ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕನ್ನಡಪ್ರೇಮಿ ಆಟೋ ಚಾಲಕರ ಕಥೆ!

By ಜಯನಗರದ ಹುಡುಗಿ
|
Google Oneindia Kannada News

ನಿನ್ನೆ ಜಯಂತ ಕಾಯ್ಕಿಣಿಯವರ ಕಥೆ ಟಿವಿಯಲ್ಲಿ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋನಲ್ಲಿ ಬರುತ್ತಿತ್ತು. ಅವರು ಮುಂಬೈಯನ್ನ ಹೊಗಳುತ್ತಾ, ಯಾವುದೇ ನಗರದ ಅಭಿವೃದ್ಧಿ ಅದರ public transport ಮೇಲೆ ಅವಲಂಬಿತವಾಗಿರುತ್ತದೆ ಅಂತ ಸೊಗಸಾಗಿ ಹೇಳಿದ್ದರು. ಬೆಂಗಳೂರಿಗೆ ಲೈಫ್ಲೈನ್ ನಮ್ಮ ಬಿಎಂಟಿಸಿ. ಬೆಂಗಳೂರಿನಲ್ಲಿ ಓಡಾಡಲು ಬೇಕಾಗಿರೋದೆ ಅದು.

ಆದರೆ ಅದರ ಜೊತೆ ಜೊತೆಗೆ ಕೈ ಜೋಡಿಸುತ್ತಿರುವವರು ನಮ್ಮ ಆಟೋ ಚಾಲಕರು. ನಾನು ಚಿಕ್ಕವಳಿದ್ದಾಗ ಆಟೋ ಒಂದು ಲಕ್ಷುರಿ. ಬಸ್ಸಿನಲ್ಲಿ ಅಷ್ಟೊಂದು ಜನ, ಮಕ್ಕಳಿಗೆ ಸೀಟ್ ಕೊಡಲ್ಲ, ಇವೆಲ್ಲದ್ದಕ್ಕೆ ಆಟೋ ಪರಿಹಾರ ಎಂದು ನಾನು ನಂಬಿದ್ದೆ.[ನನ್ನ ಹಣೆಗೆ ಗಲ್ಲಕೆ ಮುತ್ತನ್ನು ರಾಜಣ್ಣ ಕೊಟ್ಟಾಗ!]

ಎಲ್ಲಾ ಆಟೋದಲ್ಲೂ ಶಂಕರ್ ನಾಗ್ ರವರ ಚಿತ್ರ, ರಾಜಣ್ಣನ ಚಿತ್ರ ನಂತರ ಕಬ್ಬಾಳೇಶ್ವರಿ ಕೃಪೆ ಅಥವಾ ಅಪ್ಪ ಅಮ್ಮನ ಆಶೀರ್ವಾದ ಅಥವಾ ಹುಡುಗಿಯ ಮೇಲಿನ ಸಿಟ್ಟಿನ ಬರಹಗಳನ್ನು ಕಡ್ಡಾಯವಾಗಿ ನೋಡಿರುತ್ತೇವೆ. ಇಷ್ಟು ವರ್ಷ ಬೆಂಗಳೂರಿನಲ್ಲಿ ಓಡಾಡಿದ್ದರೂ ಸಹ ಒಬ್ಬ ನಾಸ್ತಿಕ ಡ್ರೈವರ್ ಸಿಕ್ಕಿಲ್ಲ. ಮತ್ತೆ ಒಬ್ಬರೂ ಸಹ ಅವರ ಕಥೆ ಹೇಳೋದು ಬಿಟ್ಟಿಲ್ಲ. ನಾನೆ ಒಮ್ಮೊಮ್ಮೆ ಅವರನ್ನ ಮಾತಿಗೆ ಎಳೆದಿರುತ್ತೇನೆ.

Heart touching stories of Bengaluru auto drivers

ನನ್ನ ಮೊದಲ ಆಟೋ ಪಯಣ ಸ್ಕೂಲ್ನಿಂದ ಮನೆಗೆ. 10 ಜನ ಮಕ್ಕಳನ್ನ ಒಟ್ಟಿಗೆ ಒಂದೇ ಆಟೋಗೆ ತುರುಕಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಆ ಶೆಕೆಯಲ್ಲಿ, ಆ ಬ್ಯಾಗ್, ಊಟದ ಡಬ್ಬಿ ಇಟ್ಟುಕೊಂಡು ಕುರಿಯ ಮಂದೆಯ ಹಾಗೆ ನಮ್ಮನ್ನ ತುಂಬಿಕೊಂಡು ಹೋಗುವುದನ್ನು ಅನುಭವಿಸಿ ಅಮ್ಮನಿಗೆ ಕಾಡಿಸಿ ಪೀಡಿಸಿ ಆಟೋ ಬಿಟ್ಟಿದ್ದೆ.[ಬೆಂಗಳೂರು ಕರಗದಂದು ಪಾಯಸ ಮಾಡಿ ಜಮಾಯಿಸಿ]

ಸರಿ ಅಮ್ಮ ನಾಳೆಯಿಂದ ನಾನು ಬರುತ್ತೀನಿ ಅಂದಿದ್ದರು ಶಾಲೆಗೆ. ನಾನೇನೋ ಅಮ್ಮ ಮತ್ತು ನಾನು ಜುಮ್ಮ್ ಅಂತ ಇನ್ನೊಂದು ಆಟೋದಲ್ಲಿ ಹೋಗುತ್ತೇವೆ ಎಂದುಕೊಂಡರೆ ಅಮ್ಮ ಬಾ ನಡೆದುಕೊಂಡು ಹೋಗೋಣ ಎನ್ನುತ್ತಿದ್ದರು. ಅಲ್ಲಿಗೆ ನನ್ನ ದಿನದ ಆಟೋ ಪಯಣ ಮುಗಿಯಿತು. ನಂತರ ಅಜ್ಜಿ ಮನೆಗೆ ಹೋಗಬೇಕಾದಾಗ ಜಯನಗರದಿಂದ ಕತ್ತರಿಗುಪ್ಪೆಗೆ 201 ಬಸ್ ಬೇಡ ಆಟೋದಲ್ಲಿಯೇ ಹೋಗೋಣ ಎಂದು ಗಲಾಟೆ ಮಾಡುತ್ತಿದ್ದೆ.

ಕೊಂಚ ದೊಡ್ಡವಳಾದ ಮೇಲೆ ಮೂರು ಜನ ಸ್ನೇಹಿತೆಯರು ಒಂದು ಜಾಗಕ್ಕೆ ಹೋಗಬೇಕಾದರೆ ಮಾತ್ರ ಆಟೋ. ಅಲ್ಲಿಯೇ ಪ್ರಥಮ ಬಾರಿಗೆ one and half, ಹೇಳಿದ ಜಾಗಕ್ಕೆ ಬರಲ್ಲ ಎಂಬ ನಖರಾಗಳು ನೋಡಿದ್ದು. ಮೀಟರ್ ಮೇಲೆ 20 ರುಪಾಯಿ ಜಾಸ್ತಿ ಕೊಡಬೇಕು ಎನ್ನುವ ಜಗಳಗಳು ಆಗಿದ್ದು ಅಲ್ಲಿಯೇ. ಸಿಕ್ಕಾಪಟ್ಟೆ ಬಾಯಿ ಬಡಕಿತನ ತೋರಿಸುತ್ತಿದ್ದದ್ದು ಆವಾಗಲೇ. ಇವೆಲ್ಲ ನನ್ನ ದೊಡ್ಡ ಸಾಧನೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದಾಗ, ನಮ್ಮ ಎದುರು ಮನೆಯ ಹುಡುಗನ ಮೂಗಿನ ಮೇಲೆ ದೊಡ್ಡ ಬ್ಯಾಂಡೇಜ್ ಹಾಕಿದ್ದು ಆಟೋ ಡ್ರೈವರ್ ನ ಕೃಪೆ ಎಂದು ಗೊತ್ತಾಗಿ, ಅವತ್ತಿನಿಂದ ಆಟೋದವರ ಬಳಿ ಜಗಳ ಮಾಡೋದು ಬಿಟ್ಟಿದ್ದೆ!

ಶಂಕರ್ ನಾಗ್ ರ ಸಿನೆಮಾವನ್ನು ಪರಿಚಯ ಮಾಡಿಕೊಟ್ಟಿದ್ದು ಅವರೆ. ನಮ್ಮ ಗುರು ಸಿನೆಮಾ ನೀವು ನೋಡಿಲ್ವಾ ಮೇಡಮ್ ಅಂತ ಅವರ ಪೂರ್ತಿ ಜೀವನ ಕಥೆಯನ್ನ ಹೇಳಿ, ಬೇಗ ಮನೆಗೆ ತಲುಪಿಸಿದ ಖ್ಯಾತಿ ಒಬ್ಬ ಆಟೋ ರಾಜನದ್ದು. ಒಮ್ಮೆ ದುಡ್ದೆಲ್ಲಾ ಕಳೆದುಕೊಂಡು ಕಾಲೇಜ್ ನ ಮುಂದೆ ನಿಂತಾಗ ಅದೇ ಆಟೋ ಅಂಕಲ್ ಮನೆವರೆಗು 10 ನಿಮಿಷದಲ್ಲಿ ಬಿಟ್ಟು ದುಡ್ಡು ತೆಗೆದುಕೊಳ್ಳದೆ ಹೋಗಿದ್ದರು.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]

ದಾರಿಯುದ್ದಕ್ಕೂ "ನನ್ನ ಮಗಳು ಸಹ ನಿನ್ನ ತರಹವೇ ಪಿಯುಸಿ, ಅದೇನೊ ಸೈನ್ಸ್ ತಗೊಂಡು ಬೆಳಗ್ಗೆ ಎದ್ದು ಹೋದ್ರೆ ರಾತ್ರಿ ಮನೆಗೆ ಬರುತ್ತಾಳೆ. ನಿನ್ನನ್ನು ನೋಡಿದ್ರೆ ಹಾಗೆ ಆಗುತ್ತಮ್ಮ" ಅಂತ ತಿಳಿಸಿ ಊಟ ಮಾಡು ಸರೀಗೆ ಅಂತ ಆಶೀರ್ವಾದ ಮಾಡಿ ಹೋಗಿದ್ದರು. ಅವರ ಮಾತು ಕೇಳಿ ಭಾವುಕತೆಯಿಂದ ನಾನು ಮೂಕವಿಸ್ಮಿತಳಾಗಿದ್ದೆ.

ಅಜ್ಜಿ ತಾತನಿಗೆ ಈ ಆಟೋ ಡ್ರೈವರ್ ಗಳೆ ಸಾರಥಿಗಳು. ಕೆಲಸಕ್ಕೆ ಮಾರತಹಳ್ಳಿಗೆ ಹೋಗಬೇಕಾಗಿ ಬಂದಾಗ, ಅಕಸ್ಮಾತ್ ಸಮಯ ಆಗೋದ್ರೆ, ಅದೇ ಆಟೋದವರ ಹತ್ತಿರ ಬಿಟಿಎಂನಿಂದ 200 ಕೊಡಿ ಅನ್ನುವಾಗ ಜಗಳ, ಮಳೆ ಬಂದಾಗ ಡಬ್ಬಲ್ ಅಂತೆಲ್ಲಾ ಆಂದಾಗ ಸಾಕಪ್ಪ ಇವರ ಸಹವಾಸ ಅನ್ನಿಸಿದ್ದೂ ಇದೆ.

ಯಾವ ಜಾತಿ, ಧರ್ಮ ನೋಡದೆ ಅವರ ಎಲ್ಲಾ ಆಚರಣೆಯನ್ನು ನನಗೆ ವಿವರಿಸಿ, ಅವರ ಮನೆಯ ಕಥೆಗಳನ್ನೆಲ್ಲಾ ಹೇಳಿ ಅವರ ಮಗಳನ್ನ ಯಾವ ಕಾಲೇಜಿಗೆ ಸೇರಿಸಬೇಕೆಂದು ಕೇಳುವ ತನಕ ಆಪ್ತರಾಗಿ ಬಿಡುತ್ತಿದ್ದರು. ಸಾರ್ ಎಂದು ಮಾತಾಡಿಸಿದಾಗಲಂತೂ ಬಹಳ ಖುಶಿಪಟ್ಟು ಮರ್ಯಾದೆ ಕೊಟ್ಟಿದಕ್ಕೆ ಧನ್ಯವಾದಗಳು ಮ್ಯಾಡಮ್ ಅಂತಲೂ ಅಂದು ಹೋಗಿದ್ದವರು ಇದ್ದಾರೆ.

ನಂಗಂತೂ ಕನ್ನಡ ಸಿನೆಮಾದ ಬೆಸ್ಟ್ ವಿಮರ್ಶಕರು ಅಲ್ಲೆ ಸಿಗುವುದು. ಅವರು ಚೆನ್ನಾಗಿದೆ ಅಂತ ಹೇಳಿದ ಎಲ್ಲಾ ಸಿನೆಮಾವು ನನಗೆ ಇಷ್ಟವಾಗಿದ್ದವು. ಇದೇ ಹೋಟೆಲ್ ನಲ್ಲಿ ಇದೇ ತಿನ್ನಿ ಅಂದಿದ್ದು ಸಹ ಸುಳ್ಳಾಗಲಿಲ್ಲ. ಅಷ್ಟು ಚೆನ್ನಾಗಿದ್ದವು ಇವರು ಹೇಳಿದ ಜಾಗಗಳು.

ಕನ್ನಡವನ್ನೇ ನಂಬಿಕೊಂಡು ಬದುಕುತ್ತಿರುವ ಒಂದು ವರ್ಗ ಇದು. ನಮ್ಮ ವಯಸ್ಸಿನ ಮಕ್ಕಳು ಕನ್ನಡದಲ್ಲೆ ಎಷ್ಟು ಆಯ್ತು ಸಾರ್ ಅಂತ ಕೇಳಿದಾಗ ಖುಶಿಪಟ್ಟು ಒಮ್ಮೊಮ್ಮೆ ನನಗೆ 1, 2 ರುಪಾಯಿ ಬಿಟ್ಟದ್ದೂ ಇದೆ. ಎಷ್ಟಾದರೂ ಮೈಸೂರಿನ ಹಾಗೆ ನಮ್ಮ ಆಟೋಗಳಿಗೆ ಚೆಂದದ ಹೆಸರಿಡಬೇಕಿತ್ತು ನೋಡಿ. ಅಲ್ಲಿ ರಾಜರ ಹೆಸರಿಟ್ಟು ಆಟೋಗಳ್ಳನ್ನ ಓಡಿಸುತ್ತಾರೆ. ನಮ್ಮದು ಇನ್ನು ಮಜಾ. ಪ್ರೇಮ ಕವಿತೆಗಳು, ತಮಾಷೆ ಪ್ರಸಂಗಗಳು ಎಷ್ಟೊ ಇವೆ.

ಇತ್ತೀಚೆಗೆ ಬೆಂಗಳೂರಿಗೆ ಬಂದಾಗಲೂ ಅದೇ ಆಟೋದಲ್ಲಿ ಓಡಾಡಿ ಆರಾಮಾಗಿ ಟ್ರಾಫಿಕ್ ಅನ್ನು ಮೆಟ್ಟಿ ಬಂದೆ. ಆಟೋದಲ್ಲಿ ಅಡ್ಡಾಡುವಾಗ ಏನೋ ಖುಷಿ. ಜೈ ಆಟೋ!

English summary
Heart touching stories of Bengaluru auto drivers by Meghana Sudhindra, Barcelona. Among bad auto drivers there are lot of really good hearted autowalas too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X