ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್ಸಿಲೋನಾದಲ್ಲಿರುವ 'ಜಯನಗರದ ಹುಡುಗಿ'ಯ ಅಂಕಣ ಆರಂಭ

ರಾಗಿಗುಡ್ಡ ನಮ್ಮ ಬಡಾವಣೆಯ ಅತ್ಯಂತ ಪ್ರೀತಿಯ ಸ್ಠಳ. ನನ್ನ ಬಾಲ್ಯ ಪೂರ್ತಿ ಅಲ್ಲೆ ಕಳೆದ್ದಿದ್ದು. ಅಲ್ಲಿನ ಗುಡ್ಡ ಹತ್ತಿ, ದೇವರ ದರ್ಶನ ಪಡೆದು, ಅಲ್ಲಿನ ಪುಳಿಯೋಗರೆ ತಿಂದರೇನೆ ಸಮಾಧಾನ. ಅಲ್ಲಿನ ಹಸು, ಬೆಕ್ಕು, ನಾಯಿ ಸಹ ನಮ್ಮ ಸ್ನೇಹಿತರು.

By ಜಯನಗರದ ಹುಡುಗಿ
|
Google Oneindia Kannada News

ಬೆಂಗಳೂರಿನಲ್ಲಿ ಇಪ್ಪತ್ತೈದು ವರ್ಷ ಕಳೆದು ಈಗ ಸ್ಪೇನ್ ನ ಬಾರ್ಸಿಲೋನಾದಲ್ಲಿ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಗಾಗಿ ಓದುತ್ತಿರುವ ಮೇಘನಾ ಸುಧೀಂದ್ರ ಅವರ ಅಂಕಣ ಪ್ರತಿ ಬುಧವಾರ ಪ್ರಕಟವಾಗಿದೆ. ಅಂಕಣದ ಹೆಸರು 'ಜಯನಗರದ ಹುಡುಗಿ'. ಖ್ಯಾತ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಅವರ ಮಗಳಾಗಿರುವ ಮೇಘನಾ ಅವರು ಬೆಂಗಳೂರಿನ ಮತ್ತು ಸ್ವರ್ಗದಂತಿದ್ದ ಜಯನಗರದ ಹಳೆಯ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ಮುಂದೆಯೂ ಬೆಂಗಳೂರಿನ ಬಗ್ಗೆ ಬರೆಯಲಿದ್ದಾರೆ - ಸಂಪಾದಕ.

ನನ್ನ ಜಯನಗರ.

"ಬೆಂಗಳೂರು ಚೆನ್ನಾಗಿಲ್ಲ ಕಣ್ರೇ, ಅಸಹ್ಯ ನಮ್ಮೂರು ಚೆನ್ನಾಗಿತ್ತು" ಅಂದಾಗೆಲ್ಲ ನನಗೆ ವಿಪರೀತ ಕೋಪ. ಅರೆ ನನ್ನ ಊರಿನ ಬಗ್ಗೆ ಹೇಗೆಲ್ಲ ಮಾತಾಡ್ತಾರೆ? ಹೌದು ಸ್ವಾಮಿ! ನನ್ನ ಹುಟ್ಟೂರು ಬೆಂಗಳೂರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕತ್ತರಿಗುಪ್ಪೆ ಗ್ರಾಮ. ಅಲ್ಲಿಂದ ಜಯನಗರದಲ್ಲಿ ನನ್ನ ವಾಸ 25 ವರ್ಷ. ಜಯನಗರ ಅತ್ಯಂತ ಸುಂದರ ಬಡಾವಣೆ. ನನ್ನ ಮನೆ ಜಯನಗರದ ಕೊನೆ ಬಡಾವಣೆಯಲ್ಲಿರುವುದು. ರಾಗಿಗುಡ್ಡದ ಆಂಜನೇಯ ಸ್ವಾಮಿ ದೇವಸ್ಠಾನದ ಹತ್ತಿರ. ಈ ಬಡಾವಣೆ ಕೊಂಚ ವಿಚಿತ್ರ. ಜಯಪ್ರಕಾಶನಗರಕ್ಕೂ ಜಯನಗರಕ್ಕೂ ಇದೇ ಸೇತುವೆ. ಜನಕ್ಕೆ ಯಾವಾಗಲೂ confusion. ಇದು ಜಯನಗರವೋ ಇಲ್ಲ ಜೆಪಿ ನಗರವೋ ಎಂದು. ಎಷ್ಟೋ ಬಾರಿ ನನ್ನೊಂದಿಗೆ ಜಗಳ ಆಡಿದ್ದೂ ಉಂಟು ಜನ, ನನ್ನ ವಿಳಾಸದ ಬಗ್ಗೆ.

ನಾನು ಬೆಳೆದಿದ್ದೆಲ್ಲವೂ ಇಲ್ಲಿಯೇ. ನನ್ನ ತಾತ ಅಜ್ಜಿ ಅಪ್ಪ ಅಮ್ಮ ಚಿಕ್ಕಪ್ಪ ತಂಗಿ ಜೊತೆಗೆ ಒಂದೇ ಮನೆ. ತಾತ ಎಚ್ಆರ್ ನಾಗೇಶ್ ರಾವ್ ಅವರು 'ಸಂಯುಕ್ತ ಕರ್ನಾಟಕ'ದ ಸುದ್ದಿ ಸಂಪಾದಕರಾಗಿದ್ದರು. ಮನೆಯಲ್ಲಿ ಯಾವಾಗಲೂ ಕನ್ನಡದ್ದೇ ವಾತಾವರಣ. ತಾತನ ತೊಡೆಯ ಮೇಲೆ ಕುಳಿತುಕೊಂಡು ದಿನಪತ್ರಿಕೆ ಓದುತಿದ್ದರಿಂದ ಕನ್ನಡ ಅಕ್ಷರಗಳನ್ನು ಅಲ್ಲೆ ಮೊದಲು ನೋಡಿದ್ದು. ತಾತ ನನ್ನ ಬಹಳ ಆಪ್ತ ಸ್ನೇಹಿತ. ಅವರೊಂದಿಗೆ ನನ್ನ ಆಟ, ಓದು, ತರಲೆ ಎಲ್ಲ. ನಮ್ಮ ಮನೆಯಿಂದ ರಾಗಿಗುಡ್ಡ ಕಾಣಿಸುತ್ತಿತ್ತು. ದಿನಾ ನನಗೆ ಅವರು ಅದನ್ನ ತೋರಿಸಬೇಕು ಎಂಬ ಗಲಾಟೆ. 'ಸರಿ ಬಾ ಗುಡ್ಡಿ' ಅಂತ ಕರೆದುಕೊಂಡು ಹೋಗೋರು. ಅಲ್ಲಿ ಮನೆಯ water tank 'ಜಿಜ್ಜಿ', ದೇವಸ್ಥಾನ 'ಮಾಮಿ' ಒಟ್ಟು ಸೇರಿಸಿ 'ಜಿಜ್ಜಿಮಾಮಿ' ದಿನಕ್ಕೊಮ್ಮೆ ನೋಡಲೇಬೇಕು. [ಹನುಮನ ನೋಡಿಹಿರಾ ರಾಗಿ ಗುಡ್ಡದ ಹನುಮನ...]

My dearest and beautiful world called Jayanagar

ರಾಗಿಗುಡ್ಡ ನಮ್ಮ ಬಡಾವಣೆಯ ಅತ್ಯಂತ ಪ್ರೀತಿಯ ಸ್ಠಳ. ನನ್ನ ಬಾಲ್ಯ ಪೂರ್ತಿ ಅಲ್ಲೆ ಕಳೆದ್ದಿದ್ದು. ಅಲ್ಲಿನ ಗುಡ್ಡ ಹತ್ತಿ, ದೇವರ ದರ್ಶನ ಪಡೆದು, ಅಲ್ಲಿನ ಪುಳಿಯೋಗರೆ ತಿಂದರೇನೆ ಸಮಾಧಾನ. ಅಲ್ಲಿನ ಹಸು, ಬೆಕ್ಕು, ನಾಯಿ ಸಹ ನಮ್ಮ ಸ್ನೇಹಿತರು. ನಮ್ಮ ಇಡೀ ಬಡಾವಣೆ ಇರುವುದು ಬಂಡೆಯ ಮೇಲೆಯೇ. ಉಬ್ಬು ತಗ್ಗು ಇರೋ ಜಾಗದಲ್ಲಿ cycle ಹೊಡೆಯೋದು ಭಾರಿ ಮಜವೋ ಮಜ. ರಸ್ತೆಯ ಮೇಲೆ ನಮ್ಮ ಆಟಗಳು. Traffic Jam ನೋಡಿದ್ದು 2000ದ ನಂತರವೆ. ಅಲ್ಲಿಯವರೆಗೂ ನಾವೇ ರಾಜ ನಾವೇ ರಾಣಿ. ನಮ್ಮ ಶಾಲೆ ಮನೆಯಿಂದ 1.5 ಕಿ.ಮೀ ಇದ್ದಿದ್ದು. ದಿನವೂ ನಡೆದುಕೊಂಡೆ ಹೋಗುವ ಅಭ್ಯಾಸ. ರಸ್ತೆಯ ವ್ಯಾಪಾರಿಗಳು ನಮಗೆ ಪರಿಚಯವೆ. ಅವರೊಂದಿಗೆ ಹರಟೆ. ಇದು ನಮ್ಮ ದಿನಚರಿ. ಪ್ರತಿ ಭಾನುವಾರ Mini Forest Park ನಮ್ಮ ಆಟ. ಯೋಗದ ಸ್ಥಳ. ಇಷ್ಟೆಲ್ಲ ನಮಗೆ ಕೊಟ್ಟಿದ್ದು ಜಯನಗರವೇ.

ನವೆಂಬರ ತಿಂಗಳಲ್ಲಿ ರಾಗಿಗುಡ್ಡದ ಹನುಮಜ್ಜಯಂತಿ ಜಾತ್ರೆ ಅತೀ ವಿಶೇಷ. ಊರಿನ ಜಾತ್ರೆಯನ್ನು ನೆನಪಿಸುತ್ತಿತ್ತು ಆಗಿನ ವಾತವರಣ. ಹಳ್ಳಿ-ಪಟ್ಟಣ ಎರಡು ಒಟ್ಟಾಗಿ ಸೇರುವ ಕ್ಷಣ ಅದು. ರಸ್ತೆಯ ಮೇಲೆ ಅಂಗಡಿ, ಚುರುಮುರಿ ಗಾಡಿ, Giant wheel ಇವೆಲ್ಲವು ನಮಗೆ ಸ್ವರ್ಗ. ಅಲ್ಲಿರೊ ಅಂಗಡಿಯವರ ಜೊತೆ ಸಹ ನಮಗೆ ಸ್ನೇಹ. ಪಾತ್ರೆ ಮಾರೋ ಅಜ್ಜಿ, Giant wheel uncle, ಚುರುಮುರಿಯ ಅಣ್ಣ, ಬಳೆ ಸರ ಮಾರೋ aunty ಇವರೆಲ್ಲ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿಬಿಡೋರು. ಒಮ್ಮೊಮ್ಮೆ ಅತಿ ಭಾವುಕರಾಗಿ ತಮ್ಮ ಕಥೆಯನ್ನು ಸಹ ಹೇಳುತ್ತಿದ್ದರು. ಅವರ ಮಕ್ಕಳಿಗೆ ನಾವು ಒಮ್ಮೊಮ್ಮೆ ಗಣಿತ, ಆಂಗ್ಲಭಾಷೆ ಹೇಳಿಕೊಡುತ್ತಾ ನಮಗೆ ಬೇಕಾದ ಸಾಮಾನುಗಳಿಗೆ ರಿಯಾಯಿತಿ ಸಹ ಪಡೆಯುತ್ತಿದ್ದೆವು. [ಇಲ್ಲಿ 'ಕತ್ತೆ'ಗಳು ಮಾತ್ರ ಉಚ್ಚೆ ಹೊಯ್ಯುತ್ತವೆ, ಛೀ!]

ಅಲ್ಲಿಗೆ ನಮ್ಮ 10 ದಿನದ ಜಾತ್ರೆಯ ಖುಷಿ ಮುಗಿದಮೇಲೆ ಅಮ್ಮ 'ಓದು' ಎಂಬ ವರಾತ ಶುರು ಮಾಡುತ್ತಿದ್ದಳು. ನಮಗೋ ರಸ್ತೆ ಮೇಲೆ ಗಮನ! ಸರಿ ಇನ್ನು ತಾತನ ಸರದಿ ನಮಗೆ ಬುದ್ಧಿಹೇಳುವುದಕ್ಕೆ. ನನಗಿನ್ನೂ ಚೆನ್ನಾಗಿ ನೆನಪಿದೆ, ತಾತ ಎಂದೂ ಬಲವಂತವಾಗಿ ಏನನ್ನೂ ಮಾಡಿಸಿದವರಲ್ಲ. ಕಥೆಯ ಮೂಲಕ ನೀತಿ ಹೇಳುತ್ತಿದ್ದರು. ಅವಾಗ ನಮಗೆ ತಲೆ ಸರಿಯಾಗಿ ನಿಲ್ಲುತ್ತಿತ್ತು. ರಾತ್ರಿ 10 ಘಂಟೆಯಾದರೂ ರಸ್ತೆಯ ಮೇಲೆ ನಮ್ಮ ಓಡಾಟ, ರಂಗೋಲಿ ಕಲಾಪ್ರದರ್ಶನ ಎಲ್ಲವೂ ನಡೀತ್ತಿತ್ತು. ಭಯ ಎಂಬ ಶಬ್ದದ ಅರ್ಥವೇ ನಮಗೆ ಗೊತ್ತಿರಲಿಲ್ಲ.

ದಿನಾ ಏನಾದ್ರು ಒಂದು ಹೊಸ ವಿಷಯವನ್ನು 'ನಗರದಲ್ಲಿ ಇಂದು' ಪುಟದಲ್ಲಿ ನೋಡಿ, ಇಲ್ಲಿಗೆ ಹೋಗೋಣ ಎಂದು ಹಠ. ಮೊದಲ ನಾಟಕ ನೋಡಿದ್ದು ಎಚ್ಎನ್ ಕಲಾಕ್ಷೇತ್ರದಲ್ಲೆ. ಅಲ್ಲಿಗೆ ಹೋದಾಗ ಮೈ ಝುಮ್ ಅನ್ನೋದೊಂದು ಬಾಕಿ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಗಣೇಶನ ಉತ್ಸವಕ್ಕೆ ಸಾಟಿನೆ ಇರ್ತಿರ್ಲಿಲ್ಲ. ಇಡೀ ಬಡಾವಣೆ ನಮ್ಮನೆ ಹಬ್ಬ ಅನ್ನೊ ಹಾಗೆ ಆಚರಣೆ ನಡೆಯುತ್ತಿತ್ತು. ಅಲ್ಲಿನ pendal ನಲ್ಲಿಯೆ ನನ್ನ ಮೊದಲ ಸಂಗೀತ ಕಛೇರಿ ನಡೆದುದ್ದು. ಭಾರಿ ಮಜವಾಗಿ ಹಾಡಿಬರುತ್ತಿದ್ದೆವು. [ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]

ಸಂಗೀತ ಶಾಲೆಯಲ್ಲಿ ಒಮ್ಮೆ ಒಬ್ಬಳಿಗೆ ನಮ್ಮ ಗುರುಗಳು ಸರಿಗಮವನ್ನು Englishನಲ್ಲಿ ಬರೆದುಕೊಡುತ್ತಿದ್ದರು. ನಮಗೆ ಆಶ್ಚರ್ಯ. ಇದೇನು ಕನ್ನಡ ಬರೋಲ್ವ ಇವಳಿಗೆ ಅಂತ. ನನಗೆ ತಡೆದುಕೊಳ್ಳಕ್ಕೆ ಆಗದೆ ಕೇಳಿಯೇಬಿಟ್ಟೆ. ಅವಳ ಶಾಲೆಯಲ್ಲಿ ಕನ್ನಡವೆ ಇಲ್ಲವೆಂದು ತಿಳಿಯಿತು. ಈ ಥರ ಶಾಲೆನೂ ಇರತ್ತಾ ಅಂತ ನನ್ನ ಪ್ರಶ್ನೆ. ಅವಳು ಬನ್ನೇರುಘಟ್ಟ ರಸ್ತೆಯ ಒಂದು ಶಾಲೆಯಲ್ಲಿ ಓದುತ್ತಿದ್ದಳು ಎಂದು ತಿಳಿಯಿತು. ನಮಗೆ ಬನ್ನೇರುಘಟ್ಟ ಅಂದರೆ ಪ್ರಾಣಿ, ಕಾಡು, zoo ಎಂಬ ಕಲ್ಪನೆ ಇತ್ತು. ಇದೇನಪ್ಪ ಅಲ್ಲೂ ಜನ ಇರ್ತಾರ ಎಂಬ ಕುತೂಹಲ. ಇದು ಬೆಂಗಳೂರಿನ 'Cosmopolitanization' ಜೀವನದ ಆರಂಭ.

ನಾವು ಬಹಳ ಸಿನೆಮಾಗಳನ್ನು ಜಯನಗರದ ಪುಟ್ಟಣ್ಣ ಚಿತ್ರಮಂದಿರ ಹಾಗೂ ನಂದ ಚಿತ್ರಮಂದಿರದಲ್ಲಿ ನೋಡಿ ಅಭ್ಯಾಸ. ಊಟ ಮಾಡಿಕೊಂಡು ಇಲ್ಲ ಡಬ್ಬಿಗೆ ಹಾಕೊಂಡು ಅಲ್ಲಿಯೇ ತಿನ್ನುತ್ತಾ ಸಿನೆಮಾ ನೋಡುತ್ತಿದ್ದೆವು. ಬರೀ ಕನ್ನಡ ಸಿನೆಮಾ ಒಂದೆ ನನಗೆ ಗೊತ್ತಿದಿದ್ದು. ನನ್ನ ಗೆಳೆಯರು ತೆಲುಗು, ತಮಿಳ್ ಸಿನೆಮಾ ನೋಡಿಬರುತ್ತಿದ್ದರು. ನಾನು ಓಹೋ ಅವರು ಸಿನೆಮಾ ನೊಡಕ್ಕೆ ಪಕ್ಕದ ರಾಜ್ಯಕ್ಕೆ ಹೋಗಿಬರುತ್ತಾರೆ ಎಂದು ಅಂದುಕೊಳ್ಳುತ್ತಿದ್ದೆ. ನಮ್ಮ ಮನೆಯ ಎದುರುಗಡೆಯೆ ಒಂದು ಗ್ರಂಥಾಲಯವಿತ್ತು. ಅಲ್ಲಿಯೇ ನಮಗೆ ಕಥೆ ಪುಸ್ತಕಗಳ, ಕಾದಂಬರಿಗಳ ಪರಿಚಯವಾಗಿದ್ದು. ಒಂದು ಕಾದಂಬರಿ ಓದೋದಕ್ಕೆ ನಾನು ಶಾಲೆಗೆ ಚಕ್ಕರ್ ಹಾಕಿದ್ದೆ ಅಂದ್ರೆ ನೋಡಿ ಹೇಗಿತ್ತು ನನ್ನ ಕಾದಂಬರಿ ಹುಚ್ಚು. ಯಾವ ಪುಸ್ತಕವೇ ಬರಲಿ ಮೊದಲು ನಾನೇ ಓದಬೇಕೆಂಬ ವಿಪರೀತ ಆಸೆ. ಹೀಗೆ ನನ್ನ ಬಾಲ್ಯ ಜಯನಗರದಲ್ಲಿ ತುಂಬಾ ಚೆನ್ನಾಗಿಯೆ ನಡಿತ್ತಿತ್ತು. ಯಾವುದಕ್ಕೂ ಕೊರತೆ ಇರದ ಬಾಲ್ಯ ನನ್ನದು. ಹಳ್ಳಿ ನೋಡಿರದ ನನಗೆ ಬೆಂಗಳೂರೆ ಸ್ವರ್ಗ. [ಜಯನಗರ ಸೌತ್ ಎಂಡ್ ವೃತ್ತಕ್ಕೀಗ 'ಸಂಜೀವಿನಿ' ಶಕ್ತಿ]

ಹೀಗಿದ್ದಾಗ ಒಮ್ಮೆ ನಮ್ಮ ಮನೆಯ ಹತ್ತಿರ ಇರುವ ದೊಡ್ಡ ಕಾರ್ಖಾನೆಯನ್ನ ಒಡೆದು ಮಾಲ್ ಮಾಡುತಾರೆ ಎಂದು ತಿಳಿಯಿತು. ಅಲ್ಲಿಗೆ ನಮ್ಮ ಸ್ವರ್ಗದ ಕಲ್ಪನೆ ನರಕಕ್ಕೆ ಹೋಯಿತು. ಸ್ವಲ್ಪ ಜನ ಮಾತ್ರ ಒಡಾಡಿಕೊಂಡಿದ್ದ ರಸ್ತೆಗೆ ಅದರ 10 ಪಟ್ಟು ಜನ, ಗಾಡಿಗಳು ಒಡಾಡೋದಕ್ಕೆ ಶುರು ಆಯಿತು. ನಮ್ಮ ಚುರುಮುರಿ ಅಣ್ಣನ ಗಾಡಿ ಎತ್ತಂಗಡಿ ಆಯಿತು, ಜಾತ್ರೆಯ ರಂಗು ಕಡಿಮೆ ಆಯಿತು, ನಮ್ಮ ಬಸ್ ನಿಲ್ದಾಣದ ಹೆಸರು ಸಹ ಬದಲಾಯ್ತು. ಸಹಿಸೋದಕ್ಕೆ ಆಗದಿರುವಷ್ಟು ಬದಲಾವಣೆ. ಕನ್ನಡ ಆಗೊಮ್ಮೆ ಈಗೊಮ್ಮೆ ಕೇಳೋ ಹಾಗೆ ಆಯಿತು. ನನ್ನ ತಾತನ ನಡಿಗೆ ಮನೆಗೆ ಮಾತ್ರ ಸೀಮಿತವಾಯಿತು. ಅಜ್ಜಿ ಮನೆ ಬಿಟ್ಟು ಹೋಗೋದನ್ನೆ ನಿಲ್ಲಿಸಿದ್ರು. ಇನ್ನು ಆ ರಾಗಿಗುಡ್ಡದ ಹನುಮನ ಎತ್ತರಕ್ಕೆ ಎಲ್ಲ ಮನೆ, apartmentಗಳು ತಲೆ ಎತ್ತಿದೆ. ಮಕ್ಕಳು ರಸ್ತೆಯ ಮೇಲೆ ಆಡೋದಿರಲಿ ನಡೆಯಕ್ಕು ಆಗದೇರೊ ಅಷ್ಟು Traffic.

ತಾತ ಜಯನಗರ ಎಂಬ ಸ್ವರ್ಗ ಬಿಟ್ಟು ನಿಜವಾದ ಸ್ವರ್ಗಕ್ಕೆ ಹೋಗಿ 13 ವರ್ಷ ಕಳೆದಿದೆ. ಜಾತ್ರೆಗೆ ಅಂದಿನಷ್ಟು ಕಳೆ ಇಲ್ಲ , ಜಿಜ್ಜಿಯೂ ಇಲ್ಲ ಮಾಮಿನು ಇಲ್ಲ. ಮಾಲ್ನಲ್ಲಿ ಕನ್ನಡ ಸಿನೆಮಾ ಅದೇ ವಾರ ನೋಡಿದ್ರೆ ನೋಡಿದಂಗೆ ಇಲ್ದಿದ್ರೆ ಅದು ಎತ್ತಂಗಡಿ. ಒಳ್ಳೆ ಕನ್ನಡ ಸಿನೆಮಾ ಹೇಗೋ ಉಳಿದುಕೊಂಡಿದೆ. ರಂಗ ಶಂಕರ ಒಂದೆ ಉಸಿರಾಡೋ ಆಮ್ಲಜನಕ. [ರಾಜ್ ಪ್ರತಿಮೆಗೆ ಸಲ್ಲುವ ಗೌರವ ತೀನಂಶ್ರೀ ಪ್ರತಿಮೆಗೇಕಿಲ್ಲ?]

ಇದು ನನ್ನ ಜಯನಗರ. ಬೆಂಗಳೂರು ಅಂದರೆ ಎಂಜಿ ರೋಡ್, IT ಅನ್ನೋರಿಗೆ ಹೇಗೆಲ್ಲ ಇತ್ತು ಅನ್ನೊ ಕಲ್ಪನೆ ಸಹ ಇರಲ್ಲ. ನಮ್ಮ ಜಯನಗರವನ್ನ 1948ರಲ್ಲಿ plan ಮಾಡಿ ಶುರು ಮಾಡಿದ್ದು. ಈ ಬಡಾವಣೆಯಲ್ಲಿ ಮನೆಗಳು, ಕೆಲವಲ್ಲಿ ವ್ಯಾಪಾರ ಅಂತ ತುಂಬಾ ಚೆನ್ನಾಗಿ ಕಟ್ಟಿದ ಸಜ್ಜನ ಬಡಾವಣೆ.

ಇಷ್ಟೆಲ್ಲ ದೂರದ ಬಾರ್ಸೀಲೋನದಲ್ಲಿ ಕೂತು ಬರೆಯುವ ಹುಚ್ಚು ಅರ್ಧ ರಾತ್ರಿಯಲ್ಲಿ ಹಿಡಿಯಿತು. ಇನ್ನು ಪ್ರತಿ ವಾರ ಬೆಂಗಳೂರಿನ ಹುಚ್ಚು ಹಿಡಿಯೋಹಾಗೆ ನಿಮಗೂ ಮಾಡುತ್ತೇನೆ. ಅವಗಾದ್ರು ಬೆಂಗಳೂರನ್ನು ಬಯ್ಯೋದ್ ನಿಲ್ಲಿಸ್ತೀರ ಅಲ್ವಾ?

(ಮುಂದಿನ ವಾರ - ಓಹ್ ನಿಮಗೆ ಕನ್ನಡ ಬರುತ್ತಾ?)

English summary
Jayanagarada Hudugi, a Kannada weekly column by Meghana Sudhindra, studying master's in Engineering in Barcelona, Spain. Meghana will be writing about her experience in Bengaluru and the cosmopolitan culture. Here is her first write up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X