ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಎಲ್ಲರನ್ನೂ ಎಳೆದುಕೊಂಡೇ ಹಳ್ಳಕ್ಕೆ ಬಿದ್ದ!

By * ರವಿ ಬೆಳಗೆರೆ
|
Google Oneindia Kannada News

Janardhana Reddy with erstwhile CM BS Yeddyurappa
ಇಂಥದೊಂದು ಕುಬೇರ ಮೂಲೆ ಹಿಡಿದು ಕುಳಿತ ಜನಾರ್ದನ ರೆಡ್ಡಿಯಿಂದ ಕಾಲಕಾಲಕ್ಕೆ ಸಾವಿರಾರು ಕೋಟಿ ರೂಪಾಯಿ ಪಡೆದ ಯಡಿಯೂರಪ್ಪ ಇನ್ನೊಂದೆಡೆ, ಮುಖ್ಯಮಂತ್ರಿಯಾಗಿ ಕುಳಿತು ತಮ್ಮ ವರಮಾನಕ್ಕಾಗಿ ಸಾಕಷ್ಟು ದಾರಿ ಮಾಡಿಕೊಂಡಿದ್ದರು. ಅವರು ಮಕ್ಕಳು ಆಸೆಗೆ ಬಿದ್ದು ಅವಸರಗೇಡಿಗಳಾದರು. ಅದೇ ಗಣಿ ದುಕಾನದೊಳಕ್ಕೆ ಕಳ್ಳ ಕೈ ಇರಿಸಿ ಜಿಂದಾಲ್ ಸಂಸ್ಥೆಯ ಬಹುದೊಡ್ಡ ಕಳ್ಳರಿಂದ ನಲವತ್ತು ಕೋಟಿ ರೂಪಾಯಿ ಹರಕೊಂಡು ತಿಂದು ಬಿಟ್ಟರು. ಅದೇ ಪ್ರೇರಣಾ ಟ್ರಸ್ಟ್ ನ ಮಾನಗೇಡಿ ಹಗರಣ. ಪ್ರೇರಣಾ ಟ್ರಸ್ಟ್ ಹಗರಣವನ್ನು ರಹಸ್ಯವಾಗಿ ಬಯಲು ಮಾಡಿದ್ದೇ ಜನಾರೆಡ್ಡಿ!

ಅದೇ ತರಹದ ಕೆಲಸ ಮಾಡಿ ಕುಮಾರಸ್ವಾಮಿ ಸಿಕ್ಕು ಬಿದ್ದಿರುವುದು ವಿನೋದ್ ಗೋಯಲ್ ನ 'ಜಂತಕಲ್ ಮೈನ್ಸ್ ಪರವಾನಗಿ' ಹಗರಣದಲ್ಲಿ. ಅಕ್ರಮ ಗಣಿಗಾರಿಕೆ ಹಾಗೂ ಅದಿರು ಕಳ್ಳ ಸಾಗಾಣಿಕೆ ಹಗರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿರುವುದು ಹೌದಾದರೆ, ಆತನ ಪಕ್ಕದ ಬ್ಯಾರಕ್ ಗಳಲ್ಲಿ ಸಾಲುಸಾಲಾಗಿ ಯಡಿಯೂರಪ್ಪ, ಅನಿಲ್ ಲಾಡ್, ಕುಮಾರಸ್ವಾಮಿ, ವಿಜಯೇಂದ್ರ, ರಾಘವೇಂದ್ರ, ಗುಮ್ಮನೂರು ನಾಗೇಂದ್ರ... ಹೀಗೆ ಅನೇಕರು ಹೋಗಿ ಕೂಡುತ್ತಾರೆ. ಕೂಡ ಬೇಕು.

ಗಣಿ ದುಡ್ಡು ಎಂಬುದು ಇಡೀ ರಾಜ್ಯ ರಾಜಕಾರಣವನ್ನೇ ಬದಲಿಸಿತು, ದಿಕ್ಕು ತಪ್ಪಿಸಿತು. ಜನಾರ್ದನ ರೆಡ್ಡಿಯ 'ಸಿರಿವಂತಿಕೆ'ಯಲ್ಲಿ ಪಾಲು ತಿನ್ನಲು ಹೋಗಿ ಅನೇಕರು ಸಿಕ್ಕು ಬಿದ್ದರು. ಗಾಲಿ ಜನಾರ್ದನ ರೆಡ್ಡಿ ಎಲ್ಲರನ್ನೂ ಎಳೆದುಕೊಂಡೇ ಹಳ್ಳಕ್ಕೆ ಬಿದ್ದ. ಇವತ್ತು ಬಳ್ಳಾರಿ ಜಿಲ್ಲೆಯ ಗಣಿ ಮಾಲೀಕರು ಜನಾರ್ದನ ರೆಡ್ಡಿಯನ್ನು ಎಲ್ಲವುದಕ್ಕೂ ಕಾರಣ ಎಂದು ದೂಷಿಸಿ ನಿಟ್ಟುಸಿರಾಗುತ್ತಿದ್ದಾರೆ. ಆತನ ಶಿಷ್ಯರಾದ ಗುಮ್ಮನೂರು ನಾಗೇಂದ್ರ, ಸುರೇಶ್ ಬಾಬು, ಅಲೀಖಾನ್, ಖಾರಪುಡಿ ಮಹೇಶರಂಥವರಿಂದಾಗಿ ಕೆಲವು ಅಮಾಯಕರ ಬಾಯಿಗೂ ಮೊಸರನ್ನ ಮೆತ್ತಿಕೊಂಡಿದೆ.

ರಾಜಕಾರಣ ಬಲ್ಲ ಎಲ್ಲರೂ ಅಂದುಕೊಂಡಿದ್ದೆಂದರೆ, ಸಿಬಿಐ ಎಂಬ ಸಶಕ್ತ ಖಡ್ಗವನ್ನು ಬಳಸುವ ಮೂಲಕ ಸೋನಿಯಾ ಗಾಂಧಿ ಮೊದಲು ಜಗನ್ ಮೋಹನ ರೆಡ್ಡಿಯನ್ನು ಹಣಿಯುತ್ತಾಳೆ, ಆ ನಂತರ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿಯನ್ನು ಮುಟ್ಟುತ್ತಾರೆ. ಹಾಗಂತಲೇ ಬಹುಶಃ ಜನಾರ್ದನ ರೆಡ್ಡಿಯೂ ಅಂದುಕೊಂಡಿದ್ದಿರಬೇಕು. ಆದರೆ ಮೊದಲ ಬೀಸು ಆತನಿಗೇ ಬಿದ್ದಿದೆ. ಇದು ಮುಂದೆ ಜರುಗಲಿರುವ 'ಜಗನ್ ಪರಾಭವ' ಪರ್ವದ ಮುನ್ನುಡಿಯಷ್ಟೇ.

ಇನ್ನು ರೆಡ್ಡಿ ತಂಡ ರಾಜಕೀಯವಾಗಿ, ನೈತಿಕವಾಗಿ, ಕಾನೂನು ರೀತ್ಯಾ ಬಳ್ಳಾರಿಯಲ್ಲಿ ಚೇತರಿಸಿಕೊಳ್ಳುವುದು ಕಷ್ಟವಿದೆ. ಸದ್ಯದಲ್ಲೇ ಚುನಾವಣಾ ನಿಯಮಗಳೂ ಬಿಗಿಯಾಗಿ ಬಿಟ್ಟರೆ ಅಲ್ಲಿಗೆ ಹಣ ಚೆಲ್ಲುವುದೂ ನಿಂತು ಹೋಗಿ ಗಣಿ ಸಾಮ್ರಾಜ್ಯ ಧೂಳು ಪಾಲಾಗಲಿದೆ. ಇಂದು ನಾಳೆಯೊಳಗಾಗಿ ಜನಾರೆಡ್ಡಿ ಜಾಮೀನು ಪಡೆದು ಹೊರಬರುವುದೂ ಅನುಮಾನವೇ. ಇನ್ನು ಬಳ್ಳಾರಿಯಲ್ಲಿ ಹಳೆಯ ಹಂತಕರನ್ನೂ, ಹೊಸ ಕಳ್ಳರನ್ನೂ ವಿರೋಧಿಸುವಂಥ ಮೂರನೆಯ ಶಕ್ತಿಯೊಂದು ಹೊರ ಹೊಮ್ಮಬೇಕಿದೆ. ಅದು ಸಾಧ್ಯವೇ? [ಸ್ನೇಹಸೇತು : ಹಾಯ್ ಬೆಂಗಳೂರು]

English summary
Janardhana Reddy's arrest by CBI under Prevention of Corruption Act has opened pandora's box. All the people who benefited from Jana Reddy are exposing him before CBI. Is it the end of Reddy's era in Karnataka? Or is it the beginning of new political game? Ravi Belagere writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X