ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಾಂತರ ದೇಶಾಂತರ ಅವಾಂತರ

|
Google Oneindia Kannada News

Mahesh Deshpande
ಬಿಜಾಪುರದ ಹುಡ್ಗ ಬೆಂಗಳೂರು ಪ್ಯಾಟಿ ಹುಡುಗೀನ ಲಗ್ನ ಆದ್ರ ಏನಾಗ್ತದ? ಖರೆ ಹೇಳಬೇಕಂದ್ರೆ ಏನೂ ಆಗಂಗಿಲ್ರೀ. ಇಂಟರ್ ನೆಟ್ ನಾಗ ಬಿಜಾಪುರ ಮತ್ತು ಬೆಂಗಳೂರು ಮಂದಿ ಭೆಟ್ಟಿ ಆಗಿ ಲೇಖನ ಓದ್ತಾರಾ ಮತ್ತು ಓದಿ ಚೈನಿ ಮಾಡ್ತಾರಾ !

*ಮಹೇಶ ದೇಶಪಾಂಡೆ

"ಹೆಲ್ಲೊ ಮಹೇಶವರೇ ಚೆನ್ನಾಗಿದ್ದೀರಾ...." ಅಂತ ಯಾರಾದ್ರು ಫೋನಲ್ಲಿ ಕೇಳಿದ್ರ ಟಕ್ ಅಂತ ನೆನಪಾಗ್ತದ 'ನಾನು ಬೆಂಗಳೂರಿನ ಹುಡಗೀನ ಮದೀವಿ ಆಗೀನಿ" ಅಂತ. ಅದ್ಯಾಕ ಜನ ನನ್ನ ಜೊತೆ ಹಿಂಗ ಮಾತಾಡ್ಲಿಗತ್ತಾರ? ನನ್ನ ಭಾಷೆ ಬದ್ಲಾಗೆದಂತ ನನ್ನ ಕಾಲು ಎಳೀಲಿಕತ್ತಾರೋ ಅಥವಾ ಖರೇನ ನನ್ನ ಭಾಷೆ ಬದ್ಲಾಗೇದೋ ಗೊತ್ತಾಗ್ಲಿಲ್ಲ. ನಿಜ ಕಣ್ರೀ, ನಾನು ಮಾತಾಡೂ ಭಾಷೆ ಶೈಲಿ ನಂಗೇ ಗೊತ್ತಾಗ್ದಂಗೆ ಚೇಂಜ್ ಆಗೋಗಿಬಿಟ್ಟೇದ್ರೀ ! ಈ ವಾಕ್ಯ ನೋಡಿದ್ರ ನಾನು ಈಗ ಹೆಂಗ ಮಾತಡ್ಲಿಕ್ಕತ್ತೇನಿ, ನನ್ನ ಭಾಷಾ ಹೆಂಗ ಬದ್ಲಾಗೇವ ಅಂತ ನಿಮ್ಗೇನ ಭಾಳ ಹೇಳುದು ಬೇಕಾಗಿಲ್ಲ ! ನಾನು ಲಗ್ನಕ್ಕಿಂತ ಮೊದ್ಲ ಅನಕೊಂಡಿದ್ದೆ, ಲಗ್ನ ಆದ್ಮ್ಯಾಲ್ ವಿದ್ಯಾಗ್ ನಾವು ಮಾತಾಡೊ ಶೈಲಿ ಕಲಸಿದ್ರಾತು ಅಂತ, ಆದ್ರ ನಾವೂ ಸ್ವಲ್ಪ 'ಭಾಷಾಂತರ" ಆಗ್ಲೇಬೇಕಾಯ್ತು ! ಕೆಲವೊಂದು ಕೆಳಗಿನ ಸನ್ನಿವೇಷ ನೋಡಿದ್ರ ನಿಮ್ಗೆ ಗೊತ್ತಾಗ್ತದ ಯಾಕಂತ.


ಲಗ್ನಾಗಿ ಸ್ವಲ್ಪ ದಿನದಾಗ ವಿದ್ಯಾ ಅಡುಗೆ ಮನೆ ಸಂಭಾಷಣೆಯಲ್ಲಿ ಸೇರಕೊಂಡ್ಲು. ನಮ್ಮವ್ವ ನಂಗೆ ಹೇಳಿದ್ಳು 'ಬಜಾರಕ್ ಹೋಗಿ ಕಾಯಪಲ್ಯ ತೊಗೊಂಡು ಬಾ" ಅಂತ. ಮನೆ ಹೊರಗಡೆಯಿಂದ ಎಂದೂ ಅಡುಗೆ ತರದ ಸಂಸ್ಕಾರದಲ್ಲಿ ಬೆಳೆದು ಬಂದ ವಿದ್ಯಾಗ ಚೂರು ತಲೆ ಬಿಸಿ ಆಯ್ತು ! ಮೂಗು ದೊಡ್ಡದು ಮಾಡಿ 'ಅಮ್ಮ ಪಲ್ಯ ಹೊರಗಡೆಯಿಂದ ತರೋದು ಬೇಡ ನಾನೇ ಮಾಡ್ತೀನಿ ಪಲ್ಯ" ಅಂತ ಅಂದ್ಲು. ಅವಾಗ, ನಮ್ಮವ್ವಗ ಏನೂ ತಿಳಿಯದಂಗಾಯ್ತು ! ಅವರು ಸುಮ್ಮನೆ ನಿಂತರು. 'ಅಮ್ಮ, ಯಾಕೆ ಹೀಗೆ ನಿಂತಿದಾರೇ.. ನನಗೆ ಪಲ್ಯ ಮಾಡೋಕೆ ಬರಲ್ಲ ಅಂತಾನೊ ಅಥವಾ ನಾನೇನಾದ್ರೂ ತಪ್ಪು ಹೇಳಿದ್ನಾ" ಅಂತ ವಿದ್ಯಾಗ ಪಾಪ ಹೆದರ್ಕಿ ! ನಾನು ಇಬ್ಬರ ನಡುವ ಹೋಗಿ ಹೇಳ್ದೆ 'ವಿದ್ಯಾ, ನಮ್ಮಮ್ಮ ನಂಗೆ ತರಕಾರಿ ತರೋಕೆ ಹೇಳಿದಾರೆ ಪಲ್ಯ ಅಲ್ಲ. ಅವ್ವ, ಇವರು ಕಾಯಪಲ್ಯಕ್ಕ ತರಕಾರಿ ಅಂತಾರ, ಅಡುಗಿ ಮಾಡಿದ್ಮ್ಯಾಲ ಅಗೂದಕ್ಕ ಅಷ್ಟ ಪಲ್ಯಾ ಅಂತಾರ"ಆಗ ಇಬ್ರು ನಕ್ರು ಮತ್ತ ಇಬ್ರ ಮೂಗು ತಮ್ಮ ಜಗಾಕ ಹೋದ್ವು!

ಅವತ್ತೊಂದಿವ್ಸ ನಮ್ಮವ್ವ ಹೊರಗ ಹೋಗಿದ್ಲು. ನಾನು, ವಿದ್ಯಾ ಮತ್ತ ನಮ್ಮ ಅಪ್ಪ ಅಷ್ಟೆ ಮನೇಯಲಿದ್ವಿ. ಹಸಿವಿ ಅಗೇದಂತ ವಿದ್ಯಾ ತಿನ್ಲಿಕ್ಕೆ ಚುರುಮುರಿ ಮಾಡ್ಲಿಗತ್ತಿದ್ಲು, ಆಗ ನಂಗ ಕೇಳಿದ್ಲು "ಕಡ್ಲೆ ಬೀಜ ಎಲ್ಲಿ? ಅರ್ಜಂಟ್ ಹುಡುಕಿ ಕೊಡೋದಕ್ಕೆ ಆಗತ್ತ" ಅಂತ. ಯಾವಾಗೋ ಒಂದ್ಸಾರಿ ಅಡಗಿ ಮನೀಗೆ ಹೋಗೊ ನಾನು ಹುಡಕೋಕೆ ಶುರು ಮಾಡದೆ, ಲಗೂ ಸಿಗಲಿಲ್ಲ ಅಂತ ಕೇಳದೆ "ವಿದ್ಯಾ, ಚುರಮುರಿಗೆ ಕಡ್ಲೆ ಬೇಳೆ ಯಾಕೆ ಬೇಕು?" ಅಂತ. ಗಡಿಬಿಡಿ ಒಳಗ ಇದ್ದ ಅಕಿ ನನ್ನ ಪ್ರಶ್ನೆ ಸರಿಯಾಗಿ ಕೇಳಿಸಿಕೊಳ್ಳದೆ "ಸಿಕ್ಕರೆ ಒಳ್ಳೆಯದು, ಇಲ್ಲಾದ್ರೂ ಓಕೆ!" ಅಂದ್ಲು. ಪಾಪ ಇಷ್ಟ ಕೇಳತಾಳ ಅಂತ ನಮ್ಮ ತಂದೆಗೆ ಹುಡಕ್ಲಿಕ್ಕೆ ಹೇಳದೆ! ಅವರು ಕೊಟ್ರು "ವಿದ್ಯಾ, ತುಗೋ ಕಡ್ಲಿ ಬ್ಯಾಳಿ" ಅಂತ. ಅದನ್ನ ನೋಡಿದ್ದ ತಕ್ಷ್ಣ ವಿದ್ಯಾ ಅಂದ್ಲು "ಅಪ್ಪಾ, ಇದು ಅಲ್ಲ, ನನಗೆ ಕಡ್ಲೆ ಬೀಜ ಬೇಕು" ಅಂತ. ಇಬ್ಬರಿಗೂ ಅರ್ಥ ಆಗಲಿಲ್ಲ, ಹಂಗೆ ನಿಂತ್ವೀ! ನಮ್ಮ ಅಪ್ಪ ಕೇಳಿದ್ರು "ಶೇಂಗಾ ಬೇಕೇನು ಮತ್ತ ನಿಂಗ" ಆಗ ಅಕೀ ಹಾಂ ಹಾಂ ಅದೇ ಬೇಕು ಅಂದಾಗ ಬಿಜಾಪುರ-ಬೆಂಗಳೂರು ಭಾಷಾ ಡಿಕ್ಷನರಿ ಅವಶ್ಯದ ಅನಸ್ತು.

ಕಡೀ ಶನಿವಾರ ಬಿಜಾಪುರಕ್ಕ ಹೋಗಿದ್ವಿ. ಬಸ್‌ಸ್ಟ್ಯಾಂಡ ಹತ್ರ ಇಳಕೊಂಡು ಮನೀಗೆ ಅಟೊದಾಗ ಹೊಂಟಿದ್ವಿ. ಹಾದ್ಯಾಗ 'ಜೋಡ ಗುಮ್ಮಟ" ಅಂತ ಐತಿಹಾಸಿಕ ಗುಮ್ಮಟಗೋಳು ಕಾಣಸ್ತಾವ. ಅಂದ್ರ, ಒಂದೆ ತರಹ ಇರೋ ಎರಡು ಗುಮ್ಮಟ ಕಾಣಸ್ತಾವ. ಅದಕ್ಕ 'ಜೋಡ ಗುಮ್ಮಟ" ಅಂತ ಹೆಸರು. ಅದನ್ನ ನೋಡಿ ವಿದ್ಯಾ ಕೇಳಿದ್ಲು ಏನಿದು ಅಂತ. ನಾ ಹೇಳ್ದೆ ಇದರ ಹೆಸರು 'ಜೋಡ ಗುಮ್ಮಟ" ಅಂತ. ಅಂದ್ರೇನು ಅಂತ ಕೇಳಿದ್ಲು. ನಾನು ಸರಿಯಾಗಿ ಹೇಳ್ದೆ ಅವಳಿಗೆ ಪ್ರಶ್ನೆ ಕೇಳ್ದೆ 'ಜೋಡು ಅಂದ್ರೇನು?" ಆಗ ಅವಳು 'ಚಪ್ಪಲಿ" ಅಂತ ಉತ್ತರ ಕೊಟ್ಟ ತಕ್ಷಣ ನಗುದ್ರಾಗ ನಾನೆ ಸರಿಯಾದ ಉತ್ತರ ಮರತಿದ್ದೆ !

ಒಂದಿನಾ ನಮ್ಮಣ್ಣ ಸ್ನಾನಾ ಮಾಡಿ ಪಂಜಾ ಎಲ್ಲಿ ಅದ ಅಂತ ಕೇಳ್ದ. ನಾನು ಹೇಳ್ದೆ ಅಲ್ಲೆ ನಿನ್ನ ಖೋಲ್ಯಾಗ ಇಟ್ಟಿರಬೇಕು ನೋಡು ಅಂದೆ. ಅಂವ ನೋಡ್ಕೊಂಡು ಬಂದವ್ನೆ "ಅಲ್ಲಿಲ್ಲಪಾ .." ಅಂದ. ವಿದ್ಯಾ ನಮ್ಮ ಮಾತನಾಗ ನಡುವ ಬಂದು "ನಿಮ್ಮ ರೂಮಲ್ಲಿ ಇದೇ ನೋಡಿ, ನಾನೆ ಪಂಚೆ ಮಡಚಿ ಇಟ್ಟಿದ್ದೆ" ಅಂದ್ಲು. ಮತ್ತ ನೋಡಿ ಬಂದ ಮತ್ತೆ ಸಿಗದೆ ಕಂಗಾಲಾಗಿದ್ದ. ಆಗ ನಂಗೆ ಇಬ್ರೂ ಸರೀ ಇದಾರೆ ಅಂತ ಗೊತ್ತಾಯ್ತು. ನಮ್ಮಣ್ಣಗ ಹೇಳ್ದೆ "ಅವರು ಬಿಳಿ ಲುಂಗಿಗೆ ಪಂಚೆ ಅಂತಾರ. ಅದು ಮಡೀಚಿ ಇಟ್ಟಾಳ ಅಕಿ, ನಿನ್ನ ಪಂಜಾ ನಮ್ಮ ಖೋಲ್ಯಾಗ ಅದ ಕೊಡ್ತೀನಿ" ಅಮ್ಯಾಲ ವಿದ್ಯಾಗ ಹೇಳ್ದೆ "ನಮ್ಮಣ್ಣ ಚೌಕಿ ಪಂಚೆ ಹುಡಕ್ತಿದಾನೆ ಅಂಡ ನಾಟ್ ಜಸ್ಟ ಪಂಚೆ" ಅಂದೆ. ಆಮ್ಯಾಲ್ ಒಂದೈದ ನಿಮೆಷ ಅದ್ಮೇಲೆ ನಾನೊಬ್ನೆ ನಗತಾ ಇದ್ದೆ! ನಾನು 'ಬಿಳಿ ಲುಂಗಿಗೆ" ಪಂಜಾ ಅನ್ಕೊಂಡು ನಮ್ಮಣ್ಣನಿಗೆ ಅವನ ಖೋಲ್ಯಾಗದ ಅಂತ ಹೇಳಿದ್ದೆ. ನಂಗೆ ಗೊತಾಗ್ದಂಗೆ ನನ್ನಲ್ಲಿ ಆದ ಬದಲಾವಣೆ ಅರತು ನಗತಾ ಇದ್ದೆ.

ಹಿಂಗ ಪ್ರತಿದಿವ್ಸ ಒಂದಲ್ಲ ಒಂದು ಮಜಾ ಆಗತಿರ್ತಾವ. ಉದಾ: ನಾನು 'ಸೋಸುದು" ಅಂದ್ರ ವಿದ್ಯಾ 'ಜರಡೆ" ಅಂತಾಳ, ನಂಗ 'ಚಾಳಣಿ" ಆದ್ರ ಅಕೀಗೆ ಅದು 'ತೂತು ಬಟ್ಲ". ಈಗೀಗ ನಮ್ಮ ವೈನಿ 'ಅತ್ತಿಗೆ" ಅನಸ್ಕೊಳ್ಳಿಗತ್ತಾರ ನನ್ನ ಕಡೆ. ಮಲಗುವಾಗ ಹೊತ್ತಕೊಳ್ಳುದು 'ಚಾದರ" ಹೋಗಿ 'ಹೊದಿಕೆ" ಆಗೇದ. ಮೊದ್ಲ ಮಲಗುವಾಗ ಹಾಸ್ಕೊಳ್ಳೊ ಎಲ್ಲದಕ್ಕೂ 'ಹಾಸಿಗೆ" ಅನ್ನೋದು ಬಿಟ್ಟು ಈಗ 'ಗಾದಿಗೆ" ಅಷ್ಟ 'ಹಾಸಿಗೆ" ಅನ್ಲಿಗತ್ತೀನಿ. ಒಂದು-ಎರಡು ಎಂಬ ಎರಡ ಮುಖ್ಯ ಶಬ್ದಗಳ ಬದ್ಲಿ ಈಗ 'ಲೂ" ಒಂದೆ ಸಾಕು.

ನಾನು ಮತ್ತು ವಿದ್ಯಾ 'ಭಾಷಾಂತರ" ಆದ್ರ ಎಷ್ಟೊಂದು ಬದಲಾವಣೆ ಆಗೇದ, 'ಮತಾಂತರ" ಅಥವ 'ದೇಶಾಂತರ" ಆಗಿದ್ರ ಈ ಲೇಖನ ಬದ್ಲಿ ಈ ವರ್ಷದ ಕನ್ನಡ ಇ ಮ್ಯಾಗ್ 'ಸ್ಪಂದನ"ಪತ್ರಿಕೆ ನಮಗೆ ಪೂರ್ತಿ ಮೀಸಲಾಗಿಡಬೇಕಿತ್ತು ಅನಸ್ತದ. ಏನಂತೀರಿ?

=
ಲೇಖಕರ ಬಗ್ಗೆ : ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುವ ಮಹೇಶ ದೇಶಪಾಂಡೆ ಬೆಂಗಳೂರಿನ ಇನ್ಫಿನೀಯಾನ್ ಟೆಕ್ನಾಲಾಜಿಯಲ್ಲಿ ಸಾಫ್ಟ್‌ವೇರ್ ತಂತ್ರಜ್ಞ. ಬೆಂಗಳೂರಿನಲ್ಲಿ ಮನೆ ಮಠ ಕಟ್ಟಿಕೊಂಡು ತುಂಬಾ ದಿನವಾದರೂ ಇನ್ನೂ ಪಕ್ಕಾ ಬಿಜಾಪುರದವರಂತೆ ಮಾತಿನಲ್ಲಿ ಅದೇ ಆತ್ಮೀಯತೆ ಇದೆ.

ಇದೇ ವರುಷ ಏಪ್ರಿಲ್ 1ರಂದು, ಸಾರಿ ಏಪ್ರಿಲ್ 30ರಂದು ಇವರ ಮದುವೆ ಶ್ರೀಮತಿ ವಿದ್ಯಾಳ ಜೊತೆಗೆ ಬೆಂಗಳೂರಿನಲ್ಲಿ ಆಯಿತು. ಮದುವೆಯ ಎರಡೂ ದಿನ ಕನ್ನಡ ವೇದಿಕೆಯ ಬಳಗದವರು ಸೇರಿ ಸಂಭ್ರಮಪಟ್ಟರು. ಈ ಮದುವೆಯ ಪರಿಣಾಮವೇ ಈ ಲೇಖನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X