ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಯಾತಿ ನಾಟಕದ ಅಭೂತಪೂರ್ವ ಯಶಸ್ಸು

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್ನಲ್ಲಿ ಕೆಲಸ ಪಡೆದೇ ಭಾರತಕ್ಕೆ ಕಾರ್ನಾಡ್ ಮರಳಿದರು. ಈ ಕೆಲಸ ಕೊಡುವಾಗ ಅಲ್ಲಿಯ ಅಧಿಕಾರಿಗಳು ಹೇಳಿದ್ದರು, "ನಾವು ಟಾಟಾ ಬಿರ್ಲಾರಂತೆ ಹೆಚ್ಚು ಸಂಬಳ ಕೊಡುವುದಿಲ್ಲ, ಆದರೆ ನಿಮಗೆ ಈ ಕೆಲಸದಲ್ಲಿ ತೃಪ್ತಿ ದೊರೆಯುತ್ತದೆ" ಎಂದು. ಅದು ನಿಜವಾಗಿತ್ತು. ಮೊದಲು ಲಂಡನ್ ಆಫೀಸಿನಲ್ಲಿ ಟ್ರೇನಿಂಗ್ ಇತ್ತು. ಅಲ್ಲಿಯ ವರಿಷ್ಠ ಅಧಿಕಾರಿ ಫಿಲಿಪ್ ಚೆಸ್ಟರ್ ಭಾರತೀಯ ಶಾಖೆಗಳಲ್ಲಿ ಕೆಲಸ ಮಾಡಿದ್ದ, ಭಾರತೀಯ ಮಹಿಳೆಯನ್ನೇ ಮದುವೆಯಾಗಿದ್ದ. ಇವನು ಗಿರೀಶರನ್ನು ಆತ್ಮೀಯತೆಯಿಂದ ಸ್ವಾಗತಿಸಿದ, ಸಹಕಾರ್ಮಿಕನಿಗೆ ಕೆಲಸದ ವಿವರ ತಿಳಿಯಲು ಒಪ್ಪಿಸಿದ. ಅವನು ಇವರಿಗೆ ಸ್ವತಂತ್ರ ಆಫೀಸು ಕೊಟ್ಟು, ಮೇಜಿನ ಮೇಲೆ ಹತ್ತು ಹದಿನೈದು ಫೈಲುಗಳ ರಾಶಿಹಾಕಿ, "ಇವನ್ನು ಓದು, ಪುಸ್ತಕ ಪ್ರಕಾಶನದ ಪ್ರಕ್ರಿಯೆ ಹೇಗಿರುತ್ತದೆ ತಿಳಿಯುತ್ತದೆ" ಎಂದು ಹೇಳಿಹೋದ. ಇದನ್ನೆಲ್ಲ ತಿಳಿದುಕೊಳ್ಳಲು ಇಡಿ ಜೀವನವಿದೆಯಲ್ಲ ಎಂದುಕೊಂಡು ಲಂಚ್ ಟೈಮ್ ವರೆಗೆ ಆ ಫೈಲುಗಳ ಮಧ್ಯದಲ್ಲಿ ಕಾರ್ನಡ್ ನಿದ್ದೆ ಮಾಡಿದರಂತೆ.

ನಿದ್ದೆ ಕರೆದಾಗ ಬರುತ್ತಿತ್ತು, ಇದು ಗಿರೀಶರಿಗೆ ನಿಸರ್ಗದತ್ತ ಅನುಗ್ರಹವಾಗಿತ್ತು. ಕಣ್ಣು ಮುಚ್ಚಿ ನಿದ್ದೆ ಮಾಡೋಣ ಎಂದೊಡನೆ ಅವರಿಗೆ ನಿದ್ದೆ ಹತ್ತುತ್ತದೆ, ಯಾವಾಗ ಏಳಬೇಕೆಂಬುವುದನ್ನು ನಿರ್ಧರಿಸಿದರೆ ಸಾಕು ಆ ಸಮಯಕ್ಕೆ ಅಲಾರ್ಮ್ ಗಡಿಯಾರ ಕೇಳಿದಂತೆ ಎಚ್ಚರವಾಗುತ್ತದೆ. ಪರಿಸರದ ಸದ್ದು ಗದ್ದಲದ ತೊಂದರೆ ಆಗುವುದಿಲ್ಲ. ತಾವು ಚಿತ್ರಪಟಗಳಲ್ಲಿ ಅಭಿನಯಿಸಿದಾಗ, ಜಾತ್ರೆಯ ದೃಶ್ಯದ ಚಿತ್ರೀಕರಣದಲ್ಲಿ, ಜನಜಂಗುಳಿಯ ಮಧ್ಯೆ ಕೂಡ ತಾವು ನಿದ್ರಿಸಿದ್ದನ್ನು ಗಿರೀಶ ನೆನಪಿಸಿಕೊಳ್ಳುತ್ತಾರೆ.

Girish Karnad's autobiography part 13

ಅಲ್ಲಿ ಸ್ಟಾಲ್‌ವರ್ದಿ(Stallworthy) ಎಂಬ ತರುಣ ಕವಿಯ ಪರಿಚಯವಾಯಿತಂತೆ. ಅವನ ಕವಿತೆಗಳ ಮೇಲೆ ಡಬ್ಲ್ಯೂ.ಬಿ.ಏಟ್ಸ್ ಕವಿಯ ಉತ್ತರಾರ್ಧ ಕಾವ್ಯದ ಗಾಢವಾದ ಪರಿಣಾಮವಿತ್ತು. ಇಂಗ್ಲಿಷ್ ಕಾವ್ಯದ ಬಗ್ಗೆ ಅತ್ಯಂತ ಕಾಳಜಿ ಇದ್ದ ಯುವಕನಾಗಿದ್ದ, ಜೊತೆಗೆ ಅವರ ಸಹೋದ್ಯೋಗಿಯಾಗಿದ್ದ. ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್ ಬರಿ ವಿದ್ವತ್ಪೂರ್ಣ ಪುಸ್ತಕ ಪ್ರಕಟಿಸಿದರೆ ಸಾಲದು ಎಂದು, ರಚನಾತ್ಮಕ ಸಾಹಿತ್ಯ ಕೂಡ ಪ್ರಕಟಿಸುವ ಯೋಜನೆ ಅವನು ಹಮ್ಮಿಕೊಂಡಿದ್ದನಂತೆ. ಆಕ್ಸಫರ್ಡ್ ಕವಿಗಳ ಹೊತ್ತಿಗೆ ತರುವ ಯೋಜನೆ ಹಾಕಿದ್ದ, ಆಗ ಮಿತ್ರ ಎ.ಕೆ.ರಾಮಾನುಜನ್ನರ ಪದ್ಯ ತರಿಸಿ ಪ್ರಕಟಿಸಬೇಕೆಂಬ ವಿಚಾರ ಇವರಿಗೆ ಹೊಳೆಯಿತು.

ಲಂಡನ್ ಟ್ರೇನಿಂಗ್ ಮುಗಿದ ಮೇಲೆ ಕೆಲ ತಿಂಗಳು ಮುಂಬೈ ಆಫೀಸಿನಲ್ಲಿ ಟ್ರೇನಿಂಗ್ ಇತ್ತು, ಅಲ್ಲಿಂದ ಗಿರೀಶರಿಗೆ ಮದ್ರಾಸಿಗೆ ವರ್ಗವಾಯಿತು. ಮುಂಬೈಯಲ್ಲಿ ಮನೆಯಿತ್ತು. ಧಾರವಾಡದಿಂದ ತಂದೆತಾಯಿ ಬಂದಿದ್ದರು. ಮುಂಬಯಿಯಲ್ಲಿ ನಡೆದ ಮುಖ್ಯ ಘಟನೆ ಎಂದರೆ ಸತ್ಯದೇವ ದುಬೆಯವರ ಭೆಟ್ಟಿ. ಅಲ್ಕಾಝಿಯವರು ದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕರಾಗಿ ತೆರಳಿದ ಮೇಲೆ ಮುಂಬಯಿಯಲ್ಲಿದ್ದ ಅವರ ದಿ ಥೇಟರ್ ಯುನಿಟ್ ಎಂಬ ವಿಲಾಸಿ ನಾಟ್ಯ ಸಂಸ್ಥೆಯನ್ನು ನಡೆಸುವ ಹೊಣೆ ಸತ್ಯದೇವ ದುಬೆ ವಹಿಸಿಕೊಂಡರು. ಅಲ್ಕಾಝಿ ಗುಂಪಿನಲ್ಲಿದ್ದ ಫರೀದಾ ಸೋನಾವಾಲ ಎಂಬ ಉತ್ಕೃಷ್ಟ ನಟಿ ಇವರಿಗೆ ಹಡಗದಲ್ಲಿ ಭೆಟ್ಟಿಯಾಗಿದ್ದಳು. ಗಿರೀಶರಿಗೆ ನಾಟಕದಲ್ಲಿ ಆಸಕ್ತಿ ಇದ್ದುದನ್ನು ತಿಳಿದು, ಅವಳು ದುಬೆ ಅವರನ್ನು ಮುಂಬಯಿಯಲ್ಲಿ, ಭುಲಾಭಾಯಿ ಟೆರೇಸಿನಲ್ಲಿ, ಭೆಟ್ಟಿಯಾಗಲು ಸಲಹೆ ಇತ್ತಿದ್ದಳು.

ಮೊದಲನೆಯ ಭೆಟ್ಟಿಯಲ್ಲಿ ಸತ್ಯದೇವ ದುಬೆ ಗಿರೀಶರಲ್ಲಾಗಲೀ ಅವರ ನಾಟಕದಲ್ಲಾಗಲೀ ಆಸಕ್ತಿ ತೋರಲಿಲ್ಲ. ನೀವು ಇಂಗ್ಲಿಷಿನಲ್ಲಿ ನಾಟಕ ಬರೆದು ಸಾಧಿಸುವುದೇನು? ಎಂಬ ಅಪಸ್ವರದಿಂದಲೇ ಚರ್ಚೆ ಪ್ರಾರಂಭಿಸಿದರು. ತಾವು ಯಯಾತಿ ನಾಟಕ ಬರೆದದ್ದು ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಅಲ್ಲ ಎಂದು ಗಿರೀಶ್ ಸ್ಪಷ್ಟಪಡಿಸಿದಾಗ ಅವರ ಮುಖ ಪೆಚ್ಚಾಯಿತು. ಮುಂದೆ ಗಿರೀಶ್ ಸತ್ಯದೇವ ದುಬೆಯವರ ಮುಂದೆ ತಮ್ಮ ಕನ್ನಡ ನಾಟಕ ಓದುತ್ತ, ಜೊತೆಗೆ ಇಂಗ್ಲಿಷಿನಲ್ಲಿ ಅನುವಾದಿಸುತ್ತ ಹೋದರು. ನೀವು ಇಂಗ್ಲಿಷಿನಲ್ಲಿ ಬರೆಯುತ್ತೀರೆಂದು ಭಾವಿಸಿ ನಿಮ್ಮ ಅವಮಾನ ಮಾಡಿದೆ. ಅದಕ್ಕಾಗಿ ನಾನು ಇದನ್ನು ರಂಗದ ಮೇಲೆ ತಂದು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಲ್ಲ! ಎಂಬ ಉದ್ಗಾರ ತೆಗೆದರು. ತಾನು ನಾಟಕ ಬಹಳ ಮೆಚ್ಚಿದ್ದೇನೆ ಎಂದು ನೇರವಾಗಿ ಹೇಳುವುದು ದುಬೆ ಅವರ ಪದ್ಧತಿಯಾಗಿರಲಿಲ್ಲ ಎಂಬುದು ಗಿರೀಶರಿಗೆ ನಂತರ ತಿಳಿಯಿತು.

ನಾಟಕದ ಹಿಂದಿ ಅನುವಾದ ಅವರಿಗೆ ಬೇಕಿತ್ತು. ಜಿ.ಬಿ.ಜೋಶಿಯವರು ಧಾರವಾಡದಲ್ಲಿಯ ಹುಂಡೇಕಾರ ಎಂಬವರಿಂದ ಅನುವಾದ ಮಾಡಿಸಿ ಕಳಿಸಿದರು. ಈ ಹಿಂದಿ ಆಡು ಮಾತಲ್ಲ ಎನ್ನುತ್ತ ಗೊಣಗುತ್ತಲೇ ಅನುವಾದವನ್ನು ಸ್ವೀಕರಿಸಿ ಚೆನ್ನಾಗಿ ತಿದ್ದಿದರು. ಆ ಕಾಲದಲ್ಲಿ ಇಂಗ್ಲಿಷ್ ನಾಟಕಗಳಿಗೆ ಇದ್ದ ಸ್ವಾಗತ ಹಿಂದಿ ನಾಟಕಗಳಿಗೆ ದೊರೆತಿರಲಿಲ್ಲ. ಪೃಥ್ವಿರಾಜ ಕಪೂರ್, ಇಪ್ಟಾ(ಇಂಡಿಯನ ಪೀಪಲ್ಸ್ ಥೇಟರ್ ಅಸೋಸಿಯೇಶನ್)ಮಾತ್ರ ಹಿಂದೀ ನಾಟಕ ಪ್ರಯೋಗಿಸುತ್ತಿದ್ದರು. ಸತ್ಯದೇವ ದುಬೆ ಹಿಂದಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮರಾಠಿ ರಂಗಭೂಮಿಯನ್ನು ಬಳಸಿಕೊಂಡು ತನ್ನ ನಟವರ್ಗವನ್ನು ಸೃಷ್ಟಿಸಿದ್ದರು. ಇಂಡಿಯನ್ ನ್ಯಾಶನಲ್ ಥೇಟರಿನ ಪ್ರಯೋಜಕತ್ವದಲ್ಲಿ ಗಿರೀಶ ಕಾರ್ನಾಡರ ಯಯಾತಿ ಹಿಂದಿಯಲ್ಲಿ ರಂಗ ಕಾಣಲು ನಾಲ್ಕು ವರ್ಷಗಳು ಹಿಡಿದವು ಎಂದು ಬರೆಯುತ್ತಾರೆ.

ಗಿರೀಶ ಮದ್ರಾಸಿನಲ್ಲಿ ಅಸಿಸ್ಟಂಟ್ ಮೆನೇಜರ್ ಎಂದು ಕೆಲಸ ಮಾಡುತ್ತಿದ್ದಾಗ ಯಯಾತಿ ನಾಟಕದ ಪ್ರಯೋಗ ಮುಂಬಯಿಯಲ್ಲಿ ನಡೆಯಿತು. ನಾಟಕ ನೋಡಲು ಮುಂಬಯಿವರೆಗೆ ಯಾರು ಹೋಗುತ್ತಾರೆ? ಸಮಯ ಹಾಳು, ದುಡ್ಡಿನ ವ್ಯಯ ಎಂದುಕೊಂಡು ತಮ್ಮ ಪಾಡಿಗೆ ತಾವಿದ್ದಾಗ, ಗಿರೀಶರಿಗೆ ಒಬ್ಬ ಅಜ್ಞಾತ ಮಹಿಳೆಯಿಂದ ಫೋನ್ ಬಂತು. ಮದ್ರಾಸಿ ಹೆಣ್ಣುಮಗಳು ಯಾವುದೋ ಕಾರಣಕ್ಕೆ ಮುಂಬಯಿಗೆ ಹೋಗಿದ್ದಳು. ಅಲ್ಲಿ ಯಯಾತಿ ನಾಟಕ ನೋಡಿ ಪ್ರಭಾವಿತಳಾಗಿ ಅದರ ಲೇಖಕ ಮದ್ರಾಸಿನಲ್ಲಿರುವ ವಿಷಯ ತಿಳಿದು ಫೋನ್ ಮಾಡಿದ್ದಳು. ಇವರು ನಾಟಕದ ಪ್ರಯೋಗ ಇನ್ನೂ ನೋಡಿಲ್ಲ ಎಂಬುದು ಅವಳಿಗೆ ತಿಳಿದಾಗ ಅವಳು ಅಂದಿದ್ದಳು: ಅಯ್ಯೋ, ನೀವು ಆ ಪ್ರಯೋಗ ನೋಡುವುದಿಲ್ಲವೇನು? ಅದ್ಭುತವಾಗಿದೆ. ನೀವದನ್ನು ತಪ್ಪಿಸಿಕೊಂಡರೆ ಅದೊಂದು ಅಕ್ಷಮ್ಯ ಅಪರಾಧ ಎಂದಳು.

ಅಪರಿಚಿತ ಮಹಿಳೆಯಿಂದ ಬಂದ ಸ್ತುತಿಗೆ, ಒತ್ತಾಯಕ್ಕೆ ಮಣಿದು, ಗಿರೀಶ ಮುಂಬಯಿಗೆ ಹೋಗಿ ನಾಟಕ ನೋಡಿದರು. ಅವಳೆಂದಂತೆ, ನಾಟಕ ನೋಡಿರದಿದ್ದರೆ ಎಂಥ ಪ್ರಮಾದವಾಗುತ್ತಿತ್ತು ಎಂದುಕೊಂಡರಂತೆ. ಮರಳಿ ಮದ್ರಾಸಿಗೆ ಬಂದಮೇಲೆ ಆಕೆಗೆ ಫೋನ್ ಮಾಡಿ ಕೃತಜ್ಞತೆಯನ್ನು ಸಮರ್ಪಿಸಿದರು. ಆಕೆ ಅನುಕೂಲಸ್ಥ ಹಿನ್ನೆಲೆಯ ವಿವಾಹಿತ ಮಹಿಳೆ. ಗಂಡನ ಉದ್ಯಮವಲ್ಲದೆ ತನ್ನದೇ ಆದ ಒಂದು ಸಣ್ಣ ವ್ಯವಸಾಯ ನಡೆಸುತ್ತಿದ್ದಳು. ಶರ್ಮಿಷ್ಠೆ- ಚಿತ್ರಲೇಖೆ ಈ ಎರಡು ಪಾತ್ರಗಳಲ್ಲಿ ಸ್ತ್ರೀಯ ಲೈಂಗಿಕ ಪ್ರಕೃತಿಯನ್ನು ನೀವು ಚಿತ್ರಿಸಿದಂತೆ ನಾನು ಆಧುನಿಕ ಭಾರತೀಯ ಸಾಹಿತ್ಯದಲ್ಲಿ ಇನ್ನೆಲ್ಲೂ ಕಂಡಿಲ್ಲ ಎಂದು ಹೊಗಳಿದಳಂತೆ. ಅವಳ ಸ್ನೇಹ ಗಾಢಮೈತ್ರಿಯಾಗಿ, ಅವರಿಂದ ಪದ್ಯ ಬರೆಸಿತು, ಹಯವದನ ನಾಟಕಕ್ಕೊಂದು ಆಯಾಮ ನೀಡಿತು ಎಂದು ಬರೆಯುತ್ತಾರೆ.

ಯಯಾತಿ ನಾಟಕ ಮರಾಠಿಯಲ್ಲಿ ಅನುವಾದಗೊಂಡಿತ್ತು. ಅದರಲ್ಲಿ ಶ್ರೀರಾಮ ಲಾಗೂ ಮತ್ತು ಅಮೋಲ ಪಾಲೇಕರ್ ಅಭಿನಯಿಸಿದ್ದನ್ನು ನಾನು ನೋಡಿದ್ದೇನೆ. ಆದರೆ ಸತ್ಯದೇವ ದುಬೆ ಹಾಗೂ ಅಮರೀಶ ಪುರಿ ಅಭಿನಯಿಸಿದ ಯಯಾತಿಯ ಹಿಂದಿ ಪ್ರಯೋಗವನ್ನು ಗ್ರಾಂಟ್ ರೋಡಿನಲ್ಲಿದ್ದ ತೇಜಪಾಲ್ ಆಡಿಟೊರಿಯಂನಲ್ಲಿ ನೋಡಿದ ಅನುಭವ ಅಭೂತಪೂರ್ವವಾಗಿತ್ತು. ಆ ನಾಟಕದಿಂದಲೇ ಅಮರೀಶ ಪುರಿ ಕೀರ್ತಿಯ ಶಿಖರವನ್ನೇರಿದ. ಅದರಿಂದಾಗಿಯೇ ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು ಚಲನಚಿತ್ರವಾದಾಗ ಅಮರೀಶ ಪುರಿಯವರಿಗೆ ಅಭಿನಯದ ಅವಕಾಶ ದೊರೆತಿತ್ತು, ಕರ್ನಾಟಕದಲ್ಲೂ ಮನೆಮಾತಾದರು.

ಗಿರೀಶ ಕಾರ್ನಾಡ ಮುಂಬೈಯಲ್ಲಿ ಕೆಲ ತಿಂಗಳು ತರಬೇತಿಗಾಗಿ ಇದ್ದಾಗ ನಾನು ಅವರ ಆಫೀಸಿಗೆ ಆಗಾಗ ಹೋಗುತ್ತಿದ್ದೆ. ಎಮ್.ಎಲ್.ಢಾಣೂಕರ ಕಾಲೇಜಿನ ವಾರ್ಷಿಕೋತ್ಸವಕ್ಕೆ ಪ್ರಜಾಪ್ರಭುತ್ವ ಎಂಬ ನಾಟಕವನ್ನು ಬರೆದು ಪ್ರಯೋಗಿಸಿದ್ದೆ. ಆ ನಾಟಕದಲ್ಲಿ ಸೂತ್ರಧಾರಿಯಂತೆ ನಿರೀಕ್ಷಕನೊಬ್ಬ ನಾಟಕದ ಪ್ರತಿ ದೃಶ್ಯದ ಪ್ರಾರಂಭದಲ್ಲಿ ನಿರೂಪಣೆ ಮಾಡುತ್ತಾನೆ. ಕನ್ನಡೇತರ ಪ್ರೇಕ್ಷಕರು ಬಹಳ ಇದ್ದುದರಿಂದ ನಿರೂಪಣೆ ಇಂಗ್ಲಿಷಿನಲ್ಲಿ ಇರುವುದು ಅವಶ್ಯವಾಗಿತ್ತು. ನಾನು ಗಿರೀಶರಿಗೆ ವಿನಂತಿಸಿದಾಗ ಅವರು ಅದನ್ನು ಇಂಗಿಷಿಗೆ ಅನುವಾದಿಸಿ ಕೊಟ್ಟರು.

ಆ ಕಾಲದಲ್ಲಿ ತುಘಲಕ್ ನಾಟಕ ಬರೆಯುವ ಸನ್ನಾಹದಲ್ಲಿದ್ದರು. ಖಾಲ್ಸಾ ಕಾಲೇಜಿಗೆ ನನ್ನ ಹಾಸ್ಟೆಲಿಗೆ ಬಂದಿದ್ದರು. ಇತಿಹಾಸದ ಪ್ರಾಧ್ಯಾಪಕ ಚಿದಂಬರ ಕುಲಕರ್ಣಿಯವರ ಪರಿಚಯ ಮಾಡಿಕೊಟ್ಟೆ. ಗಿರೀಶರಿಗೆ ಉಪಯುಕ್ತವಾಗುವ ಕೆಲವು ಇತಿಹಾಸ ಪುಸ್ತಕ ತಂದುಕೊಟ್ಟರು. ಆ ಕಾಲದಲ್ಲಿ ಪು.ಲ.ದೇಶಪಾಂಡೆಯವರ ಪ್ರಸಿದ್ಧ ಮರಾಠಿ ನಾಟಕ ತುಝೇ ಆಹೆ ತುಝಪಾಶೀ ನಾಟಕವನ್ನು ಗಿರೀಶ ತುಂಬಾ ಮೆಚ್ಚಿದ್ದರು. ಅದರಲ್ಲಿ ಬರುವ ಶತರಂಜ (ಬುದ್ಧಿಬಳ, ಚದುರಂಗ) ಆಟದ ಕೆಲವು ಪ್ರತಿಮೆಗಳನ್ನು ಒಳಗೊಂಡ ಸಂಭಾಷಣೆಗಳನ್ನು ಗಿರೀಶ ಉದ್ಧರಿಸುತ್ತಿದ್ದರು. ಬಹುಶಃ ಅದರಿಂದ ಸ್ಫೂರ್ತಿಗೊಂಡು ತುಘಲಕ್ ಇಡೀ ನಾಟಕವನ್ನೇ ಚದುರಂಗದ ಆಟದಂತೆ ಹೆಣೆದಿದ್ದಾರೆ. ಪೇದೆಯಂತಿದ್ದ ಅಜೀಝ್ ಮುಂದೆ ರಾಜನಿಗೆ ಚೆಕ್‌ಮೇಟ್ ಮಾಡುತ್ತಾನೆ.

English summary
Kannada laureate Dr. G.V. Kulkarni writes about Jnanpith awardee, Kannada play-write Dr. Girish Karnad's autobiography 'Adadata Aayushya' in his column Jeevana Mattu Sahitya. Here is part 13. In this episode Karnad writes about success of Yayati drama in many languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X