ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೃದ್ಧ ವೆಬ್‌ಸೈಟು ಇನ್ನಾದ್ರೂ ಸಿಗಲಿ - ವೈಶಾಲಿ ಹೆಗಡೆ

By ವೈಶಾಲಿ ಹೆಗಡೆ, ಬೋಸ್ಟನ್, ಅಮೆರಿಕ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ವೈಶಾಲಿ ಹೆಗಡೆ, ಬಾಸ್ಟನ್, ಯುಎಸ್ಎ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲತಾಣಗಳಿಂದ ನಾನೇನು ಬಯಸುತ್ತೇನೆ.]

ಇಂದು ಜಗತ್ತು ಬೆರಳ ತುದಿಯಲ್ಲೇ ಲಭ್ಯವಿರುವಂತೆ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವಾಗ, ಈ ಅಂತರ್ಜಾಲದ ಗೆರೆಗಳ ನಡುವೆ ನನ್ನ ಕನ್ನಡವನ್ನೂ ಕಾಣಬಯಸುತ್ತವೆ ಕಣ್ಣುಗಳು. ಆದರೆ ಕಣ್ಣಿಗೆ ಕಂಡ ಕನ್ನಡವೆಲ್ಲ ಹೃದಯವೇದ್ಯವಾಗಿ ಮಿದುಳ ಮೂಲೆಯಲ್ಲಿ ಸೇರಿಕೊಳುವುದಿಲ್ಲ. ಇಂದು ಅಂತರ್ಜಾಲದಲ್ಲಿ ಲಭ್ಯವಿರುವ ಬಹುತೇಕ ಕನ್ನಡ ತಾಣಗಳ ಪರಿಸ್ಥಿತಿ ಇದು.

ಪ್ರಸ್ತುತ ಕನ್ನಡ ಅಕ್ಷರ ಲೋಕವನ್ನು ಸ್ಪಷ್ಟವಾಗಿ ಸುದ್ದಿ ಮಾಧ್ಯಮ ಮತ್ತು ಸಾಹಿತ್ಯ ಮಾಧ್ಯಮ ಎಂದು ವಿಂಗಡಿಸಬಹುದು. ಸುದ್ದಿ ಮಾಧ್ಯಮ ಈ ನಿಟ್ಟಿನಲ್ಲಿ ಬಹಳ ಮುಂದುವರಿದಿದೆ. ಕನ್ನಡದ ಮುಖ್ಯ ಪತ್ರಿಕೆಗಳೆಲ್ಲದರ ಅಂತರ್ಜಾಲ ಆವೃತ್ತಿ ಲಭ್ಯವಿದೆ. ಸುದ್ದಿಯನ್ನೇ ಕೇಂದ್ರವಾಗಿಸಿಕೊಂಡ ಅಂತರ್ಜಾಲ ಪತ್ರಿಕೆಗಳೂ ಕಾಣಸಿಗುತ್ತಿವೆ. ಆದರೆ ಸಾಹಿತ್ಯಿಕವಾಗಿ ಅಥವಾ ಮ್ಯಾಗಜಿನ್ ಎಂಬಂತಹ ಅನುಭವ ಕೊಡುವ ಸಮಗ್ರ ಓದಿನ ಅನುಭವ ಕೊಡುವ ಅಂತರ್ಜಾಲ ತಾಣಗಳು ಮಾತ್ರ ಇಲ್ಲವೇ ಇಲ್ಲವೆನ್ನಬಹುದು. [ಗಣಪಣ್ಣ ವೀಕೆಂಡ್ ಬಾರಣ್ಣ : ವೈಶಾಲಿ ಹೆಗಡೆ]

Kannada online survey 2014 : My expectations Vaishali Hegde, USA

ಹಲವು ಕನ್ನಡ ವಾರಪತ್ರಿಕೆ, ಮಾಸಪತ್ರಿಕೆಗಳು ಅಂತರ್ಜಾಲದಲ್ಲಿ ಸಿಕ್ಕರೂ ಅವು ನಿಜದ ಅರ್ಥದಲ್ಲಿ ಆನ್ಲೈನ್ ಆಗಿಲ್ಲ. ಇಡೀ ಪುಸ್ತಕ /ಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಜಾಲತಾಣಕ್ಕೆ ಏರಿಸಿದಂತೆ ಇದ್ದು, ಓದಿನ ಓಘಕ್ಕೆ, ಅನುಭವಕ್ಕೆ ಬಹಳೇ ಕಿರಿಕಿರಿಯಾಗುವಂತಿದೆ. ಕನ್ನಡದ ಬ್ಲಾಗ್ ಬರಹಗಳಂತೂ ಲೆಕ್ಕವಿಲ್ಲದಷ್ಟು ಇವೆ. ಈ ತಾಣಗಳು ಜಾಗತಿಕ ಕನ್ನಡ ಓದುಗನ ದಾಹವನ್ನು ಸ್ವಲ್ಪ ಮಟ್ಟಿಗೆ ತೀರಿಸಿದರೂ ಇವುಗಳಲ್ಲಿ ಉತ್ತಮ ಅಭಿರುಚಿ ಹಾಗೂ ಒಳ್ಳೆಯ ಗುಣಮಟ್ಟದ ಬರಹಗಳ ಜೊತೆ ತೀರ ಸಪ್ಪೆ, ಜೊಳ್ಳುಗಳೂ ಇರುವುದರಿಂದ ಹುಡುಕಿ ಹುಡುಕಿ ಓದುವ ಪರಿಸ್ಥಿತಿಯಿದೆ ಹಾಗೂ ಉತ್ತಮ ಸರಕು ಸಿಕ್ಕೆ ಬಿಡುವುದೆಂಬ ನಂಬಿಕೆಯಿಲ್ಲ. ಒಂದೆರಡು ಜಾಲತಾಣಗಳು ಈ ನಿಟ್ಟಿನಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದವು. ಆದರೆ ಪತ್ರಿಕೆ ಕೂಡ ಉದ್ಯಮವೇ ಆಗಿರುವುದರಿಂದ ಆದಾಯವಿಲ್ಲದ ಉತ್ತಮ ಉದ್ದೇಶ ನಡೆಯುವುದು ಕಷ್ಟ.

ವೆಬ್ ಸೈಟುಗಳಿಗೆ ಆರ್ಥಿಕ ಬೆಂಬಲ ಬೇಕು : ಕನ್ನಡದ ಉತ್ತಮ ಅಂತರ್ಜಾಲ ಪತ್ರಿಕೆಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಮುಗ್ಗರಿಸುವುದನ್ನು ಕಂಡಾಗ ಸಂಕಟವಾಗುತ್ತದೆ. ಒಂದು ಸಾಹಿತ್ಯಿಕ ಗುಣಮಟ್ಟವನ್ನು ಕಾಯ್ದುಕೊಂಡು ನಡೆಸಬೇಕಾದರೆ ಪತ್ರಿಕೆಗೆ ಸಶಕ್ತ ಕಾರ್ಯನಿರ್ವಾಹಕ ತಂಡವೊಂದು ಮುಖ್ಯ. ಜೊತೆಗೆ ಅದನ್ನು ನಿರ್ವಹಿಸಲು ಬೇಕಾದ ಬಂಡವಾಳ. ಇಂದು ಅಂತರ್ಜಾಲ ಪತ್ರಿಕೆ ವಿಶ್ವದ ಮೂಲೆಗಳಲ್ಲಿರುವ ಕನ್ನಡಿಗರಿಗೆ ಕನ್ನಡ ನೆಲದೊಂದಿಗಿನ ನಿತ್ಯದ ಕೊಡುಕೊಳ್ಳುವಿಕೆಯನ್ನು ಒದಗಿಸಿದರೂ, ಗುಣಮಟ್ಟದಲ್ಲಿ ಬಹಳಷ್ಟು ಬದಲಾಗಬೇಕಾಗಿದೆ. [ವಸಂತ್ ಶೆಟ್ಟಿ ಲೇಖನ]

ಕನ್ನಡ ಅಂತರ್ಜಾಲ ಪತ್ರಿಕೆಗಳು ಮುದ್ರಣ ಮಾಧ್ಯಮದ ಮ್ಯಾಗಜಿನ್ ಗಳಂತೆಯೆ ಗುಣಮಟ್ಟ ಕಾಯ್ದುಕೊಳ್ಳಬೇಕು. ವೈವಿಧ್ಯತೆಯ ಜೊತೆಗೆ ಪತ್ರಿಕೆಯ ಓದಿನ ಶಿಸ್ತನ್ನು ಒದಗಿಸುವಂತಿರಬೇಕು. ಖ್ಯಾತನಾಮರ ಬರಹಗಳು, ವಿಚಾರ ಸಂಕಿರಣಗಳು, ಆತ್ಮಕತೆಗಳ ತುಣುಕುಗಳು, ಜೊತೆಗೆ ನವ ಬರಹಗಾರರ ಉತ್ತಮ ಬರಹಗಳು, ಜಾಗತಿಕ ಮಾಹಿತಿಗಳ ಆಧಾರಿತ ಲೇಖನಗಳು ಎಲ್ಲ ಸಮತೂಕದಲ್ಲಿದ್ರೆ ಚೆನ್ನ. ಒಂದೇ ದಿನ ಮಣಗಟ್ಟಲೆ ವಿಷಯಗಳನ್ನು ಕೊಡುವುದಕ್ಕಿಂತ ಬೆರಳೆಣಿಕೆಯಷ್ಟು ಸಾಂದ್ರ ವಿಷಯಾಧಾರಿತ ಲೇಖನಗಳಿದ್ದಲ್ಲಿ ಓದಲೂ ಸುಲಭ ಮತ್ತು ಪತ್ರಿಕೆಯ ಬಗೆಗಿನ ಕುತೂಹಲವನ್ನು ದಿನವೂ ಕಾಯ್ದುಕೊಳ್ಳಬಹುದು.

ಪತ್ರಿಕೆಗೆ ಒಂದು ನಿಯಮಿತತೆ ಅಗತ್ಯ. ದಿನವೂ ಈ ಪತ್ರಿಕೆಯಲ್ಲಿ ಇಂಥ ದಿನ ಇಂಥದ್ದು ಓದಲು ಸಿಗುವುದೆಂಬ ಖಾತ್ರಿಯಿರಬೇಕು ಜೊತೆಗೆ ಹೊಸದೇನಾದರೂ ಇರಬೇಕು. ಭಾನುವಾರದ ಸಾಪ್ತಾಹಿಕ, ಗುರುವಾರದ ಧಾರಾವಾಹಿ ಇಂಥ ಹಳೆಯ ನಿಯಮಗಳಿಗೆ ಒಗ್ಗಿಹೋಗಿರುವ ಮನಸ್ಸು ಪತ್ರಿಕೆಯ ರೂಟೀನ್ ವ್ಯವಸ್ಥೆಗೆ ಬೇಗ ಅಂಟಿಕೊಳ್ಳುತ್ತದೆ. ಇದರಿಂದ ಓದುಗರು ಜಾಲತಾಣವನ್ನು ದಿನವೂ ಒಮ್ಮೆ ಭೇಟಿ ನೀಡಲು ಒಂದು ಚೌಕಟ್ಟು ನಿರ್ಮಾಣವಾಗುತ್ತದೆ.

ಸುಂದರ ಯೂಸರ್ ಫ್ರೆಂಡ್ಲಿ ಲೇಔಟ್ : ವಿಷಯಗಳ ಜೊತೆಗೆ ಅಂತರ್ಜಾಲ ಪತ್ರಿಕೆ "ಲೇಔಟ್" ಇನ್ನೊಂದು ಬಹು ಪರಿಣಾಮಕಾರಿಯಾದ ಅಂಶ. ಪತ್ರಿಕೆ ಓದುಗರಿಗೆ ಸುಲಭದಲ್ಲಿ ನಾವಿಗೇಟ್ ಮಾಡಲು ಬರುವಂತೆ, ಹಳೆಯ ಕಡತಗಳನ್ನು ಸುಲಭದಲ್ಲಿ ಹುಡುಕುವಂತೆ ಇರಬೇಕು. ಪರಿವಿಡಿ, ಯಾವ ಪುಟದಲ್ಲಿ ಏನಿದೆ ಎಂಬಂತಹ ಮುದ್ರಣ ಮಾಧ್ಯಮದ ಅಂಶಗಳನ್ನು ಅಂತರ್ಜಾಲಕ್ಕೆ ತಕ್ಕಂತೆ ಮೆನು, ಟ್ಯಾಬ್, ಪೇಜ್ ಗಳಲ್ಲಿ ವಿಂಗಡಿಸಿ ಚೊಕ್ಕಟವಾದ ನಿರೂಪಣೆಯನ್ನು ಜಾಲತಾಣಗಳೂ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅದು ತನ್ನ "ರಿಪೀಟ್ ವ್ಯಾಲ್ಯೂ" ಕಳೆದುಕೊಳ್ಳುತ್ತೆ.

ಲೇಖಕರ ಆಧಾರದ ಮೇಲೆ, ದಿನಾಂಕದ ಆಧಾರದ ಮೇಲೆ, ವಿಷಯ ವ್ಯಾಪ್ತಿಯ ಆಧಾರದ ಮೇಲೆ ಅಥವಾ ಲೇಖನ ಪ್ರಕಾರದ ಆಧಾರದ ಮೇಲೆ ಹೀಗೆ ಹಳೆಯ ಕಡತಗಳನ್ನು ಹುಡುಕುವ ಸಾಧ್ಯತೆ ಜಾಲತಾಣದ ಪತ್ರಿಕೆಗಳಿಗೆ ಅವಶ್ಯ. ಜಾಲತಾಣದ ಅದ್ಭುತ ಶಕ್ತಿಯೇ ಅದರ ಕಡತಗಳ ಆಕರ. ಡೇಟಬೇಸ್ ಅರಸುವ ಸುಲಭದ ಮಾರ್ಗಗಳನ್ನು ಓದುಗನಿಗೆ ಒದಗಿಸುವ ಎಲ್ಲ ತಂತ್ರಜ್ಞಾನಗಳೂ ಇಂದು ಬಹಳಷ್ಟು ಪ್ರಗತಿ ಹೊಂದಿವೆ.

ಒಂದು ತಾಣ ತನ್ನ ವಿಷಯ ಸಾಂದ್ರತೆಯ ಜೊತೆಗೆ ಯೂಸರ್ ಫ್ರೆಂಡ್ಲಿ ಇದ್ದಷ್ಟು ಒಂದು ಖಾಯಂ ಓದುಗರ ಬಳಗವನ್ನು ನಿರ್ಮಿಸಬಲ್ಲದು. ಹಾಗಾಗಿ ಇಂದು ಕನ್ನಡ ಅಂತರ್ಜಾಲ ಪತ್ರಿಕೆಗಳೆಂದರೆ ಬರೀ ವಿಷಯವೊಂದನ್ನೇ ಆಧರಿಸಿ ಏನೋ ಒಂದು ಹೆಣೆದು ಇಟ್ಟುಬಿಟ್ಟರೆ ಅದು ಓದುಗರನ್ನು ಆಕರ್ಷಿಸಲಾರದು. ಅದನ್ನು ಪ್ರಸ್ತುತಪಡಿಸುವ ರೀತಿಯೂ ಅಷ್ಟೇ ಮುಖ್ಯ. ಒಂದು ಸಂಪೂರ್ಣ ಸಮೃದ್ಧ ಜಾಲತಾಣದ ಪತ್ರಿಕೆಯೊಂದು ಸದ್ಯದಲ್ಲೇ ವಿಶ್ವದ ಕನ್ನಡಿಗರಿಗೆ ಇನ್ನಾದರೂ ಸಿಗಲೆಂಬ ಹಾರೈಕೆ ಈ ರಾಜ್ಯೋತ್ಸವದಂದು.

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Vaishali Hegde from Boston, USA, one of the respondents says the Kannada websites should be user friendly with good layout and it should be complete package with veriety of stories. Also Vaishali feels that the portals should be economically viable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X