ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಮೃಗಶಿರಾ ನಕ್ಷತ್ರ 1, 2ನೇ ಪಾದದಲ್ಲಿ ಜನಿಸಿದವರು ವೃಷಭ, 3 ಮತ್ತು 4ನೇ ಪಾದದಲ್ಲಿ ಜನಿಸಿದವರು ಮಿಥುನ ರಾಶಿಯವರಾಗುತ್ತಾರೆ. ಒಂದೇ ರಾಶಿ, ನಕ್ಷತ್ರದವರು ಬೇರೆ ಗುಣ, ಸ್ವಭಾವ ಹೊಂದಿರುತ್ತಾರೆ ಎಂಬುದಕ್ಕೆ ಸಾಕ್ಷಿಯೇ ಈ ನಕ್ಷತ್ರ. ಎಲ್ಲರೂ ಅರ್ಥ ಮಾಡಿಕೊಳ್ಳಬಹುದು ಜನ್ಮ ನಕ್ಷತ್ರದ ಪಾದಗಳ ಪ್ರಕಾರ ಅವರವರ ವ್ಯಕ್ತಿತ್ವ ಹೇಗೆ ಬದಲಾಗುತ್ತಿರುತ್ತದೆ ಎಂಬುದನ್ನು.

ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವರಿಗೆ ವೇ, 2ನೇದಕ್ಕೆ ವೋ (ಇವರದು ವೃಷಭ ರಾಶಿ.). 3ನೇದಕ್ಕೆ ಕಾ, 4ನೇ ಚರಣಕ್ಕೆ ಕೀ ಎಂಬುದಾಗಿ ಜನ್ಮನಾಮ ಬರುತ್ತದೆ (ಮಿಥುನ ರಾಶಿ).

ಈ ನಕ್ಷತ್ರದ 1ನೇ ಪಾದದಲ್ಲಿ ಜನಿಸಿದವರು ಸ್ವಲ್ಪ ಸೊಕ್ಕಿನ ಮನುಷ್ಯರೆನ್ನಿಸಿಕೊಂಡು, ತಮ್ಮ ಹಠ ಸ್ವಭಾವದಿಂದ ಉಳಿದವರಿಗೆ ಕೆಟ್ಟವರಾಗಿ ಕಾಣುತ್ತಿರುತ್ತಾರೆ. ದೇಹದಿಂದ ದಷ್ಟಪುಷ್ಟರಾಗಿರುವುದರಿಂದ ಎಲ್ಲದರಲ್ಲೂ ಗೆಲುವು ನನ್ನದೆನ್ನುವ ಕುತ್ಸಿತ ಬುದ್ಧಿ ಹೊಂದಿರುತ್ತಾರೆ. 2ನೇ ಪಾದದವರು, ಇತರರಿಗೆ ಟೆನ್ಶನ್ ಕೊಡುವುದರಲ್ಲಿ ಎಕ್ಸ್‌ಪರ್ಟ್ ಆಗಿರುತ್ತಾರೆ. ಇವರಿಗೆ ಧೈರ್ಯದ ಕೊರತೆಯಿರುವುದರಿಂದ ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳುವುದು ಇಷ್ಟವಿರುವುದಿಲ್ಲ. ಹೀಗಾಗಿ ಇವರ ಪುಕ್ಕಲು ಸ್ವಭಾವಕ್ಕೆ ಇತರರು ಗೇಲಿ ಮಾಡುತ್ತಿರುತ್ತಾರೆ. [ಶನಿಶಕ್ತಿ : ಮಿಥುನ ರಾಶಿಗೆ ಹೀಗಿದೆ]

Birth star series : Mrigasira nakshatra characteristics

3ನೇ ಪಾದದವರು, ಸ್ವಲ್ಪ ಸಂಪ್ರದಾಯ ವಿರೋಧಿಗಳೆನ್ನಿಸಿಕೊಳ್ಳುತ್ತಾರೆ. ಯಾವುದಕ್ಕೂ ತಮ್ಮ ಒಪ್ಪಿಗೆ ಇರಬೇಕು ಎಂದು ಬಯಸುತ್ತಾರೆ. ಏಕೆಂದರೆ ತುಂಬಾ ಧೈರ್ಯಶಾಲಿಯಾಗಿದ್ದು ಸುಂದರ ಮೈಕಟ್ಟು ಹೊಂದಿರುತ್ತಾರೆ. ಬುದ್ಧಿವಂತಿಕೆಯಿಂದ ಎಲ್ಲರನ್ನು ತಮ್ಮ ಅಡಿಯಾಳುಗಳನ್ನಾಗಿಸಿಕೊಂಡಿರುತ್ತಾರೆ. 4ನೇ ಪಾದದಲ್ಲಿ ಜನಿಸಿದವರು ಸ್ವಲ್ಪ ಅವಸರ ಪ್ರವೃತ್ತಿ ಹೊಂದಿದ್ದರೂ ಎಲ್ಲವನ್ನೂ ಮ್ಯಾನೇಜ್ ಮಾಡುವ ಧೈರ್ಯ ಹೊಂದಿರುತ್ತಾರೆ. ಆದರೆ, ಹಣದ ಅಭಾವದಿಂದ ಇವರ ಮನಸ್ಸು ಉಗ್ರವಾಗಿರುತ್ತದೆ. ಏನೇ ಕೆಲಸ ಮಾಡಿದರೂ ಅರ್ಧಕ್ಕೆ ಕೈಬಿಡುತ್ತಾರೆ. ಇದರಿಂದ ಬೇರೆಯವರು ಇವರನ್ನು "ಕಿಸಬಾಯಿದಾಸ" ಎಂದು ಮೂದಲಿಸುತ್ತಿರುತ್ತಾರೆ. ಈ ರೀತಿ ಈ ನಕ್ಷತ್ರದ ವಿವಿಧ ಪಾದಗಳವರ ವ್ಯಕ್ತಿತ್ವ ತಿಳಿದುಕೊಳ್ಳಬಹುದು. ಆದರೆ ಇನ್ನಷ್ಟು ಹೆಚ್ಚಿನ ವಿಷಯ ಅವರ ಜನ್ಮ ಜಾತಕದ ಮೂಲಕ ಕಂಡುಕೊಳ್ಳಬಹುದು.

ಇನ್ನು ಉಳಿದಂತೆ, ಸಾಮಾನ್ಯವಾಗಿ ಈ ನಕ್ಷತ್ರದವರು ಜಗತ್ತಿನ ಎಲ್ಲ ಜ್ಞಾನಗಳನ್ನು ನಾನು ತಿಳಿದುಕೊಳ್ಳಲೇಬೇಕು ಎಂಬ ಹಠ ಸ್ವಭಾವ ಹೊಂದಿರುತ್ತಾರೆ. ಜೀವನದ ಕೊನೆ ದಿನದವರೆಗೂ ಏನಾದರೂ ಹೊಸತನ್ನು ಕಲಿಯಬೇಕೆನ್ನುವ ಹಂಬಲ. ಆಕರ್ಷಣೀಯ ವ್ಯಕ್ತಿತ್ವದೊಂದಿಗೆ ತುಂಬಾ ನೆನಪಿನ ಶಕ್ತಿ ಇವರು ಹೊಂದಿರುತ್ತಾರೆ. ಏನಾದರೂ ಇರಲಿ ಒಂದೇ ಸಲ ಹೇಳಬೇಕು. ಅಷ್ಟರಲ್ಲೆ ಎಲ್ಲವನ್ನೂ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಿವರು. ಮತ್ತೊಮ್ಮೆ ಹೇಳುವ ಅವಶ್ಯಕತೆಯಿಲ್ಲ. ಅಷ್ಟೊಂದು ಅಗಾಧವಾದ ನೆನಪಿನ ಶಕ್ತಿ ಇವರಲ್ಲಿರುತ್ತದೆ. ಬೇರೆಯವರ ಹಾವಭಾವಗಳನ್ನು ನೋಡಿಯೇ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಷ್ಟು ಶಾರ್ಪ್ ಮೈಂಡ್ ಇವರಿಗಿರುತ್ತದೆ. [ಮೀನ, ಮೇಷ, ಮಿಥುನ, ಕರ್ಕ ಗುಣಗಳಿವು]

ಇವರು ತಾನು ಹೇಳಿದ್ದೇ ಸರಿ ಎನ್ನುತ್ತ ವಾದಕ್ಕಿಳಿದರೆ ಮುಗೀತು. ಇವರೆದುರಿಗೆ ಎಲ್ಲರೂ ಬಾಯಿ ಮುಚ್ಚಿಕೊಳ್ಳಬೇಕಾಗುತ್ತದೆ. ಅಷ್ಟೊಂದು ಕರಾರುವಾಕ್ಕಾಗಿ ತಮ್ಮ ವಾದ ಮಂಡಿಸುವ ಪ್ರತಿಭೆ ಇವರಲ್ಲಿರುತ್ತದೆ. ಸ್ವಲ್ಪ ಸ್ವಾರ್ಥ ಗುಣವಿದ್ದರೂ ಅದನ್ನು ತೋರ್ಪಡಿಸದೆ, ತಮಗೇನು ಬೇಕೋ ಅದನ್ನು ಚಾಣಾಕ್ಷತನದಿಂದ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ತಮಗೆ ಬೇಕಾದ್ದನ್ನು ಪಡೆಯಲು ಜಗಳಕ್ಕೂ ಸೈ ಎನ್ನುತ್ತಾರೆ. ಸಿಗದಿದ್ದರೆ ಕಿತ್ತುಕೊಳ್ಳುವ ಕ್ರೌರ್ಯತೆಯೂ ಇವರ ಮನದಲ್ಲಿಡಗಿರುತ್ತದೆ.

ಮನಸ್ಸಲ್ಲಿದ್ದುದನ್ನು ಬರೆದು ಪದೇ ಪದೇ ಅದನ್ನು ಓದಿ ಸಂತಸಪಡುವ ಹುಚ್ಚು ಇವರಿಗಿರುತ್ತದೆ. ಹೀಗಾಗಿ ಕಥೆ, ಕಾದಂಬರಿ, ಕವಿತೆ ಹಾಗೂ ಪ್ರಬಂಧ ಲೇಖನ ಬರೆಯಲು ಇವರಿಗೆ ತುಂಬಾ ಇಷ್ಟ. ಇವರ ಪ್ರತಿಭೆ ಹೊಗಳಿದರೆ ತುಂಬಾ ಖುಷಿ ಅನುಭವಿಸುತ್ತಾರೆ. ಅಲ್ಲದೇ ಸುಮಧುರ ಹಾಡುಗಳನ್ನು ಗುನುಗುವುದು, ವಾದಗಳಲ್ಲಿ ಉತ್ಸುಕತೆಯಿಂದ ಭಾಗವಹಿಸುವುದೆಂದರೆ ಇವರಿಗೆ ಅರಳು ಹುರಿದಷ್ಟು ಸುಲಭ.

ಬೇರೆಯವರ ಎದುರು ತುಂಬಾ ನಯವಂತರು ಎಂದು ತೋರಿಸಿಕೊಳ್ಳುತ್ತಿರುತ್ತಾರೆ. ಏನಾದರೂ ದೊಡ್ಡ ಜವಾಬ್ದಾರಿ ವಹಿಸಿದರೆ, ಶಾಂತತೆಯಿಂದ ತುಂಬಾ ಅಚ್ಚುಕಟ್ಟಾಗಿ ಎಲ್ಲರೂ ಮೆಚ್ಚುವಂತೆ ಆ ಕೆಲಸ ಮಾಡಿ ಮುಗಿಸಿ ಶಹಬ್ಬಾಸ್‌ಗಿರಿ ಪಡೆದುಕೊಳ್ಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲಿನ ಅಂದರೆ ತಮಗೆ ಸಂಬಂಧವಿಲ್ಲದಿರುವ ಸಾಕಷ್ಟು ವಿಷಯಗಳನ್ನು ತಲೆಯಲ್ಲಿಟ್ಟುಕೊಂಡಿರುತ್ತಾರೆ. ಒಂಥರಾ ಕಂಪ್ಯೂಟರ್ ಮೈಂಡ್ ಇದ್ದಂಗೆ ಇವರದು. ಆದರೆ ಸುಲಭದಲ್ಲಿ ಹಣ ಮಾಡುವುದನ್ನು ಕಲಿಯಲು ಭಾರಿ ಪ್ರಯತ್ನ ಪಡುತ್ತಿರುತ್ತಾರೆ. ಕೆಲವೊಮ್ಮೆ ದುರಾಸೆಯಿಂದ ಜೂಜಾಟದಲ್ಲಿ ಹಣ ಗಳಿಸಲು ಮನಸ್ಸು ಮಾಡುತ್ತಾರೆ.

ಎಲ್ಲರ ಗಮನ ತಮ್ಮ ಮೇಲೆಯೇ ಇರಬೇಕು ಎಂಬ ಸ್ವಾರ್ಥತೆಯೋ ಅಥವಾ ಮತ್ತೊಬ್ಬರ ಮನವೊಲಿಸಿಕೊಳ್ಳಲೋ ಏನೋ ಗೊತ್ತಿಲ್ಲ. ಇವರು ಮಾತ್ರ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲವೂ ತಾವು ಹೇಳಿದಂಗೆ ನಡೆಯಬೇಕು ಎನ್ನುತ್ತಿರುತ್ತಾರೆ. ಈ ಸ್ವಭಾವ ಇವರು ಕಮ್ಮಿ ಮಾಡಿಕೊಳ್ಳಬೇಕು. ಏಕೆಂದರೆ ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ತಮ್ಮ ಜೀವನದ ಉದ್ದೇಶವೇನು ಎಂಬುದನ್ನು ಕಂಡುಕೊಳ್ಳಲು ತುಂಬಾ ಪ್ರಯತ್ನಿಸುತ್ತಿರುತ್ತಾರೆ. ಯಾವುದೇ ಗುಟ್ಟಿನ ವಿಚಾರವಿರಲಿ ನೇರವಾಗಿ ಎಲ್ಲರೆದುರು ಅದನ್ನು ಮಾತನಾಡಲು ಹೇದರೋದಿಲ್ಲ. ಎಲ್ಲವೂ ಕ್ಲೀಯರ್ ಕಟ್ ಆಗಿರಬೇಕು. ಎಲ್ಲರೂ ಹಿಂಗೇನೆ ಇರಬೇಕು ಎಂದು ಬಯಸುತ್ತಾರಿವರು.

ಕೆಲವೊಮ್ಮೆ ತಮ್ಮ ವ್ಯಕ್ತಿಗತ ಲಾಭಗಳನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಯಾರಾದರೂ ಹೇಳಿದ್ದನ್ನು, ಎಲ್ಲಿಯಾದರೂ ನೋಡಿದ್ದನ್ನು ಅತೀ ವೇಗವಾಗಿ ಕಲಿತುಕೊಳ್ಳುವುದು ಇವರಿಗೆ ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ತಮ್ಮ ಪರಿಸರದಲ್ಲಿನ ಎಲ್ಲರಿಗೂ ತಾನೇ ನಾಯಕನಾಗಬೇಕು ಎಂದು ಬಯಸುತ್ತಾರೆ. ಇತರರು ಇವರ ಮೇಲೆ ವಿಶ್ವಾಸವಿಟ್ಟು ಇವರನ್ನೇ ಬೆಂಬಲಿಸುತ್ತಾರೆ. ತಾವು ಸೋತರೂ ಚಿಂತೆಯಿಲ್ಲ ಇವರಿಗೆ, ಒಟ್ಟಿನಲ್ಲಿ ನನಗೆ ಎಲ್ಲವೂ ತಿಳಿದಿದೆ ಎಂದೂ ಎಲ್ಲರಿಗೂ ಗೊತ್ತಾಗಬೇಕು ಎಂಬ ದುರ್ಬುದ್ಧಿಯೂ ಇವರಿಗಿರುತ್ತದೆ. ಹೀಗಾಗಿ ನಾಯಕನಾಗಿ ಯಶಸ್ಸಾಗಲು ಶತಪ್ರಯತ್ನ ಪಡುತ್ತಿರುತ್ತಾರೆ.

ತಮ್ಮ ಸ್ನೇಹ ಬಳಗದಲ್ಲಿಯೇ ಪ್ರೀತಿಯನ್ನು ಹುಡುಕುತ್ತಿರುತ್ತಾರೆ. ಅದರಲ್ಲಿ ಯಶಸ್ಸನ್ನು ಕೂಡ ಪಡೆಯುತ್ತಾರೆ. ತಾವು ದುಡಿದ ಹಣದಲ್ಲಿ ತಮ್ಮ ಬಳಕೆ ವಸ್ತುಗಳನ್ನು ಮತ್ತು ಹೊಸ ಹೊಸ ಬಟ್ಟೆ ತೆಗೆದುಕೊಳ್ಳುವುದು ಇವರಿಗೆ ಹವ್ಯಾಸವಾಗಿರುತ್ತದೆ. ಆದರೆ, ಯಾವುದಾದರೊಂದು ಕೆಲಸ ಶುರು ಮಾಡಿದರೆ ಅದು ಮುಗಿಯುವವರೆಗೂ ಬೇರೆ ಯಾವುದೇ ಕೆಲಸಗಳನ್ನು ಮುಟ್ಟಲ್ಲ.

ಇಷ್ಟೇ ಅಲ್ಲ, ಎಲ್ಲರಿಗೂ ಎಲ್ಲವನ್ನೂ ಮಾಡುತ್ತೇನೆ ಎಂದು ಮಾತು ಕೊಟ್ಟು ಕೆಲವೊಂದು ಈಡೇರದಿದ್ದಾಗ ಕೈಚೆಲ್ಲಿ ತಮ್ಮಷ್ಟಕ್ಕೆ ತಾವೇ ನೊಂದುಕೊಳ್ಳುತ್ತಾರೆ. ಆದರೆ ಅತೀ ಉತ್ಸಾಹದಿಂದ ಹೀಗಾಗುತ್ತದೆ ಹೊರತು ಇವರೇನೂ ಬೇಕೂ ಅಂತಾನೇ ಹೀಗೆ ಮಾಡಿರುವುದಿಲ್ಲ. ಎಲ್ಲ ನಾನೇ ಮಾಡಬಲ್ಲೆ ಎಂಬ ಸೊಕ್ಕು ಹೀಗೆ ಮಾಡಿಸಿರುತ್ತದೆ. ಹಲವಾರು ಜನರೊಂದಿಗೆ ಇವರ ಒಡನಾಟವಿದ್ದರೂ, ಯಾರಿಗೆ ಎಷ್ಟು ಬೆಲೆ ಕೊಡಬೇಕು ಎಂಬುದು ಕೂಡ ಇವರಿಗೆ ಅರಿವಿರುವುದಿಲ್ಲ. ಹೀಗಾಗಿ ಇತರರು ಇವರಿಗೆ ಬೆಲೆ ಕೊಡುವುದು ಅಷ್ಟಕಷ್ಟೆ ಎನ್ನಬಹುದು.

ಈ ನಕ್ಷತ್ರದವರು ಸಾಮಾನ್ಯವಾಗಿ ಶಿಕ್ಷಕರು, ಮಾಧ್ಯಮ ಪ್ರಚಾರಕರು, ಸಂಗೀತಗಾರರು, ಲೇಖಕರು, ಚಿತ್ರಕಲಾವಿದರು, ದೊಡ್ಡ ಸಾಹಿತಿಗಳು, ಭೂಗರ್ಭ ಶಾಸ್ತ್ರಜ್ಞರು, ಅಥವಾ ಕಟ್ಟಡ ಕಾಮಗಾರಿ ಗುತ್ತಿಗೆದಾರರು, ಫ್ಯಾಶನ್ ಮಾಡೆಲಿಂಗ್ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಬೇರೆಯವರನ್ನು ಪಳಗಿಸುವ ಸೂಕ್ಷ್ಮ ಬುದ್ಧಿ ಇವರಲ್ಲಿರುವುದರಿಂದ, ಚಾಣಾಕ್ಷತನದಿಂದ ಇತರರಿಗೆ ವಿದ್ಯೆ ಕಲಿಸುವುದು ಇವರಿಗೆ ತುಂಬಾ ಸರಳವಾದ ಕೆಲಸ. ಆದರೆ ಇದರಿಂದ ಜಂಭ ಕೊಚ್ಚಿಕೊಳ್ಳಲು ಇವರು ಹಿಂಜರಿಯುವುದಿಲ್ಲ. ಆದಷ್ಟು ಮತ್ತೊಬ್ಬರಿಗೆ ಸಹಾಯ, ಸಹಕಾರ ಮಾಡಬೇಕೆಂದರೂ ಒಮ್ಮೊಮ್ಮೆ ಹತ್ತತ್ತು ಬಾರಿ ಯೋಚಿಸಿ ಮತ್ತೊಬ್ಬರಿಗೆ ಸಹಾಯ ಮಾಡುತ್ತಾರೆ.

ರಜೆ ಸಿಕ್ಕಿತೆಂದರೆ ಹೊರಗಡೆ ಸುತ್ತಾಡಬೇಕು, ಹೊಸ ಸ್ನೇಹಿತರನ್ನು ಗಳಿಸಿಕೊಳ್ಳಬೇಕು ಎಂದುಕೊಳ್ಳುತ್ತಿರುತ್ತಾರೆ. ಹೊಸ ಗೆಳೆಯರಿಂದ ಹೊಸ ಹೊಸ ವಿಚಾರ ಕಲಿತುಕೊಳ್ಳಲು ಆಸಕ್ತಿ ತೋರಿಸುತ್ತಾರೆ. ಮನೆಯಿಂದ ಬೇರೆ ಕಡೆ ವಾಸಿಸಬೇಕೆಂಬ ಉತ್ಕಟ ಬಯಕೆ ಹೊಂದಿಕೊಂಡರೂ ಇದಾಗಲ್ಲ ಎಂದುಕೊಂಡು ಸುಮ್ಮನಿರುತ್ತಾರೆ. ಹೂ ಗಿಡ ಬೆಳೆಸಿ ಮುದ್ದು ಮಾಡುತ್ತಿರುತ್ತಾರೆ. ಈ ರೀತಿ ಈ ನಕ್ಷತ್ರಗಳವರ ಗುಣಗಳಿದ್ದರೂ, ಕೆಲವೊಮ್ಮೆ ಜನ್ಮರಾಶಿಯ ಗೋಚಾರದಿಂದ ಸ್ವಭಾವ ಬದಲಾಗಲೂಬಹುದು. ಯಾವುದಕ್ಕೂ ಗೋಚಾರವನ್ನು ಒಮ್ಮೆ ನೋಡಿಕೊಳ್ಳಬೇಕಿವರು.

"ಆರಿದ್ರಾ ನಕ್ಷತ್ರ" ವಿಶೇಷ ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಈ ನಕ್ಷತ್ರದವರು ಹಣ ದುಪ್ಪಟ್ಟಾಗುತ್ತದೆ ಎಂದುಕೊಂಡು ಜೂಜಾಟದಲ್ಲಿ ಹಣ ತೊಡಗಿಸಬಾರದು.

ದೈವಕೃಪೆಗೆ : ದೇವಸ್ಥಾನಕ್ಕೆ ಹೋಗುವಾಗ ಕೈಲಾದಷ್ಟು ಪ್ರಸಾದ ತೆಗೆದುಕೊಂಡು ಹೋಗಬೇಕು. ಅಲ್ಲಿ ಬಂದವರಿಗೆ ಕೊಡಬೇಕು. ನಾನ್ಯಾಕೆ ಕೊಡಬೇಕು ಎನ್ನುವವರು ಮತ್ತೊಬ್ಬರು ಪ್ರಸಾದ ಕೊಡುವಾಗ ಕೈಯೊಡ್ಡಬಾರದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Taurus and Gemini (Mrigasira nakshatra) zodiac sign people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X