ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಪ್ರಾಣಾಯಾಮಾಯಣ

By ಚಾರುಕೇಶ, ವರ್ಜೀನಿಯಾ, ಅಮೆರಿಕ
|
Google Oneindia Kannada News

Should Pranayama be done everywhere?
ನನಗೆ ಮೊದಲಿಂದಲೂ ಯೋಗ, ಪ್ರಾಣಾಯಾಮ ಕಲಿಯಬೇಕು ಅಂತ ಬಹಳ ಆಸೆ ಇತ್ತು. ಅವಕಾಶಕ್ಕಾಗಿ ಕಾಯುತ್ತಿದ್ದೆ. ಪರದೇಶದಲ್ಲಿ ತಾಳ್ಮೆನೇ ಒಂದು ಯೋಗ. ಅಂತೂ ನಮ್ಮೂರಿನ ದೇವಸ್ಥಾನದಲ್ಲಿ ಉಚಿತ ಯೋಗ ತರಬೇತಿ ಶುರುವಾಯಿತು. ಈಮೈಲ್ ಕಳುಹಿಸಿ ನನ್ನ ಇಚ್ಛೆಯನ್ನು ತಿಳಿಸಿದೆ. ವೆವರ್ ಫಾರ್ಮ್ ಭರ್ತಿ ಮಾಡಿ, ಯೋಗ ಮಾಡುವಾಗ ನನ್ನ ಅಂಗಾಂಗಗಳು ಸಿಕ್ಕುಹಾಕಿಕೊಂಡರೆ ಅಥವಾ ಉಸಿರನ್ನು ಸಂಪೂರ್ಣ ಬಿಟ್ಟು ವಾಪಸ್ ತೆಗೊಳ್ಳೋದು ಮರೆತರೆ ನಾನೇ ಜವಾಬ್ದಾರ ಅಂತ ಒಪ್ಪಿ ಸಹಿ ಹಾಕಿದೆ.

ಶುರುವಾಗುವ ದಿನ ಹತ್ತಿರ ಬರುತ್ತಿದಂತೆ ಏನೋ ತಳಮಳ. ಹೆಂಡ್ತಿಗೆ ಹೇಳಿದೆ "ಇನ್ನು ಜಾಸ್ತಿ ದಿನ ಹಿಂಗೆ ಇರಲ್ಲ, ನೋಡತಾ ಇರು" (ಸ್ವಲ್ಪ ಜಾಸ್ತಿನೇ ಆಯ್ತು ಅನ್ನಿಸಿತು). ಆ ದಿನ ಬಂದೇ ಬಂತು. ವಾರದ ರಜಾದಿನ, ಆದರೂ ಎಲ್ಲಾ ಮಲಗಿದ್ದಾಗಲೇ ಎದ್ದು ಸ್ನಾನ ಮಾಡಿ ಯೋಗಕ್ಕೆ ಸೂಕ್ತ ಬಟ್ಟೆ ತೊಟ್ಟು, ಚಾಪೆ ಹಿಡಿದು ಓಡಿದೆ. ದೇವಸ್ಥಾನದ ಕೆಳಗಿನ ಸಭಾಂಗಣಕ್ಕೆ ಹೋದರೆ ಆಗಲೇ ತುಂಬ ಜನ ಇದ್ದರು. ಸೂಕ್ತ ಜಾಗ ಹುಡುಕಿ ಚಾಪೆ ಹಾಸಿ ಕೂತೆ. ಮೊದಲಿನ ಪರಿಚಯದ ನಂತರ, ಗುರುಗಳು ಓಂ ಎಂದು, ಪ್ರಾಣಯಾಮದಿಂದ ಶುರು ಮಾಡಿದರು.

ಭಸ್ತ್ರಿಕ ಅಂದರೆ, ನಾಲ್ಕು ಎಣಿಸುತ್ತ ಉಸಿರು ಒಳಕ್ಕೆ ಎಳೆದು, ಆರು ಎಣಿಸುತ್ತ ಬಿಡಿ ಎಂದರು. "ಥಿಸ್ ಇಸ್ ಇಸಿ", ಅನಿಸಿತು. ಉಸಿರನ್ನು ಎಳೆದೆ....... ಏನೋ ಗಮ ಗಮ ವಾಸನೆ, ಪೊಂಗಲ್ಲಾ? ಸಿಹಿ ಹುಗ್ಗಿ?... ಗೊತ್ತಾಗ್ತಾ ಇಲ್ಲ. ಆವಾಗ ನೆನಪಾಯಿತು. ಬೆಳಗ್ಗೆ ಅವಸರದಲ್ಲಿ ಏನನ್ನೂ ತಿಂದಿರಲಿಲ್ಲ ಎಂದು. ದೇವಸ್ಥಾನದ ಅಡುಗೆ ಮನೆಯಲ್ಲಿ ಯಾರೋ ಭಕ್ತಾದಿಗಳು ನೈವೇದ್ಯ ತಯಾರಿ ನಡೆಸಿದ್ದರು. ಅದೇ ನನ್ನ ತಪಸ್ಸನ್ನು ಭಂಗ ಮಾಡಿತ್ತು. ನಾನು ಎಷ್ಟು ಹೊತ್ತಾದರೂ ಉಸಿರು ಬಿಡದಿದ್ದನ್ನು ನೋಡಿ, ಗುರುಗಳ ಸಹಾಯಕ ಓಡಿಬಂದ. "ನೀವು ತುಂಬ ಎಳೀತಿದ್ದೀರಾ, ಮೊದಲು ಬಿಡಿ" ಎಂದು ಗೋಗರೆದ. ಅವನಿಗೇನು ಗೊತ್ತು, ನನ್ನ ಹೊಟ್ಟೆಯಲ್ಲಿನ ತಳಮಳ! ಅವತ್ತು ಹೇಗೋ ಮುಗಿಸಿ, ಇನ್ನು ಮುಂದೆ ಖಾಲಿ ಹೊಟ್ಟೇಲಿ ಬರಲ್ಲ, ಅಂತ ಶಪಥ ಮಾಡಿದೆ.

ನನ್ನ ಕಾಲ್ಗುಣನೋ ಏನೋ, ಈ ದೇಶದ ರಸ್ತೆಗಳು ನಾನು ಬಂದ ಮೇಲೆ ಬೆಂಗಳೂರು ರೋಡ್ಸ್ ತರಹ ಪಾರ್ಕಿಂಗ್ ಲಾಟ್ ಆಗ್ತಾಯಿದೆ. ಒಂದು ದಿನ ಉಸೈನ್ ಬೋಲ್ಟ್ ತರಹ ಓಡೋಡಿ ಬಂದು ಬಸ್ ಹತ್ತಿ, ಕಿಟಕಿ ಪಕ್ಕ ಕೂತೆ. ಬಸ್ ಮೈನ್ ರೋಡ್ ಹತ್ತಿದ ನಂತರ ಗೂಡ್ಸ್ ಗಾಡಿಯಾಯಿತು. ಆಫೀಸ್ಗೆ ತಡ ಅಗ್ತಿದೆ, ಮೀಟಿಂಗ್ ಬೇರೆ ಇದೆ, ಟೆನ್ಷನ್ ಆಯಿತು. 'ಬಡೇ ಅಚ್ಛೆ ಲಗ್ತೆ ಹೈ" ಹಿರೋಯಿನ್ ತರಹ ಅನುಲೋಮ-ವಿಲೋಮ ಮಾಡಕ್ಕೆ ಶುರುಮಾಡಿದೆ. ಪಕ್ಕದಲ್ಲಿ ಮಧ್ಯ ವಯಸ್ಸಿನ ಬಿಳಿ ಹೆಂಗಸು ಕೂತಿದ್ಳು. ಅಲರ್ಜಿ ಸೀಸನ್ನು, ಕೆಂಪು ಮೂಗು ಮಾಡಿಕೊಂಡು ಸೊರ್-ಬುರ್ ಅನ್ನುತ್ತಿದ್ದಳು.

ನನ್ನ ಕಡೆ ತಿರುಗಿ "ಎನು ಮಾಡ್ತಿದ್ದಿಯಾ, breathing exercise?" ಅಂದಳು. ಹೌದು ಎಂದೆ. ಡಿಟೈಲಾಗಿ ಅನುಲೋಮ-ವಿಲೋಮ ಎಂದರೆ, ಎಡ ಮೂಗಿನ ಹೊಳ್ಳೆಯಿಂದ ಉಸಿರನ್ನು ಎಳೆದು, ಬಲ ಮೂಗಿನ ಹೊಳ್ಳೆಯಿಂದ ಬಿಡುವುದು, ನಂತರ ಬಲದಿಂದ ಎಡಕ್ಕೆ ಎಂದು ಹೇಳಿದೆ. "ನಾನು ಮಾಡ್ತೀನಿ" ಎಂದಳು. ನೆಗಡಿ ಇದ್ದಾಗ ಬೇಡ ಅನ್ನೊವಷ್ಟರಲ್ಲಿ, ಶುರು ಮಾಡಿದಳು. ಎಡದಿಂದ ಎಳೆದು, ಬಲಕ್ಕೆ ಬಿಟ್ಟಳು,... ಡಿಚಕ್ಯೂಉಉಉ. ಅವಳ ಆ ಕಡೆ ಇದ್ದ ಕಪ್ಪು ಅಮೆರಿಕನ್ suit ಮೇಲೆ ಪ್ರಸಾದ!

"ಸಾರಿ"

"It's ok. Even I have allergies" ಎಂದ, ಒಳ್ಳೇ ಮನುಷ್ಯ. ಎಲ್ಲಾ ನಿನ್ನಿಂದಲ್ಲೇ ಅನ್ನುವ ಭಾವದಲ್ಲಿ ನನ್ನನ್ನು ನೋಡಿದಳು. ಸಹವಾಸ ಸಾಕು ಅಂತ, ಪ್ರಯಾಣದುದ್ದಕ್ಕೂ ಧ್ಯಾನಾವಸ್ಠೆಗೆ ಹೋದೆ.

"ಮನೇಲಿ ಗುಂಡಗೆ ಕೂತ್ಕೊಳೊ ಬದಲು, ಮಕ್ಕಳನ್ನು ಸಾಕರ್ ಫೀಲ್ಡ್‌ಗೆ ಕರಕೊಂಡು ಹೋಗಿ" ಅಂದಳು ಹೆಂಡ್ತಿ. Not a bad idea ಅನ್ನಿಸಿತು. ಫೀಲ್ಡ್‌ನಲ್ಲಿ ಮಕ್ಕಳಿಗೆ ಬಾಲು ಒದೆಯಲು ಹೇಳಿ ಬೆಂಚ್ ಮೇಲೆ ಕೂತೆ. ಸುತ್ತ ಹಸಿರುಹುಲ್ಲಿನ ಹಾಸಿಗೆ. ಪ್ರಾಣಯಾಮಕ್ಕೆ ಇದಕ್ಕಿಂತ ಪ್ರಶಸ್ತವಾದ ಜಾಗ ಇನ್ನೊಂದಿಲ್ಲ ಅನ್ನಿಸಿತು. ಚಕ್ಕಂಬಕ್ಕಳ ಹಾಕಿ ಕೂತು, ದೀರ್ಘ ಉಸಿರಾಟ ಶುರುಮಾಡಿದೆ. ಏನೋ ಘಾಟು ಘಾಟು ವಾಸನೆ. ಯಾವಾಗಲೂ ಹವಾ ನಿಯಂತ್ರಿತ ವಾತಾವರಣದಲ್ಲಿರುವ ನನಗೆ ಶುದ್ದ ಗಾಳಿ ಅಸ್ಟು ಪರಿಚಯವಿರಲ್ಲಿಲ್ಲ. ಒಳ್ಳೇ ಗಾಳಿ ಅಂದ್ರೆ ಹೀಗೇನೇ ಅಂದುಕೊಂಡು ಐದು ನಿಮಿಷ, ಕಷ್ಟವಾದರೂ ದೀರ್ಘ ಉಸಿರಾಟ ಮಾಡಿದೆ. ಮನೆಗೆ ಬಂದಮೇಲೆ ಒಂದೇ ಕೆಮ್ಮು. ಡಾಕ್ಟರ್ ಕಡೆಗೆ ಓಡಿದೆ. ಚೆಕ್ ಮಾಡಿ, lungs clear ಇಲ್ಲ, ಬರೀ ಕೆಮಿಕಲ್ಸ್ ಅಂದರು.

"ಏನು ನೀವು ಗೊಬ್ಬರದ ಫಾಕ್ಟ್ರಿನಲ್ಲಿ ಕೆಲಸ ಮಾಡ್ತಿರಾ?"

"ಇಲ್ಲಾ ಸಾರ್, ಸಾಪ್ಟ್ವೆರೂ."

"Interesting! ಸಾಪ್ಟ್ವೆರಲ್ಲಿ ಇಸ್ಟೊಂದು ಕೆಮಿಕಲ್ಸ್ exposure? Do you put insecticides on software bugs?"

"ಹೆ ಹೆ"

"Just kidding! ಎಲ್ಲಿ ಹೋಗಿದ್ರಿ?"

"ಸಾಕರ್ ಫೀಲ್ದ್, just deep breath ಮಾಡಿದೆ"

"ಪೆದ್ದು, ಯಾರಾದ್ರೂ ಸಾಕರ್ ಫೀಲ್ಡಲ್ಲಿ, ಈ ಸಮಯದಲ್ಲಿ ಉಸಿರಾಡ್ತಾರಾ? ಬರೀ ಕಳೆನಾಶಕ ಹಾಕಿರ್ತಾರೆ", ಅಂದರು.

ಇಸ್ಟೆಲ್ಲಾ ಆದಮೇಲೆ, ನಾನು ಮನೇಲಿ ಮತ್ತು ಅರೆ ತುಂಬಿದ ಹೊಟ್ಟೆಯಲ್ಲಿ ದೇವಸ್ಥಾನದಲ್ಲಿ ಬಿಟ್ಟರೆ, ಎಲ್ಲೂ ಜೋರಾಗಿ ಉಸಿರಾಡಲ್ಲ.

English summary
Yoga or pranayama is a wonderful thing to do everyday in the morning to keep our health in good condition. But, should pranayama be done wherever you like? Charukesha from America narrates funny incidents he came across when pranayama done not in the place where it has to be done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X