ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸ್ಯ : ಸಂಡೇ ಈಜ್ ಲಾಂಗರ್ ದ್ಯಾನ್ ಮಂಡೇ...

By ಪ್ರಶಾಂತ ಕೆ. ಅಡೂರ, ಹುಬ್ಬಳ್ಳಿ
|
Google Oneindia Kannada News

ನಾವು ಸಣ್ಣ ಹುಡಗರ ಇದ್ದಾಗಿನ ಮಾತ. ನಾ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 5, ಘಂಟಿಕೇರಿ- ಹುಬ್ಬಳ್ಳಿ ಒಳಗ ಕಲಿತಿದ್ದೆ, ನಮ್ಮ ಸಾಲಿ ಕಂಪೌಂಡಿನಾಗ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ನಂ.1 ಇತ್ತ. ಇನ್ನ ಎರಡು ಸಾಲಿ ಒಂದ ಕಂಪೌಂಡಿನಾಗ ಇದ್ದದ್ದಕ್ಕ ನಮ್ಮ ಓಣಿಯಿಂದ ಹೋಗೊ ಹುಡುಗರೆಲ್ಲಾ, ಅಂದರ ನಾವೇಲ್ಲಾ ಗಂಡು ಹೆಣ್ಣು ಅಂತ ಭೇದ ಭಾವ ಮಾಡದ ಕೈ-ಕೈಹಿಡಕೊಂಡ ಸಾಲಕ ಸಾಲಿಗೆ ಹೋಗ್ತಿದ್ವಿ. ಇವತ್ತ ಹೆಂಗ ದೊಡ್ಡ ದೊಡ್ಡ ಕಾಲೇಜಿನಾಗ ಹುಡಗಾ ಹುಡಗಿ ಕೈ ಹಿಡಕೊಂಡ ಹೋಗ್ತಾರಲಾ ಹಂಗ. ಅದರಾಗ ಮನ್ಯಾಗ 'ಯಾರದರ ದೊಡ್ಡವರದ ಕೈಹಿಡ್ಕೊಂಡ ಸೈಡಿಗೆ ಹೋಗರಿ, ನಡು ರಸ್ತೇದಾಗ ಹೋಗಬ್ಯಾಡರಿ' ಅಂತ ಒಂದ ಹತ್ತ ಸರತೆ ಸಾಲಿಗೆ ಹೋಗಬೇಕಾರ ಹೇಳಿ ಕಳಿಸಿರತಿದ್ದರು.

ಯಾರರ ನಮ್ಮಕಿಂತ ದೊಡ್ಡಕಿ ನಮ್ಮ ಜೊತಿ ಇದ್ದಳಂದರ ನಾವ ಅಕ್ಕಾ ಅಂತ ದೊಡ್ಡೊಂವ ಇದ್ದನಂದರ ಅಣ್ಣಾ ಅಂತ ಹಚಗೊಂಡ ಅವರ ಕೈ ಹಿಡ್ಕೊಂಡ ಹೊಗ್ತಿದ್ವಿ, ಆವಾಗ ಇವಾಗಿನ ಗತೆ ಸಣ್ಣ ವಯಸ್ಸಿನಾಗ ಸೆಕಂಡ ಥಾಟ ಇರ್ತಿದ್ದಿಲ್ಲಾ. ಅಕ್ಕ- ಅಣ್ಣ ಎರಡ ಗೊತ್ತ ಇದ್ದದ್ದು. ಮತ್ತ ಆ ದೊಡ್ಡವರದ ಜವಾಬ್ದಾರಿ ಏನಪಾ ಅಂದರ ನಮ್ಮನ್ನ ಸುರಕ್ಷಿತ ಸಾಲಿಗೆ ಮುಟ್ಟಿಸಿ ವಾಪಸ ಮನಿಗೆ ಕರಕೊಂಡ ಬರೋದ. ಅದ ಅವರ ದಿವಸಾ ಮಾಡೊ ಕೆಲಸ. ಇಗಿನಂಗ ಆವಾಗ ಆಟೋ ಗಿಟೋನು ಭಾಳ ಇರಲಿಲ್ಲ, ಇದ್ದರು ನಮಗ ಆಟೊದಾಗ ಹೋಗೊ ಕ್ಯಾಪಿಸಿಟಿ ಇರಲಿಲ್ಲಾ.

ಹಂಗ ಹೋಗಬೇಕಾರ ನಾವ ಯಾವದರ ಹುಡಗಿದ ಒಳಗಿನ್ ಪೆಟಿಕೋಟ ಸ್ಕೂಲ ಸ್ಕರ್ಟ್ ದಾಟಿ ಕೆಳಗ ಕಾಣಲಿಕತ್ತಿತ್ತಂದರ 'ಸಂಡೇ ಇಜ್ ಲಾಂಗರ್ ದ್ಯಾನ ಮಂಡೆ' ಅಂತ ಕಾಡಿಸ್ಗೋತ ಹೋಗ್ತಿದ್ವಿ, ಪಾಪ, ಅಕಿ ಅವತ್ತೇನರ ತಪ್ಪಿ ಗಡಿಬಿಡಿ ಒಳಗ ಅವರಕ್ಕನ್ನ ಪೆಟಿಕೋಟ ಹಾಕ್ಕೊಂಡ ಬಂದಿರಬೇಕ? ನಮ್ಮಂತಾ ಹುಡಗರ ಕೈಯಾಗ ಸಿಕ್ಕ ಗೊಳೊ ಅನಿಸಿಗೊಳ್ಳೋಕಿ. ಕಡೀಕೆ ಅಕಿ ಅವರ ಇವರದ ಆಣಿ ಮಾಡಿಸಿ ಇಲ್ಲಾ ನಿಮ್ಮ ಕ್ಲಾಸ ಟೀಚರಗೆ ಹೇಳಿ ನಿನ್ನ ಬಿಸಲಾಗ ಓಡಸ್ತೇನಿ ಅಂತ ನಮಗ ಹೆದರಿಸಿಸಿ ಕಾಡಸೋದ ಬಿಡಸ್ತಿದ್ದಳು. ಅಲ್ಲಾ ಹಂಗ ಯಾವದರ ಗಂಡ ಹುಡಗನ ಬನಿಯನ್ ಮ್ಯಾಲಿನ ಬಿಳೆ ಅಂಗಿ ದಾಟಿ ನೀಲಿ ಚಡ್ಡಿ ಮ್ಯಾಲೆ ಜೊತಾಡ್ಲಿಕತ್ತಾಗನೂ ಹುಡಗ್ಯಾರ ನಮಗ ಹಂಗ ಕಾಡಸ್ತಿದ್ದರು ಆ ಮಾತ ಬ್ಯಾರೆ. ಆವಾಗ ನಾವ ಸಣ್ಣೊರ ಇದ್ದವಿ ಚಡ್ದಿ ಒಳಗ ಅಂಡರವೇರ ಹಾಕೊತಿದ್ದಿಲ್ಲಾ ಹಿಂಗಾಗಿ ಚಡ್ಡಿ ಬುಡಕಿಂದ ಅಂಡರವೇರ ಇಣಕಿ ಹಾಕೊ ಪ್ರಸಂಗ ಬರತಿದ್ದಿಲ್ಲಾ.


ಹಂಗ ವಾರದಾಗ ಒಂದ ಮೂರ ಸರತೆ ಯಾರದರ ಸಂಡೇ ಇಜ್ ಲಾಂಗರ್ ದ್ಯಾನ ಮಂಡೇ ಆಗೆ ಬಿಟ್ಟಿರತಿತ್ತ. ಮೊನ್ನೆ ನಾ ಈ ವಿಷಯ ಈಗಿನ ಜನರೇಶನ್ ಹುಡಗರ ಜೊತಿ ಹೇಳಬೇಕಾರ ಒಬ್ಬೊಂವಾ "I know that this phrase is used more symbolically to infer that your underskirt is longer than your skirt or your slip worn under your clothes is peeping from below. But as Sunday is a holiday we always feel its shorter than Monday. Monday seems longer as it is a working day" ಅಂತ ಅಂವಾ ನಾವು Sunday is longer than Monday ಅಂತಿದ್ದ ಕನ್ಸೆಪ್ಟ ತಪ್ಪು. ನೀವು Monday is longer than Sunday ಅಂತ ಅನ್ನಬೇಕು ಅಂದಾ.

ಅಲ್ಲಾ ಯಾರ ಸಂಡೆ is longer than ಮಂಡೆ ಕನ್ಸೆಪ್ಟ ಕಂಡಹಿಡದರೊ ನಮಗಂತು ಗೊತ್ತಿಲ್ಲಾ. ಒಟ್ಟ ಎಲ್ಲಾರೂ ಅಂತಿದ್ರು ಹಂಗ ನಾವು ಅಂತಿದ್ವಿ. ಇಲ್ಲೆ ಯಾವದ ಲಾಂಗರ್ ಇದ್ದ ಯಾವದ ಶಾರ್ಟ ಆದರ ನಮಗೇನ ಸಂಬಂಧ, ಒಟ್ಟ ಒಳಗಿಂದ ಹೊರಗಿಂದರ ಮ್ಯಾಲೆ ಕಂಡರ ಅದು Sunday is longer than Monday ಇದ್ದಂಗ. ಆದರ ಅಂವಾ ಅಂದಿದ್ದ ತಪ್ಪ ಅಂತ ನನಗ ಸಾಧಸಬೇಕಿತ್ತಲಾ, ಅದಕ್ಕ ನಾ "ತಮ್ಮಾ, ನಿಂದಿನ್ನು ಲಗ್ನಾ ಆಗಿಲ್ಲಾ, ಅದಕ್ಕ ಹಂಗ ಅಂತಿ, ಲಗ್ನಾ ಮಾಡ್ಕೊಂಡ ಒಂದ ಸಂಡೇ ಪೂರ್ತಿ ಹೆಂಡತಿ ಜೊತಿ ಮನ್ಯಾಗ ಇದ್ದ ನೋಡ ಆವಾಗ 'ಯಾವಾಗ ಮಂಡೆ ಬರ್ತದ, ನಾ ಯಾವಾಗ ಆಫೀಸಗೆ ಹೋಗೇನೋ' ಅಂತ ಅನಸಲಿಲ್ಲಾ ಅಂದರ ನಿಮ್ಮ ವೈನಿ ಆಣಿ, ಅದಕ್ಕ ಸಂಡೆ ಇಜ್ ಲಾಂಗರ್ ದ್ಯಾನ ಮಂಡೆ ಅನ್ನೊದು" ಅಂದೆ. ಅಂವಾ ಪಾಪ, 'ನೀ ಹೇಳೊದ ಖರೇ ಇದ್ದರು ಇರಬೇಕ ಬಿಡ ಅಣ್ಣಾ ನಮಗೇನ ಗೊತ್ತ' ಅಂತ ಸುಮ್ಮನಾದ.

ಅಲ್ಲಾ, ಇವತ್ತ ನಾವ ಯಾವದಕ್ಕ ಹಿಂದಕ Sunday is longer than Monday ಅಂತಿದ್ವ್ಯೊ ಅವೇಲ್ಲಾ fashion ಆಗಿ ಬಿಟ್ಟಾವ. ಕೆಲವೊಬ್ಬರದ ಅಂತು ಮೈಮ್ಯಾಲೆ ಮಂಡೆ ಇರಂಗನ ಇಲ್ಲಾ ಬರೇ ಸಂಡೇನ ಇರತದ, ಅದ ಏನ ಫ್ಯಾಶನ್ನೊ ಏನ ಸುಡಗಾಡೊ ಆ ದೇವರಿಗೆ ಗೊತ್ತ. ಏನರ ಹೇಳಲಿಕತ್ತರ "ಈಗ ಅದ ಫ್ಯಾಶನ್ ನಿಂಗೇನ ತಿಳಿತದ ತಲಿ" ಅಂತ ನಮಗ ಅಂತಾರ.

ಯಾವದ ಗಂಡಸು ಯಾವದ ಹೆಂಗಸು ಅಂತ ದೂರಿಂದ ಅಂತು ಬರೇ ಅರಬಿ ನೋಡಿದರ ಗೊತ್ತ ಆಗಂಗಿಲ್ಲಾ, ಮೊನ್ನೆ ಸಂಡೆ ಬೆಂಗಳೂರಾಗ ನಾನು ನನ್ನ ಹೆಂಡತಿ ಬ್ರಿಗೇಡ ರೋಡನಾಗ ಹೊಂಟಾಗ ನನ್ನ ಹೆಂಡತಿ ಒಂದ ಹತ್ತ ಮಂದಿ ಹುಡಗ್ಯಾರನ್ನ ತೋರಿಸಿ "ರ್ರಿ, ಅಲ್ಲೆ ನೋಡ್ರಿ ಸಂಡೇ ಇಜ್ ಲಾಂಗರ್ ದ್ಯಾನ ಮಂಡೆ" ಅನ್ನಲಿಕತ್ತಿದ್ಲು.

Is your Sunday longer than Monday?

"ಲೇ, ನಿ ಹುಚ್ಚರಂಗ ಯಾರಿಗರ ಏನರ ಅನ್ನಲಿಕ್ಕೆ ಹೋಗಬ್ಯಾಡಾ, ಅದ ಫ್ಯಾಶನ್. ಅದಕ್ಕ Monday is shorter than Sunday ಅಂತಾರ" ಅಂತ ನಾ ಅಕಿಗೆ ತಿಳಿಸಿ ಹೇಳಿ ಕರಕೊಂಡ ಹೊಂಟಿದ್ದೆ.

ಇಕಿ ಹೆಂಗ ಮಂದಿನ್ನ ಗುರಗುಟ್ಟಿಸಿ ನೋಡಲಿಕತ್ತಿದ್ಲೊ ಹಂಗ ಮಂದಿನೂ ಇಕ್ಕಿನ್ನ ನೋಡಲಿಕತ್ತಿದ್ದರು. ನಾ ಯಾಕ ಇವರ ಹಿಂಗ್ಯಾಕ ನನ್ನ ಹೆಂಡತಿಗೆ ನೋಡಲಿಕತ್ತಾರ. ಎಲ್ಲಾರ ಇಕಿದು ಸಂಡೆ ಇಜ್ ಲಾಂಗರ್ ದ್ಯಾನ ಮಂಡೆ ಆಗೇದೇನು ಅಂತ ಒಂದ ಸರತೆ ಬಿಟ್ಟ ಎರಡ ಸರತೆ ನೋಡಿದ ಮ್ಯಾಲೆ ಗೊತ್ತಾತು. ಆ ಇಡಿ ಬ್ರಿಗೇಡ ರೋಡನಾಗ ಸೀರಿ ಉಟಗೊಂಡ ಬಂದೊಕಿ ಇಕಿ ಒಬ್ಬಕಿನ. ಉಳದವರೇಲ್ಲಾ ಚಡ್ಡಿ ಮ್ಯಾಲೆ, ಜೀನ್ಸ್ ಮ್ಯಾಲೆ, ಸ್ಕರ್ಟ ಮ್ಯಾಲೆ, ಬರೇ ಚುಡಿ ಸ್ಲಿಪ್ (ಹಳೇ ಕಾಲದ ಪೆಟಿಕೋಟ) ಮ್ಯಾಲೆ ಇದ್ದರು. ಅಲ್ಲಾ ನನ್ನ ಹೆಂಡತಿ ಹಿಂಗ ಸಂಡೆ, ಮಂಡೆ ಮ್ಯಾಲೆ ಸೆಪ್ಟೆಂಬರ್, ಅಕ್ಟೋಬರ್ ಹಾಕ್ಕೊಂಡ ಮಾಡರ್ನ ಏರಿಯಾದಾಗ ಓಡಾಡಿದರ ಜನಾ ನೋಡಲಾರದ ಏನ ಮಾಡತಾರ.

ಅಕಿಗೆ ನಾ ಬ್ರಿಗೇಡ ರೋಡಿಗೆ ಹೋಗಬೇಕಾರ ತಿಳಿಸಿ ಹೇಳಿದ್ದೆ, "ಅಲ್ಲೆ ಯಾ ಗಣಪತಿ ಗುಡಿ ಇಲ್ಲಾ, ನೀ ಏನ ಬರಲಿಕ್ಕೆ ಹೋಗಬ್ಯಾಡ" ಅಂತ, ಆದರ ಅಕಿ ನನ್ನ ಮಾತ ಕೇಳಬೇಕಲ್ಲಾ. ಹಂಗ ಮಾತ ಕೇಳ್ತಿದ್ಲು ಅಂದ್ರ ಹೆಂಡ್ತಿ ಅಂತರ ಯಾಕ ಅಂತಿದ್ದರ ಬಿಡ್ರಿ, ನಾ ಎಲ್ಲರ ಅಂಡರಗ್ರೌಂಡ ಪಬ್ ನಾಗ ಹೊಕ್ಕ ಅಂಡರ ಗ್ರೌಂಡ ಆಗಿಗಿಗೇನಿ ಅಂತ ನನ್ನ ಹಿಂದ ಬಾಲಂಗಸಿಗತೆ ಒಂದ ವರ್ಷದ್ದ ಕ್ಯಾಲೆಂಡರ ಮೈಮ್ಯಾಲೆ ಹಾಕ್ಕೊಂಡ(ಒಂಬತ್ತ ವಾರಿ ಸೀರಿ ಉಟಕೊಂಡ) ಬಂದಿದ್ಲು.

ಅಲ್ಲಾ... ಏನೋ ಸಂಡೆ ಈಜ್ ಲಾಂಗರ್ ದ್ಯಾನ್ ಮಂಡೆ ಅನ್ನೋದ ನೆನಪಾತ ಅದಕ್ಕ ಇಷ್ಟ ಬರಿಬೇಕಾತ. ಅಲ್ಲಾ ಹಂಗ ನಾ ಸಿರಿಯಸ್ ಆಗಿ ಹೇಳ್ಬೇಕಂದರ ಇವತ್ತ ಸಂಡೆ ಇಜ್ ಲಾಂಗರ್ ದ್ಯಾನ ಮಂಡೆ ಅನ್ನೋದ ನಾವ ಹಾಕೊಳೊ ಅರಬಿಗಿಂತ ನಮ್ಮ ಇವತ್ತಿನ ಮನಸ್ಥಿತಿಗೆ ಭಾಳ ಹತ್ತತದ ಅಂತ ಅನಸ್ತದ. ಇವತ್ತ ನಾವ ಎಷ್ಟ ಮ್ಯಾಲೆ ಸಾದು ಸಂಪನ್ನರು ಸಂಪ್ರದಾಯಸ್ತರು ಅಂತ ತೊರಿಸಿಗೊಂಡರು ನಮ್ಮ ಒಳಗಿನ ವಿಕೃತ ಮನಸ್ಥಿತಿ, ಹ್ಯಾಂವ, ಅಸೂಯ್ಯ, ಸಂಕಟಾ ಎಲ್ಲಾ ಮುಖವಾಡಗಳ ಬುಡಕನಿಂದ ಕಾಣಲಿಕತ್ತಾವ. ಅದರ ಪರಿಣಾಮ ಇವತ್ತ ಸಮಾಜದಾಗ ನಾವ ನೋಡೆ ನೋಡಲಿಕತ್ತೇವಿ. ನೂರಾ ಎಂಟ ಮುಖವಾಡ ಹಾಕಿದರು ನಮ್ಮ ಅಸಲಿ ಮುಖ ಸಮಾಜದಾಗ ಎದ್ದ ಕಂಡ ಕಾಣತದ ಅನ್ನೋದನ್ನ ಯಾರು ಮರಿಬಾರದು.

English summary
Is your Sunday longer than Monday? A humorous write up by Prashant Adur, Hubli. He goes back to his school days and remembers how they used to use this idiom. This idiom has become fashion now-a-days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X