ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತನಾಮರ ಲೇಖನ ಪ್ರಕಟಿಸಿ : ಅನಿಲ ತಾಳಿಕೋಟಿ

By ಅನಿಲ ತಾಳಿಕೋಟಿ, ಕೇರಿ, ಉತ್ತರ ಕ್ಯಾಲಿಫೋರ್ನಿಯಾ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಅನಿಲ ತಾಳಿಕೋಟಿ, ಕೇರಿ, ಉತ್ತರ ಕ್ಯಾಲಿಫೋರ್ನಿಯಾ, ಅಮೆರಿಕ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ನನ್ನಂತಹ ದೂರ ದೇಶಿಗನಿಗೆ ಕನ್ನಡದ ಕನಕನ ಕಿಂಡಿಗಳೆಂದರೆ ಈ ವೆಬ್ ಸೈಟುಗಳು ಮತ್ತು ಬ್ಲಾಗಗಳು. ಆದರೆ ಬಹಳ ಹುರುಪಿನಿಂದ, ಉತ್ಸಾಹದಿಂದ ಆರಂಭ ಶೂರತ್ವ ತೋರುವ ಅನೇಕ ಸೈಟುಗಳು ಹೊಸದೇನನ್ನೂ ಕೊಡಲಾಗದೆ ಬಾಡಿ ಬತ್ತಿ ಹೋಗುವದು ನಮ್ಮ ದುರ್ದೈವ.

ದುಡ್ದು ಕೊಟ್ಟು ಓದಿ ಎನ್ನುವ ಸಾಧ್ಯತೆ, ಸದ್ಯಕ್ಕೆ ಕನ್ನಡದ ಯಾವ ಸೈಟಗಳಿಗೂ ಇಲ್ಲ ಎಂಬುವದು ನಿರ್ವಿವಾದ. ಮ್ಯಾಗಝೀನಗಳು, ದಿನಪತ್ರಿಕೆಗಳು ಅದಕ್ಕಾಗಿ ಒದ್ದಾಡುತ್ತಿರುವಾಗ ವೆಬ್ ಸೈಟ್, ಬ್ಲಾಗ್‌ಗಳಿಗೆ ಆ ಭಾಗ್ಯ ಬರುವದು ಸಾಧ್ಯವೆ ಇಲ್ಲ. ಈ ಶತಮಾನದ ಆದಿ ದಶಕಗಳ ಅಗತ್ಯಕ್ಕೆ ತಕ್ಕಂತೆ ಈ ತಂಗುದಾಣಗಳು ಆಶ್ರಯ ಅರಸಿ ಬಂದವರಿಗೆ ಬೆಂಚು ಹಾಕಿ ತಂಪಿನಲ್ಲಿ ಕುಳ್ಳಿರಿಸಿ ಜ್ಞಾನವರ್ಧನೆಗೆ, ಸೃಜನಶೀಲತೆಗೆ ಇಂಬು ಕೊಟ್ಟಿವೆ.

Kannada online survey 2014 : My expectations - Anil Talikoti, USA

ಈಗಿರುವುದು ಅನೇಕತೆ. ಅದೇ ಇಂದಿನ ಸೊಗಸು. ಯಾವುದೇ ವಿಷಯ ಗಮನಿಸಿದರೂ ನಮಗೆ ಅದರಲ್ಲಿ ಸಮಾನ ಮನಸ್ಕರು ತಮ್ಮ ನಿಲುವಿನಿಂದ, ಅನುಭವದಿಂದ, ತಮ್ಮದೆ ಆದ ತಿಳಿವಳಿಕೆಯಿಂದ ತಮಗನಿಸಿದ್ದನ್ನು ಹೇಳಲು ಇಷ್ಟಪಡುತ್ತಾರೆ- ಗೌಪ್ಯವಾಗಿಯಾದರೂ ಸೈ ತಮ್ಮ ಅನಿಸಿಕೆಗಳನ್ನು ಅರಹುತ್ತಾರೆ -ಎಂಬುವದು ಗೊತ್ತಾಗುತ್ತದೆ. ಈ ಕೊಡು-ಕೊಳ್ಳುವಿಕೆ ಇಲ್ಲದ್ದು ವಿಶ್ವಾಸಾರ್ಹವಾಗಿರುವುದು ಸಾಧ್ಯವಿಲ್ಲ.

ಪ್ರಪಂಚದಲ್ಲಿ ಎಲ್ಲಿದ್ದರೂ, ಬೇಕೆಂದರೆ ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆ ಇರುವ ಈ ದಿನಗಳಲ್ಲಿ ನಾವು ಓದುವ ಬರಹಗಳ ವಕ್ತಾರನ(ಳ) ಬಗ್ಗೆ ತಿಳಿದುಕೊಳ್ಳುವದು ಬರಿ ಹಂಬಲದ ಪ್ರಶ್ನೆ ಮಾತ್ರವಲ್ಲ ಅದು ನಮ್ಮ ನಂಬಿಕೆಗಳನ್ನು, ಆಲೋಚನೆಗಳನ್ನು ಬದಲಿಸಲು ಶಕ್ತವಾಗಿರಬಹುದು. ನನಗೇನೋ ಈ ಮುಖಾಮುಖಿ ಇಲ್ಲದ ಯಾವುದೇ ಮೀಡಿಯಾ ಮಾಧ್ಯಮಗಳ ಕಾರ್ಯಸಾಧ್ಯತೆಗಳ ಬಗ್ಗೆ ಸಂಪೂರ್ಣ ನಂಬಿಕೆ ಇಲ್ಲ. ಅದರ ಬಗ್ಗೆ ಗೌರವವಿದೆ, ಅದರಲ್ಲಿರುವ ಅಡಚಣೆಗಳ ಬಗ್ಗೆ ಸಹಾನುಭೂತಿ ಇದೆ.

ಅಲ್ಲಿ ಮಧ್ಯಸ್ಥಗಾರರಿಗೆ (moderator) ಗುರುತರವಾದ ಜವಾಬುದಾರಿ ಇರಬೇಕಾಗುತ್ತದೆ. ಲೇಖನಗಳ ಒಟ್ಟು ಉದ್ದೇಶಕ್ಕೆ ಧಕ್ಕೆ ಬಾರದಂತೆ, ಬೇಕೆಂದೆ ವಾದ-ವಿವಾದ ಹುಟ್ಟು ಹಾಕುವ ನಿಂದನೆ, ಅವಹೇಳನಗಳಿಗೆ ಕಡಿವಾಣ ಹಾಕುವ ಜಾಣ್ಮೆ ಬೇಕಾಗುತ್ತದೆ. ಇದು ಹೇಳಿದಷ್ಟು ಸುಲಭದಲ್ಲವೆಂದು, ಆರ್ಥಿಕ ಗಳಿಕೆ ಇಲ್ಲದ ಈ ತಾಣಗಳಿಗೆ ಅಂತಹ ತಾಕತ್ತಿರುವದಿಲ್ಲವೆಂದು ಸುಲಭಕ್ಕೆ ಅರ್ಥವಾಗುತ್ತದೆ. ಆದರೆ ಇ ಆಯಾಮ ಇಲ್ಲದೆ ಹೋದಾಗ ಬರಹಗಾರರು ತಮ್ಮ ಓದುಗರೊಂದಿಗೆ ಸಂವಾದಿಸಲು ಬೇರೊಂದು ಮಾರ್ಗ ಕಂಡುಕೊಳ್ಳುತ್ತಾರೆ ಅನಿವಾರ್ಯವಾಗಿ.

ಉದಾಹರಣೆಗೆ ಫೇಸಬುಕ್ಕಿನಲ್ಲಿ ತಮ್ಮ ಲೇಖನಗಳನ್ನು ಲಿಂಕಿಸುವದು. ಅಲ್ಲಿರುವ ತೊಂದರೆ ಎಂದರೆ ಫೇಸಬುಕ್ಕಿನ ನಿಮ್ಮ ಬರಹಗಳಿಗೆ ಮಾತ್ರ ಸೀಮಿತವಾಗಿರದೆ ಬೇರೆಲ್ಲವನ್ನು ಒಳಗೊಂಡಿರುವದರಿಂದ ಅಲ್ಲಿ ನಿಜವಾದ ಸಂವಾದಗಳಿಗೆ ಪೆಟ್ಟು ಬಿಳುತ್ತದೆ. ಇದು catch 22 ಥರಹದ್ದು. ಅತೀ ಸ್ವೇಚ್ಛಾಚಾರ ಕಡಿವಾಣವಿಲ್ಲದ ಮಾತುಕತೆ ಅಸಲು ಬರಹದ ಉದ್ದೇಶಗಳನ್ನು ಮರೆಮಾಚಿದರೆ, ಅತೀ ಕಡಿವಾಣ ಅದರ ಕತ್ತನ್ನು ಹಿಚುಕುತ್ತದೆ. ಮಧ್ಯದ ದಾರಿ ಯಾವುದೆಂಬುವದು ಪ್ರತಿ ವೆಬ್ ಸೈಟ್, ಮಿಡಿಯಾಕ್ಕೆ ಬಿಟ್ಟುಬಿಡಬೇಕಾದ ಅನಿವಾರ್ಯತೆ ಇದ್ದದ್ದೆ.

ಇದಕ್ಕಾಗಿ ಕನ್ನಡದ ಖ್ಯಾತನಾಮರ ಲೇಖನಗಳನ್ನು ಪ್ರಕಟಿಸಿ ಅದಕ್ಕಾಗಿ ಮುಕ್ತ ಮಾತುಕತೆ ಏರ್ಪಡಿಸುವದು ಸದ್ಯದ ತುರ್ತು ಅಗತ್ಯವೆಂದು ನನ್ನ ನಂಬಿಕೆ. ಇದು ಬರೀ ಕಮೆಂಟುಗಳ ಮೂಲಕವಾಗದೆ ಚಾಟ್ ಆಗಿಯೋ, ಸ್ಕೈಪ್, ವಿಡಿಯೋ ಇತ್ಯಾದಿ ಮೂಲಕವಾಗಿಯೋ ಆದರೆ ಪರಿಣಾಮಕಾರಿಯಾಗಿರುತ್ತದೆ. ಇಲ್ಲಿಯೂ ಕೂಡಾ ಮಧ್ಯಸ್ಥಿಕೆ ಮಾಡುವವರೊಬ್ಬರ ಅಗತ್ಯತೆ ಇದ್ದೆ ಇದೆ. ಈ ನಿಲುವಿನಿಂದ ಖ್ಯಾತನಾಮರು, ಕನ್ನಡದ ಉದ್ದಾಮ ಸಾಹಿತಿಗಳು ಕಳೆದುಕೊಳ್ಳುವದು ಏನೂ ಇಲ್ಲ, ಆದರೆ ತಮ್ಮ ನಿಲುವುಗಳನ್ನು ಅರುಹಿ ಕನ್ನಡದ ಬಗ್ಗೆ ಆಸಕ್ತಿ, ಅನುರುಕ್ತಿ ಮೂಡಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗುತ್ತದೆ ಎಂಬುವದು ನನ್ನ ನಿಲುವು.

ಅನೇಕ ಕನ್ನಡದ ವೆಬ್ ಸೈಟಗಳಲ್ಲಿ ಕೆಲವೇ ಕೆಲವು ಹೆಸರಾಂತ ಸಾಹಿತಿಗಳು ತಮ್ಮ ನೇರ ಅಭಿಪ್ರಾಯ ಹೇಳುವದನ್ನು ನಾನು ನೋಡಿದ್ದೇನೆ. ಇದು ಬೆರಳೆಣಿಕೆಗಿಂತ ಕಮ್ಮಿ ಎಂಬುವುದು ನಮಗೆಲ್ಲ ಗೊತ್ತಿರುವುದೆ. ಅದರಲ್ಲಿಯೂ ಕೂಡಾ ಕೆಲವರು ಇಲ್ಲಿನ ಕೆಸರಾಟ ನೋಡಿ ಇನ್ನೆಂದೂ ನಾನಿಲ್ಲಿ ನನ್ನ ಅಭಿಪ್ರಾಯ ಹೇಳಲಾರೆ ಎಂದು ಘೋಷಿಸಿದ್ದು ಕೂಡಾ ನನಗೆ ಗೊತ್ತು. ಆದ್ದರಿಂದಲೇ ಇದು ಕಠಿಣತೆಯ ದಾರಿ ಎಂಬ ಅರಿವಿದ್ದೂ ಇದು ಆಗಬಹುದಾದರೆ ಅದು ಕನ್ನಡವನ್ನು ಎಲ್ಲೆಡೆ ಪಸರಿಸಲು ನಾವು ಮಾಡಬಹುದಾದ ಅತ್ಯಂತ ಒಲವಿನ ಸಂಗತಿ ಎಂದು ನನಗನಿಸುತ್ತದೆ. [ಅನಿಲ ಫೇಸ್ ಬುಕ್ ಪುಟ]

English summary
Kannada websites and blogs should publish articles written by renowned Kannada writers and allow free debate on their portals. But, there is need for moderator to moderate the unnecessary comments. By doing so, Kannada portals can be made lively, says Anil Talikoti from Cary, North Carolina, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X