ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಭವಿಷ್ಯ 2015 : ಕುಂಭ ಆರಕ್ಕೇರಲ್ಲ ಮೂರಕ್ಕಿಳಿಯಲ್ಲ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಧನಿಷ್ಠಾ ನಕ್ಷತ್ರದ 3, 4ನೇ ಚರಣ ಮತ್ತು ಶತತಾರಾ, ಪೂರ್ವಾಭಾದ್ರಪದ 1, 2, 3ನೇ ಚರಣದಲ್ಲಿ ಜನಿಸಿದವರದು ಕುಂಭ ರಾಶಿ. ಗು, ಗೆ, ಗೊ, ಸ, ಸಿ, ಸು, ಸೆ, ಸೊ, ದೊ ಎಂಬಕ್ಷರಗಳಲ್ಲಿ ಈ ರಾಶಿಯವರಿಗೆ ಜನ್ಮನಾಮ ಇಡಬೇಕಾಗುತ್ತದೆ.

ಕುಂಭ ರಾಶಿಯವರಿಗೆ 2015ನೇ ಹೊಸ ವರ್ಷ ಬೇಸರದಿಂದ ಆರಂಭವಾಗಿದೆ ಎನ್ನಬಹುದು. ಜುಲೈ ನಂತರ ಅಂದರೆ ಈ ವರ್ಷದ ಉತ್ತರಾರ್ಧದಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು. ಅಲ್ಲಿಯವರೆಗೆ ಇದ್ದದ್ದು ಇದ್ದಂಗೆ ಇರುತ್ತದೆ. "ಆರಕ್ಕೆ ಏರಲ್ಲ, ಮೂರಕ್ಕಿಳಿಯಲ್ಲ" ಕುಂಭ ರಾಶಿಯವರಿಗೆ. ಏಕೆಂದರೆ, ಇತ್ತ ಗುರುಬಲದ ಕೊರತೆ ಎದ್ದು ಕಾಣುತ್ತಿದ್ದರೆ, ಅತ್ತ ಶನಿಬಲವೂ ಇಲ್ಲ. ಕಂಕಣ ಬಲಕ್ಕಾಗಿ ಕಾದಿರುವವರಿಗೆ ಜುಲೈ ನಂತರ ಶುಭಕರವಾದರೆ, ಸಂತಾನ ಭಾಗ್ಯದ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಆವಾಗಲೇ ಹುಳಿ ತಿನ್ನುವ ಸಂದರ್ಭ ಒದಗಿ ಬರುತ್ತದೆ ಚಿಂತೆ ಬಿಡಿ.

ಈಗಾಗಲೇ ಸೋಲಿನ ಸರಮಾಲೆಗಳಿಂದ ಬೆಂದವರು ಮತ್ತು ಹಣಕಾಸಿನ ದುಃಸ್ಥಿತಿಯಿಂದ ಪರದಾಡುತ್ತಿರುವವರು ಇನ್ನಷ್ಟು ದಿನ ಸಹನೆಯಿಂದಿರುವುದು ಸೂಕ್ತ. ಆರೋಗ್ಯವು ಆವಾಗಾವಾಗ ಕೈಕೊಟ್ಟು ಈಗಾಗಲೇ ದೇಹ ಕೂಡ ಬಳಲಿ ಬೆಂಡಾಗಿದೆ. ಜೊತೆಗೆ ಇದ್ದಬದ್ದ ದುಡ್ಡು ವೆಚ್ಚ ಮಾಡಿ ಕೈ ಕೂಡ ಖಾಲಿಯಾಗಿದೆ. ಜೊತೆಗೆ ಕುಟುಂಬದವರೊಂದಿಗೆ ಹೊಂದಾಣಿಕೆಯಿಲ್ಲದೇ, "ಅತ್ತ ದರಿ, ಇತ್ತ ಪುಲಿ" ಎಂಬಂತಾಗಿದ್ದಾರೆ. ಆದರೇನು ಮಾಡುವುದು ಗೋಚಾರ ಫಲದಲ್ಲಿದ್ದನ್ನು ಅನುಭವಿಸಲೇಬೇಕಲ್ಲವೇ. ಇದು ಈಗಾಗಲೇ ಇವರಿಗೆ ಅರಿವಾಗಿದೆ. ಅರಿವಾದವರು ತಮ್ಮ ಅಭಿಪ್ರಾಯ ಕಿಂಚಿತ್ತೂ ಆತಂಕವಿಲ್ಲದೇ ತಿಳಿಸಬಹುದು. ಇತರರಿಗೂ ಗೊತ್ತಾಗಲಿ ಗೋಚಾರ ಫಲದ ಮಹತ್ವ.

Yearly horoscope and prediction 2015 for Aquarius

ಕೆಲವರಿಗೆ ಮನೆಯ ಹೆಂಗಸರಿಂದ ತಲೆ ಚಿಟ್ಟು ಹಿಡಿದಿದ್ದರೆ, ಇನ್ನಷ್ಟು ಮಂದಿಗೆ ಮನೆ ಮಾಲೀಕರ ಹಣದ ರಾಕ್ಷಸೀತನದ ಅರಿವಾಗಿದೆ. ಇವರೇನು ಇಷ್ಟೊಂದು ಮಾನವೀಯತೆಯಿಲ್ಲದೇ ನಡೆದುಕೊಳ್ಳುತ್ತಿದ್ದಾರಲ್ಲ. ದೇವರು ಏನೂ ಮಾಡುವುದೇ ಇಲ್ವಾ ಇವರಿಗೆ ಅಂದುಕೊಳ್ಳುವಂತಾಗಿರುತ್ತದೆ. ಆದರೆ ಅವರಿಗೆ ದೇವರು ಶುರು ಹಚ್ಚಿಕೊಂಡನಂದರೆ ಮುಗೀತು ಅವರ ಕಥೆ. ಬಾಡಿಗೆದಾರರನ್ನು ಗೋಳು ಹೊಯ್ದುಕೊಂಡ ಅವರಿಗೆ ಇದ್ದಬದ್ದದ್ದನ್ನೆಲ್ಲಾ ಮಾರಿಕೊಂಡು ಬಾಡಿಗೆ ಮನೆಗೆ ಹೋಗಲೂ ಕೂಡ ದುಡ್ಡು ಇಲ್ಲದಂಗೆ ಮಾಡುವುದು ದೇವರಿಗೆ ಗೊತ್ತು. ಆದರೆ ಅದಕ್ಕೆ ಟೈಮ್ ಬರಬೇಕು. ಅದು ಬಂದೇ ಬರುತ್ತದೆ. ದೇವರಿಗೆ ಬಿಡಿ ಅದನ್ನು ಅವನೇ ಮಾಡುತ್ತಾನೆ.

ತಟಸ್ಥ ನೀತಿಯೇ ಉತ್ತಮ : ಇನ್ನು ಕೆಲಸಗಾರರಿಗೂ ಕೂಡ ಕೊಂಚ ಕಿರಿಕಿರಿಯಿದ್ದಿದ್ದೇ. ಆದರೆ ಕೆಲಸಕ್ಕಿಂತ ಆಫೀಸ್ನಲ್ಲಿ ನಡೆಯುವ ರಾಜಕೀಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೆ ಕೆಲವರು. ಅದೆಲ್ಲ ಬೇಡ. ನಿಮ್ಮ ಕೆಲಸ ನೀವು ಮಾಡಿ ಹೊರಡಿ ಸಾಕು. ರಾಜಕೀಯ ಮಾಡುವವರಿಗೆ ಸರಿಯಾಗಿ ಏಟು ಬಿದ್ದಾಗ ತಾವೇ ತೆಪ್ಪಗೇ ಮುದುಡಿಕೊಂಡು ಬಿದ್ದಿರುತ್ತಾರೆ. ನಿಮಗೀಗ ಯಾವುದರಲ್ಲೂ ಗೆಲುವಿಲ್ಲ ಹೀಗಾಗಿ ಮುಗುಮ್ಮಾಗಿರುವುದು ಒಳ್ಳೆಯದು.

ದೊಡ್ಡ ದೊಡ್ಡ ಯೋಜನೆ ಮತ್ತು ಹಣ ಹೂಡಿಕೆಗಳನ್ನು ಜುಲೈವರೆಗೂ ತಡೆಹಿಡಿಯುವುದು ಉತ್ತಮ. ಸದ್ಯಕ್ಕಿರುವ ಯೋಜನೆಗಳನ್ನೇ ತುಂಬಾ ಶ್ರದ್ಧೆಯಿಂದ ಮಾಡಿ ಮುಗಿಸಿ. ಅಡೆತಡೆಗಳು ಬಂದರೂ ಹೆದರದೇ ಧೈರ್ಯದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಹಿಡಿದ ಕೆಲಸವನ್ನು ಮುಗಿಸಿ. ಕುಟುಂಬದವರಲ್ಲೂ ಅನವಶ್ಯಕ ವಾಗ್ವಾದ ಬೇಡ. ಸಿಟ್ಟಿನ ಭರದಲ್ಲಿ ಏನಾದರೂ ಅಡ್ಡಾದಿಡ್ಡಿ ಮಾತನಾಡಿದರೆ ದಾಂಪತ್ಯ ಸುಖ ಹಾಳಾಗುವುದು ನಿಮ್ಮದೇನೆ ಗೊತ್ತಿರಲಿ. ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ ಅಗತ್ಯವಾಗಿ ರೂಢಿಸಿಕೊಳ್ಳಬೇಕು. ಸಾಲ ಸಿಗುತ್ತದೆಯೆಂದು ಬೇಕಾಬಿಟ್ಟಿ ತೆಗೆದುಕೊಂಡು ಖರ್ಚು ಮಾಡಿ ಆಮೇಲೆ ಸಾಲ ತುಂಬಲು ಪರದಾಡುವಂತೆ ಮಾಡಿಕೊಳ್ಳಬೇಡಿ. ಈ ಮೊದಲೇ ಪಡೆದ ಸಾಲವನ್ನು ತಪ್ಪಿಸದೇ ತೀರಿಸಲು ಪ್ರಯತ್ನಿಸಿ.

ನಿಮ್ಮನ್ನು ದ್ವೇಷಿಸುವವರನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಬೇಡಿ. ಅವರ ಚುಚ್ಚುಮಾತಿನಿಂದ ನಿಮ್ಮ ಮನಸಿಗೆ ನೋವು ಹೊರತು ಅವರಿಗೇನಲ್ಲ. ಯಾಕೆ ಬೇಕು ದುಷ್ಟರ ಸಹವಾಸ.

ಅಪರಿಚಿತರ ಮತ್ತು ಹೊಸಬರ ಮಾತನ್ನು ಬೇಗನೆ ನಂಬಬೇಡಿ. ಕೂಲಂಕುಷವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇಲ್ಲಾಂದ್ರೆ ಅವರೇ ನಿಮಗೆ ಮುಂದೊಂದು ದಿನ ಉರುಳಾಗಬಹುದು ಎಂಬ ಎಚ್ಚರಿಕೆ ಮೊದಲೇ ವಹಿಸಿಕೊಳ್ಳಿ. ಮಕ್ಕಳೊಂದಿಗೆ ಹೆಚ್ಚಿನ ಸಲುಗೆ ಬೆಳೆಸಿಕೊಂಡು ಪ್ರೀತಿ ನೀಡಿ. ಮಕ್ಕಳ ಸುಖದ ಮುಂದೆ ಎಲ್ಲವೂ ಶೂನ್ಯ ಎಂಬುದು ಗೊತ್ತೇ ಇರಬಹುದು ನಿಮಗೆ.

ಇನ್ನು, ಇದ್ದ ಎಲ್ಲ ಆಸ್ತಿಗಿಂತ ಮನೆ ಹೆಣ್ಣುಮಕ್ಕಳೇ ದೊಡ್ಡ ಆಸ್ತಿ ಎಂಬುದು ತಿಳಿದುಕೊಂಡು ಮನೆ ಹೆಂಗಸರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಿಂಚಿತ್ತೂ ಅವರಿಗೆ ತೊಂದರೆಯಾದರೆ ಮನೆ ಮರ್ಯಾದೆನೆ ಹೋದಂಗೆ ಎಂಬುದು ತಿಳಿದುಕೊಳ್ಳಿ.

ಜುಲೈ ನಂತರ ನಿರಾಳ : ಜುಲೈ ನಂತರ ಕುಂಭ ರಾಶಿಯವರು ನಿಟ್ಟುಸಿರು ಬಿಡಬಹುದು. ಆವಾಗ ಗುರುವು ಸ್ವಲ್ಪ ಬಲ ನೀಡಲಿದ್ದಾನೆ. ಅ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಶುಭಕರವಿದೆ. ವ್ಯವಹಾರಸ್ಥರಿಗೆ ಲಾಭದ ರುಚಿ ಕಾಣುತ್ತದೆ. ಇನ್ನು ಆರೋಗ್ಯವು ನಳನಳಿಸಲಾರಂಭಿಸುತ್ತದೆ. ಅಲ್ಲಿಯವರೆಗೂ ಸಹನೆ ಮತ್ತು ತಾಳ್ಮೆ ಅಳವಡಿಸಿಕೊಂಡರೆ ಸಾಕು.

ಇನ್ನು ಶನಿಯ ಗೋಚಾರವು ಕುಂಭ ರಾಶಿಯವರಿಗೆ ಅಂಥಾ ಲಾಭಕರವೇನಿಲ್ಲ. ಇದು ಇನ್ನೂ ಮೂರು ವರ್ಷಗಳವರೆಗೆ ಇರುತ್ತದೆ. ಅದರೆ ಫಲ ಮಾತ್ರ ಕೇವಲ ಆರು ತಿಂಗಳು ಮಾತ್ರ ಕಂಡು ಬರುತ್ತದೆ. ಆ ಕೆಟ್ಟ ಸಮಯದಲ್ಲಿ ದುಡ್ಡಿಗಾಗಿ ಪರದಾಟ ಶುರುವಾಗುತ್ತದೆ. ಹಮ್ಮಿಕೊಂಡ ಎಲ್ಲ ಯೋಜನೆಗಳಿಗೆ ಎಳ್ಳು ನೀರು ಬಿಟ್ಟಂಗಾಗಿ ಕೈಸುಟ್ಟುಕೊಳ್ಳಬೇಕಾಗುತ್ತದೆ. ಮನೆಯವರೊಂದಿಗೆ ವಿಪರೀತ ವಾಗ್ವಾದದಿಂದಾಗಿ ಮನಸ್ಸಿನ ನೆಮ್ಮದಿಯೇ ಮರೀಚಿಕೆಯಾಗುತ್ತದೆ. ಆದರೆ ದೈವಬಲ ಹೆಚ್ಚಿಸಿಕೊಂಡರೆ ಈ ಮೇಲಿನ ಎಲ್ಲ ದುಷ್ಟ ಫಲಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಬಂದಂತಹ ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಹೊಂದಬಹುದು.

ಕೆಲ ದುಷ್ಟರಿಂದಲೂ ಜೀವನದಲ್ಲಿ ಏರುಪೇರಾಗುತ್ತಿರುತ್ತದೆ. ಅದನ್ನು ಮೊದಲೇ ಮನಗಂಡು, ಅಂದರೆ ಜನ್ಮಜಾತಕವನ್ನೊಮ್ಮೆ ಪರಿಶೀಲಿಸಿಕೊಂಡು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲಾಂದ್ರೆ ಮೊದಲೇ ಟೈಮ್ ಸರಿ ಇಲ್ಲ. ಇನ್ನೇನೋ ಮಾಡಲು ಜೀವನದಲ್ಲಿ ಎಡವಬಾರದು ಕುಂಭ ರಾಶಿಯವರು. ಇದು ಅವರವರಿಗೆ ಬಿಟ್ಟಿದ್ದು. ಒಳ್ಳೆದಾದರೆ ನಿಮಗೇನೆ, ಕೆಟ್ಟದ್ದಾದರೂ ನಿಮಗೇನೆ.

ಸಾಧ್ಯವಾದರೆ ಕುರುಡರಿಗೆ, ಕುಂಟರಿಗೆ ಕೈಲಾದ ಸಹಾಯ ಮಾಡಿ. ಶಂಭೋಲಿಂಗನ ಆರಾಧನೆ ಹೆಚ್ಚಿನ ಪ್ರಮಾಣದಲ್ಲಿ ಮಾಡಿದರೆ ಒಳ್ಳೇದು. ಹಣಕಾಸಿನ ಸುಸ್ಥಿತಿಗೆ ಒಮ್ಮೆ ವೇಂಕಪ್ಪನ ದರ್ಶನ ಮಾಡಿ.

ಮೊದಲೇ ಸೂಕ್ಷ್ಮ ಮನಸ್ಸಿನ ಕುಂಭ ರಾಶಿಯವರು ಒಂಥರಾ ಕುತೂಹಲ ಬುದ್ಧಿಯವರಾಗಿರುತ್ತಾರೆ. ಏನೇ ನೋಡಿದರೂ ಅದರ ಬಗ್ಗೆ ಹಿಸ್ಟರಿನೇ ಹೆಕ್ಕಿ ತೆಗೆಯುತ್ತಾರೆ. ಯಾರನ್ನೇ ನೋಡಿದರೂ ಅವರ ಹಿನ್ನೆಲೆ ಮುನ್ನೆಲೆ ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಎಲ್ಲರನ್ನೂ ನಂಬುವುದು ಇವರ ವೀಕನೆಸ್. ಹೀಗಾಗಿ ದಿಢೀರ್ ನಿರ್ಧಾರ ತೆಗೆದುಕೊಳ್ಳದೇ ನಂಬಿಕೆ ಬಂದ ಮೇಲೆಯೇ ಮತ್ತೊಬ್ಬರ ಮೇಲೆ ವಿಶ್ವಾಸವಿಡಿ. ಚಂಚಲ ಮನಸ್ಸಿನಿಂದ ಅಗಿದ್ದಾಗಲಿ ನೋಡೋಣ ಎನ್ನುವ ಭಂಡ ಧೈರ್ಯ ಬೇಡ.

ಯಾವ ದಿನ ಶುಭದಿನ, ಯಾವ ನಂಬರ್ ಲಕ್ಕಿ : ನೀಲಿ, ತಿಳುನೀಲಿ, ಕಪ್ಪು ಬಣ್ಣ ಇವರಿಗೆ ಇಷ್ಟವೆನಿಸುತ್ತವೆ. ಇಂಥಹ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಹೆಚ್ಚಾಗಿ ಬಳಸಬಹುದು. ಶುಕ್ರವಾರ ಮತ್ತು ಶನಿವಾರ ಇವರಿಗೆ ಸಂತಸ ಹೆಚ್ಚು. ಈ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡಬಹುದು. 3, 4, 6, 8 ನಂಬರ್ಗಳು ಇವರಿಗೆ ಓಕೆ. 8, 17, 26 ತಾರೀಖುಗಳು ಶುಭಕರ.

ವೃಷಭ, ಮಕರ, ಮೀನ ರಾಶಿಯವರೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಆದರೆ ಮೇಷ, ಕರ್ಕ, ಸಿಂಹ ರಾಶಿಯವರೊಂದಿಗೆ ಅಷ್ಟೊಂದು ಆತ್ಮೀಯತೆ ಇರಲ್ಲ. ಇದನ್ನು ಈ ಬಾರಿ ಪರೀಕ್ಷಿಸಿ ನೋಡಿಕೊಳ್ಳಿ ಬೇಕಾದವರು.

English summary
Yearly horoscope 2015 for Aquarius zodiac sign. Aquarius people have tough task ahead in this year. They have to maintain cool, do only good things and stay away from any confrontations. Believe in power of Lord Shani and worship him regularly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X