ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿಕಾಟ ಶುರುವಾದರೆ ಆಗೋದು ಹೀಗೆ!

By ನಾಗನೂರಮಠ ಎಸ್.ಎಸ್.
|
Google Oneindia Kannada News

ಹಿಂದಿನ ದಿನಗಳಲ್ಲಿ ರಾಜ-ಮಹಾರಾಜರು ತಮ್ಮ ಆಸ್ಥಾನದ ರಾಜಗುರುಗಳಿಂದ ತಮ್ಮ ಜಾತಕ ಬರೆಯಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಹಲವಾರು ಕಥೆ ಪುರಾಣಗಳಲ್ಲಿವೆ. ಆದರೆ ಆಗಿನ ನಾಗರಿಕರು ರಾಜಗುರುಗಳಿಂದ ತಮ್ಮ ಜಾತಕ ಬರೆಯಿಸಿಕೊಳ್ಳುವುದು ಕಷ್ಟದ ಕೆಲಸವೆಂದುಕೊಂಡು ತಮ್ಮ ರಾಜನನ್ನೇ ದೇವರೆಂದು ಪೂಜಿಸುತ್ತಿದ್ದರು. ಅದೇ ರೀತಿ ದಶಕಗಳ ಹಿಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳ ಜನ್ಮದ ಮಾಹಿತಿಯನ್ನು ಯಾವುದೋ ಕಾರಣದಿಂದ ಎಲ್ಲಿಯೂ ಬರೆದಿಟ್ಟಿರುತ್ತಿರಲಿಲ್ಲ. ಜಾತಕವು ಸಮಾಜದಲ್ಲಿನ ಕೆಲವೊಂದು ಉಚ್ಚ ಜಾತಿಯವರಿಗೆ ಮಾತ್ರ ಸೀಮಿತವೆಂಬಂತೆ ಪರಿಸ್ಥಿತಿ ಇತ್ತೇನೋ ಎನಿಸುತ್ತದೆ.

ಇರಲಿ, ಈಗ ಜನ್ಮರಾಶಿ ಗೊತ್ತಿಲ್ಲದವರಿಗೆ ಶನಿಕಾಟ ನಡೀತಾ ಇದೆಯಾ ಎಂದು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ನೋಡೋಣ. ಶನಿಕಾಟ ಶುರುವಾದಾಗ ವ್ಯಕ್ತಿಗಳ ದೈನಂದಿನ ಜೀವನದಲ್ಲಿ ಕೆಲವೊಂದು ವಿಚಿತ್ರ ಲಕ್ಷಣ ಕಂಡು ಬರುತ್ತವೆ. ಆ ರೀತಿ ಲಕ್ಷಣ ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೆ, ಶನಿಕಾಟ ಇದೆ ಎಂದು ತಿಳಿದುಕೊಂಡು ಕೂಡಲೇ ಅಗತ್ಯ ಪರಿಹಾರ ಮಾಡಿಕೊಳ್ಳೋದು ಒಳ್ಳೆಯದು.

ಈ ರೀತಿ ಲಕ್ಷಣಗಳು ನಮಗೆ ತುಂಬಾ ದಿನಗಳಿಂದ ಬರುತ್ತಲೇ ಇರುತ್ತವೆ. ಇದೆಲ್ಲಾ ಮೂಢನಂಬಿಕೆ ಎಂದುಕೊಂಡು ಸುಮ್ಮನಾಗುವವರು ಸುಮ್ಮನಾಗಬಹುದು. ಯಾಕೆಂದರೆ ದೇವರು ಯಾರಿಗೆ ವರ ಕೊಡುತ್ತಾನೋ ಶಾಪ ಕೊಡುತ್ತಾನೋ ಪಡೆದುಕೊಂಡವರಿಗೆ ಮಾತ್ರ ಗೊತ್ತು. ಆದರೆ ಶನಿದೇವನ ಪ್ರಭಾವವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನುಭವಿಸಲೇಬೇಕು. [ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!]

Sade Sati : What happens when Shani troubles

ಶನಿಕಾಟದ ಲಕ್ಷಣಗಳು : ಜನ್ಮರಾಶಿ, ನಕ್ಷತ್ರ ಏನೂ ಗೊತ್ತಿಲ್ಲದವರಿಗೆ ಶನಿಕಾಟದ ಲಕ್ಷಣಗಳು ಈ ರೀತಿ ಇರುತ್ತವೆ ಗಮನಿಸಿ. ಎಲ್ಲಿಯೇ ಊಟ ಮಾಡುತ್ತಿರಲಿ, ತಟ್ಟೆಯಲ್ಲಿ ಕೂದಲು, ಹುಳು, ಕಲ್ಲು ಅಥವಾ ಇನ್ನಿತರ ವಸ್ತುಗಳು ಕಂಡು ಬರುತ್ತವೆ. ಕೆಲವೊಮ್ಮೆ ಊಟ ಮಾಡುವಾಗ ಬಾಯಲ್ಲಿ ಎನೋ ಇದೆ ಎಂದು ಗೊತ್ತಾಗಿ ತುತ್ತು ಉಗುಳಬೇಕಾಗುತ್ತದೆ. ಈ ಹಿಂದೆ ಊಟ ಮಾಡುವಾಗ ಎಲ್ಲವೂ ಚೆನ್ನಾಗಿ ಇತ್ತು. ಆದರೆ ಈಗೀಗ ಈ ತರಹ ಯಾಕೆ ಆಗ್ತಾ ಇದೆ ಅಂತಾ ನಿಮ್ಮ ಮನಸ್ಸಿನಲ್ಲಿ ಸಣ್ಣ ಯೋಚನೆ ಸುಳಿಯುತ್ತದೆ. ಮನೆಯಲ್ಲಿ ಹೇಳಿದರೆ ಯಾರಿಗೂ ಬರದಿರೋದು ನಿನಗೆ ಮಾತ್ರ ಬರುತ್ತಾ ಅಂತಾ ಬೈಯಿಸಿಕೊಳ್ಳಬೇಕಾಗುತ್ತದೆ.

ಇನ್ನು ತಲೆಗೂದಲು ಸ್ವಲ್ಪ ಸ್ವಲ್ಪ ಉದರೋಕೆ ಆರಂಭವಾಗುತ್ತದೆ. ತಲೆಹೊಟ್ಟು ವಿಪರೀತವಾಗಿ ಹೆಚ್ಚುತ್ತೆ. ತಲೆಕೆರೆತವಾಗುತ್ತಿರುತ್ತದೆ. ತಲೆನೋವು ಮಾತ್ರೆ ನುಂಗಿದರೂ ಕಮ್ಮಿಯಾಗಂಗಿಲ್ಲ. ಹಲ್ಲು ನೋವು ನಿದ್ದೆಗೆಡಿಸುತ್ತದೆ. ಎಲ್ಲಿಂದಲೋ ಬಂದು ಕಾಗೆ ತಲೆ ಅಥವಾ ದೇಹದ ಇತರ ಯಾವುದಾದರೂ ಅಂಗವನ್ನು ಮುಟ್ಟುತ್ತದೆ ಅಥವಾ ಮನೆಯೊಳಗಡೆಗೆ ಬರುತ್ತದೆ. ಹೊರಗಡೆ ಸುತ್ತಾಡುವಾಗ ಮೈಮೇಲೆ ಮರದಲ್ಲಿರುವ ಕಾಗೆಯ ಶೌಚ ಬೀಳುತ್ತದೆ. ನಿಮಲ್ಲೇನಾದರೂ ಕಾರು ಇದ್ದರೆ ಅದರ ಗಾಜಿನ ಮೇಲೆ ಪದೇ ಪದೇ ಕಾಗೆಯ ಶೌಚ ಬೀಳ್ತಾನೆ ಇರುತ್ತದೆ. ಆದರೆ ಬೇರೆಯವರ ಕಾರಿನ ಗಾಜಿನ ಮೇಲೆ ಬೀಳದಿರುವುದು ನಿಮ್ಮ ಕಾರಿನ ಮೇಲೆ ಮಾತ್ರ ಬೀಳುತ್ತಾ ಇರುತ್ತದೆ ಎಂಬುದನ್ನು ನೀವು ಗಮನಿಸುವುದೇ ಇಲ್ಲ. [ಕಾಗೆ ಹಾರಿಸೋದು ಅಂದ್ರೆ ಏನು, ನಿಮಗೇನಾದ್ರೂ ಗೊತ್ತಾ?]

ಇದಲ್ಲದೇ ಆವಾಗಾವಾಗ ಯಾವುದಾದರೊಂದು ಕೆಟ್ಟ ವಿಷಯ, ಸುದ್ದಿಗಳನ್ನೇ ಕೇಳುತ್ತಿರಬೇಕಾಗುತ್ತದೆ. ಏನಪ್ಪಾ ಇದು ಬರೀ ಕೆಟ್ಟದ್ದೇ ನನಗೆ ಕಾಣುತ್ತಿದೆಯಾ ಎಂದು ಬೇಸರ ಮಾಡಿಕೊಳ್ಳೋ ಹಾಗಾಗುತ್ತದೆ. ಹಲವಾರು ವರ್ಷಗಳಿಂದ ಜೋಪಾನದಿಂದ ಕೂಡಿಟ್ಟು, ಕಾಪಾಡಿಕೊಂಡು ಬಂದಂತಹ ನಿಮ್ಮ ಅತ್ಯಂತ ಪ್ರೀತಿಯ ವಸ್ತುಗಳು ಅದೇಗೋ ಕಳೆದುಹೋಗುತ್ತವೆ.

ವೃಥಾ ಅಪವಾದ : ಇನ್ನು ನಿಮ್ಮ ಅತೀವ ಪ್ರೀತಿ ಪಾತ್ರರು ನಿಮ್ಮ ಮೇಲೆ ಏನೇನೋ ಅಪವಾದ ಹೊರಿಸಿ ನೀವೇನೂ ಮಾಡದಿದ್ದರೂ ನಿಮ್ಮನ್ನು ಒಂಟಿಯಾಗಿಸುತ್ತಾರೆ. ಇದರಿಂದ ದುಶ್ಚಟಗಳ ಬೆನ್ನು ಹತ್ತುವಂತಾಗುತ್ತದೆ. ಪ್ರೀತಿಯ ವಿಷಯದಲ್ಲಂತೂ ಮುಖ ಕೂಡ ನೋಡಲು ಹಿಂಜರಿಯುವಂತಾಗುತ್ತದೆ. ಪ್ರೀತಿಸಿದವರು ಈ ಹಿಂದೆ ಅದೇ ಮುಖ ಒಂದು ಕ್ಷಣ ನೋಡಲು ಪರಿತಪಿಸುವವರು ಈಗ ಮುಖ ತಿರುಗಿಸಿಕೊಂಡು ಬಿಟ್ಟಿರುತ್ತಾರೆ. [ಶನೈಶ್ಚರ ಜಯಂತಿ ಕುರಿತ ವಿಶೇಷ ಲೇಖನ]

ಹೆಚ್ಚಾಗಿ ಕಪ್ಪು ಬಣ್ಣದ ವಾಹನಗಳಿಂದ ಅಪಾಯವಾಗುವ ಸಂಭವವಿರುತ್ತದೆ. ಆದ್ದರಿಂದ ಕಪ್ಪು ಬಣ್ಣದ ವಾಹನವೇನಾದರೂ ಎದುರಿಗೆ ಬಂದರೆ ಮೈಯೆಲ್ಲಾ ಎಚ್ಚರವಾಗಿರಬೇಕು. ಎಷ್ಟೇ ಚಿಕಿತ್ಸೆ ಪಡೆಯುತ್ತಿದ್ದರೂ ಕಾಲು ನೋವು, ಮಂಡಿ ನೋವು ಹೆಚ್ಚಾಗುತ್ತಿರುತ್ತದೆ ಹೊರತು ಕಮ್ಮಿಯಾಗುವುದಿಲ್ಲ. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗುವುದಿಲ್ಲ.

ವಿವಿಧ ರೀತಿ ವಾದ-ವಿವಾದಗಳಿಂದಾಗಿ ಸಮಯ ಹಾಳಾಗುತ್ತ ಕಾನೂನಾತ್ಮಕವಾಗಿ ತೊಂದರೆಯಾಗಿ ಕೋರ್ಟ್ ಮೆಟ್ಟಿಲೇರಬಹುದು. ಅಥವಾ ಆರಕ್ಷಕರಿಂದಾಗಿ ತೊಂದರೆ ಕಾಣಿಸಿಕೊಳ್ಳುತ್ತವೆ. ದೇಹಕ್ಕೇನಾದರೂ ಗಾಯವಾಗುತ್ತಲೇ ಇರುತ್ತದೆ. ಕೆಲವರಿಗೆ ಮೂಳೆ ಮುರಿತದ ನೋವು ಕೂಡ ಅನುಭವಿಸಬೇಕಾಗುತ್ತದೆ.

ಪ್ರತಿ ಶನಿವಾರ ಮಾತ್ರ ನಿದ್ದೆ ಬರದೇ ಹೆಚ್ಚಿನ ಆತಂಕ, ಉದ್ವೇಗದಿಂದಲೇ ರಾತ್ರಿ ಕಳೆಯಬೇಕಾಗಿರುತ್ತದೆ. ಪ್ರತಿನಿತ್ಯ ಚೆನ್ನಾಗಿದ್ದರೂ ಶನಿವಾರ ಅಥವಾ ಅಮವಾಸ್ಯೆ ಬಂದರೆ ಸಾಕು ವಿಚಿತ್ರವಾಗಿ ಬದಲಾವಣೆಯಾಗುತ್ತೆ ಮನಸ್ಸು. ಕೆಲವೊಮ್ಮೆ ವಿಕೃತ ಕೂಡ ಆಗಬಹುದು ಮನಸ್ಸು. ಈ ದಿನಗಳಂದೇ ಅಪಘಾತ ಅಥವಾ ಹೊಡೆದಾಟ, ಜಗಳ ಆಗುತ್ತವೆ. ಅಥವಾ ತಿಂಗಳಿನ 8, 17, 26ನೇ ತಾರೀಖಿನಂದೇ ಹೆಚ್ಚಿನ ತೊಂದರೆಗಳು ಉದ್ಭವಿಸುತ್ತಿರುತ್ತವೆ. ಆದ್ದರಿಂದ ಪುಷ್ಯ, ಅನುರಾಧ, ಉತ್ತರ ಭಾದ್ರಪದ ನಕ್ಷತ್ರಗಳಿರುವ ದಿನಗಳಂದು ಸ್ವಲ್ಪ ಜಾಗ್ರತೆ ವಹಿಸಿಕೊಂಡಿರಬೇಕು.

ಶನಿದೇವನ ಕೃಪಾಕಟಾಕ್ಷದಿಂದ ಮಾತ್ರ : ನಿಮ್ಮ ಬಳಿ ಎಷ್ಟೇ ದುಡ್ಡಿದ್ದರೂ ಎಲ್ಲ ಸೌಲಭ್ಯಗಳಿದ್ದರೂ ಈ ದಿನಗಳಲ್ಲಿ ಆಗುವ ಈ ತೊಂದರೆ ಬಗೆಹರಿಯುವುದು ಶನಿದೇವನ ಕೃಪಾಕಟಾಕ್ಷದಿಂದ ಮಾತ್ರ. ಮೂತ್ರಕೋಶದಲ್ಲಿ ತೊಂದರೆ ಅಥವಾ ಹರಳು ಆಗುವುದು. ವಿಪರೀತ ನೋವು ತಡೆದುಕೊಳ್ಳಲಾಗದೇ ಸಂಕಟ ತರುತ್ತದೆ. ಜೀವನ ಆರಾಮಾಗಿರಬೇಕು ಎಂದು ಪರಿತಪಿಸುವಂತಾಗಿರುತ್ತದೆ.

ಮನೆ, ಕಚೇರಿಯಲ್ಲಿ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಏನಾದರೂ ಚಿಕ್ಕ ಪುಟ್ಟ ಕಾರಣಕ್ಕಾಗಿ ಜಗಳ ಶುರುವಾಗುತ್ತದೆ. ಹೀಗಾಗಿ ಎಲ್ಲರೊಂದಿಗೆ ಮುಖ ಕೆಡಿಸಿಕೊಂಡು ಮಾತು ಬಿಡುವಂತಾಗಿರುತ್ತದೆ. ಹಣದ ಕೊರತೆ ವಿಪರೀತ ಕಾಡುತ್ತದೆ. ದುಡ್ಡಿಲ್ಲದೇ ತಲೆ ಕೆಟ್ಟವರ ತರಹ ಜೀವನವೇ ಮುಗೀತು ಎಂದುಕೊಳ್ಳುವಂತಾಗುತ್ತದೆ. ಏನಾದರೂ ಅಜ್ಞಾನದಿಂದ ತಪ್ಪು ಮಾಡಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡು, "ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡರು" ಎನ್ನುವ ಹಾಗೆ ಆಗುತ್ತದೆ. ಆಡುವ ಕೆಟ್ಟ ಮಾತು ಮೃತ್ಯು ಕೂಡ ತರಬಹುದು. ಆದ್ದರಿಂದ ಮುತ್ತಿನಂಥ ಮಾತು ಆಡಲು ಕಲಿಯಬೇಕು.

ನಿಮ್ಮಲ್ಲಿ ನಾನೇ ಹೆಚ್ಚು ಎಂದು ಹೇಳಿಕೊಳ್ಳುವ ಗುಣವಿದ್ದರೆ ಮೊದಲು ಆ ಗುಣ ಬಿಡಬೇಕು. "ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ" ಎಂಬ ಮಾತು ನೀವು ಕೇಳಿರಬಹುದು. ಆದರೆ ಶನಿದೇವನ ಕಾಟದಲ್ಲಿ ಗುಣ ಬದಲಾವಣೆ ಮಾಡಿಕೊಳ್ಳದಿದ್ದರೆ, ನಿಮ್ಮ ಅತೀವ ಅಹಂಕಾರದಿಂದ "ಬೋರ್ಡ್‌ದಲ್ಲಿರದಂಗೆ ಹೋಗೋದು" ಗ್ಯಾರಂಟಿನೇ.

ಬಡತನವು ಕಲಿಸುವ ಪಾಠ ಯಾವ ಯೂನಿವರ್ಸಿಟಿಯೂ ಕಲಿಸೋದಿಲ್ಲ. ನೀವು ಕಲಿಯಲೆಂದೇ ಶನಿದೇವನು ತನ್ನ ಕಾಡಾಟದಲ್ಲಿ ಬಡತನವನ್ನೂ ಕೊಟ್ಟು ನಿಮ್ಮನ್ನು ಜೀವನದ ಪಾಠ ಕಲಿಯುವಂತೆ ಮಾಡುತ್ತಾನೆ. ಅಧರ್ಮ, ಅನ್ಯಾಯ, ಅನೀತಿಯಿಂದ ಗಳಿಸಿದ್ದೆಲ್ಲ ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾಡಿದ ಕುಕರ್ಮದಿಂದ ಮನೆಮಂದಿಯಲ್ಲ ದೂರವಾಗುತ್ತಾರೆ. ನಿಮಗೆ ಗೊತ್ತಿರಬಹುದು ಕೆಟ್ಟವರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ನೀವು ಒಳ್ಳೆಯವರಾಗಿದ್ದರೆ ನಿಮ್ಮ ಮುಂದೆ ತಲೆಬಾಗುತ್ತಾರೆ. ನಿಮ್ಮ ಗುಣ ಹೇಗೆ, ಅವರ ಗುಣ ಹೇಗಿದೆ ಎಂದು ಅವರ ಆತ್ಮಕ್ಕೆ ಗೊತ್ತಿರುತ್ತದೆ! ಹೀಗಾಗಿಯೇ ಅವರ ತಲೆ ನಿಮ್ಮ ಮುಂದೆ ತಾನಾಗಿಯೇ ಬಾಗುತ್ತದೆ. ಕೆಲವೊಬ್ಬರು ಇರುತ್ತಾರೆ "ಬಾಯಲ್ಲಿ ಬಸಪ್ಪ, ಹೊಟ್ಟೆಯಲ್ಲಿ ವಿಷಪ್ಪ" ಎಂಬಂತೆ. ಅಂಥಹವರು ದೇವರೇ ಕಾಪಾಡಪ್ಪ ಎಂದು ಹಲುಬುವಂತಾಗುತ್ತದೆ ಶನಿಕಾಟದಲ್ಲಿ.

ಶನಿದಶೆ ಎಂದರೇನು? ಎಂಬುದು ಮುಂದಿನ ಲೇಖನದಲ್ಲಿ.

ವಾಸ್ತು ಟಿಪ್ಸ್ : ಮನೆಯ ದೇವರಸ್ಥಳವನ್ನು ಈಶಾನ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಈಶಾನ್ಯಕ್ಕೆ ದೇವರಿಡಲು ಆಗದಿದ್ದರೆ ಆ ದಿಕ್ಕಿಗೆ ಹತ್ತಿರದಲ್ಲಾದರೂ ವ್ಯವಸ್ಥೆ ಮಾಡಿ. ನಿಮಗೆ ಬೇಕಾದ, ಅನುಕೂಲದ ಸ್ಥಳಗಳಲ್ಲಿ ದೇವರನ್ನು ಇಟ್ಟು, ದೇವರಿಗೇನು ವರವ ಬೇಡಿಕೊಳ್ಳಬೇಡಿ. ಯಾವುದೂ ಈಡೇರಲ್ಲ.

ಶನಿದೇವನ ಕೃಪೆಗೆ : ಕ್ರಿಮಿ-ಕೀಟಗಳಿಗೆ ಮನೆ ಮಾಡಲು ಅವಕಾಶ ಮಾಡಿಕೊಟ್ಟು ನಿಮ್ಮ ಮನೆಯನ್ನು ಹಾಳುಮನೆಯನ್ನಾಗಿಸಿಕೊಳ್ಳದೇ ಸ್ವಚ್ಛವಾಗಿಟ್ಟುಕೊಳ್ಳಿ. (ಒನ್‌ಇಂಡಿಯಾ ಕನ್ನಡ)

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 23 : Impact of Sade Sati on zodiac signs. What happens when Lord Shani starts troubling you? Shani will never allow you to lead normal life when you are Sade Sati. Solution is just to face it bravely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X