ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!

ಜಯನಗರದ ಅಗಲ ರಸ್ತೆ, ದೊಡ್ಡ ಮರ, ಕಾಗದ ದೋಣಿ, ಅಮ್ಮನ ಬಿಸಿ ಬೋಂಡ, ಅಪ್ಪನ ವಿಜ್ಞಾನ ಪಾಠ, ಅಜ್ಜಿ ತಾತಂದಿರ ಕಥೆಗಳು, ಬಿರ್ರನೆ ಸೈಕಲ್ ಹೊಡೆದಿದ್ದು, ಖಾರ ಭೇಲ್ ಪುರಿ ತಿಂದಿದ್ದು... ಮಳೆಯ ನೆನಪುಗಳ ಸರಮಾಲೆ.

By ಜಯನಗರದ ಹುಡುಗಿ
|
Google Oneindia Kannada News

ಮೊನ್ನೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ. ರಸ್ತೆಗಳೆಲ್ಲ ಮುಚ್ಚಿಹೋಗುವಷ್ಟು. ಅಮ್ಮ ಅದನ್ನೆಲ್ಲಾ ಹೇಳುವಾಗ ಇಲ್ಲಿನ ಬಾರ್ಸಿಲೋನಾದಲ್ಲೂ ಮಳೆ. ಗಾಳಿ, ಛಳಿಯಿಂದ ಕೊರೆತ ಶುರುವಾಗಿತ್ತು.

ನನಗೂ ಮಳೆಗೂ ಅವಿನಾಭಾವ ಸಂಬಂಧ. ನಾನು ಹುಟ್ಟಿದ ದಿನ ವಿಪರೀತ ಮಳೆ ಬಂದಿತ್ತಂತೆ. ಕತ್ತರಿಗುಪ್ಪೆಯ ಅಶ್ವಿನಿ ಆಸ್ಪತ್ರೆಗೆ ಬಂದ ನನ್ನ ಮುತ್ತಜ್ಜಿಯ ಚೀಲ ಕೊಚ್ಚಿಕೊಂಡು ಹೋಗೋವಷ್ಟು. ಹಾಗೆಯೇ ಹೆಸರು ಇರಲಿ ಅಂತ ಮೇಘನಾ ಎಂದು ಹೆಸರಿಟ್ಟರಂತೆ. ನನ್ನ 25 ವರ್ಷಗಳ ಎಲ್ಲಾ ಹುಟ್ಟುಹಬ್ಬಕ್ಕೂ ಮಳೆರಾಯ ಹಾಜರಿ ಹಾಕಿ ಹೋಗಿದ್ದಾನೆ. ಇದಕ್ಕೆ ಅವಿನಾಭಾವ ಸಂಬಂಧ ಅನ್ನದೆ ಇನ್ನೇನು ಹೇಳಲಿ?[ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!]

ನಮ್ಮ ಶಾಲೆ ಜೆಪಿ ನಗರದಲ್ಲಿತ್ತು. ಮಳೆಗಾಲದಲ್ಲಿ ಹೋಗುವ ದಾರಿ ಬಹು ಕಷ್ಟ. ಜೆಪಿ ನಗರ ಎರಡನೇ ಹಂತ ಪೂರ್ತಿ ಕೆರೆ ದಂಡೆಯ ಮೇಲಿತ್ತು. ಎಷ್ಟು ಅಕ್ರಮವೋ, ಎಷ್ಟು ಸಕ್ರಮವೋ ನನಗೆ ಗೊತ್ತಿಲ್ಲ. ನಮ್ಮ ಶಾಲೆಯ ಆಟದ ಮೈದಾನ ಮಳೆಗಾಲದಲ್ಲಿ ಯಾವಾಗಲೂ ತುಂಬುತ್ತಿತ್ತು. ನನಗೆ ವಿಪರೀತ ಸಂಕಟ, ಆಟವಾಡುವುದಕ್ಕೆ ಬಿಡುವುದಿಲ್ಲ ಅಂತ. ಒಮ್ಮೊಮ್ಮೆ ಶಾಲೆಗೆ ರಜಾ ಸಹ ಕೊಡುತ್ತಿದ್ದರು. ಅವತ್ತು ಮನೆಯಲ್ಲಿ ಸುಮ್ಮನೆ ಕನ್ನಡ ಪುಸ್ತಕ ಓದಿಕೊಂಡು, ಬಜ್ಜಿಬೋಂಡಾ ತಿಂದುಕೊಂಡು, ಆರಾಮಾಗಿ ಕಾಲ ಕಳೀತ್ತಿದ್ದೆ.

Bengaluru rain : Brings back the memories again

ಆವಾಗಾವಾಗ ದಿನಪತ್ರಿಕೆಯಲ್ಲಿ "ಕೊಡಗಿನಲ್ಲಿ ಭಾರಿ ಮಳೆ, ಶಾಲಾ ಕಾಲೇಜಿಗೆ ರಜಾ" ಅಂದಾಗ, 'ಛೆ ನಾವೂ ಅಲ್ಲಿಯೇ ಇರಬೇಕಿತ್ತು, ರಜಾ ಸಿಗುತ್ತಿತ್ತು' ಎಂದು ಬೈದುಕೊಂಡು ಎದ್ದು ಹೋಗುತ್ತಿದ್ದೆ. ನಮ್ಮ ಮನೆಯ ಅಂಗಳದಲ್ಲಿ ಕಾಗದದ ದೋಣಿ ಮಾಡಿ ಬಿಡುತ್ತಿದ್ದದ್ದು ಇನ್ನು ನೆನಪಿದೆ. ದೋಣಿ ಮಾಡುವುದಕ್ಕೆ ಹೊಸ ಹಾಳೆಯನ್ನ ಹರಿದಾಗ, ಕೋಪ ಮಾಡಿಕೊಂಡು ತಾತ ಬೈದಿದ್ದು ಇನ್ನೂ ಹಸಿರಾಗಿದೆ. ಅವರಿಗೆ ಪೇಪರ್ ಮೇಲೆ ತುಂಬಾ ಗೌರವ ಇತ್ತು. ಅವರು ಸುದ್ದಿ ಸಂಪಾದಕರಾಗಿದ್ದರಿಂದಲೇನೋ ನಮಗೆ ಪತ್ರಿಕೆ, ಹಾಳೆಗಳ ಮೇಲೆ ಒಂದು ಶಿಸ್ತನ್ನು ಕಲಿಸಿದ್ದು. ನಂತರ ಅವರೆ ಪತ್ರಿಕೆಯ ಅಡಿಗೆ ಸಿಗುತ್ತಿದ್ದ ಪಾಂಪ್ಲೇಟ್ ಗಳನ್ನ ಜೋಪಾನವಾಗಿ ಎತ್ತಿಟ್ಟು, ಅದರಲ್ಲಿ ದೋಣಿ ಮಾಡಲು ಬಿಡುತ್ತಿದ್ದರು.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]

ಯಾವತ್ತಾದ್ರೂ ಅಕಸ್ಮಾತ್ ನಮ್ಮ ಬಾಯಲ್ಲಿ ಥೂ ಮಳೆ ನಿಲ್ಲಲ್ಲಿ ಅಂದಿದ್ರೆ ತಾತ ಜಗಳಕ್ಕೆ ಬರುತ್ತಿದ್ದರು. "ನಿನ್ನ ತಟ್ಟೆಗೆ ಬೀಳೋ ಅನ್ನಕ್ಕೆ , ಮಳೆನೇ ಕಾರಣ. ಬಿಡ್ತು ಅನ್ನು" ಅಂತಿದ್ರು. ಸಿಟಿಯಲ್ಲಿ ಬೆಳೆದೋರಿಗೆ, ನಮ್ಮಂಥವರಿಗೆ ಮಳೆ ಅನ್ನುವುದು ಸುಮ್ಮನೆ ಮೋಡ ತನ್ನಲ್ಲಿರುವ ಭಾರವನ್ನು ಇಳಿಸುವ ಬಗೆ. ನಮಗೆ ಊರಿಂದ ಕಾವೇರಿ ಪೈಪಿನಲ್ಲಿ ಬರುತ್ತಾಳೆ. ಕೆರೆಯನ್ನು ಮುಚ್ಚಿ ಇನ್ನಷ್ಟು ದೊಡ್ಡ ಮಳಿಗೆ, ಅಪಾರ್ಟ್ಮೆಂಟ್ ಕಟ್ಟಬೇಕು. ಮರ ಕಡಿದು ಉಕ್ಕು ಸೇತುವೆ ಮಾಡಬೇಕು. ನಮ್ಮ ಕಾರು ಮಾತ್ರ ರಸ್ತೆಯಲ್ಲಿ ಓಡಾಡಬೇಕು, ಕಡೆಗೆ ರಸ್ತೆ ಸರಿ ಇಲ್ಲ ಅಂತ ಬೈಬೇಕು. ಅಪ್ಪಿ ತಪ್ಪಿಯೂ ಸಹ ಬಸ್ಸಿನಲ್ಲಿ ಹೋಗಬಾರದು. ಆದರೆ ರಸ್ತೆ ತುಂಬಿಕೊಳ್ಳುವ ನೀರನ್ನು ಮನೆಯಲ್ಲಿ ಶೇಖರಿಸುವ ಕನಿಷ್ಠ ಬುದ್ಧಿ ನಮಗಿರುವುದಿಲ್ಲ. ಪ್ರತಿ ಬೇಸಿಗೆಗೆ ನಮಗೂ ಪಕ್ಕದ ರಾಜ್ಯಕ್ಕೂ ನಡೆಯುವ ಜಗಳ, ಕೋರ್ಟಿನಿಂದ ಛೀಮಾರಿ, ಬಂದ್ ಯಾವುದೂ ಪರಿಹಾರವಲ್ಲ. ರಸ್ತೆಯಲ್ಲಿ ಇಂಗು ಗುಂಡಿಗಳು, ಮನೆಯಲ್ಲಿ ಮಳೆ ನೀರು ಕೊಯ್ಲು ಇವುಗಳಿಂದಲೇ ನಮಗೆ ನೀರಿನ ಮೇಲೆ ಜವಾಬ್ದಾರಿ ಬರುವುದು.

Bengaluru rain : Brings back the memories again

ಇದೆಲ್ಲಾ ಆಗುವಾಗಲೂ ಸಹ ನಮ್ಮ ಊರಿನ ಮಳೆ ನನಗೆ ಬಹು ಪ್ರೀತಿ. ಇದು ನನಗೆ ಮುದ್ದಾದ ನೆನಪುಗಳನ್ನು ಬಿಚ್ಚಿಡುತ್ತದೆ. ಶಾಲೆಗೆ ನಾನು, ಅಮ್ಮ ಹಾಗೂ ತಂಗಿ ಕೈನೆಟಿಕ್ ಹೋಂಡಾದಲ್ಲಿ ಹೋಗೋವಾಗ ನೆಂದದ್ದು. ಜಯನಗರದ ವಿಶಾಲ ರಸ್ತೆಯಲ್ಲಿ ಮರದ ಕೆಳಗೆ ನಿಂತು ಮಳೆಯಲ್ಲಿಯೇ ಪಾನಿಪೂರಿ ತಿಂದದ್ದು. ನೀವು ನಿಜವಾಗಲೂ ಮಳೆಯ ಅಂದ ಸವಿಯ ಬೇಕೆಂದರೆ ನಂದಾ ಥಿಯೇಟರ್ ಇದ್ದ ರಸ್ತೆಯ ಮೇಲೆ ನಡೆದರೆ ತಿಳಿಯುತ್ತೆ. ವಿಶಾಲವಾದ ರಸ್ತೆ, ಮರಗಳು, ಜಿನುಗುತ್ತಿರುವ ಮಳೆ ಹನಿ ಇವೆಲ್ಲವೂ ಆಹ್ಲಾದಕರವಾಗಿರುತ್ತದೆ.[ಬೆಂಗಳೂರಿನ ಕನ್ನಡಪ್ರೇಮಿ ಆಟೋ ಚಾಲಕರ ಕಥೆ!]

10ನೇ ವಯಸ್ಸಿಗೆ ಬಂದಾಕ್ಷಣ ಅಮ್ಮ ಕೊಡಿಸಿದ ಕೆಂಪು ಛತ್ರಿ, ಹಳದಿ ರೈನ್ ಕೋಟ್, ಬಿಳಿ ಸಮವಸ್ತ್ರ ಇದ್ದ ದಿವಸವೇ ಬರುತ್ತಿದ್ದ ಮಳೆ ಕೊಚ್ಚೆಗೆ ಬಿಳಿ ಶೂಸ್ ಅನ್ನು ಕಂದು ಮಾಡಿತ್ತು. ಎಷ್ಟು ಉಜ್ಜಿದರೂ ಹೋಗ್ತಾನೆ ಇರುತ್ತಿರಲಿಲ್ಲ. ಇವೆಲ್ಲಾ ನೆನಪಾದಾಗ ಮಳೆ ನಿಜವಾಗಿಯೂ ನೆನಪುಗಳ ಮಳೆಯನ್ನೆ ಸುರಿಸುತ್ತದೆ. ಕೊಂಚ ದೊಡ್ಡವಳಾದ ಮೇಲಂತೂ ಮಳೆಯಲ್ಲಿ ಸೈಕಲ್ ಓಡಿಸೋದು, ಗಾಡಿ ಓಡಿಸೋದು, ನಾನೇ ಹೀರೋಯಿನ್ ಎಂದು ಮಳೆಯಲ್ಲಿ ಕೂದಲು ಬಿಟ್ಟು ನೆನೆದು, ನೆಗಡಿ ಬರಿಸಿಕೊಂಡು ಬೈಸಿಕೊಂಡ ಕಥೆಗಳು ಒಂದಾ ಎರಡಾ...

ನಂತರ ಆದ ವಿಪರೀತ ಬೆಳವಣಿಗೆಗೆ ನಮ್ಮ ನಗರ ತತ್ತರಿಸಿ ಹೋಗಿದೆ. ಮಳೆ ಬಂದರೆ ಮರ ಬಿದ್ದು, ರಸ್ತೆಗೆ ನೀರು ಹರಿದು, ಆ ಸಿಲ್ಕ್ ಬೋರ್ಡ್ ಅಂತೂ ಹುಚ್ಚರ ಸಂತೆಯಾಗಿರುತ್ತದೆ. ಮೋರಿಗಳು ತುಂಬಿ ಕೋಡಿ ಹರಿದಿದ್ದರೂ ಆಶ್ಚರ್ಯವಿಲ್ಲ. ಒಮ್ಮೊಮ್ಮೆ ಅನ್ನಿಸುತ್ತೆ, ಯಾಕೆ ಮಳೆ ಎಂಬ ಖುಷಿಯ ಭಾವ ನಮ್ಮ ನಗರದ ಕೆಟ್ಟ ಪ್ಲ್ಯಾನಿಂಗ್ ಇಂದ ಮಳೆಯನ್ನ ಬೈಯ್ಯುವ ಹಾಗೆ ಮಾಡುತ್ತದೆ ಎಂದು.

ಮಳೆ ನನ್ನ ಹುಟ್ಟುಹಬ್ಬದ ಉಡುಗೊರೆ, ಅದು ನನ್ನ ಜಯನಗರದ ಅಗಲ ರಸ್ತೆ, ದೊಡ್ಡ ಮರ, ಕಾಗದ ದೋಣಿ, ಅಮ್ಮನ ಬಿಸಿ ಬೋಂಡ, ಅಪ್ಪನ ವಿಜ್ಞಾನ ಪಾಠ, ಅಜ್ಜಿ ತಾತಂದಿರ ಕಥೆಗಳು, ಬಿರ್ರನೆ ಸೈಕಲ್ ಹೊಡೆದಿದ್ದು, ಖಾರ ಭೇಲ್ ಪುರಿ ತಿಂದಿದ್ದು, ಕಿಟಕಿಯ ಹತ್ತಿರ ಹಾಡು, ಜಯನಗರದ ಅಗಲವಾದ ರಸ್ತೆಗಳು, ದೊಡ್ಡ ಮರಗಳು, ಟ್ರಾಫಿಕ್ ನಲ್ಲಿ ಪೂರ್ತಿ ನೆಂದ್ದಿದ್ದು, ರಸ್ತೆಯ ಕಾಣಿಸದ ಹಾಗೆ ರಾಕ್ಷಸ ರೂಪದಲ್ಲಿ ಎಲ್ಲವನ್ನು ತನ್ನ ಆಹುತಿ ತೆಗೆದುಕೊಂಡು ಹೋಗುತ್ತಿದ್ದ ಮಳೆ ನೀರು ಎಲ್ಲವು ನೆನಪಾಗುತ್ತದೆ.

ಬಾರ್ಸಿಲೋನದಲ್ಲಿಯೂ ಮಳೆ ಬರುತ್ತಿದೆ, ಆದರೆ ದಪ್ಪ ಶೂಸ್, ಜ್ಯಾಕೆಟ್ ಹಾಕಿ ಛತ್ರಿ ಹಿಡಿದು ಕೆಲಸಕ್ಕೆ ಹೊರಟ್ಟಿದ್ದೇನೆ. ನೆನಪುಗಳು ನಗು ತರಿಸುತ್ತದೆ, ವಾಸ್ತವ ಒಮ್ಮೊಮ್ಮೆ ಅದನ್ನು ಮರೆಸುತ್ತದೆ. ಮೇಘ ಬಂತು ಮೇಘ ಎಂಬ ಅಣ್ಣಾವ್ರ ಹಾಡು ಜೋರಾಗಿ ಬಂದಿದ್ದರೂ ಸಹ ಇಂದು ಕಿಟಕಿಯ ಹತ್ತಿರ ಕೂತು ಬಿಸಿ ಬಜ್ಜಿ ತಿನ್ನುವ ಆಸೆ ನೆರವೇರಲ್ಲಿಲ್ಲ.

English summary
Rain is so beautiful. It makes us nostalgic. Rain means school holidays, paper boats, delicious bondas, wide roads of Jayanagar, stories by ajji, traffic jams, overflowing drainages... Meghana Sudhindra recalls her memories of Bengaluru rain in her column Jayanagarada Hudugi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X