ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?

ಆಕಾರದಲ್ಲಿ ಅಷ್ಟೇನೂ ದೊಡ್ಡದಲ್ಲದ ಕಾಡುನಾಯಿಗಳ ಬೇಟೆ ವಿಧಾನವೇ ಭಯಂಕರ. ಇಂಥ ಪುಟ್ಟ ಅಕಾರದ ಕಾಡುನಾಯಿಗೆ ಎಂಥ ಹುಲಿಯೂ ಹೆದರುತ್ತದೆ. ಅವುಗಳ ಬಗ್ಗೆ ತುಂಬ ಕುತೂಹಲಕರವಾದ ವಿವರಗಳನ್ನು ನೀಡಿದ್ದಾರೆ ಒನ್ಇಂಡಿಯಾ ಕನ್ನಡ ಅಂಕಣಕಾರ ಗಗನ್ ಪ್ರೀತ್

Written by: ಗಗನ್ ಪ್ರೀತ್
Subscribe to Oneindia Kannada

ಕಾಡೆಂದರೆ ಕುತೂಹಲ. ಕಾಡೆಂದರೆ ಪ್ರಾಣಿ ಸಂಕುಲ. ಕಾಡೆಂದರೆ ಶುದ್ಧ ಆಮ್ಲಜನಕ ಹೊತ್ತುನಿಂತಿರುವ ಮರಗಳ ಸಾಲು. ಕಾಡೆಂದರೆ... ಹೀಗೆ ಬರೆಯುತ್ತಾ ಹೋದರೆ ಇದು ಮುಗಿಯದ ವಿವರಣೆ ಆಗುತ್ತದೆ. ಅಂಥ ಕಾಡಿನ ಗಾಂಭೀರ್ಯ ಹುಲಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ, ಹುಲಿಯಂಥ ಹುಲಿಯೇ ಒಂದು ಪ್ರಾಣಿಗೆ ಹೆದರುತ್ತದೆ ಅಂದರೆ ನಂಬ್ತೀರಾ?! ಹೌದು, ಎಂಥ ಹುಲಿಯೂ ಕಾಡು ನಾಯಿ ಅಥವಾ ಇಂಡಿಯನ್ ಡೋಲ್ ಗೆ ಹೆದರುತ್ತದೆ. 

ತಿಳಿಕೆಂಪಿನ ಮೈಬಣ್ಣವುಳ್ಳ ಇವುಗಳ ಬಾಲದ ಬಳಿ ಮಾತ್ರ ಕೊಂಚ ಕಪ್ಪು ಇರುತ್ತದೆ. ಪೂರ್ತಿಯಾಗಿ ಬೆಳೆದ ಕಾಡುನಾಯಿ ಸುಮಾರು 16 ಕೆ.ಜಿ ತೂಕ ಹಾಗೂ 3 ಅಡಿ ಅಗಲವಿರುತ್ತದೆ. 5 ರಿಂದ 12 ನಾಯಿಗಳು ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಇರುತ್ತವೆ. ಕೆಲ ಬಾರಿ 40 ರಷ್ಟು ದೊಡ್ಡ ಗುಂಪು ಕೂಡ ಕಂಡು ಬರುತ್ತದೆ.[ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ]

ಗುಂಪಿನ ನೇತೃತ್ವ ವಹಿಸಿದ ಗಂಡು ನಾಯಿಗೆ ಆಲ್ಪ ಮೇಲ್ ಹಾಗೂ ಆಲ್ಪಫಿಮೇಲ್ ಎಂದು ಕರೆಯುತ್ತಾರೆ. ಇವುಗಳು ತುಂಬಾ ಚುರುಕು ಹಾಗೂ ಚಾಣಾಕ್ಷ ಜೀವಿಗಳು. ಇವುಗಳ ಶಕ್ತಿಯೇ ಗುಂಪು. ಇವುಗಳ ಬೇಟೆ ಆಡುವ ಪ್ರಕ್ರಿಯೆ ವಿಶಿಷ್ಟ ಹಾಗೂ ಅದ್ಬುತ. ಇವುಗಳ ಗುಂಪನ್ನು ಹಲವಾರು ತಂಡಗಳನ್ನಾಗಿ ಮಾಡಿಕೊಂಡು ಬೇಟೆ ಆಡುತ್ತವೆ.

ಒಂದು ತಂಡ ಜಿಂಕೆಯನ್ನು ಅಟ್ಟಿಸಿಕೊಂಡು ಹೋದರೆ, ಅದು ಬರುವ ದಾರಿಯಲ್ಲೇ ಹೊಂಚು ಹಾಕಿ ನಿಲ್ಲುವ ಮತ್ತೊಂದು ಗುಂಪು ಸುಲಭವಾಗಿ ಬೇಟೆಯಾಡುತ್ತದೆ. ಹುಲಿ ಅಥವಾ ಚಿರತೆ ಬೇಟೆ ಆಡುವಾಗ ಕುತ್ತಿಗೆಗೆ ಬಾಯಿ ಹಾಕಿ ಉಸಿರುಗಟ್ಟಿಸಿ ತಮ್ಮ ಬೇಟೆಯನ್ನು ಕೊಲ್ಲುತ್ತವೆ. ಆದರೆ ಕಾಡುನಾಯಿಯ ರೀತಿಯೇ ಬೇರೆ. ಬೇಟೆಯನ್ನು ಕಚ್ಚುತ್ತಾ ಹಾಗೇ ತಿನ್ನಲು ಶುರು ಮಾಡಿಬಿಡುತ್ತವೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

ಹತ್ತರಲ್ಲಿ ಎಂಟು ಬೇಟೆಯಲ್ಲಿ ಕಾಡುನಾಯಿ ಸಕ್ಸಸ್

ಇದು ನೋಡಲು ಬಹಳ ಕ್ರೂರ ಎನಿಸಿದರೂ ಇವುಗಳ ಬೇಟೆ ರೀತಿಯೇ ಹಾಗೆ. ಕಾಡುನಾಯಿ ಗಾತ್ರದಲ್ಲಿ ಚಿಕ್ಕದಿರುವ ಕಾರಣ ಈ ರೀತಿ ಬೇಟೆ ಆಡುತ್ತವೆ. ಹುಲಿಯು ಹತ್ತರಲ್ಲಿ ಒಂದು ಬೇಟೆಯಲ್ಲಿ ಮಾತ್ರ ಯಶಸ್ವಿಯಾಗುತ್ತದೆ. ಚಿರತೆಗಳು ಹತ್ತರಲ್ಲಿ ಎರಡು ಬೇಟೆಯಲ್ಲಿ ಯಶಸ್ವಿಯಾಗುತ್ತವೆ. ಆದರೆ ಕಾಡುನಾಯಿಗಳು ಹತ್ತರಲ್ಲಿ ಎಂಟು ಬೇಟೆ ಯಶಸ್ವಿಯಾಗುತ್ತವೆ.

ಹಗಲು ಹೊತ್ತಿನ ಬೇಟೆಗಾರ

ಹುಲಿ ಅಥವಾ ಚಿರತೆಗಳು ರಾತ್ರಿ ವೇಳೆ ಬೇಟೆ ಆಡಲು ಇಚ್ಛಿಸುತ್ತವೆ. ಆದರೆ ಕಾಡುನಾಯಿಗಳು ಬೇಟೆಯಾಡುವುದು ಹಗಲ ಹೊತ್ತೇ. ಇವುಗಳು ತಮ್ಮ ಮರಿಯನ್ನು ಗುಹೆಗಳಲ್ಲಿ ರಕ್ಷಿಸಿಕೊಳ್ಳುತ್ತವೆ. ಇವುಗಳ ಗರ್ಭಾವಸ್ಥೆ ಎರಡು ತಿಂಗಳು. ಒಮ್ಮೆಗೆ ನಾಲ್ಕರಿಂದ ಆರು ಮರಿಗಳನ್ನು ಹಾಕಿ ಎರಡು ತಿಂಗಳವರೆಗೂ ಹಾಲು ಕುಡಿಸುತ್ತವೆ.

15ರಿಂದ 16 ವರ್ಷ ಆಯುಷ್ಯ

ಕಾಡು ನಾಯಿಯೊಂದು ಪೂರ್ತಿಯಾಗಿ ಬೆಳೆಯಲು ಆರು ತಿಂಗಳು ಬೇಕು. ಇವುಗಳ ಆಯಸ್ಸು 15ರಿಂದ 16 ವರ್ಷ. ಇವುಗಳು ತಮ್ಮ ಬೇಟೆಯನ್ನು ಎಷ್ಟು ಕಿಲೋಮೀಟರ್ ವರೆಗೂ ಕೂಡ ಬೆನ್ನಟ್ಟಿಕೊಂಡು ಹೋಗಿ, ಕೊಲ್ಲಬಲ್ಲವು. ಸಾಮಾನ್ಯವಾಗಿ ನೀರಿರುವ ಬಳಿ ಅಟ್ಟಿಸಿಕೊಂಡು ಹೋಗಿ ಅಲ್ಲಿ ತಪ್ಪಿಸಿಕೊಳ್ಳಲು ಬಿಡದಂತೆ ಕೊಂದುಬಿಡುತ್ತವೆ. ಇವು ಬೇರೆ ನಾಯಿಗಳಂತೆ ಬೊಗಳಲು ಆಗುವುದಿಲ್ಲ. ಇನ್ನು ಅವುಗಳ ಕಿರುಚಾಟ ಸೀಟಿ ಹೊಡೆದಂತೆ ಇರುತ್ತದೆ.

ಆನೆಯು ಬೆನ್ನಟ್ಟಿ ಹೋಯಿತು

ಒಮ್ಮೆ ನಾವು ಬಂಡೀಪುರದಲ್ಲಿ ಸಫಾರಿ ಮಾಡುತ್ತಿದ್ದೆವು. ಆಗ ಕಾಡುನಾಯಿಗಳ ಗುಂಪು ಕಂಡುಬಂದಿತ್ತು. ಅವುಗಳು ವಿಶ್ರಮಿಸುತ್ತಿದ್ದದ್ದನ್ನು ಕಂಡೆವು. ಅವುಗಳ ಬಳಿ ಒಂದು ಗಂಡಾನೆಯನ್ನು ಕೂಡ ನೋಡಿದೆವು. ಈ ನಾಯಿಗಳ ಪುಂಡಾಟಿಕೆ ಶುರುವಾಯಿತು. ಈ ಪುಂಡಾಟಿಕೆ ತಾಳಲಾರದೆ ಆ ಗಂಡಾನೆ ಅಟ್ಟಿಸಿಕೊಂಡು ಹೋಗಿ ಇವುಗಳನ್ನು ಓಡಿಸಿದ ಸನ್ನಿವೇಶ ನಮ್ಮ ಕ್ಯಾಮೆರಾದಲ್ಲಿ ಸೆರೆಯಾಯಿಯಿತು. ಅದೊಂದು ಅದ್ಭುತ ಅನುಭವ.

ಕೃಪಾಕರ್ ಸೇನಾನಿ ಜೋಡಿ

ಇಂಥ ಕಾಡುನಾಯಿಗಳ ಬಗ್ಗೆ ವಿಶೇಷವಾದ ಆಸ್ಥೆ ಇಟ್ಟುಕೊಂಡು, ಅವುಗಳನ್ನು ಹತ್ತು ವರ್ಷಗಳ ಕಾಲ ಅಧ್ಯಯನ ಮಾಡಿದವರು ಕೃಪಾಕರ್ ಮತ್ತು ಸೇನಾನಿ. ಇವರು ಕಾಡು ನಾಯಿಗಳ ಬಗ್ಗೆ ಚಿತ್ರೀಕರಣ ಮಾಡಲು ಶುರು ಮಾಡಿದರು. ಇದಕ್ಕೆ ಹತ್ತು ವರ್ಷ ಹಿಡಿಯಿತು. ಕಾಡುನಾಯಿಗಳ ಹಾವಭಾವ, ಅವುಗಳ ಜೀವನ ಬೇಟೆಯ ಪ್ರಕ್ರಿಯೆ ಎಲ್ಲವನ್ನು ಸೆರೆ ಹಿಡಿದು "ದ ಪ್ಯಾಕ್" ಎಂಬ ಚಿತ್ರವನ್ನು ಮಾಡಿದರು. ಇದಕ್ಕೆ ಅಂತರಾಷ್ಟ್ರಿಯ ಮಟ್ಟದಲ್ಲಿ ಗ್ರೀನ್ ಆಸ್ಕರ್ ಎಂಬ ಪ್ರತಿಷ್ಠಿತ ಪ್ರಶಸ್ತಿ ಸಲ್ಲಿತು.

ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನಲ್ಲಿ ಪ್ರಸಾರ

ಕೃಪಾಕರ್ ಹಾಗೂ ಸೇನಾನಿ ಇಡೀ ಏಷಿಯಾದಲ್ಲೇ ಈ ಪ್ರಶಸ್ತಿ ಪಡೆದವರಲ್ಲಿ ಮೊದಲಿಗರಾಗಿದ್ದರು. ಈ ಚಿತ್ರವನ್ನು ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್ ನಲ್ಲಿ 'ವೈಲ್ಡ್ ಡಾಗ್ ಡೈರಿಸ್' ಎಂಬ 47 ನಿಮಿಷದ ಪ್ರಸಾರ ಮಾಡಲಾಯಿತು. ಇದಕ್ಕೂ ಕೂಡ ಸಾಕಷ್ಟು ಪ್ರಶಸ್ತಿಗಳು ಸಂದವು.

ಬಲಿ ಪ್ರಾಣಿಗಳು ಕೆಲ ನಿಮಿಷದಲ್ಲೇ ಖಾಲಿ

ಕಾಡುನಾಯಿಗಳು ಬೇಟೆಯಾಡುವ ಪರಿಯೇ ಭಯಂಕರ. ಅದು ತಾನು ಬೇಟೆಯಾಡಿದ ಪ್ರಾಣಿ ಸಾಯುವವರೆಗೆ ಕಾಯುವುದೇ ಇಲ್ಲ. ಬದುಕಿರುವಂತೆಯೇ ತಿನ್ನಲು ಆರಂಭಿಸುತ್ತದೆ. ಈ ಫೋಟೋ ಕೂಡ ಅಂಥದ್ದೇ ಒಂದು ನಿದರ್ಶನ. ನಾವು ಈ ಫೋಟೋ ತೆಗೆದ ಕೆಲವು ನಿಮಿಷಗಳಲ್ಲಿ ಅದು ತಿಂದು ಮುಗಿಸಿತ್ತು.

English summary
Why tiger also haunt to wild dogs? Hunting style, life and other interesting facts about wild dogs explained by Gagan preeth in his column Jungle diary.
Please Wait while comments are loading...