ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015 ವರ್ಷ ಭವಿಷ್ಯ : ಮೇಷ ರಾಶಿಗೆ ಫಿಫ್ಟಿ ಫಿಫ್ಟಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವರದು ಮೇಷ ರಾಶಿ. ಇವರಿಗೆ ಜನ್ಮನಾಮ ಚು, ಚೆ, ಚೋ, ಲ, ಲಿ, ಲು, ಲೋ ಮತ್ತು ಅ ಎಂಬಕ್ಷರಗಳಲ್ಲಿ ಬರುತ್ತದೆ. ಈ ರಾಶಿಯವರಿಗೆ 2015 ವರ್ಷದ ಮೊದಲಾರ್ಧದಲ್ಲಿ(ಜುಲೈವರೆಗೆ) ಅಷ್ಟೇನೂ ಯಶಸ್ಸು ಸಿಗಲ್ಲ. ಆದರೆ ಉತ್ತರಾರ್ಧ (ಜುಲೈ ನಂತರ) ಮಾತ್ರ ತುಂಬಾ ಚೆನ್ನಾಗಿದೆ.

ಜುಲೈ ತಿಂಗಳ ಮಧ್ಯ ಭಾಗದವರೆಗೂ ಕರ್ಕ ರಾಶಿಯಲ್ಲಿರುವ ಉಚ್ಚ ಗುರು ಅಷ್ಟೇನೂ ಲಾಭಕರನಾಗಿಲ್ಲ. ಆದ್ದರಿಂದ ಕ್ರೂರ ಸ್ವಭಾವ ಮತ್ತು ಕೋಪ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳಬೇಕು. ಮದ್ಯ, ಮಾಂಸ ಸೇವನೆ ಮತ್ತಿತರ ದುಶ್ಚಟಗಳಿದ್ದರೆ ಹೊಸ ವರ್ಷಾರಂಭದಿಂದಲೇ ಬಿಡುವುದು ಅತ್ಯಗತ್ಯ. ಯಾಕೆಂದರೆ ಅಷ್ಟಮ ಶನಿಕಾಟ ಇರುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಲೇಬೇಕು.

ಹೆಚ್ಚಾಗಿ ಬಿಳಿ, ಕೇಸರಿ, ಹಳದಿ ಮತ್ತು ಕೆಂಪನೆಯ ಬಣ್ಣದ ವಸ್ತು ಬಳಸಿ. ಮುಖ್ಯವಾದ ಮಾತುಕತೆ ಮತ್ತು ಕಾರ್ಯ 9, 18, 27ನೇ ತಾರೀಖಿನಂದು ಮತ್ತು ರವಿವಾರ, ಸೋಮವಾರ, ಮಂಗಳವಾರ, ಗುರುವಾರಗಳಂದು ಮಾಡಿಕೊಳ್ಳಿ. ಸಂಖ್ಯೆಗಳ ಬಗ್ಗೆ ಅತೀವ ತಲೆ ಕೆಡಿಸಿಕೊಂಡವರು 1, 2, 3, 6, 7 ಮತ್ತು 9ನ್ನು ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಈ ಸಂಖ್ಯೆಗಳು ಅದೃಷ್ಟ ತರುತ್ತವೆ.

Yearly prediction 2015 for Aries

ಧನಸ್ಸು, ಸಿಂಹ, ಕರ್ಕ, ವೃಶ್ಚಿಕ, ಮೀನ ರಾಶಿಯವರೊಂದಿಗೆ ಸ್ನೇಹವು ಲಾಭ ತರುತ್ತದೆ. ಹೀಗಾಗಿ ಈ ರಾಶಿಯವರೊಂದಿಗೆ ಒಡನಾಟ ಇರಲಿ. ಆದರೆ ಮಿಥುನ, ಕನ್ಯಾ ರಾಶಿಯವರೊಂದಿಗಿನ ವ್ಯವಹಾರದಲ್ಲಿ ನಷ್ಟವೇ ಹೆಚ್ಚು. ಹೀಗಾಗಿ ಈ ರಾಶಿಯವರೊಂದಿಗೆ ಹುಷಾರಾಗಿ ವ್ಯವಹರಿಸಿ.

ಸಂಬಂಧಿಗಳೊಂದಿಗೆ ಅತೀವ ಒಡನಾಟ ಜುಲೈವರೆಗೆ ಸಲ್ಲದು. ಜುಲೈ ತಿಂಗಳ ನಂತರ ಜೀವನದ ತಿರುವು ಆರಂಭವಾಗುತ್ತದೆ. ಆ ಸಮಯದಲ್ಲಿ ಮುಖ್ಯ ಕೆಲಸ-ಕಾರ್ಯ ಅಥವಾ ಸ್ವಂತದ್ದೇನಾದರೂ ಮಾಡಿಕೊಳ್ಳಲು ವರ್ಷಾರಂಭದಿಂದಲೇ ಪ್ಲಾನ್ ಮಾಡಬೇಕು.

ಅಷ್ಟಮ ಶನಿಕಾಟದ ಸಮಯದಲ್ಲೇ ಹಲವಾರು ರೋಗಗಳು ವಕ್ಕರಿಸಿಕೊಳ್ಳುವುದರಿಂದ ಜೀವನವನ್ನು ಅತೀ ಜಾಗೃತೆಯಿಂದ ನಡೆಸಿಕೊಂಡು ಹೋಗಬೇಕು. ಪರಸ್ತ್ರೀ-ಪರಪುರುಷರ ಸಂಗದ ಆಸೆಗೆ ಅಪ್ಪಿತಪ್ಪಿಯೂ ಬಲಿಯಾಗಬಾರದು. ಅಪರಿಚಿತರ ಸ್ನೇಹವು ಒಳ್ಳೆಯದಲ್ಲ. ಆದ್ದರಿಂದ ಹೊಸಬರ ಸ್ನೇಹ ತುಂಬಾ ಹುಷಾರಾಗಿ ಕೂಲಂಕುಷವಾಗಿ ಪರಿಶೀಲಿಸಿಯೇ ಮಾಡಿಕೊಳ್ಳಿ.

ಶನಿಯು ಅಷ್ಟಮನಾಗಿ ಬೆನ್ನತ್ತಿದ್ದಾನೆ ಎಂಬುದನ್ನು ಮನವರಿಕೆ ಮಾಡಿಕೊಂಡರೆ ಒಳ್ಳೆಯದು. ಇಲ್ಲಾಂದ್ರೆ ಕೆಲವೊಂದು ರೋಗಗಳು ಬಂದರೆ ಜೀವನಪೂರ್ತಿ ಗುಳಿಗೆ ತೆಗೆದುಕೊಳ್ಳುವುದೇ ನಿತ್ಯದ ದಿನಚರಿಯಾಗುತ್ತದೆ. ಇನ್ನು ಕೆಲವು ಭಯಂಕರ ರೋಗಗಳು ಬಂದರೆ ಡೆತ್ ಸರ್ಟಿಫಿಕೇಟ್ ಜೇಬಿನಲ್ಲಿಟ್ಟುಕೊಂಡೇ ಓಡಾಡಿದಂತೆ ಎಂಬ ಎಚ್ಚರಿಕೆಯಿರಲಿ.

"ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಮಾತಿನಂತೆ ಜೀವನ ನಡೆಸಿ. ದೇಹಾರೋಗ್ಯಕ್ಕೆಂದು ಆರೋಗ್ಯ ವಿಮೆ ಮಾಡಿಸಿ. ವಾಹನ ಚಲಾಯಿಸುವಾಗ ವಿಮೆ ಮಾಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ದಿನನಿತ್ಯ ವ್ಯಾಯಾಮ, ಯೋಗಾಸನಕ್ಕಾಗಿ ಸಮಯವನ್ನು ಮೀಸಲಿಡಲಾರಂಭಿಸಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.

ಪ್ರತಿ ಶನಿವಾರದಂದು ಹನುಮನ ಮತ್ತು ಪ್ರತಿ ಸೋಮವಾರದಂದು ಶಂಭೋಲಿಂಗನ ದರ್ಶನ, ಪೂಜೆ, ಪುನಸ್ಕಾರ ಮಾಡಿಕೊಳ್ಳುತ್ತಿದ್ದರೆ ಮಾನಸಿಕ ನೆಮ್ಮದಿ ಮತ್ತು ದೈವಬಲ ಎರಡೂ ಬರುತ್ತವೆ. ಜೊತೆಗೆ ಬರುವ ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಹೊಂದಬಹುದು.

ಮನೆಯ ಹಿರಿಯರ ಮಾತೇ ಮುಖ್ಯ. ಆದ್ದರಿಂದ ಮನೆಯಲ್ಲಿನ ಹಿರಿಯರ ಮಾತಿಗೆ ಹೆಚ್ಚಿನ ಬೆಲೆ ಕೊಟ್ಟರೆ ಜೀವನದಲ್ಲಿ ಏಳ್ಗೆ ಹೊಂದಬಹುದು. ಸಾಲ ಮಾಡಲೇಬೇಕಾದಂತಹ ಪರಿಸ್ಥಿತಿ ಬಂದರೆ ಅದನ್ನು ತೀರಿಸುವ ಬಗ್ಗೆ ಯೋಚನೆ ಮಾಡಿ ಸಾಲ ಪಡೆದುಕೊಳ್ಳಬೇಕು. ದುಡಿದ ದುಡ್ಡನ್ನು ಉಳಿಸಿಕೊಂಡು ಹೆಚ್ಚಿನ ಉಳಿತಾಯ ಮಾಡಲಾರಂಭಿಸಬೇಕು. ದೇವರಿಗೆಂದೇ ಒಂದಿಷ್ಟು ಹಣ ಮೀಸಲಿಟ್ಟು ನಿಮ್ಮಿಷ್ಟದ ದೇವಾಲಯಕ್ಕೆ ಏನಾದರೂ ವಸ್ತು ಕೊಡಿಸಿ.

ಕೆಲಸಗಾರರು ತಮ್ಮ ಮುಖ್ಯಸ್ಥರು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸಬೇಕು. ಕೆಲಸದಲ್ಲಿ ಒಂದಿನಿತೂ ಸೋಮಾರಿತನ ಮಾಡಬಾರದು. ಕೆಲಸ ಬದಲಾವಣೆ ಕೂಡ ಈ ಸಮಯದಲ್ಲಿ ಮಾಡದಿರುವುದು ಸೂಕ್ತ. ಜುಲೈ ನಂತರ ಅದರ ಬಗ್ಗೆ ಯೋಚನೆ ಮಾಡಿ.

ಗಂಡ-ಹೆಂಡತಿಯರಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಪ್ರೀತಿಯಿಂದಿರಬೇಕು. ಚಿಕ್ಕಪುಟ್ಟ ವಿಷಯಗಳಿಗೆ ಜಗಳ ಮಾಡುತ್ತಿದ್ದರೆ ಮನಸ್ಸು ಕೆಡಿಸಿಕೊಂಡು ಇಬ್ಬರೂ ದೂರಾಗಬಹುದು ಎಂದು ಅರಿತುಕೊಂಡೇ ಜೀವನ ಮಾಡಬೇಕು. ಮಕ್ಕಳ ಬಗ್ಗೆಯೂ ಹೆಚ್ಚಿನ ಗಮನ ನೀಡುತ್ತಿರಬೇಕು. ಕೋಟಿಗಟ್ಟಲೇ ಇರುವ ಆಸ್ತಿಗಿಂತಲೂ ಮನೆಯ ಹೆಣ್ಣು ಮಕ್ಕಳ ಗೌರವವೇ ದೊಡ್ಡ ಆಸ್ತಿ ಎಂದು ತಿಳಿದುಕೊಂಡು ಮನೆಯ ಹೆಂಗಸರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು.

ಸಾಧ್ಯವಿದ್ದರೆ ಮೃತ್ಯುಂಜಯ ಹೋಮ, ಶನಿಶಾಂತಿ ಮಾಡಿಸಬಹುದು. ಶಂಭೋಲಿಂಗನಿಗೆ ರುದ್ರಾಭಿಷೇಕ ಮಾಡುವುದು ಒಳ್ಳೆಯದು. ನಿತ್ಯ ಮೃತ್ಯುಂಜಯ ಮಂತ್ರ ಜಪ ಪಠಿಸುವುದು ಒಳ್ಳೆಯದು. ಎಲ್ಲಿಯೇ ಹೋಗಲಿ ತಮ್ಮ ವಸ್ತುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಮೈಮೇಲೆ ಧರಿಸಿದ ಬಂಗಾರಗಳನ್ನು ತೋರಿಸಿಕೊಳ್ಳುತ್ತ ತಿರುಗಾಡಬಾರದು. ತಿರುಗಾಡಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬುದು ಅರಿತುಕೊಳ್ಳಬೇಕು.

ದೊಡ್ಡ ಹೂಡಿಕೆಗಳನ್ನು ಜುಲೈ ನಂತರ ಮಾಡುವುದು ಉತ್ತಮ. ಕೆಲಸ ಕಾರ್ಯ ಮಾಡುವಾಗ ಮತ್ತು ಮುಖ್ಯವಾದ ಮಾತುಕತೆ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ.

ಅವಸರದ ಪ್ರವೃತ್ತಿ ಬಿಟ್ಟು, ಸಹನೆ ಹೆಚ್ಚಿಸಿಕೊಳ್ಳಬೇಕು. ಆದಷ್ಟು ನಿಧಾನವಾಗಿ ಯೋಚಿಸಿಯೇ ಮುಖ್ಯವಾದ ನಿರ್ಧಾರ ಮಾಡಿಕೊಳ್ಳಬೇಕು. ಯಾವುದನ್ನೇ ಆಗಲಿ ಪೂರ್ವಾಪರ ಯೋಚಿಸದೇ ಒಪ್ಪಿಕೊಳ್ಳಬಾರದು. ದುಷ್ಟರ ಸಹವಾಸ ಇದ್ದರೆ ಬಿಡಲೇಬೇಕು. ಅನವಶ್ಯಕವಾಗಿ ಯಾರೊಂದಿಗೂ ಜಗಳ ಸಲ್ಲದು. ಜಗಳದಲ್ಲಿ ಪೆಟ್ಟು ಬೀಳುವುದನ್ನು ತಪ್ಪಿಸಿಕೊಳ್ಳಬೇಕೆಂದರೆ ಸಿಟ್ಟಿನ ಮೇಲೆ ಹಿಡಿತವಿಟ್ಟುಕೊಂಡಿರಬೇಕು.

ಒಟ್ಟಿನಲ್ಲಿ ಹೊಸ ವರ್ಷವು ಮೇಷ ರಾಶಿಯವರಿಗೆ ಶೇ.50ರಷ್ಟು ಒಳ್ಳೆಯದಿದೆ. ಹೊಸ ವರ್ಷವನ್ನು ಹುರುಪಿನಿಂದ ಪ್ರಾರಂಭಿಸಿ ಉತ್ಸುಕತೆಯಿಂದ ಉಲ್ಲಾಸಮಯವಾಗಿ ಹೊಸ ವರ್ಷವನ್ನು ಸ್ವಾಗತಿಸಿ ಶುಭವಾಗಲಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

English summary
Yearly horoscope 2015 for Aries zodiac sign. First half is not so good for Aries people, but later part of the year is fruitful, says astrologer S.S. Naganurmath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X