ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿಯನ್ನು ಅವರೇಕೆ ಕೊಂದರು?

By Staff
|
Google Oneindia Kannada News

Why did they choose to kill Gandhijiಅದೊಂದು ಬಡಪಾಯಿ ಪತ್ರಿಕಾಲಯ. ಅದರಲ್ಲಿ ಟೆಲಿಪ್ರಿಂಟರ್ ಪಟಪಟನೆ ಸದ್ದು ಮಾಡುತ್ತಿತ್ತು.ಕಚೇರಿಯಲ್ಲಿ ಇಬ್ಬರೇ ಕುಳಿತಿದ್ದರು. ಸಂಪಾದಕ ಮತ್ತು ಪತ್ರಿಕೆ ಮೇನೇಜರ್. ಒಂದು ಚಿಕ್ಕ ವಾರ್ತೆ ಟೆಲಿಪ್ರಿಂಟರ್ ಯಂತ್ರದ ಮೇಲೆ ಅಕ್ಷರವಾಗಿ ಮೂಡಿ ಬಂತು. ಅದನ್ನು ಓದುತ್ತಿದ್ದಂತೆಯೇ ಇವರಿಬ್ಬರು ಏಕಕಾಲಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದರು.

*ರವಿಬೆಳಗೆರೆ

ರಾಷ್ಟ್ರಪಿತ ಎಂದು ಹೇಳಿಕೊಳ್ಳುವ ಮೋಹನ್ ಚಂದ ಕರಮ್ ಚಂದ್ ಗಾಂಧಿಯನ್ನು ಕೊಂದುಬಿಡಬೇಕು!

ಅವರಿಬ್ಬರ ಹೆಸರು ನಾಥೂರಾಮ್ ವಿನಾಯಕರಾಮ್ ಗೋಡ್ಸೆ ಮತ್ತು ನಾರಾಯಣ ದತ್ತಾತ್ರಯ ಆಪ್ಟೆ, ಟೆಲಿಪ್ರಿಂಟರ್ ಮೇಲೆ ಅವರಿಬ್ಬರು ಓದಿದ್ದು ಗಾಂಜೀಧಿಯವರು ಅನಿರ್ದಿಷ್ಟ ಉಪವಾಸ ಆರಂಭವಾದ ಸುದ್ದಿ. ಆವತ್ತಿಗಾಗಲೇ ಭಾರತ ದೇಶದ ವಿಭಜನೆಯಾಗಿ ಹೋಗಿತ್ತು. ಎರಡೂ ಕಡೆಗಳಲ್ಲಿ ಘೋರ ಹಿಂಸಾಚಾರಗಳಾಗಿ ಒಂದು ಕೋಟಿ ಇಪ್ಪತ್ತು ಸಾವಿರ ಜನರು ಮನೆ ಮಠ ಕಳೆದುಕೊಂಡಿದ್ದರು. ಐದುನೂರು ಹಿಂದು ಹೆಂಗಸರು ಬೆತ್ತಲೆಯಾಗಿ ಪಾಕಿಸ್ತಾನದಿಂದ, ಭಾರತದ ಫಜಿಲ್ಕಾ ಎಂಬ ಊರಿಗೆ ಸಾಲುಗಟ್ಟಿ ನಡೆದು ಬಂದಿದ್ದರು. ಹಾಗೆ ಬರುತ್ತಿದ್ದವರು ಹೇಳುವ ಕಥೆಗಳು ಭಯಾನಕವಾಗಿದ್ದವು. ಅವರ ಪರಿಸ್ಥಿತಿಗಳು ಮತ್ತೂ ಘೋರ ಅದೇ ಫಜಿಲ್ಕಾಗೆ ನಡೆದು ಬಂದವನು ಮದನ್ ಲಾಲ್ ಪಹ್ವಾ. ಅವನ ಚಿಕ್ಕಮ್ಮ ಕೊಲೆಯಾಗಿದ್ದಳು. ಹೆಣಗಳ ರಾಶಿಗಳ ನಡುವೆ ಕುಟುಕು ಜೀವದೊಂದಿಗೆ ಬಿದ್ದುಕೊಂಡಿದ್ದ ಅವನ ತಂದೆಯನ್ನು ಹೇಗೂ ಉಳಿಸಿ ಹೆಗಲ ಮೇಲೆ ಹೊತ್ತುಕೊಂಡು ಬರಲಾಗಿತ್ತು. ದಾರಿಯಲ್ಲಿ ಮುಸ್ಲಿಮರು ಗುಂಪನು ಕಟ್ಟಿಕೊಂಡು, ತಂಡಗಳನ್ನಾಗಿ ಮಾಡಿಕೊಂಡು,ಪಾಕಿಸ್ತಾನದಿಂದ ಬರುತ್ತಿದ್ದ ಹಿಂದೂ ನಿರಾಶ್ರಿತರನ್ನು ಹಂತಹಂತವಾಗಿ ಸಮೂಹಿಕ ಅತ್ಯಾಚಾರಕ್ಕೆ, ಲೂಟಿಗೆ ಈಡು ಮಾಡಿ ಕೊಲ್ಲುತ್ತಿದ್ದರು. ಭಾರತದ ಫಜಿಲ್ಕಾ ಎಂಬ ಚಿಕ್ಕ ಊರಿಗೆ ಬಂದು ತಲುಪುವ ತನಕ ಜೀವದಲ್ಲಿ ಜೀವವಿಲ್ಲ. ತಲುಪಿದ ಮೇಲಾದರೂ ಏನಿದೆ? ಆ ಊರಿನಲ್ಲಿ ಲಕ್ಷಾಂತರ ಮಂದಿ ಉಳಿಯುವಂತಿಲ್ಲ, ಅಲ್ಲಿಂದ ಮುಂದಕ್ಕೆ ಹೋಗಬೇಕು, ಸಾಧ್ಯವಾದಷ್ಟೂ ದೊಡ್ಡ ಊರಿಗೆ.

ಮನೆ ಮಾರು ಕಳೆದುಕೊಂಡ ಸುಮಾರು ಹತ್ತು ಲಕ್ಷ ಜನ ಅಂಥದೊಂದು ಊರನ್ನು ಹುಡುಕಿಕೊಂಡಿದ್ದರು. ಅದರ ಹೆಸರು ದಿಲ್ಲಿ! ಇರುವೆ ಸಾಲಿನಂತೆ ಹಸಿದ, ಕೆರೆ ಳಿದ, ನೊಂದ, ಪ್ರತಿಕಾರದಿಂದ ಕುದ್ದು ಹೊಗುತ್ತಿದ್ದ ಹತ್ತು ಲಕ್ಷ ಮಂದಿಗೆ ಯಾವ ದಿಲ್ಲಿಯಾದರೂ ಎಲ್ಲಿಂದ ನೆರಳು ನೀಡಲು ಸಾಧ್ಯ? ವಿಶಾಲವಾದ ಮೈದಾನದಲ್ಲಿ ತಂತಿ ಬೇಲಿ ಹಾಕಿ ಅದರಲ್ಲಿ ನಿರಾಶ್ರಿತರನ್ನು ಕೂಡಿಡುತ್ತಿದ್ದರು: ಪಿಂಜಾರಪೋಲಿನಲ್ಲಿ ದನಗಳನ್ನು ಕೂಡಿದಂತೆ. ಬರುಬರುತ್ತ ಅವೂ ಜನರಿಂದ ತುಂಬಿಹೋಗಿ ಕಿಕ್ಕಿರಿದಿದ್ದವು. ಹಸಿದ ಜನ ಬೇಲಿಯೊಳಗೆ ಎಷ್ಟು ದಿನ ಅಂತ ಇದ್ದಾರು. ಅನ್ನ, ನೌಕರಿ ಹುಡುಕುಕೊಂಡು ದಿಲ್ಲಿಯ ಬೀದಿಯೊಳಗೆ ಬಂದರೆ ದೊಡ್ಡ ದಿಗ್ಬ್ಭ್ರಮೆ, ಇಲ್ಲಿ ಮುಸ್ಲಿಮರಿದ್ದಾರೆ!

ದೇಶ ವಿಭಜನೆಯಾದ ಮೇಲೆ ಇವರೆಲ್ಲಾ ಹೊರಟಪಹೋಗಬೇಕಿತ್ತಲ್ವಾ ಪಾಕಿಸ್ತಾನಕ್ಕೆ ? ಅಲ್ಲಿಂಗ ನಾವು ಬರಲಿಲ್ಲವೇ ಗುಳೇ ಎದ್ದು? ಅದರೆ ಇಲ್ಲಿನ ಮುಸ್ಲಿಮರಿಗೆ ಅಂಥದ್ದೇನೂ ಅಗಿಲ್ಲ. ನಿರಮ್ಮಳವಾಗಿ ಓಡಾಡಿಕೊಂಡಿದ್ದಾರೆ. ನೌಕರಿಯಲ್ಲಿದ್ದಾರೆ. ಸರ್ಕಾರದಲ್ಲಿ ಇವರ ಮಾತು ನಡೆಯುತ್ತದೆ. ದಿಲ್ಲಿಯ ತುಂಬ ಮಸೀದಿಗಳಿವೆ, ಮದರಸಾಗಳಿವೆ, ಇಲ್ಲಿನ ಮುಸ್ಲಿಮರಿಗೆ ದೊಡ್ಡದೊಡ್ಡ ಬಂಗಲೆಗಳಿವೆ. ನಾವು ಹಿಂದೂಗಳು ಎಲ್ಲೂ ನೆಲೆ ಇಲ್ಲದ ನಿರಾಶ್ರಿತರು.

ಹಾಗಂತ ಅನ್ನಿಸುತ್ತಿದ್ದಂತೆಯೇ ನಿರಾಶ್ರಿತ ಹಿಂದೂಗಳು ದಿಲ್ಲಿಯ ಮುಸ್ಲಿಮರ ಮೇಲೆ ಬೀಳತೊಡಗಿದರು. ಅನರೇನು ಒಬ್ಬಿಬ್ಬರೇ, ಅನಾಮತ್ತು ಹತ್ತು ಲಕ್ಷ ಜನ. ಅವರೊಂದಿಗೆ ಸ್ಥಳೀಯ ಹಿಂದುಗಳು ಸೇರಿಕೊಂಡರು.ಸಿಖ್ಖರು ಜತೆಯಾದರು. ಬೀದಿಬೀದಿಗಳಲ್ಲಿ ಶುರುವಾಯಿತು ನರಮೇಧ, ಮುಸ್ಲಮರನ್ನು ಮನೆಯಿಂದ ಹೊರಕ್ಕೆ ಎಳೆದು, ಕೊಂದರು. ಅವರ ಮನೆಗಳನ್ನು ಆಕ್ರಮಿಸಿಕೊಂಡರು. ಅವರ ಹೆಂಗಸರನ್ನು ಪೀಡಿಸಿದರು. ಸಿಕ್ಕಸಿಕ್ಕ ಮಸೀದಿಗಳಲ್ಲಿ ತಾವು ಜಮೆಯಾದರು. ಪಾಕಿಸ್ತಾನದಲ್ಲಿ ತಮ್ಮನ್ನು ಹಿಂಸಿಸಿ ಅವಮಾನಿಸಿದ ಮುಸ್ಲಿಮರೇ ಬೇರೆ, ಇವರು ತಮಗೆ ಯಾವ ತೊಂದರೆಯನ್ನು ಕೊಟ್ಟಿಲ್ಲ. ಉಹುಂ, ಆ ವೀಕ್ಷಣೆಯೇ ಉಳಿದಿರಲಿಲ್ಲ. ಉಳಿದುದ್ದುದು ಪ್ರತಿಕಾರ ಭಾವವೊಂದೇ.

ಗಾಂಧಿಜೀ ಹಟಕ್ಕೆ ಬಿದ್ದುದೇ ಆಗ. ಅವರಿಗೆ ಹಟ ಮಾಡಿ ಅಭ್ಯಾಸವಾಗಿಹೊಗಿತ್ತು. ಎಲ್ಲಿ ಹಿಂದೂ ಮುಸ್ಲಿಂ ದಂಗೆಗಳು ನಡೆದರೂ ಅಲ್ಲಿ ಹೋಗುತ್ತಿದ್ದರು. ಉಪವಾಸ ಕೂರುತ್ತಿದ್ದರು. ಐದು ದಿನ, ಇಪ್ಪತ್ತೊಂದು ದಿನ, ಬರೀ ಎಪ್ಪತ್ಮೂರು ಗಂಟೆ ಅವರ ಉಪವಾಸ ಸತ್ಯಾಗ್ರಹ ಅನಿರೀಕ್ಷಿತ ಪವಾಡಗಳನ್ನು ಮಾಡಿಬಿಡುತ್ತಿತ್ತು. ಗಲಭೆ ಇಳಿಮುಖ. ಹಿಂದೂ- ಮುಸ್ಲಿಂ ನಾಯಕರು ಬಂದು ಗಾಂಧೀಜಿ ಗೆ ತಲೆ ತಗ್ಗಿಸಿ ನಿಲ್ಲುತ್ತಿದ್ದರು. ಆಗಲೀ ಗಾಂಧಿಗೆ ಮುಸ್ಲಿಮರ ಮೇಲೆಯೇ ಪ್ರೀತಿ.

ಸಾವಿರ ಹಿಂದೂಗಳು ಸತ್ಯಾನಾಶ್ ಆದರೂ ಇಲ್ಲಿನ ಒಂದು ಮುಸ್ಲಿಂ ಕುಟುಂಬವೂ ಉಧ್ವಸ್ಥಗೊಂಡು ಪಾಕಿಸ್ತಾನಕ್ಕೆ ಬಲವಂತವಾಗಿ ಹೋಗುವಂತಾಗಬಾರದು. ಅವರು ಕೇಳಿದನ್ನು ಕೊಟ್ಟುಬಿಡಿ: ಕೇಳಿದಷ್ಟು ಕೊಟ್ಟುಬಿಡಿ. ಇದು ಗಾಂಧೀಜಿಯ ಹಟ. ಇಡೀ ದೇಶದ ಜನರ ಪಾಲಿಗೆ ಬಾಪೂ. ಬಾಪೂ ಅಂದರೆ ತಂದೆ. ಆದರೆ ಗುಳೇ ಎದ್ದು ಬಂದಿದ್ದ ಹತ್ತು ಲಕ್ಷ ಜನರ ದೃಷ್ಟಿಯಲ್ಲಿ ಅವರು ಮುಸ್ಲಿಂ ಪ್ರೇಮಿ, ಹಿಂದೂ ವಿರೋಧಿ.

ಒಂದು ಕಡೆ ಹಿಂದೂ ಮುಸ್ಲಿಂ ದಂಗೆಗಳಾಗಿ ತನ್ನ ಬಂಗಲೆಯ ಹಿತ್ತಲಿನಲ್ಲೇ ಮುಸ್ಲಿಂ ನೌಕರನನ್ನು ಉದ್ರಿಕ್ತ ಹಿಂದೂಗಳ ಗುಂಪೊಂದು ಕೊಚ್ಚಿ ಹಾಕಿದಾಗ ಅಕ್ಷರಶ ಥರಗುಟ್ಟಿ ಹೋದವನು ಭಾರತದ ಕಟ್ಟಕಡೆಯ ಬ್ರಿಟಿಷ್ ದೊರೆ ಲಾರ್ಡ್ ಮೌಂಟ್ ಬ್ಯಾಟನ್. ಆತ ಅಸಾಮಾನ್ಯನೇನಲ್ಲ. ಅಪರಿಮಿತ ಪರಾಕ್ರಮಿ.ಅನೇಕ ಯುದ್ಧಗಳನ್ನು ಗೆದ್ದಿದ್ದ ಸುಪ್ರೀಮ್ ಕಮಾಂಡರ್. ಆದರೆ ಹೊತ್ತಿ ಉರಿಯುತ್ತಿದ್ದ ದಿಲ್ಲಿಯಲ್ಲಿ ನಿಸ್ಸಾಹಾಯಕನಾಗಿ ಕುಳಿತು ಬಿಟ್ಟಿದ್ದ. ಎಂಥ ಪರಿಸ್ಥಿತಿಯಾದರೂ ಸಂಭಾಳಿಸಿ ತಹಬಂದಿಗೆ ತರುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದ ಮೌಂಟ್ ಬ್ಯಾಟನ್. ಬ್ರಿಟಿಷರು ಕಟ್ಟಿದ್ದ ಭಾರತೀಯ ಸೈನ್ಯದ ಮೇಲೆ ಆತನಿಗೆ ಅಂಥ ವಿಶ್ವಾಸವಿತ್ತು. ಆದರೆ ದುರಂತ ಬೇರೆಯದೇ ರೀತಿಯಲ್ಲಿ ಸಂಭವಿಸಿತ್ತು. ವಿಭಜನೆಯಾಗಿದ್ದು ಬರೀ ದೇಶವಲ್ಲ. ಸೈನ್ಯ ಕೂಡಾ ಇಬ್ಭಾಗವಾಗಿತ್ತು. ಹೆಚ್ಚಿನ ಮುಸ್ಲಿಂ ಸೈನಿಕರು ಪಾಕಿಸ್ತಾನಕ್ಕೆ ಹೊರಟು ಹೋಗಿದ್ದರು. ಹೋದವರು ಸುಮ್ಮನೆಯಾದರೂ ಕುಳಿತರಾ? ಸ್ವಾತಂತ್ರ ಬಂದ ಎರಡೇ ತಿಂಗಳಲ್ಲಿ ಬುಜಕಟ್ಟು ಯೋಧರನ್ನು ಜೊತೆಗಿಟ್ಟುಕೊಂಡು ಅವರ ಹೆಸರಿನಲ್ಲಿ ಕಾಶ್ಮೀರದ ಮೇಲೆ ಲಗ್ಗೆಯಿಕ್ಕಿ ಬಿಟ್ಟರು. ಭೂಲೋಕದ ಸ್ವರ್ಗ ಎಂಬಂತಿದ್ದ ಬಾರಾಮುಲ್ಲಾದಲ್ಲಿ ಒಂದೇ ರಾತ್ರಿ ನೂರು ಹತ್ಯೆಗಳಾಗಿ ಹೋದವು. ಮಧುಚಂದ್ರಕ್ಕೆ ಹೋದ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಮರಕ್ಕೆ ಕಟ್ಟಿ ಅವನೆದುರೇ ಅವನ ಹೆಂಡತಿ ಮೇಲೆ ಸರದಿಯಾಗಿ ಅತ್ಯಾಚಾರವೆಸಗಿದ್ದರು. ಅಲ್ಲಿನ ಕ್ರಿಶ್ಚಿಯನ್ ಆಸ್ಪತ್ರೆಯೊಂದನ್ನು ಸುಟ್ಟು ಹಾಕಿ ನನ್‌ಗಳ ಮೇಲೆ ಅತ್ಯಾಚಾರವೆಸಗಿದ್ದರು. ಸಂಜೆಯಾಗುವ ಹೊತ್ತಿಗೆ ಬಾರಾಮುಲ್ಲಾ ದದ್ಧಗಿಸಿ ಹೋಗಿತ್ತು.

ಬೇರೆ ದಾರಿಯೇ ಇರಲಿಲ್ಲ.ಕಾಶ್ಮೀರವನ್ನು ಉಳಿಸಿಕೊಳ್ಳಬೇಕೆಂದರೆ ನೆಹರೂ ಸರ್ಕಾರ ಇದ್ದ ಬದ್ದಸೈನ್ಯವನ್ನೆಲ್ಲ Air lift ಮಾಡಿ ಕಾಶ್ಮೀರಕ್ಕೆ ಕಳುಹಿಸಿಕೊಡಲೇಬೇಕಾಯಿತು. ನೆಹರೂ ಮತ್ತು ವಲ್ಲಭಬಾಯಿ ಪಟೇಲ್ ಕಂಗಾಲಾಗಿದ್ದರು. ಪಾಕಿಸ್ತಾನದಲ್ಲಿ ಕುಳಿತ ಮಹ್ಮದ್ ಅಲಿ ಜಿನ್ನಾ ಎರಡೆರಡು ಕಡೆಯಿಂದ ಒದೆ ಕೊಡುತ್ತಿದ್ದ. ಒಂದು ಕಡೆ ನಿರಾಶ್ರಿತರನ್ನು ಕಳಿಸುತ್ತಿದ್ದ. ಇನ್ನೊಂದು ಕಡೆ ಪರಮ ಕ್ರೂರಿ ಸೈನ್ಯವನ್ನು ಕಳಿಸುತ್ತಿದ್ದ, ಕೊಟ್ಟ ಕಿರುಕುಳ ಸಾಲದೆಂಬಂತೆ ಭಾರತವು ವಿಭಜನೆಯ ಕಾಲದಲ್ಲಿ ಪಾಕಿಸ್ತಾನಕ್ಕೆ ಕೊಡಲು ಒಪ್ಪಿದ್ದ ಐವತ್ತೈದುಕೋಟಿ ರುಪಾಯಿಗಳನ್ನು ಈ ಕೂಡಲೇ ಕೊಡ ಮಾಡಬೇಕು ಎಂದು ಕುಳಿತಿದ್ದ.

ಎಲ್ಲಿಂದ ತರೋದು ಅಷ್ಟು ದುಡ್ಡು ಎಂಬ ಪ್ರಶ್ನೆಯಿರಲಿಲ್ಲ. ಯುದ್ಧಕ್ಕೆ ನಿಂತ ಪರಮ ಶತ್ರುವಿನ ಕೈಗೆ ಅಷ್ಟು ದುಡ್ಡು ಕೊಟ್ಟದ್ದೇ ಅದರೆ ಅವನಿಂದ ಅದಿನ್ಯಾವ ಪರಿ ಹೊಡೆತ ಬೀಳಬಹುದು ? ಯೋಚಿಸಿದರು ಪಟೇಲ್. ''ಕಾಶ್ಮೀರ ಸಮಸ್ಯೆ ಬಗೆಹರಿಯುವ ತನಕ ಪಾಕಿಸ್ತಾನಕ್ಕೆ ಒಂದು ಬಿಡಗಾಸು ಕೊಡುವ ಪ್ರಶ್ನೆಯಿಲ್ಲ'' ಅಂದು ಬಿಟ್ಟರು.

''ಇದು ತಪ್ಪು ಆಸ್ತಿ ಪಾಲು ಮಾಡಿಕೊಂಡ ಮೇಲೆ ತಮ್ಮನಿಗೆ ಹಣ ಕೊಡುವುದಿಲ್ಲ ಅನ್ನುವ ಅಣ್ಣನಂತೆ ವರ್ತಿಸುತ್ತೀರಿ!'' ಅಂದರು ಗಾಂಧಿ.

''ಇವರಿನ್ನಿನ್ನು ಕೊಲ್ಲದೆ ಹೋದರೆ ನಮ್ಮ ಹೆಂಡಿರು ಮಕ್ಕಳನ್ನು ಬೀದಿಗೆ ನಿಲ್ಲಿಸಿ ಭಾರತವನ್ನು ಮುದುರಿ ಪಾಕಿಸ್ತಾನದ ಪಾಲು ಮಾಡಿ ಬಿಡುತ್ತಾರೆ'' ಅಂತ ಯೋಚಿಸಿದರು ನಾಥೂರಾಮ್.

ನಿಮಗೆ ಅಶ್ಚರ್ಯವೆನಿನಸಬಹುದು. ಆತನ ಮೂಲ ಹೆಸರು ರಾಮಚಂದ್ರ.ಆತನ ತಂದೆಯ ಹೆಸರು ವಿನಾಯಕ ಗೋಡ್ಸೆ, ಪೋಸ್ಟಲ್ ಡಿಪಾರ್ಟಮೆಂಟ್ ನಲ್ಲಿದ್ದರು. ಆರಂಭದಲ್ಲಿ ಮೂರು ಮಕ್ಕಳಾದವು. ಎರಡು ಗಂಡು, ಒಂದು ಹೆಣ್ಣು. ಆದರೆ ಎರಡೂ ಗಂಡು ತೀರಿಕೊಂಡವು. ವಿನಾಯಕ ಗೋಡ್ಸೆ ದೇವರಿಗೆ ಹರಕೆ ಹೇಳಿಕೊಂಡರಂತೆ: ''ಈ ಬಾರಿ ಹುಟ್ಟುವ ಮಗುವನ್ನು ಹೆಣ್ಣು ಮಗುವಿನಂತೆ ಬೆಳಸುತ್ತೇವೆ''.

ಅಂತೆಯೇ ಗಂಡು ಮಗು ಹುಟ್ಟಿತು. ರಾಮಚಂದ್ರ ಅಂತ ಹೆಸರಿಟ್ಟರು. ಅದಕ್ಕೆ ಮೂಗು ಚುಚ್ಚಿಸಿದರು. ನತ್ತು ಕೂಡಿಸಿದರು. ಹೀಗಾಗಿ ರಾಮನಾಥೂರಾಮನಾದ. ಓದಿನಲ್ಲಿ ಆಸಕ್ತಿ ಕಡಿಮೆ. ಆದರೆ ಮಹಾನ್ ದೈವಭಕ್ತ. ಮನೆ ದೇವರೆದುರು ಪದ್ಮಾಸನ ಹಾಕಿ ಕುಳಿತರೆ ಸ್ವಲ್ಪ ಹೊತ್ತಿನಲ್ಲಿ ಟ್ರಾನ್ಸ್ ಗೆ ಒಳಗಾಗಿಬಿಡುತ್ತಿದ್ದ.ದೇವರೊಂದಿಗೆ ಮಾತನಾಡುತ್ತಿದ್ದ. ಮನೆಯವರು ಕೇಳುವ ಪ್ರಶ್ನೆಗಳಿಗೆ ಅವನ ಮೂಲಕ ದೇವರು ಮಾತಾನಾಡಿತ್ತಿದ್ದ ಎಂದು ನಂಬಲಾಗುತ್ತಿತ್ತು. ಹದಿನಾರನೆ ವಯಸ್ಸಿನ ತನಕ ಈ ವ್ಯವಹಾರ ಮುಂದವರೆದು ಆ ಮೇಲೆ ನಿಂತು ಹೋಯಿತು.

ಇನ್ನೊಬ್ಬನಿದ್ದನಲ್ಲ ನಾರಾಯಣ ಆಪ್ಟೆ. ಅವನು ಕೊಂಚ ಹೆಣ್ಣು ಮರುಳ. ಆದರೆ ಯಾವತ್ತಾದರೂ ಅವನು ಹಾದರದಂತಹ ಕೆಲಸಮಾಡಿದರೂ ಮಾಡಬಹುದೇನೋ, ಆದರೆ ಕೊಲೆಯನ್ನಂತೂ ಖಂಡಿತ ಮಾಡಲಾರ ಎಂದೇ ಅವನನ್ನು ಬಲ್ಲವವರು ಭಾವಿಸಿದ್ದರು. ಅವನ ಮಾತು ಹಾಗಿರಲಿ: ಅಂಚೆ ಇಲಾಖೆಯವರು ಮುದ್ರೆ ಹಾಕುವಾಗ ಆಕಸ್ಮಾತ್ ಸ್ಟಾಂಪ್ ಗೆ ಮುದ್ರೆ ಮೂಡದಿದ್ದರೆ ಅದನ್ನು ಬಳಸುತ್ತೇವಲ್ಲ ? ನಾಥೂರಾಮ ಗೋಡ್ಸೆಯಲ್ಲಿ ಆ ಮಟ್ಟದ ಅಪ್ರಮಾಣಿಕತೆಯೂ ಇರಲಿಲ್ಲವಂತೆ!

ಅಂಥವರಿಬ್ಬರೂ ಸೇರಿ ವ್ಯವಸ್ಥಿ ತ ಪ್ರಯತ್ನ ಮಾಡಿ, ಸಂಚು ರೂಪಿಸಿ ಈ ದೇಶದ ತಂದೆಯೆನ್ನಿಸಿಕೊಂಡವರನ್ನ ಕೊಂದು ಹಾಕಿದರೆಂದರೆ ಆವತ್ತಿನ ಪರಿಸ್ಥಿತಿ ಏನಿದ್ದರಬಹುದು? ಅವರ ಮನಸ್ಥಿತಿ ಎಂಥದ್ದ್ದಿರಬಹುದು?

ಪುಸ್ತಕ ಬರೆಯುತ್ತ ಬರೆಯುತ್ತ ರೋಮಾಂಚಿತನಾಗುತ್ತಿದ್ದೇನೆ. ಯಾವ ಪತ್ರಿಕೆ ತಿರುವಿದರೂ ಚುನಾವಣೆಗಳದೇ ಸುದ್ದಿ. ನಿಮಗೆ ಬದಲಾವಣೆಯಿರಲಿ ಎಂಬ ಕಾರಣಕ್ಕೆ ಈ ವಾರ ಪುಸ್ತಕದ ಬಗ್ಗೆ ಬರೆದೆ.

ಮಹಾತ್ಮ ಗಾಂಧಿಯನ್ನು ಅವರೇಕೆ ಕೊಂದರು? ಮುಂದುವರೆದ ಭಾಗ : ಟೆಲಿಪ್ರಿಂಟರ್ ನ ಮೇಲೆ ಸುದ್ದಿ ಬಂದ ಮರುಕ್ಷಣ

(ಸ್ನೇಹಸೇತು:ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X