ವಾರಭವಿಷ್ಯ : ಫಲಾಫಲ ಮೇ 22ರಿಂದ ಮೇ 28ರವರೆಗೆ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಈ ವಾರ ಮೇ 22ರಿಂದ ಮೇ 28ರ ತನಕ ಜನ್ಮರಾಶಿಯನ್ನು ಆಧರಿಸಿದ ವಾರಭವಿಷ್ಯ ನೀಡಲಾಗಿದೆ. ಗೋಚಾರ ಫಲಕ್ಕೆ ಅನುಗುಣವಾಗಿ ಫಲಾನುಫಲ ತಿಳಿದುಕೊಳ್ಳಬಹುದು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದು ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಪ್ರತಿಯೊಬ್ಬರೂ ನಿತ್ಯ ಒಂದೊಂದು ತರಹ ದಿನ ಕಳೆಯಬೇಕಾಗುತ್ತದೆ. ಇಡೀ ವಾರ ಹೇಗಿರುತ್ತದೆ ಎಂದು ಸೂಚಿಸುವುದೇ ವಾರಭವಿಷ್ಯ.[ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದು. ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ. [ರಾಹುಕಾಲ, ಗುಳಿಕಕಾಲ, ಯಮಗಂಡಕಾಲ]

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.

ಮೇಷ

ಪುರುಷರು : ನಿಮಗಾಗದವರ ಕಾಟ ನೀವು ಭರ್ಜರಿಯಾಗಿ ಅನುಭವಿಸಲಿದ್ದೀರಿ. ನಿಮ್ಮ ಮಾತುಗಳಲ್ಲಿ ತಪ್ಪುಗಳನ್ನೇ ಹುಡುಕುವವರು ಹೆಚ್ಚು . ಕಬ್ಬಿಣದ ವ್ಯಾಪಾರ ಮಾಡುವವರಿಗೆ ಅತ್ಯುತ್ತಮವಾಗಿದೆ. ನ್ಯಾಯಾಲಗಳಲ್ಲಿ ಇರುವ ನಿಮ್ಮ ವ್ಯಾಜ್ಯಗಳು ಗೊಂದಲಮಯವಾಗಲಿವೆ. ಆದ ಕಾರಣ ಅವುಗಳಿಗೆ ಸಂಬಂಧಪಟ್ಟ ಕಾಗದ ಪತ್ರಗಳ ವಿಚಾರದಲ್ಲಿ ಹೆಚ್ಚಿನ ಜಾಗೃತೆ ವಹಿಸಿ. ನಿಮ್ಮ ಭೂಮಿಯ ಕಾಗದ ಪತ್ರದ ವ್ಯವಹಾರದ ಮೇಲೆ ಸರಕಾರಿ ಕಚೇರಿಗಳಿಗೆ ನಿಮ್ಮ ಓಡಾಟ ಹೆಚ್ಚಲಿದೆ ಆದರೆ ಸಂತಸದ ಅಥವಾ ಸಮಾಧಾನಪಡುವ ವಿಚಾರ ಅಂದರೆ, ಈ ವಾರ ಆ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆಗಳು ಹೆಚ್ಚು ಇವೆ.

ಸ್ತ್ರೀಯರು : ಅಪರಿಚಿತರ ಬಣ್ಣದ ಮಾತುಗಳಿಗೆ ನೀವು ಮೋಸಹೋಗುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲಿ ಅಪರಿಚಿತರು ಪುರುಷರೇ ಆಗಬೇಕು ಎಂದು ಇಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.

ವಿದ್ಯಾರ್ಥಿಗಳು : ನಿಮಗೆ ವಿದ್ಯಾರ್ಜನೆ ಅಥವಾ ಇತರೆ ಯಾವುದೇ ಪ್ರಮುಖ ಕಾರ್ಯಗಳಲ್ಲಿ ನಿಮ್ಮ ಸಹೋದರನ ನೆರವು ಹೆಚ್ಚು ಲಭಿಸಲಿದೆ. ಆದರೆ ಅವನಿಗೆ ಬೇಸರ ಆಗುವಂತೆ ನೀವು ಮಾತನಾಡದಿದ್ದರೆ ಅಷ್ಟೇ ಸಾಕು.

ಪರಿಹಾರ : ಪ್ರತೀ ದಿನ ಹತ್ತಿರದ ಮಹಗಣಪತೀ ದೇಗುಲಕ್ಕೆ ಹೋಗಿ ಅಲ್ಲಿ ಸ್ವಾಮಿಗೆ ಅಥರ್ವಶೀರ್ಷ ಮಂತ್ರಗಳಿಂದ ಅಭಿಷೇಕ ಮಾಡಿಸಿ ಕನಿಷ್ಠ 21 ಪ್ರದಕ್ಷಿಣೆ ಹಾಕಿ 21 ಗರಿಕೆ ನೀವೇ ಕಿತ್ತು ಶ್ರೀ ದೇವರಿಗೆ ಸಮರ್ಪಿಸಿ.

ವೃಷಭ

ಪುರುಷರು : ನಿಮ್ಮ ಹಾಗೂ ನಿಮ್ಮ ತಂದೆಯ ನಡುವ ಅಭಿಪ್ರಾಯ ಭೇದಗಳು ಅಥವಾ ಮನಸ್ತಾಪ ಇದ್ದಲ್ಲಿ ಅವೆಲ್ಲ ಶಮನವಾಗಿ ನೀವಿಬ್ಬರೂ ಒಂದಾಗುವ ಸಾಧ್ಯತೆಗಳಿವೆ. ಕೆಲವರಿಗೆ ತಂದೆಯೆ ನಿಮ್ಮ ಬಳಿ ನಿಮ್ಮ ಸಹಾಯ ಕೇಳುತ್ತ ಬರುವ ಸಾಧ್ಯತೆಗಳಿವೆ. ಆದರೆ ಈ ಸಮಯದಲ್ಲಿ ಅವರಿಗೆ ಅವಮಾನ ಮಾಡಿ ಅವರನ್ನು ನೀವು ತಿರಸ್ಕರಿಸಿದರೆ ಪಾಪ ಕಾರ್ಯ ಮಾಡಿದಂತೆ. ಆದುದರಿಂದ ಅವರಿಗೆ ಸಹಾಯ ಮಾಡಿ ನಿಮ್ಮ ಕರ್ತವ್ಯ ಮಾಡಿ. ಇನ್ನು ಸರಕಾರಿ ಉದ್ಯೋಗದಲ್ಲಿ ಅದರಲ್ಲಿಯೂ ಆರಕ್ಷಕ ಅಥವಾ ಸೇನೆಯಲ್ಲಿ ಕಾರ್ಯನಿರತರಾಗಿದ್ದಲ್ಲಿ ನಿಮ್ಮನ್ನು ಗುರುತಿಸಿ ನಿಮಗೆ ಉತ್ತಮ ಸ್ಥಾನ ಕೊಡಲಾಗುವುದು.

ಸ್ತ್ರೀಯರು : ನೀವು ಯಾವುದಕ್ಕೂ ರಾಜಿ ಆಗದೇ ಹಠದ ಸ್ವಭಾವದಲ್ಲಿ ಮೆರೆಯುತ್ತೀರಿ. ಆದರೆ ತಾತ್ಕಾಲಿಕ ಮೆರವಣಿಗೆ ಉತ್ತಮವಲ್ಲ ಎನ್ನುವುದನ್ನು ನೆನಪಿನಲ್ಲಿ ಇಡಿ.

ವಿದ್ಯಾರ್ಥಿಗಳು : ನಿಮಗೆ ಸರಕಾರದಿಂದ ಬರಬೇಕಿರುವ ಸೌಲಭ್ಯಗಳು ಸಿಗುವ ಸಾಧ್ಯತೆಗಳು ಹೆಚ್ಚು ಇವೆ. ಆದರೆ ನಿಮ್ಮ ಪ್ರಯತ್ನ ಸಹ ಅಷ್ಟೇ ಅನಿವಾರ್ಯ.

ಪರಿಹಾರ : ಪ್ರತೀ ದಿನ ಸಾಯಂಕಲ ಹತ್ತಿರದ ದುರ್ಗಾ ದೇಗುಲಕ್ಕೆ ಹೋಗಿ ಅಮ್ಮನವರಿಗೆ ಪರಿಶುದ್ದ ಅರಿಶಿನದಲ್ಲಿ ಅಷ್ಟೋತ್ತರ ಪೂಜೆ ಮಾಡಿಸಿ.

ಮಿಥುನ

ಪುರುಷರು : ವ್ಯಾಪಾರಿಗಳಿಗೆ ಅತ್ಯದ್ಭುತವಾಗಿದೆ. ಶೇರು ಪೇಟೆಯಲ್ಲಿ ಸಹ ಸ್ವಲ್ಪ ಮಟ್ಟಿಗೆ ಲಾಭ ಮಾಡುವ ಸಾಧ್ಯತೆಗಳಿವೆ. ಆದರೆ ಎಚ್ಚರ ಅವಶ್ಯ. ಅದನ್ನು ಹೊರತುಪಡಿಸಿ ಸಾಮಾನ್ಯವಾಗಿ ನೋಡಿದಾಗ ವ್ಯಾಪಾರಿಗಳಿಗೆ ಈ ವಾರ ಉತ್ತಮ. ಇನ್ನು ಉದ್ಯೋಗಸ್ಥರಿಗೂ ಸಹ ದುಡ್ಡು ಸ್ವಲ್ಪ ಕೈಯಲ್ಲಿ ಹೆಚ್ಚು ಓಡಾಡಲಿದೆ. ಅದೇ ಅಹಂಕಾರಕ್ಕೆ ದಾರಿ ಆಗದಂತೆ ನೋಡಿಕೊಳ್ಳಿ. ಈ ಹಿಂದೆ ಅನಾರೋಗ್ಯ ಇದ್ದಲ್ಲಿ ಉತ್ತಮ ಚೇತರಿಕೆ ಆರೋಗ್ಯದಲ್ಲಿ ಕಾಣುತ್ತಿದೆ. ಅದರಲ್ಲಿಯೂ ಸಹ ಹೊಟ್ಟೆ ಅಥವಾ ಬೆನ್ನು ನೋವು ಇದ್ದವರಿಗೆ ಆ ನೋವು ಕಡಿಮೆ ಆಗುತ್ತ ಬರುತ್ತಿರುವ ಅನುಭವ ಆಗುತ್ತದೆ. ನಿಮ್ಮ ಪ್ರೇಮ ನಿವೇದನೆಗೆ ಉತ್ತಮ ಕಾಲ ಕಾರಣ ಪ್ರೇಮಿಗಳಿಗೆ ಪ್ರೇಮಕ್ಕೆ ಉತ್ತಮ ಸಮಯ.

ಸ್ತ್ರೀಯರು : ನಿಮ್ಮ ಮಾತುಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ನೀವು ಬಯಸಿದ ವ್ಯವಸ್ಥೆಗಳು ನೀವು ಬಯಸಿದ ಸೌಕರ್ಯಗಳು ಸಿಗುವ ಸಾಧ್ಯತೆಗಳು ಹೆಚ್ಚು.

ವಿದ್ಯಾರ್ಥಿಗಳು : ನೀವು ಕಲೆ, ವಾಣಿಜ್ಯ ಅಥವಾ ಗಣಿತದ ವಿದ್ಯಾರ್ಥಿಗಳಾಗಿದ್ದಲ್ಲಿ ನಿಮಗೆ ಅದ್ಭುತ ಯಶಸ್ಸು ಇದೆ. ಓದುತ್ತಿರುವುದು ಅರ್ಥವಾಗುತ್ತದೆ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಸಂತೋಷವಾಗಿ ಇರುತ್ತೀರಿ.

ಪರಿಹಾರ : ಹತ್ತಿರದ ಮಹಾವಿಷ್ಣು ದೇಗುಲದಲ್ಲಿ ಪ್ರತೀ ದಿನ ಪುರುಷಸೂಕ್ತ ಮಂತ್ರಗಳಿಂದ ಸ್ವಾಮಿಗೆ ಅಭಿಷೇಕ ಮಾಡಿಸಿ.

ಕರ್ಕ

ಪುರುಷರು : ಭೂಮಿ ವ್ಯಾಪಾರಿಗಳಿಗೆ ಕೊಂಚ ಸಮಾಧಾನಕರ ವ್ಯಾಪಾರ ಇರುತ್ತದೆ. ಹಣ ಕೈಗೆ ಬಂದರೂ ಸಹ ಖರ್ಚು ಹೆಚ್ಚು ಇರುವುದರಿಂದ ಅದನ್ನು ಉಳಿಸುವುದು ಕಷ್ಟ ಸಾಧ್ಯ. ‌ವಿಶೇಷ ಎಂದರೆ ಸರಕಾರಿ ಹಾಗೂ ಖಾಸಗಿ ಈ ಎರಡೂ ಕ್ಷೇತ್ರದ ಉದ್ಯೋಗಿಗಳಿಗೆ ಉತ್ತಮವಾಗಿದೆ. ಸಹಾಯಕ್ಕಾಗಿ ಕೇಳುತ್ತ ನಿಮ್ಮ ಬಳಿ ಬರುವವರನ್ನು ಕಣ್ಣು ಮುಚ್ಚಿ ನಂಬುವುದು ಉತ್ತಮ ಪ್ರಕ್ರಿಯೆ. ಆದರೆ ಪ್ರಸಕ್ತ ಸಮಯದಲ್ಲಿ ಉತ್ತಮವಾಗಿ ಕಾಣುತ್ತಿಲ್ಲ ಆದರೆ ಈಗ ನಿಮ್ಮ ಬಳಿ ಸಹಾಯ ಯಾಚಿಸುತ್ತಿರುವವರು ಈ ಹಿಂದೆ ನಿಮಗೆ ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದವರಾಗಿದ್ದಲ್ಲಿ ನಿಸ್ಸಂದೇಹವಾಗಿ ಸಹಾಯ ಮಾಡಿ. ವಾರಾಂತ್ಯ ಬಹಳ ಉತ್ತಮವಾಗಿ ನಿಮಗೆ ಸಮಾಧಾನಕರವಾಗಿ ಇರುತ್ತದೆ.

ಸ್ತ್ರೀಯರು : ವಾರಾಂತ್ಯದಲ್ಲಿ ಬರುವ ಅನಿರೀಕ್ಷಿತ ಗೆಲುವು ಒಂದು ನಿಮಗೆ ಸಂತಸದ ಕ್ಷಣಗಳನ್ನು ನೀಡಲಿದೆ. ಸಿಟ್ಟು ಮಾಡದೆ ತಾಳ್ಮೆಯಿಂದ ನಿಮ್ಮ ಕೆಲಸಗಳನ್ನು ಶ್ರದ್ದೆಯಿಂದ ಮಾಡಿ ಸಾಕು.

ವಿದ್ಯಾರ್ಥಿಗಳು : ಭಾಷಣ ಸ್ಪರ್ಧೆಗಳಿದ್ದಲ್ಲಿ ಗೆಲುವು ಸಾಧ್ಯವಿದೆ. ಆದರೆ ನಿಮಗಿಂತ ಹಿರಿಯರೊಂದಿಗೆ ಮಾತನಾಡುವಾಗ ಹೆಚ್ಚಿನ ಜಾಗೃತೆ ಇರಲಿ.

ಪರಿಹಾರ : ಪ್ರತೀ ದಿನ ಆದಿತ್ಯ ಹೃದಯ ಸ್ತೋತ್ರವನ್ನು ತಪ್ಪದೇ ಪಠಿಸಿ ಉಪದೇಶ ಇಲ್ಲದಿದ್ದಲ್ಲಿ ಶ್ರವಣ ಮಾಡಿ.

ಸಿಂಹ

ಪುರುಷರು : ಪ್ರತ್ಯುಪಕಾರ ಮಾಡುವಂತೆ ಕೋರಿ ವಿನಂತಿ ಬರುತ್ತದೆ. ನೀವು ಅಲ್ಲಗಳೆದರೆ ಮಾತ್ರ ಅಪವಾದ ಖಂಡಿತ ಬರುತ್ತದೆ. ಆದರೆ ಕೋರಿದ ಪ್ರತ್ಯುಪಕಾರ ಮಾತ್ರ ಮಾಡಲು ಅಸಾಧ್ಯ ಅಥವಾ ನಿಮಗೆ ನಷ್ಟದಾಯಕವಾಗಿರುತ್ತದೆ. ಎಂದೂ ಇಲ್ಲದ ಆಗದ ದ್ವಂದ್ವಗಳು ಬಹಳವಾಗಿ ಕಾಡಬಹುದು. ಮನಸ್ಸು ಏಕಾಂತ ಬಯಸುತ್ತದೆ. ನಿಮಗೆ ಇಷ್ಟವಿಲ್ಲದವರ ಮನೆಯಲ್ಲಿ ಅನಿವಾರ್ಯವಾಗಿ ವಾಸ ಮಾಡಬೇಕಾಗಬಹುದು ಅಥವಾ ನಿಮ್ಮ ಮನೆಯಲ್ಲಿಯೇ ನೀವು ಇದ್ದರೂ ಸಹ ನಿಮಗೆ ನೆಮ್ಮದಿ ಇರುವುದಿಲ್ಲ. ಭೂಮಿಗೆ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಹಾಗೂ ನಿಮ್ಮ ಸಹೋದರರ ನಡುವೆ ಭಿನ್ನಾಭಿಪ್ರಾಯ ಮೂಡಿ ಚಿಂತೆಗೆ ಕಾರಣೀಭೂತ ಆಗುತ್ತದೆ. ನಿಮಗೆ ತಾಳ್ಮೆ ಅತ್ಯಂತ ಆವಶ್ಯಕ.

ಸ್ತ್ರೀಯರು : ನಿಮ್ಮ ಮಾತಿಗೆ ಬೆಲೆ ಸಿಗುವುದಿಲ್ಲ ನೀವು ಕೋರಿದಂತೆ ಲಭಿಸುವುದಿಲ್ಲ ನಿಮಗೆ ಒಂದು ವೇಳೆ ಗೌರವ ಮರ್ಯಾದೆಗಳನ್ನು ನೀಡಿದರೂ ಸಹ ಅವರು ನಾಟಕ ಆಡುತ್ತಿದ್ದಾರೆ ಎಂದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

ವಿದ್ಯಾರ್ಥಿಗಳು : ಹಿರಿಯರಿಂದ ಹಾಗೂ ಇತರರಿಂದ ಬುದ್ದಿವಾದ, ಬಿಡಿಸಿ ಹೇಳುವುದು ಎಲ್ಲಾ ನಿಮಗೆ ಲಭ್ಯವಿದೆ. ಆದರೆ ನೀವು ಎಷ್ಟು ಸ್ವೀಕರಿಸಿ ಅಳವಡಿಸಿಕೊಳ್ಳುತ್ತೀರಿ ಎನ್ನುವುದೇ ಮುಖ್ಯ!

ಪರಿಹಾರ : ಪ್ರತೀ ದಿನ ತಪ್ಪದೇ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರವನ್ನು ಪಠಿಸಿ.

ಕನ್ಯಾ

ಪುರುಷರು : ಪ್ರಯಾಣ ಹಾಗೂ ಖರ್ಚು ಹೆಚ್ಚು ಕಂಡುಬರುತ್ತಿದೆ. ಆಶ್ವಾಸನೆಗಳನ್ನು ಕೊಡುವುದು ಕಡಿಮೆ ಮಾಡಿ. ನೆರವೇರಿಸುವುದು ಕಷ್ಟದಂತೆ ಕಾಣುತ್ತಿದೆ. ಹಿಂದಿನ ವಾರ ಸಿಗದ ಪುರುಸೊತ್ತು ಈ ವಾರ ಲಭ್ಯ. ಆದರೆ ಮಾಡದೇ ಬಾಕಿ ಇಟ್ಟುಕೊಂಡಿದ್ದ ಕೆಲಸಗಳನ್ನು ಈಗ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಟ್ರಾವೆಲ್ಸ್ ವ್ಯಾಪಾರದಲ್ಲಿ ತೊಡಗಿರುವವರಿಗೆ ಧನ ಲಾಭ ಕಾಣುತ್ತಿದೆ. ಅವಿವಾಹಿತರಿಗೆ ವಿವಾಹ ಮಾತುಕತೆ ನೆರವೇರುತ್ತದೆ. ಆದರೂ ಅದನ್ನು ತಪ್ಪಿಸಲು ಹರ ಸಾಹಸ ಪಡುತ್ತಿರುವವರ ಸಂಖ್ಯೆ ಹೆಚ್ಚು ಕಾಣುತ್ತಿದೆ ಎಚ್ಚರ. ವಿದೇಶ ಪ್ರಯಾಣದ ಕಣಸು ಕಟ್ಟಿಕೊಂಡು ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ಆ ಕಾರ್ಯದಲ್ಲಿ ಕಾಣುತ್ತಿದೆ. ನಿಮಗೆ ಬರಬೇಕಿರುವ ಹಣ ಪ್ರಯತ್ನಿಸಿ ಪಡೆದುಕೊಳ್ಳಿ ಸಿಗುತ್ತದೆ.

ಸ್ತ್ರೀಯರು : ನೀವು ಕಷ್ಟಪಟ್ಟು ಮಾಡಿದ ಕಾರ್ಯಗಳನ್ನು ತೀರಾ ಚಿಕ್ಕದಂತೆ ಬಿಂಬಿಸಿ ನಿಮಗೆ ಅವಮಾನಿಸುವ ಅಥವಾ ನಿಮಗೆ ದುಃಖ ಕೊಡುವ ಪ್ರಯತ್ನಗಳು ನಡೆಯುತ್ತವೆ ಆದರೆ ಧೈರ್ಯದಿಂದ ಇರಿ.

ವಿದ್ಯಾರ್ಥಿಗಳು : ವಿದ್ಯಾ ವಿಚಾರದಲ್ಲಿ ಸ್ವಲ್ಪ ಹಿನ್ನೆಡೆ ಇದೆ ಆದರೆ ಧೃತಿಗೆಡಬೇಡಿ. ನಿಮ್ಮ ಪ್ರಯತ್ನದಲ್ಲಿ ಹುಳುಕು ಮೋಸ ಆಲಸ್ಯ ಇಲ್ಲದಂತೆ ನೋಡಿಕೊಳ್ಳಿ. ಯಶಸ್ಸು ಮುಂದೆ ಖಂಡಿತ ಲಭಿಸುತ್ತದೆ.

ಪರಿಹಾರ : ಪ್ರತೀ ದಿನ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ತಪ್ಪದೇ ಪಠಿಸಿ.

ತುಲಾ

ಪುರುಷರು : ನಿಮ್ಮ ವ್ಯಕ್ತಿತ್ವ ಹಾಗೂ ನೀವು ಯೋಚಿಸುವ ವಿಧಾನದಿಂದಾಗಿ ದುಃಖ ನಿಮ್ಮ ಬಳಿ ಸಹ ಸುಳಿಯುವುದಿಲ್ಲ. ಕಷ್ಟ ಇಲ್ಲ ಎಂದಲ್ಲ, ಆದರೆ ನಿಮಗೆ ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚು ಎಂದಷ್ಟೇ. ವಿವಾಹ ವಿಘ್ನಗಳು ಪ್ರಯಾಣದಲ್ಲಿ ತೊಂದರೆಗಳು ಹೆಚ್ಚು ಕಾಣಿಸುತ್ತಿದೆ. ವಿದೇಶ ಪ್ರಯಾಣದ ಆಸೆ ಇರುವವರು ಅಥವಾ ಬೇರೆಡೆ ವರ್ಗಾವಣೆ ತೆಗೆದುಕೊಂಡು ಹೋಗಿ ಉದ್ಯೋಗ ಮಾಡುವ ಆಸೆ ಇರುವವರು ಸ್ವಲ್ಪ ತಾಳ್ಮೆಯಿಂದ ಇರಬೇಕು. ಸದ್ಯ ಸಮಯ ಸರಿ ಇಲ್ಲ. ಈಗಿರುವ ಉದ್ಯೋಗ ಬಿಟ್ಟು ಬೇರೆ ಹೊಸ ಉದ್ಯೋಗ ಹುಡುಕುವ ಆಲೋಚನೆ ಇದ್ದರೆ ಅಥವಾ ಉದ್ಯೋಗ ಬಿಟ್ಟು ವ್ಯಾಪಾರ ಆರಂಭಿಸುವ ಆಲೋಚನೆಗಳು ಇದ್ದಲ್ಲಿ ಮೊದಲು ಅವುಗಳನ್ನು ನಿಮ್ಮ ಮನಸಿನಿಂದ ಕಿತ್ತುಹಾಕಿ.

ಸ್ತ್ರೀಯರು : ಗೃಹಿಣಿಯರು ಬಾಳಸಂಗಾತಿಯೊಂದಿಗೆ ಮನಸ್ತಾಪಗಳಾಗದಂತೆ ಎಚ್ಚರವಹಿಸಿ. ತವರು ಮನೆಯಲ್ಲಿಯೂ ನಿಮಗೆ ಸಹಾಯದ ಸಾಧ್ಯತೆ ಕಡಿಮೆ. ಅದರಲ್ಲಿಯೂ ತಂದೆ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಒಂದೊಮ್ಮೆ ಅವರಿಗೆ ಸಹಾಯ ಮಾಡುವ ಮನಸ್ಸು ಇದ್ದರೂ ಅವರು ಅಶಕ್ತರಾಗಿ ಪರಿಸ್ಥಿತಿಗಳಿಗೆ ಕಟ್ಟು ಬಿದ್ದು ಸುಮ್ಮನಾಗಿಬಿಡುತ್ತಾರೆ.

ವಿದ್ಯಾರ್ಥಿಗಳು : ಶಾಲಾ ಶುಲ್ಕಗಳು ಪಾವತಿಸದ ಕಾರಣ ನಿಂದನೆಗೆ ಗುರಿ ಆಗುವ ಸಾಧ್ಯತೆಗಳಿವೆ.

ಪರಿಹಾರ : ಪ್ರತೀ ದಿನ ಸೂರ್ಯ ಹಾಗೂ ಶುಕ್ರ ಗ್ರಹದ ಅಷ್ಟೋತ್ತರವನ್ನು ತಪ್ಪದೇ ಪಠಿಸಿ.

ವೃಶ್ಚಿಕ

ಪುರುಷರು : ಒಂದು ನೆಮ್ಮದಿ ಸಮಾಧಾನ ನಿಮಗೆ ಲಭಿಸಲಿದೆ. ಕೆಲ ಮುಖ್ಯವಾದ ಕರ್ತವ್ಯಗಳನ್ನು ಮುಗಿಸಿದ ಸಂತೃಪ್ತಿ ನಿಮಗೆ ಸಿಗಲಿದೆ. ಆರ್ಥಿಕವಾಗಿ ಮಾತ್ರ ಇನ್ನೂ ಖರ್ಚುಗಳು ಕಾಣಿಸುತ್ತಿವೆ. ನಿಮ್ಮ ಶರೀರ ಸ್ವಲ್ಪ ವಿಶ್ರಾಂತಿಯನ್ನು ಬಯಸುತ್ತದೆ. ನೀವು ದೊಡ್ಡ ಸಮಸ್ಯೆಯ ಪರ್ವತ ಎಂದು ಭಾವಿಸಿದ ಕೆಲ ವಿಚಾರಗಳು ದೈವಾನುಗ್ರಹದಿಂದ ನಿಮಗೆ ಎನೂ ಸಮಸ್ಯೆ ಕೊಡದೇ ನೀವು ದಾಟುತ್ತೀರಿ. ಸರಕಾರದಿಂದ ಬರಬೇಕಿರುವ ಸವಲತ್ತು ಅಥವಾ ಹಣ ಇದ್ದಲ್ಲಿ ಪ್ರಯತ್ನಿಸಿ ಖಂಡಿತ ಬರುವ ಸಾಧ್ಯತೆಗಳಿವೆ. ರಾಜಕೀಯದಲ್ಲಿ ಇದ್ದು ಅಧಿಕಾರದ ಆಸೆ ಅಥವಾ ಆಕಾಂಕ್ಷಿ ನೀವಾಗಿದ್ದಲ್ಲಿ ಅಧಿಕಾರ ಪ್ರಾಪ್ತಿಯೋಗ ಈಗ ಇದೆ. ಅದರೆ ನೀವು ಕುತಂತ್ರಗಳಿಗೆ ಬಲಿ ಆಗದಂತೆ ಎಚ್ಚರವಹಿಸಿ.

ಸ್ತ್ರೀಯರು : ಅನಾರೋಗ್ಯ ಇದ್ದಲ್ಲಿ ಕಡಿಮೆ ಆಗುವುದು ಅದರಲ್ಲಿಯೂ ಸಹ ರಕ್ತ ಹೀನತೆ ಅಶಕ್ತಿ ಅಥವಾ ಜ್ವರ ಬಾಧೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಆರೋಗ್ಯ ಪ್ರಾಪ್ತಿ ಯೋಗ ಕಂಡು ಬರುತ್ತಿದೆ. ವಾರಾಂತ್ಯದಲ್ಲಿ ದೂರ ಪ್ರಯಾಣ ಯೋಗ ಹಾಗೂ ಧರ್ಮ ಕ್ಷೇತ್ರಗಳ ದರ್ಶನ ಯೋಗ.

ವಿದ್ಯಾರ್ಥಿಗಳು : ತಾಳ್ಮೆ ಹೆಚ್ಚು ಬೆಳೆಸಿಕೊಳ್ಳಿ ನಿಮಗೆ ಈಗ ಉತ್ತಮ ಪಲಿತಾಂಶ ಸಿಕ್ಕಿದೆ. ಆದರೆ ಅದಕ್ಕೆ ತೃಪ್ತರಾಗದೇ ಇನ್ನೂ ಹೆಚ್ಚು ಪ್ರಯತ್ನಿಸುವತ್ತ ಗಮನ ಹರಿಸಿ.

ಪರಿಹಾರ : ಪ್ರತೀ ದಿನ ತಪ್ಪದೇ ಶನಿ ಅಷ್ಟೋತ್ತರವನ್ನು ಶ್ರದ್ದೆಯಿಂದ ಪಠಿಸಿ.

ಧನುಸ್ಸು

ಪುರುಷರು : ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಉದ್ಯೋಗದಲ್ಲಿ ಅಥವಾ ಸಂಬಳದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚು. ಅದರಲ್ಲಿಯೂ ಸಹ ಸರಕಾರಿ ಶಾಲಾ ಅಧ್ಯಾಪಕರಿಗೆ ಇನ್ನೂ ಉತ್ತಮವಾಗಿರುವ ಸಮಯ. ವೈದ್ಯ ವೃತ್ತಿಯಲ್ಲಿ ಇರುವವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸುವ ಕಾಲ ಹಾಗೂ ಅದರಂತೆಯೇ ಅವರನ್ನು ಪರೀಕ್ಷಿಸುವಂಥ ರೋಗ ಇರುವ ರೋಗಿಗಳನ್ನು ಭೇಟಿ ಮಾಡುತ್ತಾರೆ. ವ್ಯಾಪಾರಿಗಳಿಗೆ ಉತ್ತಮವಾಗಿದೆ. ಆದರೆ ಲಾಭದ ಆಸೆಗೆ ಬಿದ್ದು ಸಾಲ ನೀಡಿದರೆ ಮಾತ್ರ ನಷ್ಟ. ಖಾಸಗಿ ಉದ್ಯೋಗಿಗಳಿಗೆ ಅಧಿಕವಾದ ಒತ್ತಡ ಇರುತ್ತದೆ. ಆದರೆ ಅದೇ ವಿಧದಲ್ಲಿ ಅವರ ಕಾರ್ಯವನ್ನು ಗುರುತಿಸುವ ಕಾರ್ಯ ಸಹ ನೆರವೇರುತ್ತದೆ.

ಸ್ತ್ರೀಯರು : ಸಾಹಸಮಯ ಕೆಲಸಗಳನ್ನು ಮಾಡುವ ಹಂಬಲ ಹಾಗೇ ಇರುತ್ತದೆ, ಅವಿವಾಹಿತ ಹೆಣ್ಣು ಮಕ್ಕಳಿಗೆ ವಿವಾಹ ಪ್ರಸ್ತಾಪ ಲಭಿಸುತ್ತದೆ.

ವಿದ್ಯಾರ್ಥಿಗಳು : ಆಲಸ್ಯ ನಿಮಗೆ ಅರಿವಿಲ್ಲದಂತೆ ನಿಮ್ಮಲ್ಲಿ ಹೆಚ್ಚಾಗುತ್ತದೆ. ಅದರ ದುಷ್ಪರಿಣಾಮ ನಿಮ್ಮ ಕೈಗೆ ಬಂದದ್ದು ಬಾಯಿಗೆ ಬರದೆ ಇದ್ದಂತೆ ಆಗಬಹುದು ಎಚ್ಚರ.

ಪರಿಹಾರ : ಪ್ರತೀ ದಿನ ಶಿವ ದೇಗುಲಕ್ಕೆ ಹೋಗಿ ಅಲ್ಲಿ ಸ್ವಾಮಿಗೆ ಹಾಲಿನಲ್ಲಿ ರುದ್ರಾಭಿಷೇಕ ಮಾಡಿಸಿ.

ಮಕರ

ಪುರುಷರು : ನಿಮ್ಮ ಮಡದಿ ನಿಮ್ಮ ವಿರುದ್ದ ಚಾಡಿ ಹೇಳಬಹುದು. ನೀವು ಏಮಾರಿದರೆ ಕಂಟಕಪ್ರಾಯ ಅಥವಾ ಚಿಕ್ಕ ಪುಟ್ಟ ಮನಸ್ತಾಪ. ಈ ಹಿಂದೆ ನೀವು ಕೊಟ್ಟಿದ್ದ ಸಾಲಗಳ ಮರುಪಾವತಿ ಇನ್ನೂ ಸಾಧ್ಯವಿದೆ, ನಿಮ್ಮ ಪ್ರಯತ್ನ ಬೇಕು ಅಷ್ಟೇ. ಹೊಸ ಆಲೋಚನೆಗಳು ಹೊಸ ವಿಧದ ಚಿಂತನೆಗಳು ಹೇರಳವಾಗಿ ಬರುತ್ತದೆ. ಆದರೆ ಸಮಸ್ಯೆ ಇರುವು ಅವುಗಳ ಅನುಷ್ಠಾನಕ್ಕೆ ನಿಮಗೆ ಅವಕಾಶ ಅಥವಾ ಅನುಮತಿ ಸಿಗದು. ಒಂದೊಮ್ಮೆ ಹೇಗೂ ಅವಕಾಶ ಸಿಕ್ಕರೂ ಸಹ ಅವಕಾಶ ಕೊಟ್ಟವರ ಆಸೆ ಆಕಾಂಕ್ಷೆಗಳು ನೋಡಿ ನಿಮಗೆ ಆ ಒತ್ತಡ ಎಷ್ಟು ಆಗುತ್ತದೆ ಎಂದರೆ, ನೀವೇ ಸ್ವತಃ ಅವಕಾಶಗಳನ್ನು ನಿರಾಕರಿಸಿಬಿಡುತ್ತೀರಿ.

ಸ್ತ್ರೀಯರು : ಉದ್ಯೋಗ ಅಲ್ಲದೇ ಚಿಕ್ಕ ಪುಟ್ಟ ವ್ಯವಹಾರ ವ್ಯಾಪಾರ ಮಾಡುವತ್ತ ಮನಸ್ಸು ಹೋರಳುತ್ತದೆ. ಇನ್ನೂ ಏನೋ ಬೇಕು ಇಷ್ಟು ಸಾಲದು ಎಂಬಂಥ ಭಾವ ಏರ್ಪಾಡಾಗುತ್ತದೆ.

ವಿದ್ಯಾರ್ಥಿಗಳು : ಉತ್ತಮ ವಿದ್ಯಾಲಯಗಳ ಹುಡುಕಾಟ ಅಥವ ಅಲ್ಲಿ ಪ್ರವೇಶ ಬಯಸುವವರಿಗೆ ಯಶಸ್ಸು ಇದೆ ಆದರೆ ದಾರಿ ಕಠಿಣವಾಗಿರುತ್ತದೆ.

ಪರಿಹಾರ : ಪ್ರತೀ ದಿನ ತಪ್ಪದೇ ತುಳಸಿ ಮುಂದೆ ಮಣ್ಣಿನ ಹಣತೆಯಲ್ಲಿ ಗಾಳಿಗೆ ಆರದಂತೆ ಎಚ್ಚರವಹಿಸಿ ತುಪ್ಪದ ದೀಪ ಹಚ್ಚಿ

ಕುಂಭ

ಪುರುಷರು : ಕೆಲವರಿಗೆ ಅಹಂಕಾರ ಬಂದುಬಿಡುತ್ತದೆ. ಅದರಿಂದಾಗಿ ನಿಮಗೆ ಸಿಗಬಹುದಾದ ಕೆಲ ಉತ್ತಮ ಅವಕಾಶ ಹಾಗೂ ಸೌಕರ್ಯಗಳನ್ನು ನೀವು ನೋಡು ನೋಡುತ್ತಿದ್ದಂತೆ ಕಳೆದುಕೊಳ್ಳುತ್ತೀರಿ ಇದು ನಿಮಗೆ ಸ್ವಲ್ಪ ಬೇಸರ ಮೂಡಿಸುತ್ತದೆ. ನಿಮ್ಮ ಮಕ್ಕಳ ಸಹಾಯ ನಿಮಗೆ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ. ಉದ್ಯೋಗದ ವಿಚಾರದಲ್ಲಿ ಕೆಲ ಮಟ್ಟಿಗಿನ ರಾಜಿ ಮಾಡಿಕೊಳ್ಳುವುದು ಅನಿವಾರ್ಯ ಆಗುತ್ತದೆ. ತಿಳಿದಿಲ್ಲದ ವಿಚಾರದಲ್ಲಿ ನಿಮಗೆ ಅವಮಾನ ಮಾಡಲು ಕಾತರಾಗಿರುವವರು ಇದ್ದಾರೆ, ಅವರನ್ನು ನೀವು ಧೈರ್ಯವಾಗಿ ಎದುರಿಸಲೇಬೇಕು. ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ.

ಸ್ತ್ರೀಯರು : ಆಭರಣ ಅಥವಾ ವಸ್ತ್ರ ಖರೀದಿಯತ್ತ ಮನಸ್ಸು ವಾಲುತ್ತದೆ. ಕೆಲ ವಿಚಾರಗಳನ್ನು ಹಾಗೂ ಪರಿಸ್ಥಿತಿಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವುದು ಇತರರ ಗಮನಕ್ಕೆ ಬರುತ್ತದೆ. ಆದರೆ ನಿಮಗೆ ಆ ಆಸೆ ಹಾಗೇ ಇರುತ್ತದೆ.

ವಿದ್ಯಾರ್ಥಿಗಳು : ನೃತ್ಯ, ಹಾಡುಗಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸು ಸದ್ಯದ ಸಮಯದಲ್ಲಿ ಕಾಣಿಸುತ್ತಿದೆ.

ಪರಿಹಾರ : ಹತ್ತಿರದ ಶ್ರೀ ರಾಮ ದೇಗುಲದಲ್ಲಿ ಶ್ರೀ ದೇವರಿಗೆ ತುಳಸಿಯಲ್ಲಿ ಅರ್ಚನೆ ಮಾಡಿಸಿ ಅರ್ಚಕರಿಗೆ ಹೆಸರು ಕಾಳು ದಾನ ಮಾಡಿ.

ಮೀನ

ಪುರುಷರು : ಆತುರ ಬಿಡಲೇಬೇಕಾದ ಸಮಯವಿದು. ಕಾಯಬೇಕು ಯಾವ ಕೆಲಸ ಕಾರ್ಯಗಳೂ ಸಹ ಕ್ಷಣಾರ್ಧದಲ್ಲಿ ಆಗುವುದಿಲ್ಲ. ಪ್ರಬುದ್ಧತೆಯ ಅವಶ್ಯಕತೆ ಹೆಚ್ಚು ಕಾಣಿಸುತ್ತಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಹಾಗೂ ಸಂತಾನ ಅಪೇಕ್ಷಿಗಳಿಗೂ ಸಿಹಿ ಸುದ್ದಿ. ಕಬ್ಬಿಣದ ಕೆಲಸ ಮಾಡುವ ಉದ್ಯೋಗಿಗಳಿಗೆ ಉತ್ತಮ ಸಮಯ. ಉದ್ಯೋಗ ಅರಸುತ್ತಿರುವ ಮೆಕಾನಿಕಲ್ ವರ್ಗದವರಿಗೆ ಉತ್ತಮ ಉದ್ಯೋಗ ಪ್ರಾಪ್ತಿ ಯೋಗವಿದೆ. ಈ ಹಿಂದೆ ಇದ್ದ ಮನಸ್ತಾಪ ಜಗಳಗಳೆಲ್ಲ ಶಮನವಾಗಿ ಮಾನಸಿಕ ಚಿಂತೆಗಳಿದ್ದಲ್ಲಿ ಅದೂ ಸಹ ಕಡಿಮೆ ಆಗಿ ಸಂತಸ ವಾರಾಂತ್ಯದೊಳಗೆ ಲಭಿಸುತ್ತದೆ. ವಿದೇಶ ಪ್ರಯಾಣದ ಆಸಕ್ತರಿಗೆ ಕಾರ್ಯಸಿದ್ದಿ ಇದೆ.

ಸ್ತ್ರೀಯರು : ಸುಲಭವಾಗಿ ಲಭಿಸುವ ವಿಚಾರ ಅಥವಾ ವಸ್ತುಗಾಗಿ ಅನಗತ್ಯ ಶ್ರಮ ಹೋರಾಟ ನಡೆಸುತ್ತೀರಿ. ನಿಮಗೆ ಪ್ರತಿಸ್ಪರ್ಧಿ ಬಂದಂತೆ ಭಾಸವಾಗುತ್ತದೆ. ಆದರೆ ನಿಮ್ಮ ಪ್ರಾಮುಖ್ಯತೆ ಕಡಿಮೆ ಆಗದು.

ವಿದ್ಯಾರ್ಥಿಗಳು : ಪರೀಕ್ಷೆಗಳು ಇದ್ದಲ್ಲಿ ಉತ್ತಮ ಯಶಸ್ಸು ಇದೆ. ಇಲ್ಲದಲ್ಲಿ ಹೊಸದನ್ನು ಕಲಿಯುವ ತಿಳಿದುಕೊಳ್ಳುವ ಉತ್ತಮ ಅವಕಾಶಗಳು ಲಭಿಸುತ್ತವೆ ಸ್ನೇಹಿತರು ಸಹ ಉತ್ತಮರು ಸಿಗುತ್ತಾರೆ.

ಪರಿಹಾರ : ಪ್ರತೀ ದಿನ ತಪ್ಪದೇ ಲಕ್ಷ್ಮೀ ನರಸಿಂಹ ಕರಾವಲಂಬನ ಸ್ತೋತ್ರವನ್ನು ಪಠಿಸಿ.

English summary
Read your Weekly forecast on the horoscope provided by Oneindia Kannada. We provide online free weekly prediction including your personal, professional and love life.
Please Wait while comments are loading...