ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕಪುರುಷ ಬಿಕೆಎಸ್ ಐಯ್ಯಂಗಾರ್ - ಒಂದು ನೆನಪು

By ಡಾ. ಜೀವಿ ಕುಲಕರ್ಣಿ
|
Google Oneindia Kannada News

ಬದುಕಿದಾಗ ದಂತಕತೆಯಾದವರು, ಪವಾಡ-ಪುರುಷರಾದವರು,
ಯೋಗಪಟು ಯೋಗಾಚಾರ್ಯ ಶ್ರೀ ಬಿ.ಕೆ.ಸುಂದರ ಐಯ್ಯಂಗಾರರು.
ಇವರು ಪತಂಜಲಿಯ ಅವತಾರವೇಂದೇ ಭಾವಿಸಿದವರು ನಾವು, ಶಿಷ್ಯರು,
ಇವರಿತ್ತ ಜ್ಞಾನದ ಬುತ್ತಿಯನ್ನು ಉಂಡು ಧನ್ಯತೆ ಸಾರ್ಥಕತೆ ಪಡೆದವರು (-ಜೀವಿ)

ಈ ಶತಮಾನದ ಶ್ರೇಷ್ಠ ಯೋಗಪಟು, ಯೋಗಶಿಕ್ಷಕ, ಬೆಳ್ಳೂರು ಕೃಷ್ಣಮಾಚಾರ ಸುಂದರರಾಜ ಐಯ್ಯಂಗಾರರು ತೊಂಭತ್ತಾರು ವರ್ಷಗಳ ಸಮೃದ್ಧ ಯೋಗ-ಜೀವನವನ್ನು ನಡೆಸಿ 20 ಅಗಸ್ಟ್ 2014ರಂದು ಸ್ವರ್ಗಸ್ಥರಾದರು. ಅಚ್ಚ ಕನ್ನಡಿಗರಾದ ಐಯ್ಯಂಗಾರರು ಈ ಶತಮಾನದ ಯೋಗಶಿಕ್ಷಕರಲ್ಲಿ ಪವಾಡ-ಪುರುಷರಾಗಿದ್ದರು.

ಸುಂದರ ಐಯ್ಯಂಗಾರರು 14 ಡಿಸೆಂಬರ್ 1918ರಂದು ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಜನಿಸಿದರು. ಕನ್ನಡದ ಕಣ್ವನೆಂದು ಹೆಸರು ಗಳಿಸಿದ ಬಿ.ಎಮ್.ಶ್ರೀಕಂಠಯ್ಯ ಇದೇ ಊರವರು. ಸುಂದರ ಐಯ್ಯಂಗಾರರಿಗೆ ಬಿ.ಎಂ.ಶ್ರೀ.ಅವರ ಬಗ್ಗೆ ಅಪಾರ ಆದರವಿತ್ತು. ಅವರ ಸ್ಮಾರಕವನ್ನು ಮಾಡುವ ಯೋಜನೆಯ ಬಗ್ಗೆ ನನಗೆ ಹೇಳಿದ್ದರು. ಇವರ ತಂದೆ ಕೃಷ್ಣಮಾಚಾರ್ ಅವರು ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇವರು 9 ವರ್ಷದ ಬಾಲಕನಾಗಿದ್ದಾಗ ತಂದೆಯನ್ನು ಕಳೆದುಕೊಂಡು ಕಡುಬಡತನದಲ್ಲಿ ಸಂಬಂಧಿಕರ ಮನೆಯಲ್ಲಿಯೇ ಬೆಳೆದರು. ಬಾಲ್ಯದಲ್ಲಿ ಅನೇಕ ರೋಗಗಳ ತವರುಮನೆ ತಮ್ಮ ದೇಹವಾಗಿತ್ತು ಎಂದು ಐಯ್ಯಂಗಾರರೇ ಬರೆದಿದ್ದಾರೆ. ಇನ್‌ಫ್ಲುಯೆಂಝಾ, ವಿಷಮಜ್ವರ, ಮಲೇರಿಯಾ, ಹಾಗೂ ಕ್ಷಯರೋಗ ಎಲ್ಲಾ ಇವರನ್ನು ಆಶ್ರಯಿಸಿದ್ದವಂತೆ.

ಇವರ ಶಿಕ್ಷಣ ಬೆಂಗಳೂರು ಮತ್ತು ಮೈಸೂರಿನಲ್ಲಾಯಿತು, ಮೆಟ್ರಿಕ್ ವರೆಗೆ ಮಾತ್ರ. ತಮ್ಮ ಭಾವಮೈದುನ ಟಿ.ಕೃಷ್ಣಮಾಚಾರಿಯವರಲ್ಲಿ ಎರಡು ವರ್ಷ ಯೋಗಾಭ್ಯಾಸ ಮಾಡಿದರು. ಅವರ ಯೋಗಗುರು ಟಿ.ಕೃಷ್ಣಮಾಚಾರಿ ಅವರು ಹಿಮಾಲಯದಲ್ಲಿ ಹಲವಾರು ವರ್ಷ ಯೋಗಾಭ್ಯಾಸ ಮಾಡಿ ಅಲ್ಲಿಯ ತಮ್ಮ ಗುರುಗಳ ಆಜ್ಞೆಯಂತೆ ದಕ್ಷಿಣಭಾರತದಲ್ಲಿ ಯೋಗಪ್ರಚಾರಮಾಡಲು ಬಂದರು. ಮೈಸೂರು ಒಡೆಯರ ಯೋಗಶಾಲೆಯಲ್ಲಿ ಪ್ರಧಾನ ಯೋಗಶಿಕ್ಷಕರಾದರು. ಅವರ ಆರೈಕೆ ಹಾಗೂ ಮಾರ್ಗದರ್ಶನದಲ್ಲಿ ಸುಂದರ ಐಯ್ಯಂಗಾರರು ಯೋಗಮಾರ್ಗದಿಂದಲೇ ತಮ್ಮ ಎಲ್ಲ ರೋಗಗಳಿಗೆ ಪರಿಹಾರ ಕಂಡುಕೊಂಡರು.

BSK Iyengar should get Bharat Ratna

ಸುಂದರರು ಹದಿನೆಂಟು ವಯಸ್ಸಿನ ಯುವಕರಾಗಿದ್ದಾಗ ಯೋಗಾಸನದ ಪ್ರಚಾರಕ್ಕೆ ಹಾಗೂ ಪ್ರದರ್ಶನಕ್ಕೆ ಟಿ.ಕೃಷ್ಣಮಾಚಾರಿಯವರೊಂದಿಗೆ ಧಾರವಾಡಕ್ಕೆ ಬಂದಿದ್ದರು(1936). ಅದು ಅವರ ಜೀವನದ ದಿಶೆಯನ್ನೇ ಬದಲು ಮಾಡಿತು. ಕೃಷ್ಣಮಾಚಾರಿಯವರು ಮೈಸೂರಿಗೆ ಮರಳಿದರೂ ಐಯ್ಯಂಗಾರರು ಮಾತ್ರ ಧಾರವಾಡದಲ್ಲೇ ಉಳಿದರು. ಇದು ಆಕಸ್ಮಿಕವಾಗಿದ್ದರೂ ದೈವ ನಿಯೋಜಿನವೂ ಆಗಿತ್ತು.

ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪ್ರೊ.ದೇವಲಾಲಕರ್, ಪ್ರೊ. ಧೂಪೇಶ್ವರಕರ್, ಪ್ರೊ. ಮೀರಚೆಂದಾನಿ, ಪ್ರೊ.ಜಠಾರ್ ಮೊದಲಾದವರಿಗೆ ಇವರು ಯೋಗ ಶಿಕ್ಷಣ ನೀಡಿದರು. ಹುಬ್ಬಳ್ಳಿಯ ಭಾರತ ಟೆಕ್ಸ್‌ಟೈಲ್ ಮಿಲ್ ಕೆಲಸಗಾರರೂ ಯೋಗ ಕಲಿಯಲು ಆಸಕ್ತಿ ತೋರಿದರು. ಹೀಗಾಗಿ ಹುಬ್ಬಳ್ಳಿ-ಧಾರವಾಡಗಳಲ್ಲಿ ಯೋಗಕ್ಲಾಸ್ ತೆರೆದರು. ಅಂದಿನ ಅನುಭವ ಐಯ್ಯಂಗಾರರ ಬಾಯಿಯಿಂದಲೇ ಕೇಳಬೇಕು. ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಳಿಯಲ್ಲಿ ಒಂದು ಬಾಡಿಗೆಯ ರೂಮ್ ಪಡೆದಿದ್ದರು. ನಸುಕಿನ ಟ್ರೇನ್ ಹಿಡಿದು ಧಾರವಾಡಕ್ಕೆ ಬರುತ್ತಿದ್ದರು.

ಮುಂಜಾನೆ 9ರಿಂದ 10ರವರೆಗೆ ಯೋಗ ಕ್ಲಾಸು. ನಂತರ ಒಂದು ಹೊಟೇಲಿನಲ್ಲಿ ಊಟ. ಮರಳುವಾಗ ಟ್ರೇನಿಗೆ 2 ಆಣೆ (ಒಂದು ರೂಪಾಯಿಯಲ್ಲಿ 16 ಆಣೆ ಇರುತ್ತಿದ್ದ ಕಾಲವದು.) ಕೊಡಬೇಕಾಗುತ್ತಿತ್ತು. ಅದನ್ನು ಉಳಿಸಲು ಹುಬ್ಬಳ್ಳಿಗೆ ಕಾಲು ನಡಿಗೆಯ ಸವಾರಿ ಮಾಡುತ್ತಿದ್ದರು (20 ಕಿಲೋಮೀಟರ್). ಹುಬ್ಬಳ್ಳಿಯಲ್ಲಿಯ ಭಾರತ ಟೈಕ್ಸ್‌ಟೈಲ್ ಮಿಲ್ ಕೆಲಸಗಾರರಿಗೆ ಸಂಜೆ 6 ಗಂಟೆಗೆ ಯೋಗ ಕ್ಲಾಸು ನಡೆಸುತ್ತಿದ್ದರು. ಹೀಗೆ ಆರು ತಿಂಗಳು ಕಳೆದವು. ಇವು ಅವರ ಕಷ್ಟದ ದಿನಗಳಾಗಿದ್ದವು. ಇವರ ಯೋಗಾಸನ ಪ್ರದರ್ಶನವನ್ನು ಬೆಳಗಾಂವಿಯಲ್ಲಿ ನೋಡಿದ ಡಾ. ವಿ.ಬಿ.ಗೋಖಲೆ ಎಂಬ ಸಿವಿಲ್ ಸರ್ಜನ್ ಅವರು, ತಾವು ನಿವೃತ್ತರಾಗಿ ಪುಣೆಗೆ ಹೋಗಿ ವಾಸಿಸತೊಡಗಿದ್ದರು. ಅವರು ಐಯ್ಯಂಗಾರರಿಗೆ ಪುಣೆಗೆ ಬರಲು ಆಮಂತ್ರಣ ಕಳಿಸಿದರು. ಪುಣೆಯಲ್ಲಾದರೂ ತಮ್ಮ ದೈವ ತೆರೆದೀತೇ ಎಂದು ಐಯ್ಯಂಗಾರರು ಪುಣೆಗೆ ಹೊರಡಲು ಸಿದ್ಧರಾದರು. ತಾವು ದಿನಾಲೂ ಹುಬ್ಬಳ್ಳಿಯವರೆಗೆ ನಡೆದು ಹೋಗಿ ಎರಡಾಣೆ ಉಳಿಸಿ ಇಟ್ಟಿದ್ದ ಡಬ್ಬಿಯನ್ನು ತೆರೆದಾಗ ಅದರಲ್ಲಿ ಪುಣೆಯ ವರೆಗೆ ಹೋಗಲು ಟಿಕೆಟ್ ಕೊಳ್ಳಲು ಸಾಕಾಗುವಷ್ಟೇ ಹಣವಿತ್ತು. ಉಟ್ಟ ಒಂದೇ ಧೋತರ(ಪಂಚೆ), ಒಂದು ಅಂಗಿಯ(ಶರ್ಟ್) ಮೇಲೆ ಪುಣೆಗೆ ನಡೆದರು. (ಔಷಧಿಯಿಲ್ಲದೆ ಬದುಕಲು ಕಲಿಯಿರಿ, ಜೀವಿ ಪುಟ,106-7).

1937 ಸೆಪ್ಟೆಂಬರ್ ಮೊದಲನೆಯ ತಾರೀಖಿಗೆ ಐಯ್ಯಂಗಾರರ ಯೋಗ ಕ್ಲಾಸು ಡೆಕ್ಕನ್ ಜಮಖಾನಾದಲ್ಲಿ ಪ್ರಾರಂಭವಾಯ್ತು. ಮೊದಮೊದಲು ಕನ್ನಡಿಗನೆಂಬ ತಿರಸ್ಕಾರವಿತ್ತು. ಮೂರು ವರ್ಷಗಳಲ್ಲಿ 600 ವಿದ್ಯಾರ್ಥಿಗಳನ್ನು ಯೋಗಪಟುಗಳನ್ನಾಗಿಸಿದರು. ಇವರ ಖ್ಯಾತಿ ಸಹಿಸದೇ ಕೆಲವರು ಇವರ ಕ್ಲಾಸಿಗೆ ಬೆಂಕಿಯಿಟ್ಟು ಇವರು ಉಪಯೋಗಿಸುತ್ತಿದ್ದ ಸಾಧನ, ಜಮಖಾನೆ, ಲೋಡು, ಎಲ್ಲಾ ಸುಟ್ಟುಬಿಟ್ಟರು (1941). ಇಷ್ಟರಲ್ಲಿ ಇಲ್ಲಿಯವರೆಗೆ ದೊರೆಯುತ್ತಿದ್ದ ಡಾ. ಗೋಖಲೆಯವರ ಸಹಾಯವೂ ನಿಂತು ಹೋಗಿತ್ತು. ಆ ಕಾಲದಲ್ಲಿ 2 ಆಣೆಗೆ ಒಂದು ರೈಸ್‌ಪ್ಲೇಟ್ ದೊರೆಯುತ್ತಿತ್ತು! ಇಂದಿಗಿಂತ ಹೆಚ್ಚು ಸಮೃದ್ಧವಾಗಿದ್ದ ದಿನಗಳಲ್ಲೂ ಎಷ್ಟೋ ದಿನ ಉಪವಾಸವಿರುವ, ಕೇವಲ ಒಂದೆರಡು ತಂಬಿಗೆ ನೀರು ಕುಡಿದೇ ಜೀವಿಸುವ ದಿನಗಳು ಐಯ್ಯಂಗಾರರನ್ನು ಎದುರಿಸಿದವು. 1943ರಲ್ಲಿ ರಮಾಮಣಿ ಎಂಬ ಹದಿನಾರು ವರ್ಷದ ಬಾಲಿಕೆಯೊಡನೆ ಇವರ ವಿವಾಹವಾಯ್ತು. ಐದು ಹೆಣ್ಣು ಮಕ್ಕಳು (ಗೀತಾ, ಸುನೀತಾ, ಸುಚೀತಾ, ಸುನೀಲಾ, ಸವಿತಾ) ಒಬ್ಬ ಗಂಡು ಮಗನನ್ನು(ಪ್ರಶಾಂತ) ಪಡೆದರು.

1952ರಲ್ಲಿ ಇವರ ಜೀವನದಲ್ಲಿ ಸುವರ್ಣದ ಬಾಗಿಲು ತೆರೆಯಿತು. ಯಹೂದಿ ಮೆನ್ಯೂಹಿನ್ ಎಂಬ ಜಗತ್ಪ್ರಸಿದ್ಧ ಪಿಟೀಲು ವಾದಕರು ಭಾರತಕ್ಕೆ ಬಂದಿದ್ದರು. ಅವರು ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅವರ ವಿಶೇಷ ಅತಿಥಿಯಾಗಿದ್ದರು. ಅವರ ಕಾರ್ಯಕ್ರಮ ಮುಂಬೈಯಲ್ಲಿ ನಡೆದಾಗ ಅವರ ಗೋಣು ಹಾಗು ಬಲಭುಜದ ನೋವಿನಿಂದ ಬಳಲುತ್ತಿದ್ದರು. ಪುಣೆಯಲ್ಲಿರುವ ಯೋಗಪಟು ಐಯ್ಯಂಗಾರರನ್ನು ಕಾಣಲು ಯಹೂದಿ ಮೆನ್ಯೂಹಿನ್ ಅವರಿಗೆ ಒಬ್ಬ ಐ.ಎ.ಎಸ್. ಅಧಿಕಾರಿ ಸೂಚಿಸಿದ. ಮೆನ್ಯೂಹಿನ್ ಪುಣೆಗೆ ಬಂದು ಐಯ್ಯಂಗಾರರನ್ನು ಕಂಡರು. ಐಯ್ಯಂಗಾರರು ಅವರಿಗೆ ಯೋಗಾಸನಗಳನ್ನು ಕಲಿಸಿ ಅವರನ್ನು ರೋಗಮುಕ್ತಗೊಳಿಸಿದರು.

BSK Iyengar should get Bharat Ratna

ಎರಡು ವರ್ಷಗಳ ನಂತರ ಮೆನ್ಯೂಹಿನ್ ಭಾರತಕ್ಕೆ ಬಂದಾಗ ಐಯ್ಯಂಗಾರರನ್ನು ಕಂಡು, ಒಂದು ಬೆಲೆಬಾಳುವ ಗಡಿಯಾರವನ್ನು ಕೊಟ್ಟು ಅದರ ಹಿಂದೆ ಟು ಮೈ ವಯೋಲಿನ್ ಟೀಚರ್- ಬಿ.ಕೆ.ಎಸ್.ಐಯ್ಯಂಗಾರ್ ಎಂದು ಬರೆದಿದ್ದರು. ಇದೇನು ಬರೆದಿರಿ? ಎಂದು ಐಯ್ಯಂಗಾರರು ಆಶ್ಚರ್ಯದಿಂದ ಕೇಳಿದಾಗ, ನೀವು ನನಗೆ ಆಯಾಸವಿಲ್ಲದೇ ಪಿಟೀಲು ಬಾರಿಸುವಂತೆ ಕಲಿಸಿಕೊಡಲಿಲ್ಲವೇ! ಎಂದು ವಿನಯಪೂರ್ವಕ ಉದ್ಗಾರ ತೆಗೆದಿದ್ದರು. ಅದೇ ವರ್ಷ ಐಯ್ಯಂಗಾರರಿಗೆ ಸ್ವಿಟ್ಜರ್ಲಂಡಿಗೆ ಕರೆಸಿಕೊಂಡರು. ಅಲ್ಲಿಯೇ ಅವರಿಂದ ಹೆಚ್ಚಿನ ಯೋಗಾಭ್ಯಾಸ ಕಲಿತರು. ಈ ಸಂದರ್ಭದಲ್ಲಿ ಮಲ್‌ಕೂಝಿಂಶಿ (Malcuzmshi) ಎಂಬ ಪೊಲಿಶ್ ಪಿಯಾನೋವಾದಕನ ಭುಜಕ್ಕೆ ಇದ್ದ ತೊಂದರೆಯನ್ನು ಐಯ್ಯಂಗಾರರು ಸರಿಪಡಿಸಿದರು. ಮೆನ್ಯೂಹಿನ್ ತಮ್ಮ ಯೋಗ ಗುರುವಿನ ಪರಿಚಯವನ್ನು ಪಾಶ್ಚಾತ್ಯ ದೇಶಗಳಿಗೆ ಮಾಡಿಕೊಟ್ಟರು. ಅವರಿಂದಾಗಿ ಐಯ್ಯಂಗಾರರು ವಿದೇಶಗಳಲ್ಲಿ ಯೋಗ ಕ್ಲಾಸು ನಡೆಸುವಂತಾಯ್ತು. ಅವರ ಪ್ರಥಮ ಪುಸ್ತಕ Light on Yogaಕ್ಕೆ ಮುನ್ನುಡಿಯನ್ನು ಮೆನ್ಯೂಹಿನ್ ಬರೆದರು. ಅದು ಜಗತ್ತಿನ ಹದಿನೆಂಟು ಭಾಷೆಗಳಲ್ಲಿ ಅನುವಾದಿತವಾಗಿದೆ. ಅವರು 14 ಉದ್ಗ್ರಂಥಗಳನ್ನು ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಮೆಟ್ರಿಕ್ ವರೆಗೆ ಕಲಿತ ವ್ಯಕ್ತಿ ಇಷ್ಟು ಸುಲಲಿತವಾಗಿ ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ರಚಿಸಿರುವದೂ ಒಂದು ಪವಾಡವೇ ಆಗಿದೆ.

1960ರ ದಶಕದಲ್ಲಿ ವಾರದಲ್ಲಿ ಎರಡು ದಿವಸ ಐಯ್ಯಂಗಾರರು ಮುಂಬೈಗೆ ಬರುತ್ತಿದ್ದರು. ಶನಿವಾರ ಸಂಜೆ ಮತ್ತು ರವಿವಾರ ಮುಂಜಾನೆ ಇವರ ಯೋಗ-ಕ್ಲಾಸು ಕಫ್-ಪರೇಡ್‌ನಲ್ಲಿ, ಕ್ಯಾಂಪಿಯನ್ ಸ್ಕೂಲ್ ಆವರಣದಲ್ಲಿ, ನಡೆಯುತ್ತಿತ್ತು. ಆಗ ನಾನು ಅವರ ವಿದ್ಯಾರ್ಥಿಯಾಗಲು ಅವರ ಬಳಿಗೆ ಹೋದೆ. ನನಗೆ ನಿಮ್ಮ ಫೀ ಕೊಡಲು ಸಾಧ್ಯವಾಗುತ್ತಿಲ್ಲ ಎಂದಾಗ, ನನಗೆ ಅತ್ಮೀಯತೆ ತೋರಿ ಉಚಿತವಾಗಿ ಶಿಕ್ಷಣ ನೀಡಿದರು. ಆ ಸಮಯದಲ್ಲಿ ನಾನು ಅವರ ಬಗ್ಗೆ ಒಂದು ಸುದೀರ್ಘವಾದ ಲೇಖನವನ್ನು ಕರ್ಮವೀರ ವಾರ ಪತ್ರಿಕೆಗೆ ಬರೆದೆ. 1968ರಲ್ಲಿ ಪ್ರಕಟವಾದ ನನ್ನ ಹುಚ್ಚ-ಹುಚ್ಚಿ ಎಂಬ ಪ್ರಣಯ ಗೀತಗಳ ಸಂಕಲನವನ್ನು ಕಾಣಿಕೆಯಾಗಿ ಕೊಟ್ಟೆ. ಅದನ್ನು ಓದಿ ಮೆಚ್ಚಿ ನನಗೆ ಒಂದು ಪತ್ರವನ್ನು ಬರೆದಿದ್ದರು. ಅವರು ತಮ್ಮ ಲೈಟ್ ಆನ್ ಯೋಗ ಪುಸ್ತಕನ್ನು ನನಗೆ ಕೊಟ್ಟು ತಮ್ಮ ಹಸ್ತಾಕ್ಷರಗಳಿಂದ ಬರೆಯುತ್ತ ಈ ಪುಸ್ತಕವು ಯೋಗಾಭ್ಯಾಸದ ಜೊತೆಗೆ ಉತ್ತಮ ಕಾವ್ಯರಚಿಸಲು ಸ್ಫೂರ್ತಿ ನೀಡಲಿ ಎಂದು ಹಾರೈಸಿದ್ದರು.

ಐಯ್ಯಂಗಾರರು 26 ಜನವರಿ, 1973ರಂದು ರಮಾಮಣಿ ಐಯ್ಯಂಗಾರ ಮೆಮೋರಿಯಲ್ ಯೋಗ ಇನ್ಸ್ಟಿಟೂಟ್ (ಅರ್.ಐ.ಎಂ.ವಾಯ್.ಐ) ಸ್ಥಾಪಿಸಿದರು. ನಾನು ಹಲವು ಸಲ ಅವರ ಪುಣೆಯ ನಿವಾಸಕ್ಕೆ ಹೋಗಿ ಅವರ ಅದ್ಭುತವಾದ ಯೋಗಶಾಲೆಯನ್ನು ಸಂದರ್ಶಿಸಿದ್ದೇನೆ. ಅವರ ಹಿರಿಯ ಮಗಳು ಗೀತಾ, ಹಾಗೂ ಕಿರಿಯ ಮಗ ಪ್ರಶಾಂತ ಅಲ್ಲಿಯ ಪ್ರಮುಖ ಶಿಕ್ಷಕರಾಗಿದ್ದಾರೆ. ಅವರ ಮಗಳು ಗೀತಾಗೆ ಕಿಡ್ನಿ ತೊಂದರೆಯಾಗಿತ್ತು. ಬದುಕುವ ದಾರಿ ಕಾಣದೇ ಇದ್ದಾಗ, ಇಂಗ್ಲಿಷ್ ಔಷಧಿ ತಿಂದು ಸಾಯುವದಕ್ಕಿಂತ ಯೋಗ ಮಾಡುತ್ತಿರಲಿ, ಬದುಕಿದರೆ ಯೋಗಾಭ್ಯಾಸಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ತೀರ್ಮಾನಿಸಿ ಮಗಳನ್ನು ಯೋಗದಿಂದ ಉಪಚರಿಸತೊಡಗಿದರು. ಪವಾಡ ಸದೃಶ ಘಟನೆ ನಡೆಯಿತು, ಗೀತಾ ಪೂರ್ತಿ ಗುಣಮುಖಳಾದಳು. ಅವಳು ಯೋಗ ಶಿಕ್ಷಣಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿರಿಸಿದ್ದಾಳೆ.

BSK Iyengar should get Bharat Ratna

ಓರಿಯಂಟ್ ಲಾಂಗ್‌ಮನ್ ಪ್ರಕಾಶನ ಸಂಸ್ಥೆಯ ಪಿ.ಎಚ್.ಪಟವರ್ಧನ್ ಅವರು ಬಿ.ಕೆ.ಎಸ್.ಐಯ್ಯಂಗಾರರ ಯೋಗ ದೀಪಿಕಾ ಪುಸ್ತಕದ ಮರಾಠಿ ಆವೃತ್ತಿಯನ್ನು ಪ್ರಕಟಿಸುತ್ತಿದ್ದಂತೆಯೇ, ಮಹಿಳೆಯರಿಗಾಗಿ ಯೋಗ ಎಂಬ ಪುಸ್ತಕ ಬರೆಯಲು ಗೀತಾ ಅವರನ್ನು ಒತ್ತಾಯಿಸಿದರು. ಪರಿಶ್ರಮ ವಹಿಸಿ ಬರೆದರು. ಅದರ ಫಲವಾಗಿ Yoga- A Gem for Women ಎಂಬ ಪುಸ್ತಕ ಸಿದ್ಧವಾಯ್ತು. ಈಗ ಕನ್ನಡ ಅನುವಾದ ಲಭ್ಯವಾಗಿದೆ. ಅದನ್ನು ರ.ವಿ.ಜಹಾಗೀರದಾರ ಎಂಬವರು ಅನುವಾದಿಸಿದ್ದಾರೆ. ಈ ಪುಸ್ತಕವನ್ನು ಗೀತಾ ತಾಯಿಗೆ ಅರ್ಪಿಸಿದ್ದಾರೆ. ಒಂದು ಮೋಜಿನ ವಿಷಯವೆಂದರೆ ಈ ಮುನ್ನುಡಿಯನ್ನು ಯೋಗಾಚಾರ್ಯ ಬಿ.ಕೆ.ಎಸ್.ಐಯ್ಯಂಗಾರರೇ ಬರೆದಿದ್ದಾರೆ. ಅದು ಕನ್ನಡದಲ್ಲಿದೆ. ಅವರ ಕನ್ನಡ ಸುಂದರ ಕೈಬರಹ ನೋಡಿ, ಓದಿ ಆನಂದಿಸಬಹುದಾಗಿದೆ. ಪುಸ್ತಕದ ತುಂಬ ಚಿತ್ರಗಳಿವೆ. ಮಹಿಳೆಯರಿಗೆ ಅತ್ಯುಪಯುಕ್ತವಾದ ಪುಸ್ತಕವಿದು.

ಅವರು ಗರ್ಭಿಣಿ ಸ್ತ್ರೀಯರು ಯಾವ ಯಾವ ಆಸನ ಹಾಕಬೇಕು ಎಂಬುದನ್ನು ಬರೆದರು. ಅದು ವಿದೇಶದಲ್ಲಿ ವರ್ಣರಂಜಿತವಾಗಿ ಪ್ರಕಟವಾಗಿತ್ತು. ಅದರ ಪ್ರತಿಯನ್ನು ಅವರ ಬಳಿ ನೋಡಿದ್ದೆ. ಅದರಲ್ಲಿ ಒಂದನೆಯ ತಿಂಗಳಿಂದ ಒಂಭತ್ತು ತಿಂಗಳವರೆಗೆ ಸ್ತ್ರೀಯರು ಯಾವ ಆಸನಗಳನ್ನು ಹಾಕಬೇಕೆಂದು ಸಚಿತ್ರವಾಗಿ ತೋರಿಸಿದ್ದರು. ಆ ಚಿತ್ರಗಳನ್ನೆಲ್ಲ ಸಂಗ್ರಹಿಸುವುದು ಹೇಗೆ ಸಾಧ್ಯವಾಯಿತು? ಎಂದು ನಾನು ಗುರುಗಳಿಗೆ ಕೇಳಿದಾಗ ಅವರು ಹೇಳಿದ್ದರು. ನಾನು ಪುಣೆಯಲ್ಲಿ ಯೋಗಶಾಲೆಯನ್ನು ಕಟ್ಟಿದಾಗ ನನ್ನ ಮಗ ಇನ್ನೂ ಚಿಕ್ಕವನಾಗಿದ್ದ. ನನಗೆ ವಿದೇಶಗಳಿಂದ ಮೇಲಿಂದ ಕರೆ ಬರುತ್ತಿತ್ತು. ನನ್ನ ಎರಡನೆಯ ಮಗಳ ಗಂಡ ಮುಂಬೈಯಲ್ಲಿದ್ದ. ಅವನಿಗೂ ಯೋಗದಲ್ಲಿ ಆಸಕ್ತಿಯಿತ್ತು. ಅವನಿಗೆ ಕೆಲಸಬಿಟ್ಟು ನನ್ನೊಡನೆ ಇರಲು ಕರೆದೆ, ಯೋಗಕ್ಲಾಸು ನೋಡಿಕೊಳ್ಳಲು ಹೇಳಿದೆ. ಆಗ ನನ್ನ ಮಗಳು ಗರ್ಭಿಣಿಯಾದಳು. ಅವಳೂ ಯೋಗಾಭ್ಯಾಸ ಮಾಡುತಿದ್ದಳು. ಅವಳ ಫೋಟೋ ಪ್ರತಿ ತಿಂಗಳು ತೆಗೆದು ಸಂಗ್ರಹಿಸಿದ್ದೆ. ಅದೇ ಪುಸ್ತಕ ಬರೆಯಲು ಸ್ಫೂರ್ತಿ ನೀಡಿತು. ಈ ಪುಸ್ತಕಕ್ಕೆ ವಿದೇಶದಲ್ಲಿ ಬಹಳ ಪ್ರಸಿದ್ಧಿ ದೊರೆಯಿತು.

ಅವರ ಶಿಷ್ಯರು ದೇಶವಿದೇಶಗಳಲ್ಲಿದ್ದಾರೆ. ಪ್ರಮುಖರಾದವರೆಂದರೆ ಸರ್ವಶ್ರೀ ಜೆ.ಕೃಷ್ಣಮೂರ್ತಿ ಜಯಪ್ರಕಾಶ ನಾರಾಯಣ, ಅಚ್ಯುತ ಪಟವರ್ದನ್, ಕೇವಲ ಸಿಂಗ್, ಜನರಲ್ ಶ್ರೀನಾಗೇಶ್, ಯಹೂದಿ ಮೆನ್ಯೂಹಿನ್ ಮೊದಲಾದವರು. ಅವರ ಕಾರ್ಯವನ್ನು ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಬಹಳ ಮೆಚ್ಚಿದ್ದರು. ಪೋಪ್ ಪೌಲ್ 6, ಅವರ ಅಭಿಮಾನಿಗಳಾಗಿದ್ದರು. ಬೆಲ್ಜಿಯಂನ ರಾಜಮಾತೆ ಅವರಲ್ಲಿ ಯೋಗಾಭ್ಯಾಸ ಮಾಡಿದ್ದರು. 72ನೆಯ ವಯಸ್ಸಿನಲ್ಲೂ ರಾಜಮಾತೆ ಶೀರ್ಷಾಸನ ಹಾಕುವ ಸಾಹಸ ಮಾಡಿದ್ದರಂತೆ. ಇದರ ಬಗ್ಗೆ ಅವರು ಒಮ್ಮೆ ಪಾಟಕರ್ ಕಾಲೇಜ್ ಹಾಲ್‌ನಲ್ಲಿ(1970ರ ದಶಕದಲ್ಲಿ) ನಡೆದ ಪ್ರಾತ್ಯಕ್ಷಿಕೆ ಹಾಗೂ ಪ್ರವಚನದ ಸಂದರ್ಭದಲ್ಲಿ ಬೆಲ್ಜಿಯಂ ರಾಜಮಾತೆಗೆ ಶೀರ್ಷಾಸನ ಕಲಿಸಿದ್ದರ ಬಗ್ಗೆ ಹೇಳುತ್ತ ಅವರು ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿದೆ.

60 ವರ್ಷಗಳಾದ ಮೇಲೆ ನಾನು ಯಾರಿಗೂ ಶೀರ್ಷಾಸನ ಹಾಕಲು ಶಿಫಾರಸು ಮಾಡುವುದಿಲ್ಲ, ಕಲಿಸುವುದಿಲ್ಲ. ಮೊದಲಿನಿಂದ ಅಭ್ಯಾಸ ಇರುವವರು ನೂರು ವರ್ಷ ಆದಾಗ ಕೂಡ ಶೀರ್ಷಾಸನ ಹಾಕಬಹುದು. ಬೆಲ್ಜಿಯಂ ರಾಜಮಾತೆ ನನಗೆ ತಮಾಷೆಗಾಗಿ ಹೇಳಿದಳು, ನನಗೆ ಶೀರ್ಷಾಸನ ಹಾಕಲು ಕಲಿಸದಿದ್ದರೆ ನೀವೆಂತಹ ಯೋಗ ಗುರು? ಎಂದು. ನಾನು ಅವಳಿಗೆ ಶೀರ್ಷಾಸನ ಹಾಕಲು ಕಲಿಸಿಯೇ ಬಿಟ್ಟೆ ಎನ್ನುತ್ತ ನಸುನಕ್ಕಿದ್ದರು. ಇನ್ನೊಂದು ಸಂಗತಿಯೆಂದರೆ, ಬಹಳ ಹೊತ್ತು ಕುರ್ಚಿಯ ಮೇಲೆ ಕುಳಿತರೆ ಮೂಲವ್ಯಾಧಿ ಬರುತ್ತದೆ ಎಂಬ ಪ್ರತೀತಿ ಇದೆ. ಇದು ತಪ್ಪು. ನೀವು ಯೋಗಾಸನ ಹಾಕುತ್ತಿದ್ದರೆ ಯಾವ ರೋಗವೂ ಬರುವುದಿಲ್ಲ. ಉದಾಹರಣೆಗೆ ಬದ್ಧಕೋಣಾಸನ ಹಾಕುತ್ತಿದ್ದರೆ ಮೂಲವ್ಯಾಧಿ ಬರುವುದಿಲ್ಲ. ರಸ್ತೆಯಲ್ಲಿ ನೀವು ಮೋಚಿಯನ್ನು ನೋಡಿದ್ದೀರಾ? ಯಾವ ಮೋಚಿಗೆ ಮೂಲವ್ಯಾಧಿ ಇದೆ ತೋರಿಸಿರಿ? ಕಾರಣ ಗೊತ್ತೇ? ಅವರು ದಿನದ ಹದಿನೆಂಟು ತಾಸು ಬದ್ಧಕೋಣಾಸನದಲ್ಲಿ ಕುಳಿತಿರುತ್ತಾನೆ. ಐಯ್ಯಂಗಾರರು ಈ ಮಾತು ಹೇಳಿದಾಗ ಪ್ರೇಕ್ಷರೆಲ್ಲ ಕರತಾಡನ ಮಾಡಿದ್ದರು.

ನಾನು ಮೂರು ಸಲ ಅಮೇರಿಕೆ ಸಂದರ್ಶಿಸಿದಾಗ, ಅಲ್ಲಿ ಯೋಗ ಶಿಬಿರ ನಡೆಸಿದಾಗ ನಾನು ಐಯ್ಯಂಗಾರರ ಭಾಷಣ ನೆನಪಿಸಿಕೊಳ್ಳುತ್ತಿದ್ದೆ, ಉದ್ಧರಿಸುತ್ತಿದ್ದೆ. ಏನೋ ನೆನಪು ಅಂತ ಬರೆಯುತ್ತಿಲ್ಲ, ಇದರ ಬಗ್ಗೆ ಐಯ್ಯಂಗಾರರೇ ತಮ್ಮ ಪುಸ್ತಕ Light on Yogaದಲ್ಲಿ ಬರೆದಿದ್ದಾರೆ. ಅದರ ಕನ್ನಡ ಅನುವಾದ ಯೋಗದೀಪಿಕಾ ನೋಡಬಹುದು. ಅವರು ಬದ್ಧಕೋಣಾಸನದ ಬಗ್ಗೆ ಬರೆಯುತ್ತ ಮೂರು ಚಿತ್ರ ಕೊಟ್ಟಿದ್ದಾರೆ. ಮೊದಲನೆಯ ಚಿತ್ರದ ಬದಿಯಲ್ಲಿ ಬರೆಯುತ್ತಾರೆ, ಬದ್ಧ ಎಂದರೆ ಕಟ್ಟಲ್ಪಟ್ಟ, ತಡೆಯನ್ನು ಹೊಂದಿದ ಎಂದರ್ಥ. ಕೋಣ ಎಂದರೆ ಮೂಲೆ. ಈ ಭಂಗಿಯಲ್ಲಿ ನೆಲದ ಮೇಲೆ ಕುಳಿತು, ಹಿಮ್ಮಡಿಗಳನ್ನು ಗುದಗುಹ್ಯಸ್ಥಾನಗಳ ನಡುತಾಣಕ್ಕೆ (Prineum) ಅಳವಡಿಸಿ, ಪಾದಗಳನ್ನು ಹಿಡಿದು, ಮಂಡಿಯ ಭಾಗಗಳು ಎರಡು ಕಡೆಗಳಲ್ಲಿಯೂ ನೆಲಮುಟ್ಟುವ ವರೆಗೂ ತೊಡೆಗಳನ್ನಗಲಿಸಬೇಕಾಗಿದೆ. ಇಂಡಿಯಾ ದೇಶದಲ್ಲಿ ಮೋಚಿಗಳು (cobblers) ಕುಳಿತುಕೊಳ್ಳುವ ಬಗೆ ಹೀಗೆಯೇ. (ಯೋಗ ದೀಪಿಕಾ, ಬಿ.ಕೆ.ಎಸ್.ಅಯ್ಯುಂಗಾರ, ಅನು. ಪ್ರೊ.ಬಿ.ಭೀಮಶೆನರಾವ್, ಪ್ರಕಾಶಕರು: ವಿವೇಕಾನಂದ ಕೇಂದ್ರ, ಬೆಂಗಳೂರು-18.

ಐಯ್ಯಂಗಾರರಿಗೆ 80 ವರ್ಷಗಳಾದಾಗ ಇಂಗ್ಲೆಂಡಿನಲ್ಲಿಯ 100 ಯೋಗವಿದ್ಯಾರ್ಥಿಗಳು ಮುಂಬೈಗೆ ಆಗಮಿಸಿದ್ದರು. ಮಾತುಂಗಾದ ಡಾನ್ ಬಾಸ್ಕೋ ಸ್ಕೂಲಿನ ಬಯಲಿನಲ್ಲಿ ಬೃಹತ್ ಪ್ರದರ್ಶನ ನೀಡಿದರು. ವೇದಿಕೆಯ ಮೇಲೆ ಎಲ್ಲ ವಿದ್ಯಾರ್ಥಿಗಳು ಮೆಗಾ-ಯೋಗ- ಡೆಮಾನ್‌ಸ್ಟ್ರೇಶನ್ ನೀಡಿದರು. ಅದನ್ನು ನೋಡಲು ನೂರು ರೂಪಾಯಿಗಳ ಟಿಕೆಟ್ ಇತ್ತು. ನಾನು ಅಲ್ಲಿಗೆ ತಲುಪುವ ವೇಳೆಗೆ ಎಲ್ಲ ಟಿಕೆಟ್‌ಗಳು ಮಾರಾಟಗೊಂಡಿದ್ದವು. ನಾನು ಹೆಬ್ಬಾಗಿಲ ಮುಂದೆ ಕಿಂಕರ್ತವ್ಯ ಮೂಢನಾಗಿ ನಿಂತಾಗ, ಐಯ್ಯಂಗಾರರು ಪುಣೆಯಿಂದ ಕಾರಿನಲ್ಲಿ ಆಗಮಿಸಿದರು. ನನ್ನನ್ನು ನೋಡಿ ಓ, ಜೀವಿ ಎಂದರು. ನಾನು ನಮಸ್ಕರಿಸಲು ಬಾಗಿದೆ. ಅವರು ನನ್ನನ್ನು ಬಾಗಗೊಡದೆ ಬಿಗಿದಪ್ಪಿಕೊಂಡರು. ನನ್ನ ಭುಜದ ಮೇಲೆ ತಮ್ಮ ಕೈಗಳನ್ನು ಹಾಕಿ ಕರೆದುಕೊಂಡು ಒಳಗೆ ಹೋಗಿ ಮುಂದಿನ ಸಾಲಿನಲ್ಲಿ ಕೂಡಿಸಿದರು.

ನಾನು 2000ರದಲ್ಲಿ ನಡೆದ ಪ್ರಥಮ ಕನ್ನಡ ವಿಶ್ವ ಸಮ್ಮೇಲನಕ್ಕೆ ಅಮೇರಿಕೆಗೆ ತೆರಳಿದಾಗ ಎಲ್ಲೆಡೆ ಯೋಗ ಶಿಬಿರಗಳನ್ನು ನಡೆಸಿದೆ. ಐಯ್ಯಂಗಾರರನ್ನು ನೆನೆಸಿದೆ. ನಾನು ಉಚಿತ ಯೋಗ ಕ್ಲಾಸು ನಡೆಸಿದರೂ ಅಲ್ಲಿಯ ವಿದ್ಯಾರ್ಥಿಗಳು ಪ್ರೀತಿಯಿಂದ ಗುರುದಕ್ಷಿಣೆ ನೀಡಿದ್ದರು. ಭಾರತಕ್ಕೆ ಮರಳಿದ ಮೇಲೆ ಆ ಹಣದಲ್ಲಿ ಒಂದು ಭಾಗವನ್ನು ಉಚಿತ ಯೋಗಶಿಬಿರ ನಡೆಸಲು, ಇನ್ನೊಂದು ಭಾಗ ಪುಸ್ತಕ ಪ್ರಕಟಿಸಲು, ವೆಚ್ಚಮಾಡಿದೆ. ಮೂರನೆಯ ಭಾಗವನ್ನು ಚೆಕ್ ಮುಖಾಂತರ ಐಯ್ಯಂಗಾರರಿಗೆ ಗುರುದಕ್ಷಿಣೆಯ ರೂಪದಲ್ಲಿ ಕಳಿಸಿದೆ. ಅವರಿಂದ ಬಂದ ಪ್ರೀತಿ ತುಂಬಿದ ಪತ್ರ ನನ್ನನ್ನು ಮೂಕವಿಸ್ಮಿತಗೊಳಿಸಿತು.

ಐಯ್ಯಂಗಾರರಿಗೆ ದೇಶವಿದೇಶದಿಂದ ಅಸಂಖ್ಯ ಗೌರವಗಳು ದೊರೆತಿದ್ದವು. ಅವರಿಗೆ ಪದ್ಮಶೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಒಂದಾದಮೇಲೊಂದು ಭಾರತ ಸರಕಾರದಿಂದ ದೊರೆತಿತ್ತು. ಅವರ ಜೀವನದಲ್ಲಿ ಆಗದೇ ಇದ್ದ ಎರಡು ಘಟನೆಗಳ ಬಗ್ಗೆ ಅವರ ಶಿಷ್ಯಕೋಟಿಗೆಲ್ಲ ಬೇಸರವಾಗಿದೆ. ಅವರು ನೂರು ವರ್ಷ ಬಾಳಬೇಕಾಗಿತ್ತು. ಶತಂ ಶರದಃ ಎಂಬ ಮಾತಿಗೆ ಒಂದು ಉದಾಹರಣೆಯಾಗಬೇಕಿತ್ತು. ಆದರೆ 96ಕ್ಕೆ ಅವರು ಸ್ವರ್ಗಸ್ಥರಾದರು. ಅದು ದೈವ ಚಿತ್ತ. ಅದು ಅವರ ಕೈಯಲ್ಲಿ, ಅವರ ಶಿಷ್ಯರ ಕೈಯಲ್ಲಿ ಇರಲಿಲ್ಲ. ಆದರೆ ಅವರಿಗೆ ಭಾರತ ರತ್ನ ದೊರೆಯಬೇಕಾಗಿತ್ತು. ಅದು ಸರಕಾರದ ಕೈಯಲ್ಲಿತ್ತು. ಅದು ಅವರಿಗೆ ಸಲ್ಲಬೇಕಾದ ಗೌರವವಾಗಿತ್ತು.

ಅವರಿಗೆ ಭಾರತ ರತ್ನ ದೊರೆತಿದ್ದರೆ ಅವರು ಈ ಉಚ್ಚ ರಾಷ್ಟ್ರೀಯ ಗೌರವ ಪಡೆದ ನಾಲ್ಕನೆಯ ಕನ್ನಡಿಗರಾಗುತ್ತಿದ್ದರು. ಮೊದಲು ಪಡೆದವರು ಸರ್ ವಿಶ್ವೇಶ್ವರಯ್ಯನವರು, ಎರಡನೆಯವರು ಪಂ. ಭೀಮಸೇನ ಜೋಶಿಯವರು. ಮೂರನೆಯವರು ವಿಜ್ಞಾನಿ ಡಾ. ಸಿ.ಎನ್.ಆರ್.ರಾವ್ ಅವರು. ಪಂ. ಜೋಶಿಯವರ ವೈಶಿಷ್ಟ್ಯವೆಂದರೆ ಅವರಿಗೆ ಪ್ರಶಸ್ತಿಗಳು ಒಂದೊಂದಾಗಿ ದೊರೆಯುತ್ತ ಹೋದವು. ಮೊದಲು ಪದ್ಮಶ್ರೀ ನಂತರ ಪದ್ಮಭೂಷಣ, ಪದ್ಮವಿಭೂಷಣ, ಕೊನೆಗೆ ಭಾರತರತ್ನ. ಹೀಗೆ ಒಂದೊಂದಾಗಿ ಪಡೆದ ಶ್ರೇಯ ಪಂ.ಭೀಮಸೇನ ಜೋಶಿ ಅಲ್ಲದೆ ಇನ್ನಾರಿಗೂ ದೊರೆತಿಲ್ಲ. ಜೋಶಿ ಮತ್ತು ಐಯ್ಯಂಗಾರರಲ್ಲಿ ಇದ್ದ ಸಮಾನ ಅಂಶಗಳೆಂದರೆ, ಇಬ್ಬರೂ ಕನ್ನಡಿಗರು. ಮಾಹಾರಾಷ್ಟ್ರವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡವರು. ಇಬ್ಬರಿಗೂ ಪುಣೆ(ಪುಣ್ಯನಗರಿ) ಭಾಗ್ಯದ ಬಾಗಿಲು ತೆರೆದಿತ್ತು. ಇನ್ನಾದರೂ, ಐಯ್ಯಂಗಾರರಿಗೆ ಮರಣೋತ್ತರ ಪ್ರಶಸ್ತಿಯಾಗಿ ಭಾರತ ರತ್ನ ದೊರೆಯಲಿ ಎಂದು ಹಾರೈಸುವೆ.

English summary
BSK Iyengar, the legendary Yoga master. Oneindia-Kannada columnist GV Kulkarni recalls his association with BSK Iyengar. The master taught yoga in Hubli, Dharwad and in foreign also. GV wishes Iyengar gets Bharat Ratna (posthumous).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X