ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಡ್ ವೇಸ್ಟೇಜ್ ಸೆನ್ಸ್, ಮತ್ತ ದೊಡ್ಡಸ್ತಿಕಿ ನಾನ್ ಸೆನ್ಸ್!

By ಪ್ರಶಾಂತ ಅಡೂರ, ಹುಬ್ಬಳ್ಳಿ
|
Google Oneindia Kannada News

ಒಂದ ಆರ ತಿಂಗಳ ಹಿಂದಿನ ಮಾತ. ನಮ್ಮ ಮಾಮಾನ ಮಗನ ಮದುವಿ ಇತ್ತ, ಅದು ಜನೇವರಿ ಒಂದಕ್ಕ. ಬಹುಶ: 2016ರಾಗ ಮದುವಿ ಮಾಡ್ಕೊಂಡ 2016ರಾಗ ಒಂದ ಹಡದ ಬಿಡಬೇಕ ಅಂತ ಬರೋಬ್ಬರಿ ಒಂದನೇ ತಾರಿಖಿಗೆ ಮದುವಿ ಇಟಗೊಂಡಿದ್ದಾ ಅಂತ ಕಾಣ್ತದ. ಅಲ್ಲಾ ಯಾಕಂದರ ಈಗಿನ ಹುಡುಗರಿಗೆ ಮೊದ್ಲ ಕನ್ಯಾ ಸಿಗಂಗಿಲ್ಲಾ. ಹಿಂಗ ಏನರ ಅಪರೂಪಕ್ಕ ಕನ್ಯಾ ಸಿಕ್ಕ ಮದುವಿ ಆಗಿಬಿಟ್ಟರ ಕಂಡೇನೊ ಇಲ್ಲೊ ಅನ್ನೊರಂಗ ಮಾಡಿ, ಪ್ಲ್ಯಾನಿಂಗ ಏನ ಅಂಬೊದನ್ನ ತಿಳ್ಕೊಳೋದರಾಗ ಒಂದ ಹಡದ ಬಿಡ್ತಾವ ಹುಚ್ಚ ಖೋಡಿ ಒಯ್ದಂದ.

ಇನ್ನ ಮಾಮಾನ ಮಗನ ಮದುವಿ ಅಂದಮ್ಯಾಲೆ ಬಿಡಲಿಕ್ಕಂತೂ ಬರಂಗಿಲ್ಲಾ ಅದರಾಗ ಅವರ ಕಾರ್ಡ ಕೊಡಲಿಕ್ಕೆ ಬಂದಾಗ ರಿಟರ್ನ್ ಗಿಫ್ಟ ಅಂದರ ಮನಿ ಉಡಗೊರಿ ಕೊಟ್ಟ ಹೋಗಿ ಬಿಟ್ಟಿದ್ದರು. ಇನ್ನ ಆ ಭಿಡೆಕ್ಕರ ಅವರಿಗೆ ನಾವ ಹೋಗಿ ಗಿಫ್ಟ ಕೊಡೊದ ಬಾಕಿ ಇತ್ತ. ಹಂಗ ಕಾರ್ಡಮ್ಯಾಲೆ presents in blessings only ಅಂತ ಹಾಕಿಸಿದ್ದರ ಖರೇ.

ಆದರ ನನ್ನ ಹೆಂಡತಿ "ರ್ರಿ ಹಂಗ ಹಾಕಸೋದ ಇತ್ತೀಚಿಗೆ ಫ್ಯಾಶನ್ ಆಗೇದ. ಕೊಟ್ಟರ ಯಾರ ಒಲ್ಲೆ ಅಂತಾರ ತೊಗೊರಿ... ಹಂಗ ತಾವ ತೊಗೊಳೊಂಗಿಲ್ಲಾ ಅಂತ ಇದ್ದರ ನಮಗ್ಯಾಕ ಅಡ್ವಾನ್ಸ ಗಿಫ್ಟ ಕೊಟ್ಟ ಹೋಗ್ತಿದ್ದರು" ಅಂತ ನಮ್ಮ ಗಿಫ್ಟ ರೆಡಿ ಮಾಡಿ ಹಿಂದಿನ ದಿವಸ ರುಕ್ಕೋತಕ್ಕ ಹೋಗೊದ ಅಂತ ಡಿಸೈಡ ಮಾಡಿದ್ಲು. ಹಂಗ ನಾವ ಗಿಫ್ಟ ಕೊಡೊದ ಖರೆ ಅಂದ ಮ್ಯಾಲೆ ಹಿಂದಿನ ದಿವಸದ್ದ ಮಂಡಗಿ ಊಟಾನರ ಯಾಕ ಬಿಡಬೇಕ ಅಂತ ಅಕಿ ವಿಚಾರ.

ನಂಗರ ನನ್ನ ಹೆಂಡ್ತಿ ಹಿಂದಿನ ದಿವಸ ಹೋಗೊಣು ಅಂದಿದ್ದಕ್ಕ ಧರ್ಮ ಸಂಕಟ ಶುರು ಆತ. ಯಾಕಂದರ ಅವತ್ತ ಡಿಸೆಂಬರ್ 31, ನ್ಯೂ ಇಯರ ಸೆಲೆಬ್ರೇಶನ್ ಮಾಡೊದ ತಪ್ಪತಿತ್ತ. ಹಂಗ ವರ್ಷಾನಗಟ್ಟಲೇ ಸೆಲೆಬ್ರೇಶನ್ ಮಾಡೇ ಮಾಡ್ತೇವಿ, ಇನ್ನ ನ್ಯೂ ಇಯರ ಸೆಲೆಬ್ರೇಶನ್ ಮಾಡಲಿಲ್ಲಾ ಅಂದರ ಹೆಂಗ? ಇನ್ನ ನಮ್ಮ ಮಂದ್ಯಾಗ ಎದರಗೊಳ್ಳೋದು, ಅಲ್ಲಾ-ಬೆಲ್ಲದ ಕಾರ್ಯಕ್ರಮ ಎಲ್ಲಾ ಮುಗಿಸಿಕೊಂಡ ರುಕ್ಕೋತದ ಊಟ ಮುಗಿಯೋದರಾಗ ಹನ್ನೆರಡ ಹೊಡದ ಬಿಡ್ತದ. ಹಂತಾದರಾಗ ನ್ಯೂ ಇಯರ ಹೆಂಗ ಸೆಲೆಬ್ರೇಟ್ ಮಾಡೋದ ಅಂತ ಖರೇನ ಚಿಂತಿ ಹತ್ತಿ ಬಿಡ್ತ. [ಪುಸ್ತಕ ಪ್ರೇಮಿ ಸುಬ್ಬು ಪೆಂಗನಾದ ಪುರಾಣ]

Time sense and food wastage in marriages

ನನ್ನ ಹೆಂಡ್ತಿಗೆ ನಾ ನ್ಯೂ ಇಯರದ್ದ ಇಂಪಾರ್ಟೆನ್ಸ್ ಎಷ್ಟ ತಿಳಿಸಿ ಹೇಳಿದರೂ ಅಕೇನ ನನ್ನ ಮಾತ ಕೇಳವಳ್ಳಾಗಿದ್ಲು. ಅದರಾಗ ಆ ಕಲ್ಯಾಣ ಮಂಟಪ ನಮ್ಮ ಮನಿಯಿಂದ ಹತ್ತ ಕಿ.ಮೀ. ದೂರ, ಹೋಗ್ತ ಬರ್ತ ರಿಕ್ಷಾಕ್ಕ ರೊಕ್ಕ ಬಡಿಬೇಕು. ಎರಡೂ ದಿವಸ ಹೋಗೋದ ಬ್ಯಾಡ ಅಂತ ನಾ ಎಷ್ಟ ಹೇಳಿದರೂ ಅಕಿ ಏನ ನನ್ನ ಮಾತ ಕಿವಿ ಮ್ಯಾಲೆ ಹಾಕ್ಕೊಳ್ಳಿಲ್ಲಾ. ಹಂಗ ಇದ್ದ ಊರ ಬೀಗರು ಲಗೂನ ಬರ್ತಾರ ಕಾರ್ಯಕ್ರಮ ಲಗೂನ ಮುಗಿತಾವ ಅಂತ ನನಗ ತಿಳಿಸಿ ಹೇಳಿದ್ಲು. ಸರಿ ಇನ್ನ ಇಕಿ ಇಷ್ಟ ಗಂಟ ಬಿದ್ದಾಳ ಅಂದಮ್ಯಾಲೆ ನಾ ನ್ಯೂ ಇಯರ ಸೆಲೆಬ್ರೇಶನಕ್ಕ ಎಳ್ಳೂ ನೀರ ಬಿಟ್ಟ ಲಗ್ನಕ್ಕ ಹಿಂದಿನ ದಿವಸನ ಹೋಗಲಿಕ್ಕೆ ತಯಾರಾದೆ.

ಎದರಗೊಳ್ಳೊ ದಿವಸ ನಾ ಆಫೀಸನಿಂದ ಬರೋದ ತಡಾ ನನ್ನ ಹೆಂಡ್ತಿ ತಯಾರ ಆಗೇನ ನಿಂತಿದ್ಲು. ನಾ 'ಇಷ್ಟ್ಯಾಕ ಲಗೂ' ಅಂತ ಕೇಳಿದರ 'ಅಯ್ಯ ಟಿಫಿನ್ ಟೈಮಗೆನ ಹೋಗ್ಬೇಕು' ಅಂತ ಹೊಟ್ಟಿ ಹಸಗೊಂಡ ಬಂದ ನನಗ 'ಅಲ್ಲೇ ಟಿಫಿನ್ ಮಾಡಿರಿ ಅಂತ ನಡಿರಿ' ಅಂತ ಆಟೋದಾಗ ಕರಕೊಂಡ ಹೋದ್ಲು.

ನಾವ ಅಲ್ಲೇ ಆಟೋದವಂಗ ಎರಡನೂರ ರೂಪಾಯಿ ಬಡದ ಹೋಗಿ ಮುಟ್ಟೋದರಾಗ ಏಳೂವರಿ ಆಗಿತ್ತ, ಅಲ್ಲೇ ಹೋಗಿ ನೋಡಿದರ ಗಂಡ ಬೀಗರ ಅಂದರ ನಮ್ಮ ಮಾಮಾನ ಪೈಕಿ ಮಂದಿದ ಪತ್ತೇನ ಇದ್ದಿದ್ದಿಲ್ಲಾ. ಹಂಗ ಹೆಣ್ಣಿನವರು ಭಾಳ ಮಂದಿ ಇದ್ದಿದ್ದಿಲ್ಲಾ.

"ಯಾಕ್ರಿ ಇನ್ನೂ ಗಂಡ ಬೀಗರ ಬಂದಿಲ್ಲೇನ?" ಅಂತ ಅಲ್ಲಿದ್ದವರನ ಕೇಳಿದರ, "ಏ, ಬಂದಾರ್ರಿ... ಹುಡಗನ್ನ ಮೆರವಣಿಗೆ ಮಾಡಿಸ್ಗೊಂಡ ಕರಕೊಂಡ ಬರಲಿಕತ್ತಾರ. ಇಲ್ಲೇ ಒಂದ ಕಿ.ಮೀ ದೂರ ಗಣಪತಿ ಗುಡಿ ಅದ, ಅಲ್ಲೇ ಹೋಗ್ಯಾರ" ಅಂದರು.

ಹಕ್... ಇನ್ನ ಈ ಮೆರವಣಗಿ, ಡ್ಯಾನ್ಸು ಯಾವಾಗ ಮುಗಿಸಿಕೊಂಡ ಬರಬೇಕೋ ಏನೊ ಅನಸ್ತ. ಅಲ್ಲಾ ಹಂಗ ನಮ್ಮ ಮಂದಿ ಒಳಗ ಏನ ಈ ಮೆರವಣಗಿ ಪದ್ದತಿ ಇಲ್ಲಾ. ಇದ ನಾರ್ಥ್ ಇಂಡಿಯನ್ ಟ್ರೇಡಿಶನ್. ಆದರ ಇತ್ತೀಚಿಗೆ ಇದ ಫ್ಯಾಶನ್ ಆಗಿ ಬಿಟ್ಟದ. ಹಂಗರ ಇವರದ ಮೆರವಣಗಿ ಮುಗಿಸಿಕೊಂಡ ಬರೋತನಕಾ ನಾವ ಟಿಫಿನರ ಮಾಡಿದರಾತ ನಡಿ ಅಂತ ಊಟದ ಮನಿ ಹೊಕ್ಕರ ಅಡಗಿಯವರ 'ಅದ ಹೆಂಗ ಗಂಡ ಬೀಗರ ಹುಡಗನ ಕರಕೊಂಡ ಬರೋತನಕಾ ಟಿಫಿನ್ ಕೊಡಲಿಕ್ಕೆ ಬರತದರಿ, ಹೆಣ್ಣಿನ ಕಡೆದವರ ಹೇಳೊ ಮಟಾ ಟಿಫಿನ್ ಇಲ್ಲಾ. ಬೇಕಾರ ಟಿಫೀನಗೆ ಮಾಡಿದ್ದ ಬಟನ್ ಇಡ್ಲಿ - ಸಿರಾ ಆರಿ ಅಂಗಾರ ಆಗವಲ್ವಾಕ' ಅಂತ ನಿಷ್ಟುರವಾಗಿ ಹೇಳಿ ಬಿಟ್ಟಾ. ಅಲ್ಲಾ ಅವನರ ಏನ ಮಾಡ್ತಾನ ಬಿಡ್ರಿ, ನಾಳೆ ಅವಂಗ ದುಡ್ಡ ಕೋಡೊರ ಹೆಣ್ಣಿನ ಕಡೆದವರ ಅಲಾ.

ಆತ ಇನ್ನ ಮೆರವಣಗಿ ಬರೋತನಕ ಬ್ಯಾರೆ ಹಾದಿ ಇಲ್ಲಾ ಅಂತ ಥಂಡ್ಯಾಗ ಮೆರವಣಗಿ ಹಾದಿ ಕಾಯ್ಕೋತ ಕೂತ್ವಿ. ಒಂದ ಏಳುವರಿಗೆ ಶುರು ಆಗಿದ್ದ ಮೆರವಣಗಿ ಕಲ್ಯಾಣ ಮಂಟಪ ಬಂದ ಹತ್ತಲಿಕ್ಕೆ ಒಂಬತ್ತುವರಿ ಆತ. ದಾರಿ ಗುಂಟ ಎರಡು ಬೀಗರ ಪೈಕಿ ಹುಡುಗರು- ಹುಡಗ್ಯಾರಿಂದ ಹಿಡದ ಅಜ್ಜಾ-ಅಜ್ಜಿತನಕ ಎಲ್ಲಾರೂ ಕುಣದಿದ್ದ ಕುಣದಿದ್ದ. ಮ್ಯಾಲೆ ಪಟಾಕ್ಷಿ, ಕುಳ್ಳಿ. ಆ ಮದುಮಗನ ಕುಡಸ್ಕೊಂಡಿದ್ದ ಕುದರಿ ಅಂತು ಪಟಾಕ್ಷಿ ಸಪ್ಪಳಕ್ಕ ಹೆದರಿ ಒಂದ ಹೆಜ್ಜಿ ಇಡಲಿಕ್ಕೆ ಹತ್ತ ಸಲಾ ವಿಚಾರ ಮಾಡಲಿಕತ್ತಿತ್ತ. ಕಡಿಕೆ ಅಂತು ಮದುಮಗ ಕಲ್ಯಾಣ ಮಂಟಪಕ್ಕ ಬಂದ ಹತ್ತಿದಾ. ಅವಂಗೊಂದ ಕದಲಾರತಿ ಮಾಡಿ ಒಳಗ ಕರಕೊಳ್ಳೊದ ತಡಾ ಎಲ್ಲಾರು ಅಡಗಿ ಮನಿಗೆ ಮುಕರಿದರು.

ಅಲ್ಲೇ ಊಟದ ಮನ್ಯಾಗ ನೋಡಿದರ ಒಂದ ಎರಡನೂರ ಚೇರ್ ಹಾಕಿದ್ದರು. ಜನಾ ನೋಡಿದರ ಮಿನಿಮಮ್ ಒಂದ ನಾಲ್ಕನೂರ ಜನಾ ಇದ್ದರು. ಎಲ್ಲಾ ಕುಣದ ಕುಣದ ಹೊಟ್ಟಿ ಹಸ್ಕೊಂಡೊರ. ಏನೋ ಪುಣ್ಯಾ ಎರಡ ತಾಸನಿಂದ ನಾವ ಹೊಟ್ಟಿ ಹಸ್ಗೊಂಡ ಮೆರವಣಗಿ ಒಳಗ ಹೋಗಲಾರದ ಟಿಫಿನ್ ದಾರಿ ಕಾಯಲಿಕತ್ತಿದ್ವಿ ಅಂತ ನಮಗ ಜಗಾ ಸಿಕ್ತ. ಉಳದವರಂತು ಅಗದಿ ಕರ್ಚೀಫ್, ಶಾಲ್ ಒಗದ ಹುಬ್ಬಳ್ಳಿ ಹಳೇ ಬಸ ಸ್ಟ್ಯಾಂಡ ಒಳಗ ನರಗುಂದ ನವಲಗುಂದ ಬಸ್ಸಿಗೆ ಸೀಟ ಹಿಡದಂಗ ಜಾಗ ಹಿಡಿಲಿಕತ್ತರು.

ನಾ ನನ್ನ ಹೆಂಡತಿಗೆ ಅಂದೆ "ಲೇ, ಈಗ ಹತ್ತ ಆಗಲಿಕ್ಕೆ ಬಂತ, ಟಿಫೀನ್ ಊಟಾ ಮಾಡಿದಂಗ ಮಾಡಿ ಮನಿಗೆ ಹೋಗಿ ಬಿಡೋಣ. ಮತ್ತೇಲ್ಲೆ ಮಂಡಗಿ ಊಟದ ತನಕ ಕಾಯ್ಕೋತ ಕೂಡ್ತಿ, ಊಟಕ್ಕ ಒಂದ ಆದರೂ ಆಗಬಹುದು" ಅಂತ ಅಂದರ ಅಕಿ ಏನ ನನ್ನ ಮಾತ ಕೇಳಲಿಲ್ಲಾ 'ಮಂಡಗಿ ಊಟಾ ಮಾಡೆ ಸೈ' ಅಂತ ಗಂಟ ಬಿದ್ಲು.

ಇತ್ತಲಾಗ ಪಾಪ ಕುಣದ ಹಸದ ಬಂದ ಮಂದಿ ಅಂತು ಮುಂದ ಊಟ ಅದ ಅನ್ನೋ ಖಬರ ಬಿಟ್ಟ ಬಟ್ಲ ಗಟ್ಟಲೇ ಬಟನ ಇಡ್ಲಿ ಕಟದರು. ಹಿಂಗ ಎಲ್ಲಾರದೂ ಟಿಫಿನ್ ಮುಗಿಸಿಗೊಂಡ ಎದರಗೊಳ್ಳೋ ಕಾರ್ಯಕ್ರಮ ಶುರು ಆಗೋದರಾಗ ಹತ್ತುವರಿ ಆಗಲಿಕ್ಕೆ ಬಂತ. ಮುಂದ ಹನ್ನೊಂದುವರಿ ಆದರೂ ಅಲ್ಲಾ-ಬೆಲ್ಲಾದ ಕಾರ್ಯಕ್ರಮನ ಮುಗಿಲಿಲ್ಲಾ.

ಲೋಕಲ ಒಂದಿಷ್ಟ ಮಂದಿಗೆ ಲೇಟ ಆಗಲಿಕತ್ತ. ಪಾಪ ಏಲ್ಲಾ ಮಂಡಿಗಿ ಊಟದ್ದ ಆಶಾಕ್ಕ ನಮ್ಮಂಗ ಬಂದವರು, ಇಲ್ಲೇ ನೋಡಿದರ ಹನ್ನೆರಡ ಆದರೂ ಕಾರ್ಯಕ್ರಮ ಮುಗಿಯೋ ಲಕ್ಷಣ ಕಾಣವಲ್ವ ಆಗಿತ್ತ. ಕಡಿಕೆ ಹಂಗ ಒಬ್ಬೊಬ್ಬರ ಹೇಳದ ಕೇಳದ ತಮ್ಮ ಮನಿ ಹಾದಿ ಹಿಡಿಲಿಕ್ಕೆ ಹತ್ತಿದರು. ಅಲ್ಲಾ ಹಂಗ ಹೊಟ್ಟಿ ತುಂಬ ಬಟನ್ ಇಡ್ಲಿ ಹೊಡದಿದ್ದರ ಬಿಡ್ರಿ, ಹಂಗ ಊಟಾ ಮಾಡಬೇಕ ಅಂತ ಏನ ಇರಲಿಲ್ಲಾ. ನಾ ಮತ್ತೊಮ್ಮೆ ನನ್ನ ಹೆಂಡತಿಗೆ ಹೇಳಿದೆ 'ಲೇ ಹನ್ನೆರಡ ಗಂಟೆ ಮ್ಯಾಲೆ ಆಟೋನೂ ಸಿಗಂಗಿಲ್ಲಾ, ಹೋಗೋಣ ನಡಿ' ಅಂತ ನಾ ಅಂದರೂ ಅಕಿ ಏನ ನನ್ನ ಮಾತ ಕೇಳಲಿಲ್ಲಾ.

ಇತ್ತಲಾಗ ಪಾಪ ಅಡಗಿಯಂವಾ ಎಲಿ ಬಡಸಿ ಇಟಗೊಂಡ ಗಂಡನಿವರಿಗೆ ಹೆಣ್ಣಿನವರಿಗೆ ಒಂದ ಇಪ್ಪತ್ತ ಸಲಾ ರಿಕ್ವೆಸ್ಟ ಮಾಡಿದಾ' ಅತ್ತಲಾಗ ಊಟಾ ಶುರು ಮಾಡಿ ಬಿಡೋಣರಿ, ನೀವು ಕಾರ್ಯಕ್ರಮ ಮುಂದವರಸರಿ, ಮಂದಿ ಹಂಗ ಹೊಂಟಾರ, ಊಟಾ ಎಲ್ಲಾ ವೇಸ್ಟ ಆಗ್ತದ' ಅಂತ ಹೇಳಿದಾ. ಆದರ ಎರಡು ಬೀಗರು ಮಾತ ಕೇಳಲಿಲ್ಲಾ, 'ಏ, ಜನಾ ಏನ ಊಟಕ್ಕ ಬಂದಿರ್ತಾರೇನ, ಕಾರ್ಯಕ್ರಮ ನೋಡ್ಲಿಕ್ಕೆ ಬಂದಿರ್ತಾರ, ಕಾರ್ಯಕ್ರಮ ಮುಗದ ಮ್ಯಾಲೆ ಊಟಾ' ಅಂತ ಹೇಳಿಬಿಟ್ಟರು.

ಮುಂದ ಕಾರ್ಯಕ್ರಮ ಎಲ್ಲಾ ಮುಗದ ಊಟಕ್ಕ ಎಲಿ ಹಾಕೋದರಾಗ ಒಂದ ಆಗಿತ್ತ, ಒಂದ ನೂರ ಜನಾ ಭಾಳ ಲೇಟ ಆತ ಅಂತ ಆಗಲೇ ತಮ್ಮ ಮನಿ ಹಾದಿ ಹಿಡದಿದ್ದರು. ನಮ್ಮಂಗ ಊಟದ ಸಂಬಂಧ ಅಂತ ಬಂದೊರ ಒಂದ ನಾಲ್ಕ ನೂರ ಮಂದಿ ಒಂದನೇ ಪಂಕ್ತಿ ಊಟಕ್ಕ ಕೂಡಲಿಕ್ಕೆ ನಾ ಮುಂದ ನೀ ಮುಂದ ಅಂತ ಗುದ್ದಾಡಲಿಕತ್ತರು. ನನ್ನ ಹೆಂಡ್ತಿ ಅಂತು ಮ್ಯಾಲೆ ಎದರಗೊಳ್ಳೋ ಕಾರ್ಯಕ್ರಮ ನಡದಾಗ ಕೆಳಗ ಬಂದ ಎಲಿ ಹಿಡದ ಇಟ್ಟ ಬಿಟ್ಟಿದ್ಲು ಅಂತ ನಮಗ ಒಂದನೇ ಪಂಕ್ತಿಗೆ ಜಾಗ ಸಿಕ್ತು.

ಊಟಕ್ಕ ಕೂತಾಗ ಇಬ್ಬರು ಬೀಗರ ಬಂದ ಸಾವಕಾಶ ಆಗಲಿ... ಸಾವಕಾಶ ಆಗಲಿ ಅಂತ ಹೇಳಿ ಹೊಂಟರು. ಅಲ್ಲಾ ರಾತ್ರಿ ಒಂದ ಹೊಡದ ಹೋಗೇದ ಇನ್ನೆಂತ ಸವಕಾಶ ಅಂತೇನಿ. ಪಾಪ ಒಂದನೇ ಪಂಕ್ತಿಗೆ ಜಗಾ ಸಿಗಲಾರದವರು ನಮ್ಮ ಬೆನ್ನ ಹಿಂದ ಎರಡನೇ ಪಂಕ್ತಿಗೆ ಜಗಾ ಹಿಡಿಲಿಕ್ಕೆ ತುದಿಗಾಲ ಮ್ಯಾಲೆ ನಿಂತಿದ್ದರು. ಅದರಾಗ ಒಬ್ಬರ ಯಾರೊ ಈ ಬೀಗರು 'ಸಾವಕಾಶ ಆಗಲಿ... ಸಾವಕಾಶ ಆಗಲಿ...' ಅಂದಾಗೊಮ್ಮೆ 'ಮುಂದಿನ ಪಂಕ್ತಿ ಅದ... ಮುಂದಿನ ಪಂಕ್ತಿ ಅದ' ಅಂತ ಊಟಕ್ಕ ಕೂತೊರಿಗೆ ಇನಡೈರೆಕ್ಟ ಆಗಿ ಲಗೂನ ಉಂಡ ಜಾಗಾ ಖಾಲಿ ಮಾಡ್ರಿ ಅಂತ ಹೇಳಲಿಕತ್ತಿದ್ದರು.

ಕಡಿಕೂ ಒಂದನೇ ಪಂಕ್ತಿ ಊಟ ಮುಗದಾಗ ಒಂದೂವರಿ ಆಗಿ ಹೋಗಿತ್ತ, ಎರಡನೆ ಪಂಕ್ತಿ ಬರೇ ನೂರ ಮಂದಿ ಉಳ್ಕೊಂಡಿದ್ದರು, ಉಳದರವರೆಲ್ಲಾ ತಮ್ಮ ಮನಿ ಹಾದಿ ಹಿಡದ ಬಿಟ್ಟಿದ್ದರು. ಏನಿಲ್ಲಾಂದರು ಒಂದ ನೂರಾ ಐವತ್ತ, ಎರಡನೂರ ಮಂದಿ ಊಟಾ ವೇಸ್ಟ ಆತ.

ನನಗಂತು ನಮ್ಮ ಪದ್ಧತಿ ಬಗ್ಗೆ ಕೆಟ್ಟ ಅನಸ್ತು. ಹಿಂಗ ತುಟ್ಟಿ ಕಾಲದಾಗ ಅಡಗಿ ಮಾಡಿಸಿಸಿ ಛಲ್ಲಸೋದು ಅಂದ್ರ ಏನ ಛಂದ ಅಂತೇನಿ? ಅಲ್ಲಾ ಅಡಗಿಯವಂಗೇನರಿ ಅಂವಾ ಐದನೂರ ಎಲಿ ರೊಕ್ಕಾ ತೊಗೊಂಡ ತೊಗೊತಾನ, ಆದ್ರ ಅಡಗಿ ಅಂತೂ ವೇಸ್ಟ ಅಲಾ. ಅದ ಕಾರ್ಯಕ್ರಮ ಛಂದಾಗಿ ಟೈಮಸೀರ ಮಾಡಿದ್ದರ ಎಲ್ಲಾರೂ ಊಂಡ ಹೋಗೊರು. ಹೇಳ್ಬೇಕ್ಯಾರ?

ಇದ ನಮ್ಮ ಮಾಮಾನ ಮನಿ ಮದುವಿದ ಒಂದ ಕಥಿ ಅಲ್ಲಾ, ಲಗಭಗ ನಮ್ಮ ಮಂದಿ ಎಲ್ಲಾ ಮದುವಿ ಒಳಗು ಹಿಂದಿನ ದಿವಸದ್ದ ಈದ ಹಣೇಬರಹ. ಅಡಗಿಯವಂತು ಏನಿಲ್ಲಾಂದರು ತಿಂಗಳಿಗೆ 5-6 ಲಕ್ಷ ರೂಪಾಯದ್ದ ಅಡಗಿ ಹಿಂಗ ವೇಸ್ಟ ಆಗ್ತದರಿ, ಯಾರಿಗಂತ ಹೇಳ್ಬೇಕು ಅಂತ ಪಾಪ ಕೆಟ್ಟ ಅನಿಸ್ಗೊಂಡಾ. ಏನ್ಮಾಡೋದ ಎಲ್ಲಿವರಿಗೆ ನಮಗ ಟೈಮ ಸೆನ್ಸ್, ಪದ್ಧತಿ ಒಳಗ ಯಾವದ ಇಂಪಾರ್ಟೇಂಟ್ ಯಾವದಲ್ಲಾ, ಫುಡ ವೇಸ್ಟೇಜ್ ಸೆನ್ಸ್ ಬರಂಗಿಲ್ಲಾ, ಎಲ್ಲಿತನಕ ನಾವ ನಮ್ಮ ರೊಕ್ಕ ನಮ್ಮ ಮದುವಿ ಅಂತ ದೊಡ್ಡಿಸ್ತನಾ ಬಡ್ಕೊಂಡ ಓಡಾಡ್ತೇವಿ ಅಲ್ಲಿ ತನಕ ಇದ ಹಣೇಬರಹ ಅನಸ್ತದ.

ಅನ್ನಂಗ ಇನ್ನೊಂದ ಹೇಳೊದ ಮರತೆ. ನನಗ ಯಾವಾಗ ಇದ ಕಾರ್ಯಕ್ರಮ ಮುಗಿಲಿಕ್ಕೆ ಒಂದ ಹೊಡಿತದ ಅಂತ ಗ್ಯಾರಂಟಿ ಆತ, ಆವಾಗ ಇನ್ನೊಬ್ಬನ ಜೊತಿ ಮಾಡ್ಕೊಂಡ ಯಾರಿಗೂ ಗೊತ್ತ ಆಗಲಾರದಂದ ಒಂದ ರೌಂಡ ಅಲ್ಲೇ ಬಾಜು ಇದ್ದ ಬಾರಗೆ ಹೋಗಿ ನ್ಯೂ ಇಯರ ಸೆಲೆಬ್ರೇಟ್ ಮಾಡಿ ಬಂದಿದ್ದೆ! ನಾ ಬರೋದಕ್ಕೂ ಎಲೆ ಹಾಕೋದಕ್ಕ ಕರೆಕ್ಟ ಆಗಿತ್ತ. ಮುಂದ ಹೆಂಡ್ತಿ ಸೀಟ ಹಿಡದ ಇಟ್ಟಿದ್ಲು ಅಂತ ಒಂದನೇ ಪಂಕ್ತಿ ಊಟಾ ಕಟದ 300 ರೂಪಾಯಿ ಆಟೋಕ್ಕ ಬಡದ ಮನಿಗೆ ಹತ್ತೊದರಾಗ ಎರಡ ಆಗಿತ್ತ.

English summary
In many marriages food gets wasted due to many reasons. Marriage rituals are ok, but need to keep an eye on time and food that is prepared for thousands of people. Prashanth Adur from Hubballi narrates in a humorous way how food is wasted without being served.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X