ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ಸದ್ಬಳಕೆಗೆ ಮನೆಯಲ್ಲಿ ಮಳೆನೀರು ಕೊಯ್ಲು

By Super
|
Google Oneindia Kannada News

rain water harvesting, lakes
ಬೆಂಗಳೂರಿನಂಥ ನಗರವಷ್ಟೇ ಏಕೆ ಹಳ್ಳಿಗಳಲ್ಲಿಯೂ ಈಗ ನೀರಿನ ಕೊರತೆ ಕಾಣುತ್ತಿದೆ. ಯದ್ವಾತದ್ವಾ ಬೆಳೆಯುತ್ತಿರುವ ನಗರಗಳಲ್ಲಿ ನಾಯಿಕೊಡೆಗಳಂತೆ ನಿಂತುಕೊಳ್ಳುತ್ತಿರುವ ಅಪಾರ್ಟ್ ಮೆಂಟುಗಳಿಂದಾಗಿ ಮುಂದೊಂದು ದಿನ ನೀರಿಗಾಗಿ ಹಾಹಾಕಾರ ಎದ್ದರೂ ಆಶ್ಚರ್ಯವಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡುವ ಬದಲು ಈಗಲೇ ನೀರಿನ ಉಳಿತಾಯಕ್ಕಾಗಿ ಸಿದ್ಧತೆ ಮಾಡಿಕೊಂಡರೆ ಒಳ್ಳೆಯದಲ್ಲವೆ? ಮಳೆನೀರು ಕೊಯ್ಲು ಅಥವಾ ರೇನ್ ವಾಟರ್ ಹಾರ್ವೆಸ್ಟಿಂಗ್ ಕುರಿತು ಶ್ರೀನಿಧಿ ಡಿಎಸ್ ವಿವರ ನೀಡಿದ್ದಾರೆ.

ನಮ್ಮ ಅಗತ್ಯಗಳಿಗೆ ಬೇಕಾದ ಸಿಹಿನೀರು ದೊರಕುವುದು ಅಂತರ್ಜಲದಿಂದ ಮತ್ತು ಕೆರೆ, ನದಿ, ಬಾವಿಗಳಿಂದ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಲ್ಲಿ ಮಾತ್ರ ದೊರಕುವ ನೀರಿನ ಮೂಲಗಳು ಬಳಕೆಗೆ ಸಾಲುತ್ತಿಲ್ಲ. ನೀರಿಗಾಗಿ ಹೊರಗಿನ ಮೂಲಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ.

ಹಳ್ಳಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹಿಂದಿನಂತೆ ಕೆರೆ- ಕೊಳ್ಳಗಳು ತುಂಬುತ್ತಿಲ್ಲ. ಮಳೆ ಮೊದಲಿನಂತೆ ತಿಂಗಳಾನುಗಟ್ಟಲೆ ಹೊಯ್ಯವುದಿಲ್ಲ. ನೀರಿನ ಅಭಾವ ಗ್ರಾಮಗಳಲ್ಲೂ ತಲೆದೋರಿದೆ. ಹೀಗಾಗಿ ನಮಗೆ ದೊರಕುವ ಸಿಹಿನೀರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹನಿ ನೀರೂ ಕೂಡಾ ಅತ್ಯಂತ ಅಮೂಲ್ಯವಾಗಿ ಪರಿಣಮಿಸುತ್ತಿದೆ. ಆದರೆ ನೀರಿನ ಲಭ್ಯತೆ ಎಷ್ಟಿದೆ ಎಂಬುದರ ಬಗ್ಗೆ ಅರಿವು ಎಲ್ಲರಿಗಿಲ್ಲ.

ಜನಸಂಖ್ಯೆ ಜಾಸ್ತಿಯಾದಂತೆ ಭೂಮಿಯಿಂದ ಮೇಲೆತ್ತುವ ನೀರಿನ ಪ್ರಮಾಣವೂ ಜಾಸ್ತಿಯಾಗುತ್ತದೆ. ಕೊಳವೆ ಬಾವಿಗಳನ್ನು ಮನೆಗೊಂದರಂತೆ ತೋಡಲಾಗುತ್ತಿದೆ. ನೀರು ಸಿಗುವವರೆಗೆ ಭೂಮಿಯ ಒಡಲಿಗೆ ಕನ್ನಹಾಕುವ ತಂತ್ರಜ್ಞಾನದಿಂದಾಗಿ ಅಂತರ್ಜಲದ ಮಟ್ಟ ದಿನೇದಿನೇ ಕುಸಿಯುತ್ತಿದೆ.

ಅಂತರ್ಜಲದ ಮಟ್ಟ ಹೆಚ್ಚಿಸಲು ರೈನ್ ವಾಟರ್ ಹಾರ್ವೆಸ್ಟಿಂಗ್ ಅಥವಾ ಮಳೆಕೊಯ್ಲಿನ ಮೂಲಕ ಎಲ್ಲರೂ ತಮ್ಮ ಅಳಿಲುಸೇವೆ ನೀಡಬಹುದು. ಹೆಚ್ಚು ಖರ್ಚಿಲ್ಲದೆ ಸರಳವಿಧಾನದಲ್ಲಿ ಮಳೆಕೊಯ್ಲು ಮಾಡಬಹುದು. ಆಗಸದಿಂದ ಬೀಳುವ ಶುದ್ಧ ಮಳೆ ನೀರು ಸುಮ್ಮನೇ ಹರಿದು, ಚರಂಡಿ ಸೇರಿ ಮುಂದೆ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಮಳೆ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು ಅಥವಾ ಅಂತರ್ಜಲಕ್ಕೆ ಅದನ್ನು ಸೇರಿಸುವುದು ಮಳೆಕೊಯ್ಲಿನ ಹಿಂದಿರುವ ಸಿದ್ಧಾಂತ.

ಒಮ್ಮೆ ಮಳೆ ನೀರ ಕೊಯ್ಲನ್ನು ಆರಂಭಿಸಿದರೆ, ಸಣ್ಣ - ಪುಟ್ಟ ನಿರ್ವಹಣೆಗಳ ಹೊರತಾಗಿ ಬೇರೆ ಖರ್ಚು ಇರುವುದಿಲ್ಲ. ಇದಕ್ಕೆ ನಿಮ್ಮ ಸಮಯ ಹೆಚ್ಚೇನೂ ಬೇಕಾಗಿಲ್ಲ. ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಇಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಅರವತ್ತರಿಂದ ಅರವತ್ತೈದು ಮಳೆ ದಿನಗಳು ಸಿಗುತ್ತವೆ. ದಿನವೊಂದಕ್ಕೆ ಸರಾಸರಿ 30 ಮಿಲಿಮೀಟರ್ ಮಳೆ ಆಗುತ್ತದೆ. ಮೂವತ್ತು ಅಡಿ ಉದ್ದ ನಲವತ್ತು ಚದರಡಿ ವಿಸ್ತೀರ್ಣದ ನೆಲದ ಮೇಲೆ ವರ್ಷಕ್ಕೆ ಸುಮಾರು ಒಂದು ಲಕ್ಷ ಲೀಟರ್ ನೀರಿನಷ್ಟು ಮಳೆ ಸುರಿಯುತ್ತದೆ. ಒಮ್ಮೆ ಆಲೋಚಿಸಿ ನೋಡಿ, ಎಷ್ಟೊಂದು ನೀರು ಪೋಲಾಗುತ್ತಿದೆ!

ಈ ರೀತಿ ಹರಿದು ಹೋಗುವ ಮಳೆ ನೀರನ್ನು ಸಂಗ್ರಹ ಮಾಡುವ ಬಗೆ ಬಲು ಸುಲಭ. ನಿಮ್ಮ ಬಳಿ ಇರುವ ಸೀಮಿತ ಸಂಪನ್ಮೂಲಗಳಿಂದಲೇ ಮಳೆಕೊಯ್ಲು ಮಾಡಬಹುದು. ನೀವಿರುವುದು ಸಣ್ಣ ಮನೆಯಾಗಿದ್ದು , ಮಳೆ ನೀರಿನ ಸಂಗ್ರಹಕ್ಕೆ ಜಾಗದ ಕೊರತೆ ಬರಬಹುದು ಎಂಬ ಸಂಶಯವಿರಬಹುದು. ಆದರೆ, ಮಳೆ ಕೊಯ್ಲಿಗೆ ಎಷ್ಟು ಸಣ್ಣ ಜಾಗ ಸಿಕ್ಕಿದರೂ ಸಾಕು.

ಮಳೆಕೊಯ್ಲು ಮಾಡುವ ಸರಳ ರೀತಿ ಹೀಗಿದೆ:

1. ತಾರಸಿ ಮನೆ ನಿಮ್ಮದಾಗಿದ್ದರೆ, ಮನೆಯ ತಾರಸಿಯಿಂದ ಮಳೆ ನೀರು ಹೊರ ಹೋಗಲು ಪೈಪ್ ಇದ್ದೇ ಇರುತ್ತದೆ. ಆ ಪೈಪನ್ನು ನೇರವಾಗಿ ಪ್ಲಾಸ್ಟಿಕ್ ಡ್ರಮ್ ಅಥವಾ ಸಿಮೆಂಟಿನ ಸಂಪಿಗೆ ಜೋಡಿಸಿ.
2. ನಿಮ್ಮದು ಹೆಂಚಿನ ಮನೆಯಾದರೆ ಅಡ್ಡಡ್ಡ ಕತ್ತರಿಸಿದ ದೊಡ್ಡ ಪಿವಿಸಿ ಪೈಪುಗಳನ್ನು ಹೆಂಚುಗಳ ಕೊನೆಗೆ ಜೋಡಿಸಿ, ನೀರನ್ನು ಡ್ರಮ್ ಅಥವಾ ಸಂಪಿನೊಳಗೆ ಹೋಗುವಂತೆ ಮಾಡಿ.
3. ಜಾಳಿಗೆಯೊಂದನ್ನು ಅಳವಡಿಸುವ ಮೂಲಕ ಪೈಪಿನಿಂದ ಬರುವ ನೀರಿನಲ್ಲಿರುವ ಕಸ ಕಡ್ಡಿ ಡ್ರಮ್-ಗೆ ಅಥವಾ ಸಂಪಿನೊಳಗೆ ಸೇರುವುದನ್ನು ತಡೆಯಿರಿ.
4. ನೀರನ್ನು ಬಳಸಲು ಆರಂಭಿಸಿ.

ನೆಲ ಮಟ್ಟಕ್ಕಿಂತ ಕೆಳಗಿರುವ ನೀರು ಸಂಗ್ರಹಿಸುವ ತೊಟ್ಟಿ ಅಥವಾ ಸಂಪು ನಿಮ್ಮ ಮನೆಯಲ್ಲಿದ್ದರೆ, ದೊಡ್ಡ ಪ್ರಮಾಣದಲ್ಲಿ ಮಳೆಕೊಯ್ಲು ಮಾಡಬಹುದು.

1. ಸಂಗ್ರಹವಾದ ಮಳೆನೀರನ್ನು ಪೈಪೊಂದರಲ್ಲಿ ಬರುವಂತೆ ಮಾಡಬೇಕು.
2. ನೆಲಮಟ್ಟದಲ್ಲಿ 4ರಿಂದ 6 ಅಡಿ ಎತ್ತರ - 3 ಅಡಿ ಅಗಲದ ಫಿಲ್ಟರ್ ನಿರ್ಮಿಸಬೇಕು.
3. ನೀರನ್ನು ಶುದ್ಧಗೊಳಿಸಲು 4 ಇಂಚು ಇದ್ದಿಲು ಮತ್ತು 4 ಇಂಚು ಮರಳನ್ನು ಫಿಲ್ಟರ್ ಗೆ ಸೇರಿಸಬೇಕು.
4. ಇದರ ಮೂಲಕ ಹಾದ ಮಳೆ ನೀರು ಶುದ್ಧಗೊಂಡು ಪೈಪ್ ಮುಖಾಂತರ ಸಂಪನ್ನು ಸೇರುತ್ತದೆ.
5. ಸಂಪಿನಲ್ಲಿ ಸಂಗ್ರಹಗೊಂಡ ನೀರನ್ನು over head tankಗೆ ಸೇರಿಸಿ ಬಳಸಬಹುದು.

ಹೊಸದಾಗಿ ಮನೆ ಕಟ್ಟುತ್ತಿರುವವರು 6,000 ಲೀಟರ್ ನಿಂದ 9,000 ಲೀಟರ್ ಸಾಮರ್ಥ್ಯವಿರುವ ಸಂಪನ್ನು ಕಟ್ಟಿಸುವುದು ಒಳ್ಳೆಯದು. ಒಮ್ಮೆ ಬೀಳುವ ಸಾಧಾರಣ ಮಳೆಗೆ ಮೂರರಿಂದ ಮೂರೂವರೆ ಸಾವಿರ ಲೀಟರ್ ನೀರು ಸಂಪಲ್ಲಿ ಸಂಗ್ರಹವಾಗುತ್ತದೆ. ನಿಮ್ಮ ಬಳಿ ಸಂಪು ಇಲ್ಲದಿದ್ದರೂ ಚಿಂತೆ ಮಾಡಬೇಕಿಲ್ಲ. ಮನೆಯ ಪಕ್ಕದಲ್ಲೇ 8-12 ಅಡಿಗಳ ಎತ್ತರದಲ್ಲಿ ಟ್ಯಾಂಕೊಂದನ್ನು ನಿರ್ಮಿಸಿ, ನೀರೆಲ್ಲವನ್ನು ಅಲ್ಲಿ ಸಂಗ್ರಹಿಸಿ ನಂತರ ಆ ನೀರನ್ನು ಬಳಸಿಕೊಳ್ಳಬಹುದು. ಈ ವ್ಯವಸ್ಧೆಯಲ್ಲಿ ಟ್ಯಾಂಕ್ ನಿಂದ ನಲ್ಲಿಗಳಿಗೆ ಸಂಪರ್ಕ ಕೊಟ್ಟು, ನೀರನ್ನು ನೇರವಾಗಿ ನಿಮ್ಮ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿದೆ.

ಮಳೆಕೊಯ್ಲು ಮಾಡುವವರಿಗೆ ಸಲಹೆಗಳು:

1. ಮನೆಯ ಹಂಚು, ತಾರಸಿಯ ಮೇಲ್ಮೈಯನ್ನು ಗಲೀಜಾಗದಂತೆ ನೋಡಿಕೊಳ್ಳಿ.
2. ತಾರಸಿಯಲ್ಲಿ ರಾಸಾಯನಿಕಗಳು, ಕ್ರಿಮಿನಾಶಕಗಳನ್ನು ಸಂಗ್ರಹಿಸಬೇಡಿ.
3. ಮಳೆಗಾಲದ ಆರಂಭಕ್ಕೆ ಮುನ್ನ ಹಂಚು, ತಾರಸಿಯನ್ನು ಗುಡಿಸಿ ಚೊಕ್ಕಟವಿರಿಸಿಕೊಳ್ಳಿ.
4. ಮೊದಲ ಮಳೆಯ ನೀರಿನ ಸಂಗ್ರಹ ಬೇಡ.
5. ಮಳೆಗಾಲ ಮುಗಿದ ನಂತರ ಪೈಪುಗಳನ್ನು ಕಳಚಿಡಿ.
6. ಎರಡು ವರ್ಷಗಳಿಗೊಮ್ಮೆ ಫಿಲ್ಟರ್ ನ ಇದ್ದಿಲು ಮತ್ತು ಮರಳು ಬದಲಾಯಿಸಿ.
7. ಕುಡಿಯಲು ಮಳೆ ನೀರನ್ನು ಬಳಸುತ್ತೀರಾದರೆ:
a. ಪಾದರಕ್ಷೆ ಬಳಸಿ ತಾರಸಿಯಲ್ಲಿ ಓಡಾಡಬೇಡಿ.
b. ಡಿಟರ್ಜಂಟ್ ಯುಕ್ತ ನೀರು ಇರುವ ಬಟ್ಟೆಗಳನ್ನು ತಾರಸಿಯಲ್ಲಿ ಒಣಗಿಸಬೇಡಿ.

ಮಳೆಕೊಯ್ಲಿನಿಂದ ಸಂಗ್ರಹಿಸಿದ ಮಳೆನೀರನ್ನು ಎಷ್ಟುದಿನ ಬೇಕಾದರೂ ಇಡಬಹುದು. ಗಾಳಿ, ಬೆಳಕು ಬೀಳದ ಜಾಗದಲ್ಲಿ ನೀರನ್ನು ಸಂಗ್ರಹಿಸಿಟ್ಟು ನಿಮಗೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಮಳೆ ಬರುತ್ತಿರುವಾಗ ಅದರ ಪ್ರಾಮುಖ್ಯತೆ ತಿಳಿಯುವುದಿಲ್ಲ. ಹೀಗಾಗಿ, ಈ ಬಿರು ಬೇಸಗೆಯಲ್ಲೇ, ಮಳೆ ನೀರು ಕೊಯ್ಲಿಗೆ ಬೇಕಾದ ಸಿದ್ಥತೆ ಮಾಡಿಕೊಂಡರೆ ಮುಂದೆ ಅನುಕೂಲವಾದೀತು.

English summary
Useful tips to rainwater harvesting. Let's find solution to water crisis in cities like bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X