ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಟದ ಮೇಲೆ ಇಟ್ಟಿರಿ ಯಾವಾಗ್ಲಾದ್ರೂ ಬೇಕಾಗತ್ತೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಏಣಿಯನೇರಿ ಅಟ್ಟದ ಮೇಲೆ ಹೋಗಿ ಕೂತವನಿಗೆ ಮೊದಲು ಸ್ವಾಗತಿಸಿದ್ದು ಗೋಡೆಯ ಕಟ್ಟಿದ್ದ ಕಪ್ಪನೆಯ ಇಲ್ಲಣಗಳು. ಮತ್ತೆ ಕೆಳಗಿಳಿದು ಹೋಗಿ ಪೊರಕೆ ತಂದು ಕ್ಲೀನ್ ಮಾಡೋ ಸಂಯಮ ಇರಲಿಲ್ಲ. ಸುಮ್ಮನೆ ಸುಳ್ಳು ಹೇಳಿದೆ ಅಷ್ಟೇ, ಸಂಯಮ ಅಂತಲ್ಲ, ಮೇಲೆ ಹತ್ತಿ ಬರೋದು ಸುಲಭವಾಗಿತ್ತು ಆದರೆ ಇಳಿದು ಬರುವಾಗ ಕೆಳಗೆ ನೋಡುವಾಗ ನನಗೆ ಬಲೇ ಭಯವಾಗುತ್ತೆ. ಮೇಲೆ ಹತ್ತಿದೋರು ಕೆಳಗೆ ಇಳಿಯುವಾಗ ಇದೇ ಭೀತಿ ಇದ್ದರೆ ಅಲ್ಲಿ ಹೋಗಿ ತಲುಪಿದವರು ಮೌಲ್ಯ ಕಾಪಾಡಿಕೊಳ್ಳುವ ಪ್ರಯತ್ನ ನಿತ್ಯ ಮಾಡುತ್ತಿದ್ದರೋ ಏನೋ?

ಹಿರಿಯರ ವ್ಯಥೆ ಮತ್ತು ಒಂದಿಷ್ಟು ಸ್ವಾರಸ್ಯಕರ ಕಥೆಹಿರಿಯರ ವ್ಯಥೆ ಮತ್ತು ಒಂದಿಷ್ಟು ಸ್ವಾರಸ್ಯಕರ ಕಥೆ

ಆ ಕಡೆ ಈ ಕಡೆ ಕಣ್ಣು ಹಾಯಿಸಿದಾಗ ಕಣ್ಣಿಗೆ ಬಿದ್ದಿದ್ದು ಹಳೆಯ ಮೊಂಡು ತೆಂಗಿನ ಪೊರಕೆ. ವಾವ್ ಎಂದುಕೊಂಡು ಅದರಿಂದಲೇ ಒಂದು ಕಡ್ಡಿ ಎಳೆದುಕೊಂಡು ಇಲ್ಲಣಗಳನ್ನು ಕ್ಲೀನ್ ಮಾಡಿಕೊಂಡೆ. ಅಟ್ಟ ಹತ್ತಿ ಬಂದಿದ್ದೇಕೆ ಎಂದು ಯೋಚಿಸುವ ಮುನ್ನ ಇಲ್ಲೇನೇನಿದೆ ಅಂತ ನೋಡತೊಡಗಿದೆ.

Old kitchen utensils, treasure stocked in the Deck

ಮೊದಲಿಗೆ ದೇಕುತ್ತ ಮುಂದೆ ಸಾಗಿದೆ. ಅಟ್ಟ ಹತ್ತಿಯೂ ನಿಂತು ನೋಡುವಷ್ಟು ವಾಮನಾವತಾರವಲ್ಲ ಬಿಡಿ. ಕಂಡಿತ್ತು ಅಲ್ಲೊಂದು ದೀಪದ ಕಂಬ. ಅಲ್ಲಾವುದ್ದೀನ್'ನ ದೀಪ ಅಲ್ಲಾ! ಅಡುಗೆ ಮನೆಯ ಬೆಳಕು ಅಟ್ಟದ ಮೇಲೆ ಎಷ್ಟು ತಲುಪಿತ್ತೋ ಅಷ್ಟೇ ಬೆಳಕಿನಲ್ಲಿ ಅದು ನನಗೆ ಕಪ್ಪು ದೀಪದ ಕಂಬವಾಗೇ ಕಂಡಿದ್ದು. ದೀಪದ ಕಂಬಗಳು ಎಲ್ಲಾದರೂ ಕಪ್ಪಗೆ ಇರುತ್ತದೆಯೇ ಎಂದುಕೊಂಡು ಕೈಗೆತ್ತಿಕೊಂಡೆ. ಅಯ್ಯೋ ಶಿವನೇ, ಕೈಗೆ ಎತ್ತಿಕೊಂಡಿತೇ? ಈವರೆಗೂ ಆ ಕಂಬದಲ್ಲಿ ಹಾಕಿದ್ದ ಎಷ್ಟೋ ಎಣ್ಣೆಯ ಬಿಂದುಗಳು ದೀಪವಾಗಿ ಬೆಳಗಿ ಹೋಗಿವೆ. ಕೆಲವು ಬಿಂದುಗಳು ಹಾದಿ ತಪ್ಪಿ ಕಂಬವನ್ನು ಶೃಂಗರಿಸಲು ಹೊರಟು ನಂತರ ಅಟ್ಟದ ಧೂಳನ್ನೂ ಅಪ್ಪಿಕೊಂಡು ಕಪ್ಪಾಗಿ ತಿರುಗಿ ಕೂತಿದೆ. ಇಷ್ಟು ಸಾರಿ ಉಪಯೋಗಿಸಿದ್ದರೂ ಒಮ್ಮೆಯೂ ತೊಳೆಯದ ಗಬ್ಬುಗಳೇ ಇವರು ಅಂದುಕೊಳ್ಳದಿರಿ! ಕೊನೆಯ ಬಾರಿ ಅಂದರೆ ಅಟ್ಟಕ್ಕೆ ಸೇರುವ ಮುನ್ನ ಅಲ್ಲೇನು ಎಣ್ಣೆ ಕೂತಿತ್ತೋ ಅದನ್ನು ತೊಳೆದು ಅಟ್ಟ ಸೇರಿಸಿರಲಿಲ್ಲ! ಇನ್ನೂ ಚೆನ್ನಾಗಿ ನೆನಪಿದೆ ಈ ಕಂಬ. ನಾನೇ ಇಟ್ಟಿದ್ದು ಆದರೆ ಗುರುತು ಸಿಗಲಿಲ್ಲ ಅಷ್ಟೇ. ಅಂದು ಈಗಿರುವ ಇದೇ ನನ್ ಹೆಂಡ್ತಿ ಹೇಳಿದ ಮಾತು "ಇಟ್ಟಿರಿ ಬೇಕಾಗುತ್ತೆ!"

ಜೀವನದಲ್ಲಿ 'ಇಟ್ಟಿರಿ ಬೇಕಾಗುತ್ತೆ' ಎನ್ನುವ ಮಾತು, 'ಉಸಿರು ನಿಂತ ದೇಹ ಬಿಟ್ಟು ಮಿಕ್ಕೆಲ್ಲಕ್ಕೂ ಸಲ್ಲುತ್ತೆ' ಅನ್ನಿಸುತ್ತೆ, ಅಲ್ಲವೇ?

ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!

ಇಂಥವೆಲ್ಲಾ ಅಟ್ಟದ ಮೇಲೆ ಸಿಗುತ್ತೆ ಅಂತಲೇ, ಅವಶ್ಯಕತೆ ಇಲ್ಲದೇ ಇರುವುದನ್ನು ಮೊದಲ ಹೆಜ್ಜೆ ಅಂತ ಕೆಳಕ್ಕೆ ಕೊಂಡೊಯ್ಯೋ ಪ್ರಯತ್ನಕ್ಕೆ ಇರಲಿ ಅಂತ ತಂದಿದ್ದ ಪುಟ್ಟ ಗೋಣಿ ಚೀಲಕ್ಕೆ ಸೇರಿಸಿದೆ.

Old kitchen utensils, treasure stocked in the Deck

ಮುಂದೆ ಹೋದಾಗ ಸಿಕ್ಕಿದ್ದು ಒಂದು ದೊಡ್ಡ ಪಾತ್ರೆ. ಅಲ್ಲಾ, ಮೊನ್ನೆ ತಾನೇ ಬಿಸಿಬೇಳೆಬಾತ್ ಮಾಡೋದಕ್ಕೆ ಪಾತ್ರೆನೇ ಇಲ್ಲ ಅಂತ ಹೇಳಿ ಇದೇ ಸೈಜಿನ ಪಾತ್ರೆ ತೊಗೊಂಡ್ ಬಂದ್ಲಲ್ಲಾ ನನ್ನ ಡಿಯರ್ ವೈಫು? ನನ್ನಂದಪ್ಪಾ ಪಂಚೋತ್ರೆ ಇದೆ, ಇನ್ನೊಂದು ಪಾತ್ರೆ ಏಕೆ ಬೇಕಿತ್ತು? ಪಾತ್ರೇನ್ನ ಕೈಗೆತ್ತಿಕೊಂಡರೆ ಏನೋ ಲೋಟಕ್ಕಂತು. ಏನಪ್ಪಾ ಅಂತ ನೋಡಿದ್ರೆ ಮೇಲಿಂದ ಕೆಳಗಿನವರೆಗೆ ಪಾತ್ರೆ ಸೀಳಿತ್ತು. ಅರ್ಥಾತ್, 'ಏನಾದ್ರೂ ಕೆಲಸ ಹೇಳ್ತಾನೆ ಇರಬೇಕು ಇಲ್ದಿದ್ರೆ ನಿನ್ನನ್ನ ತಿಂದುಬಿಡ್ತೀನಿ' ಅಂತ ಹೆದರಿಸೋ ದೆವ್ವ ಬಂದು ನಿಮಗೆ ಕಾಡಿದ್ರೆ, ಈ ದೊಡ್ಡ ಪಾತ್ರೆಗೆ ನೀರು ತಿಂಬಿಸೋ ಕೆಲಸ ಹಚ್ಚಬಹುದು. ಈ ಜನ್ಮಕ್ಕೆ ನೀರು ತುಂಬೋಲ್ಲ.

ಅದೊಂದು ದಿನ ಈ ಪಾತ್ರೆಯ ವಿಷಯ ಬಂದು 'ಹಳೇಪಾತ್ರೆ ಹಳೆಕಬ್ಬಿಣ'ಕ್ಕೆ ಕೊಟ್ಟು ಇನ್ನಾದ್ರೂ ಡಬ್ಬಿ ತೊಗೊಳ್ಳೋ ಐಡಿಯಾ ಹೇಳಿಕೊಂಡಾಗ ನಾನು ನನ್ನಾಕೆಗೆ ಹೇಳಿದ್ದೆ "ಈ ದಿನಗಳಲ್ಲಿ ಮನೆ ಮುಂದೆ ಇಂಥವರು ಯಾರು ಬರ್ತಾರೆ?" ಅಂತ! ಅದಕ್ಕವಳು "ಇಲ್ಲಿದು ಜಾಸ್ತಿ ದಿನ ಇದ್ರೆ ನಿಮ್ಮ ಅಜ್ಜಿ ನಮ್ಮ ಮನೆಗೆ ಬಂದ್ರೆ 'ಪಾತ್ರೆಗೇನಾಗಿದೆ ಧಾಡಿ, ಕಲಾಯಿ ಹಾಕಿಸಿದ್ರೆ ಗಟ್ಟಿಯಾಗಿ ಕೂರುತ್ತೆ' ಅಂತಾರೆ. ಸದ್ಯಕ್ಕೆ ಇದನ್ನ ಅಟ್ಟದ ಮೇಲೆ ಇಟ್ಟಿರಿ ಬೇಕಾಗುತ್ತೆ" ಅಂದಿದ್ಲು. ಅಟ್ಟದ ಮೇಲೆ ಏರಿದ್ದ ಆ ಪಾತ್ರೆ, ಅಜ್ಜಿ ಮೇಲೇರಿ ಎರಡು ವರ್ಷ ಕಳೆದರೂ ಕೆಳಗಿಳಿದಿರಲಿಲ್ಲ!

Old kitchen utensils, treasure stocked in the Deck

ಅದರ ಒಳಗೆ ಇನ್ನೇನಿದೆ ಅಂತ ನೋಡಲು ಇಣುಕಿದೆ. ಧೂಳೋ ಧೂಳು! ಅಪ್ಪಿ ತಪ್ಪಿ ಆ ದೊಡ್ಡ ಪಾತ್ರೆಯಲ್ಲಿ ನಾ ಬಿದ್ದರೆ ಹೊರಗೆ ಬರೋಷ್ಟರಲ್ಲಿ ಮುಖವೆಲ್ಲ ಮಸಿ ಮೆತ್ತಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ! ತುಕ್ಕು ಹಿಡಿದ ಕಾಫಿ ಫಿಲ್ಟರ್ರು, ಇಬ್ಭಾಗವಾದ ಇಕ್ಕಳದ ಭಾಗಗಳು, ನಟ್ಟು-ಬೋಲ್ಟುಗಳು, ಪಚ್ಚು ಬಿದ್ದು ನುಗ್ಗಾದ ಹಿತ್ತಾಳೆ ಬೋಸಿ, ಹಳೇ ಸ್ಟೀಲ್ ಲೋಟ, ನೀರೇ ಕಾಣದ ಹಿತ್ತಾಳೆ ಪಾತ್ರೆಗಳು, ಒಂದು ಹಿತ್ತಾಳೆ ಕೊಡ, ಸ್ಟೀಲಿನ ನೀರಿನ ಡ್ರಮ್ ಒಂದೇ ಎರಡೇ? ಇವೆಲ್ಲಾ ಯಾಕೆ ಬೇಕು?

ಸಾಮಾನ್ಯವಾಗಿ ಒಂದು ವಸ್ತು ನೋಡಲು ಲಕ್ಷಣವಾಗಿದ್ದು ಅದನ್ನು ಬಳಸಿ ಹಳತಾಗುವ ಹೊತ್ತಿಗೆ ಅದರ ಮೇಲೆ ಏನೋ ಒಂದು ರೀತಿ ವ್ಯಾಮೋಹ ಬಂದಿರುತ್ತದೆ. ಅದೆಂತಹ ಧೃತರಾಷ್ಟ್ರ ವ್ಯಾಮೋಹ ಅಂದರೆ, ಬಗಲಲ್ಲಿ ಇಟ್ಟುಕೊಂಡರೆ ಹಿಂಸೆ ಆದರೆ ಕಿತ್ತೊಗೆಯಲು ಏನೋ ನೋವು. ಹಾಗಾಗಿ 'ಇಟ್ಟಿರಿ ಬೇಕಾಗುತ್ತೆ' ಯಾವಾಗ್ಲಾದ್ರೂ ಅನ್ನೋ ಕೇಸ್ ಇದು...

ನಮ್ಮ ಮನೆಯಲ್ಲಿ ಒಂದು ಸೋಫಾ ಇತ್ತು. ಅದನ್ನು ಮನೆಗೆ ತಂದಾಗ ನಾನಂತೂ ಬಹಳಾ ಚಿಕ್ಕವನು. ಸೋಫಾ ಬಂದ ದಿನ ಮನೆಗೆ ಯಾರೋ ಹಿರಿಯರು ಬಂದಿದ್ದರಂತೆ. ಬೇಸಿಗೆ ರಜೆಗೆ ಬಂದಿದ್ದವರು ಮತ್ತು ನಮ್ಮನ್ನೆಲ್ಲಾ ನೋಡಿ 'ಈ ಮಂಗಗಳು ಇರೋವಾಗ ಇಂಥಾ ರಾಜಯೋಗ ಬೇಕಿತ್ತೇ?' ಎಂದರಂತೆ. ಅಲ್ಲಿಂದಾಚೆ ಮನೆ ಬದಲಿಸಿದಾಗಲೆಲ್ಲ ನಮ್ಮೊಂದಿಗೆ ಅದೂ ಬಂದು, ತನ್ನ ಒಡಲಲ್ಲಿದ್ದ ಹತ್ತಿ, ಗುಂಜು ಎಲ್ಲ ಕಳೆದುಕೊಂಡು ಎಷ್ಟೋ ಬಾರಿ ರಿಪೇರಿಯಾದರೂ ಬದುಕಿತ್ತು. ಕೊನೆಯ ಹಲವು ವರ್ಷಗಳು ಕೇವಲ ಸ್ಪ್ರಿಂಗ್ ಉಳ್ಳದ್ದಾಗಿ, ಅವುಗಳ ಮಧ್ಯೆ ಹಳೆಯ ರಾಜಾಯಿಗಳನ್ನು ತುರುಕಿ ಕೂಡಲೋಗ್ಯವಾಗುವಂತೆ ಮಾಡಿದ್ದೆವು. ಸೋಫಾ ಒರಗುವ ಬದಿ ಚೆನ್ನಾಗಿ ಇದ್ದುದರಿಂದ, ಅದನ್ನೇ ಹಾಸಿಗೆಯಂತೆ ಮಾಡಿ ಹೇಗೋ ತೂಗಿಸಿಕೊಂಡು ಹೋಗುತ್ತಿದ್ದೆವು. ಒಟ್ಟಾರೆ ಮೂವತ್ತಕ್ಕೂ ಹೆಚ್ಚು ವರ್ಷಗಳೇ ನಮ್ಮೊಂದಿಗಿದ್ದು ಕೊನೆಗೆ ಅಸುನೀಗಿತ್ತು.

Old kitchen utensils, treasure stocked in the Deck

ಇದೇ ಹಾದಿಯಲ್ಲಿ ಸಾಗಿದ್ದು ಎಂದರೆ ಮರದ ಬೆಂಚು, ಡೆಸ್ಕು ಮತ್ತು ದುಂಡು ಆಕಾರದ ಒಂದು ಮೇಜು. ಇವೆಲ್ಲವೂ ತ್ಯಾಜ್ಯಕ್ಕೆ ಯೋಗ್ಯವಾದ ವಸ್ತುಗಳೇ ಆಗಿದ್ದರೂ 'ಇರಲಿ ಬೇಕಾಗುತ್ತೆ' ಎಂದೇ ನಮ್ಮೊಂದಿಗೆ ಇರಿಸಿಕೊಂಡಿದ್ದೆವು. ಹಾಗಾಗಿ ಅವುಗಳ ನೆನಪೂ ಕೂಡ ಅಷ್ಟೇ ಗಾಢವಾಗಿ ನಮ್ಮೊಂದಿಗಿದೆ. ಇಂದು ಮೊಬೈಲ್'ನ ರಕ್ಷಣಾ ಕವಚ ಕಿತ್ತುಹೋದರೆ ಫೋನನ್ನೇ ಬದಲಾಯಿಸುವ ಗತ್ತು ತೋರುತ್ತೇವೆ!

ಈಗ ಮತ್ತೆ ಅಟ್ಟಕ್ಕೆ ಹೋಗೋಣ ಬನ್ನಿ. ಈ ಸೋಫಾದ ನೆನಪು ಏಕೆ ಬಂತು ಎಂದರೆ ಅಲ್ಲೇ ಮೂಲೆಯಲ್ಲಿ ಸೋಫಾದ ಒಂದಷ್ಟು ಗುಂಜು ಕಂಡಿತ್ತು. ಮುಂದೆ ಒಂದೆರಡು ಹೆಜ್ಜೆ ಹಾಕಿದಂತೆ ತಗಡಿನ ಪೆಟ್ಟಿಗೆ ಕಂಡಿತು. ಒಮ್ಮೆ ಮುಚ್ಚಿದರೆ ಒಂದು ಕೂತರೆ ಮತ್ತೊಂದೆಡೆ ಎಬ್ಬುತ್ತಿತ್ತು. ಅದನ್ನೊಮ್ಮೆ ಒತ್ತಿ ಚಿಲುಕ ಬಡಿದರೆ ಮುಗೀತು ಮತ್ತೆ ತೆರೆಯಲು ಹರಸಾಹಸವೇ ಮಾಡಬೇಕು. ಅಲ್ಲಲ್ಲೇ ಬಾಯಿಬಿಟ್ಟುಕೊಂಡಿದ್ದ ಆ ಪೆಟ್ಟಿಗೆಯ ಬಳಿ ಕೊಂಚ ಹುಷಾರಾಗಿಯೇ ಹೋಗಬೇಕು. ಅದೇನಾದರೂ ತಾಕಿದರೆ ರಕ್ತ ಬುಳಬುಳನೆ ಹರಿಯೋದ್ರಲ್ಲಿ ಅನುಮಾನವೇ ಇಲ್ಲ. ಇಂದಿನ ಯುಗದಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಘಂಟೆ ಬಾರಿಸಿಕೊಂಡೇ ಓಡಾಡುವ ನಾವು, ಈ ಪೆಟ್ಟಿಗೆ ಬಳಸುತ್ತಿದ್ದ ಕಾಲದಲ್ಲಿ ಹೇಗೆ ಒಡ್ಡರಾಗಿಯೇ ಇದ್ದೆವೋ ಅನ್ನಿಸುತ್ತದೆ!

ಇಷ್ಟೆಲ್ಲಾ ನೆನಪುಗಳ ಧೂಳಿನಲ್ಲಿ ಒದ್ದಾಡಿದ ನನಗೆ ಅಟ್ಟದ ಮೇಲೇಕೆ ಬಂದೆ ಅನ್ನೋ ಐನಾತಿ ವಿಷಯವೇ ಮರೆತುಹೋಗಿದೆ. ನೆನಪುಗಳು ಅಮರ, ಮಧುರ ಅಂತೆಲ್ಲಾ ಹೇಳ್ತಾರೆ ನಾನೇಕೆ ಧೂಳು ಅಂದೇ ಅಂತ ಕೋಪ ಬರೋ ವಿಷಯಕ್ಕೆ ಸಿಟ್ಟು ಮಾಡ್ಕೋಬೇಡಿ. ಧೂಳಿನಲ್ಲಿ ಕೂತಿದ್ರಿಂದ ಅದೇ ಪದಬಳಕೆ ಆಯ್ತು ಅನ್ನೋದು ಒಂದು ವಿಷಯ. ಸಿಮೆಂಟ್ ಅಂಗಡಿಯವನು ಸಿಮೆಂಟ್'ಗೆ ಧೂಳು ಅಂತಲೇ ಕರೆಯೋದು. ಧೂಳು ಅನ್ನೋ ಪದ ಟೊಮ್ಯಾಟೋ'ಗಿಂತ ದುಬಾರಿ ನೆನಪಿರಲಿ.

ಒಂದಂತೂ ನಿಜ . . . ಇವು ಯಾವುದೂ ಗುಜುರಿ ಸಾಮಾನುಗಳಲ್ಲ . . . ಬದಲಿಗೆ ನೆನಪುಗಳ ಭಂಡಾರ. ಮತ್ತೊಂದು ವಿಚಾರ ನೀವು ಗಮನಿಸಿರಬಹುದು, ನಾನು ಗುಜುರಿ ಸಾಮಾನುಗಳನ್ನು ಅಸ್ತ್ರವಾಗಿ ಬಳಸಿಕೊಂಡು, ಇಲ್ಲಿ ಬರೆದ ಎಷ್ಟೋ ಪದಗಳು, ವಿಚಾರಗಳು ಇಂದಿನ ಕಂಗ್ಲಿಷ್ ಯುಗಕ್ಕೆ ಗುಜುರಿಯೇ ಸರಿ. ನೀವು ಒಮ್ಮೆ ಆ ನೆನಪುಗಳ ಭಂಡಾರಕ್ಕೆ ಕಾಲಿರಿಸಿ ಅಲ್ಲೆಲ್ಲೋ ಹುದುಗಿರುವ, ಹೊದ್ದು ಮಲಗಿರುವ, ಬಳಸದೆ ತುಕ್ಕು ಹಿಡಿಯುತ್ತಿರುವ ಪದಗಳನ್ನು ಹೊರ ತಂದು ಹಂಚಿಕೊಳ್ಳಿ!

"ಏನೂ? ನಾನು ಕೇಳಿದ್ದು ಅಟ್ಟದ ಮೇಲೆ ಸಿಕ್ತೋ ಇಲ್ವೋ?" ಅನ್ನೋ ದನಿ ಬಂತು. ಏನು ಹುಡುಕ್ತಾ ಇದ್ದೀನಿ ಅಂತ ಗೊತ್ತಿದ್ರೆ ತಾನೇ ಅದು ಸಿಕ್ತೋ ಇಲ್ವೋ ಅಂತ ಹೇಳೋಕ್ಕೆ? ಹಾಗಂತ ಹೇಳಿದರೆ ನೆನಪು ಬರೋವರೆಗೂ ಅಲ್ಲೇ ಇರಿ ಅಂತ ಏಣಿ ಪಕ್ಕಕ್ಕೆ ಇಟ್ಟರೆ? ಅಥವಾ ಈ ವಯಸ್ಸಿಗೇ ಅರುಳುಮರಳೇ ಅಂದರೆ? ಅಥವಾ ಮೇಲೆ ಹೋದವರಿಗೆ ಕೆಳಗೆ ಇರೋ ಜನರ ಅಹವಾಲು ಅಂದರೆ ಇಷ್ಟೇ ಅಂತ ಕಟು ನುಡಿದರೆ?

ಯಾವುದಕ್ಕೂ 'ಸರ್ವೇ ಜನಾ: ಸುಖಿನೋ ಭವಂತು' ಎಂದುಕೊಂಡು "ಇಲ್ಲಾ ಕಣೆ ಸಿಗಲಿಲ್ಲ" ಅಂತ ಕಟು ಸುಳ್ಳು ನುಡಿದೆ. ಏಣಿಯತ್ತ ದೇಕುತ್ತಾ ಸಾಗಲು ಖಾಲಿ ಬೆಂಕಿಪೆಟ್ಟಿಗೆ ಕಂಡು ನಗು ಬಂತು. ಇದನ್ನೂ ಅಟ್ಟಕ್ಕೆ ಸೇರಿಸೋ ಪ್ರಮೇಯ ಏನು ಬಂತು? ಜೇಬಿಗೆ ಹಾಕಿಕೊಂಡು ಕಸದಬುಟ್ಟಿಗೆ ಹಾಕೋಣ ಅಂತ ಅಂದುಕೊಂಡೆ. ಆಮೇಲೆ ಅದು ಮರೆತು, ಮತ್ಯಾರೋ ಅದನ್ನು ನೋಡಿ, ಇದ್ಯಾವಾಗಿನಿಂದ ಅಭ್ಯಾಸ ಅಂತ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡಿದರೆ?

ಇಂಥಾ ಉಸಾಬರಿಯೇ ಬೇಡ ಅಂತ ಅಲ್ಲೇ ಇಡಲು ಹೋದವನಿಗೆ ಎಂದೋ ಸತ್ತು ಸ್ವರ್ಗ ಸೇರಿದ್ದ ಜಿರಲೆಯ ಶವ ಸಿಕ್ತು. "ಅಲ್ಲಿರೋದ್ಯಾವುದೂ ಸುಮ್ನೆ ಕ್ಲೀನು ಕ್ಲೀನು ಅಂತ ಎಸೀಬೇಡಿ. ಅಲ್ಲೇ ಸೇಫ್ ಆಗಿ ಇಟ್ಟು ಬೇಗ ಕೆಳಗೆ ಬನ್ನಿ "ಅಂದ್ಲು ನನ್ನಾಕೆ... ಸರಿ ಅಂತ ಸತ್ತ ಜಿರಲೆಯನ್ನು cheeta fight ಬೆಂಕಿಪೆಟ್ಟಿಗೆಯಲ್ಲಿ ಹಾಕಿ ಸುರಕ್ಷಿತವಾಗಿ ಇಟ್ಟೆ. ಕೆಲವೊಮ್ಮೆ ಜೀವ ಕಳ್ಕೊಂಡವು ಕೂಡ 'ಇಟ್ಟಿರಿ ಬೇಕಾಗುತ್ತೆ' ವರ್ಗಕ್ಕೆ ಸೇರುತ್ತೋ?

ಅದರೊಂದಿಗೆ ನಾ ತಂದಿದ್ದ ಗೋಣಿಚೀಲ ಕೂಡ ಅಲ್ಲೇ ಉಳಿಯಿತು. "ಇಟ್ಟಿರಿ ಬೇಕಾಗುತ್ತೆ" ಅಂತ ಇನ್ನೊಂದು ಅಟ್ಟ ಸೇರಿತು!

English summary
Old kitchen utensils are true treasure stocked in the Deck in many houses. Though we never use them for years, we keep them as they are with an intension of using them some day. A humorous write up by Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X