಚ್ಚುಗಂಪು"

Cherry blossom at Gardens by the Bay in Singapore

ಮುಖ್ಯವಾಗಿ ಮೆಚ್ಚುಗೆ ಮೂಡಿದ್ದು, ಮಹಾನಗರದ ಧಾವಂತದ ಜೀವನದಲ್ಲಿ ಮುಳುಗಿ ಹೋಗಿ ಕೂಡಾ ರಚನಾತ್ಮಕತೆಯ ಜೊತೆಗೆ ಸೌಂದರ್ಯ ಪ್ರಜ್ಞೆಯನ್ನು ಆಳವಾಗಿ ಅಳವಡಿಸಿಕೊಂಡಿರುವ ಸಿಂಗಪುರದ ಜನರ ಬಗ್ಗೆ. ತಮ್ಮ ವಿಶ್ವನಗರಿಯನ್ನು ವಿಶ್ವದ ಜನರೆಲ್ಲರಿಗೂ ಅಚ್ಚುಮೆಚ್ಚಿನ ನಗರವನ್ನಾಗಿಸಲು ಹಗಲಿರುಳೂ ದುಡಿಯುತ್ತಿರುವ ಇಲ್ಲಿಯ ವಿಶ್ವಸನೀಯ ಆಡಳಿತಾರೂಢರ ಬಗ್ಗೆ.

ವಿಸ್ತೀರ್ಣದಲ್ಲಿ ಅತಿ ಚಿಕ್ಕದಾಗಿದ್ದರೂ, ತನ್ನ ವಾಮನರೂಪದಲ್ಲಿಯೇ ತ್ರಿವಿಕ್ರಮನ ವಿಶ್ವರೂಪವನ್ನು ತೋರಿಸುವ ನಗರವನ್ನು ಕಟ್ಟಿದ ಆದ್ಯ ಪ್ರವರ್ತಕರ ಬಗ್ಗೆ. ನಿರಂತರವಾಗಿ ಹೊಸದೊಂದನ್ನು ಸೃಜಿಸಿ, ಅದ್ಭುತವನ್ನು ಹುಟ್ಟಿ ಹಾಕಿ ಜನರನ್ನು ರಂಜಿಸುವ, ಪ್ರವಾಸಿಕರನ್ನು ಆಕರ್ಷಿಸುವ, ಮಕ್ಕಳಾಗಲಿ ಮತ್ತು ದೊಡ್ಡವರಾಗಲಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಇಲ್ಲಿನ ಸೃಜನಶೀಲ ವಾಸ್ತುಶಿಲ್ಪಿ ಮತ್ತು ಯೋಜಕರ ಬಗ್ಗೆ.

Cherry blossom at Gardens by the Bay in Singapore

ಇಂತಹ ಸೃಜನಾತ್ಮಕ ಪರಿಸರವನ್ನು ಸೃಷ್ಟಿಸುವ ಬಗ್ಗೆ ನಮ್ಮ ಭಾರತ ದೇಶದ ಆಡಳಿತಾರೂಢರು ಯೋಚಿಸುವರೇ? ರಚನಾತ್ಮಕ ಜೀವನವನ್ನು ಅಳವಡಿಸಿಕೊಳ್ಳುವತ್ತ ದೃಷ್ಟಿ ಹರಿಸಿದರೆ, ಸಮಾಜದ ಮನಸ್ಸು ಕೂಡ ಧನಾತ್ಮಕ ವಿಷಯಗಳತ್ತ ಹರಿದು, ಅದನ್ನು ಋಣಾತ್ಮಕ ವಿಷಯಗಳಿಂದ ರಕ್ಷಿಸುತ್ತದೆ. ಈ ದಿಕ್ಕಿನತ್ತ ಸಮಾಜವನ್ನು ನಡೆಸಲು ಆಳುವವರ ಹತ್ತಿರ ರಾಜಕೀಯ ಸಂಕಲ್ಪವಿರಬೇಕು ಮತ್ತು ಸ್ವಾರ್ಥವನ್ನು ಮೀರಿದ ದೇಶ ಪ್ರೇಮವಿರಬೇಕು. ಇದು ನಮ್ಮ ರಾಜಕೀಯ ಪರಿಸರದಲ್ಲಿ ಸಾಧ್ಯವೇ? ಈ ಪ್ರಶ್ನೆಗೆ ಸಮಯವೇ ಉತ್ತರ ಕೊಡಬೇಕು.

English summary
It is wonderful scene when Cherry Blossom season begins in Japan. Nature lovers throng to Japan to see flowers bloom during winter season. But, Singapore has created the environment at Gardens by the Bay. Vasant from Singapore thanks the authorities who have made it happen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X