ಶನೈಶ್ಚರನ ಅನುಗ್ರಹಕ್ಕಾಗಿ ಇಲ್ಲಿವೆ 10 ಮಾರ್ಗಗಳು

Written by: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಜನವರಿ 26ರಂದು, ಅಂದರೆ ಇದೇ ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಗುರುವಾರದಂದು ಜ್ಯೇಷ್ಠಾ ನಕ್ಷತ್ರದ ನಾಲ್ಕನೇ ಪಾದದಿಂದ ಮೂಲಾ ನಕ್ಷತ್ರದ ಒಂದನೇ ಪಾದವಾದ ಧನು ರಾಶಿಗೆ ಶನೈಶ್ಚರ ಗ್ರಹ ಸಂಚಾರ ಆರಂಭಿಸಲಿದೆ. ಪ್ರಮುಖವಾಗಿ ವೃಷಭ, ಸಿಂಹ, ಕನ್ಯಾ, ವೃಶ್ಚಿಕ, ಧನು, ಮಕರ ಈ ಆರು ರಾಶಿಯವರು ಎಚ್ಚರದಿಂದ ಇರುವುದು ಒಳಿತು.

ಮೇಷ, ಕರ್ಕ, ತುಲಾ ಈ ಮೂರು ರಾಶಿಯವರಿಗೆ ಶನಿ ಪ್ರವೇಶದ ನಂತರ ಸಂತಸದ ಕಾಲ. ಕುಂಭ, ಮೀನ ರಾಶಿಗಳಿಗೆ ವಿಶೇಷ ಸಮಸ್ಯೆಗಳಿಲ್ಲ. ಆದರೆ ಶನಿಯಿಂದ ಸಮಸ್ಯೆ ಆಗಬಹುದಾದವರಿಗೆ ಇಲ್ಲಿ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ. ಇವುಗಳನ್ನು ಅನುಸರಿಸಿದರೆ ಬಾಧೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗುತ್ತದೆ. ಕನಿಷ್ಠ ಪಕ್ಷ ತಡೆದುಕೊಳ್ಳುವ ಶಕ್ತಿ ಬರುತ್ತದೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಇನ್ನೊಂದು ಮುಖ್ಯವಾದ ಅಂಶ. ನಿಮ್ಮ ಜಾತಕವನ್ನು ಒಮ್ಮೆ ನೋಡಿಕೊಳ್ಳಿ ಅಥವಾ ಜ್ಯೋತಿಷಿಗಳ ಬಳಿ ತೋರಿಸಿ. ಶನಿ ಮಹರ್ದಶೆಯ ಆರಂಭ ಕಾಲದಲ್ಲೂ, ಅಥವಾ ನಿಮ್ಮ ಗಮನಕ್ಕೆ ಬರದೆ ಶನಿಯ ದಶೆ ಆರಂಭವಾಗಿ, ಅದರಿಂದ ತೊಂದರೆ ಅನುಭವಿಸುತ್ತಿದ್ದರೆ ಇಲ್ಲಿ ಸೂಚಿಸಿರುವ ಪರಿಹಾರ ಮಾರ್ಗವನ್ನು ಅನುಸರಿಸಬಹುದು. ಇವುಗಳ ಪೈಕಿ ಯಾವುದನ್ನಾದರೂ ಅಥವಾ ಎಲ್ಲವನ್ನೂ ಆರ್ಥಿಕ ಚೈತನ್ಯಕ್ಕೆ ತಕ್ಕಂತೆ ಮಾಡಬಹುದು.

ಸಾಡೇ ಸಾತಿ, ಅಷ್ಟಮ, ಚತುರ್ಥ ಹಾಗೂ ಪಂಚಮದಲ್ಲಿ ಶನಿ ಸಂಚಾರ ಮಾಡುತ್ತಿರುವ ವೃಶ್ಚಿಕ, ಧನುಸ್ಸು, ಮಕರ, ವೃಷಭ, ಕನ್ಯಾ, ಸಿಂಹ ರಾಶಿಯವರು ಹಾಗೂ ಉಳಿದ ರಾಶಿಯವರು ತಮಗೆ ಈಗ ಶನಿಯ ದಶೆಯೋ ಭುಕ್ತಿಯೋ ನಡೆಯುತ್ತಿದ್ದು, ಜಾತಕದಲ್ಲಿ ಆ ಗ್ರಹ ಕ್ರೂರವಾಗಿದ್ದರೆ ಇಲ್ಲಿರುವ ಪರಿಹಾರಗಳನ್ನು ಅನುಸರಿಸಿ. ಮತ್ತು ಇಲ್ಲಿರುವ ಪರಿಹಾರಗಳನ್ನು ನಂಬಿಕೆ ಇರುವವರಿಗೆ ಮಾಡಿಸಬಹುದು ಎಂದು ಸೂಚಿಸಿರುವುದೇ ಹೊರತು, ಕಡ್ಡಾಯ ಎಂದಲ್ಲ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆಯಾ ವ್ಯಕ್ತಿಯ ಮನಸ್ಥಿತಿ, ಚಿಂತನೆ ಹಾಗೂ ನಂಬಿಕೆಗೆ ಬಿಟ್ಟಿದ್ದು ಇಲ್ಲಿನ ಪರಿಹಾರಗಳು ಅನುಸರಿಸುವುದು ಅಥವಾ ಬಿಡುವ ವಿಚಾರ. ಅನುಸರಿಸಿದರೆ ಸಮಸ್ಯೆಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗುತ್ತದೆ ಎಂಬುದು ಸತ್ಯ. ಯಾವುದೇ ದೇವರಿಗೆ ಮಾಡಿದ ಸೇವೆಗೆ ವಾಪಸ್ ನನಗೇನು ಮಾಡ್ತಿ ಎಂದು ಕೇಳುವುದಕ್ಕೆ ಸಾಧ್ಯವಾ?

ಆಂಜನೇಯನಿಗೆ ಉದ್ದಿನವಡೆ ಹಾರ

ನಿಮ್ಮ ಮನೆಯ ಬಳಿಯೋ ಅಥವಾ ಮನೆ ದೇವರ ಗುಡಿಯಲ್ಲಿ ಆಂಜನೇಯ ಮೂರ್ತಿಯಿದ್ದರೆ ಶನಿವಾರದಂದು ದೇಗುಲದಲ್ಲಿ ಸ್ವಾಮಿಗೆ ಉದ್ದಿನವಡೆ ಹಾರ ಮಾಡಿಸಿ ಹಾಕಿ ಹಾಗೂ ಎಳ್ಳುಬೆಲ್ಲದ ನೈವೇದ್ಯ ಮಾಡಿಸಿ.

ಶನೈಶ್ಚರ ವ್ರತ ಮಾಡಿಸಬಹುದು

ಎಷ್ಟೋ ಜನರಿಗೆ ತಿಳಿದಿಲ್ಲ. ಸತ್ಯನಾರಾಯಣ ಪೂಜೆ ವಿಧಾನದಲ್ಲಿಯೇ ಶನೈಶ್ಚರ ವ್ರತ ಎಂದು ಸಹ ಇದೆ. ಈ ವ್ರತವನ್ನು ಶನಿವಾರದಂದು, ಜನ್ಮ ನಕ್ಷತ್ರ ಬಂದಾಗ ಅಥವಾ ಶನಿವಾರದಂದೇ ಮಾಡಿಸಿದರೆ ಉತ್ತಮ. ಶೀಘ್ರವಾಗಿ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

ರುದ್ರ ಹವನ ಮಾಡಿಸಿ

ಪೂರ್ವಾರ್ಜಿತ ಕರ್ಮ ಫಲ ಅಂದರೆ ಹಿಂದಿನ ಜನುಮದ ಪಾಪ ಶೇಷ ಹೆಚ್ಚಿದ್ದರೆ ಈ ಜನುಮದಲ್ಲಿ ಶನಿ ಕಾಟ ಹೆಚ್ಚು ಇರುತ್ತದೆ. ಆದುದರಿಂದ ಹಿಂದಿನ ಜನುಮದ ಪಾಪ ಪರಿಹಾರಕ್ಕಾಗಿ ಕರಿ ಎಳ್ಳು ಹಾಗೂ ಬತ್ತಕ್ಕೆ ಶುದ್ಧ ಹಸುವಿನ ತುಪ್ಪ ಬೆರೆಸಿ, ರುದ್ರ ಹವನ ಮಾಡಿಸಿ

ದತ್ತಾತ್ರೇಯ ವಜ್ರಕವಚ ಸ್ತೋತ್ರ ಪಠಣ

ಪ್ರತಿ ದಿನ ತಪ್ಪದೇ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ ಮಾಡಿದರೆ ಶನಿ ಕಾಟದಿಂದ ರಕ್ಷಣೆ ದೊರೆಯುತ್ತದೆ

ಕರಿ ಎಳ್ಳು ದಾನ

ಬ್ರಾಹ್ಮಣ ಪುರೋಹಿತ ಅಥವಾ ಅರ್ಚಕರಿಗೆ ಶನಿವಾರದಂದು ಕಬ್ಬಿಣದ ಬಾಂಡಲಿಯಲ್ಲಿ ಪರಿಶುದ್ಧವಾದ ಹಾಗೂ ಅಡುಗೆ ಮಾಡಲು ಉಪಯುಕ್ತವಾದ ಎಳ್ಳಎಣ್ಣೆ ದಕ್ಷಿಣೆ ಸಹಿತ ದಾನ ಮಾಡಿ. ನೀವು ಕೊಡುವ ಈ ದಾನ ತನಗೆ ನಿತ್ಯ ಬಳಸಲು ಬರದ ಕಾರಣ ಒಂದು ಪಕ್ಷ ದಾನ ತೆಗೆದುಕೊಳ್ಳಲು ಅವರು ನಿರಾಕರಿಸಿದರೆ ಹೊಸದಾದ ಸ್ಟೇನ್ ಲೆಸ್ ಸ್ಟೀಲ್ ತಟ್ಟೆಯಲ್ಲಿ ಸ್ವಲ್ಪ ಕರಿ ಎಳ್ಳು ಇಟ್ಟು ದಕ್ಷಿಣೆ ಸಹಿತ ದಾನ ಮಾಡಿ

ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ

ನಿಮ್ಮ ಮನೆಯ ಹತ್ತಿರದ ನವಗ್ರಹ ದೇಗುಲದಲ್ಲಿ ಅಥವಾ ಅದೇ ದೇಗುಲದ ಆವರಣದ ದೊಡ್ಡ ಮರದ ಬುಡದಲ್ಲಿ ಹೆಚ್ಚು ಗಾಳಿ ಆಡದ ವ್ಯವಸ್ಥೇ ಮಾಡಿ, ಅಲ್ಲಿ ಕಬ್ಬಿಣದ ಬಾಂಡಲಿ ನಲ್ಲಿ ಪರಿಶುದ್ಧ (ಅಡುಗೆಗೆ ಬಳಸುವ ಗುಣಮಟ್ಟದ್ದು) ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ.

ಶನಿಗೆ ತೈಲಾಭಿಷೇಕ

ಇನ್ನು ಶನಿವಾರಗಳಂದು ಶನಿ ದೇಗುಲದಲ್ಲಿ ಸ್ವಾಮಿಗೆ ಪರಿಶುದ್ಧ ಎಳ್ಳು ಎಣ್ಣೆಯಲ್ಲಿ ತೈಲಾಭಿಷೇಕ ಮಾಡಿಸಿ. ಆ ಸಮಯದಲ್ಲಿ ನೀವು ಖುದ್ದಾಗಿ ಇದ್ದು, ಕುಟುಂಬ-ಪರಿವಾರದವರ ಸಂಕಲ್ಪ ಮಾಡಿಸಿದರೆ ಒಳ್ಳೆಯದು.

ಶನೈಶ್ಚರ ಅಷ್ಟೋತ್ತರ ಪಠಿಸಿ

ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. ನೆನಪಿಡಿ, ಸ್ಥಳದ ಆಯ್ಕೆ ಬಹಳ ಮುಖ್ಯ. ಮನಸ್ಸಿನ ಉದ್ದೇಶ ಕದಡುವಂಥ ಕಡೆ ಬೇಡ.

ದಶರಥ ಕೃತ ಶನಿ ಸ್ತೋತ್ರ

ಮತ್ತೊಂದು ಸ್ತೋತ್ರ ಪಠಣ ಇದೆ. ಈ ಸ್ತೋತ್ರ ರಚನೆ ಮಾಡಿರುವುದು ದಶರಥ. ಆ ಕಾರಣದಿಂದ ಅದನ್ನು ದಶರಥ ಕೃತ ಶನಿ ಸ್ತೋತ್ರ ಎಂದು ಕರೆಯುತ್ತಾರೆ. ಅದನ್ನು ಪ್ರತಿದಿನ ಪಠಿಸಿ

ಶನೈಶ್ಚರ ಶಾಂತಿ ಹವನ

1000 ಸಂಖ್ಯೆಯಲ್ಲಿ ಶನಿ ಮಂತ್ರದ ಜಪ ಮಾಡಿಸಿ, ಅದರ ದಶಾಂಶ ಅಂದರೆ ಹತ್ತನೇ ಒಂದು ಭಾಗದಷ್ಟು ಸಂಖ್ಯೆಯಲ್ಲಿ ಕೃಸರಾನ್ನ ಹಾಗೂ ಶಮಿ ಸಮಿಧ, ಆಜ್ಯ ಈ ದ್ರವ್ಯಗಳಲ್ಲಿ ಶನಿ ಶಾಂತಿ ಹವನ, ನಂತರ ಅದೇ ದಶಾಂಶ ವಿಧಾನದಲ್ಲಿ ತರ್ಪಣ ಪರೋಕ್ಷಣ ಹಾಗೂ ಪ್ರಾಶನ ಮಾಡಿದರೆ ಅತ್ಯಂತ ಶೀಘ್ರ ಹಾಗೂ ಅತ್ಯತ್ತಮ ನಿರೀಕ್ಷಿತ ಫಲಗಳನ್ನು ಕೊಡುತ್ತವೆ.

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಭೇಟಿಗೆ

ಯಾವುದೇ ಪರಿಹಾರ ಸಂಬಂಧಿ ವಿಚಾರಗಳಿಗೆ ವೈಯಕ್ತಿಕವಾಗಿ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ಭೇಟಿಯಾಗಲು ಮುಂಚಿತವಾಗಿ ಸಮಯ ನಿಗದಿಪಡಿಸಿಕೊಳ್ಳಿ. ಸಂಪರ್ಕ ಸಂಖ್ಯೆ-9845682380.

English summary
Saturn entereing Sagittarius on January 26th. Here 10 solutions according to vedic astrology for Saturn ill effect on Zodiac sign, explains well known astrologer Pandit Vittal Bhat.
Please Wait while comments are loading...