ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದ ಹುಡ್ಗಿ ಜತೆ ತಿಂಡಿಪೋತರ ಸ್ವರ್ಗ ಬೆಂಗ್ಳೂರಲ್ಲಿ ಸುತ್ತಾಟ

ಊಟ ತಿಂಡಿ ನನಗೆ ಆ ಜಾಗದ ಬಿಸಿ ಅಪ್ಪುಗೆಯನ್ನು ನೀಡುತ್ತದೆ. ಅಲ್ಲಿನ ನಿಶ್ಕಲ್ಮಶವಾದ ಪ್ರೀತಿ ನೆನಪಾಗುತ್ತದೆ. ಜನರ ಗೌಜು ಗದ್ದಲ ಎಲ್ಲವು ಹಿತ. ಯುಗಾದಿಯ ಹಬ್ಬಕ್ಕೆ ಅಮ್ಮ ಒಬ್ಬಟ್ಟು ಮಾಡಿ ಊಟಕ್ಕೆ ಹಾಕುವ ಪರಿ ಮರೆಯಲಸಾಧ್ಯ.

By ಜಯನಗರದ ಹುಡುಗಿ
|
Google Oneindia Kannada News

ಮೊನ್ನೆ ಪದಯಾತ್ರೆಯ ಸ್ನೇಹಿತರೊಬ್ಬರು ಮಲ್ಲೇಶ್ವರದ ಸಿಟಿಆರ್ ಮುಂದೆ ಗಸಗಸೆ ಪಾಯಸ ಮಾರುತ್ತಾರೆ ಅಂತ ಫೇಸ್ಬುಕ್ಕಿನ್ನಲ್ಲಿ ಹಾಕಿ, ನನ್ನ 6 ತಿಂಗಳ ತಿಂಡಿ ಆಸೆಯನ್ನ ಇನ್ನೂ ಜಾಸ್ತಿ ಮಾಡಿ, ಈ ಲೇಖನ ಬರೆಯುವುದಕ್ಕೆ ಸ್ಪೂರ್ತಿಯಾಯಿತು. ಬೆಂಗಳೂರಲ್ಲಿ ಏನು ಸಿಗತ್ತೆ ರೀ? ಅಂತ ಕೇಳೋರಿಗೆ ಇದು ಒಂದು ಉಪಕಥೆಯ ಉತ್ತರ.

ನಾನು ಮೊದಲು ಹೋಟೆಲ್ ಗೆ ಅಂತ ಹೋಗಿದ್ದೇ ವಿದ್ಯಾರ್ಥಿ ಭವನಕ್ಕೆ. ನನಗೆ ಕಾಫಿ ಎಂದರೆ ಇಷ್ಟ ಆದರೆ ಮನೆಯಲ್ಲಿ ಚಿಕ್ಕವಳು ಅಂತ ಕೊಡುತ್ತಿರಲಿಲ್ಲ. ತಾತನ ಹತ್ತಿರ, ಚಿಕ್ಕಪ್ಪನ ಹತ್ತಿರ ಪೂಸಿ ಹೊಡೆದು ಅಷ್ಟೋ ಇಷ್ಟೋ ಕಾಫಿ ಗಿಟ್ಟಿಸಿಕೊಳ್ಳುತ್ತಿದ್ದೆ.

ಒಮ್ಮೆ ರಜೆಯಲ್ಲಿ ನನ್ನ ತಾಯಿಯ ತಂದೆಯ ಮನೆಗೆ ಹೋಗಿದ್ದೆ. ಅಜ್ಜಿ ಮನೆ ಕತ್ತರಿಗುಪ್ಪೆಯಲ್ಲಿದ್ದ ಕಾರಣ ಅಲ್ಲಿ ನನ್ನ ಠಿಕಾಣಿ, ಅಜ್ಜಿ ಅವರ ಪೂಜೆಯಾದ ಮೇಲೆ ಇವತ್ತು ಗುರುವಾರ ರಾಯರ ಗುಡಿಗೆ ಹೋಗಬೇಕು ಎದ್ದೇಳು ಅಂತ ಎಬ್ಬಿಸುತ್ತಿದ್ದರೆ, ನಾನು ಆಊ ಅಂದುಕೊಂಡು ಏಳದೆ ಇದ್ದೆ. ಆಮೇಲೆ ತಾತ ಇವತ್ತಿನ ತಿಂಡಿ ಹೋಟೆಲ್ ನಲ್ಲಿ ಬಾ ನಾವು ಹೋಗೋಣ ಅಂತ ಅಜ್ಜಿಗೆ ಹೇಳಿದಾಗ, ನಾನು ಎದ್ದು ಸ್ನಾನ ಮಾಡಿ, ಮೂವರು ಆಟೋದಲ್ಲಿ ಹೋದೆವು. ಆಟೋದವರು ತಾತನಿಗೆ "ಮೊಮ್ಮಗಳಾ ಸಾರ್ , ಎಲ್ಲಿ ಕರೆದುಕೊಂಡು ಹೋಗಬೇಕು?" ಅಂದಾಗ "ಮೊದಲು ಗುಡಿಗೆ ನಂತರ ವಿದ್ಯಾರ್ಥಿ ಭವನಕ್ಕೆ" ಆಟೋ ಅಂಕಲ್ ಖುಷಿಯಾಗಿ ಅಲ್ಲಿನ ತಿಂಡಿಯ ಬಗ್ಗೆ ವಿವರಣೆ ನೀಡುತ್ತಾ ಇದ್ದರು.

ಗುಡಿಗೆ ಹೋದಾಗಲೂ ಬರಿ ಅದೇ ಯೋಚನೆ. ತಾತ ಅಲ್ಲಿಂದ ನಡೆದುಕೊಂಡು ಬರುತ್ತಾ ಅವರು ಪ್ರತಿ ತಿಂಗಳು ಸಂಬಳ ಬಂದಾಗ ಅಮ್ಮನನ್ನು ಚಿಕ್ಕವರಿದ್ದಾಗ ಕರೆದುಕೊಂಡು ಬರುತ್ತಿದ್ದ ಕಥೆ ಮತ್ತು ಅಮ್ಮನ ತರಲೆಗಳೆಲ್ಲಾ ಹೇಳುತ್ತಿದ್ದಾಗ 'ಅರೆ ಇದೇ ಅಮ್ಮ ನಮ್ಮನ್ನ ಶಿಸ್ತು ಅಂತ ಹೇಳುತ್ತಲೇ ಇರುತ್ತಾಳೆ" ಎಂದು ಆಶ್ಚರ್ಯವಾಯಿತು. ಜಾಸ್ತಿ ಅಪ್ಪನ ಸಂಬಂಧಿಕರೆ ಮನೆಯಲ್ಲಿ ಇದ್ದಾಗ ಅಮ್ಮನ ಬಗ್ಗೆ ತಿಳಿದುಕೊಳ್ಳುವುದು ಬಲು ಕಷ್ಟ.

ಸರಿ ವಿದ್ಯಾರ್ಥಿ ಭವನಕ್ಕೆ ತಾತ ಕರೆದುಕೊಂಡು ಹೋದರು. ಅಲ್ಲಿ ಮಸಾಲೆ ದೋಸೆ, ವಡೆ ಮತ್ತು ಕಾಫಿ ಎಲ್ಲರಿಗೂ ಹೇಳಿದರು. ಮಸಾಲೆ ದೋಸೆಯ ಮೇಲಿನ ಬೆಣ್ಣೆ ನೋಡಿ ನನಗೆ ಕುಣಿಯಬೇಕು ಎನ್ನಿಸತೊಡಗಿತು. ಪೂರ್ತಿ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸುತ್ತಾ ತಿನ್ನುತ್ತಿದ್ದೆ. ಈ ಹೋಟೆಲ್ ಬಗ್ಗೆ ತಾತ, ಅದರ ಚರಿತ್ರೆ ಬಿಚ್ಚುತ್ತ ಹೋದರು. ಎಷ್ಟು ಜನ ಅಂದರೆ ನಾವು ಏಳೋದೆ ಕಾಯುತ್ತಾ ಇದ್ದರು. ಆದರೂ ಮಸಾಲೆ ದೋಸೆ ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಿತ್ತು. ವಾಪಸ್ಸು ಬರುವಾಗ ಎಷ್ಟು ಹೊತ್ತು ತುಂಬಿತ್ತಂದರೆ ಮಧ್ಯಾಹ್ನದ ಊಟ ಮಾಡದೆ ಇರೋ ಅಷ್ಟು.

Bengaluru Food Lovers Paradise, take tour with Jayanagarada Hudgi around Namma Tindi Addas

ರಾತ್ರಿ ಕನಸಲ್ಲಿ ಮಸಾಲೆ ದೋಸೆ ಬಂದು ಬೆಳಗ್ಗೆ ಅದನ್ನೆ ನೆನೆಸಿಕೊಂಡು, ನಗುತ್ತಾ ಕುಳಿತ್ತಿದ್ದೆ. ಅದೇ ಅತ್ಯಂತ ಒಳ್ಳೆ ಮಸಾಲೆ ದೋಸೆ ಅಂದುಕೊಂಡಿದ್ದೆ. ಅದು ನನ್ನ ಅಮ್ಮನ ಮೆಚ್ಚಿನ ಜಾಗವಾದ್ದರಿಂದೇನೋ ಅಮ್ಮ ಸಹ ಅಲ್ಲಿಗೇ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಅಮ್ಮ ನಮ್ಮ ಸ್ನೇಹಿತೆಯರ ಎಲ್ಲ ಈ ಅಡ್ಡಗಳಿಗೂ ಖಾಯಮ್ಮು ಸಂಗಾತಿ. ಅವಳು ಒಮ್ಮೊಮ್ಮೆ ನಮಗೆ ಸಲಹೆಗಳನ್ನು ನೀಡುತ್ತಿದ್ದಳು. ಅಪ್ಪನ ಮನೆಯವರು ಫೂಡಿ ಅಲ್ಲ. ಅಪ್ಪನ ತಂದೆ ತುಂಬಾ ಹಿತ ಮಿತ ಆಹಾರ, ಇಷ್ಟ ಆದರೂ ಅಬ್ಬರವಿಲ್ಲ. ಒಂದೇ ಒಂದು ಸಿಹಿ ತಿನಿಸು ತಿಂದರೆ ಅದೇ ಸಾಕು. ಅದರಲ್ಲಿ ನನಗೆ ತಾತನಿಗೆ ಹೋಲಿಕೆಯೆ ಇಲ್ಲ.

ನಾ ಮನೇಲಿ ಇದ್ದರೆ ಅಮ್ಮನಿಗೆ ತಲೆನೋವು, ಘಂಟೆಗೊಮ್ಮೆ ಏನಾದ್ರು ಕೊಡಮ್ಮ ಅಂತ ಶುರು ಮಾಡಿಕೊಳ್ಳುತ್ತಿದ್ದೆ. ಮನೆಯ ಹತ್ತಿರವೇ ಚುರುಮುರಿ ಗಾಡಿಯಿದ್ದಿದ್ದರಿಂದ ವಾರಕೊಮ್ಮೆ ಗೆಳತಿಯರ ಜೊತೆ ಅಲ್ಲಿ ಹೋಗಿ ತಿಂದು, ಬರುತ್ತಿದ್ದೆವು. ಅದೂ ಬೇಜಾರಾದಾಗ ರಸ್ತೆ ದಾಟಿ ಭವಾನಿ ಚಾಟ್ಸ್ ಅಂಡ್ ಜೂಸ್ (ಜಯನಗರ 9ನೇ ಬ್ಲಾಕ್ ಮಾರುಕಟ್ಟೆಯಲ್ಲಿ)ಗೆ ಹೋಗಿ ಚೆನ್ನಾಗಿ ತಿಂದು ಖಾರ ಖಾರ ಅಂತ ಅಲ್ಲೆ ಹತ್ತಿರದಲ್ಲಿದ್ದ ನಮ್ಮ ಸಂಬಂಧಿಕರ ಮನೆಗೆ ಹೋಗಿ ನೀರಿನ ಜೊತೆಗೆ ಕಲ್ಲುಸಕ್ಕರೆಯನ್ನು ತಿಂದು ಬರುತ್ತಿದ್ದೆವು. ಅಲ್ಲಿದ್ದ ಜಾನು ಅಜ್ಜಿಗೆ 'ನಮ್ಮ ಮೇಘು ಬಂದ್ಳು, ನೀರು ಕೊಡು, ಕಲ್ಲು ಸಕ್ಕರೆ ಕೊಡು' ಅನ್ನೋದೆ ಅವರಿಗೆ ಇಷ್ಟ. ಆ ಅಂಗಡಿಯವರಿಗೆ ನಾವೆ ಕನ್ನಡ ಹೇಳಿಕೊಟ್ಟಿದ್ದು. ಆ ಸಂತೋಷಕ್ಕೆ ನಮಗೆ ರಾಜಮರ್ಯಾದೆ.

ನಮ್ಮ ಜಯನಗರಕ್ಕೆ ಯಾವುದೇ ಹೊಸ ತಿಂಡಿ ಕೇಂದ್ರ ಬಂದರೆ ನಮ್ಮ ದಾಳಿಯಾಗುತ್ತಿತ್ತು. ಅಲ್ಲಿನ ಅಂಗಡಿಯವರಿಗೆ ಚೆನ್ನಾಗಿ ಗೊತ್ತಿತ್ತು. ಮಕ್ಕಳನ್ನ ಹೀಗೆ ಆಕರ್ಷಣೆ ಮಾಡಿದ್ದರೆ, ಅವರ ಮನೆಯವರು ಬರುತ್ತಾರೆ ಎಂದು. ಇದೇ ಮಾರುಕಟ್ಟೆಯಲ್ಲಿಯೇ ಅನ್ನಪೂರ್ಣ ಬಜ್ಜಿ ಕೇಂದ್ರವಿದ್ದದ್ದು. ಅಲ್ಲಿಯ ಬಜ್ಜಿ ತಿಂದು, ಅಮ್ಮನಿಗೆ ಬಜ್ಜಿ ಹೇಗೆ ಮಾಡೋದು ಅಂತ ಹೇಳಿಕೊಡಕ್ಕೆ ಹೋಗಿ, ಹಿಟ್ಟಿನ ಬಗ್ಗೆ ಪ್ರಶ್ನೆ ಕೇಳಿದಾಗ ಮರ್ಯಾದೆ ಕಳೆದುಕೊಂಡಿದ್ದು ಇನ್ನೂ ನೆನೆಪಿದೆ.

ನಮ್ಮ ಮನೆಯಲ್ಲಿ ಅಮ್ಮ, ಅಜ್ಜಿ, ಅತ್ತೆಯರು ಎಲ್ಲ ಬಹಳ ಒಳ್ಳೆ ಅಡಿಗೆ ಮಾಡುತ್ತಿದ್ದರು. ನಾನು ತುಂಬಾ ಪುಣ್ಯ ಮಾಡಿದ್ದರಿಂದ ಈ ಮನೆಯಲ್ಲಿ ಹುಟ್ಟಿರೋದು ಅಂತ ಆವಾಗವಾಗ ತಮಾಶೆ ಮಾಡುತ್ತಿರುತ್ತೇನೆ. ಅಜ್ಜಿಗೆ 10 ಜನಕ್ಕಿಂತ ಕಡಿಮೆ ಜನಕ್ಕೆ ಅಡಿಗೆ ಮಾಡೋದು ಗೊತ್ತೇ ಇಲ್ಲ, ದೋಸೆ ಹಿಟ್ಟು ಮಾಡಿದರೆ ಊರಿಗೆಲ್ಲ ಹಂಚಬಹುದು ಅಂತ ತಾತ ರೇಗಿಸುತ್ತಿದ್ದರು. ನಾನು ಅವತ್ತು ದಿನದ ಮೂರು ಸರ್ತಿ ಸಹ ಅದೇ ತಿನ್ನುತ್ತಿದ್ದೆ. ಆದರೆ ನನಗೆ ಅವರಿಗೆ ಜಗಳ ಆಗುತ್ತಿದ್ದದ್ದು ಸಿಹಿ ತಿಂಡಿ ಮಾಡಿದಾಗಲೆ. ಅಜ್ಜಿ 50 ಉಂಡೆ ಮಾಡಿದರೆ 45 ಉಂಡೆ ಬೇರೆಯವರಿಗೆ, 5 ಉಂಡೆ ಮನೆಗೆ. ನಾನು ಈ ಲೆಕ್ಕ ಸರಿಗಿಲ್ಲ ಅಂತ ವಾದ. ತಾತನಿಗೆ ರೋಸಿ ಹೋಗಿ 'ಇವಳಿಗೆ ಬೇರೆ ಮಾಡಿ ಡಬ್ಬಿಗೆ ಹಾಕಿಕೊಡು, ಇವಳ ಡಬ್ಬಿಯನ್ನು ಯಾರು ಮುಟ್ಟಬಾರದು' ಎಂದು ಹೇಳಿದ್ದರು.

ಮನೆಯಲ್ಲಿ ಸಿಹಿ ತಿಂಡಿ ಮಾಡಿದಾಗೆಲ್ಲ ಅಜ್ಜಿ ಇವಳಿಗೆ ರುಚಿಗೆ ಕೊಡು ಸರೀಗಿದ್ದರೆ ಜಾಸ್ತಿ ಮಾಡೊಣ ಅಂತ ಹೇಳುತ್ತಿದ್ದರು. ಆಮೇಲೆ ನೈವೇದ್ಯಕ್ಕೆ ಎಲ್ಲ ರೆಡಿ ಮಾಡುತ್ತಿದ್ದರೆ. ನಾನು ತಾತನಿಗೆ ತಮಾಷೆಗೆ 'ನನಗೆ ನೈವೇದ್ಯ ಮಾಡೀದ್ಮೆಲೆ ನಿಮಗೆಲ್ಲ ಕೊಡೋದು' ಅಂತ ರೇಗಿಸುತ್ತಿದ್ದೆ. ತಾತ 'ಹೌದು, ಮಕ್ಕಳು ದೇವರ ಸಮಾನ ಅಲ್ಲವ. ಅದರಿಂದ ಪರವಾಗಿಲ್ಲ' ಅಂತ ನಕ್ಕು ಸುಮ್ಮನಾಗುತ್ತಿದ್ದರು.

ಹತ್ತಿರ ಹತ್ತಿರ ಫ್ರೌಡ ಶಾಲೆಗೆ ಬಂದಾಗ ಜಯನಗರ್ 4ನೇ ಬ್ಲಾಕ್ ನ cool jointಗೆ ಹೋಗಿ sandwich, ಜ್ಯೂಸ್ ಅದರ ಮುಂದೇನೆ ಇರುವ ಹಾಟ್ ಚಿಪ್ಸ್ ಗೂ ಹೋಗಿ ಚೆನ್ನಾಗಿ ಚಾಟ್ಸ್ ತಿಂದುಕೊಂಡು ಬರುತ್ತಿದ್ದೆವು. ನಾವು ಚಿಕ್ಕೋರಿದ್ದಾಗ ಯಾವ McD, Pizza Hut ಜಯನಗರದಲ್ಲಿ ಇರಲಿಲ್ಲ. ಆದ್ದರಿಂದ ನಮ್ಮ ಅಡ್ಡಾಗಳು ಬರಿ ದರ್ಶಿನಿ ಅಥವಾ ಹೋಟೆಲ್ ಗಳೆ. ಅವೆಲ್ಲ ಅಂಗಡಿಯ ಹಾಳು ಮೂಳು ಆಗಿದ್ದರು ಅಪ್ಪ ಅಮ್ಮ ಎಂದು ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡ ಬರುತ್ತಿರಲಿಲ್ಲ, ತೀರ ಹೊಟ್ಟೆ ಕೆಟ್ಟರೆ ಮಾತ್ರ ಗದರುತ್ತಿದ್ದರು.

ರಸ್ತೆಯಲ್ಲಿ ತಿನ್ನಬೇಡ, ಅದು ತಿನ್ನ ಬೇಡ ಇದು ತಿನ್ನಬೇಡ ಅನ್ನೋ ವಿಪರೀತ ನಾಜೂಕಿನಲ್ಲಿ ನಮ್ಮೆಲ್ಲರನ್ನು ಬೆಳೆಸಲೇ ಇಲ್ಲ. ಅಪ್ಪನಂತೂ ಎಲ್ಲಿ ಇರುತ್ತೀವೋ ಅಲ್ಲಿನ ಆಹಾರ ತಿನ್ನಬೇಕು ಎನ್ನುವ ಜಾಯಮಾನದವರು. ಈಗಲೂ ನಾನು ಸಾರನ್ನ ತಿಂದೆ ಅಂದರೆ ಆ ಪಪ್ಪಾಯ ಯಾಕೆ ತಿನ್ನಲ್ಲ, ಅಲ್ಲೆನು ಚೆನ್ನಾಗಿರುತ್ತದೆಯೋ ಅದೇ ತಿನ್ನಬೇಕು ಪುಟ್ಟ. ಇನ್ನು ಅದೇ ಚಟ್ನಿ ಪುಡಿ ಅಂತ ಫಸ್ ಮಾಡಬಾರದು ಅಂತ ಬುದ್ದಿ ಹೇಳುತ್ತಲೇ, ಪ್ರತಿ ತಿಂಗಳು ಪಾರ್ಸಲ್ ನ ಟ್ರಾಕಿಂಗ್ ನಂಬರ್ ಬಗ್ಗೆ ಹೇಳುತ್ತ ಇರುತ್ತಾರೆ. ಇದಾದ ನಂತರ ಸ್ವಲ್ಪ ದೂರ ಹೋಗಿದ್ದು ನಾವಾಗಿ ನಾವೆ ಬಸವನಗುಡೀಗೆ. ಅಲ್ಲಿ ಆಶ್ರಮದ ಹತ್ತಿರ , ಬೇಸ್ ರಸ್ತೆಯ ಕೊನೆಯಲ್ಲಿ ಹೋಗಿ ನಿಪ್ಪಟ್ ಬನ್ ಮಸಾಲ ತಿನ್ನುತ್ತಿದ್ದೆವು. ಚೆನ್ನಾಗಿ ಊಟ ತಿಂಡಿ ಇರುವ ಕಡೆಗೆ ನಾವು ಪ್ಲಾನ್ ಮಾಡಿ ಸ್ನೇಹಿತೆಯರು ಹೋಗುತ್ತಿದ್ದೆವು.

Bengaluru Food Lovers Paradise, take tour with Jayanagarada Hudgi around Namma Tindi Addas

ಶಾಲೆ ಎಷ್ಟು ಇಷ್ಟವಾಗುತ್ತಿತ್ತೋ ಅದರ ಕ್ಯಾಂಟೀನ್ ಅಷ್ಟೆ hatred. ತೀರ ಕೆಟ್ಟದಾಗಿ ಪೂರಿ ಮಾಡೋರು. ಆದ್ದರಿಂದ ಡಬ್ಬಿ ಖಾಯಮ್ಮು. ಅಮ್ಮ ನಮಗೆ ಇಷ್ಟವಾಗಲೆಂದು ಹೊಸ ಅಡಿಗೆಗಳನ್ನು ಕಲಿತು ಮಾಡುತ್ತಿದ್ದಳು. ಅವಳು ಅದರಲ್ಲಿ ಎಂದಿಗೂ ಹಿಂದೆ ಬೀಳುತ್ತಿರಲಿಲ್ಲ.

ನ್ಯಾಷನಲ್ ಕಾಲೇಜ್ ಜಯನಗರಕ್ಕೆ ಸೇರಿದಾಗಲಂತು ಅಲ್ಲಿನ ಹತ್ತಿರದ ಐಸ್ ಅಂಡ್ ಸ್ಪೈಸ್ ಖಾಯಮ್ಮು ಗಿರಾಕಿ ಆಗಿದ್ವಿ. ನಮ್ಮ ಖರ್ಚು ಪ್ರಾಯಶಃ ಬರೀ ಇಪ್ಪತ್ತು-ಮೂವತ್ತು ಇತ್ತೇನೊ. ಅಕಸ್ಮಾತ್ ಜಾಸ್ತಿ ಆದ್ರೂ ಮನೆಯಲ್ಲಿ ಕೊಡುತ್ತಿರಲಿಲ್ಲ. ದುಡ್ಡಿನ ಬೆಲೆ ಗೊತ್ತಿರಲಿ ಅಂತ.
ಇಂಜಿನಿಯರಿಂಗ್ ಮುಗಿಸಿದ ನಂತರ ಐ ಐ ಎಸ್ ಸಿ ಸೇರಿಕೊಂಡಾಗ ಮಲ್ಲೇಶ್ವರದ ಪರಿಚಯ ಆಯ್ತು. ಅಪ್ಪ ಅವರು ಇಂಜಿಯನಿರಿಂಗ್ ಮುಗಿಸಿದಾಗಲೂ ಅಲ್ಲೆ ಮೊದಲು ಕೆಲ್ಸ ಮಾಡಿದ್ದರಿಂದ ಮಲ್ಲೇಶ್ವರದ ಬಗ್ಗೆ ತಿಳಿಸಿದ್ದರು.

ವೀಣಾ ಸ್ಟೋರ್ಸ್, ಸಿ ಟಿ ಆರ್ ಬಗ್ಗೆ ತಿಳಿದುಕೊಂಡು ಅಲ್ಲಿಗೆ ಹೋಗಿ ಇಡ್ಲಿ, ವಡೆ, ಖಾರ ಭಾತ್ , ಮಸಾಲೆ ದೋಸೆ ತಿಂದು ಅಮ್ಮನಿಗೆ ನಿನ್ನ ವಿದ್ಯಾರ್ಥಿ ಭವನಕ್ಕಿಂತ ಇದೇ ಸಕ್ಕತ್ತಾಗಿ ಇದೆ ಎಂದು ಹೇಳಿ ವಾದ ಮಾಡುತ್ತಿದ್ದೆ. ಅಲ್ಲೇ ನಾವೆಲ್ಲರೂ ಸೇರಿ ಸಾಯಿ ರಾಮ್ ಚಾಟ್ಸ್ ಅನ್ನು ಹುಡುಕಿ ಅಲ್ಲಿಗೂ ಹೋಗಿ ಬಂದ್ವಿ. ಒಟ್ಟಿನಲ್ಲಿ ಹೊಸ ಜಾಗ ಎಲ್ಲಿಗೆ ಹೋದರು ಒಂದು ದೋಸೆ ಹೋಟೆಲ್ ಹಾಗೂ ಚಾಟ್ಸ್ ಅಂಗಡಿ ನನಗೆ ಬೇಕೆಬೇಕು. ಗೆಳತಿ ಹೇಳಿದಳೆಂದು ವಿಜಯನಗರದಲ್ಲಿ ಯಾವುದೋ ರಸ್ತೆಯ ಫಲೂಡವನ್ನು ಸಹ ತಿಂದುಕೊಂಡು ಬಂದಿದ್ದೆ.

ಇಂಜಿನಿಯರಿಂಗ್ ಕಾಲೇಜು ಊರಾಚೆ ಇದ್ದಿದ್ದರಿಂದ ನಮ್ಮ ಅಡ್ಡ ಬನಶಂಕರಿ ಬಿಡಿಏ complex. ಲಕ್ಷ್ಮೀ ಸ್ವೀಟ್ಸ್ ನಮ್ಮ ಅಡ್ಡ. ಆ complex ಹತ್ತಿರವೆ ಇದ್ದ ಚಿಕ್ಕಪ್ಪನಿಗೆ ಅವರ ಮನೆಯ ಸುತ್ತಮುತ್ತ ಇರುವ ಎಲ್ಲ ತಿಂಡಿಗಳ ಜಾಗದ ಹೆಸರು ನಾನೆ ಹೇಳಿದ್ದೆ.

ಬಾರ್ಸಿಲೋನಕ್ಕೆ ಬರುವ ಮುಂಚೆ ತಂಗಿಯ ಗೆಳೆಯ ಗೆಳತಿಯರೆಲ್ಲರು ಸೇರಿ ವಿವಿ ಪುರದ ತಿಂಡಿ ಬೀದಿಗೆ ಕರೆದುಕೊಂಡು ಹೋಗಿ ಬೀಳ್ಕೊಟ್ಟ ಕ್ಷಣ ಮರೆಯಲಾಗದ್ದು.ಹಳೆಯ ಎಮ್ ಟಿ ಆರ್, ಹೊಸತು ತಾಜಾ ತಿಂಡಿ ಇವು ಮುದ ನೀಡಿದ್ದ ಜಾಗಗಳೆ. ಊಟ ತಿಂಡಿ ನನಗೆ ಆ ಜಾಗದ ಬಿಸಿ ಅಪ್ಪುಗೆಯನ್ನು ನೀಡುತ್ತದೆ. ಅಲ್ಲಿನ ನಿಶ್ಕಲ್ಮಶವಾದ ಪ್ರೀತಿ ನೆನಪಾಗುತ್ತದೆ. ಜನರ ಗೌಜು ಗದ್ದಲ ಎಲ್ಲವು ಹಿತ.

ಎಷ್ಟೋ ಜಾಗಗಳನ್ನ ಮರೆತ್ತಿದ್ದೇನೆ, ಆದರೆ ಅವು ನೀಡಿದ ಅನುಭವಗಳನ್ನೆಲ್ಲ ಮರೆಯಲಸಾಧ್ಯ. ಯುಗಾದಿಯ ಹಬ್ಬಕ್ಕೆ ಅಮ್ಮ ಒಬ್ಬಟ್ಟು ಮಾಡಿ ಊಟಕ್ಕೆ ಹಾಕುವ ಪರಿ ಮರೆಯಲಸಾಧ್ಯ. ಈ ಬಾರಿ ಒಬ್ಬಟ್ಟನ್ನು ಫೋಟೋದಲ್ಲಿಯೇ ನೋಡಬೇಕು.

ನಿಮ್ಮ ತಿಂಡಿ ತರಲೆಗಳನ್ನ ಸಹ ನಮಗೆ ತಿಳಿಸಿ, ಹಾಗೆಯೆ ಯುಗಾದಿ ಹಬ್ಬಕ್ಕೆ ಚೆನ್ನಾಗಿ ಒಬ್ಬಟ್ಟು ನನ್ನ ಹೆಸರು ಹೇಳಿಕೊಂಡು ಒಂದು ಜಾಸ್ತಿಯೇ ತಿನ್ನಿ. ಹಬ್ಬದ ಶುಭಾಶಯಗಳು.

English summary
Bengaluru Food Lovers Paradise, take tour with Jayanagarada Hudgi around Namma Tindi Addas in Jayangar, Basavanagudi, Malleswaram, Vijayanagar and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X