ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿನ್ನೆಲೆ ಕೆಮ್ಮು ಕಲಾವಿದನ ಸಂದರ್ಶನ

By Staff
|
Google Oneindia Kannada News

Cough artist Krishnappa interview
ಕನ್ನಡ ಚಿತ್ರರಂಗ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ - ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ ವಿಷಾದ : ಮಜಾವಾಣಿ ಸಂದರ್ಶನ.

ಮವಾ : ನಿಮ್ಮ ಈ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ.

ದಕೃ : ಕೆಮ್ಮು ಕಲೆ ಹೊಸದೇನಲ್ಲ. ಮನುಷ್ಯ ಮಾತನಾಡಲು ಕಲಿಯುವ ಮುನ್ನವೇ ಕೆಮ್ಮುತ್ತಿದ್ದ. ಶಿಶುರ್ವೇತ್ತಿ-ಪಶುರ್ವೇತ್ತಿ ಎನ್ನುವಂತೆ ಹಸುಳೆಗಳಿಂದ ಹಿಡಿದು ಪಶು-ಪ್ರಾಣಿಗಳವರೆಗೆ ಕೆಮ್ಮದವರು ಅಥವಾ ಕೆಮ್ಮಿಗೆ ಸ್ಪಂದಿಸದವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ನನ್ನ ವೈಶಿಷ್ಟ್ಯವೇನೆಂದರೆ ನಾನು ಈ ಕೆಮ್ಮಲ್ಲಿ ಕೊಂಚ ಮಟ್ಟಿಗೆ ನೈಪುಣ್ಯವನ್ನು ಸಾಧಿಸಿದ್ದೇನೆ ಅಷ್ಟೇ.

ಮವಾ : ಹಿನ್ನೆಲೆ-ಕೆಮ್ಮಿನ ರಂಗಕ್ಕೆ ನಿಮ್ಮ ಆಗಮನ ಹೇಗಾಯಿತು?

ದಕೃ : ನಾನು ಚಿಕ್ಕಂದಿನಿಂದಲೆ ಕೆಮ್ಮುತ್ತಿದ್ದೆ. ನಮ್ಮ ತಾಯಿಯ ಪ್ರಕಾರ ನಾನು ಮೂರು ತಿಂಗಳ ಶಿಶುವಾಗಿದ್ದಾಗಲೇ ಕೆಮ್ಮುತ್ತಿದ್ದನಂತೆ. ನಿಜ ಹೇಳಬೇಕೆಂದರೆ ನಾನು ಕೆಮ್ಮು ಕಲಾರಂಗಕ್ಕೆ ನನಗೇ ಅರಿವಿಲ್ಲದಂತೆ ಶಿಶು ಕಲಾವಿದನಾಗಿ ಆಗಮಿಸಿದೆ. ನನಗೆ ಆರು ತಿಂಗಳಿದ್ದಾಗ ನಮ್ಮ ಊರಿನಲ್ಲಿ ಶೂಟಿಂಗ್ ನಡಿಯುತ್ತಿತ್ತು. ನಮ್ಮಮ್ಮ ನನ್ನನ್ನೂ ಕರೆದುಕೊಂಡು ಶೂಟಿಂಗ್ ನೋಡಲು ಹೋಗಿದ್ದರು. ಒಂದು ದೃಶ್ಯಕ್ಕೆ ಕೆಮ್ಮುವ ಹಸುಳೆಯ ಅಗತ್ಯವಿತ್ತು. ನಿರ್ದೇಶಕರು ನಮ್ಮಮ್ಮನೊಡನೆ ಮಾತನಾಡಿ ನನಗೆ ಪ್ರಪ್ರಥಮ ಬಾರಿಗೆ ಚಲನ ಚಿತ್ರವೊಂದರಲ್ಲಿ ಕೆಮ್ಮಲು ಅವಕಾಶ ಮಾಡಿಕೊಟ್ಟರು. ಹೀಗೆ ಕ್ಯಾಮರ ಮುಂದೆ ಶುರುವಾದ ನಂಟು ಈಗ ಹಿನ್ನೆಲೆ ಕೆಮ್ಮು ಕಲೆಯಲ್ಲಿ ನಿಂತಿದೆ.

ಮವಾ : ನೀವು ಈವರೆಗೆ ಯಾವ ಯಾವ ನಟರಿಗೆ ಹಿನ್ನೆಲೆಯಲ್ಲಿ ಕೆಮ್ಮಿದ್ದೀರಿ?

ದಕೃ : ಇಂದಿನ ಚಿತ್ರರಂಗದ ಬಹುಪಾಲು ಹೆಸರಾಂತ ನಾಯಕ ನಟರಿಗೆ ನಾನು ಹಿನ್ನೆಲೆಯಲ್ಲಿ ಕೆಮ್ಮಿದ್ದೇನೆ. ಹಾಡನ್ನು ಹೇಗೆ ಎಲ್ಲ ನಟರೂ ಹಾಡಬಲ್ಲರಾದರೂ ಉತ್ತಮ ಗಾಯನಕ್ಕೆ ಹಿನ್ನೆಲೆ ಗಾಯಕರು ಬೇಕೇ ಬೇಕು. ಹಾಗೆಯೇ ಭಾವ ಪೂರ್ಣವಾದ ಕೆಮ್ಮಿಗೆ ಹಿನ್ನೆಲೆ ಕೆಮ್ಮು ಕಲಾವಿದರು ಅವಶ್ಯ. ನಾನು ಈ ಕಲೆಯನ್ನು ಎಷ್ಟು ಸಿದ್ಧಿಸಿಕೊಂಡಿದ್ದೇನೆಂದರೆ, ಇತ್ತೀಚೆಗೆ ನಾನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರವೊಂದಕ್ಕೆ ಹಿನ್ನೆಲೆಯಲ್ಲಿ ಕೆಮ್ಮುತ್ತಿದ್ದಾಗ ಬೇರೊಂದು ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ಹಿರಿಯ ನಟ ಉಪೇಂದ್ರ ಗಾಬರಿಯಾಗಿ ನೀರು ಮತ್ತು ಕಾಫ್ ಡ್ರಾಪ್ಸ್ ಕೊಡುವಂತೆ ತಮ್ಮ ಸಹಾಯಕರಿಗೆ ಅಣತಿಯಿತ್ತರು.

ಮವಾ : ನೀವು ಕಾಫ್ ಡ್ರಾಪ್ಸ್ ಬಳಸುತ್ತೀರೇ?

ದಕೃ : ಖಂಡಿತಾ ಇಲ್ಲ. ಗಾಯಕರಿಗೆ ಹೇಗೆ ಕೆಲವೊಂದು ಖಾದ್ಯ ಪದಾರ್ಥಗಳು ವರ್ಜ್ಯವೋ ಹಾಗೆಯೇ ಕಾಫ್ ಆರ್ಟಿಸ್ಟುಗಳಿಗೆ ಕಾಫ್ ಡ್ರಾಪ್ಸ್ ನಿಷಿದ್ಧ. ಉದಯೋನ್ಮುಖ ಕೆಮ್ಮು ಕಲಾವಿದರಿಗೆ ನನ್ನ ಕಿವಿ ಮಾತು: ನೀವು ಈ ರಂಗದಲ್ಲಿ ಉನ್ನತಿ ಸಾಧಿಸಬೇಕೆಂದಿದ್ದಲ್ಲಿ ಕಾಫ್ ಡ್ರಾಪ್ಸ್‌ನಿಂದ ದೂರವಿರಿ.

ಮವಾ : ನಿಮ್ಮ ಈ ಪ್ರತಿಭೆಗೆ ಕನ್ನಡ ಚಿತ್ರರಂಗದಿಂದ ಸರ್ಕಾರದಿಂದ ಸಹಕಾರ ದೊರಕಿದೆಯೇ?

ದಕೃ : ಬೇಸರದ ಸಂಗತಿಯೆಂದರೆ ಚಿತ್ರರಂಗವಾಗಲೀ ಸರ್ಕಾರವಾಗಲೀ ಕೆಮ್ಮು ಕಲೆಗೆ ಸಹಕಾರ ನೀಡುವುದಿರಲಿ ಇದನ್ನು ಒಂದು ಕಲೆಯೆಂದೇ ಗುರುತಿಸಿಲ್ಲ. ಕನ್ನಡ ಚಿತ್ರರಂಗ ಹಂಸಗೀತೆಯಂತಹ ಸಂಗೀತ ಪ್ರಧಾನ ಚಿತ್ರವನ್ನು ನಿರ್ಮಿಸಿದೆಯಾದರೂ ಇಲ್ಲಿಯವರೆಗೆ ಒಂದೂ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ. ಕೆಮ್ಮು ಪ್ರಧಾನ ಚಿತ್ರ ಬೇಡ, ತೆಲುಗಿನ ಶಂಕಾರಾಭರಣಂ ತರಹದ ಚಿತ್ರ ಸಹ ನಿರ್ಮಿಸಿಲ್ಲ. ಆ ಚಿತ್ರದ ಕ್ಲೈಮ್ಯಾಕ್ಸಿನಲ್ಲಿ ಆ ಚಿತ್ರದ ನಾಯಕ ಸಂಗೀತ ಹಾಡುತ್ತಾ ಮಧ್ಯದಲ್ಲಿಯೇ ಕೆಮ್ಮುತ್ತಾ ಮರಣಿಸುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಇನ್ನೂ ಒಂದೂ ಕೆಮ್ಮಿಗೆ ಅಷ್ಟೊಂದು ಮಹತ್ವ ಕೊಡುವ ಚಿತ್ರ ನಿರ್ಮಾಣವಾಗಿಲ್ಲ. ಹಾಗೆಯೇ ನಮ್ಮ ಚಿತ್ರರಂಗದಲ್ಲಿ ಕೆಮ್ಮನ್ನು ಬಹುಮಟ್ಟಿಗೆ ನೆಗೆಟೀವ್ ಆಗಿ ಎಂದರೆ ರೋಗದ ಕುರುಹಾಗಿ ಚಿತ್ರೀಕರಿಸಲಾಗುತ್ತದೆ. ಸಂಗೀತ ಹೇಗೋ ಹಾಗೆಯೇ ಕೆಮ್ಮು ಸಹ ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಯಾವಾಗಲೂ ನೆಗೆಟೀವ್ ಆಗಿಯೇ ನೋಡುವುದು ಬಿಡಬೇಕು.

ಜನರಲ್ಲಿ ಕೆಮ್ಮು ಕಲೆಯ ಬಗೆಗೆ ಅರಿವು ಮೂಡಿಸಿ ಅದನ್ನು ಪೋಷಿಸಲು ಒಂದು ಅಕಾಡೆಮಿಯ ಅವಶ್ಯಕತೆ ಇದೆ. ಸರ್ಕಾರ ನೆರವು ನೀಡಿದರೆ ಅದನ್ನು ಸ್ಥಾಪಿಸಲು ನಾನು ಈಗಲೇ ಸಿದ್ಧ.

(ಮಜಾವಾಣಿ ಗಾಂಧೀನಗರ ಬ್ಯೂರೋ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X