ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಫೋಸಿಸ್‌ನ ಹಿರಿಯ ಹೆಣ್ಣು ಮಗಳು ಸುಧಾಮೂರ್ತಿ ಅವರಿಗೆ..!

By * ರವಿ ಬೆಳಗೆರೆ
|
Google Oneindia Kannada News

Sudha Murthy
ಮೇಡಂ ಸುಧಾಮೂರ್ತಿ ಅವರಿಗೆ ವಂದನೆಗಳು.

ಇತ್ತೀಚೆಗೆ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಅಂಥದ್ದೊಂದು ಹೇಳಿಕೆ ಕೊಡದೇ ಹೋಗಿದ್ದಿದ್ದರೆ ನಿಮಗೆ ಇಂಥದೊಂದು ಪತ್ರ ಬರೆಯುವ ಪ್ರಮೇಯವಿರುತ್ತಿರಲಿಲ್ಲ. 'ಎಲ್ಲಾ ಐ.ಟಿ. ಕಂಪನಿಯವರನ್ನು ಕರೆದು ಮಾತಾಡಿದೆ ರವೀ. ನೆರೆ ಹಾವಳಿ ಬಂದು ಇಡೀ ಉತ್ತರ ಕರ್ನಾಟಕ ಕಂಗಾಲಾಗಿ ಹೋಗಿದೆ. ಹ್ಯಾಗೆ ಹಳ್ಳಿ ಕೊಚ್ಚಿಕೊಂಡು ಹೋಗಿವೆ. ಕುಡಿಯೋಕೆ ನೀರಿಲ್ಲ. ದನಕರು ಸತ್ತಿವೆ. ಮನೆಗಳು ಬಿದ್ದು ಹೋಗಿವೆ. ಈ ಸಂದರ್ಭದಲ್ಲಿ ಉಳಿದೆಲ್ಲರಿಗಿಂತ ಶ್ರೀಮಂತರಾದ ಐ.ಟಿ.ಇಂಡಸ್ಟ್ರಿಯವರು, ನೀವು ಕೈಹಿಡೀಬೇಕು. ಒಂದಷ್ಟು ಹಳ್ಳಿ ದತ್ತು ತಗೊಳ್ಳಿ. ಮನೆಗಳನ್ನ ಕಟ್ಟಿಕೊಡಿ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಕಟ್ಟಿಕೊಡೋಕೆ ಅಂತ ಹತ್ತಿಪ್ಪತ್ತು ಸಾವಿರ ರೂಪಾಯಿಗಳ ನೆರವು ಬರುತ್ತೆ. ಅದನ್ನೂ ನಿಮಗೇ ಕೊಟ್ಟು ಬಿಡ್ತೀವಿ. ಅದಕ್ಕೆ ನೀವೊಂದಿಷ್ಟು ಹಾಕಿ ನಿರ್ಗತಿಕರಿಗೆ ಮನೆ ಕಟ್ಟಿಕೊಡಿ ಅಂತ ಎಲ್ಲ ಪ್ರಮುಖ ಕಂಪನಿಗಳವರನ್ನೂ ಕೇಳಿಕೊಂಡ್ತು ಸರ್ಕಾರ. ಉಪಮುಖ್ಯಮಂತ್ರಿಯಾಗಿ ನಾನೇ ವಿನಂತಿ ಮಾಡಿಕೊಂಡೆ. We will come back on this issue ಅಂತ ಹೇಳಿ ಎದ್ದು ಹೋದ ಕಂಪನಿಗಳವರು ಒಬ್ರೂ ಮತ್ತೆ ಫೋನು ಮಾಡ್ಲಿಲ್ಲ. ಒಂದು ರೂಪಾಯಿ ಕೂಡ ಕೊಡ್ಲಿಲ್ಲ. ಮಾರಾಯಾ..." ಅಂದರು ಎಂ.ಪಿ.ಪ್ರಕಾಶ್‌.

ಅವರ ದನಿಯಲ್ಲಿ ನೋವಿತ್ತು.

ಸುಧಾ ಮೇಡಂ, ಉಳಿದೆಲ್ಲ ಕಂಪನಿಗಳವರನ್ನ ಬಿಟ್ಟು ನಿಮಗೇ ಯಾಕೆ ಈ ಪತ್ರ ಬರೀತಿದೀನಿ ಅನ್ನೋದು ನಿಮಗೆ ಅರ್ಥವಾಗುತ್ತೆ ಅಂದುಕೊಂಡಿದೀನಿ. ನೀವು ಕನ್ನಡಿಗರು. ನಮ್ಮ ನೆಲದ, ನಮ್ಮ ಮನೆಯ ಹಿರಿಯ ಹೆಣ್ಣು ಮಗಳು. ಬರೀತೀರಿ, ಓದ್ತೀರಿ. ಬೆಳಗಾವಿ ಜಿಲ್ಲೆಯಲ್ಲಿ ಮನೆ ಮಠ ಕಳೆದುಕೊಂಡ ಹೆಣ್ಣು ಮಕ್ಕಳ ಸಂಕಟ ನಿಮಗೆ ಅರ್ಥವಾಗುತ್ತೆ. ಈ ಪತ್ರದ ತಿರುಳನ್ನ ನೀವು ಇನ್ಫೋಸಿಸ್‌ನ ಇತರರಿಗೂ, ಅದರಂತಹ ಇತರೆ ಐಟಿ-ಬಿಟಿ ಸಂಸ್ಥೆಗಳವರಿಗೂ ಇಂಗ್ಲಿಷಿನಲ್ಲಿ ವಿವರಿಸಿ ನಮ್ಮ ಹಳ್ಳಿಗರ ಪರವಾಗಿ ಇಂಗ್ಲಿಷಿನಲ್ಲಿ ವಾದಿಸ್ತೀರಿ ಅನ್ನೋದು ಒಂದು ಕಾರಣ. ನಿಮಗೆ ಇಂಥ ಪತ್ರ ಬರೆಯೋ ಹಕ್ಕು, ಬೆಂಗಳೂರಿಗನಾಗಿ, ಕನ್ನಡಿಗನಾಗಿ ನನಗಿದೆ ಅನ್ನೋದು- ಎರಡನೇ ಕಾರಣ. ಎಲ್ಲೂ ಈ ಪತ್ರದ ಒಕ್ಕಣೆ ನಿಮ್ಮನ್ನು ನೋಯಿಸಬೇಕು ಅನ್ನೋ ಉದ್ದೇಶ ಹೊಂದಿಲ್ಲ ಅನ್ನೋದನ್ನ ಮೊದಲೇ ವಿವರಿಸ್ತಿದೀನಿ.

ನಿಮಗೆ ಗೊತ್ತಿರಲಿಕ್ಕಿಲ್ಲ. ಉತ್ತರ ಕರ್ನಾಟಕದ ಜನ ನೆರೆ ಹಾವಳಿಯಿಂದಾಗಿ ಮನೆ ಕಳಕೊಂಡರು. ಆದರೆ ನಿಮ್ಮ ಐಟಿ ಕಂಪನಿಗಳ ಹಾವಳಿಯಿಂದಾಗಿ ಇವತ್ತು ನಾವು ಬೆಂಗಳೂರಿನಲ್ಲಿ ಮನೆ ಸಿಗದ ಕಂಗಾಲಾಗಿದೀವಿ. ಮೂರು ಸಾವಿರ ರೂಪಾಯಿ ಬಾಡಿಗೆಗೆ ಸಿಗ್ತಾ ಇದ್ದ ಮನೆಗಳಿಗೆ ಇವತ್ತು ಹದಿನೈದು ಹದಿನೆಂಟು ಸಾವಿರ ಬಾಡಿಗೆ! ಭೋಗ್ಯಕ್ಕೆ ಮನೆಗಳನ್ನ ಕೊಡೋದು ಬಿಟ್ಟು ಯಾವ ಕಾಲವಾಯ್ತು? ಸರ್ವೀಸ್‌ ಅಪಾರ್ಟ್‌ಮೆಂಟುಗಳ ಕಲ್ಚರ್‌ ತಂದಿಟ್ಟು ಒಂದು ಕೋಣೆಗೆ, ಒಂದು ದಿನಕ್ಕೆ ಒಂದೂವರೆ ಸಾವಿರ ಬಾಡಿಗೆ ಅಂತ ಮಾಡಿಟ್ಟಿದ್ದು ನಿಮ್ಮ ಐಟಿ ಇಂಡಸ್ಟ್ರಿ. ಒಂದು ಯಾವುದಾದರೂ ಇಂದಿರಾನಗರದ ಶಾಲೆಯಲ್ಲಿ ಮೂವತ್ತು ಸಾವಿರಕ್ಕಿಂತ ಕಡಿಮೆ ಡೊನೇಷನ್‌ ಇರೋ ನರ್ಸರಿ ಸ್ಕೂಲ್‌ ನರ್ಸರಿ ಸ್ಕೂಲ್‌ ಇದ್ರೆ ತೋರಿಸ್ತೀರಾ? ಪಬ್‌ಗಳಲ್ಲಿ ಬಿಯರ್‌ನ ಬೆಲೆ ಎಲ್ಲಿಗೆ ಬಂದಿದೆ ಗಮನಿಸಿ. ರಿಯಲ್‌ ಎಸ್ಟೇಟು ಅನ್ನೋದು ಅಕಾಶದಿಂದ ಇನ್ನೂ ಮೇಲಕ್ಕೆ ಏಣಿ ಇಟ್ಟುಕೊಂಡು ನಿಂತಿದೆ. ಕೇವಲ ಏಳು ವರ್ಷಗಳ ಹಿಂದೆ ಒಂದು ಚದರ ಅಡಿಗೆ 400 ರೂಪಾಯಿ ಕೊಟ್ಟು ಸೈಟು ಖರೀದಿಸಿದ್ದೆ. ಇವತ್ತು ಅದರ ಬೆಲೆ 3800 ರೂಪಾಯಿ. ನೀವು ನಮ್ಮ ಬೆಂಗಳೂರಿಗೆ ಎಲ್ಲಿಂದ ಬಂದ್ರಿ ಮತ್ತು ಯಾಕೆ ಬಂದ್ರಿ ಮೇಡಂ ?

ನೀವು ಬಂದ ಮೇಲಿಂದ ಬೆಂಗಳೂರಿನಲ್ಲಿ ಆದ ನೂರು ರಸ್ತೆಗಳ ಪೈಕಿ ಶೇ.75ರಷ್ಟು ರಸ್ತೆಗಳು ನಿಮ್ಮ ಐಟಿ ಇಂಡಸ್ಟ್ರಿಗಳಿರುವ ಏರಿಯಾಗಳಲ್ಲೇ ಆಗಿವೆ. ಪ್ರತಿ ನದಿಯೂ ಸಮುದ್ರದ ಕಡೆಗೇ ಓಡುತ್ತೆ ಅನ್ನೋ ಹಾಗೆ ಬೆಂಗಳೂರಿನ ಪ್ರತಿ ಫ್ಲೈ ಓವರೂ ನಿಮ್ಮ ಆಫೀಸುಗಳ ದಿಕ್ಕಿಗೇ ತಿರುಗಿಕೊಂಡು ನಿಂತಿವೆ. ಬೆಂಗಳೂರಿನಲ್ಲಿ ಡೊನೇಷನ್‌ ಇಲ್ಲದ ಒಂದು ಒಳ್ಳೆ ಶಾಲೆ ಮಾಡಿ, ಅಲ್ಲಿ ಒಳ್ಳೆ ಶಿಕ್ಷಕಿಯರನ್ನ ನೇಮಿಸೋ ಪ್ರಯತ್ನ ಮಾಡೋಣ ಅಂದ್ರೆ-ಶಿಕ್ಷಕಿಯರೇ ಸಿಗೋದಿಲ್ಲ. ಯಾಕೇಂದ್ರೆ, ಒಂದೂಮುಕ್ಕಾಲು ಸೆಂಟೆನ್ಸು ಇಂಗ್ಲಿಷ್‌ ಮಾತಾಡೋಕೆ ಬರೋ ಹೆಣ್ಣು ಮಕ್ಕಳು ಸಿಕ್ಕರೂ ಅವರನ್ನ ನಿಮ್ಮ ಕಾಲ್‌ಸೆಂಟರುಗಳು ಅಪಹರಿಸುತ್ತವೆ.

ಸಾವಿರಾರು ಮಕ್ಕಳಿಗೆ ಪಾಠ ಹೇಳಬೇಕಾದ ಒಬ್ಬ ಶಿಕ್ಷಕಿ, ಅಮೆರಿಕದವನ್ಯಾರೋ ತಲೆ ಮಾಸಿದ ಕ್ಲಯಿಂಟ್‌ ಕೈಯಿಂದ ಬಾಯಿಗೆ ಸಿಕ್ಕ ಹಂಗೆ ಬೈಸಿ ಕೊಂಡು ಹಗಲೂ ರಾತ್ರಿ ದುಡೀತಾಳೆ. ಕಾರಣವಿಷ್ಟೆ, ನಮ್ಮ ಶಾಲೆಗಳು ಐದಾರು ಸಾವಿರ ಸಂಬಳ ಕೊಡ್ತವೆ. ಕಾಲ್‌ ಸೆಂಟರುಗಳು ಎಂಟು ಸಾವಿರ ಕೊಡ್ತವೆ. ನಿಮ್ಮ ಐಟಿ ಕಂಪನಿಗಳ ಹುಡುಗರು, ಒಂದೆರಡು ತಿಂಗಳು ಅಮೆರಿಕದಲ್ಲಿದ್ದು ಬಂದವರು- 'ನೀವೂ ಜಾಸ್ತಿ ಸಂಬ್ಳ ಕೊಡ್ರೀ, ಟೀಚರ್ಸ್‌ ನಿಮ್ಮಲ್ಲೇ ಇರ್ತಾರೇ..." ಅಂತ ತಲಹರಟೆ ಮಾತಾಡ್ತಾರೆ. ಜಾಸ್ತಿ ಸಂಬಳ ಕೊಡಬೇಕು ಅಂದ್ರೆ ನಾವು ಯಥಾಪ್ರಕಾರ ನಮ್ಮ ಶಾಲೆಗಳ ಮಕ್ಕಳ ಪೋಷಕರ ತಲೆ ಒಡೀಬೇಕಲ್ವಾ? ಎಷ್ಟು ದುಬಾರಿ ಮಾಡಿಟ್ರಿ ನಮ್ಮ ಸೈಟು, ಮನೆ, ಶಾಲೆ, ಹೊಟೇಲುಗಳನ್ನ ? ನೀವು ಎಲ್ಲಿಂದ ಬಂದ್ರಿ ಮತ್ತು ಯಾಕೆ ಬಂದ್ರಿ ಮೇಡಂ?

ಮೊನ್ನೆ ಎಂ.ಪಿ. ಪ್ರಕಾಶ್‌ ಹೇಳ್ತಾ ಇದ್ರು: ' ವೈಟ್‌ ಫೀಲ್ಡ್‌ನಲ್ಲಿ ರೋ ಐಟಿ ಪಾರ್ಕ್‌ನಿಂದ ಹೊಸೂರು ರಸ್ತೆ ತನಕ ನೇರವಾಗಿ ಕೆಲವೇ ನಿಮಿಷಗಳಲ್ಲಿ ತಲುಪೋ ಹಾಗೆ ರಸ್ತೆ ಮಾಡಿಕೊಡಿ. ಅದಕ್ಕೆ 139ಕೋಟಿ ಕೊಡಿ. ಇವತ್ತೇ ಬಿಡುಗಡೆ ಮಾಡಿ" ಅಂತ ನಿಮ್ಮ ಐಟಿ ಮಂದಿ ಒತ್ತಾಯಿಸ್ತಾ ಇದ್ರಂತೆ. ನಿಮ್ಮದೇನು ಹೋಗಬೇಕು ಹೇಳಿ? ಚಿಕ್ಕದೊಂದು ಮಳೆ ಬಿದ್ರೆ ನಮ್ಮ ತ್ಯಾಗರಾಜನಗರ, ಸಂಪಂಗಿರಾಮನಗರ, ಶಾಸ್ತ್ರಿನಗರದಂಥ ಬಡ ಬೆಂಗಳೂರಿಗರ ಏರಿಯಾಗಳು ಮುಳುಗೇ ಹೋಗ್ತವೆ. ಅವುಗಳಿಗೆ ಮಳೆ ನೀರಿನ ಕಾಲುವೆ ಮಾಡಿಸೋಕೆ ನಮ್ಮ ಮೇಯರ್‌ ನಾರಾಯಣ ಸ್ವಾಮಿ ಜೇಬಲ್ಲಿ ಕಿಲುಬು ಕಾಸಿಲ್ಲ. ಅದೇ ಬೊಮ್ಮನ ಹಳ್ಳೀಲಿ ಎರಡು ಎರಡು ಮನೆಯಾಳಕ್ಕೆ ನೀರು ನುಗ್ಗಲಿ? ನಿಮ್ಮ ಐಟಿ ಇಂಡಸ್ಟ್ರಿ ಪಾಲಿನ ಸರಸ್ವತೀ ಪುತ್ರರಾದ 'ಟೈಮ್ಸ್‌ ಆಫ್‌ ಇಂಡಿಯಾ" ದವರು ಅವತ್ತೊಂದು ವಿಶೇಷಾಂಕ ತರ್ತಾರೆ. ಯಾಕೆ ಅಂದ್ರೆ ಬೊಮ್ಮನಹಳ್ಳಿ ನಿಮ್ಮ ಐಟಿ ಇಂಡಸ್ಟ್ರಿಯ ತೊಟ್ಟಿಲು. ಉಳಿದ ಬೆಂಗಳೂರು ನಿಮ್ಮ ಪಾಲಿಗೆ ಬಟ್ಟಲು.

ಬೇಸರವಿಲ್ಲದೆ ಒಪ್ಪಿಕೊಳ್ಳಿ. ನೀವು ಈ ತನಕ ಬೆಂಗಳೂರಿಗೆ ಮಾಡಿದ್ದು ಏನೂ ಇಲ್ಲ.'ಜಾಗತಿಕ ನಕಾಶೆಯಲ್ಲಿ ನಾರಾಯಣ ಮೂರ್ತಿಯವರಿಂದಾಗಿ ಬೆಂಗಳೂರಿಗೊಂದು ಸ್ಥಾನ ದೊರಕಿತು" ಅಂತ ಯಾರೋ (ನಿಮ್ಮೋರೇ ಇರಬೇಕು) ಭಾಷಣ ಮಾಡ್ತಿದ್ರು. ಅಲ್ಲಿ ನಿಂತಿದ್ದ ನನ್ನಂಥ ಹುಂಬ ಕನ್ನಡಿಗನೊಬ್ಬ 'ಯೋವ್‌! ನಾರಾಯಣ ಮೂರ್ತಿ ಹಂಗೆ ಮಾಡೋಕೆ ಮುಂಚೆ ಬೆಂಗಳೂರೇನು ಚಂದ್ರಲೋಕದ ನಕಾಶೇಲಿತ್ತಾ ? ಕೂತ್ಕಳಯ್ಯಾ..." ಅಂತ ರೇಗ್ತಿದ್ದ. ಹಾಗಂತ ನಿಮ್ಮ ಮನೆಯವರಾದ ನಾರಾಯಣಮೂರ್ತಿ ಅವರು ಏನೂ ಮಾಡಿಲ್ಲ ಅಂತ ನಾನು ಹೇಳ್ತಿಲ್ಲ. ಆದರೆ ಅವರು ಒಳ್ಳೆಯದೆಲ್ಲವನ್ನೂ ಅಮೆರಿಕಕ್ಕೆ ಮಾಡಿದ್ದಾರೆ. ಅತ್ಯಂತ ಪ್ರೊಫೆಷನಲ್ಲಾಗಿ ಮಾಡಿದ್ದಾರೆ. ಅವರು ಬೆಂಗಳೂರಿಗೇನಾದರೂ ಮಾಡಿದ್ದಾರಾ ಅಂತ ಹುಡುಕೋಕೆ ಹೋದರೆ, ಇಡೀ ಬೆಂಗಳೂರಿಗೆ ಸಿಗಬೇಕಾಗಿದ್ದ ಅಷ್ಟೂ ಸವಲತ್ತನ್ನ ನಿಮ್ಮ ಐಟಿ ಪಾರ್ಕುಗಳಿಗೆ ಸುರಿಯೋ ಹಾಗೆ ಮಾಡಿ, once again, ತಮ್ಮ ಅಮೆರಿಕನ್‌ ಕ್ಲಯಿಂಟುಗಳನ್ನು ಸಂಪ್ರೀತಗೊಳಿಸುವ ಘನಕಾರ್ಯ ಮಾಡಿದ್ದಾರೆ.

ಅಲ್ಲ ಮೇಡಂ, ಈ ಹಿಂದೆ ಟಾಟಾ-ಬಿರ್ಲಾ-ಕಿರ್ಲೋಸ್ಕರ್‌ ಮುಂತಾದವರು ಚಿಕ್ಕ ಚಿಕ್ಕ ಊರುಗಳಲ್ಲಿ ತಮ್ಮ ಫ್ಯಾಕ್ಟರಿಗಳನ್ನ ಹಾಕಿದರೆ ಆ ಊರಿಗೊಂದು ಪಾರ್ಕು, ರಸ್ತೆ, ದೇವಸ್ಥಾನ ಅಂತ ಕಟ್ಟಿಸಿ ಕೊಡ್ತಾ ಇದ್ದರು. ನೀವು ಉಲ್ಟಾ! ನಮ್ಮ ಪಾರ್ಕು, ರಸ್ತೆ, ಕೆರೆ, ದೇವಸ್ಥಾನ ಎಲ್ಲಾ ನುಂಗಿ ನಿಮ್ಮ ಐಟಿ ಪಾರ್ಕು ಚೆಂದ ಮಾಡಿಕೊಡ್ರಿ. ಯಾಕಾದ್ರೂ ಬಂದ್ರಿ ಮೇಡಂ?

ನಿಮ್ಮಿಂದಾಗಿ ನಮ್ಮ ಸಾವಿರಾರು ಹುಡುಗರಿಗೆ ಕೆಲಸ ಸಿಕ್ಕಿದೆ, ನಿಮ್ಮಿಂದಾಗಿ ಅವರು ದೇಶ ವಿದೇಶಗಳಿಗೆ ಹೋಗಿ ಬಂದಿದ್ದಾರೆ -ಇದೆಲ್ಲ ಮಾತಾಡೋದಿದೆಯಲ್ಲ ? ಇದಕ್ಕಿಂತ ಅರ್ಥಹೀನವಾದದ್ದು ಮತ್ತೊಂದಿಲ್ಲ. ನಮ್ಮ ಕಾಲೇಜುಗಳ ಕ್ಯಾಂಪಸ್ಸಿನಿಂದ ನಮ್ಮ ಹುಡುಗರನ್ನ ಆಯ್ಕೆ ಮಾಡಿಕೊಂಡು, ಅಮೆರಿಕಕ್ಕೆ ಕಳಿಸಿ, ಅವರನ್ನ ಕಡಿಮೆ ರೇಟಿನ ಕೂಲಿಗಳನ್ನಾಗಿ ದುಡಿಸಿಕೊಂಡ್ರಿ. ಅದೇನು ನಮ್ಮ ಉಪಕಾರಕ್ಕೆ ಮಾಡಿದಿರಾ? ಅದರ ಬದಲಿಗೆ ನೀವೇ ಜಿಲ್ಲೆಗೊಂದು ಇನ್‌ಫೋಸಿಸ್‌ ಇಂಜಿನೀಯರಿಂಗ್‌ ಕಾಲೇಜು ಅಂತ ಮಾಡಿ, ನಯಾ ಪೈಸೆ ಫೀಸಿಲ್ಲಿದೇ ಬಡವರ ಮನೆಗಳ ಬುದ್ಧಿವಂತ ಹುಡುಗರಿಗೆ ಉಚಿತವಾಗಿ ಸೀಟುಕೊಟ್ಟು ಅವರನ್ನು ಇಂಜಿನೀರ್‌ಗಳನ್ನಾಗಿ ಮಾಡಿ ಅಮೆರಿಕಕ್ಕೆ ಕಳಿಸಿದ್ದಿದ್ರೆ... ಮೇಡಂ, ಈ ಸಲದ ದಸರೆಯ ಅಂಬಾರಿಯಲ್ಲಿ ದೇವರ ಬದಲಿಗೆ ನೀವಿಬ್ರೂ ಗಂಡ-ಹೆಂಡ್ತಿ ಇರ್ತಾ ಇದ್ರಿ.

ಈ ರಾಜ್ಯ ಕೊಟ್ಟ ಪ್ರತಿ ಸವಲತ್ತನ್ನೂ ಬಳಸಿಕೊಂಡು, ಅಲ್ಲಿಗೂ ಸಾಲದು ಅಂತ ಅನ್ನಿಸಿದಾಗ 'ಪಕ್ಕದ ಹೈದರಾಬಾದಿಗೆ ಹೊರ್ಟೋಗ್ತೀವಿ ನೋಡಿ" ಅಂತ ಸರ್ಕಾರವನ್ನ ಬ್ಲ್ಯಾಕ್‌ಮೇಲ್‌ ಮಾಡಿದ್ದು ನಿಮ್ಮ ಐ.ಟಿ.ಇಂಡಸ್ಟ್ರಿ. ಜಾಗತೀಕರಣದ ಮೊದಲ ಪ್ರಸವದ ಮೂಟೆ ಕಟ್ಟಿ ತಂದವರೂ ನೀವೇ. ಈ ಸಮಾಜಕ್ಕೆ ಇಂಜಿನಿಯರುಗಳಷ್ಟೇ ಇದ್ರೆ ಸಾಕಾ? ನಮಗೆ ರೈತರು, ಮೇಷ್ಟ್ರು, ಮೆಕ್ಯಾನಿಕ್ಕುಗಳು, ಆಟೋದವರು, ಚೌರದವರು, ಚಮ್ಮಾರರು. ಕಮ್ಮಾರರು, ಕುಂಬಾರರು ಎಲ್ಲಾ ಬೇಕು. ಇವತ್ತು ನೆರೆ ಹಾವಳಿಯಿಂದ ತತ್ತರಿಸಿದ ರೈತ ನೇಗಿಲು ಬಿಟ್ಟು ಹೊರಟ ಅಂದ್ರೆ ನಾಳೆ ನೀವೇನು ಡಾಲರ್‌ ತಿಂತೀರಾ? ಕಂಪ್ಯೂಟರ್‌ ತಿಂತೀರಾ?

ಎಂ.ಪಿ. ಪ್ರಕಾಶ್‌ ಆಗಲೀ, ಈ ರಾಜ್ಯದ ಕಟ್ಟ ಕಡೆಯ ಪ್ರಜೆಯಾಗಲೀ ನಿಮ್ಮನ್ನ ಕೇಳ್ತಿರೋದು ಭಿಕ್ಷೆ ಅಲ್ಲ. ಈ ನೆಲದ ಸಾರ ಹೀರಿ ಬೆಳೆದಿದ್ದೀರಿ, ಇದಕ್ಕೆ ಋಣ ಸಂದಾಯ ಮಾಡಿ ಅಂತ ಎಚ್ಚರಿಸ್ತಾ ಇದ್ದಾನೆ. ನೀವು ಒಂಥರಾ, ನಮ್ಮ ಮಧ್ಯೆಯೇ ಇರುವ ನಮ್ಮದೇ ಬಣ್ಣದ ಚರ್ಮದ ಬ್ರಿಟಿಷರಿದ್ದ ಹಾಗೆ ಮೇಡಂ! ನಿಮ್ಮ ನಿರ್ಲಕ್ಷ್ಯ, ನಿಮ್ಮ ಇದೇ ಊರು ಮುರುಕ ಪಾಲಸಿಗಳು, ಬ್ಲ್ಯಾಕ್‌ಮೇಲ್‌ಗಳು ಹೀಗೇ ಮುಂದುವರೆದರೆ 'ನೀವು ಅಮೆರಿಕಕ್ಕೇ ಹೋಗಿ" ಅಂತ ಚಳವಳಿ ಆರಂಭಿಸಬೇಕಾದ ದಿನಗಳು ಬಂದಾವು. ಅದರ ಮೊದಲ ಸೂಚನೆ ಕೊಡ್ತಿದೀನಿ. ಬೆಂಗಳೂರಿಗೆ ತಮಿಳರು ಬಂದರು, ಮಲಯಾಳಿಗಳು ಬಂದರು, ತೆಲುಗರು ಬಂದರು- ಉಹುಂ! ಯಾರು ಬಂದಾಗಲೂ ಇಷ್ಟು ಭಾರ ಅನ್ನಿಸಿರಲಿಲ್ಲ. ನೀವು ಬಂದಿರಿ ನೋಡಿ, ಐ.ಟಿ ಇಂಡಸ್ಟ್ರಿಯ ಜನ? ನೀವು ಭೂಮಿಗೇ ಭಾರ ಆದಿರಿ.

ಸ್ವಲ್ಪ ನಿಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಿ. ನೆರೆ ಸಂತ್ರಸ್ತರ ಸಹಾಯಕ್ಕೆ ಬನ್ನಿ. ಎಲ್ಲೋ ಸುನಾಮಿ ಅಲೆ ಬೀಸಿದರೆ, ಇಲ್ಲಿಂದ ಲಾರಿಗಟ್ಟಲೆ ಚಪಾತಿ ಮಾಡಿಕೊಂಡು ಹೋದ ದೊಡ್ಡ ಮನಸ್ಸಿನ ಬಡವರು ನಾವು, ಕನ್ನಡಿಗರು. ನೀವು ಇಲ್ಲೇ ಇದ್ದೀರಿ. ಚಾಪತೀನೂ ತಿನ್ನುತ್ತಿದ್ದೀರಿ: ನಮ್ಮದು. ಕಡೇ ಪಕ್ಷ ಮನೆ ಕಟ್ಟಿಸಿಕೊಡಿ. ರಸ್ತೆ ಹಾಕಿಸಿ ಕೊಡಿ. ಬಡ ರೈತನಿಗೆ ಎರಡು ಜೊತೆ ಎತ್ತು ಕೊಡಸಿ. ಶಾಲೆ ಮಕ್ಕಳಿಗೆ ಬಟ್ಟೆ ಕೊಡಿಸಿ. We will come back to you on this issue ಅಂತ ನೀವು ಹೇಳಿದ್ದನ್ನ ನಂಬಿಕೊಂಡು ಸರ್ಕಾರವೊಂದೇ ಕೂತಿಲ್ಲ. ತತ್ತರಿಸಿ ಹೋದ ರೈತ ನಿಮ್ಮ ಕಡೆಗೆ ಆಸೆಯ ಕಣ್ಣು ಬಿಟ್ಟುಕೊಂಡು ಕೂತಿದ್ದಾನೆ.

'ಇವನ್ಯಾರೋ ಒರಟ. ಹೀಗೆಲ್ಲಾ ಬರೆದಿದಾನೆ" ಅಂತ ನಿಮ್ಮ ಐಟಿ ಮಂದಿಗೆ ಇದನ್ನ ಇಂಗ್ಲಿಷಿನಲ್ಲಿ ಓದಿ ಹೇಳಿ ಸುಧಕ್ಕಾ. ನಿಮ್ಮ ತಮ್ಮನಂಥವನು ನಾನು. ಬೇಜಾರು ಮಾಡ್ಕಬ್ಯಾಡ್ರಿ. ನೀವು ನಮ್ಮ ಮನೆಯ ಹೆಣ್ಣುಮಗಳು. ಇಷ್ಟೆಲ್ಲ ಹೇಳಿದ ಮೇಲೂ ನೀವು ಏನೂ ಮಾಡಲಿಲ್ವಾ? ಪರವಾಗಿಲ್ಲ. ಈ ಕಡೆಗೆ ಬಂದಾಗ ಮನೆಗೆ ಬಂದು ಕುಂಕುಮ ಇಟ್ಟುಕೊಂಡು ಹೋಗಿ: ಅಮೆರಿಕಕ್ಕೆ. (ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X