ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣಸೌಧದಲ್ಲಿ ಗುಂಯ್ ಗುಡುತ್ತಿರುವ ಸೊಳ್ಳೆಗಳ ಸ್ವಗತ!

|
Google Oneindia Kannada News

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ 'ಸೊಳ್ಳೆಗಳು ನಮ್ಮ ರಕ್ತ ಹೀರುತ್ತಿವೆ' ಎಂದು ಶಾಸಕರು ಸ್ಪೀಕರ್‌ಗೆ ಪತ್ರ ಬರೆದಿರುವುದಕ್ಕೆ ಸೊಳ್ಳೆಗಳು ಅಸಮಾಧಾನ ವ್ಯಕ್ತಪಡಿಸಿವೆ. ವರ್ಷಕ್ಕೊಮ್ಮೆ ಇಲ್ಲಿಗೆ ಬರುವ ಶಾಸಕರ ರಕ್ತ ಹೀರುವುದು ನಮ್ಮ ಹಕ್ಕು ಎಂದು ಸೊಳ್ಳೆಗಳು ವಾದ ಮಂಡಿಸಿವೆ.

ಹತ್ತು ದಿನಗಳ ಚಳಿಗಾಲದ ಅಧಿವೇಶನಕ್ಕಾಗಿ ಮುಖ್ಯಮಂತ್ರಿ, ಶಾಸಕರು, ಅಧಿಕಾರಿಗಳು ಬೆಳಗಾವಿಗೆ ಬಂದಿದ್ದು, ಈ ಸಮಯದಲ್ಲಿ ಅವರ ರಕ್ತ ಹೀರುವುದರಲ್ಲಿ ತಪ್ಪೇನಿದೆ? ಎಂಬ ಸೊಳ್ಳೆಗಳ ಪ್ರಶ್ನೆ ಬಗ್ಗೆ ಸದನದಲ್ಲಿ ಯಾರೂ ಧ್ವನಿ ಎತ್ತಿಲ್ಲ. ಸೊಳ್ಳೆ ಕಾಟ ತಡೆಯಲಾಗುತ್ತಿಲ್ಲ ಎಂದು ಪತ್ರ ಬರೆಯುವುದು ನಮ್ಮ ಮನೆಗೆ ಬಂದು ನಮ್ಮ ವಿರುದ್ಧವೇ ಕತ್ತಿ ಮಸೆದಂತೆ ಎಂದು ಸೊಳ್ಳೆಗಳು ಶಾಸಕರ ವಿರುದ್ಧ ಗರಂ ಆಗಿವೆ.

ಸೊಳ್ಳೆಗಳ ಮನೆ : ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಶಾಸಕರು, ಸಚಿವರು ವರ್ಷಪೂರ್ತಿ ಬರುವುದಿಲ್ಲ. ಇಲ್ಲಿ ಯಾವ ಸರ್ಕಾರಿ ಕಚೇರಿಗಳೂ ಇಲ್ಲ. ಆದ್ದರಿಂದ ಅಧಿಕಾರಿಗಳು ಇತ್ತ ಸುಳಿಯುವುದಿಲ್ಲ. ಸೌಧವನ್ನು ಸೊಳ್ಳೆಗಳು ತಮ್ಮ ಮನೆ ಮಾಡಿಕೊಂಡಿವೆ. ಆದರೆ, ಅವುಗಳು ರಕ್ತದ ಕೊರತೆಯಿಂದ ಬಳಲುತ್ತಿವೆ. [ಪರಿಷತ್ತಿನಲ್ಲಿ ಸೊಳ್ಳೆ ಕಾಟವಂತೆ]

mosquitoes

ಆದ್ದರಿಂದ, ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಯಾಗುತ್ತಿದ್ದಂತೆ ಸಂಭ್ರಮಪಟ್ಟಿದ್ದ ಸೊಳ್ಳೆಗಳು ಸಭೆ ಸೇರಿ, ವಿಧಾನ ಸಭೆ, ವಿಧಾನಪರಿಷತ್ತು, ಪ್ರೇಕ್ಷಕರ ಗ್ಯಾಲರಿ ಮುಂತಾದ ಕಡೆ ತಂಡೋಪತಂಡವಾಗಿ ಹೋಗಿ ಚಳಿಗಾಲದ ಅಧಿವೇಶನದಲ್ಲಿ ಬಿಸಿ-ಬಿಸಿ ರಕ್ತ ಹೀರಬೇಕೆಂದು ಯೋಜನೆ ರೂಪಿಸಿದ್ದವು.

ಶಾಸಕರ ವಿರುದ್ಧ ಗರಂ : ವರ್ಷಪೂರ್ತಿ ಬೆಂಗಳೂರಿನಲ್ಲಿ ಶಾಸಕರು, ಸಚಿವರು ಇರುವುದರಿಂದ ಅವರ ರಕ್ತದ ರುಚಿ ನೋಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ಸೊಳ್ಳೆಗಳಿಗೆ ಇದ್ದೇ ಇತ್ತು. ಅದನ್ನು ಈಗ ತೀರಿಸಿಕೊಳ್ಳುತ್ತಿದ್ದು, ಇದಕ್ಕೂ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ? ಎಂಬುದು ಸೊಳ್ಳೆಗಳ ಪ್ರಶ್ನೆ.

ಅಂದಹಾಗೆ ಸುವರ್ಣ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಎಂಬ ಹಲವು ಸಂಘಟನೆಗಳ ಒತ್ತಾಯಕ್ಕೆ ನಮ್ಮ ಬೆಂಬಲವಿದೆ ಎಂದು 'ಸೊಳ್ಳೆಗಳ ಹಿತರಕ್ಷಣಾ ಮಂಡಳಿ' ಹೇಳಿದ್ದು, ಇದರಿಂದ ನಮ್ಮ ರಕ್ತರ ಕೊರತೆ ಸಮಸ್ಯೆ ನಿವಾರಣೆಯಾಗಿ ಅಪೌಷ್ಠಿಕತೆಯಿಂದ ನಾವು ಸಾವನ್ನಪ್ಪುವುದು ತಪ್ಪಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.

ಬೆಳಗಾವಿಯಲ್ಲಿ ಒಂದು ದಿನದ ಕಲಾಪಕ್ಕೆ ಶಾಸಕರು ಚಕ್ಕರ್ ಹಾಕಿದ್ದಕ್ಕೂ ಸೊಳ್ಳೆಗಳು ಕೋಪಗೊಂಡಿವೆ. ಇದರಿಂದಾದ ನಷ್ಟವನ್ನು ಅಧಿವೇಶನದ ಖರ್ಚಿನಲ್ಲಿ ಸೇರಿಸಿ ಬೆಂಗಳೂರಿನ ಬ್ಲಡ್ ಬ್ಯಾಂಕ್‌ಗಳಿಂದ ರಕ್ತವನ್ನು ಸರಬರಾಜು ಮಾಡಿಕೊಡಬೇಕು ಎಂದು ಸಿಎಂಗೆ ಪತ್ರ ಬರೆಯಲು ನಿರ್ಧರಿಸಿವೆ.

 MLA

ಪ್ರತೀಕಾರದ ಬೆದರಿಕೆ : ಅದರ ಜೊತೆಗೆ ಕರಪ್ಟ್ ಆಗಿದ್ದ ಕೆಲ ಶಾಸಕರ ರಕ್ತ ಕುಡಿದು ನಮ್ಮ ಸಂಘದ ಕೆಲಸ ಸದಸ್ಯರು ರಕ್ತ ಕಾರಿ ಸತ್ತಿದ್ದಕ್ಕೆ ಪ್ರತೀಕಾರವಾಗಿ ಸದ್ಯದಲ್ಲೇ ಪ್ರತಿದಾಳಿ ನಡೆಸಲಿದ್ದೇವೆ ಎಂದು ಸೊಳ್ಳೆಗಳ ಸಂಘದ ಅಧ್ಯಕ್ಷ ಸೊಳ್ಳೆರಾಯರು ಎಚ್ಚರಿಕೆ ನೀಡಿದ್ದಾರೆ.

ಸುವರ್ಣ ವಿಧಾನಸೌಧದ ವಿಧಾನಪರಿಷತ್ ಸಭಾಂಗಣದಲ್ಲಿ ಸೊಳ್ಳೆಗಳಿದ್ದು, ನಮ್ಮ ಕಾಲಿಗೆ ಕಚ್ಚಿ ಅವುಗಳು ರಕ್ತ ಹೀರುತ್ತಿವೆ, ನಮಗೆ ನ್ಯಾಯ ಕೊಡಿ ಎಂದು ಬಿಜೆಪಿಯ ವಿಮಲಾ ಗೌಡ ಅವರು ಸ್ಪೀಕರ್‌ಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ಸೊಳ್ಳೆಗಳು ತಮ್ಮ ಕಡೆಯ ವಾದವನ್ನು ಮಂಡಿಸಿವೆ.

English summary
BJP MLC Vimalagowda has written a letter to Legislative Council Chairman D.H. Shankaramurthy and about mosquito problem in Suvarna Vidhanasoudha. Mosquito welfare association expressed unhappiness over this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X