ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರು ಆಡುವ ಕ್ರಿಕೆಟ್ಟಿಗೆ ನಾವೇಕೆ ಟೆನ್ಷನ್ ಮಾಡ್ಕೊಬೇಕು?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಆಂಗ್ಲರು ಕೊಟ್ಟು / ಬಿಟ್ಟು ಹೋಗಿದ್ದನ್ನ ಕೈಗೆತ್ತಿಕೊಂಡು, ಕಣ್ಣಿಗೊತ್ತಿಕೊಂಡು ಹೆಚ್ಚು ಕಡಿಮೆ ದಿನವೂ ಪೂಜಿಸಿ ಬಳಸುವ 'ಸಾರಿ' ಬಿಟ್ಟರೆ ಕ್ರಿಕೆಟ್'ಗೇ ನಂತರದ ಅಗ್ರಸ್ಥಾನ. ಭಾರತದ ಗಂಡು ಹೈಕ್ಳುಗಳು, ಜೀವನದ ಒಂದಲ್ಲಾ ಒಂದು ಹಂತದಲ್ಲಿ ಕ್ರಿಕೆಟ್ ಆಡಿಯೇ ಇರುತ್ತಾರೆ. ಆಡದೆ ಹೋದರೂ ಲೈಕ್ ಮಾಡುವ ಹೆಂಗಳೂ ಕಡಿಮೇನಿಲ್ಲ. ಕ್ರಿಕೆಟ್ ಎಂಬುದು ಎಷ್ಟೋ ಜನರಲ್ಲಿ ಉಸಿರಾಟಕ್ಕೆ ಸಮ. ಹಲವಾರು ಕ್ರಿಕೆಟ್ ಪ್ರೇಮಿಗಳು breath cricket, eat cricket, drink cricket ಎಂದರೆ ಅತಿಶಯೋಕ್ತಿ ಅಲ್ಲ.

ಕ್ರಿಕೆಟ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾದ ಮೇಲೆ, ಅದೇ ಜೀವನ ಎನ್ನುವಂತೆ ಆಗಿರುವಾಗ, ಅದನ್ನು ಜೀವನಕ್ಕೆ ಹೋಲಿಸೋದ್ಯಾಕೆ? ಇದು ಐನಾತಿ ಪ್ರಶ್ನೆ ನಿಜ, ಆದರೆ ಹಸಿದಾಗ ಉಣ್ಣುವಂತೆ, ಬಾಯಾರಿದಾಗ ನೀರು ಕುಡಿಯುವಂತೆ ನಮ್ಮವರು ಆಡಿದಾಗ ಮಾತ್ರ ಕ್ರಿಕೆಟ್ ಆಸಕ್ತಿ ಮೂಡಿಸಿಕೊಳ್ಳುವ, ಮಿಕ್ಕ ದಿನಗಳಲ್ಲಿ ಬ್ಯಾಟ್ ಎಂದರೇನು ಬಾಲ್ ಎಂದರೇನು ಎಂದು ಕೇಳುವ ನನ್ನಂಥವರೂ ಇದ್ದಾರಲ್ಲ? ಅಂಥವರಿಗೆ ಈ ಹೋಲಿಕೆಯ ಹೊದಿಕೆ ತೊಡಿಸುತ್ತಿರುವುದು. ಅಷ್ಟೇ ಅಲ್ಲ, ಜೀವನವನ್ನೇ ಆಟದಂತೆ ನೋಡುವ ಕ್ರಿಕೆಟ್ ಪ್ರೇಮಿಗಳೇ, ಆಟವನ್ನು ಜೀವನದಂತೆ ಕಾಣಿರಿ ಎಂದು.

ಶಾಲಾ ಮಕ್ಕಳಿಗೆ ಕ್ರಿಕೆಟ್ ಎಂದರೆ ಪ್ರಾಣ. ನಾವು ಶಾಲೆಯಲ್ಲಿ ಎರಡು ಪೀರಿಯಡ್'ಗಳ ನಡುವೆ, ಮೇಷ್ಟ್ರು ಬರೋ ಮುನ್ನ, ಬುಕ್ ಕ್ರಿಕೆಟ್ ಆಡ್ತಿದ್ವಿ! ಶಾಲೆಯ ನಂತರ ಬೀದಿಯಲ್ಲಿ ಒಂದು ಸಣ್ಣ ಕಲ್ಲನ್ನು ಎರಡು ಬದಿಯಲ್ಲಿಟ್ಟುಕೊಂಡು ಬ್ಯಾಟು ಬಾಲು ಕೈಗೆತ್ತಿಕೊಂಡರೆ ಮುಗೀತು ಅಲ್ಲೇ ಮೈದಾನ. ಎಷ್ಟು ಮನೆಯ ಕಿಟಕಿಯ ಗಾಜುಗಳು ಸಿಕ್ಸರ್'ಗಳಿಗೆ ಆಹುತಿಯಾಗಿದೆಯೋ ಗೊತ್ತಿಲ್ಲ.

Why tension for cricket adored by nation

ಯಾರದೋ ಹೊಡೆತ, ಮನೆಯ ಛಾವಣಿಯ ಮೇಲೆ ಕಾರ್ಕ್ ಬಾಲ್ ಬಿದ್ದು ಹೆಂಚು ಮುರಿದು ಆ ಎರಡೂ ಮನೆಯವರಿಗೆ ಜಗಳವೇ ಆಗಿತ್ತು. ಮಿಕ್ಕವರಿಗೆಲ್ಲ ಮಂಗಳಾರತಿ ಆಗಿತ್ತು. ಅಣ್ಣನ ಮಗ ಆಡುವಾಗ ಯಾರದೋ ಕಾರಿಗೆ ಬಾಲ್ ಹೊಡೆದಾಗ ಆ ಡ್ರೈವರ್ ಬಾಲ್ ಎತ್ತಿಟ್ಟುಕೊಂಡ. ಕ್ಷಮಾಪಣೆ ಕೇಳಿ ಬಿಡಿಸಿಕೊಂಡು ಬಂದಿದ್ದಾಗಿತ್ತು.

ಟಿವಿ ಬಂದ ಮೇಲೆ ಆಟ ನೋಡುವಾಗ ಇನ್ನೊಂದು ಕಥೆ. ಕೈಬೆರಳುಗಳ ಅಳಿದುಳಿದ ಉಗುರುಗಳೆಲ್ಲ ಆತಂಕಕ್ಕೆ ಆಹುತಿ. "ಹು.ಮು. ಬಾಯಲ್ಲಿ ಬೆಟ್ಟು ಇಟ್ಕೊಳ್ಳೋಕ್ಕೆ ಮಗೂನೇ? ಬೆರಳೆಲ್ಲ ಎಂಜಲು. ಹೋಗಿ ಕೈ ತೊಳ್ಕೋ" ಅಂತ ಅಜ್ಜಿ ಬೈದರೆ "ಮನೆ ಒಳಗೆಲ್ಲಾ ಉಗುರು. ಅನಿಷ್ಠಾ ಕಣೋ" ಅಂತ ಅಮ್ಮ. ಕಾರ್ಪೊರೇಟ್ ಜೀವನದ ಪಾಠ ಇಷ್ಟೇ. ಯಾವುದಾದರೂ ವಿಷಯಕ್ಕೆ ಬೈಸಿಕೊಳ್ಳೋದು ಎಂತಾದರೆ ಆ ತಪ್ಪು ನಾವೇ ಮಾಡಿರಬೇಕು ಅಂತಲ್ಲ. ಯಾವುದೋ ಆತಂಕಕ್ಕೆ ಇನ್ಯಾರೋ ಬಲಿಯಾಗುತ್ತಾರೆ. ಬಲಿಯಾದವರಿಗೆ ತಾನೇಕೆ ಬಲಿಯಾದೆ ಎಂದೇ ಅರಿವಾಗಿರುವುದಿಲ್ಲ, ಉಗುರಿನಂತೆ!

ಆಗಿನ್ನೂ ಪ್ರೈಮರಿಯಲ್ಲಿದ್ದೆ. ನಮ್ಮ ತರಗತಿಯ ಒಂದಷ್ಟು ಹುಡುಗರು ನ್ಯಾಷನಲ್ ಹೈಸ್ಕೂಲ್ ಮೈದಾನಕ್ಕೆ ಮ್ಯಾಚ್ ಆಡಲು ಹೋಗಿದ್ವಿ. ಹಿಂದಿನ ದಿನದವರೆಗೂ ಹನ್ನೆರಡು ಜನ ಇದ್ದೋರು, ಮೈದಾನಕ್ಕೆ ಹೋದಾಗ ಎಂಟೇ ಜನ ಇದ್ವಿ! ಏನೀಗ ಅಷ್ಟೇ ಜನಾನೇ ಆಡಿದ್ವಿ. ಪೆನ್ಸಿಲ್ ಮ್ಯಾಚ್ ಅದು. ಆಡೋವಾಗ ಎಲ್ಲಾ ಚೆನ್ನಾಗಿತ್ತು. ನಾವೇ ಗೆದ್ವಿ. ಪೆನ್ಸಿಲ್ ಕೊಡ್ರೋ ಅಂದಿದ್ದಕ್ಕೆ ಸೊಂಟದ್ ಬೆಲ್ಟು ತೆಗೆಯೋದಾ? ನನಗಂತೂ ಭಯವಾಯ್ತು. ನಮ್ಮ ಹುಡುಗರು ಏನೂ ಕಡಿಮೆ ಇಲ್ಲ. "ಲೋ ನರೇಶಾ, ತೆಗೆಯೋ ಬೆಲ್ಟು" ಅಂದ ಒಬ್ಬ. ಮತ್ತೊಬ್ಬ 'ಲೋ! ನರೇಶಾ ಇವತ್ತು ಬಂದೇ ಇಲ್ವಲ್ಲೋ!'. ಅಲ್ಲಿಗೆ ನಮ್ಮ ಕಡೆಯಿಂದ ಬಿಳೀ ಬಾವುಟ followed by ಓಟ . ಇಷ್ಟೇ ಅಂದಿನ ಆಟ. ಪೆನ್ಸಿಲ್ ಮ್ಯಾಚ್'ನಲ್ಲೇ ಈ ಪರಿ ಯುದ್ಧ ಎಂದರೆ ದೊಡ್ಡಾಟ ಹೇಗಿರಬಹುದು ಎಂಬ ಆಲೋಚನೆ ಅಂದಂತೂ ಬರಲಿಲ್ಲ ಬಿಡಿ.

ಈ ಕ್ರಿಕೆಟ್ ಆಟವೇ ಹೀಗೆ! ಅಂದಿನಿಂದ ಇಂದಿನವರೆಗೂ ಪರೀಕ್ಷೆ ಸಮಯಕ್ಕೂ ಆಟಕ್ಕೂ ಗಂಟು. ಆಟಗಾರರು ಒಂದೋ ಮದುವೆಯಾಗದ ಹುಡುಗರು ಇಲ್ಲ ಚಿಕ್ಕ ಮಕ್ಕಳ ತಂದೆಯರು. ಅವರ ಮಕ್ಕಳು ಟಿವಿ ಮುಂದೆ ಕೂತು ಸಮಯ ವ್ಯರ್ಥ ಮಾಡ್ತಾರೆ ಅನ್ನೋ ಆತಂಕ ಅವರಿಗಿಲ್ಲ ನೋಡಿ. 'ಆಟ ನೋಡಬೇಡ ಓದ್ಕೋ' ಅಂತ ಅಪ್ಪ-ಅಮ್ಮನ ಆಜ್ಞೆ. ಆದರೇನು ಅಪ್ಪ ನೋಡ್ತಾ ಕೂತಿರ್ತಾರೆ, ಅಮ್ಮ ಆಗಾಗ ಇಣುಕಿ ನೋಡಿ ಮತ್ತೆ ಅಡುಗೆಮನೆ ಸೇರುತ್ತಾರೆ. ನಾಕೊಂದ್ಲ ನಾಕು ಅಂದ್ರೆ ಅಲ್ಲಿ ಯಾರೋ ಬೌಂಡರಿ ಹೊಡೆದಿರುತ್ತಾರೆ. ಆರು ಒಂದ್ಲಾ ಆರು ಅಂದ್ರೆ ಸಿಕ್ಸ್ ಚಚ್ಚಿರ್ತಾರೆ! ಇಷ್ಟಕ್ಕೂ ಎಂಟನೇ ಕ್ಲಾಸ್ ಓದೋ ತಾನು ನಾಲ್ಕು ಅಥವಾ ಆರರ ಮಗ್ಗಿ ಯಾಕೆ ಓದುತ್ತಾ ಇದ್ದೀನಿ ಅಂತಲೇ ಪಾಪ ಹುಡುಗನಿಗೆ ಗೊತ್ತಿರೋಲ್ಲ! ಆರೋ / ನಾಲ್ಕೋ ಹೊಡೆದಾಗ ಅಪ್ಪನ ಬೈಗುಳ ಕೇಳಿಸಿದರೆ ಅದು ನಮ್ಮೋರ ಬೌಲಿಂಗು. ಕೂತಲ್ಲೇ ಎದ್ದು ಕುಣೀತಿದ್ರೆ ಅದು ನಮ್ಮವರ ಬ್ಯಾಟಿಂಗು.

Why tension for cricket adored by nation

ಇಲ್ಲಿ ಜೀವನ ಪಾಠ ಏನು? ಮೊದಲನೆಯದಾಗಿ, ಯಾವುದೇ ವಿಷಯ ಆಗಲಿ ಅದು ನಮಗೆ ಬೇಕಿರುವ ರೀತಿ ಇದ್ದರೆ ಸುಂದರವಾಗಿ ಕಾಣುತ್ತೆ ಇಲ್ಲದೆ ಇದ್ದಲ್ಲಿ ಅದೇ ವಿಷಯ ಕೆಟ್ಟದಾಗಿ ಕಾಣುತ್ತೆ. ಯಾರೇ ಹೊಡೆದರೂ ಅದು ನಾಲ್ಕು ಅಥವಾ ಆರು ನಿಜ. ಆದರೆ ಹೊಡೆದಿದ್ದು ಯಾರು ಎನ್ನುವುದರ ಮೇಲೆ ಭಾವನೆ ಬದಲಾಗುತ್ತದೆ.

ಎರಡನೆಯದಾಗಿ, ಮರದ ಕೆಳಗೆ ಕುಳಿತವರೆಲ್ಲ ತಪಸ್ಸು ಮಾಡೋಕ್ಕಾಗಲ್ಲ. ರಾತ್ರಿ ಎದ್ದೋರೆಲ್ಲ ಬುದ್ಧ ಆಗೋಲ್ಲ. ಮೇನಕೆ ಕುಣಿದಾಗ ವಿಶ್ವಾಮಿತ್ರರೇ ಶರಣಾದರು. ಎಲ್ಲರೂ ಕನಸು ಕಾಣ್ತಾರೆ ಆದರೆ ಎಲ್ಲರೂ ಸಾಧಕರಾಗೋದಿಲ್ಲ. ಕೆಲಸ ಒಂದು ಕಡೆ, ಗಮನ ಇನ್ನೊಂದು ಕಡೆ ಇದ್ದರೆ ಯಾವ ಸಾಧನೆಯೂ ಆಗೋಲ್ಲ. ಯಾವ ಕಲಿಕೆಯೂ ಆಗೋಲ್ಲ. ಯಾವುದೇ ಸೆಳೆತಕ್ಕೂ ಸಿಲುಕದೆ ಇರುವುದು ಸಾಧ್ಯ ಇಲ್ಲ ಅಥವಾ ಜಿತೇಂದ್ರಿಯನಾಗೋದು ಕಷ್ಟದ ಮಾತು ಎನ್ನಿಸಿದರೆ, ಆಟ ನೋಡಿ ಮುಗಿಸಿ ನಂತರ ನಿಶ್ಚಲ ಮನಸ್ಸಿನಿಂದ ಓದುತ್ತೇನೆ ಅಂತ ಧೃಡ ಮನಸ್ಸು ಮಾಡಿ ಅದರಂತೆ ನಡೆಯುತ್ತೇನೆ ಎಂದು ಅಪ್ಪ-ಅಮ್ಮನ ಮುಂದೆ ಹೇಳಿ. ಆದರೆ ನಾನು ಹೇಳಿದೆ ಅಂತ ಮಾತ್ರ ಹೇಳಬೇಡಿ! ನನಗೆ ಪ್ರಚಾರ ಇಷ್ಟ ಇಲ್ಲ!

ಈಗ ಒಂದು ಅರ್ಧ ಗ್ರಾಮ್ ವೇದಾಂತ. ಈ ಜಗವೇ ಒಂದು ನಾಟಕರಂಗ, ನಾವೆಲ್ಲಾ ನಟರು. ಹೌದಲ್ವೇ? ಕ್ರಿಕೆಟ್ ಆಟದ ವಿಷಯ ಬಂದರೆ "ಬೊಂಬೆ ಆಡ್ಸೋನು ಮೇಲೆ ಕುಂತೋನು, ನಮ್ಗೆ ನಿಮಗೆ, ಯಾಕೆ ಟೆನ್ಷನ್ನು?" . . .

ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಯಾವುದಕ್ಕೆ ಬೆಲೆ ಕೊಡಬೇಕೋ ಅದು ಬಿಟ್ಟು ಬೇರೆಯದನ್ನೇ ಆಯ್ಕೆ ಮಾಡಿಕೊಳ್ಳೋದು ನಮಗೆ ಬಂದಿರೋ ಖಾಯಿಲೆ. ಅದರಂತೆಯೇ ಈ ಕ್ರಿಕೆಟ್ ಎಂಬುದು ಕೂಡ. ರಾಷ್ಟ್ರೀಯ ಕ್ರೀಡೆಯನ್ನು ಕ್ಯಾರೇ ಎನ್ನದೆ ಮತ್ತೊಂದು ಆಟಕ್ಕೆ ಜೋತುಬಿದ್ದು ಅದನ್ನೇ ಬೆಳೆಸಿ ಪೋಷಿಸಿ ಇಂದು ಆ ಆಟವನ್ನೇ ಒಂದು ರಿಯಾಲಿಟಿ ಶೋ ಮಾಡಿದ್ದೇವೆ. ನಮ್ಮೋರು ಹನ್ನೊಂದು ಜನರೇ ಆಡಿದರೂ ಬಹುಶ: ಜಗತ್ತಿನಾದ್ಯಂತ ಹನ್ನೊಂದು ಕೋಟಿ ಜನಕ್ಕೆ ಟೆನ್ಷನ್ ಕೊಟ್ಟಿರುತ್ತಾರೆ ಎನಿಸುತ್ತದೆ. ಇರೋದ್ ಇದ್ದಂಗೆ ಹೇಳಿದ್ರೆ ಎದ್ ಬಂದ್ ಎದೆಗೇ ಒದೀಬ್ಯಾಡಿ.

Why tension for cricket adored by nation

ಮುಂದಿನ ವಿಚಾರ ಹೀಗಿದೆ. ವಾಲೀ-ಸುಗ್ರೀವರ ನಡುವಿನ ಜಗಳದಲ್ಲಿ ರಾಮ-ಲಕ್ಷ್ಮಣರು, ರಾವಣನ ವಿರುದ್ದದ ಕದನದಲ್ಲಿ ವಿಭೀಷಣ ರಾಮನ ಕಡೆ ಬಂದಿದ್ದು, ಸೋದರಮಾವನೇ ಪಾಂಡವರ ವಿರುದ್ಧ ಹೋರಾಡಿದ್ದು, ಇವೆಲ್ಲದರ ಸಾಮಾನ್ಯ ಅಂಶವೇನು? ನಮ್ಮವರೇ ನಮ್ಮ ವಿರುದ್ಧ ಹೋರಾಡೋದು. ಕುರುಕ್ಷೇತ್ರದ ಯುದ್ಧದ ಸೀನ್ ನೆನಪಿಸಿಕೊಳ್ಳಿ, ಜೊತೆ ಜೊತೆಗೆ ಐಪಿಎಲ್ ಆಟದ ಫೀಲ್ಡ್ ತಲೆಗೆ ತಂದುಕೊಳ್ಳಿ. ಏನಾದ್ರೂ ವ್ಯತ್ಯಾಸ ಇದೆಯಾ? ಈ ಕಡೆಯವರು ಆ ಕಡೆ, ಆ ಕಡೆಯವರು ಈ ಕಡೆ. ಒಟ್ನಲ್ಲಿ ಚಿಂದಿ ಚಿತ್ರಾನ್ನ.

ಈ ಐಪಿಎಲ್ ಮ್ಯಾಚ್ ನೋಡುವಾಗಲೆಲ್ಲಾ ನನಗೊಂದು ಸನ್ನಿವೇಶ ತಲೆಗೆ ಬರುತ್ತದೆ. ಇಂಥಾ ಒಂದು ಸಂದರ್ಭ ಊಹಿಸಿಕೊಳ್ಳಿ. ಪಂದ್ಯದ ಮೊದಲ ಚೆಂಡು ಬೌಲ್ ಮಾಡಲು ನೀವು ನಿಂತಿದ್ದೀರಿ. ಅಂಪೈರ್ ಕೂಡ 'ಗೋ ಅಹೆಡ್' ಅಂದಿದ್ದಾನೆ. ಬ್ಯಾಟ್ಸ್ಮನ್ ಕಡೆ ನೋಡುತ್ತೀರಿ. ನಿಮ್ಮ ಟೀಮಿನವನೇ ಆದ ಅವನು ಎಷ್ಟೋ ಸಾರಿ ನಿಮಗೆ ವಿಕೆಟ್ ದಕ್ಕಿಸಿಕೊಡಲು ಕಾರಣನಾದ ವಿಕೆಟ್ ಕೀಪರ್. ಆದರೇನು ಈ ದಿನ ಅವನು ನಿಮ್ಮ ಎದುರಾಳಿ. ಅಯ್ಯೋ ವಿಧಿಯೇ, ಎಂದು ನೀವು ಚೆಂಡನ್ನು ಕಣ್ಣಿಗೊತ್ತಿಕೊಂಡು ನೆಲಕ್ಕೆ ಹಾಕುತ್ತೀರಿ . . . ಮುಂದೆ ... ಹೋಗ್ಲಿ ಬಿಡಿ.

ಐಪಿಎಲ್ ಮ್ಯಾಚ್'ನಂತೆ, ನಮ್ಮ ಲೈಫೂ ಕೂಡಾ! ನಮ್ಮ ನಮ್ಮಲ್ಲಿ ಹೊಂದಾಣಿಕೆಯಿಂದ ಇದ್ದು ಹೊರಗಿನಿಂದ ಬರುವ ಸಮಸ್ಯೆಯನ್ನು ಎದುರಿಸುವ ಬದಲು ಇನ್ಯಾವುದೋ ಇರುವೆಯನ್ನು ನಮ್ಮಲ್ಲಿ ಬಿಟ್ಟುಕೊಂಡು ಕಚ್ಚೋದು / ಕಚ್ಚಿಸಿಕೊಳ್ಳೋದು ಮಾಡ್ತೀವಿ. ಕೆಲವೊಮ್ಮೆ ಈ ಇರುವೆಗಳನ್ನು ಹಿತೈಷಿಗಳು ಎನ್ನುತ್ತಾರೆ. ಹೈ-ಟೆಕ್ ಜನರಾದರೆ 'ಕೌನ್ಸಲರ್ಸ್' ಎನ್ನುತ್ತಾರೆ. ನಮ್ಮವರೇ ಆದ ಇಬ್ಬರು ಎದುರಾಳಿಗಳಾಗಿ ಕಿತ್ಲಾಡೋದು ನೋಡ್ಕೊಂಡು ಸುಮ್ ಸುಮ್ನೆ ಕುಣಿಯೋ ಜನರೂ ಇದ್ದಾರೆ. ಎದ್ರೂ ಕುಣೀತಾರೆ, ಬಿದ್ರೂ ಕುಣೀತಾರೆ, ಏನಾದ್ರೂ ಕುಣೀತಾರೆ. ಯಾರು ಕುಣಿದರೇನು ನನ್ ಕೆಲಸ ನಾನು ಮಾಡ್ತೀನಿ ಅನ್ನೋದನ್ನ ಆಟಗಾರರಿಂದ ಕಲಿಯಬೇಕು.

ಕ್ಷೇತ್ರಪಾಲನೆ ಕ್ರಿಕೆಟ್ ಆಟದ ಅದ್ಬುತ ಸಂಗತಿ. ಬ್ಯಾಟ್ಸ್ಮನ್ ನಡೆಸುವ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಾ ಅವಕಾಶ ಸಿಕ್ಕ ಕೂಡಲೇ ಗಬಕ್ಕೆಂದು ಬಾಚಿಕೊಳ್ಳಬೇಕು. catches wins matches. power play ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕೆಲವೊಮ್ಮೆ ಮೂವತ್ತು ಯಾರ್ಡ್ ಒಳಗೆ ಇಂತಿಷ್ಟು ಜನರ ಕ್ಷೇತ್ರಪಾಲನೆ. ಕೆಲವೊಮ್ಮೆ ದೂರದಲ್ಲಿ ಇರುತ್ತಾರೆ. ಜೀವನದಲ್ಲೂ ಹೀಗೆಯೇ!

ಮಾನವ ಸಂಘಜೀವಿ. ನಮ್ಮ ಸುತ್ತಲೂ ಜನರಿರುತ್ತಾರೆ. ಜೀವನದ ಮೊದಲಲ್ಲಿ ಮತ್ತು ಕೊನೆಯಲ್ಲಿ ಹಲವಾರು ಕಾರಣಗಳಿಗೆ ಸುತ್ತಮುತ್ತಲಲ್ಲೇ ಇರುತ್ತಾರೆ. ಪ್ರತಿ ಹೆಜ್ಜೆಯಲ್ಲೂ ನಿಮ್ಮನ್ನು ಗಮನಿಸುತ್ತಲೇ ಇರುತ್ತಾರೆ. ಸದಾ ಆ ಗಮನ ನಿಮ್ಮ ಏಳಿಗೆಗೇ ಅಂದುಕೊಳ್ಳದಿರಿ. ನೀವು ಯಾವಾಗ ತಪ್ಪು ಮಾಡುತ್ತೀರಾ ಎಂದೇ ಕಾಯುತ್ತಾ ಇರುವವರೂ ಇದ್ದಾರೆ.

ಇನ್ನು ಅಂಪೈರಿಂಗ್ ಬಗ್ಗೆ. ಆತ ತೀರ್ಪು ಕೊಟ್ಟ ಮೇಲೆ ಮುಗೀತು. ತೀರ್ಪು ಕೊಡೋದು ಅವನ ಕೆಲಸ. ಅವನು ತಾ ಕೊಟ್ಟ ತೀರ್ಪಿನಿಂದ, ಎತ್ತಿದ ಆ ಒಂದು ಬೆರಳಿನಿಂದ, ಹೊಗಳಿಕೆಗೂ ಪಾತ್ರನಾಗಬಹುದು, ತೆಗಳಿಕೆಗೂ ಪಾತ್ರನಾಗಬಹುದು. ಜೀವನದಲ್ಲಿ ಕೂಡ ನಮ್ಮೆಲ್ಲ ತಪ್ಪು ಒಪ್ಪುಗಳಿಗೆ ತೀರ್ಪು ಯಾವುದೋ ಒಂದು ರೀತಿ ಇಲ್ಲಿಯೇ ಸಿಗುತ್ತದೆ. ಒಂದಂತೂ ಸತ್ಯ. ಆಟವಾಗಲಿ, ಜೀವನವಾಗಲಿ ಆ ಮೇಲಿನವನ ಕಣ್ಣು ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ!

ಪ್ರತಿ ಬೌಲರನಿಗೂ ಇಂತಿಷ್ಟು ಗರಿಷ್ಠ ಓವರುಗಳನ್ನು ಮಾಡಬಹುದು ಎಂದಿರುತ್ತೆ. ಒಂದೇ ಓವರಿಗೆ 25 ರನ್ ಹೊಡೆಸಿಕೊಂಡರೆ ಮತ್ತೊಂದು ಓವರ್ ಸಿಗುವುದು ಅನುಮಾನ. ಕೊನೇ ಬಾಲ್'ನಲ್ಲಿ ಆರು ಚಚ್ಚಿಸಿಕೊಂಡು ಎದುರಾಳಿ ಗೆದ್ದರಂತೂ ಬಿಡಿ, ಜೀವನ ಪರ್ಯಂತ ಎಲ್ಲರ ಕಣ್ಣಲ್ಲೂ ನಿಕೃಷ್ಟನಾಗಿ ಇರಬೇಕಾಗುತ್ತದೆ. ಬ್ಯಾಟ್ಸ್ಮನ್ ಕಥೆ ಇದಕ್ಕಿಂತ ಭಿನ್ನವೇನಲ್ಲ.

ಜೀವನದ ಆಟವನ್ನು ಆಡಲು ಬಂದವರು ಯಾವ ರೀತಿ ಆಡುತ್ತಾರೆ ಅಥವಾ ಆಡಿ ಹೋಗುತ್ತಾರೆ ಎಂಬುದರ ಮೇಲೆ ಅವರು wall of fame ಅಥವಾ wall of shame ಅಲಂಕರಿಸುತ್ತಾರೆ. ಇಹಲೋಕ ಸೇರಿ ಎಷ್ಟೋ ವರುಷಗಳಾಗಿದ್ದರೂ ಇಂದಿಗೂ ಜನರ ಹೃದಯದಲ್ಲಿ ನೆಲೆಸಿರುವ ಎಷ್ಟೆಲ್ಲಾ ಜನರಿದ್ದಾರೆ. ಚಚ್ಚಿಸಿಕೊಂಡು ಸೋತು ಸುಣ್ಣವಾಗಿ ತೆರೆಮರೆಗೆ ಸರಿದವರು, ಕೊನೆಯವರೆಗೆ ಇದ್ದು ಸಾಧಿಸಿದವರು, ಮಿಂಚಿ ಮರೆಯಾದವರು, ಇನ್ನೂ ಮಿಂಚುತ್ತಿರುವವರು ಹೀಗೆ ಎಲ್ಲ ವಿಧದ ಜನರನ್ನು ಆಟದಲ್ಲೂ ಜೀವನದಲ್ಲೂ ದಿನನಿತ್ಯದಲ್ಲಿ ನಾವು ನೋಡುತ್ತಲೇ ಇರುತ್ತೇವೆ.

ಆಟದ ಮುನ್ನವೇ ಆಟಗಾರರನ್ನು ಅತೀ ಮೇಲಕ್ಕೆ ಕೂಡಿಸೋದೂ ಒಂದೇ, ಸಾಧನೆಗೆ ಮೊದಲೇ ನಮ್ಮ ಬಗ್ಗೆ ನಾವೇ ಕಹಳೆ ಊದೋದೂ ಒಂದೇ! ಯಾರೋ ಆಡಿಸೋ ಆಟಕ್ಕೆ ನಾವು ದಾಳಗಳಾಗಿ ಯಾಕ್ ಟೆನ್ಷನ್ ಮಾಡಿಕೊಳ್ಳೋದು? ಸುಮ್ನೆ ಆಟ ನೋಡೋಣ, ಆಡೋಣ, ಮುಂದೆ ಸಾಗೋಣ. ಏನಂತೀರಿ?

English summary
Do you breath cricket, eat cricket, drink cricket? Or do you hate the game which is adored by people of our nation? No doubt, cricket has become part of our life. But, one should take tension? Srinath Bhalle writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X