ಎಸ್‌.ಕೆ. ಶಾಮಸುಂದರ

Subscribe to Oneindia Kannada

ಅಮೆರಿಕಾದಲ್ಲಿ ಕನ್ನಡದ ಹುಡುಗರು ಕಳೆದು ಹೋಗುತ್ತಾರೆ ಎಂಬ ಮಾತಿಗೆ ಅಪವಾದ ರವಿ ಕೃಷ್ಣಾ ರೆಡ್ಡಿ. ಅವರ ಕ್ರಿಯಾತ್ಮಕ ಮನಸ್ಸಿನ ಬರಹಗಾರನಿಗೆ ಮೊನಚು ನೀಡಿದ್ದು ಅಂತರ್ಜಾಲ. ಗದ್ಯವಾಗಲಿ, ಪದ್ಯವಾಗಲಿ ಅವರಿಗೆ ಲೀಲಾಜಾಲ. ಅವರ ಸಮಗ್ರ ಬರಹಗಳ ಸಂಕಲನ ‘ಜಿಜ್ಞಾಸಾ ಗಂಗೆಯ ದಡದ ಕಾಲ್ದಾರಿಯಲ್ಲಿ’. ಕೃತಿ ಪ್ರವೇಶಿಸುವ ಮುನ್ನ ಹೀಗೊಂದು ಮುನ್ನುಡಿ.

S.K.Shama Sundara ಎಸ್‌.ಕೆ. ಶಾಮಸುಂದರ
shami.sk@greynium.com

Ravi Krishna ReddyE-ಸ್ನೇಹಿತ ರವಿ ಕೃಷ್ಣಾರೆಡ್ಡಿಯನ್ನಾಗಲೀ ಅಥವಾ ಇನ್ಯಾರನ್ನೆ ಆಗಲಿ ಮಣ್ಣಿನ ಮಗ ಎಂದು ಬಣ್ಣಿಸಿದರೆ ನಿಮಗೆ ಥಟ್ಟನೆ ಏನನ್ನಿಸುತ್ತದೆ? -ಇಂಥ ಪ್ರಶ್ನೆಯನ್ನು ಮುನ್ನುಡಿ ಯಾ ಬೆನ್ನುಡಿ ಓದುವ ಓದುಗರಲ್ಲಿ ಮುಂಚೆಯೇ ಕೇಳಿಬಿಡಬೇಕು. ಯಾಕೆಂದರೆ, ಮಣ್ಣಿನ ಮಗ ಎಂಬ ಪದಕ್ಕೆ ಕರ್ನಾಟಕದಲ್ಲಿ ಇದುವರೆವಿಗೂ ಯಾರೂ ನಿಚ್ಚಳವಾದ ವ್ಯಾಖ್ಯೆ ಕೊಟ್ಟಿಲ್ಲ.

ಕೆಲವರು ಹೇಳುತ್ತಾರೆ ಮಣ್ಣಿಗೆ ಕೈಹಚ್ಚಿ ಕೆಲಸ ಮಾಡುವವನು; ಟ್ರ್ಯಾಕ್ಟರ್‌-ಟಿಲ್ಲರ್‌ ಇಟ್ಟುಕೊಂಡೂ ನೇಗಿಲಯೋಗಿಯಾದವನು; ಊರಲ್ಲಿ ಬೇಡಾದಷ್ಟು ಎಕರೆ ಹೊಲ ತೋಟ, ತೋಟದ ಮನೆಗಳನ್ನು ಅಳಿಯ ಮೊಮ್ಮಕ್ಕಳಿಗೆ ಮಾಡಿ, ತಾನು ಮಾತ್ರ ಯಾವುದೋ ನಗರ ಪ್ರದೇಶದಲ್ಲಿ ನಿರ್ಭಾಗ್ಯನಂತೆ ಜೀವನ ಕಳೆಯುತ್ತಿರುವವನು; ಮತ್ತೆ ಈ ಮಣ್ಣಿನ ಗುಣಗಳನ್ನು ಮೈಗೂಡಿಸಿಕೊಂಡವನು, ರೈತಾಪಿ ಜನರ ಕಷ್ಟ ಕಾರ್ಪಣ್ಯಗಳನ್ನು ಅರ್ಥೈಸಿಕೊಂಡು ಅವರ ಏಳಿಗೆಗಾಗಿ ಚಿಂತಿಸುವವನು, ತಾನು ಹುಟ್ಟಿದ ಭೌಗೋಳಿಕ ಪರಿಸರದ ಕಣಕಣವನ್ನು ಅರಿತವನು, ತನ್ನ ಜನ್ಮಭೂಮಿಯ ಹಿತಾಸಕ್ತಿಯೇ ಪರಮ ಎಂದು ಭಾವಿಸಿ ಉಳಿದೆಲ್ಲವನ್ನು ವಾರೆಗಣ್ಣಿನಿಂದ ನೋಡುವವನು - ಇವೇ ಮುಂತಾದ ಅರ್ಥ-ಅನರ್ಥಗಳನ್ನು ಫಳ್ಳನೆ ಹೊಳಯಿಸುವ ಕನ್ನಡ ಶಬ್ದ ಮಾಲಿನ್ಯ ಆಧುನಿಕ ಕರ್ನಾಟಕದಲ್ಲಿ ಇವತ್ತು ಎಲ್ಲಂದರಲ್ಲಿ ಕಾಣಸಿಗುತ್ತಿರುವುದರಿಂದ ಪಕ್ಕದ ಮನೆಯ ಮಣ್ಣಿನ ಮಗ ರವಿ ಕೃಷ್ಣಾರೆಡ್ಡಿಯವರ ಬಿಡಿಬಿಡಿ ಬರಹಗಳ ಈ ಸಂಕಲನದ ಮುನ್ನಾಮಾತುಗಳು ತಂತಾನೆ ಜಿಜ್ಞಾಸೆಗಳನ್ನು ಸಂಪಾದಿಸಿಕೊಳ್ಳುತ್ತದೆ.

ಬಿರುಬಿಸಿಲ ಮಧ್ಯಾನ್ಹ ನೊಗಹೊತ್ತ ಜೋಡಿ ಎತ್ತುಗಳು ಸಣ್ಣಗೆ ತೂಕಡಿಸುವಾಗ ಪಕ್ಕದ ಜಿಲ್ಲೆಯ ಆಚೆಬದಿ ಮಗಚಿಕೊಂಡ ಆಕಾಶದಿಂದ ಮೋಡಗಳು ಎದ್ದು ಯಾವತ್ತು ಬಂದಾವೋ ಎಂದು ಆಕಾಶರಾಯನಾದ ರೈತನು ಮಣ್ಣಿನ ಮಗನೆನಿಸಿಕೊಂಡರೆ, ಪ್ರಯೋಗಾಲಯದಲ್ಲಿ ಮೋಡಬಿತ್ತನೆಯ ಹೊಸಸಾಧ್ಯತೆಗಳ ಬಗ್ಗೆ ಸಂಶೋಧನೆ ನಿರತನಾದ ವಿಜ್ಞಾನಿಯಾಬ್ಬ ಮಣ್ಣಿನ ಮಗನಾಗಲಾರನೆ? ಇಲೆಕ್ಟ್ರಾನಿಕ್‌ ಓಟಿಂಗ್‌ ಮಿಷಿನ್ನು ಮತ್ತು ಭೂಮಿ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಸಲಕರಣೆಗಳನ್ನು ರೂಪಿಸಿದವನು ಈ ಮಣ್ಣಿನ ಮಗನಾಗಲಾರನೆ?

‘ದೋ ಭಿಗಾ ಜಮೀನ್‌’ ಚಿತ್ರ ನಿರ್ಮಿಸಿದ ಬಿಮಲ್‌ರಾಯ್‌ ಮಣ್ಣಿನ ಮಗನೇ ಆಗಿದ್ದ ಪಕ್ಷದಲ್ಲಿ ‘ಚಂದವಳ್ಳಿ ತೋಟ’ ಚಿತ್ರಕ್ಕೆ ಕಥೆ ಒದಗಿಸಿದ ತ.ರಾ.ಸು ಕೂಡ ಈ ಮಣ್ಣಿನ ಮಗನೇ ಆಗಿರುತ್ತಾರೆ ಎಂದು ನೀವು ವಾದಿಸಿದರೆ , ನನ್ನ ಬಿಟ್ಟರೆ ನೀವು ಕೆಟ್ಟಿರಿ ಎಂದು ಎದ್ದು ಬಂದು ಕೇಳುತ್ತಾರೆ ‘ಭೂತಯ್ಯನ ಮಗ ಅಯ್ಯು’ ನಿರ್ದೇಶಿಸಿದ ಸಿದ್ದಲಿಂಗಯ್ಯ. ತರ್ಕ, ಕುತರ್ಕಗಳೇನೇ ಇರಲಿ. ನೋಡಿ ಸ್ವಾಮಿ ನಾನು ಇರುವುದೇ ಹೀಗೆ , ಹೊಲದಲ್ಲಿ ಬೀಜ ಬಿತ್ತುವೆನು, ಕಂಪ್ಯೂಟರ್‌ನಲ್ಲಿ ಕೋಡ್‌ ಬರೆಯುವೆನು, ಪ್ರೊಗ್ರಾಮ್‌ ಪೂರೈಸಿ , ಕಳೆಕಿತ್ತಿ ಕಾಳು ಒಟ್ಟುಮಾಡಲು ಹೋಗುವೆನು ಎಂದು ಒಲಿದಂತೆ ಹಾಡುವ ವಿರಳರಲ್ಲಿ ವಿರಳರ ಸಾಲಿನಲ್ಲಿ ನಾನು ಕಂಡ ಹೊಸ ತಳಿಯ ಚಿಂತಾಕ್ರಾಂತ ಬರಹಗಾರರಲ್ಲಿ ಬೊಮ್ಮಸಂದ್ರದ ರವಿ ಕೃಷ್ಣಾರೆಡ್ಡಿ ಎದ್ದು ಕಾಣುವರು..

ಬೆಂಗಳೂರಿನ ಇಲೆಕ್ಟ್ರಾನಿಕ್‌ ಸಿಟಿಗೆ ಹೋಗುವ ಟಾರು ರಸ್ತೆಯ ಅಕ್ಕಪಕ್ಕದಲ್ಲಿ ಭೂಮಿ ಕಾಣಿ ಮಾಡುವಾಗ ತಂದೆಗೆ ನೆರವಾಗುವ ಹುಡುಗ ರವಿ. ತಾವೇ ಬೆಳೆದ ತಿಂಗಳ ಹುರಳಿ, ಮೂರು ತಿಂಗಳಿಗೆ ಬುಟ್ಟಿತುಂಬುವ ಟೋಮೆಟೊ, ಬದನೆಕಾಯಿಗಳನ್ನು ಸಿಟಿ ಮಾರ್ಕೆಟ್ಟಿಗೆ ಹಾಕಿ ಪೆಟ್ರೋಲ್‌ ಖರ್ಚನ್ನು ನೀಗಿಕೊಂಡ ರೈತನ ಮಗ. ಬೆದ್ದಲ ರಾಗಿ ಮತ್ತು ಕಪಿಲೆ ರಾಗಿಯ ಮುದ್ದೆಯ ವ್ಯತ್ಯಾಸಗಳನ್ನು ನುಂಗಿ ಅರಿತವ. ಇಂಥ ಮಣ್ಣಿನ ಮಗ ಹಿತ್ತಲ ಗೊಬ್ಬರದಲ್ಲಿ ಬೆಳೆದು ಹೈಬ್ರೀಡ್‌ ಇಂಜಿನಿಯರ್‌ ಆಗಿದ್ದು ಸುದ್ದಿಯಲ್ಲ. ಉದ್ಯೋಗ ಅರಸಿಕೊಂಡು ಕ್ಯಾಲಿಫೋರ್ನಿಯಾಗೆ ಹೋದಮೇಲೂ ಕರ್ನಾಟಕದ ರೆಗ್ಯುಲೇಟೆಡ್‌ ಮಾರ್ಕೆಟ್ಟಿನ ವ್ಯವಹಾರಗಳನ್ನು ಕೂಲಂಕಷವಾಗಿ ಗಮನಿಸುತ್ತಾ ಕನ್ನಡದಲ್ಲಿ ಕಾಣಿಸಿದ್ದೆಲ್ಲವನ್ನೂ ಓದುತ್ತಾ ಮುಂದೇನು? ಎನ್ನುವ ಕುತೂಹಲವನ್ನು ಜಾಗ್ರತೆಯಿಂದ ಕಾಪಾಡಿಕೊಂಡು ಬಂದಿರುವುದು ಸ್ವಾರಸ್ಯ.

ಬರೆಯದೇ ಓದುವವನು ಯಾರು ಎಂದು ಕೇಳುವ ರವಿ ವಚನ ಪ್ರಿಯರಾಗಿರುವುದು ಕೇವಲ ಕಾಕತಾಳೀಯ. ಅಮೆರಿಕಾದಲ್ಲಿ ಠಿಕಾಣಿ ಹೂಡಿದಂದಿನಿಂದ ನಿಯಮಿತವಾಗಿ ಕನ್ನಡದಲ್ಲಿ ಬರೆಯುವ ಶ್ರಮ ಮತ್ತು ಶ್ರದ್ಧೆಯನ್ನು ರೂಢಿಸಿಕೊಂಡವ. ರವಿಯಂತಹ ಹೊಸ ಬೆಳೆಗೆ ಪೂರಕವಾಗಿ ಹೊಸ ಮಾಧ್ಯಮ ರೂಪುಗೊಂಡದ್ದೂ ಕಾಕತಾಳೀಯವೆ! ಅಂತೆಯೇ, ರವಿ ಅವರ ಇಲ್ಲಿನ ಎಲ್ಲ ಬರಹಗಳು ಡಾಟ್‌ಕಾಂ ಆವರಣದಲ್ಲಿ ಬೆಳಕು ಕಂಡು ಪುಸ್ತಕ ರೂಪದಲ್ಲಿ ಪ್ರತಿಫಲಿಸುತ್ತಿರುವುದು ಸಮಾಚಾರ..

*

ಬೇರೆಬೇರೇ ಪತ್ರಿಕೆ, ನಿಯತಕಾಲಿಕೆಗಳಿಗೆ ಆಗಿಂದಾಗ್ಗೆ ಬರೆದ ಬರಹಗಳನ್ನು ಒಟ್ಟು ಮಾಡಿ ಸಂಕಲನ ಪ್ರಕಟಿಸುವುದು ವಾಡಿಕೆ. ಈ ಹವ್ಯಾಸ ಆಯಾ ಲೇಖಕರ ಇಷ್ಟ-ಕಷ್ಟಗಳಿಗೆ ಬಿಟ್ಟದ್ದು. ಅಂಕಣಗಳಾದರಂತೂ ಅದು ಪುಸ್ತಕ ರೂಪದಲ್ಲಿ ಹೊರಬಂದೇಬರುತ್ತದೆ ಎಂಬ ಅಂಶ ಕನ್ನಡ ಸಂದರ್ಭದಲ್ಲಿ ಸಾಬೀತಾಗಿದೆ. ಅಂಕಣಕಾರ ಹವ್ಯಾಸಿಯಾಗಿರಬಹುದು ಅಥವಾ ಪತ್ರಿಕೆಯ ಉದ್ಯೋಗಿ-ಸಂಪಾದಕ ಆಗಿರಬಹುದು. ಅಂಕಣ ಸಾಹಿತ್ಯದ ವಿಶಾಲವಾದ ಪರಂಪರೆ ಕನ್ನಡದಲ್ಲಿ ಸ್ಥಾಪನೆಯಾಗಿದೆ. ಈ ಪರಂಪರೆ ಮುದ್ರಣ ಮಾಧ್ಯಮಕ್ಕೆ ಸೀಮಿತ ಎನ್ನುವುದಕ್ಕೆ ಅಪವಾದವಾಗಿ ರವಿ ಕೃಷ್ಣಾ ರೆಡ್ಡಿ ಅವರ ಸಂಕಲನ ಬೆಳಕು ಕಂಡಿದೆ.

ರವಿ ಅವರ ಇಲ್ಲಿನ ಎಲ್ಲ ಬರಹಗಳು ‘ಡಾಟ್‌ಕಾಂ’ , ಅಂದರೆ ಸದಾ ಚಲನಶೀಲ ವಾಗಿರುವ ಮಾಧ್ಯಮದಲ್ಲಿ ಪ್ರಕಟವಾಗಿರುವಂತಹವು ಎಂಬ ಅಂಶ ಗಮನಾರ್ಹ. ಗಮನಾರ್ಹ ಯಾಕೆಂದರೆ, ಡಾಟ್‌ಕಾಂ ಯುಗ ಆರಂಭವಾಗಿ, ಮುಗ್ಗರಿಸಿಬಿದ್ದು ಮತ್ತೆ ಚೇತರಿಸಿಕೊಳ್ಳುತ್ತಿದ್ದರೂ ಅಂತರ್‌ಜಾಲದಲ್ಲಿ ಕನ್ನಡ ಮಾತ್ರ ಶೈಶವಾಸ್ಥೆಯಲ್ಲೇ ನಿಂತಿದೆ. ಇಂಥ ಕಾಲಘಟ್ಟದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಘಂಟಾನಾದವನ್ನು ಅಂತರ್‌ಜಾಲದಲ್ಲಿ ಮಾರ್ದನಿಸುತ್ತಿರುವ www.thatskannada.comವಾಹಿನಿಯಲ್ಲಿ ರವಿ ಅವರು ಸರಿಸುಮಾರು ಎರಡು ವರ್ಷಗಳ ಅವಧಿಯಲ್ಲಿ ಪ್ರಕಟಿಸಿದ ಎಲ್ಲ ಬರಹಗಳು ಸಂಕಲನದ ರೂಪದಲ್ಲಿ ದಾಖಲಾಗುತ್ತಿದೆ. ಈ ಬಗೆಯ ಪ್ರಯತ್ನಗಳು ನಡೆದಿಲ್ಲವೆಂದಲ್ಲ. ಡಾ. ಎಂ. ಎಸ್‌ . ನಟರಾಜ್‌ ಅವರ ‘ಮಧುಚಂದ್ರ ಸಿರಿಕೇಂದ್ರ’ ಸಂಕಲನದಲ್ಲಿ ಪ್ರಕಟವಾಗಿರುವ ಬಹುತೇಕ ಕವನಗಳು ಅಂತರ್‌ಜಾಲದಲ್ಲಿ ಪ್ರಕಟವಾಗಿದ್ದವು. ಜ್ಯೋತಿಮಹದೇವ್‌ ಅವರ ‘ಭಾವಗಾನ’ ಕವನ ಸಂಕಲನಕ್ಕೂ ಈ ಮಾತು ಅನ್ವಯಿಸುತ್ತದೆ.

ಡಾಟ್‌ಕಾಂನಲ್ಲಿ ಕನ್ನಡದ ಶಕೆ ಆರಂಭವಾದದ್ದು , ಮುಖ್ಯವಾಗಿ ಕನ್ನಡನಾಡಿನಿಂದ ಹೊರಗೆ ವಾಸವಾಗಿರುವ ಲೇಖಕರರಿಗೆ ವರದಾನವಾಯಿತು. ಕನ್ನಡ ಪತ್ರಿಕೆ, ನಿಯತಕಾಲಿಕೆಗಳೊಂದಿಗೆ ಮುಖಾಮುಖಿಯಾಗುವ ಸಾಂಪ್ರದಾಯಿಕ ರೀತಿಯ ಇತಿಮಿತಿಗಳು ಕಳಚಿ, ಪತ್ರಿಕೆ ಮತ್ತು ಲೇಖಕರ ನಡುವೆ ಚುರುಕಾದ ಹಾಗೂ ಆಪ್ತವಾದ ಒಡನಾಟವು ಅಂತರ್‌ಜಾಲದಲ್ಲಿ ಕನ್ನಡ ಬೆಳಗಲು ಅನುಕೂಲವಾಯಿತು. ಈ ಅನುಕೂಲಗಳ ಸತ್‌ಪ್ರಯೋಜನದ ಫಲವೇ ‘ಜಿಜ್ಞಾಸಾ ಗಂಗೆಯ ದಡದ ಕಾಲ್ದಾರಿಯಲ್ಲಿ ’.

*

ರವಿ ಕೃಷ್ಣಾರೆಡ್ಡಿ ಅವರ ಬರಹಗಳ ಮೂಲಧಾತು ಕನ್ನಡ ಜನಪರ ಕಾಳಜಿ. ಭಾಷೆಯ ರೂಪದಲ್ಲಿ, ರಾಜಕೀಯ ವೇಷದಲ್ಲಿ, ವರ್ಗಸಂಘರ್ಷದ ಜತೆಗೆ ಜಾತಿ ಬಡಿದಾಟಗಳು ಹೇಗೆ ಕನ್ನಡಿಗರನ್ನು ಬಿಟ್ಟೂಬಿಡದೆ ಕಾಡುವ ಅನಿಷ್ಟಗಳಾಗಿವೆ ಎಂದು ಲೇಖಕರು ಬೇಜಾರುಪಟ್ಟುಕೊಳ್ಳುತ್ತಾರೆ. ಈ ಬೇಜಾರು ಖಿನ್ನ ಭಾವ ತರಿಸಿ ಲೇಖಕನಲ್ಲಿ ಸಾತ್ವಿಕ ಸಿಟ್ಟನ್ನು ಹುಟ್ಟಹಾಕುತ್ತದೆ. ಆ ಸಿಟ್ಟು , ಈ ಅನಿಷ್ಟಗಳಿಂದ ಪಾರಾಗುವ ಮಾರ್ಗೋಪಾಯಗಳ ಕುರಿತು ಚಿಂತಿಸುವಂತೆ ಮಾಡುತ್ತದೆ. ಶಿಕ್ಷಣ ಮಾಧ್ಯಮದ ಬೇಕು ಬೇಡಗಳು, ಮಠಮಾನ್ಯಗಳ ಅವಸ್ಥೆ, ಗ್ರಾಮೀಣ ಜೀವನದಲ್ಲಿ ಉಂಟಾಗಿರುವ ಪಲ್ಲಟಗಳು, ರಾಜಕಾರಣಿಗಳ ಸೈಧ್ಧಾಂತಿಕ ಅಪರಾತಪರಾಗಳನ್ನು ಕುರಿತು ಅವರು ಲೇವಡಿಗೆ ತೊಡಗುವರಲ್ಲದೆ , ಸಾಮಾಜಿಕ ಜೀವನದಲ್ಲಿ ಮಿಂಚುವವರ ಒಲವು ನಿಲವುಗಳನ್ನು ಒರೆಗೆ ಹಚ್ಚಿ ನೋಡುತ್ತಾರೆ. ಮತ್ತೆ ಬೇಜಾರಾಗುತ್ತದೆ. ಒಬ್ಬ ಸತ್ವಪೂರ್ಣ ಲೇಖಕನನ್ನು ಒರೆಗೆ ಹಚ್ಚಿನೋಡಬೇಕಾಗಿರುವುದು ಇಂಥ ಸಂದರ್ಭದಲ್ಲೇ. ಬದುಕು ಇಷ್ಟೆ ಎಂಬ ಸಿನಿಕ ತೀರ್ಮಾನಕ್ಕೆ ಶರಣಾಗದೆ, ಬದುಕನ್ನು ಒಲಿಸಿಕೊಂಡು ದುಡಿಸಿಕೊಳ್ಳುವ ಪರಿ ಹೇಗೆ ಎನ್ನುವತ್ತ ಚಿಂತನೆಗಳನ್ನು ಹರಿಯಬಿಡುತ್ತಾನೆ. ಸಕಾರಾತ್ಮಕಾಗಿ ಯೋಚಿಸುತ್ತಾನೆ. ಪ್ರಗತಿಯೆನ್ನುವುದು ಇಲ್ಲೆ ಎಲ್ಲೋ ಇದೆ, ನಡೀರಿ ಅಲ್ಲಿಗೇ ಹೋಗೋಣ ಎಂದು ಜತೆಗಾರರನ್ನು ಕರೆಯುತ್ತಾನೆ. ಪ್ರಗತಿಯ ದಿಶೆಯಲ್ಲಿ ನಾವು ಧೃಢ ಹೆಜ್ಜೆ ಹಾಕದೆ ಅನ್ಯ ಮಾರ್ಗವಿಲ್ಲ ಎಂದು ಸಾರುತ್ತಾನೆ. ಅವನೇ, ರವಿ ಕೃಷ್ಣಾರೆಡ್ಡಿಯವರಲ್ಲಿ ಮನೆಮಾಡಿರುವ ಲೇಖಕ .

*

ಇತಿಮಿತಿಗಳು ಯಾರಿಗೆ ತಾನೆ ಇಲ್ಲ? ಯಾವ ಸಮಾಜಕ್ಕಿಲ್ಲ? ಯಾವ ದೇಶಕ್ಕಿಲ್ಲ? ಪ್ರಗತಿಯ ಹಂಬಲ ದಟ್ಟವಾಗಿದ್ದರೆ ಜೀವನ ಸಾರ್ಥಕವೂ ಮತ್ತು ಸಹನೀಯವೂ ಆಗಿರಬಹುದು ಎಂಬ ಅಚಲ ನಂಬಿಕೆಗಳನ್ನು ದೃಷ್ಟಾಂತ ರೂಪದಲ್ಲಿ ಲೇಖಕರು ಕೆಲವು ವ್ಯಕ್ತಿ ಪರಿಚಯಗಳ ಮುಲಕ ಸಾಬಿತುಪಡಿಸುತ್ತಾರೆ. ಆಕೆ ಸಿಲ್ವಿಯಾ ಪ್ಲಾತ್‌ ಆಗಿರಬಹುದು, ಸಾಲುಮರದ ತಿಮ್ಮಕ್ಕ ಆಗಿರಬಹುದು, ದೇಶಕ್ಕಾಗಿ ಆಟ ಬಿಟ್ಟ ಟಿಲ್ಮನ್‌ ಅಜರಾಮರನಾಗಿರಬಹುದು, ಅಥವಾ ಬಾಲಪೀಲೆ ಫ್ರೆಡ್ಡಿಯ ಯಶೋಗಾಥೆ ಇರಬಹುದು. ನಮ್ಮ ಕನ್ನಡಿಗರೆಲ್ಲ ಒಂದಲ್ಲ ಒಂದು ಕ್ಷೇತ್ರದಲ್ಲಿ ಈ ಬಗೆಯ ಸಾಧನೆ ಮಾಡಲಿ ಎನ್ನುವುದು ರವಿಯವರ ಯಾವತ್ತೂ ಹಂಬಲ. ಆದರೆ, ಅಂಥ ಹಂಬಲಕ್ಕೆ ವ್ಯಾಮೋಹಗಳ ಸಂಕೋಲೆ ಇಲ್ಲ. ಭ್ರಾಮಕ ಜಗತ್ತಿನ ಬೆನ್ನು ಹತ್ತಿ ಅವರು ಹೊರಡುವುದಿಲ್ಲ. ಯಾರು ವಸ್ತುನಿಷ್ಠ ವಾಗಿ ಕಾರ್ಯೋನ್ಮುಖರಾಗುತ್ತಾರೋ ಅವರಿಗೆ ರವಿಯವರ ಶುಭಾಕಾಂಕ್ಷೆಗಳುಂಟು. ಆದರೆ, ಸಾಧನೆಯ ಹಾದಿಯಲ್ಲಿ ಎಲ್ಲರೂ ಸಿಪಾಯಿಗಳೇ ಎಂದು ಎಚ್ಚರಿಸುವುದರ ಜತೆಗೆ ಸಾಧಕರು ನಮಗೆ ಚಿಟಿಕೆ ಸ್ಫೂರ್ತಿಯಾಗಬೇಕೆ ವಿನಾ, ಆರಾಧನೆಯ ಪ್ರತಿಮೆಗಳಾಗಬಾರದು ಎಂದು ನಿಚ್ಚಳವಾಗಿ ಸಾರುತ್ತಾರೆ. ಅವರೇ ಒಂದು ಲೇಖನದಲ್ಲಿ ಹೇಳುವಂತೆ: ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು, ಹುತಾತ್ಮರು ಪ್ರೇತಾತ್ಮರಲ್ಲ!

ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಎದುರಿಸಬೇಕಾದ ಅಡತಡೆಗಳೇನು ಎನ್ನುವುದನ್ನು ರವಿ ಸೂಕ್ಷ್ಮವಾಗಿ ಪಟ್ಟಿ ಮಾಡಿಕೊಡುತ್ತಾರೆ -ಸೈದ್ಧಾಂತಿಕ ಚಿಂತನಾ ಘರ್ಷಣೆ, ಭಿನ್ನ-ಅಭಿಪ್ರಾಯ, ಹಲವು ಮಜಲು ಒಳನೋಟಗಳಿಲ್ಲದ ವ್ಯವಸ್ಥೆಗೆ ಕಿಲುಬು ಹಿಡಿಯುತ್ತದೆ. ಅಲ್ಲಿ ಸೃಜನಶೀಲತೆ ಕ್ಷೀಣಿಸುತ್ತದೆ. ಸಮಸ್ಯೆಗೆ ಪರಿಹಾರ ಹುಡುಕುವ ಧೈರ್ಯ ಇಲ್ಲವಾಗುತ್ತದೆ. ಪರಿಣಾಮ , ಪರಿಸ್ಥಿತಿಯಾಂದಿಗೆ ರಾಜಿಯಾಗುವ ಮನೋಭಾವ ಹೆಚ್ಚಾಗುತ್ತದೆ. ಅಂತಹ ಒಂದು ಕಾಲಘಟ್ಟದಲ್ಲಿ ಬಂದೇ ಬರುವ ಬದಲಾವಣೆ ಅಹಿಂಸಾತ್ಮಕವಾಗೇನೂ ಇರುವುದಿಲ್ಲ, ಇರಬೇಕಾಗಿಲ್ಲ. ಸಮಸ್ಯೆಯನ್ನು ಕಂಡುಹಿಡಿಯುವುದು ಎಷ್ಟು ಮುಖ್ಯವೋ ಅದನ್ನು ತಾರ್ಕಿಕ ಅಂತ್ಯಕ್ಕೆ, ಕ್ರಿಯೆಯೆಡೆಗೆ ಕೊಂಡೊಯ್ಯುವುದೂ ಮುಖ್ಯ. ಅದು ಅಹಿಂಸಾತ್ಮಕವಾಗಿದ್ದಷ್ಟೂ, ವಸ್ತುನಿಷ್ಠವಾಗಿದ್ದಷ್ಟೂ , ಆಧಾರಪೂರ್ವಕವಾಗಿದ್ದಷ್ಟೂ ಒಳ್ಳೆಯದು- ಎನ್ನುವುದು ಲೇಖಕರ ತೀರ್ಮಾನ. ಅದೇ ರವಿ ಕೃಷ್ಣಾರೆಡ್ಡಿಯವರ ಋಜು.

*

ರವಿ ಕಥೆ ಬರೆಯುತ್ತಾರೆ. ಗ್ರಾಮೀಣ ಕಸುವುಳ್ಳ ಕಥೆಗಳನ್ನು ಅನುವಾದಿಸುತ್ತಾರೆ. ಕ್ಯಾಲಿಫೋರ್ನಿಯ ಕನ್ನಡ ಸಂಘದ ಸಕ್ರಿಯ ಕಾರ್ಯಕರ್ತನಾಗಿ ಸದಾ ಏನಾದರೊಂದು ಕನ್ನಡ ಚಟುವಟಿಕೆಗೆ ಅಂಟಿಕೊಂಡಿರುತ್ತಾರೆ. ರಜಾ ಬಂದಾಗ ಬೆಂಗಳೂರು ಮನೆಗೆ ಬಂದಾಗ ಕೊಟ್ಟಿಗೆಗೆ ಹೋಗಿ ಹಸುಗಳ ಮೈದಡವುತ್ತಾರೆ. ಜತೆಗಾರ ಬರಹಗಾರರನ್ನು, ಪತ್ರಕರ್ತರನ್ನು ಮಾತಿಗೆಳೆಯುತ್ತಾರೆ. ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡಿಗರಿಗಾಗಿಯೇ ಮೀಸಲಾದ ಸರಕಾರಿ/ಅರೆಸರಕಾರಿ/ಖಾಸಗಿ ಕಾರ್ಯಯೋಜನೆಗಳ ಸ್ಥಿತಿಗತಿಗಳನ್ನು ಮುದ್ದಾಂ ಕಾಣಲು ಊರು ತುಂಬ ಅಲೆಯುತ್ತಾರೆ. ಕಣ್ಣಿಗೆ ಕಂಡ ಪತ್ರಿಕೆ, ಪುಸ್ತಕಗಳನ್ನು ಖರೀದಿಸಿ ಬ್ಯಾಗಿಗೆ ಹಾಕಿಕೊಂಡು ಹಳ್ಳಿಮನೆಯ ದಾರಿ ಹಿಡಿಯುತ್ತಾರೆ. ಓದುತ್ತಾರೆ, ಹೊಸ ಬರವಣಿಗೆ ತಂತಾನೆ ಸಿದ್ಧಗೊಳ್ಳುತ್ತಿರುತ್ತದೆ. ಈ ಮಧ್ಯೆ ಕೆಲವು ಕವನಗಳನ್ನೂ ಬರೆದಿದ್ದರೂ ಅವರಿಗೆ ಗದ್ಯ ಹೆಚ್ಚಾಗಿ ಒಲಿದಿದೆ ಎನಿಸುತ್ತದೆ. ಓದುಗರಿಗೆ ಕಷ್ಟಕೊಡದ ಗದ್ಯ ಪ್ರಬಂಧಗಳಲ್ಲಿ ಅವರು ಯಾವ ವಿಷಯ, ವಿಚಾರವನ್ನಾದರೂ ಒಪ್ಪವಾಗಿ ನಿರೂಪಿಸಬಲ್ಲರು. ಇಲ್ಲಿರುವ ಲೇಖನ, ಸಂದರ್ಶನಗಳ ವೈವಿಧ್ಯಗಳನ್ನು ನೀವು ಗಮನಿಸಿದರೆ ಲೇಖಕರ ಚಿಂತನೆಯ ಕ್ಯಾನ್‌ವಾಸ್‌ ಎಷ್ಟು ವಿಶಾಲವಾಗಿವೆ ಎನ್ನುವುದು ಮನನವಾಗುತ್ತದೆ. ಬಿಡಿಬಿಡಿ ಲೇಖನಗಳು, ಬಿಡಿಬಿಡಿ ಚಿಂತನೆಗಳು, ಬಿಡಿ ಹೂವು ಮುಡಿದಂತೆ ಎನಿಸದೆ ಒಟ್ಟಂದದಲ್ಲಿ ಮಾಲೆಯಾಗಿ ತೋರುತ್ತದೆ.

ಪೂರಕ ಓದಿಗೆ :
ಜುಲೈ 23ರಂದು ‘ಜಿಜ್ಞಾಸಾ ಗಂಗೆ...’ ಪುಸ್ತಕ ಪ್ರಸವ

Thank you for choosing Thatskannada.com
shami.sk@greynium.com


ಮುಖಪುಟ / ಅಂಕಣಗಳು

Please Wait while comments are loading...