ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೆಗಳು ನೂರು, ನಿರೀಕ್ಷೆಗಳು 10 - ವಸಂತ ಶೆಟ್ಟಿ

By ವಸಂತ ಶೆಟ್ಟಿ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ವಸಂತ ಶೆಟ್ಟಿ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲತಾಣಗಳಿಂದ ನಾನೇನು ಬಯಸುತ್ತೇನೆ.]

ಕನ್ನಡ ಮಿಂಬಲೆಯಿಂದ ಒಬ್ಬ ಬಳಸುಗನಾಗಿ ನಾನೇನು ಬಯಸುತ್ತೇನೆ ಅನ್ನುವುದನ್ನು ತಿಳಿಯುವ ಈ ಪ್ರಯತ್ನ ಮೆಚ್ಚಬೇಕಾದದ್ದು. ಇಂಗ್ಲಿಷ್ ಮತ್ತು ಕನ್ನಡ ಜಗತ್ತಿನ ನಡುವೆ ನಿರಂತರವಾಗಿ ಪಯಣಿಸುವ ನನ್ನಂತಹ ಕನ್ನಡಿಗರು ಇಂದು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಹೊರ ದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ಇವರ ಸಂಖ್ಯೆ ಇನ್ನು ಹೆಚ್ಚಿನೆಣಿಕೆಯಲ್ಲಿದೆ. ಇಂಗ್ಲಿಷ್ ಕಣ್ಣಿನಿಂದ ಮಿಂಬಲೆಯನ್ನು ಕಂಡಾಗ ಅಲ್ಲಿ ಏನೆಲ್ಲ ಸಾಧ್ಯವೋ ಅದೆಲ್ಲವೂ ಕನ್ನಡದಲ್ಲಿ ಸಾಧ್ಯವಾಗಲಿ ಅನ್ನುವುದು ಒಳ್ಳೆಯ ಆಶಯವೇ ಆದರೂ ಇಂಗ್ಲಿಷ್ ಗಿರುವ ಮಾರುಕಟ್ಟೆ ಮೌಲ್ಯದ ಎದುರು ಕನ್ನಡಕ್ಕಿರುವ ಸಾಧ್ಯತೆ ಕಂಡಾಗ ಸದ್ಯಕ್ಕಂತೂ ಇದೊಂದು ಒಳ್ಳೆಯ ಆಶಯವಷ್ಟೇ ಅನ್ನಬಹುದು.

ಆದರೂ ಈಗಿರುವ ಕನ್ನಡ ಮಿಂಬಲೆಯಲ್ಲಿ ಕನ್ನಡಕ್ಕಿರುವ ಸೀಮಿತ ಮಾರುಕಟ್ಟೆಯ ಚೌಕಟ್ಟಿನಲ್ಲಿ ಕೆಳಗಿನ ಕೆಲವು ವಿಷಯಗಳು ಕನ್ನಡದಲ್ಲಿ ಸಾಧ್ಯವಾದಲ್ಲಿ ಅದರಿಂದ ಕನ್ನಡದ ಮಾರುಕಟ್ಟೆಯೂ ಹೆಚ್ಚಬಹುದು ಮತ್ತು ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಹರಡುವಿಕೆಯ ನಿಟ್ಟಿನಲ್ಲೂ ಅದು ಸಹಾಯ ಮಾಡಬಹುದು ಎಂದು ನನಗನ್ನಿಸುತ್ತೆ.

Kannada online survey 2014 : My expectations Vasant Shetty, Bengaluru

1. ಕನ್ನಡ ಪುಸ್ತಕಗಳ ಇ-ಪಬ್ಲಿಶಿಂಗ್ : ಕನ್ನಡ ಪುಸ್ತಕಗಳನ್ನು ಕೊಂಡುಕೊಳ್ಳಲು ಒಂದೆರಡು ತಾಣಗಳಿದ್ದರೂ ಅವುಗಳಲ್ಲಿ ಹಣ ಪಾವತಿಯ ಸಮಸ್ಯೆಯಿದೆ. ಜೊತೆಗೆ ಆರ್ಡರ್ ಮಾಡಿದ ಪುಸ್ತಕ ಮನೆಗೆ ತಲುಪಲು ಬಹಳ ಸಮಯವೂ ಹಿಡಿಯುತ್ತೆ. ಜೊತೆಗೆ ಪುಸ್ತಕಕ್ಕೆ ಸಂಬಂಧಿಸಿದ ದೂರು ದಾಖಲಿಸುವುದಕ್ಕೆ ಸರಿಯಾದ ಆಯ್ಕೆಗಳಿಲ್ಲ. ಜೊತೆಯಲ್ಲಿ ಇ-ಪಬ್ಲಿಶಿಂಗ್ ತರದ ಪ್ರಯತ್ನಗಳು ಅಷ್ಟಾಗಿಲ್ಲ. ಒಂದು ಹೊಸ ಪುಸ್ತಕ ಮಾರುಕಟ್ಟೆಗೆ ಬಂದರೆ ಅದರ ಕಿಂಡಲ್ ವರ್ಶನ್ ಕೂಡಾ ಕನ್ನಡದಲ್ಲಿ ಸಿಗುವಂತಾಗಬೇಕು. ಇವತ್ತಿಗೆ ಇದರ ಮಾರುಕಟ್ಟೆ ಸಾಮರ್ಥ್ಯ ತುಂಬಾ ದೊಡ್ಡದಿಲ್ಲದಿರಬಹುದು, ಆದರೆ ಡಿಜಿಟಲ್ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಹೆಚ್ಚಿನ ಭಾಷೆಗಳಲ್ಲಿ ಈ ಸ್ಟಾರ್ಟಿಂಗ್ ಟ್ರಬಲ್ ಇದ್ದೇ ಇದೆ.

2. ಕನ್ನಡ ಸಿನೆಮಾ ಹಾಡುಗಳು : ಕನ್ನಡ ಸಿನೆಮಾ ಹಾಡುಗಳನ್ನು ಆನ್ ಲೈನ್ ಕೊಂಡುಕೊಳ್ಳಲು ಇಂದು ಹರಸಾಹಸ ಮಾಡಬೇಕಿದೆ. ಯುಟ್ಯೂಬಿನಲ್ಲಿ ಕನ್ನಡದ ಹೆಚ್ಚಿನ ಮ್ಯೂಸಿಕ್ ಕಂಪನಿಗಳು ಸಕ್ರೀಯವಾಗಿದ್ದರೂ ಹೊಸ, ಹಳೆಯ ಹಾಡುಗಳನ್ನು ಹಣ ಕೊಟ್ಟು ಕೊಂಡುಕೊಳ್ಳುವುದು ಇವತ್ತಿಗೂ ಕಷ್ಟದ ಕೆಲಸವಾಗಿದೆ. ಒಂದು ಕಡೆ ಕಲೆಗೆ ಬೆಲೆ ಕೊಟ್ಟು ಹಣ ಕೊಟ್ಟು ಕೊಳ್ಳಬೇಕು ಅನ್ನುವಂತವರು ಸಾಕಷ್ಟಿದ್ದರೂ ಅವರ ಬೇಡಿಕೆ ಪೂರೈಸುವ ಕನ್ನಡದ್ದೇ ತಾಣಗಳು ಇಲ್ಲ.

3. ಪ್ರವಾಸಿ ತಾಣಗಳ ಸಮಗ್ರ ಮಾಹಿತಿ : ಪ್ರವಾಸೋದ್ಯಮದ ವಿಷಯದಲ್ಲಿ ಕರ್ನಾಟಕ ಗಾಡ್ಸ್ ಓನ್ ಕಂಟ್ರಿಗೂ ಕಮ್ಮಿಯಿಲ್ಲ. ಆದರೆ ಇವತ್ತಿಗೂ ಕರ್ನಾಟಕದ ಪ್ರವಾಸಿ ಸ್ಥಳಗಳು, ಅಲ್ಲಿನ ಇತಿಹಾಸ, ಸ್ಥಳ ವಿಶೇಷತೆ, ಇಳಿದುಕೊಳ್ಳಲು ಇರುವ ವ್ಯವಸ್ಥೆ, ಊಟದ ವ್ಯವಸ್ಥೆ ಇತ್ಯಾದಿಗಳನ್ನು ತಿಳಿಸುವ ಸರಿಯಾದ ತಾಣಗಳು ಇಲ್ಲ. ಬೆಂಗಳೂರಿನ ಐಟಿ ಉದ್ಯಮದಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ. ದೊಡ್ಡ ರಜೆಯಲ್ಲಿ ಬಹುತೇಕರು ಕರ್ನಾಟಕ ಸುತ್ತುವ ಆಸೆ ಹೊಂದಿದ್ದರೂ ಸರಿಯಾದ ಮಾಹಿತಿಯಿಲ್ಲದೇ ಮತ್ತದೇ ಊಟಿ, ಕೊಡೈಕೆನಾಲ್, ಮೂನ್ನಾರ್ ಎಂದು ಹೊರ ರಾಜ್ಯಕ್ಕೆ ತೆರಳುತ್ತಾರೆ. ಇಂತಹದೊಂದು ಮಾಹಿತಿ ತಾಣ ಕನ್ನಡದಲ್ಲಿ ಕಟ್ಟಬಹುದು. ಇಲ್ಲಿ ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿ, ಸ್ಪರ್ಧೆ ಏರ್ಪಡಿಸಿ ಹೆಚ್ಚೆಚ್ಚು ಕನ್ನಡಿಗರು ಇದರಲ್ಲಿ ಪಾಲ್ಗೊಂಡು ಇದೊಂದು ಕಮ್ಯೂನಿಟಿ ಇನಿಶಿಯೇಟಿವ್ ಅನ್ನುವಂತೆ ಮಾಡಬೇಕು.

4. ವೈವಿಧ್ಯಮಯ ವಿಷಯಗಳ ಬರಹ : ಕನ್ನಡದ ಪೋರ್ಟಲ್ ಗಳಲ್ಲಿ ನಾಗರಿಕ ಪತ್ರಿಕೋದ್ಯಮಕ್ಕೆ ಇನ್ನಷ್ಟು ಆದ್ಯತೆ ಕೊಡಬೇಕು. ರಾಜಕೀಯ, ಅರ್ಥ ವ್ಯವಸ್ಥೆ, ತಂತ್ರಜ್ಞಾನ, ಸಿನೆಮಾ ಸಂಬಂಧಿಸಿದಂತೆ ಹೊಸ ಹೊಸ ಯುವ ಬರಹಗಾರರು ಬರೆದರೆ ಅದನ್ನು ಓದಲು ನಾನಂತೂ ಬಯಸುವೆ. ಫೇಸ್ ಬುಕ್/ಟ್ವಿಟರ್ ಮುಂತಾದ ತಾಣದಲ್ಲಿ ಸಕ್ರೀಯರಾಗಿರುವ ಕನ್ನಡ ಸಮಾಜದ ಗಣ್ಯರು, ಚಿಂತಕರು ಮಿಂಬಲೆಯ ಓದುಗರಿಗೆಂದೇ ಕನ್ನಡ ಪೋರ್ಟಲ್ ಗಳಲ್ಲಿ ಬರೆಯುವಂತಾದರೆ ಅದೊಂದು ಒಳ್ಳೆಯ ಬೆಳವಣಿಗೆಯಾಗಬಹುದು.

5. ಮಕ್ಕಳಿಗಾಗಿ ಅನಿಮೇಶನ್ ಹಾಡು : ಮಕ್ಕಳಲ್ಲಿ ಕನ್ನಡದ ಪ್ರಜ್ಞೆ ತರಲು ಮಕ್ಕಳನ್ನು ಗುರಿಯಾಗಿರಿಸಿಕೊಂಡ ಕನ್ನಡದ ಅನಿಮೇಶನ್ ಕಂಟೆಂಟ್, ಚಿತ್ರಗಳನ್ನಾಧರಿಸಿದ ಕನ್ನಡ ಕತೆಗಳು, ಅಜ್ಜಿ ಕತೆಗಳು, ಕನ್ನಡಿಗರ ಇತಿಹಾಸದ ಕತೆಗಳು ಮುಂತಾದವು ಒಂದೆಡೆ ಸಿಗುವಂತಾದರೆ ಒಳ್ಳೆಯದು. ಈ ಸದ್ಯಕ್ಕೆ ಕೆಲವೇ ಕೆಲವು ಅನಿಮೇಶನ್ ಹಾಡುಗಳು ಯುಟ್ಯೂಬಿನಲ್ಲಿ ಸಿಗುತ್ತವೆ.

6. ಕನ್ನಡ ಸೊಗಡಿನ ಆಹಾರಗಳು : ಕನ್ನಡಿಗರಿಗೆ ಯುನಿಕ್ ಆಗಿರುವ ಆಹಾರ ಉತ್ಪನ್ನಗಳು (ಅಪ್ಪೆ ಮಿಡಿ ಉಪ್ಪಿನಕಾಯಿ, ಗುರೆಳ್ಳು, ಅಗಸಿ ಚಟ್ನಿಪುಡಿ, ಮಂಗಳೂರು ಬಜ್ಜಿ ಮುಂತಾದವು), ಕನ್ನಡಿಗರ ಆಹಾರ ದೊರೆಯುವ ಹೋಟೆಲ್ ಗಳ ಪಟ್ಟಿ ಮಾಡಿರುವ ತಾಣವೊಂದು ಇಂಗ್ಲಿಷ್/ಕನ್ನಡ ಎರಡರಲ್ಲೂ ಸಿಗಬೇಕಿದೆ. ಆಂಧ್ರ ಶೈಲಿ, ಚೆಟ್ಟಿನಾಡ್ ಶೈಲಿ, ಪಂಜಾಬಿ ಫುಡ್ ನಮ್ಮಲ್ಲಿ ಬ್ರಾಂಡ್ ಆಗಿರುವುದನ್ನು ಕಂಡಾಗ ಇಂತಹುದೇ ಪ್ರಯತ್ನ ನಮ್ಮ ಆಹಾರದ ಬಗ್ಗೆ ಕನ್ನಡಿಗರಲ್ಲೂ, ಹೊರಗಿನವರಲ್ಲೂ ಮಿಂಬಲೆಯ ಮೂಲಕ ಮಾಡಿದರೆ ಒಳ್ಳೆಯದು ಅನ್ನಿಸುತ್ತೆ.

7. ಮೊಬೈಲ್ ಫ್ರೆಂಡ್ಲಿ ವೆಬ್ ತಾಣ : ಕನ್ನಡದ ಹೆಚ್ಚಿನ ತಾಣಗಳು ಮೊಬೈಲ್ ಫ್ರೆಂಡ್ಲಿ ಆಗಿಲ್ಲ. ಓದುಗ ಬಳಸುವ ಯಾವುದೇ ಸಾಧನದಲ್ಲೂ ಒಂದೇ ರೀತಿಯ ಯೂಸರ್ ಎಕ್ಸಪೀರಿಯನ್ಸ್ ದೊರಕುವಂತೆ ಮಾಡಬೇಕು.

8. ಕನ್ನಡ ನಾಡಿನ ಸುದ್ದಿಗಳು : ಕನ್ನಡದ ಸುದ್ದಿ ಪೋರ್ಟಲ್ ಗಳಲ್ಲಿ ಕರ್ನಾಟಕದ ಒಳಗಿನ ಸುದ್ದಿಗಳು ಅಷ್ಟಾಗಿ ಕಂಡು ಬರುವುದಿಲ್ಲ. ನಾಗರೀಕ ಪತ್ರಿಕೋದ್ಯಮದ ಹಾದಿ ಬಳಸಿ ಹೆಚ್ಚಿನ ಜಿಲ್ಲೆಗಳ ಸುದ್ದಿಯನ್ನು ಒಂದೇ ಪೋರ್ಟಲಿನಡಿ ದೊರಕುವಂತೆ ಮಾಡುವುದು ಸಮಗ್ರ ಕರ್ನಾಟಕದ ಸುದ್ದಿ ಓದುಗರಿಗೆ ಓದಗಿಸುವಂತದ್ದು.

9. ಕನ್ನಡ ಕಲಿಸುವ ಆಡಿಯೋ, ವಿಡಿಯೋ : ಕನ್ನಡ ಕಲಿಯುವ ಅಸಕ್ತಿ ಇರುವ ಲಕ್ಷಾಂತರ ಪರಭಾಷಿಕರಿಗೆ ನೆರವಾಗಲು ಆಡಿಯೋ/ವಿಡಿಯೋ ಬಳಸಿ ಕನ್ನಡ ಕಲಿಸುವಂತಹ ತಾಣಗಳ ಕೊರತೆಯಿದೆ. ಇದನ್ನು ಒಂದು ಮಟ್ಟಿಗಿನ ಫೀಸ್ ಕೊಟ್ಟು ಕೊಂಡುಕೊಳ್ಳುವ ವ್ಯವಸ್ಥೆ ಕಲ್ಪಿಸಬಹುದು ಮತ್ತು ಇದಕ್ಕೆ ಬೇಡಿಕೆಯೂ ಇದೆ. ಯಾರಾದರೂ ಗುಜರಾತಿ ಇದನ್ನು ಬಾಚಿಕೊಳ್ಳುವ ಮುನ್ನ ಕನ್ನಡಿಗರೇ ಇದನ್ನು ಮಾಡುವಂತಾಗಲಿ.

10. ಶೈಕ್ಷಣಿಕ ಮಾಹಿತಿಯ ಭಂಡಾರ : ಶಿಕ್ಷಣಕ್ಕೆ ಸಂಬಂಧಿಸಿದ ತಾಣಗಳು ಕನ್ನಡದಲ್ಲಿ ಕಡಿಮೆಯಿವೆ. ಕರ್ನಾಟಕದ ಒಳಗೆ, ಹೊರ ರಾಜ್ಯ, ಹೊರದೇಶದಲ್ಲಿರುವ ಶಿಕ್ಷಣ ಸೌಲಭ್ಯ, ಸವಲತ್ತುಗಳ ಬಗ್ಗೆ ಪತ್ರಿಕೆಗಳ ಶಿಕ್ಷಣ ಪುರವಣಿ ಮಾದರಿಯಲ್ಲಿ ಸಮಗ್ರ ಮಾಹಿತಿ ಕೊಡುವಂತಹ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಿರುವ ಸರಕು, ಪುಸ್ತಕ ಕೊಂಡುಕೊಳ್ಳಲಾಗುವ, ಪರೀಕ್ಷೆ ಫಲಿತಾಂಶ ತಿಳಿಯುವ ಹೀಗೆ ಎಲ್ಲವನ್ನೂ ಒಂದೇ ಸೂರಿನಡಿ ನೀಡುವ ತಾಣಗಳು ಕನ್ನಡದಲ್ಲಿದ್ದರೆ ಒಳ್ಳೆಯದು.

ಸಾಮಾಜಿಕ ತಾಣದಲ್ಲಿ ವಸಂತ್ ಶೆಟ್ಟಿ : ಟ್ವಿಟ್ಟರ್ | ಫೇಸ್‌ ಬುಕ್

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Vasant Shetty from Bengaluru, one of the respondents lists out his top 10 expectations. Kannada addict Vasant argues 'Most of the websites are not mobile friendly. The User experience has to improve'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X