ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಂಹಾ'ಸನದ ಅದೃಷ್ಟವಿರುವ ಮಘಾ ನಕ್ಷತ್ರ!

By ನಾಗನೂರಮಠ ಎಸ್.ಎಸ್.
|
Google Oneindia Kannada News

ಮಘಾ ನಕ್ಷತ್ರದ ನಾಲ್ಕೂ ಚರಣಗಳಲ್ಲಿ ಜನಿಸಿದವರು ಸಿಂಹ ರಾಶಿಯವರಾಗುತ್ತಾರೆ. ನಕ್ಷತ್ರ ಚರಣಗಳಿಗುಣವಾಗಿ ಮ, ಮಿ, ಮು, ಮೆ ಎಂಬುದಾಗಿ ಜನ್ಮನಾಮ ಬರುತ್ತದೆ. ಇವರು ಮಹಾಪ್ರಚಂಡರು. ಇವರಲ್ಲಿರುವ ಶಕ್ತಿ, ಅಧಿಕಾರ, ಸಾಮರ್ಥ್ಯದಿಂದ ಬಯಸಿದ್ದನ್ನು ಗೆಲ್ಲುವ ಶೂರರಿವರು. ಆದರೆ ಈ ನಕ್ಷತ್ರದವರು ತಮ್ಮಲ್ಲಿರುವ ಎಲ್ಲ ಬಲವನ್ನು ಕೇವಲ ಒಳ್ಳೆಯತನಕ್ಕೆ ಉಪಯೋಗಿಸಿ ಸುಂದರ ಬದುಕು ತಾವೂ ಕಟ್ಟಿಕೊಂಡು ಇತರರ ಸಹಾಯಕ್ಕೆ ನಿಲ್ಲಬೇಕು.

ಇವರು ಅಖಂಡ ಪ್ರಪಂಚ ಗೆಲ್ಲುವ ಸಾಮರ್ಥ್ಯ ಹೊಂದಿರಬಹುದಾಗಿದ್ದರಿಂದ ತಮ್ಮ ಜನ್ಮಜಾತಕವನ್ನು ಪರಿಶೀಲಿಸಿಟ್ಟುಕೊಂಡಿರಬೇಕು. ಏಕೆಂದರೆ ಆಯುರಾರೋಗ್ಯ ಚೆನ್ನಾಗಿದ್ದರೆ ಎಲ್ಲವನ್ನೂ ಗೆಲ್ಲಬಹುದು. ಆದ್ದರಿಂದ ತಮ್ಮ ಜನ್ಮಜಾತಕದ ಮೂಲಕ ಆಯುರಾರೋಗ್ಯ ಹೆಂಗಿದೆ ಎಂದೊಮ್ಮೆ ಪರಿಶೀಲಿಸಿಟ್ಟುಕೊಳ್ಳುವುದು ಇವರಿಗೆ ಒಳ್ಳೆಯದು. ಹಂಗೇನಾದ್ರೂ ತೊಂದರೆಗಳು ಬರುವ ಮುನ್ಸೂಚನೆ ಇದ್ದರೆ, ಈ ಕೂಡಲೇ ಜಾಗೃತೆ ವಹಿಸಿಕೊಂಡು ಬರುವ ಕುತ್ತಿನಿಂದ ಪಾರಾಗುವುದಕ್ಕೆ ಉಪಾಯ ಮಾಡಿಕೊಳ್ಳಬಹುದು.

Birth star series : Magha nakshatra characteristics

ಸಾಮಾನ್ಯವಾಗಿ ಜೀವನದಲ್ಲಿ ಮಹತ್ತರ ಸಾಧನೆಗಳನ್ನು ಮಾಡುವವರಲ್ಲಿ ಈ ನಕ್ಷತ್ರದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎನ್ನಬಹುದು. ಇವರಿಗೆ ಹೆಸರು, ಹಣ, ಗೌರವ ಎಲ್ಲವೂ ಹುಡುಕಿಕೊಂಡೇ ಬರುತ್ತಿರುತ್ತದೆ. ಆದರೆ ಬರುವ ಅವಕಾಶಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಿವರು. ಅನ್ಯಾಯ, ಅಧರ್ಮದ ದಾರಿಯಲ್ಲಿ ಏನೇ ಬಂದರೂ ಅದನ್ನು ಹಾಗೆಯೇ ಬಂದಂಗೇನೆ ಫುಟ್ಬಾಲ್‌ಗೆ ಒದ್ದಂಗೆ ಒದೆಯಬೇಕಿವರು.

ಕೆಲ ದುರಾಸೆಯವರು ಹೇಳಬಹುದು "ಏನ್ ಗುರು ಯಾರಿಗುಂಟು ಯಾರಿಗಿಲ್ಲ, ಅದೃಷ್ಟಾನೇ ಝಾಡಿಸಿ ಒದೀತಿಯಲ್ಲೋ, ಸುಮ್ಕೆ ಬಂದಿದ್ದನ್ನಾ ಬೇಡ ಅಂತೀಯಲ್ಲೋ" ಅಂತ. ಈ ರೀತಿ ಹೇಳುವವರನ್ನು "ಏ ಹೋಗೋಗ್ಲೇ ಪಾ" ಎಂದು ಬೈಯ್ದು ಇನ್ನೊಮ್ಮೆ ಇವರ ಸುದ್ದಿಗೆ ಬಂದಿರಬಾರದು ಆ ರೀತಿ ಚಚ್ಚಿ ಓಡಿಸಬೇಕಿವರು. ಏಕೆಂದರೆ ಕಷ್ಟಪಡದೇ ಸುಲಭವಾಗಿ ಸಿಕ್ಕಿದ್ದು ಬಹಳ ದಿನ ಉಳಿಯುವುದಿಲ್ಲ. ಆದರೆ ಅದರ ಪಾಪ ಜೀವನಪರ್ಯಂತ ನಿಮಗಲ್ಲದೇ ನಿಮ್ಮ ಕುಟುಂಬದವರನ್ನೂ ಸುತ್ತಿಕೊಳ್ಳುತ್ತದೆ.

ನೀವು ಅಲ್ಲಿಲ್ಲಿ ಕೇಳಿರಬಹುದು, "ಅವರ ಕುಟುಂಬಕ್ಕೇನೆ ಶಾಪವಿದೆಯಂತೆ, ಮಕ್ಕಳಾಗುವುದಿಲ್ಲ, ಹುಟ್ಟಿದ ಮಕ್ಕಳು ಉಳಿಯುವುದಿಲ್ಲ, ಗಂಡು ಮಕ್ಕಳು ಹುಟ್ಟದೇ ವಂಶ ನಿರ್ವಂಶವಾಗುತ್ತದೆ, ಒಬ್ಬರಾದರೂ ಈ ಮನೆಯಲ್ಲಿ ಅಂಗವಿಕಲರು ಹುಟ್ಟುತ್ತಾರೆ" ಎಂದು ಹಿರಿಯ ಆಸ್ತಿಕರು ಆಡುವ ಮಾತುಗಳನ್ನು. ಇದರರ್ಥ ಹಿಂದೊಮ್ಮೆ ಅಂತಹ ಮನೆತನದ ಹಿರಿಯರು ಅನ್ಯಾಯ, ಅನೀತಿ ಹಾಗೂ ಅಧರ್ಮದಿಂದ ಜೀವಿಸಿ ತಮ್ಮ ವಂಶಕ್ಕೇನೆ ಪಾಪದ ಫಲವನ್ನು ಅನುಭವಿಸುವ ಪರಿಸ್ಥಿತಿ ತಂದಿಟ್ಟಿರುತ್ತಾರೆ.

ಈ ಹಿಂದೊಮ್ಮೆ ಶನಿದೇವನ ಲೇಖನದಲ್ಲಿ ನಮ್ಮ ಮಕ್ಕಳಲ್ಲಿ ನಮ್ಮದೇ ಡಿಎನ್‌ಎ ಇರುವುದರಿಂದ ಅವರಿಗಾದ ನೋವು ನಮಗೂ ಆಗುತ್ತದೆ ಎಂದು ಹೇಳಿದ್ದು ನಿಮಗೆ ಓದಿದ ನೆನಪಿರಬಹುದು. ನೆನಪಿಲ್ಲದವರು, ಮೊದಲ ಬಾರಿ ಈ ಲೇಖನ ಓದುವವರು ಶನಿದೇವನ ಲೇಖನಗಳಲ್ಲಿ ಈ ಬಗ್ಗೆ ಅಂದರೆ ಪಾಪ-ಪುಣ್ಯಗಳ ಕುರಿತು ಓದಿಕೊಳ್ಳಬಹುದು. ಮಾನವೀಯತೆಯ ಬಗ್ಗೆಯೂ ಗೊತ್ತಾಗುತ್ತದೆ ತಮ್ಮಲ್ಲಿ ಅದು ಇಲ್ಲದೇ ಇದ್ದವರು ಓದಿದರೆ.

ಮಘಾ ನಕ್ಷತ್ರದವರನ್ನು ಕೆಲ ದುಷ್ಟಬುದ್ಧಿಯವರು ಮುಂದಿಟ್ಟುಕೊಂಡು ತಾವು ಹೆಸರು ಮಾಡಿಕೊಳ್ಳುತ್ತಿರುತ್ತಾರೆ. ಒಂಥರಾ ಇವರೇ ಅವರಿಗೆ ವಿಸಿಟಿಂಗ್ ಕಾರ್ಡ್ ಇದ್ದಂತೆ! ಆದ್ದರಿಂದ ಈ ನಕ್ಷತ್ರದವರು ಮತ್ತೊಬ್ಬರ ಕೃಪಾಕಟಾಕ್ಷದಿಂದ ಅವರಿಗೋಸ್ಕರ ತಮ್ಮೆಲ್ಲ ವೈಯಕ್ತಿಕ ಕೆಲಸ ಬಿಟ್ಟು ಅವರ ಸೇವೆ ಮಾಡುತ್ತಿದ್ದರೆ ಅಂಥವರ ಬಗ್ಗೆ ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿಟ್ಟುಕೊಂಡಿರಬೇಕು. ಈ ಜಗದಲ್ಲಿ ನಾಟಕ ಮಾಡುವವರು ತುಂಬಾ ಜನರಿದ್ದಾರೆ. ಮುಂದೊಂದು ತರಹ ಹಿಂದೊಂದು ತರಹ. ಇದನ್ನು ಇವರು ಅರ್ಥ ಮಾಡಿಕೊಂಡಿರಬೇಕು. ಮುಂದೆ ಇದ್ದಾಗ ಅತೀವ ಮರ್ಯಾದೆ, ಗೌರವ ಕೊಟ್ಟು ಹುರಿದುಂಬಿಸುತ್ತ, ರೈಲು ಹತ್ತಿಸಿ ತಮಗಾಗದ ಕೆಲಸವನ್ನೂ ಕೂಡ ಇವರಿಂದ ಮಾಡಿಸಿಕೊಳ್ಳುವಷ್ಟು ನಯವಂಚಕರೂ ಇರುತ್ತಾರೆ. ಇದನ್ನು ಇವರು ಅರ್ಥ ಮಾಡಿಕೊಂಡಿದ್ದರೆ ತಮ್ಮ ಜೀವನವೂ ಸುಖಕರವಾಗಿರುತ್ತದೆ. ಇಲ್ಲಾಂದ್ರೆ ದುಷ್ಟ, ಮೋಸ, ವಂಚಕ, ಸುಳ್ಳು ದಗಲಬಾಜಿಗಳ ಸಹವಾಸದಿಂದ ಇವರ ಜೀವನವನ್ನೂ ನರಕಯಾತನೆ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಈ ನಕ್ಷತ್ರದವರ ಮುಖದಲ್ಲಿ ಯಾವಾಗಲೂ ಗಂಭೀರತೆ ಇರುತ್ತದೆ. ನಡತೆ ಕೂಡ ಅಷ್ಟೇ. ಇವರ ಗಂಭೀರತೆಗೆ ಇತರರು ಹೆದರಿಕೊಂಡೇ ಇರ‍್ತಾರೆ. ಇವರಿಗೆ ತಮ್ಮ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಇವರಿಂದ ಕುಟುಂಬದವರ‍್ಯಾದರೂ ದೂರವಾದರೆ ಇವರ ದುಃಖವನ್ನು ಯಾರಿಂದಲೂ ಶಮನ ಮಾಡಲಾಗುವುದಿಲ್ಲ ಅಷ್ಟೊಂದು ನಂಟು ಇವರಿಗೆ ತಮ್ಮ ರಕ್ತಸಂಬಂಧಕ್ಕೆ.

ಇವರು ತಾವಿದ್ದ ಸ್ಥಳದಲ್ಲಿ ತಮ್ಮದೇ ಆದ ಸರ್ಕಲ್ (ಸಾಮ್ರಾಜ್ಯ) ಕಟ್ಟಿರುತ್ತಾರೆ. ಅಂದರೆ ತಮಗೆ ಬೇಕಾದವರೊಂದಿಗೆ ಸಲುಗೆ, ಸ್ನೇಹ ಬೆಳೆಸಿಕೊಂಡು ಅವರೆಲ್ಲರಿಗೂ ಇವರೇ ಕ್ಯಾಪ್ಟನ್ ತರಹ ಮಿಂಚುತ್ತಿರುತ್ತಾರೆ. ಇವರ ಮಾತನ್ನಂತೂ ಇವರ ಸ್ನೇಹಿತರು ಚಾಚೂ ತಪ್ಪದೇ ಪಾಲಿಸುತ್ತಿರುತ್ತಾರೆ. ಟೀಮ್ ಕಟ್ಟಲು ಇವರಿಗೆ ತುಂಬಾ ಸಲೀಸು ಕೆಲಸ. ಆದರೆ ಕಟ್ಟಿದ ಟೀಮ್‌ನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಿದರೆ ಆ ದೇವರೂ ಕೂಡ ಮೆಚ್ಚುತ್ತಾನೆ. ಆದರೆ ಗ್ಯಾಂಗ್ ಕಟ್ಟಿಕೊಂಡು ಮನೆಮುರಿಯೋ ಕೆಲಸ ಮಾಡಬಾರದು ಅಷ್ಟೇ.

ಏಕೆಂದರೆ ಇವರೇನೊ ಎಲ್ಲರನ್ನೂ ನಂಬಿಕೊಂಡು ಅವರ ನಾಯಕತ್ವ ವಹಿಸಿಕೊಂಡಿರುತ್ತಾರೆ. ಆದರೆ ಕೆಟ್ಟವರ‍್ಯಾರಾದರೂ ಒಬ್ಬನು ಸೇರಿಕೊಂಡರೆ ಸಾಕು, ಇವರ ಕೈಗೆ "ಕಬ್ಬಿಣದಾಭರಣ" ಬೀಳಲು. ಆದ್ದರಿಂದ ತಮ್ಮ ಬಳಗದಲ್ಲಿ ಸತ್ಯವಂತ, ನಿಷ್ಠಾವಂತ, ನ್ಯಾಯವಂತ, ಧರ್ಮದಿಂದಿರುವವರನ್ನೇ ಆಯ್ಕೆ ಮಾಡಿಕೊಂಡಿರಬೇಕು ಇವರು. ಈಗಲೂ ಕೂಡ ಒಮ್ಮೆ ಪರೀಕ್ಷಿಸಿಕೊಳ್ಳಬೇಕಿವರು ತಮ್ಮ ಸುತ್ತಮುತ್ತಲಿನವರು ಎಂಥವರು ಎಂದು.

ಆದರೆ ಇವರಲ್ಲಿನ ಒಂದು ಮಾತಂತೂ ಮೆಚ್ಚಬೇಕಾದಂಥಹುದು ಎಂದರೆ ಇವರು ಮಾತ್ರ ಅಸತ್ಯದ, ಅಧರ್ಮದ ಹಾದಿ ಹಿಡಿಯುವುದು ಕಮ್ಮೀನೆ ಎನ್ನಬಹುದು. ಆದರೆ "ಕಾಲಾಯಾತಸ್ಮೈನಮಃ" ಎಂಬಂತೆ ಸಹವಾಸ ದೋಷದಿಂದ ನಕ್ಷತ್ರದಿಂದ ಬಂದಂತಹ ಗುಣವೂ ಕೆಲವೊಮ್ಮೆ ಗೌಣವಾಗಬಹುದು.

ಇವರೆಲ್ಲಿದ್ದರೂ ಸರಿ ಇವರ ಗಾಂಭೀರ್ಯತೆಯಿಂದ ಎಲ್ಲರಿಗೂ ಚಿರಪರಿಚಿರಾಗಿರುತ್ತಾರೆ. ಆದರೆ ಇವರ ಹತ್ತಿರ ಬರಬೇಕೆಂದರೆ ಕೆಲವರು ಗಡಗಡ ನಡುಗುತ್ತಿರುತ್ತಾರೆ. ಇವರೇನೂ ಮಾಡದಿದ್ದರೂ ಸರಿ. ಇವರ ನಡತೆ ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ. ಇವರದೊಂದು ಥಿಯರಿ ಏನೆಂದರೆ, ತನಗೆ ಗೌರವ ಕೊಟ್ಟವರಿಗೆ ಮಾತ್ರ ಇವರೂ ಗೌರವ ಕೊಡುತ್ತಾರೆ. ಇಲ್ಲಾಂದ್ರೆ ಅಂಥವರನ್ನು ಕಾಲಕಸಕ್ಕಿಂತ ಕೀಳಾಗಿ ಕಾಣುತ್ತಾರೆ. ದೈವಭಕ್ತಿಯಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಎಂಥವರನ್ನು ಬೇಕಾದವರು ಸರಿ ಇವರು ಅವರ ಎದುರಿಗೆ ಹೋಗಿ ಆಗಿರುವ ಸಮಸ್ಯೆಯನ್ನು ಬಗೆಹರಿಸುವ ಗುಂಡಿಗೆ ಹೊಂದಿರುತ್ತಾರೆ.

ಒಂದ್ನಿಮಿಷವನ್ನೂ ಸದುಪಯೋಗಪಡಿಸಿಕೊಳ್ಳಬೇಕೆನ್ನುವ ಇವರು ಯಾವಾಗಲೂ ಬಿಜಿಯಾಗಿರಲು ಇಷ್ಟಪಡುತ್ತಾರೆ. ಗಣೇಶನ ಆರಾಧನೆ ಮಾಡುವುದರಿಂದ ಇವರಿಗೆ ಖುಷಿ ಸಿಗುತ್ತಿರುತ್ತದೆ. ನಮ್ಮೆಲ್ಲ ಹಬ್ಬ-ಹರಿದಿನಗಳನ್ನು ಖರ್ಚು ಮಾಡಿ ಸಂತಸದಿಂದ ಆಚರಿಸುವ ಹುಚ್ಚು ಇವರಿಗಿರುತ್ತದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೆಂದರೆ ಇವರಿಗೊಂಥರಾ ಹಬ್ಬದೂಟವಿದ್ದಂತೆಯೇ ಸರಿ. ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇವರಿಗೆ ಜನ್ಮದಿಂದಲೇ ಬಂದಿರುತ್ತದೆ. ಹೀಗಾಗಿ ಎಲ್ಲರೂ ಜವಾಬ್ದಾರಿಗಳನ್ನು ಇವರ ಹೆಗಲಿಗೇರಿಸಿ ತಾವು ನಿರಾಳವಾದೆವೆಂದು ಖುಷಿಯಾಗುತ್ತಾರೆ.

ಎಲ್ಲವನ್ನೂ ತೂಗಿಸಿಕೊಂಡು ಕೊಟ್ಟ ಜವಾಬ್ದಾರಿಗಳನ್ನು ಮಾಡಿ ಮುಗಿಸುವ ಇವರ ಜಾಣ್ಮೆಗೆ ಎಲ್ಲರೂ ತಲೆದೂಗುತ್ತಾರೆ. ಎಂಥವರನ್ನಾದರೂ ನಿಯಂತ್ರಿಸುವ ಅದೇನೋ ಮಾಂತ್ರಿಕ ಶಕ್ತಿ ಇವರು ಹೊಂದಿರುತ್ತಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಇವರು ಸ್ವಲ್ಪ ಗಂಭೀರತೆಯನ್ನು ಕಡಿಮೆ ಮಾಡಿಕೊಂಡು ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತ ಮುಖದಲ್ಲಿ ನಗೆಯನ್ನು ತಂದುಕೊಳ್ಳಬೇಕಿವರು. ಏಕೆಂದರೆ ಮೂಗಿನ ತುದಿಯಲ್ಲೇ ಸಿಟ್ಟಿಟ್ಟುಕೊಂಡಿರುವುದರಿಂದ ಕೆಲವರು ಇವರ ಬಗ್ಗೆ "ಸಿಡುಕು ಮೂತಿ ಸಿದ್ದಪ್ಪ" ಎಂದು ಗೊಣಗುತ್ತಿರುತ್ತಾರೆ.

ಆದ್ದರಿಂದ ಇವರು ದಿನದಲ್ಲೊಮ್ಮೆಯಾದರೂ ಗಂಭೀರತೆ ಕಡಿಮೆ ಮಾಡಿಕೊಂಡು ಎಲ್ಲರೊಂದಿಗೆ ನಗುತ್ತಾ ಕಾಲ ಕಳೆಯುವ ಸ್ವಭಾವ ರೂಢಿಸಿಕೊಳ್ಳಬೇಕು. ಇಲ್ಲಾಂದ್ರೆ ಜನ ಸಿಕ್ಕಾಪಟ್ಟೆ ಹಿಂದಿಂದೆನೇ ಇವರ ಬಗ್ಗೆ ಮಾತನಾಡಿಕೊಂಡು ತಮ್ಮ ರಕ್ತ ಸುಟ್ಟುಕೊಳ್ಳುತ್ತಾರಷ್ಟೇ.

ಇವರು ವ್ಯವಸ್ಥಾಪಕ, ಸಂಸ್ಥಾಪಕ, ಆಡಳಿತಾಧಿಕಾರಿ, ಶ್ರೀಮಂತ, ರಾಜಕೀಯದಲ್ಲಿ ಅತ್ಯುತ್ತಮ ಸ್ಥಾನದಲ್ಲಿರುವವರು, ದೊಡ್ಡ ದೊಡ್ಡ ಅಧಿಕಾರ ಹೊಂದಿದವರು, ನ್ಯಾಯಾಧೀಶರು, ಇತಿಹಾಸಜ್ಙರು ಮುಂತಾದವರಾಗಬಹುದು. ಅವರವರ ಜನ್ಮ ಜಾತಕದ ಮೂಲಕ ಅವರ ಉದ್ಯೋಗಗಳ ಮಾಹಿತಿ ತಿಳಿದುಕೊಳ್ಳಬಹುದು. "ಸಾಮೀ ನಂದೂನು ಇದೇ ನಕ್ಷತ್ರ ಸಾಮಿ, ಆದರೆ ನನಗೆ ದುಡಿಯದೆ ಹೊಟ್ಟೆಗೆ ಹಿಟ್ಟಿಲ್ಲ" ಎನ್ನುವವರಿಗೆ, ನಿನ್ನ ಜನ್ಮ ಜಾತಕ ಯಾರಿಗಾದರೂ ತೋರಿಸಿದ್ದೀಯಾ? ಅಥವಾ ಸುಖಾಸುಮ್ಮನೇ ತಲೆಹಿಡುಕರಂತೆ ಮಾತಾಡತೀದೀಯಾ ಎನ್ನುತ್ತಾರೆ ಸಾಮೇರು.

ಇವರು ಅತೀ ಹೆಚ್ಚಾಗಿ ಮಾತನಾಡುವುದನ್ನು ಬಿಡಬೇಕು. ಯಾವುದನ್ನೇ ಆಗಲಿ ಪರಿಶೀಲಿಸಿ ಮನದಟ್ಟಾಗಿಸಿಕೊಳ್ಳದೇ ಒಪ್ಪಿಕೊಳ್ಳಬಾರದು. ಏಕೆಂದರೆ ಅನ್ಯಾಯವಾದ ಮೇಲೆ ಬರೀ ಜಗಳದಲ್ಲೇ ಕಾಲ ಕಳೆಯುವಂತಾಗುತ್ತದೆ. ಹೀಗಾಗಿ ತಮ್ಮ ಅವಸರ ಪ್ರವೃತ್ತಿ ಬಿಟ್ಟರೊಳ್ಳೆಯದು. ದೇಹದಾರ್ಢ್ಯತನದಲ್ಲೂ ತುಂಬಾ ಆಸಕ್ತಿ ಇವರಿಗಿರುವದರಿಂದ ಆಟದಲ್ಲಿ ಸಂತೋಷವನ್ನು ಕಾಣುತ್ತಿರುತ್ತಾರೆ. ಇವರು ಮಾಡುವ ಕೆಲವೊಂದು ಕೆಲಸಗಳು ತುಂಬಾ ರಹಸ್ಯವಾಗಿರುತ್ತವೆ. ಹೀಗಾಗಿ ಇವರನ್ನು ಎಲ್ಲರೂ ಒಂಥರಾ ಬಾಸ್ ತರಹನೇ ಭಾವಿಸಿರುತ್ತಾರೆ! ಇವರ ಗಾಂಭೀರ್ಯತೆಗೆ ಇವರ ಧ್ವನಿಯೂ ಸಹ ಕೈ ಜೋಡಿಸುತ್ತದೆ. ಇವರ ಮಾತಿಗೆ ಸಾಕಷ್ಟು ತೂಕವಿರುತ್ತದೆ. ಇವರಿಗೆ ಆವಾಗಾವಾಗ ಹೃದಯದಲ್ಲಿ ಕಿರಿಕಿರಿ ಎನಿಸುತ್ತಿರುತ್ತದೆ. ಬೆನ್ನು ನೋವು ಇವರಿಗೆ ವರವಿದ್ದಂತೆ.

ತಮ್ಮೊಳಗೆ ಹುಸಿನಗುತ್ತ ತಮ್ಮ ಗಂಭೀರತೆಯ ಬಗ್ಗೆ ತಾವೇ ಮನಸ್ಸಿನಲ್ಲಿ ಹೊಗಳಿಕೊಳ್ಳುವುದು ಇವರ ದೌರ್ಬಲ್ಯವೆನ್ನಬಹುದು. ಸಾಕಷ್ಟು ಹಣವಿರುವುದರಿಂದಲೋ ಏನೋ ಇವರು ದುಡ್ಡೆಂದರೆ ಅಷ್ಟೊಂದು ಬೆಲೆ ಕೊಡಲ್ಲ. ಇದೂ ಅಲ್ಲದೇ ಹೆಣ್ಣಾಗಿದ್ದರೆ ಗಂಡಸರ ಬಗ್ಗೆ, ಗಂಡಸರಾಗಿದ್ದರೆ ಹೆಂಗಸರಿಗೆ ಬೆಲೆ ಕೊಡುವುದೂ ಕೂಡ ಇವರು ಅಷ್ಟಕ್ಕಷ್ಟೇ.

ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಸ್ವಲ್ಪ ಸಿಟ್ಟು ಜಾಸ್ತಿ ಇರುವ ಸ್ವಭಾವದವರಿರುತ್ತಾರೆ. ಅದೂ ಅಲ್ಲದೇ ತಮ್ಮ ಸಿಟ್ಟಿನಿಂದ ಉಳಿದೆಲ್ಲರನ್ನೂ ಸಿಟ್ಟಿಗೆಬ್ಬಿಸುವಂಥವರು. ಆದರೆ ತಮ್ಮಲ್ಲಿರುವ ವಿದ್ವತ್ತಿನಿಂದ ಎಲ್ಲರ ಮನ ಮೆಚ್ಚಿಸಿರುತ್ತಾರೆ. ಎರಡನೇ ಚರಣದವರು, ತಾವು ಸುಂದರವಾಗಿ ಕಾಣಬೇಕು ಹಾಗೂ ಸುಂದರವಾಗಿದ್ದೆಲ್ಲವೂ ತನಗೇನೆ ಬೇಕು ಎಂದುಕೊಳ್ಳುವ ಸೌಂದರ್ಯಪ್ರಿಯರು. ಹೀಗಾಗಿ ತಮಗೆ ಬೇಕಾದ್ದನ್ನು ಪಡೆಯಲು ಯುದ್ಧಕ್ಕಾದರೂ ಸರಿ ಎನ್ನುತ್ತಾರಿವರು. ಗೆಲುವು ಇವರಿಗೆ ಕಟ್ಟಿಟ್ಟ ಬುತ್ತಿ.

ಮೂರನೇ ಚರಣದವರು ಮಾತಿನಲ್ಲೇ ಮನೆ ಕಟ್ಟುವಂತಹ ಮಾತುಕತೆ ಆಡುವವರು. ಇವರು ಹೇಳುವ ಸಂಗತಿಗಳನ್ನು ಕೇಳುತ್ತಿದ್ದರೆ ಕಣ್ಣೆದುರೆ ನಡೆದಿದ್ದನ್ನು ನೋಡಿದಂಗಾಗುತ್ತದೆ. ತುಂಬಾ ಜ್ಞಾನ ಇವರಲ್ಲಿರುವುದರಿಂದ ಇವರಿಗೆ "ನಿಮ್ಮ ತಲೆ ತುಂಬಾ ಚುರುಕು" ಎನ್ನುತ್ತಾರೆ ಜನ. ನಾಲ್ಕನೇ ಚರಣದವರು ಚಿತ್ರವಿಚಿತ್ರ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ. ತಮ್ಮ ಕನಸುಗಳನ್ನು ಈಡೇರಿಸಲು ಅವಿರತ ಪ್ರಯತ್ನ ಮಾಡುತ್ತಿರುತ್ತಾರೆ. ಅದರಲ್ಲಿ ಯಶಸ್ಸೂ ಕೂಡ ಹೊಂದುತ್ತಾರೆ. ಉಳಿದವರು ಇವರು ಸಾಧಿಸಿದ್ದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡು "ನಮಗೇನೆ ಹೊಳೆಯಲಿಲ್ಲ ಇದು, ಥೂ ನಮ್ ಬುದ್ಧೀಗಿಷ್ಟು" ಎಂದುಕೊಂಡು ಮರುಗುತ್ತಾರೆ. ಆದರೂ ಇವರು ಕಪಟತನ, ಹಠಮಾರಿತನ ತಮ್ಮಲ್ಲಿದ್ದಲ್ಲಿ ಬಿಡಬೇಕು. ಇಲ್ಲಾಂದ್ರೆ ಇದೇ ಒಂದು ಕಾರಣದಿಂದ ಜನರೆಲ್ಲರೂ ಸೇರಿಕೊಂಡು ನಿಮ್ಮನ್ನು "ಬೇಟೆ"ಯಾಡುವಂತಾಗಬಾರದು.

"ಪೂರ್ವಫಾಲ್ಗುಣಿ ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಈ ನಕ್ಷತ್ರದವರು ನಿರಾಶವಾದಿತನ ಬಿಟ್ಟು, ಆಶಾವಾದಿಗಳಾಗಿರಲು ಪ್ರಯತ್ನಿಸಬೇಕು.

ದೈವಕೃಪೆಗೆ : ನಾಸ್ತಿಕರೊಂದಿಗೆ ಅತೀ ಸಲುಗೆ ಒಳ್ಳೆಯದಲ್ಲ. ಅವರಿಂದಲೇ ಜೀವನದಲ್ಲಿ ನಿರಾಶೆ ಹೆಚ್ಚುತ್ತದೆ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Magha nakshatra people (Leo zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X